ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದ ಕನ್ನಡ ಪಠ್ಯ

Posted On: 14 APR 2020 11:15AM by PIB Bengaluru

ಪ್ರಧಾನಮಂತ್ರಿಯವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದ ಕನ್ನಡ ಪಠ್ಯ

 

ನನ್ನ ಪ್ರೀತಿಯ ದೇಶವಾಸಿಗಳೇ,

ಕರೋನಾ ಜಾಗತಿಕ ಮಹಾಮಾರಿಯ ವಿರುದ್ಧ ಭಾರತದ ಹೋರಾಟ, ಬಹಳ ಬಲಿಷ್ಠವಾಗಿ ಮುಂದುವರಿದಿದೆ. ನಮ್ಮೆಲ್ಲ ದೇಶವಾಸಿಗಳ ತಪಸ್ಸು, ನಿಮ್ಮೆಲ್ಲರ ತ್ಯಾಗದ ಫಲವಾಗಿ ಭಾರತ ಈವರೆಗೆ ಕೊರೋನದಿಂದ ಆಗುತ್ತಿರುವ ನಷ್ಟವನ್ನು ಬಹಳಷ್ಟು ಮಟ್ಟಿಗೆ ತಾಳಿಕೊಳ್ಳುವುದು ಯಶಸ್ವಿಯಾಗಿದೆ. ನಿಮಗೆಲ್ಲರೂ ಧನ್ಯವಾದಗಳು. ನೀವೆಲ್ಲರೂ ಕಷ್ಟವನ್ನು ಸಹಿಸಿಕೊಂಡೂ ನಿಮ್ಮ ದೇಶವನ್ನು ಕಾಪಾಡಿದ್ದೀರಿ, ನಮ್ಮ ಭರತಖಂಡವನ್ನು ರಕ್ಷಿಸಿದ್ದೀರಿ, ನನಗೆ ಎಷ್ಟು ತೊಂದರೆ ಆಗಿದೆ ಎಂದು ನನಗೆ ತಿಳಿದಿದೆ. ಕೆಲವರಿಗೆ ಊಟದ ಸಮಸ್ಯೆ, ಮತ್ತೆ ಕೆಲವರಿಗೆ ಹೋಗಿ ಬರುವ ಸಮಸ್ಯೆ, ಕೆಲವರು ಮನೆ, ಕುಟುಂಬ, ಪರಿವಾರದಿಂದ ದೂರವಿದ್ದೀರಿ. ಆದರೂ ದೇಶಕ್ಕಾಗಿ ಒಬ್ಬ ಶಿಸ್ತುಬದ್ಧ ಸೈನಿಕರಂತೆ ನಿಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೀರಿ. ಇದು ನಮ್ಮ ಸಂವಿಧಾನದಲ್ಲಿ, we the people of India, ಶಕ್ತಿಯ ಬಗ್ಗೆ ಉಲ್ಲೇಖಿಸಲಾಗಿದೆ. ಇದೇ ಅಲ್ಲವೇ ಅದು. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಜನ್ಮ ದಿನದಂದು ನಾನು ಭಾರತದ ಜನರ ಪರವಾಗಿ, ನಮ್ಮ ಸಾಮೂಹಿಕ ಶಕ್ತಿಯ ಈ ಪ್ರದರ್ಶನ, ಈ ಸಂಕಲ್ಪ ಬಾಬಾ ಸಾಹೇಬ್ ಅವರಿಗೆ ನಿಜವಾದ ಶ್ರದ್ಧಾಂಜಲಿ ಎಂದು ಭಾವಿಸುತ್ತೇನೆ. ಬಾಬಾ ಸಾಹೇಬರ ಜೀವನ, ನಮಗೆ ಪ್ರತಿಯೊಂದು ಸವಾಲನ್ನೂ, ನಮ್ಮ ಸಂಕಲ್ಪ ಶಕ್ತಿ ಮತ್ತು ಪರಿಶ್ರಮದ ಫಲವಾಗಿ ಎದುರಿಸಿ ಪಾರಾಗುವ ನಿರಂತರ ಪ್ರೇರಣೆ ನೀಡುತ್ತದೆ. ನಾನು ಪ್ರತಿಯೊಬ್ಬ ದೇಶವಾಸಿಯ ಪರವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸುತ್ತೇನೆ.

ಸ್ನೇಹಿತರೆ,

ಈ ದೇಶದ ಬೇರೆ ಬೇರೆ ಭಾಗದಲ್ಲಿ ಈಗ ಬೇರೆ ಬೇರೆ ಹಬ್ಬದ ಸಮಯವಾಗಿದೆ. ಭಾರತ ಉತ್ಸವಗಳಿಂದ ಕೂಡಿದೆ. ಬೈಸಾಖಿ, ಪೋಹೇಲಾ ಬೈಶಾಕ್, ಪುಥಾಂಡು, ಬೋಹಾಗ್ ಬಿಹು,

ವಿಶು ಜೊತೆಗೆ ಅನೇಕ ರಾಜ್ಯಗಳಲ್ಲಿ ಇದು ಹೊಸ ವರ್ಷದ ಆರಂಭವೂ ಆಗಿದೆ.

ಲಾಕ್ ಡೌನ್ ನಡುವೆಯೂ ದೇಶದ ಜನರು ನಿಯಮಗಳನ್ನು ಪಾಲಿಸುತ್ತಿದ್ದಾರೆ, ಸಂಯಮದಿಂದ ತಮ್ಮ ಮನೆಗಳಲ್ಲಿಯೇ ಉಳಿದು ಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದಾರೆ, ಇದು ಅತ್ಯಂತ ಪ್ರಶಂಸನೀಯವಾದ್ದು, ನಾನು ಹೊಸ ವರ್ಷದ ಸಂದರ್ಭದಲ್ಲಿ ನಿಮಗೆ ಉತ್ತಮ ಆರೋಗ್ಯ ಹಾರೈಸುತ್ತೇನೆ.

ಇಂದು ಜಾಗತಿಕ ಕೊರೋನಾ ಮಹಾಮಾರಿ ತಂದಿಟ್ಟಿರುವ ಸ್ಥಿತಿಯ ಅರಿವು ನಮಗಿದೆ. ನಮಗೆ ಇದರ ಪರಿಚಯ ಚೆನ್ನಾಗಿಯೇ ಇದೆ. ಬೇರೆ ಬೇರೇ ದೇಶಗಳು ಯಾವ ರೀತಿ ಹೋರಾಟ ಮಾಡುತ್ತಿವೆ, ಭಾರತ ಯಾವ ರೀತಿಯಲ್ಲಿ ಇದರ ಪ್ರಸರಣ ತಡೆದಿದೆ ಎಂಬುದು ನಿಮಗೆ ತಿಳಿದಿದೆ, ನೀವು ಇದರಲ್ಲಿ ಭಾಗಿಯಾಗಿದ್ದೀರಿ ಮತ್ತು ಸಾಕ್ಷಿಯೂ ಆಗಿದ್ದೀರಿ. ಭಾರತದಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ಇಲ್ಲದಿದ್ದ ಸಂದರ್ಭದಲ್ಲೂ ಭಾರತ ಎಚ್ಚೆತ್ತುಕೊಂಡಿತು. ಅದು ಭಾರತಕ್ಕೆ ಬರುವ ಮೊದಲೇ ಕೊರೋನಾ ಪ್ರಭಾವಿತ ದೇಶದ ಪ್ರಯಾಣಿಕರ ಕುರಿತಂತೆ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಆರಂಭಿಸಿತ್ತು. ಕೊರೋನಾ ರೋಗಿಗಳ ಸಂಖ್ಯೆ 100ಕ್ಕೆ ತಲುಪುವ ಮೊದಲೇ ಭಾರತ ವಿದೇಶದಿಂದ ಬಂದ ಪ್ರತಿಯೊಬ್ಬ ಪ್ರಯಾಣಿಕರಿಗೆ 14 ದಿನಗಳ ಪ್ರತ್ಯೇಕೀಕರಣ ವ್ಯವಸ್ಥೆಯಲ್ಲಿ ಇರುವುದನ್ನು ಕಡ್ಡಾಯ ಮಾಡಿತ್ತು. ಅನೇಕ ಜಾಗಗಳಲ್ಲಿ ಅಂದರೆ, ಮಾಲ್, ಕ್ಲಬ್, ಜಿಮ್, ಥಿಯೇಟರ್ ಎಲ್ಲ ಬಂದ್ ಮಾಡಲಾಗಿತ್ತು.

ಸ್ನೇಹಿತರೆ,

ನಮ್ಮಲ್ಲಿ ಕೊರೋನಾದ 550 ಪ್ರಕರಣಗಳು ಇದ್ದಾಗಲೇ, ಭಾರತ 21 ದಿನಗಳ ಲಾಕ್ ಡೌನ್ ನ ಮಹತ್ವದ ನಿರ್ಧಾರ ಕೈಗೊಂಡಿತು. ಭಾರತವು ಸಮಸ್ಯೆ ಬೃಹತ್ ಆಗಿ ಬೆಳೆಯಲು ಬಿಡಲಿಲ್ಲ, ಅಲ್ಲಿಯವರೆಗೂ ಕಾಯಲೂ ಇಲ್ಲ, ಸಮಸ್ಯೆ ಕಾಣುತ್ತಿದ್ದಂತೆ ತಕ್ಷಣವೇ ನಿರ್ಧಾರ ಕೈಗೊಂಡು ಅದೇ ಸಮಯದಲ್ಲೇ ಸೋಂಕು ತಡೆಯುವ ಸತತ ಪ್ರಯತ್ನ ಮಾಡಿತು.

ಸ್ನೇಹಿತರೆ,

ಇದು ಎಂಥ ಸಂಕಷ್ಟದ ಸಮಸ್ಯೆ ಎಂದರೆ, ಇದರಲ್ಲಿ ಬೇರೆ ಯಾವುದೇ ದೇಶದೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಆದರೂ ಕೆಲವು ಸತ್ಯಗಳನ್ನು ನಾವು ಅಲ್ಲಗಳೆಯಲೂ ಸಾಧ್ಯವಿಲ್ಲ. ಇದೂ ಒಂದು ಸತ್ಯ. ವಿಶ್ವದ ದೊಡ್ಡ ದೊಡ್ಡ ಸಮರ್ಥ ದೇಶಗಳನ್ನು ನೋಡಿದರೆ, ಅಲ್ಲಿ ಕೊರೋನಾಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ನೋಡಿದರೆ, ಅದಕ್ಕೆ ಹೋಲಿಕೆ ಮಾಡಿದರೆ ಭಾರತ ಅತ್ಯಂತ ಬಲಿಷ್ಠ ಸ್ಥಿತಿಯಲ್ಲಿದೆ. ತಿಂಗಳು - ಒಂದೂವರೆ ತಿಂಗಳುಗಳ ಹಿಂದೆ ಕೊರೋನಾ ಪ್ರಸರಣದ ವಿಚಾರದಲ್ಲಿ ಇತರ ರಾಷ್ಟ್ರಗಳು ಭಾರತಕ್ಕೆ ಸಮಾನವಾಗಿಯೇ ನಿಂತಿದ್ದವು. ಆದರೆ ಇಂದು ಆ ದೇಶಗಳಲ್ಲಿ ಭಾರತದ ಜೊತೆ ಹೋಲಿಕೆ ಮಾಡಿದರೆ ಅಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ನಮಗಿಂತಲೂ 25ರಿಂದ 30ಪಟ್ಟು ಹೆಚ್ಚಳವಾಗಿದೆ. ಆ ದೇಶಗಳಲ್ಲಿ ಸಾವಿರಾರು ಜನರು ದುಃಖದಾಯಕವಾಗಿ ಸಾವನ್ನಪ್ಪಿದ್ದಾರೆ. ಭಾರತ ಸಮಗ್ರ ದೃಷ್ಟಿಕೋನದೊಂದಿಗೆ ಕಾರ್ಯಾಚರಣೆ ಮಾಡದೇ ಇದ್ದಿದ್ದರೆ, ಸಂಘಟಿತ ಪ್ರಯತ್ನಗಳನ್ನು ಮಾಡದೇ ಇದ್ದಿದ್ದರೆ, ಸಕಾಲದಲ್ಲಿ ತ್ವರಿತ ನಿರ್ಧಾರ ಕೈಗೊಳ್ಳದೇ ಇದ್ದಿದ್ದರೆ, ಭಾರತದ ಸ್ಥಿತಿ ಏನಾಗಿರುತ್ತಿತ್ತು ಎಂದು ಊಹಿಸಿಕೊಳ್ಳುವುದೂ ಕಷ್ಟವಾಗುತ್ತಿತ್ತು. ಅದನ್ನು ನೆನೆಸಿಕೊಂಡರೆ ಭಯವಾಗುತ್ತದೆ. ಆದರೂ, ಕಳೆದ ಕೆಲವು ದಿನಗಳ ಅನುಭವದಿಂದ ಸ್ಪಷ್ಟವಾಗಿರುವುದೇನೆಂದರೆ, ನಾವು ಅನುಸರಿಸುತ್ತಿರುವ ಮಾರ್ಗ ಸರಿಯಾಗಿದೆ. ಈ ಸ್ಥಿತಿಯಲ್ಲಿ ಅದೇ ನಮಗೆ ಸರಿಯಾದುದಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಲಾಕ್ ಡೌನ್ ನ ಬಹಳ ದೊಡ್ಡ ಲಾಭ ದೇಶಕ್ಕೆ ದೊರೆತಿದೆ. ಕೇವಲ ಆರ್ಥಿಕ ದೃಷ್ಟಿಯಿಂದ ನೋಡಿದರೆ, ಇದು ದೊಡ್ಡದಾಗಿ ಖಂಡಿತಾ ಕಾಣುತ್ತದೆ, ಅತಿ ದೊಡ್ಡ ಬೆಲೆಯನ್ನೂ ತೆತ್ತಿದ್ದೇವೆ ಎನಿಸುತ್ತದೆ. ಆದಾಗ್ಯೂ ಭಾರತವಾಸಿಗಳ ಜೀವದ ಮುಂದೆ ಇದರ ಯಾವುದೇ ಹೋಲಿಕೆ ಸರಿಯಾಗುವುದಿಲ್ಲ. ಸೀಮಿತ ಸಂಪನ್ಮೂಲದ ನಡುವೆ ಭಾರತ ಅನುಸರಿಸಿರುವ ಮಾರ್ಗ, ಅದು ನಡೆದಿರುವ ದಾರಿ, ಆ ಮಾರ್ಗದ ಬಗ್ಗೆ ವಿಶ್ವದೆಲ್ಲೆಡೆ ಚರ್ಚೆ ನಡೆಯುತ್ತಿರುವುದು ಅತ್ಯಂತ ಸ್ವಾಭಾವಿಕವಾಗಿದೆ. ರಾಜ್ಯ ಸರ್ಕಾರಗಳು ಕೂಡ, ಸ್ಥಳೀಯ ಆಡಳಿತಗಳು ಸಹ ಈ ನಿಟ್ಟಿನಲ್ಲಿ ಬಹಳ ಜವಾಬ್ದಾರಿಯಿಂದ ಕೆಲಸ ಮಾಡಿವೆ, ಮಾಡುತ್ತಿವೆ. 24 ಗಂಟೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ನಿರ್ವಹಿಸಲು ಪ್ರಯತ್ನ ಮಾಡಿದ್ದಾರೆ. ಪರಿಸ್ಥಿತಿಯನ್ನು ಸುಧಾರಿಸಿದ್ದಾರೆ.

ಸ್ನೇಹಿತರೆ, ಈ ಎಲ್ಲ ಪ್ರಯತ್ನದ ನಡುವೆಯೂ ಕೊರೋನಾ ಯಾವ ರೀತಿಯ ಹರಡುತ್ತಿದೆ ಎಂದರೆ, ಅದು ವಿಶ್ವದಾದ್ಯಂತ ಆರೋಗ್ಯ ತಜ್ಞರಿಗೆ ಮತ್ತು ಸರ್ಕಾರಗಳಿಗೆ ಹೆಚ್ಚಿನ ಸವಾಲು ಎಸೆದಿದೆ. ಭಾರತದಲ್ಲಿ ಕೂಡ ಕೊರೋನಾ ವಿರುದ್ಧದ ಹೋರಾಟ ಮುಂದೆ ಹೇಗೆ ನಡೆಸಬೇಕು, ನಾವು ಹೇಗೆ ಜಯ ಸಾಧಿಸಬೇಕು, ನಮಗೆ ಇಲ್ಲಿ ಆಗಿರುವ ನಷ್ಟ ಕಡಿಮೆ ಮಾಡುವುದು ಹೇಗೆ, ಜನರ ಸಂಕಷ್ಟ ಕಡಿಮೆ ಮಾಡುವುದು ಹೇಗೆ, ಎಂಬ ವಿಚಾರಗಳ ಬಗ್ಗೆ ರಾಜ್ಯಗಳ ಜೊತೆ ನಿರಂತರ ಚರ್ಚೆ ನಡೆಸಿದ್ದೇವೆ. ಈ ಎಲ್ಲ ಚರ್ಚೆಗಳಿಂದ ಒಂದು ವಿಷಯ ಸ್ಪಷ್ಟವಾಗಿದೆ, ಎಲ್ಲರ ಕಡೆಯಿಂದ ಒಂದು ಸಲಹೆ ಬರುತ್ತಿದೆ, ಜನರಿಂದಲೂ ಬರುತ್ತಿರುವ ಸಲಹೆ ಅದೇ ಆಗಿದೆ, ಅದು ಲಾಕ್ ಡೌನ್ ಮುಂದುವರಿಸಬೇಕು ಎಂಬುದಾಗಿದೆ. ಕೆಲವು ರಾಜ್ಯಗಳು ಈಗಾಗಲೇ ಲಾಕ್ ಡೌನ್ ಮುಂದುವರಿಸುವ ನಿರ್ಧಾರ ಮಾಡಿವೆ.

ಸ್ನೇಹಿತರೆ,

ಈ ಎಲ್ಲ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತದಲ್ಲಿ ಲಾಕ್ ಡೌನ್ ಅನ್ನು ಮೇ 3 ರವರೆಗೆ ಮುಂದುವರಿಸಬೇಕಾಗುತ್ತದೆ. 3 ಮೇ ತನಕ, ನಾವು ಅಂದರ ಎಲ್ಲ ದೇಶವಾಸಿಗಳೂ ಲಾಕ್ ಡೌನ್ ನಲ್ಲಿಯೇ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು ಇಷ್ಟು ದಿನ ನಿಯಮಗಳನ್ನು ಹೇಗೆ ಪಾಲಿಸುತ್ತಿದ್ದೇವೆಯೋ ಹಾಗೆ ಪಾಸಿಬೇಕಾಗುತ್ತದೆ. ನಾನು ಎಲ್ಲ ದೇಶವಾಸಿಗಳಲ್ಲಿ ಕೈಜೋಡಿಸಿ ಪ್ರಾರ್ಥಿಸುವುದೇನೆಂದರೆ, ಈಗ ಕೊರೋನಾವನ್ನು ಯಾವುದೇ ಸಂದರ್ಭದಲ್ಲೂ ಹೊಸ ಕ್ಷೇತ್ರಗಳಲ್ಲಿ ಹರಡಲು ಬಿಡಬಾರದು, ಸ್ಥಳೀಯ ಮಟ್ಟದಲ್ಲಿ ಒಬ್ಬ ರೋಗಿಯ ಸಂಖ್ಯೆ ಹೆಚ್ಚಿದರೂ ಅದು ನಮಗೆ ಚಿಂತೆಯ ವಿಚಾರ ಆಗಬೇಕು, ಎಲ್ಲಿಯೇ ಆದರೂ ಕೊರೋನಾಗೆ ಒಬ್ಬ ರೋಗಿಯ ದುಃಖದಾಯಕ ಮೃತ್ಯ ಆದರೆ, ನಮ್ಮ ಚಿಂತೆ ಮತ್ತಷ್ಟು ಹೆಚ್ಚಬೇಕಾಗುತ್ತದೆ. ಹೀಗಾಗಿಯೇ ಈಗ ಹಾಟ್ ಸ್ಪಾಟ್ ಗಳನ್ನು ಗುರುತಿಸಿ, ಮೊದಲಿಗಿಂತಲೂ ಬಹಳ ಹೆಚ್ಚು ಎಚ್ಚರಿಕೆ, ನಿಗಾ ವಹಿಸಬೇಕಾಗುತ್ತದೆ. ಯಾವ ಜಾಗಗಳು ಹಾಟ್ ಸ್ಪಾಟ್ ಆಗುವ ಸಾಧ್ಯತೆ ಇದೆಯೋ ಅಲ್ಲಿಯೂ ಹೆಚ್ಚಿನ ನಿಗಾ ಇಡಬೇಕಾಗುತ್ತದೆ, ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೊಸ ಹಾಟ್ ಸ್ಪಾಟ್ ಗಳು ಹುಟ್ಟಿಕೊಂಡರೆ, ನಮ್ಮ ಪರಿಶ್ರಮ, ನಮ್ಮ ತಪಸ್ಸಿಗೆ ಇನ್ನೂ ಹೆಚ್ಚಿನ ಸವಾಲು ಎದುರಾಗುತ್ತದೆ. ಇನ್ನೂ ಹೆಚ್ಚಿನ ಸಂಕಷ್ಟ ತರುತ್ತದೆ. ಹೀಗಾಗಿ ಮುಂದಿನ ಒಂದು ವಾರದಲ್ಲಿನ ಕೊರೋನಾ ವಿರುದ್ಧದ ಹೋರಾಟದಲ್ಲಿ ಕಾಠಿಣ್ಯ ಮತ್ತಷ್ಟು ಹೆಚ್ಚಾಗಲಿದೆ. 20 ಏಪ್ರಿಲ್ ವರೆಗೆ ಎಲ್ಲ ಪಟ್ಟಣ, ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿ, ಎಲ್ಲ,ಜಿಲ್ಲೆ, ಎಲ್ಲ ರಾಜ್ಯಗಳಲ್ಲೂ ಭಾರಿ ಎಚ್ಚರಿಕೆಯಿಂದ ಗಮನಿಸಲಾಗುತ್ತದೆ. ಅಲ್ಲಿ ಲಾಕ್ ಡೌನ್ ಎಷ್ಟರ ಮಟ್ಟಿಗೆ ಪಾಲನೆ ಆಗುತ್ತಿದೆ. ಆ ಕ್ಷೇತ್ರ ಕೊರೋನಾದಿಂದ ಎಷ್ಟರ ಮಟ್ಟಿಗೆ ಪಾರಾಗಿದೆ ಎಂದು ನಿರ್ಧರಿಸಲಾಗುತ್ತದೆ. ಯಾವ ಕ್ಷೇತ್ರ ಈ ಅಗ್ನಿ ಪರೀಕ್ಷೆಯಲ್ಲಿ ಸಫಲವಾಗುತ್ತದೆಯೋ, ಯಾವುದು ಹಾಟ್ ಸ್ಟಾಟ್ ನಲ್ಲಿ ಇರುವುದಿಲ್ಲವೋ ಅಥವಾ ಹಾಟ್ ಸ್ಪಾಟ್ ಆಗಿ ಬದಲಾಗುವ ಆತಂಕ ಕಡಿಮೆ ಇರುತ್ತದೋ, ಅಲ್ಲಿ, ಏಪ್ರಿಲ್ 20ರಿಂದ ಕೆಲವು ವಿನಾಯಿತಿ ನೀಡಿ, ಕಾರ್ಯ ಚಟುವಟಿಕೆಗಳಿಗೆ ಅನುಮತಿಯನ್ನು ನೀಡಲಾಗುತ್ತದೆ. ಆದರೆ ಜ್ಞಾಪಕದಲ್ಲಿಡಿ, ಇದರಲ್ಲಿ ಹಲವು ಷರತ್ತುಗಳಿರುತ್ತವೆ. ಹೊರಗೆ ಬರುವ ನಿಯಮ ಬಹಳ ಕಠಿಣವಾಗಿರುತ್ತದೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿದರೆ, ಅಥವಾ ಕೊರೋನಾದ ಹೆಜ್ಜೆ ಬಡಾವಣೆಯಲ್ಲಿ ಕಾಣಿಸಿಕೊಂಡರೆ, ಎಲ್ಲ ಅನುಮತಿಯನ್ನೂ ತಕ್ಷಣವೇ ವಾಪಸ್ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ, ನೀವೂ ಎಚ್ಚರ ತಪ್ಪಬಾರದು ಮತ್ತು ಯಾರೇ ಎಚ್ಚರ ತಪ್ಪಲು ಅವಕಾಶವನ್ನೂ ನೀಡಬಾರದು.

ನನ್ನ ಪ್ರೀತಿಯ ದೇಶವಾಸಿಗಳೇ, ನಾಳೆ ಈ ವಿಚಾರವಾಗಿ ಸರ್ಕಾರದ ಪರವಾಗಿ ವಿಸ್ತೃತವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಸ್ನೇಹಿತರೆ,

20 ಏಪ್ರಿಲ್ ನಿಂದ ನಮ್ಮ ಬಡ ಸೋದರರು ಮತ್ತು ಸಹೋದರಿಯರ ಜೀವನೋಪಾಯವನ್ನು ಗಮನದಲ್ಲಿಟ್ಟುಕೊಂಡು ಕೆಲವೊಂದು ನಿರ್ದಿಷ್ಟ ಕ್ಷೇತ್ರಗಳಲ್ಲಿ ಲಾಕ್ ಡೌನ್ ಷರತ್ತುಗಳನ್ನು ಸ್ವಲ್ಪಮಟ್ಟಿಗೆ ಸಡಿಲಗೊಳಿಸಲಾಗುವುದು.

ದಿನಗೂಲಿ ನೌಕರರು, ಮತ್ತು ದಿನದ ಸಂಪಾದನೆಯ ಮೇಲೆ ಅವಲಂಬಿತರಾಗಿರುವವರು ಕೂಡ ನನ್ನ ಕುಟುಂಬದ ಭಾಗವಾಗಿರುತ್ತಾರೆ. ನನ್ನ ಆದ್ಯತೆ ಅವರ ಸಂಕಷ್ಟವನ್ನು ತಗ್ಗಿಸುವುದಾಗಿದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮೂಲಕ ಸರ್ಕಾರ ಅವರಿಗೆ ಸಹಾಯ ಮಾಡಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ.

ನಾವು ಹೊಸ ಮಾರ್ಗಸೂಚಿಗಳನ್ನು ರೂಪಿಸುವ ಸಂದರ್ಭದಲ್ಲಿ ಕೂಡ ಅವರ ಹಿತವನ್ನು ಗಮನದಲ್ಲಿಟ್ಟಕೊಂಡಿದ್ದೇವೆ. ಈಗ ಹಿಂಗಾರು ಫಸಲಿನ ಕಟಾವು ನಡೆಯುತ್ತಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಒಗ್ಗೂಡಿ ಅವರ ಸಂಕಷ್ಟವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಲು ಪ್ರಯತ್ನ ಮಾಡುತ್ತಿವೆ. ದೇಶದಲ್ಲಿ ಔಷಧದಿಂದ ಹಿಡಿದು ಪಡಿತರ ಧಾನ್ಯದವರೆಗೆ ಸಾಕಷ್ಟು ದಾಸ್ತಾನಿದೆ. ಪೂರೈಕೆ ಸರಪಣಿಯಲ್ಲಿನ ಸಮಸ್ಯೆಯನ್ನು ಪರಿಹರಿಸಲು ನಿರಂತರವಾಗಿ ಶ್ರಮಿಸಲಾಗುತ್ತಿದೆ.

ನಾವು ಆರೋಗ್ಯ ಮೂಲಸೌಕರ್ಯ ಕ್ಷೇತ್ರದಲ್ಲಿ ತ್ವರಿತವಾಗಿ ಮುಂದೆ ಸಾಗುತ್ತಿದ್ದೇವೆ.

ಜನವರಿಯಲ್ಲಿ, ನಮ್ಮಲ್ಲಿ ಕೊರೋನಾ ವೈರಸ್ ಪರೀಕ್ಷೆ ಮಾಡಲು ಒಂದೇ ಒಂದು ಪ್ರಯೋಗಾಲಯವಿತ್ತು, ಇಂದು ಅದು 220ಕ್ಕೂ ಹೆಚ್ಚು ಆಗಿದ್ದು, ಆ ಪ್ರಯೋಗಾಲಯಗಳಲ್ಲಿ ಪರೀಕ್ಷಾ ಕಾರ್ಯ ನಡೆಯುತ್ತಿದೆ.
ವಿಶ್ವದ ಅನುಭವ ಏನು ಹೇಳುತ್ತದೆ ಎಂದರೆ, ಕೊರೋನಾದ 10,000 ರೋಗಿಗಳು ಇದ್ದರೂ, ಅದರ ನಿರ್ವಹಣೆಗೆ 1500 ರಿಂದ 1600 ಹಾಸಿಗಳ ಅಗತ್ಯ ಮಾತ್ರ ಇರುತ್ತದೆ. ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ಹಾಸಿಗೆಗಳ ವ್ಯವಸ್ಥೆ ಈಗಾಗಲೇ ಮಾಡಲಾಗಿದೆ. ಇದಿಷ್ಟೇ ಅಲ್ಲ, 600ಕ್ಕೂ ಹೆಚ್ಚು ಸಮರ್ಪಿತ ಕೋವಿಡ್ ಆಸ್ಪತೆಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಸೌಲಭ್ಯಗಳನ್ನು ಇನ್ನೂ ತ್ವರಿತ ವೇಗದಲ್ಲಿ ಹೆಚ್ಚಿಸಲಾಗುತ್ತಿದೆ.
ಸ್ನೇಹಿತರೆ,

ಇಂದು ಭಾರತದಲ್ಲಿ ಸೀಮಿತ ಸಂಪನ್ಮೂಲ ಇರಬಹುದು, ಆದರೆ, ನಾನು ಯುವ ವಿಜ್ಞಾನಿಗಳಿಗೆ ಮನವಿ ಮಾಡಿಕೊಳ್ಳುವುದೇನೆಂದರೆ, ಜಗತ್ತಿನ ಹಿತಕ್ಕಾಗಿ ಮತ್ತು ಮಾನವ ಕುಲದ ಕಲ್ಯಾಣಕ್ಕಾಗಿ ಅವರು ಕೆಲಸ ಮಾಡಿ, ಸವಾಲನ್ನು ಸ್ವೀಕರಿಸಿ, ಮುಂದೆ ಬಂದು, ಕೊರೋನಾ ವೈರಾಣು ನಿಗ್ರಹಕ್ಕಾಗಿ ಒಂದು ಲಸಿಕೆ ಕಂಡು ಹಿಡಿಯಬೇಕು.
ಸ್ನೇಹಿತರೆ,

ನೀವು ಸಂಯಮದಿಂದ ಈ ಎಲ್ಲ ನಿಯಮಗಳನ್ನು ಪಾಲಿಸಿದರೆ, ನಾವು ಧೈರ್ಯದಿಂದ ಇದ್ದರೆ, ಖಂಡಿತವಾಗಿಯೂ ಈ ಕೊರೋನಾ ಮಹಾಮಾರಿಯನ್ನು ಮಣಿಸಬಹುದು.

ಈ ವಿಶ್ವಾಸದೊಂದಿಗೆ, ಇಂದು ನಾನು ನಿಮ್ಮಿಂದ ಏಳು ವಿಚಾರಗಳಲ್ಲಿ ನಿಮ್ಮ ಬೆಂಬಲವನ್ನು ಬಯಸುತ್ತಿದ್ದೇನೆ.

ಮೊದಲನೆಯದಾಗಿ:

ನೀವು ನಿಮ್ಮ ಮನೆಯಲ್ಲಿರುವ ಹಿರಿಯರ ಅದರಲ್ಲೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅವರೂ ಕೂಡ ಹೆಚ್ಚು ಜಾಗರೂಕತೆಯಿಂದ ಇರಲಿ.

ಎರಡನೆಯದಾಗಿ:

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಲಕ್ಷ್ಮಣ ರೇಖೆಯನ್ನು ದಾಟಬೇಡಿ ಹಾಗೂ ಲಾಕ್ ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಬೇಡಿ, ನಿಯಮ ಪಾಲಿಸಿ, ಮನೆಯಲ್ಲಿಯೇ ತಯಾರಿಸಲಾದ ಮಾಸ್ಕ್ ಗಳನ್ನು ಧರಿಸಿ.

ಮೂರನೆಯದಾಗಿ:

ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ಆಯುಷ್ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ. ಬಿಸಿ ನೀರನ್ನು ಕುಡಿಯಿರಿ ಮತ್ತು ಕಷಾಯ ಸೇವಿಸಿ.

ನಾಲ್ಕನೆಯದಾಗಿ:

ಆರೋಗ್ಯ ಸೇತು ಆಪ್ ಅನ್ನು ನಿಮ್ಮ ಮೊಬೈಲ್ ಗೆ ಡೌನ್ ಲೋಡ್ ಮಾಡಿಕೊಳ್ಳಿ, ಇದು ಕೋವಿಡ್ 19 ಸಾಂಕ್ರಾಮಿಕ ಪಸರಿಸದಂತೆ ತಡೆಯುತ್ತದೆ. ಇತರರಿಗೂ ಕೂಡ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಪ್ರೇರೇಪಿಸಿ.

ಐದನೆಯದಾಗಿ:

ನಿಮ್ಮ ಮನೆಯ ಬಳಿ ಇರುವ ಬಡ ಕುಟುಂಬಗಳಿಗೆ ಆಹಾರ ನೀಡಿ ಮತ್ತು ಅವರ ಬಗ್ಗೆ ಕಾಳಜಿ ವಹಿಸಿ.

ಆರನೆಯದಾಗಿ:

ನಿಮ್ಮ ಕೈಕೆಳಗೆ ಕೆಲಸ ಮಾಡುವವರ ಬಗ್ಗೆ ಕರುಣೆ ತೋರಿಸಿ, ಯಾವುದೇ ಕಾರಣಕ್ಕೂ ಅವರನ್ನು ಕೆಲಸದಿಂದ ತೆಗೆದುಹಾಕಬೇಡಿ,

ಏಳನೆಯದಾಗಿ:

ದೇಶದ ಕೊರೋನಾ ಸೈನಿಕರು ಅಂದರೆ ನಮ್ಮ ವೈದ್ಯರು, ದಾದಿಯರು, ನೈರ್ಮಲ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ ಗಳ ಬಗ್ಗೆ ಸಂಪೂರ್ಣ ಗೌರವ ತೋರಿಸಿ.
ಸ್ನೇಹಿತರೆ,

ಈ ಏಳೂ ವಿಷಯದಲ್ಲಿ ನಿಮ್ಮ ಬೆಂಬಲ ನನಗೆ ಬೇಕು. ಈ ಸಪ್ತಪದಿ ನಮಗೆ ವಿಜಯ ತಂದು ಕೊಡುವ ಮಾರ್ಗವಾಗಿದೆ. ವಿಜಯ ಸಾಧಿಸಲು ನಾವು ನಿಷ್ಠೆಯಿಂದ ಮಾಡಬೇಕಾದ ಕಾರ್ಯವಾಗಿದೆ. ಪೂರ್ಣ ನಿಷ್ಠೆಯಿಂದ ಮೇ 3ರವರೆಗೆ ಲಾಕ್ ಡೌನ್ ನಿಯಮಗಳನ್ನು ತಪ್ಪದೇ ಪಾಲಿಸಿ, ಎಲ್ಲಿದ್ದೀರೋ ಅಲ್ಲಿಯೇ ಉಳಿದುಕೊಳ್ಳಿ, ಮತ್ತು ಸುರಕ್ಷಿತವಾಗಿರಿ.

“ವಯಂ ರಾಷ್ಟ್ರೇ ಜಾಗ್ರಯಾಂ’

ನಾವೆಲ್ಲರೂ ನಮ್ಮ ದೇಶವನ್ನು ಜೀವಂತ ಮತ್ತು ಜಾಗೃತವಾಗಿಡೋಣ. ಈ ವಿಶ್ವಾಸದೊಂದಿಗೆ ನಾನು ನನ್ನ ಮಾತು ಪೂರ್ಣಗೊಳಿಸುತ್ತೇನೆ.

 

ತುಂಬಾ ತುಂಬಾ ಧನ್ಯವಾದಗಳು

 

***



(Release ID: 1614267) Visitor Counter : 378