ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಕೋವಿಡ್-19 ಲಾಕ್ಡೌನ್ ನಂತರ ಉದ್ಯಮಗಳನ್ನು ಪುನರಾರಂಭಿಸಲು ಸರ್ಕಾರದ ಸಂಪೂರ್ಣ ಬೆಂಬಲ: ಉದ್ಯಮ ಪ್ರತಿನಿಧಿಗಳಿಗೆ ಗಡ್ಕರಿ ಭರವಸೆ
Posted On:
14 APR 2020 4:51PM by PIB Bengaluru
ಕೋವಿಡ್-19 ಲಾಕ್ಡೌನ್ ನಂತರ ಉದ್ಯಮಗಳನ್ನು ಪುನರಾರಂಭಿಸಲು ಸರ್ಕಾರದ ಸಂಪೂರ್ಣ ಬೆಂಬಲ: ಉದ್ಯಮ ಪ್ರತಿನಿಧಿಗಳಿಗೆ ಗಡ್ಕರಿ ಭರವಸೆ
ಪ್ರತಿಕೂಲತೆಯನ್ನು ಅವಕಾಶವಾಗಿ ಪರಿವರ್ತಿಸಲು ಒಟ್ಟಾಗಿ ಕೆಲಸ ಮಾಡುವ ಎಲ್ಲಾ ಕ್ಷೇತ್ರಗಳಿಗೆ ಒತ್ತು
ಕೋವಿಡ್-19 ಲಾಕ್ಡೌನ್ ತೆರವಿನ ನಂತರ ತಮ್ಮ ಉದ್ಯಮಗಳನ್ನು ಪುನರಾರಂಭಿಸಲು ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಉದ್ಯಮ ಪ್ರತಿನಿದಿಗಳಿಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಮತ್ತು ಎಂಎಸ್ಎಂಇ ಸಚಿವ ಶ್ರೀ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ. ವೆಬ್ ಆಧಾರಿತ ಸೆಮಿನಾರ್ನಲ್ಲಿ ಇಂದು ಎಫ್ಐಸಿಸಿಐ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ಈ ದಿಕ್ಕಿನಲ್ಲಿ ಸರ್ಕಾರ ಕೈಗೊಂಡ ವಿವಿಧ ಹಣಕಾಸು ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.
ಅವಧಿ ಸಾಲಗಳು ಮತ್ತು ಕಾರ್ಯನಿರತ ಬಂಡವಾಳ ಸೌಲಭ್ಯಗಳನ್ನು ಮರುಹೊಂದಾಣಿಕೆ ಮಾಡಲು ಆರ್ಬಿಐ ಅನುಮತಿ ನೀಡಿದೆ ಎಂದು ಶ್ರೀ ಗಡ್ಕರಿ ತಿಳಿಸಿದರು.
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕುರಿತು ಮಾತನಾಡಿದ ಶ್ರೀ ಗಡ್ಕರಿಯವರು, ಸರ್ಕಾರಕ್ಕೆ ಅವುಗಳ ತೊಂದರೆಗಳ ಬಗ್ಗೆ ತಿಳಿದಿದೆ ಮತ್ತು ಆರ್ಥಿಕತೆಗೆ ಅವುಗಳ ಮಹತ್ವ ಏನು ಎಂಬುದನ್ನೂ ಅರಿತುಕೊಂಡಿದೆ ಎಂದರು. ಸರ್ಕಾರ ಮತ್ತು ಬ್ಯಾಂಕಿಂಗ್ ಕ್ಷೇತ್ರದೊಂದಿಗೆ ಕೆಲಸ ಮಾಡಲು ಉದ್ಯಮ ಕ್ಷೇತ್ರಕ್ಕೆ ಅವರು ಕರೆ ನೀಡಿದರು. ಪ್ರತಿಯೊಬ್ಬರ ಹಿತದೃಷ್ಟಿಯಿಂದ ಎಲ್ಲಾ ಕ್ಷೇತ್ರಗಳು ಪ್ರಬಲವಾಗಿ ಉಳಿಯಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು. ಮಾರುಕಟ್ಟೆಯಲ್ಲಿ ದ್ರವ್ಯತೆಯ ಮಹತ್ವದ ಬಗ್ಗೆ ಮಾತನಾಡಿದ ಸಚಿವರು, ಎಂಎಸ್ಎಂಇಗಳಿಗೆ ಸಾಲ ಖಾತ್ರಿಯನ್ನು ಈಗಿನ ಹಂತದಿಂದ ಸುಮಾರು ಒಂದು ಲಕ್ಷ ಕೋಟಿ ರೂ.ಗಳಿಂದ ಐದು ಲಕ್ಷ ಕೋಟಿ ರೂ.ಗೆ ಹೆಚ್ಚಿಸಲು ಶ್ರಮಿಸುತ್ತಿರುವುದಾಗಿ ತಿಳಿಸಿದರು. ಇದರಲ್ಲಿ ಹಣಕಾಸು ಸಂಸ್ಥೆಗಳು ನೀಡುವ ಶೇಕಡಾ 75 ರಷ್ಟು ಮುಂಗಡಗಳನ್ನು ಸರ್ಕಾರದ ಕ್ರೆಡಿಟ್ ಗೌರಂಟಿ ಯೋಜನೆಯಡಿ ಖಾತರಿಪಡಿಸಲಾಗುತ್ತದೆ. ಉದ್ಯಮವು ವಿಶೇಷವಾಗಿ ಎಂಎಸ್ಎಂಇಗಳು ಪ್ರಸ್ತಾಪಿಸಿರುವ ಸಮಸ್ಯೆಗಳನ್ನು ಸಂಬಂಧಿತ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ಚರ್ಚಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಪ್ರಸ್ತುತ ಬಿಕ್ಕಟ್ಟಿನ ಸವಾಲನ್ನು ಅವಕಾಶವಾಗಿ ನೋಡಬೇಕೆಂದು ಶ್ರೀ ನಿತಿನ್ ಗಡ್ಕರಿ ಉದ್ಯಮಕ್ಕೆ ಕರೆ ನೀಡಿದರು. ವಿಶೇಷವಾಗಿ ಕೆಲವು ದೇಶಗಳು ತಮ್ಮ ಹೂಡಿಕೆಗಳನ್ನು ಚೀನಾದಿಂದ ಹೊರಕ್ಕೆ ಸರಿಸಲು ಪ್ರಯತ್ನಿಸುತ್ತಿವೆ. ಅವರಿಗೆ ಭಾರತವು ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ ಎಂದರು.
ರಸ್ತೆ ವಲಯದ ಬಗ್ಗೆ ಪ್ರಸ್ತಾಪಿಸಿದ ಅವರು, 2019-20ರಲ್ಲಿ ದಾಖಲೆಯ ಮಟ್ಟವನ್ನು ತಲುಪಿದ ಹೆದ್ದಾರಿಗಳ ನಿರ್ಮಾಣವು, ಮೂಲಸೌಕರ್ಯ ಕ್ಷೇತ್ರದ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಮುಂಬರುವ ವರ್ಷಗಳಲ್ಲಿ 2-3 ಪಟ್ಟು ವೇಗವನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದರು. ವಿಳಂಬವನ್ನು ತಪ್ಪಿಸಲು ನಿರ್ಧಾರಗಳನ್ನು ಕೈಗೊಳ್ಳುವ ಸಮಯವನ್ನು ಕನಿಷ್ಠವಾಗಿಸಬೇಕು ಎಂದು ಸಚಿವರು ತಿಳಿಸಿದರು. ಈ ದಿಕ್ಕಿನಲ್ಲಿ, 3 ತಿಂಗಳೊಳಗೆ ವಿಷಯಗಳನ್ನು ಇತ್ಯರ್ಥಪಡಿಸಲು ಎನ್ಎಚ್ಎಐ ಮತ್ತು ಅದರ ಮಧ್ಯಸ್ಥಿಕೆ ಘಟಕಗಳನ್ನು ಕೋರಿದರು. ಈ ಉದ್ದೇಶಕ್ಕಾಗಿ, ಅಂತಹ ಸಂಸ್ಥೆಗಳ ಎಲ್ಲಾ ಅಧ್ಯಕ್ಷರು ಪ್ರಸ್ತುತವಿರುವ ಸಂಜೆ 5 ರ ಬದಲು ಪ್ರತಿದಿನ ಸಂಜೆ 7 ಗಂಟೆಯವರೆಗೆ ಕೆಲಸ ಮಾಡುವಂತೆ ಅವರಿಗೆ ಕೋರಿರುವುದಾಗಿ ಅವರು ಹೇಳಿದರು.
ಭಾರತವು ಈ ಬಿಕ್ಕಟ್ಟನ್ನು ಒಂದು ಅವಕಾಶವಾಗಿ ಪರಿವರ್ತಿಸಬೇಕು, ಮೂಲಸೌಕರ್ಯ ಯೋಜನೆಗಳನ್ನು ಚುರುಕುಗೊಳಿಸಬೇಕು ಮತ್ತು ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಕೊರೊನಾ ವಿರುದ್ಧದ ಈ ಯುದ್ಧವನ್ನು ಗೆಲ್ಲಲೇಬೇಕು ಎಂದು ಸಚಿವರು ಹೇಳಿದರು. ಭಾರತೀಯ ಉದ್ಯಮವು ಪ್ರಸಕ್ತ ಪರಿಸ್ಥಿತಿಯನ್ನು ಒದು ವರದ ರೂಪದಲ್ಲಿ ನೋಡಬೇಕು ಮತ್ತು ಅದರ ರಫ್ತು ಸಾಮರ್ಥ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಬೇಕು ಎಂದು ಅವರು ಹೇಳಿದರು. ಬಿಕ್ಕಟ್ಟಿನ ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಲಿಕ್ವಿಡಿಟಿಯನ್ನು ತರುವುದು ಮುಖ್ಯವಾಗಿದೆ ಮತ್ತು ಅದನ್ನು ಖಚಿತಪಡಿಸಿಕೊಳ್ಳಲು, ಎನ್ಎಚ್ಎಐ ಈಗಾಗಲೇ ಎಲ್ಲಾ ಬಾಕಿಗಳನ್ನು ಇತ್ಯರ್ಥಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಎಲ್ಲಾ ಕಾನೂನುಬದ್ಧ ಕ್ಲೈಮುಗಳನ್ನು ಹೆಚ್ಚು ಕಡಿಮೆ 3 ತಿಂಗಳೊಳಗೆ ಇತ್ಯರ್ಥಪಡಿಸುವ ಖಚಿತವಾದ ಯೋಜನೆಯನ್ನು ಸಚಿವಾಲಯವು ಹೊಂದಿದೆ ಎಂದು ಅವರು ಹೇಳಿದರು.
2020-21ರ ಹಣಕಾಸು ವರ್ಷದಲ್ಲಿ ರಸ್ತೆ ಮತ್ತು ಹೆದ್ದಾರಿ ನಿರ್ಮಾಣದ ವೇಗವನ್ನು ದ್ವಿಗುಣಗೊಳಿಸುವ ಕುರಿತು ಮಾತನಾಡಿದ ಶ್ರೀ ಗಡ್ಕರಿಯವರು, ತಮ್ಮ ಸಚಿವಾಲಯವು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಈ ಯುದ್ಧದ ವಿರುದ್ಧ ಹೋರಾಟದಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಲಿದೆ ಎಂದರು. ರಸ್ತೆ ವಲಯದ ಚೇತರಿಕೆಯ ಹಾದಿಯನ್ನು ಪ್ರಾರಂಭಿಸಲು, ಕೊರೊನಾವೈರಸ್ ಹರಡುವಿಕೆಯ ವಿರುದ್ಧ ರಕ್ಷಣೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವ ಷರತ್ತಿನೊಂದಿಗೆ ವಿವಿಧ ಸ್ಥಳಗಳಲ್ಲಿ ಯೋಜನೆಗಳನ್ನು ಪುನರಾರಂಭಿಸಲು ಸಚಿವಾಲಯ ಮುಕ್ತವಾಗಿದೆ ಎಂದು ಸಚಿವರು ತಿಳಿಸಿದರು.
***
(Release ID: 1614576)
Visitor Counter : 169