ರಕ್ಷಣಾ ಸಚಿವಾಲಯ

ಸಾರ್ವಜನಿಕ ಸ್ಥಳಗಳ ಸಮರ್ಪಕ ನೈರ್ಮಲ್ಯಕ್ಕಾಗಿ ಸಲಕರಣೆ ಅಭಿವೃದ್ದಿಪಡಿಸಿದ ಡಿ.ಆರ್.ಡಿ.ಒ.

Posted On: 03 APR 2020 6:27PM by PIB Bengaluru

ಸಾರ್ವಜನಿಕ ಸ್ಥಳಗಳ ಸಮರ್ಪಕ ನೈರ್ಮಲ್ಯಕ್ಕಾಗಿ ಸಲಕರಣೆ ಅಭಿವೃದ್ದಿಪಡಿಸಿದ ಡಿ.ಆರ್.ಡಿ.ಒ.

 

ಕೊರೋನಾವೈರಸ್ ಜಾಗತಿಕ ಸಾಂಕ್ರಾಮಿಕ ವಿರುದ್ದ ಹೋರಾಟಕ್ಕೆ ದೇಶೀಯ ಪರಿಹಾರಗಳನ್ನು ಅಭಿವೃದ್ದಿಪಡಿಸುವ ಆಶಯದ ಮುಂದುವರಿದ ಭಾಗವಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿ.ಆರ್.ಡಿ.ಒ.) ವಿವಿಧ ವಿಸ್ತಾರದ ಪ್ರದೇಶಗಳ ನೈರ್ಮಲ್ಯೀಕರಣಕ್ಕೆ ತಂತ್ರಜ್ಞಾನಗಳನ್ನು ತಯಾರು ಮಾಡಿದೆ. ದಿಲ್ಲಿಯ ಅಗ್ನಿ ಸ್ಪೋಟ ಮತ್ತು ಪರಿಸರ ಸುರಕ್ಷೆ ಕೇಂದ್ರ (ಸಿ.ಎಫ್.ಇ.ಇ.ಎಸ್.) ನೈರ್ಮಲ್ಯೀಕರಣದ ಎರಡು ಸಂಯೋಜನೆಯ ಉಪಕರಣಗಳನ್ನು ಅಭಿವೃದ್ದಿಪಡಿಸಿದೆ. ಇವು ಅಗ್ನಿ ಶಮನ ಕಾರ್ಯಾಚರಣೆಯಲ್ಲಿ ಬಳಕೆಯಾಗುವ ತಂತ್ರಜ್ಞಾನದ ಸುಧಾರಿತ ಮಾದರಿಯವಾಗಿವೆ.

ಹೊತ್ತೊಯ್ಯಬಹುದಾದ ನೈರ್ಮಲ್ಯೀಕರಣ ಉಪಕರಣ

ದಿಲ್ಲಿಯ ಸಿ.ಎಫ್.ಇ.ಇ.ಎಸ್. ಅದರ ಕೈಗಾರಿಕಾ ಸಹಭಾಗಿ ಜೊತೆಯಲ್ಲಿ 1 ಶೇಖಡಾ ಹೈಪೋಕ್ಲೋರೈಟ್ (ಹೈಪೊ) ದ್ರಾವಣವನ್ನು ಒಳಗೊಂಡ ಮಾಲಿನ್ಯ ನಿವಾರಕ ದ್ರಾವಕವನ್ನು ನೈರ್ಮಲ್ಯೀಕರಣಕ್ಕಾಗಿ ಸಿಂಪರಿಸುವ ಹೊತ್ತೊಯ್ಯಬಹುದಾದ ಉಪಕರಣವನ್ನು ಅಭಿವೃದ್ದಿ ಮಾಡಿದೆ.

ಈ ಬೆನ್ನಿನ ಮೇಲೆ ಹೊತ್ತೊಯ್ಯಬಹುದಾದ ಉಪಕರಣವನ್ನು ಇದರ ಕಾರ್ಯಾಚರಣೆಗೆ ತೊಡಗುವವರೇ ಹೊತ್ತಿಕೊಂಡು ಹೋಗಬಹುದು. ಇದು ಕಡಿಮೆ ಒತ್ತಡದ ಎರಡು ದ್ರಾವಕಗಳನ್ನು (ಗಾಳಿ ಮತ್ತು ಕ್ರಿಮಿನಾಶಕ ದ್ರಾವಣ) ಒಳಗೊಂಡ ತಂತ್ರಜ್ಞಾನವನ್ನು ಹೊಂದಿದೆ. ಇದು ಅತ್ಯಂತ ನವಿರಾದ ಮಂಜಿನ ತೆರೆಯನ್ನು ಸಿಂಪರಣೆ ಸಂದರ್ಭ ನಿರ್ಮಾಣ ಮಾಡುತ್ತದೆ. ಈ ಸಲಕರಣೆಯು 300 ಚದರ ಮೀಟರ್ ಪ್ರದೇಶವನ್ನು ಕ್ರಿಮಿಕೀಟರಹಿತವನ್ನಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಆಸ್ಪತ್ರೆ ಸ್ವಾಗತ ಆವರಣ, ವೈದ್ಯರ ಕೊಠಡಿಗಳು, ಕಚೇರಿ ಸ್ಥಳಗಳು , ಸಾರ್ವಜನಿಕರೊಂದಿಗೆ ವ್ಯವಹರಿಸುವ ಸ್ಥಳಗಳು , ಕಾರಿಡಾರುಗಳು, ನಡೆಯುವ ಹಾದಿಗಳು, ಮೆಟ್ರೋ ಮತ್ತು ರೈಲ್ವೇ ನಿಲ್ದಾಣಗಳು, ಬಸ್ ತಂಗುದಾಣ ಇತ್ಯಾದಿಗಳಲ್ಲಿ ಇದು ಬಳಕೆಯೋಗ್ಯವಾಗಿದೆ.

ವಿಸ್ತಾರ ಪ್ರದೇಶವನ್ನು ಶುಚಿ ಮಾಡಬಹುದಾದ ಟ್ರಾಲಿಯ ಮೇಲೆ ಅಳವಡಿಸಲಾಗಿರುವ ಯಂತ್ರೋಪಕರಣ

ಕೇಂದ್ರವು ತನ್ನ ಕೈಗಾರಿಕಾ ಸಹಭಾಗಿ ಜೊತೆ ಸೇರಿ ಹೆಚ್ಚಿನ ಸಾಮರ್ಥ್ಯದ ಟ್ರಾಲಿಯ ಮೇಲಿರಿಸಲಾದ ಉಪಕರಣವನ್ನು ತಯಾರು ಮಾಡಿದೆ. ಇದು ಕಡಿಮೆ ಒತ್ತಡದ ಏಕ ದ್ರವ (ಕ್ರಿಮಿನಾಶಕ ದ್ರವ ಪದಾರ್ಥ) ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಅತ್ಯಂತ ನವಿರಾದ ಮಂಜಿನ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಇದು 3000 ಚದರ ಮೀಟರ್ ಪ್ರದೇಶವನ್ನು ಕ್ರಿಮಿಕೀಟರಹಿತವನ್ನಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದು 50 ಲೀಟರ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದಕ್ಕೆ 12-15 ಮೀಟರಿನಷ್ಟು ದೂರಕ್ಕೆ ಕ್ರಿಮಿನಾಶಕವನ್ನು ಚಿಮ್ಮಿಸುವ ಸಾಮರ್ಥ್ಯವಿದೆ. ಇದು ಆಸ್ಪತ್ರೆಗಳು , ಮಾಲ್ ಗಳು, ವಿಮಾನ ನಿಲ್ದಾಣಗಳು , ಮೆಟ್ರೋ ನಿಲ್ದಾಣಗಳು , ಪ್ರತ್ಯೇಕಿಸಲ್ಪಟ್ಟ ಪ್ರದೇಶಗಳು , ಕ್ವಾರಂಟೈನ್ ಕೇಂದ್ರಗಳನ್ನು ಮತ್ತು ಅತ್ಯಂತ ಅಪಾಯದ ನಿವಾಸಿ ಪ್ರದೇಶಗಳಲ್ಲಿ ಬಳಕೆಗೆ ಅತ್ಯುಪಯುಕ್ತವಾಗಿದೆ.

ಈ ವ್ಯವಸ್ಥೆಯುಳ್ಳ ಎರಡು ಉಪಕರಣಗಳನ್ನು ತಕ್ಷಣದ ಬಳಕೆಗಾಗಿ ದಿಲ್ಲಿ ಪೊಲೀಸರಿಗೆ ಒದಗಿಸಲಾಗುತ್ತಿದೆ. ಇವುಗಳನ್ನು ಕೈಗಾರಿಕಾ ಸಹಭಾಗಿಗಳ ಸಹಾಯದೊಂದಿಗೆ ಇತರ ಏಜೆನ್ಸಿಗಳಿಗೂ ಲಭ್ಯವಾಗುವಂತೆ ಮಾಡಬಹುದಾಗಿದೆ.

***



(Release ID: 1610841) Visitor Counter : 162