ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
“ನಾವು ಗೆಲ್ಲುತ್ತೇವೆ, ನಾವು ಖಂಡಿತಾ ಸೋಂಕನ್ನು ಸೋಲಿಸುತ್ತೇವೆ” – ಡಾ. ಹರ್ಷವರ್ಧನ್
प्रविष्टि तिथि:
15 APR 2020 8:20PM by PIB Bengaluru
“ನಾವು ಗೆಲ್ಲುತ್ತೇವೆ, ನಾವು ಖಂಡಿತಾ ಸೋಂಕನ್ನು ಸೋಲಿಸುತ್ತೇವೆ” – ಡಾ. ಹರ್ಷವರ್ಧನ್
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತ ಜಗತ್ತಿನ ಎಲ್ಲ ರಾಷ್ಟ್ರಗಳಿಗಿಂತ ಉತ್ತಮ ಸ್ಥಾನದಲ್ಲಿದೆ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತದಲ್ಲಿ ಕೋವಿಡ್-19 ನಿಯಂತ್ರಣ ಕುರಿತಂತೆ ಕೈಗೊಂಡಿರುವ ಕ್ರಮಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ) ಕ್ಷೇತ್ರಾಧಿಕಾರಿಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರೋಗ್ಯಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳಿಗೆ ವಿವರಣೆ ನೀಡಿದ ಡಾ. ಹರ್ಷವರ್ಧನ್, “ನಾವು ಸಂಕಷ್ಟದ ಸಮಯದಲ್ಲಿ ಭೇಟಿ ಮಾಡುತ್ತಿದ್ದೇವೆ. ನಾವು ಹಿಂದೆ ಪೋಲಿಯೊ ಮತ್ತು ಸಿಡುಬು ರೋಗವನ್ನು ನಿರ್ಮೂಲನೆ ಮಾಡಿದಂತೆ ಇದೀಗ ಸೋಂಕನ್ನು ನಿರ್ಮೂಲನೆ ಮಾಡಲು ಒಟ್ಟಾಗಿ ಹೋರಾಡಬೇಕು” ಎಂದರು. “ನಾವು ಗೆಲ್ಲುತ್ತೇವೆ ಮತ್ತು ಖಂಡಿತಾ ಈ ಸೋಂಕನ್ನು ಸೋಲಿಸುತ್ತೇವೆ” ಎಂದು ಹೇಳಿದರು. ಕ್ಷೇತ್ರ ಮಟ್ಟದಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳು ಮತ್ತು ಹಾಲಿ ಕೈಗೊಂಡಿರುವ ಕ್ರಮಗಳ ಬಲವರ್ಧನೆ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಡಾ. ಹರ್ಷವರ್ಧನ್ ಅವರು, “ಕೋವಿಡ್-19 ವಿರುದ್ಧದ ನಮ್ಮ ಹೋರಾಟದಲ್ಲಿ ಡಬ್ಲ್ಯೂಎಚ್ಒ ಅತ್ಯಂತ ಪ್ರಮುಖ ಪಾಲುದಾರರು. ದೇಶದಲ್ಲಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಡಬ್ಲ್ಯೂಎಚ್ಒ ಅತ್ಯಂತ ಮೌಲ್ಯಯುತ ಮಾರ್ಗದರ್ಶನ ಮತ್ತು ಕೊಡುಗೆಯನ್ನು ನೀಡಿದೆ” ಎಂದು ಹೇಳಿದರು.
ಡಾ. ಹರ್ಷವರ್ಧನ್ ಅವರು, “ನನಗಿನ್ನು ನೆನಪಿದೆ, ಡಬ್ಲ್ಯೂಎಚ್ಒದಲ್ಲಿನ ಅಥವಾ ಸರ್ಕಾರದಲ್ಲಿನ ವೈದ್ಯರುಗಳು ಪೋಲಿಯೋ ನಿರ್ಮೂಲನೆ ಉದ್ದೇಶಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ” ಎಂದು ಸ್ಮರಿಸಿದರು. “ಅವರುಗಳ ಪ್ರಾಮಾಣಿಕ ಕೊಡುಗೆ ಇಲ್ಲದೆ, ಭಾರತ ಸೇರಿದಂತೆ ಆಗ್ನೇಯಾ ಏಷ್ಯಾದಲ್ಲಿ ಪೋಲಿಯೋ ನಿರ್ಮೂಲನೆಗೆ ಇನ್ನೂ ಹೆಚ್ಚಿನ ಸಮಯ ತೆಗೆದು ಕೊಳ್ಳುತ್ತಿತ್ತು” ಎಂದು ಹೇಳಿದರು. ಅಲ್ಲದೆ ವೈದ್ಯರು ಮತ್ತಷ್ಟು ಉತ್ತೇಜನ ನೀಡಿದರು ಮತ್ತು ಭಾರತದ ಸಾಮರ್ಥ್ಯ ಮತ್ತು ಸಂಭವನೀಯತೆಯನ್ನು ತೋರಿಸಿಕೊಟ್ಟು, ಪೋಲಿಯೋ ನಿರ್ಮೂಲನೆ ಮಾಡಲು ಸಹಕರಿಸಿದರು” ಎಂದು ಹೇಳಿದರು.
“ಕೋವಿಡ್-19 ವಿರುದ್ಧ ಮೊದಲು ಸ್ಪಂದಿಸಿದ್ದೇ ಭಾರತ ಮತ್ತು ನಮ್ಮ ಕೊರೊನಾ ಯೋಧರ ಪ್ರಾಮಾಣಿಕ ಮತ್ತು ಮೌಲ್ಯಯುತ ಸೇವೆಯಿಂದಾಗಿ ನಾವು ಇಂದು ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿದ್ದೇವೆ” ಎಂದು ಅವರು ಪುನರುಚ್ಚರಿಸಿದರು. “ನಮಗೆ ಶತೃ ಯಾರು ಮತ್ತು ಅವರು ಎಲ್ಲಿದ್ದಾರೆ ಎಂಬುದು ಗೊತ್ತಿದೆ. ನಾವು ಸಮುದಾಯದ ಕಣ್ಗಾವಲು, ನಾನಾ ರೀತಿಯ ಮಾರ್ಗಸೂಚಿಗಳು, ಕ್ಲಸ್ಟರ್ ನಿಯಂತ್ರಣ ಮತ್ತು ಕ್ರಿಯಾಶೀಲ ಕಾರ್ಯತಂತ್ರದಿಂದ ಆ ಶತೃವನ್ನು ಕಟ್ಟಿಹಾಕಲು ಸಮರ್ಥರಿದ್ದೇವೆ” ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, “ನಾವು ಶ್ರೇಷ್ಠ ನಾಯಕನನ್ನು ಪ್ರಧಾನಮಂತ್ರಿಯಾಗಿ ಹೊಂದಿದ್ದೇವೆ ಮತ್ತು ಕಾಲ ಕಾಲಕ್ಕೆ ನೀಡುವ ಸಲಹೆಗಳನ್ನು ಒಪ್ಪಿ, ಅವುಗಳಿಗೆ ಸ್ಪಂದಿಸಿ, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ” ಎಂದು ಹೇಳಿದರು. ಕೊರೊನಾ ಯೋಧರು ಸಾವಿಗೂ ಹೆದರದೆ ಸೇವೆ ಸಲ್ಲಿಸುತ್ತಿದ್ದಾರೆ ಎಂದ ಹರ್ಷವರ್ಧನ್ ಅವರು ಮನುಕುಲಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಮಾರಕ ಸೋಂಕಿನ ವಿರುದ್ಧ ನಡೆಸುತ್ತಿರುವ ಭಾರೀ ಹೋರಾಟದಲ್ಲಿ ಶುಭವಾಗಲಿ ಎಂದು ಅವರು ಹಾರೈಸಿದರು.
ಕೋವಿಡ್-19 ವಿರುದ್ಧ ಭಾರತದ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಬ್ಲ್ಯೂಎಚ್ಒದ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕರಾದ ಡಾ. ಪೂನಮ್ ಖೇತ್ರಪಾಲ್ ಸಿಂಗ್ “ಭಾರೀ ಮತ್ತು ಬಹು ಸವಾಲುಗಳ ನಡುವೆಯೂ ಭಾರತ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ದೃಢ ಬದ್ಧತೆಯನ್ನು ಪ್ರದರ್ಶಿಸಿದೆ” ಎಂದು ಹೇಳಿದರು. ಭಾರತದಲ್ಲಿನ ಡಬ್ಲ್ಯೂಎಚ್ಒ ಪ್ರತಿನಿಧಿ ಡಾ. ಹೆಂಕ್ ಬೆಕೆಡಮ್ “ಕೋವಿಡ್-19 ವಿರುದ್ಧ ಹೋರಾಟಕ್ಕೆ ನಮ್ಮ ಕ್ಷೇತ್ರದ ಸಿಬ್ಬಂದಿಗೆ ಬೆಂಬಲ ನೀಡುವಂತೆ ಸೂಚಿಸಲಾಗಿದೆ. ಆ ತಂಡ, ಸರ್ಕಾರ ಮತ್ತು ಇತರ ಪಾಲುದಾರ ಸಂಸ್ಥೆಗಳೊಂದಿಗೆ ಭಾರತ ಪೋಲಿಯೋ ಮುಕ್ತವಾಗಲು ಅವಿರತವಾಗಿ ಶ್ರಮಿಸಿದ್ದ ತಂಡವೇ ಈಗಲೂ ಶ್ರಮಿಸುತ್ತಿದೆ. ಡಬ್ಲ್ಯೂಎಚ್ಒ ತಂಡ ಇದೀಗ ಮತ್ತೆ ಕೋವಿಡ್-19 ವಿರುದ್ಧದ ಹೋರಾಟಕ್ಕೂ ಸರ್ಕಾರದೊಂದಿಗೆ ಕೈಜೋಡಿಸಿ ಗೆಲ್ಲಲು ಸಹಾಯ ಮಾಡಲಿದೆ ಎಂಬ ವಿಶ್ವಾಸ ನನಗಿದೆ ಎಂದರು.
ಸಂವಾದದ ಪ್ರಮುಖ ಅಂಶಗಳೆಂದರೆ :
· ಹಾಟ್ ಸ್ಪಾಟ್ ಮತ್ತು ಕ್ಲಸ್ಟರ್ ಗಳ ನಿಯಂತ್ರಣಕ್ಕೆ ಸೂಕ್ಷ್ಮ ಯೋಜನೆಗಳನ್ನು ರೂಪಿಸಲು ಜಿಲ್ಲಾ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಬ್ಲ್ಯೂಎಚ್ಒ ಅಧಿಕಾರಿಗಳೊಂದಿಗೆ ತಾಂತ್ರಿಕ ಸಮನ್ವಯಕ್ಕೆ ನೆರವಾಗುವುದು.
· ಹಾಲಿ ಸೋಂಕಿತ ಪ್ರಕರಣಗಳಲ್ಲಿ ಅದು ಯಾವ ರೀತಿ ಹರಡಿದೆ ಎಂಬ ಸಾಧ್ಯತೆಗಳ ಬಗ್ಗೆ ವಿಶ್ಲೇಷಿಸಲು ಸಹಾಯ ಮಾಡುವುದು.
· ಜಿಲ್ಲೆಗಳಲ್ಲಿ ನಿರಂತರ ನಿಗಾ ಇಡಲು ಕಾರ್ಯತಂತ್ರ ರೂಪಿಸಲು ಸಹಾಯ ಮಾಡುವುದು. ಅಲ್ಲಿಯವರೆಗೆ ಜಿಲ್ಲೆಗಳಲ್ಲಿ ಮತ್ತೆ ಸೋಂಕು ವ್ಯಾಪಿಸದಂತೆ ವಿಶ್ವಾಸಾರ್ಹ ಕ್ರಮ ಕೈಗೊಳ್ಳುವುದು.
ಬಿಹಾರ, ಕರ್ನಾಟಕ ಮತ್ತು ಮಹಾರಾಷ್ಟ್ರ ಈ ಮೂರು ರಾಜ್ಯಗಳ ಅನುಭವ ಮತ್ತು ಕಾರ್ಯತಂತ್ರಗಳನ್ನು ಸಭೆಯಲ್ಲಿ ಮಂಡಿಸಲಾಯಿತು.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದವರೆಂದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳು ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರುಗಳು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(ಎಂಒಎಚ್ಎಫ್ ಡಬ್ಲ್ಯೂ) ಹಿರಿಯ ಅಧಿಕಾರಿಗಳು, ಆರೋಗ್ಯ ಸೇವೆಗಳ ನಿರ್ದೇಶನಾಲಯ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(ಎನ್ ಸಿ ಡಿಸಿ) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಹಾಗೂ ಆಗ್ನೇಯ ಏಷ್ಯಾ ವಲಯದ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ) ಪ್ರಾದೇಶಿಕ ನಿರ್ದೇಶಕರು, ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾದ ಪ್ರಾದೇಶಿಕ ಕಚೇರಿಯ ಪ್ರಮುಖ ಅಧಿಕಾರಿಗಳು, ತಜ್ಞರು ಮತ್ತು ದೇಶಾದ್ಯಂತ ಡಬ್ಲ್ಯೂಎಚ್ಒ ನಿಯೋಜಿಸಿರುವ ಕ್ಷೇತ್ರ ಸಿಬ್ಬಂದಿ ಭಾಗವಹಿಸಿದ್ದರು.
*****
(रिलीज़ आईडी: 1614943)
आगंतुक पटल : 259