ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಛೇರಿ, ಭಾರತ ಸರ್ಕಾರ
ಜನದಟ್ಟಣೆಯ ಪ್ರದೇಶಗಳಲ್ಲಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯಿಂದ ಸರಳ ಮಾರ್ಗಸೂಚಿಗಳು
Posted On:
13 APR 2020 7:31PM by PIB Bengaluru
ಜನದಟ್ಟಣೆಯ ಪ್ರದೇಶಗಳಲ್ಲಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯಿಂದ ಸರಳ ಮಾರ್ಗಸೂಚಿಗಳು
ಸಾಂಕ್ರಾಮಿಕ ರೋಗಗಳನ್ನು ನಿಗ್ರಹಿಸಲು ವಿಶ್ವವ್ಯಾಪಿ ಬಳಸಲಾಗುತ್ತಿರುವ Do –it- yourself ಕೈ ತೊಳೆಯುವ ಕೇಂದ್ರಗಳ ತ್ವರಿತ ಸ್ಥಾಪನೆಯನ್ನು ಮಾರ್ಗಸೂಚಿ ಪ್ರಸ್ತಾಪಿಸಿದೆ
“ಪಿಎಸ್ಎ ಕಚೇರಿಯ ತಂಡವು ಸಿದ್ಧಪಡಿಸಿರುವ ಕೈಪಿಡಿಯು, ಮಿತವ್ಯಯದ ಆದರೆ ಪರಿಣಾಮಕಾರಿಯಾದ ಸಾಧನಗಳ ಧನಾತ್ಮಕ ಪರಿಣಾಮವನ್ನು ತಿಳಿಸುತ್ತದೆ”- ಪ್ರೊ.ಕೆ.ವಿಜಯ ರಾಘವನ್, ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ
ಈ ಕ್ರಮಗಳನ್ನು ಜಾರಿಗೆ ತರುವಂತೆ ಸಮುದಾಯದ ಮುಖಂಡರು, ಎನ್ಜಿಒಗಳು, ಕಾರ್ಪೊರೇಟ್ಗಳಿಗೆ ಪ್ರೊ.ರಾಘವನ್ ಮನವಿ
ನೈರ್ಮಲ್ಯ ಮತ್ತು ಆರೋಗ್ಯಕರ ಅಭ್ಯಾಸಗಳಿಗೆ ಒತ್ತು ನೀಡುವುದು ಮತ್ತು ಪ್ರಮುಖ ಮಧ್ಯಸ್ಥಿಕೆಗಳನ್ನು ಸೂಚಿಸುವುದು ಉದ್ದೇಶಿತ ಕ್ರಮಗಳ ಪ್ರಮುಖ ಗುರಿಯಾಗಿದೆ
ಜನದಟ್ಟಣೆಯ ಪ್ರದೇಶಗಳಲ್ಲಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯು ಮುನ್ನೆಚ್ಚರಿಕೆಗಳು ಮತ್ತು ಕ್ರಮಗಳೊಂದಿಗೆ ಸರಳ ಮಾರ್ಗಸೂಚಿಗಳನ್ನು ನೀಡಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಶೌಚಾಲಯಗಳು, ತೊಳೆಯುವುದು ಅಥವಾ ಸ್ನಾನದ ಸೌಲಭ್ಯಗಳನ್ನು ಹಂಚಿಕೊಳ್ಳುವ ಪ್ರದೇಶಗಳಿಗೆ ಇವು ಸಂಬಂಧಿಸಿವೆ.
ನೈರ್ಮಲ್ಯ ಮತ್ತು ಆರೋಗ್ಯಕರ ಅಭ್ಯಾಸಗಳಿಗೆ ಒತ್ತು ನೀಡುವುದು ಮತ್ತು ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಹೆಚ್ಚು ಸಹಾಯ ಮಾಡುವ ಪ್ರಮುಖ ಮಧ್ಯಸ್ಥಿಕೆಗಳನ್ನು ಸೂಚಿಸುವುದು ಉದ್ದೇಶಿತ ಕ್ರಮಗಳ ಪ್ರಮುಖ ಗುರಿಯಾಗಿದೆ.
ಈ ಸಮುದಾಯಗಳಲ್ಲಿನ ನಿವಾಸಿಗಳು ನಿಯಮಿತವಾಗಿ ಕೈ ತೊಳೆಯಲು ಅನುವು ಮಾಡಿಕೊಡುವ ಕಾರ್ಯವಿಧಾನಗಳನ್ನು ಸಕ್ರಿಯವಾಗಿ ಜಾರಿಗೆ ತರುವ ತುರ್ತು ಅಗತ್ಯವನ್ನು ತಿಳಿಸುವ ಮೂಲಕ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ವಿಶ್ವವ್ಯಾಪಿ ಬಳಸಲಾಗಿರುವ ಡು-ಇಟ್-ಯುವರ್ ಸೆಲ್ಫ್- ಕೈ ತೊಳೆಯುವ ಕೇಂದ್ರಗಳನ್ನು ತ್ವರಿತವಾಗಿ ಸ್ಥಾಪಿಸಲು ಮಾರ್ಗಸೂಚಿಗಳು ಪ್ರಸ್ತಾಪಿಸುತ್ತವೆ.
ಈ ಕಾಲು-ಚಾಲಿತ ಕೇಂದ್ರಗಳು ಹೆಚ್ಚಿನ ಸೋಂಕಿನ ಪ್ರದೇಶಗಳೊಂದಿಗೆ ನೇರ ಸಂಪರ್ಕವನ್ನು ತಡೆಗಟ್ಟುವ ಮೂಲಕ ಸೋಂಕು ಹರಡುವ ಅವಕಾಶವನ್ನು ಕಡಿಮೆ ಮಾಡುವುದಲ್ಲದೆ, ಕೈ ತೊಳೆಯುವ ಸಮಯದಲ್ಲಿ ಜನರು ಬಳಸುವ ನೀರಿನ ಪ್ರಮಾಣವನ್ನೂ ಕಡಿಮೆ ಮಾಡುತ್ತವೆ.
ಲಾಕ್ಡೌನ್ ಮತ್ತು ಪೂರೈಕೆ-ಸರಪಳಿ ಸವಾಲುಗಳ ನಡುವೆಯೂ ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಸಮುದಾಯ ಸ್ವಯಂಸೇವಕರು ಮತ್ತು ಆಡಳಿತದಿಂದ ಸ್ವಯಂ-ಜೋಡಣೆಯ ವಿನ್ಯಾಸವನ್ನು ಪ್ರಸ್ತಾಪಿಸಲಾಗಿದೆ.
ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳಲ್ಲಿ ಶಾಶ್ವತ ಕಾಲು ಚಾಲಿತ ಕೇಂದ್ರಗಳನ್ನು ಸ್ಥಾಪಿಸುವುದರಿಂದ ನೀರಿನ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೈ ತೊಳೆಯುವುದನ್ನು ಪ್ರೋತ್ಸಾಹಿಸುತ್ತದೆ.
ಅಂತಹ ಕೈ ತೊಳೆಯುವ ಕೇಂದ್ರಗಳ ನೀರನ್ನು ಕ್ಲೋರಿನೇಟ್ ಮಾಡುವುದು ಹೆಚ್ಚುವರಿ ಪರಿಣಾಮವನ್ನು ನೀಡುತ್ತದೆ ಮತ್ತು ಇದನ್ನು ಪರಿಗಣಿಸಬೇಕು.
ಸಮುದಾಯಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಉತ್ತಮ ಶೌಚಾಲಯ ಅಭ್ಯಾಸಗಳ ರೂಪರೇಖೆಯನ್ನು ಸಹ ಸ್ಪಷ್ಟವಾಗಿ ವಿವರಿಸಲಾಗಿದೆ. ಶೌಚಾಲಯದಲ್ಲಿ ಯಾವಾಗಲೂ ಮುಖ-ಕವರ್ ಮತ್ತು ಪಾದರಕ್ಷೆಗಳನ್ನು ಧರಿಸುವುದು, ಬಳಸಿದ ಕೂಡಲೇ ಕೈ ತೊಳೆಯುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮುಂತಾದ ಸರಳ ಕ್ರಮಗಳನ್ನು ವಿವರಿಸಲಾಗಿದೆ.
ಸಾರ್ವಜನಿಕ ಪ್ರದೇಶಗಳು ಮತ್ತು ಮನೆಗಳನ್ನು ಸ್ವಚ್ಛಗೊಳಿಸಲು ಸೋಂಕುನಿವಾರಕಗಳನ್ನು ವಿವರಿಸಲಾಗಿದೆ.
ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಆಡಳಿತ, ಸ್ವಯಂಸೇವಕರು ಮತ್ತು ಸಮುದಾಯಗಳು ಈ ಪರಿಹಾರಗಳನ್ನು ಜೊತೆಯಾಗಿ ನಿರ್ವಹಿಸುವ ಅಗತ್ಯತೆಯ ಬಗ್ಗೆ ಮಾರ್ಗಸೂಚಿಗಳು ಒತ್ತಿಹೇಳುತ್ತವೆ. ರೋಗದ ನಿಯಂತ್ರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಎಲ್ಲಾ ಮುಂಚೂಣಿ ಕಾರ್ಮಿಕರು ಮತ್ತು ನೈರ್ಮಲ್ಯ ಸಿಬ್ಬಂದಿಗೆ ಸಂಪೂರ್ಣ ಸಹಕಾರ ಮತ್ತು ಗೌರವದ ಅಗತ್ಯವನ್ನು ಹೇಳಲಾಗಿದೆ.
"ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ನಮ್ಮ ಹೋರಾಟದಲ್ಲಿ ಪ್ರತಿ ಸಂದರ್ಭಕ್ಕೂ ಸೂಕ್ತವಾದ ಅತ್ಯಂತ ಪರಿಣಾಮಕಾರಿಯಾದ ಕ್ರಮಗಳನ್ನು ಅನ್ವಯಿಸಲು ಭಾರತ ಒಟ್ಟಾಗಿದೆ. ಧಾರಾವಿಯಂತಹ ನಮ್ಮ ಜನನಿಬಿಡ ಸ್ಥಳಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಪಿಎಸ್ಎ ಕಚೇರಿ ತಂಡವು ಒಟ್ಟುಗೂಡಿಸಿದ ಕೈಪಿಡಿ, ಮಿತವ್ಯಯದ ಆದರೆ ಪರಿಣಾಮಕಾರಿಯಾದ ಸಾಧನಗಳು ಹೇಗೆ ಧನಾತ್ಮಕ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ವಿವರಿಸುತ್ತದೆ. ಸಮುದಾಯದ ಸಂಪರ್ಕ ತಾಣಗಳಾದ ಸಾಮಾನ್ಯ ಶೌಚಾಲಯಗಳು ಮತ್ತು ಸ್ನಾನದ ಪ್ರದೇಶಗಳು ಕೇಂದ್ರಬಿಂದುವಾಗಿವೆ. ಸಮುದಾಯದ ಮುಖಂಡರು, ಎನ್ಜಿಒಗಳು, ಕಾರ್ಪೊರೇಟ್ಗಳು ಈ ಕ್ರಮಗಳನ್ನು ಜಾರಿಗೆ ತರುವಂತೆ ಒತ್ತಾಯಿಸಲಾಗಿದೆ ”. ಎಂದು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊಫೆಸರ್ ಕೆ. ವಿಜಯ ರಾಘವನ್ ಹೇಳುತ್ತಾರೆ.
ಕಾರ್ಪೊರೇಟ್ಗಳು, ಎನ್ಜಿಒಗಳು ಮತ್ತು ಸಂಸ್ಥೆಗಳು ನಿರ್ದಿಷ್ಟವಾಗಿ ಜನನಿಬಿಡ ನಗರ ಪ್ರದೇಶಗಳಲ್ಲಿ ರೋಗ ನಿಗ್ರಹಕ್ಕೆ ಸಹಾಯ ಮಾಡುವ ಸ್ಪಷ್ಟವಾದ ಮಧ್ಯಸ್ಥಿಕೆಗಳನ್ನು ಬೆಂಬಲಿಸಬೇಕು. ಈ ಮಾರ್ಗಸೂಚಿಗಳಲ್ಲಿ ಪ್ರಸ್ತಾಪಿಸಲಾಗಿರುವ ಪರಿಹಾರಗಳನ್ನು ಅಳವಡಿಸಿಕೊಳ್ಳುವುದು, ಬೆಂಬಲಿಸುವುದು ಮತ್ತು ಪ್ರಾಯೋಜಿಸುವುದು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಸಮುದಾಯಗಳು ಮತ್ತು ಸ್ವಯಂಸೇವಕರೊಂದಿಗೆ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ.
ಈ ಮಾರ್ಗಸೂಚಿಗಳು ಇಂಗ್ಲಿಷ್ ಜೊತೆಗೆ ಎಲ್ಲಾ ಭಾಷೆಗಳಲ್ಲೂ ಲಭ್ಯವಾಗುತ್ತವೆ.
(Pl follow the link below for English language Guidelines.)
***
(Release ID: 1614302)
Visitor Counter : 513