ಪರಿಸರ ಮತ್ತು ಅರಣ್ಯ ಸಚಿವಾಲಯ

ಕಡಿಮೆ ಅವಧಿಯಲ್ಲಿ ಔಷಧಿಗಳ ಲಭ್ಯತೆ/ ಉತ್ಪಾದನೆ ಪ್ರಮಾಣ ಹೆಚ್ಚಿಸಲು, ಪರಿಸರ ಪ್ರಭಾವ ಮೌಲ್ಯಮಾಪನ (ಇಐಎ) 2006ರ ಅಧಿಸೂಚನೆಯಲ್ಲಿ ಪ್ರಮುಖ ತಿದ್ದುಪಡಿ

Posted On: 15 APR 2020 7:34PM by PIB Bengaluru

ಕಡಿಮೆ ಅವಧಿಯಲ್ಲಿ ಔಷಧಿಗಳ ಲಭ್ಯತೆ/ ಉತ್ಪಾದನೆ ಪ್ರಮಾಣ ಹೆಚ್ಚಿಸಲು, ಪರಿಸರ ಪ್ರಭಾವ ಮೌಲ್ಯಮಾಪನ (ಇಐಎ) 2006ರ ಅಧಿಸೂಚನೆಯಲ್ಲಿ ಪ್ರಮುಖ ತಿದ್ದುಪಡಿ

ಎರಡೇ ವಾರಗಳ ಅವಧಿಯಲ್ಲಿ, ಇಂತಹ 100ಕ್ಕೂ ಹೆಚ್ಚು ಪ್ರಸ್ತಾವನೆ ಸ್ವೀಕರಿಸಲಾಗಿದೆ

 

ನೊವೆಲ್ ಕೊರೊನಾ ವೈರಸ್ (ಕೊವಿಡ್-19) ನ ಜಾಗತಿಕ ಸ್ಫೋಟದಿಂದ ಎದುರಾಗುತ್ತಿರುವ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸಲು ಮತ್ತು ಹಲವಾರು ಔಷಧಿಗಳ ಲಭ್ಯತೆ ಮತ್ತು ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲು, 2006 ರ ಇಐಎ ಅಧಿಸೂಚನೆಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, 27 ಮಾರ್ಚ್ 2020 ರಂದು ತಿದ್ದುಪಡಿ ಮಾಡಿದೆ. ವಿವಿಧ ರೋಗಗಳನ್ನು ತಡೆಗಟ್ಟಲು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ಔಷಧಿಗಳು ಮತ್ತು ಮಾರಾಟಗಾರರಿಗೆ ಸಂಬಂಧಿಸಿದ ಎಲ್ಲಾ ಯೋಜನೆಗಳು ಅಥವಾ ಚಟುವಟಿಕೆಗಳನ್ನು ಈಗಿರುವ ವರ್ಗ ‘ಎ’ ದಿಂದ ‘ಬಿ2’ ವರ್ಗಕ್ಕೆ ಮರುವರ್ಗೀಕರಿಸಲಾಗಿದೆ.

ವರ್ಗ ಬಿ2 ಅಡಿಯಲ್ಲಿ ಬರುವ ಯೋಜನೆಗಳಿಗೆ, ಬೇಸ್ ಲೈನ್ ದತ್ತಾಂಶ, ಇಐಎ ಅಧ್ಯಯನ ಮತ್ತು ಸಾರ್ವಜನಿಕ ಸಮಾಲೋಚನೆಗಳ ಅಗತ್ಯತೆಗಳಿಂದ ವಿನಾಯಿತಿ ನೀಡಲಾಗಿದೆ. ಈ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಲು ರಾಜ್ಯಮಟ್ಟದಲ್ಲಿ ಮೌಲ್ಯಮಾಪನವನ್ನು ವಿಕೇಂದ್ರೀಕರಿಸಲು ಅನುಕೂಲವಾಗುವಂತೆ, ಇಂತಹ ಪ್ರಸ್ತಾಪಗಳ ಮರುವರ್ಗೀಕರಣವನ್ನು ಮಾಡಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲೇ ದೇಶದಲ್ಲಿ ಪ್ರಮುಖ ಔಷಧಿಗಳು ಲಭ್ಯವಾಗುವುದನ್ನು ಹೆಚ್ಚಿಸುವ ದೃಷ್ಥಿಯಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ತಿದ್ದುಪಡಿ, ಸೆಪ್ಟೆಂಬರ್ 30, 2020 ರ ವರೆಗೆ ಪಡೆದ ಎಲ್ಲಾ ಪ್ರಸ್ತಾಪಗಳಿಗೆ ಅನ್ವಯವಾಗುತ್ತದೆ. ಇಂತಹ ಪ್ರಸ್ತಾಪಗಳನ್ನು ಅತ್ಯಂತ ಶೀಘ್ರವಾಗಿ ಪರಿಷ್ಕರಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.

ಇದಲ್ಲದೆ, ನಿರ್ದಿಷ್ಡ ಸಮಯದಲ್ಲಿ ಪ್ರಸ್ತಾಪಗಳನ್ನು ಕ್ಷಿಪ್ರಗತಿಯಲ್ಲಿ ವಿಲೇವಾರಿ ಮಾಡುವದನ್ನು ಖಚಿತಪಡಿಸಿಕೊಳ್ಳಲು, ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಚಿವಾಲಯ ರಾಜ್ಯಗಳಿಗೆ ಸಲಹೆ ನೀಡಿದೆ. ಉದಾ: ವಿಡಿಯೊ ಕಾನ್ಫರೆನ್ಸ್. ಈಗಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭೌತಿಕ ಸಭೆಗಳಿಂದ ಪ್ರಸ್ತಾಪಗಳ ಮೌಲ್ಯಮಾಪನ ಮಾಡಲು ಸಾಧ್ಯವಾಗುವುದಿಲ್ಲ.

ಎರಡೇ ವಾರಗಳ ಅವಧಿಯಲ್ಲಿ, ಇಂತಹ 100ಕ್ಕೂ ಹೆಚ್ಚು ಪ್ರಸ್ತಾಪಗಳನ್ನು ಈ ವರ್ಗದ ಅಡಿಯಲ್ಲಿ ಸ್ವೀಕರಿಸಲಾಗಿದ್ದು, ಇವುಗಳ ಕುರಿತು ರಾಜ್ಯಗಳಲ್ಲಿನ ಸಂಬಂಧಪಟ್ಟ ನಿಯಂತ್ರಕ ಅಧಿಕಾರಿಗಳು ವಿವಿಧ ಹಂತಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ.

***


(Release ID: 1614871) Visitor Counter : 251