ಈಶಾನ್ಯ ರಾಜ್ಯಗಳ ಅಭಿವೃಧ್ಧಿ ಸಚಿವಾಲಯ

ಅತ್ಯಾವಶ್ಯಕ ಸಾಮಗ್ರಿಗಳು ಮತ್ತು ವೈದ್ಯಕೀಯ ಸಲಕರಣೆಗಳು ಸೇರಿದಂತೆ ಸರಕು ನಿರಂತರವಾಗಿ ಈಶಾನ್ಯ ರಾಜ್ಯಗಳಿಗೆ ಪೂರೈಕೆ: ಡಾ. ಜಿತೇಂದ್ರ ಸಿಂಗ್

Posted On: 05 APR 2020 5:45PM by PIB Bengaluru

ಅತ್ಯಾವಶ್ಯಕ ಸಾಮಗ್ರಿಗಳು ಮತ್ತು ವೈದ್ಯಕೀಯ ಸಲಕರಣೆಗಳು ಸೇರಿದಂತೆ ಸರಕು ನಿರಂತರವಾಗಿ ಈಶಾನ್ಯ ರಾಜ್ಯಗಳಿಗೆ ಪೂರೈಕೆ: ಡಾ. ಜಿತೇಂದ್ರ ಸಿಂಗ್

 

ಕೇಂದ್ರ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಖಾತೆಗಳ ರಾಜ್ಯ ಸಚಿವ(ಸ್ವತಂತ್ರ ಹೊಣೆಗಾರಿಕೆ), ಪ್ರಧಾನಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಅಣುಶಕ್ತಿ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು, ಇಂದು ಈಶಾನ್ಯ ಭಾಗಕ್ಕೆ ಅತ್ಯಾವಶ್ಯಕ ವಸ್ತುಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ನಿರಂತರವಾಗಿ ಸರಕು ಸಾಗಾಣೆ ವಿಮಾನಗಳ ಮೂಲಕ ಪೂರೈಸಲಾಗುತ್ತಿದೆ ಎಂದು ಹೇಳಿದರು. ಅಲ್ಲದೆ ಮುಂದಿನ ದಿನಗಳಲ್ಲೂ ಯಾವುದೇ ರೀತಿಯ ವಸ್ತುಗಳಿಗೆ ಕೊರತೆ ಉಂಟಾಗುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಘೋಷಣೆಯ ನಂತರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರಕು ಸಾಗಾಣೆ ಮೂಲಕ ಆದ್ಯತಾ ಕ್ರಮವಾಗಿ ದೇಶದ ಎಲ್ಲ ಭಾಗಗಳಿಗೆ ವಿಶೇಷವಾಗಿ ಈಶಾನ್ಯ ಭಾಗದ ಪ್ರದೇಶದ ದೂರದ ಪ್ರದೇಶಗಳು, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶ ಹಾಗೂ ದ್ವೀಪ ಪ್ರದೇಶಗಳಿಗೆ ಅತ್ಯವಶ್ಯಕ ವಸ್ತುಗಳನ್ನು ಸರಕು ಸಾಗಾಣೆಯ ವಿಮಾನಗಳ ಮೂಲಕ ಪೂರೈಸಲು ನಿರ್ಧಾರ ಕೈಗೊಳ್ಳಲಾಯಿತು. ನಂತರ ಏರ್ ಇಂಡಿಯಾದ ಮೂಲಕ ಸರಕು ಸಾಗಾಣೆ, ಭಾರತೀಯ ವಾಯುಪಡೆಯ ವಿಮಾನಗಳು ಕಾರ್ಯಾಚರಣೆ ಆರಂಭಿಸಿದವು ಎಂದು ಹೇಳಿದರು.

ವಿಮಾನಗಳ ಕಾರ್ಯನಿರ್ವಹಣೆ ಬಗ್ಗೆ ವಿವರ ನೀಡಿದ ಡಾ. ಜಿತೇಂದ್ರ ಸಿಂಗ್ ಅವರು, ಅವಶ್ಯಕ ಸಾಮಗ್ರಿ ಹೊಂದಿದ ಏರ್ ಇಂಡಿಯಾದ ಮೊದಲ ಸರಕು ವಿಮಾನ ಮಾರ್ಚ್ 30ರಂದು ಮಧ್ಯ ರಾತ್ರಿ ಗುವಾಹತಿ ವಿಮಾನ ನಿಲ್ದಾಣದಲ್ಲಿ ಇಳಿಯಿತು ಮತ್ತು ಮರು ದಿನ ಮಾರ್ಚ್ 31ರಂದು ಭಾರತೀಯ ವಾಯುಪಡೆಯ ಸರಕು ವಿಮಾನ ದಿಮಾಪುರ್ ಕ್ಕೆ ಆಗಮಿಸಿತು. ಅಲ್ಲಿಂದೀಚೆಗೆ ನಿರಂತರವಾಗಿ ಸರಕು ಸಾಗಾಣೆ ವಿಮಾನಗಳ ಹಾರಾಟ ನಡೆಯುತ್ತಿದೆ, ಅದರ ಪರಿಣಾಮವಾಗಿ ನಾಗಾಲ್ಯಾಂಡ್ ರಾಜ್ಯಕ್ಕೆ ಮೂರು ಭಾರೀ ಪ್ರಮಾಣದ ಸರಕು ಕನ್ಸೈನ್ ಮೆಂಟ್ ಗಳು ತಲುಪಿವೆ ಮತ್ತು ಮಣಿಪುರ ಕೂಡ ಆಗಲೇ ಮೂರು ಸರಕು ವಿಮಾನಗಳ ಮೂಲಕ ಅವಶ್ಯಕ ಸಾಮಗ್ರಿಗಳನ್ನು ಸ್ವೀಕರಿಸಿದೆ ಎಂದರು.

ಮಾಸ್ಕ್ ಗಳಿಗೆ ಬೇಡಿಕೆ ಕುರಿತಂತೆ ಡಾ. ಜಿತೇಂದ್ರ ಸಿಂಗ್ ಅವರು, 30,000 ಎನ್-95 ಮಾಸ್ಕ್ ಗಳನ್ನು ಹೊತ್ತ ಕನ್ಸೈನ್ ಮೆಂಟ್ ಈಗಾಗಲೇ ಗುವಾಹತಿ ತಲುಪಿದ್ದು, ಅಲ್ಲಿ ಅವುಗಳನ್ನು ವಿತರಿಸಲಾಗುವುದು ಎಂದರು. ಈ ಮಧ್ಯೆ, ಸ್ವಸಹಾಯ ಗುಂಪುಗಳ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಸ್ವ-ಸಹಾಯ ಗುಂಪುಗಳು ತಾವೇ ಸ್ವತಃ ಪ್ರಯತ್ನಗಳ ಮೂಲಕ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಉತ್ಪಾದಿಸಲು ಮುಂದಾಗಿವೆ ಎಂದರು.

ಡಾ. ಜಿತೇಂದ್ರ ಸಿಂಗ್ ಅವರು, ಭವಿಷ್ಯದಲ್ಲಿ ಯಾವಾಗ ಬೇಡಿಕೆ ಅಥವಾ ಅಗತ್ಯ ಬೀಳುತ್ತದೋ ಅಂತಹ ಸಂದರ್ಭಗಳಲ್ಲಿ ಅತ್ಯಲ್ಪ ಅವಧಿಯಲ್ಲಿಯೇ ಸರಕು ಸಾಗಾಣೆ ವಿಮಾನಗಳ ವ್ಯವಸ್ಥೆಯನ್ನು ಕಲ್ಪಿಸಲು ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಭರವಸೆ ನೀಡಿದರು. ಸರಕು ಸಾಗಾಣೆ ಗಾತ್ರ ಮತ್ತು ವಸ್ತುಗಳನ್ನು ಆಧರಿಸಿ ಏರ್ ಇಂಡಿಯಾ ಮತ್ತು ಭಾರತೀಯ ವಾಯುಪಡೆಯ ವಿಮಾನಗಳು ಸಮನ್ವಯದೊಂದಿಗೆ ಪರಸ್ಪರ ಕಾರ್ಯನಿರ್ವಹಿಸುತ್ತವೆ ಎಂದವರು ಹೇಳಿದರು. ಅಲ್ಲದೆ ಈ ಸರಕು ಸಾಗಾಣೆ ವಿಮಾನಗಳ ಹಾರಾಟದ ಬಗ್ಗೆ ನಿಗಾವಹಿಸಲು ಕಾರ್ಯತಂತ್ರವನ್ನು ರೂಪಿಸಲಾಗಿದೆ ಮತ್ತು ನಾವು ಎಲ್ಲ ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.

ಇದೇ ವೇಳೆ ಡಾ. ಜಿತೇಂದ್ರ ಸಿಂಗ್ ಅವರು, ಭಾರತದ ಈಶಾನ್ಯ ಭಾಗದುದ್ದಕ್ಕೂ ಇರುವ ಸುಮಾರು 5,500 ಕಿ.ಮೀ. ಉದ್ದದ ಅಂತಾರಾಷ್ಟ್ರೀಯ ಗಡಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ಹೇಳಿದರು. ಇದರಿಂದಾಗಿ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.

***


(Release ID: 1611455) Visitor Counter : 210