ರಾಷ್ಟ್ರಪತಿಗಳ ಕಾರ್ಯಾಲಯ

ಕೋವಿಡ್-19 ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್ ಗಳು ಮತ್ತು ಆಡಳಿತಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ

Posted On: 27 MAR 2020 4:38PM by PIB Bengaluru

ಕೋವಿಡ್-19 ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್ ಗಳು ಮತ್ತು ಆಡಳಿತಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ

 

ಭಾರತದ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು, ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಅವರೊಂದಿಗೆ ಇಂದು(ಮಾರ್ಚ್ 27, 2020) ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರುಗಳು, ಲೆಫ್ಟಿನೆಂಟ್ ಗವರ್ನರ್ ಮತ್ತು ಆಡಳಿತಾಧಿಕಾರಿಗಳ ಜೊತೆ ಕೋವಿಡ್-19 ಹರಡುತ್ತಿರುವ ಹಿನ್ನೆಲೆಯಲ್ಲಿ ಎದುರಾಗಿರುವ ಸವಾಲುಗಳನ್ನು ಹತ್ತಿಕ್ಕಲು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಪ್ರಯತ್ನಗಳಿಗೆ ಪೂರಕ ಮಾರ್ಗೋಪಾಯಗಳ ಕುರಿತು ಸಮಾಲೋಚನೆ ನಡೆಸಿದರು. 
ಸಮ್ಮೇಳನವನ್ನು ಸಮಾಜದ ಒಗ್ಗಟ್ಟಿನ ಬಲದ ಬಗ್ಗೆ ಬೋಧಿಸುತ್ತಾ ಆರಂಭಿಸಿದ ರಾಷ್ಟ್ರಪತಿಗಳು, ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸ್ವಯಂ ಸೇವಕರು, ಧಾರ್ಮಿಕ ಸಂಸ್ಥೆಗಳು ಮತ್ತು ಇತರೆ ಸ್ವಯಂ ಸೇವಕರನ್ನು ಒಗ್ಗೂಡಿಸಿ ಆದಷ್ಟು ಶೀಘ್ರ ಈ ಪಿಡುಗನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರುಗಳು, ಲೆಫ್ಟಿನೆಂಟ್ ಗವರ್ನರ್ ಮತ್ತು ಆಡಳಿತಾಧಿಕಾರಿಗಳಿಗೆ ಕರೆ ನೀಡಿದರು. 
ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಮತ್ತು ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಅವರು, ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿರುವ “ಹಂಚಿಕೆ ಮತ್ತು ಆರೈಕೆ ಸಾಮರ್ಥ್ಯದ ಬಗ್ಗೆ ಭರವಸೆ ವ್ಯಕ್ತಪಡಿಸಿದರು ಮತ್ತು ಸರ್ಕಾರ ಕೈಗೊಂಡಿರುವ ಕ್ರಮಗಳು, ಸಮಾಜದ ದುರ್ಬಲ ವರ್ಗಗಳು ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರು ಮತ್ತು ನಿರ್ಗತಿಕರ ಸಂಕಷ್ಟಗಳನ್ನು ತಪ್ಪಿಸಲಿದೆ ಎಂದು ಹೇಳಿದರು. ವಿಡಿಯೋ ಕಾನ್ಫರೆನ್ಸ್ ನಲ್ಲಿ 14 ರಾಜ್ಯಗಳ ರಾಜ್ಯಪಾಲರು ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಪಾಲ್ಗೊಂಡಿದ್ದು, ಅವರು ಸಾಂಕ್ರಾಮಿಕ ಪಿಡುಗಿನಿಂದ ತಮ್ಮ ತಮ್ಮ ಪ್ರದೇಶಗಳಲ್ಲಿ ಆಗಿರುವ ತೊಂದರೆ ಮತ್ತು ಅನುಭವಗಳನ್ನು ಹಂಚಿಕೊಂಡರು. 
ವಿಡಿಯೋ ಕಾನ್ಫರೆನ್ಸ್ ಅನ್ನು ಉಪರಾಷ್ಟ್ರಪತಿಗಳು ಆಯೋಜಿಸಿದ್ದರು ಮತ್ತು ಅದರಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜನರ ಕಷ್ಟಗಳನ್ನು ದೂರ ಮಾಡಲು ನಾನಾ ರಾಜ್ಯಗಳು ಕೈಗೊಂಡಿರುವ ಉತ್ತಮ ಪದ್ಧತಿಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು. 
ರಾಜ್ಯಗಳಲ್ಲಿ ಕೋವಿಡ್-19 ಸ್ಥಿತಿಗತಿಯ ಕುರಿತು ಸಮಾಲೋಚನೆ ನಡೆಸಲಾಯಿತು. ಅಲ್ಲದೆ ದುರ್ಬಲ ವರ್ಗದವರಿಗೆ ಕೇಂದ್ರೀಕರಿಸಿದಂತೆ ರೆಡ್ ಕ್ರಾಸ್ ಸಂಸ್ಥೆಯ ಪಾತ್ರ ಮತ್ತು ಪರಿಸ್ಥಿತಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಎದುರಾಗುತ್ತಿರುವ ಸವಾಲುಗಳು ಹಾಗೂ ಲಾಕ್ ಡೌನ್ ನಿಂದಾಗಿ ಮಾರಕ ಕೊರೋನಾ ಸೋಂಕು ಹರಡದಂತೆ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನಾಗರಿಕ ಸಮಾಜ ಮತ್ತು ಸ್ವಯಂ ಸೇವಾ ಸಂಘಟನೆಗಳ ಪಾತ್ರದ ಬಗ್ಗೆ ಚರ್ಚಿಸಲಾಯಿತು. 
ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಭಗತ್ ಸಿಂಗ್ ಕೊಶಿಯಾರಿ ಅವರು, ಸಾಂಕ್ರಾಮಿಕ ಪಿಡುಗು ನಿಯಂತ್ರಣಕ್ಕೆ ರಾಜ್ಯಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡುವುದರೊಂದಿಗೆ   ವಿಡಿಯೋ ಕಾನ್ಫರೆನ್ಸ್ ಆರಂಭವಾಯಿತು. 
ನಂತರ ಕೇರಳ ರಾಜ್ಯಪಾಲರಾದ ಶ್ರೀ ಅರಿಫ್ ಮೊಹಮ್ಮದ್ ಖಾನ್, ಸರ್ಕಾರದ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಕೇರಳದಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸ್ವಯಂ ಸೇವಾ ಸಂಘಟನೆಗಳು, ವೈದ್ಯಕೀಯ ವೃತ್ತಿಪರರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರು ಸಮನ್ವಯದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದರು. ಅವರು ದ್ವಿಪದಿಯೊಂದನ್ನು ಉಲ್ಲೇಖಿಸಿ, ಸಾಮಾಜಿಕ ಅಂತರದ ಮಹತ್ವವನ್ನು ಹೀಗೆ ಹೇಳಿದರು “ಯುನ್ ಹಿ ಬಸಬಾಬ್ ನ ಫಿರಾ ಕರೋ, ಕಿಸಿ ಶಾಮ್ ಘರ್ ಭಿ ರಹಾ ಕರೊ” (ಇದನ್ನು ವಿಸ್ತೃತವಾಗಿ “ಯಾವುದೇ ಉದ್ದೇಶವಿಲ್ಲದೆ ಸುಮ್ಮನೆ ಅಲೆದಾಡಬೇಡ, ಮನೆಯಲ್ಲೇ ಇರು”) ಅಲ್ಲದೆ 1800 ನಿವೃತ್ತ ವೈದ್ಯರು ಮತ್ತು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ರಾಜ್ಯದಲ್ಲಿ ಪಟ್ಟಿ ಮಾಡಿದ್ದು, ರಾಜ್ಯ ಸರ್ಕಾರ ಅಗತ್ಯಬಿದ್ದರೆ ಅವರುಗಳಿಂದ ಸ್ವಯಂ ಸೇವೆಯನ್ನು ಪಡೆದುಕೊಳ್ಳಲಿದೆ. ಕ್ವಾರಂಟೈನ್ ನಲ್ಲಿ ತಮ್ಮ ಜೀವನದ ಕಷ್ಟಕರ ಹಂತದಲ್ಲಿರುವವರಿಗೆ ಸೂಕ್ತ ಸಲಹೆಗಳನ್ನು ನೀಡಲು 375 ಮನಃಶಾಸ್ತ್ರಜ್ಞರನ್ನು ಸೇವೆಗೆ ಸೆಳೆಯಲಾಗಿದೆ. ಇದು ಕೇರಳದ ಅತ್ಯಂತ ವಿನೂತನ ಕ್ರಮ ಎಂದು ಪರಿಗಣಿಸಲ್ಪಟ್ಟಿದ್ದು, ಅದನ್ನು ಇತರ ರಾಜ್ಯಗಳು ಅನುಕರಿಸುವುದು ಅಗತ್ಯ ಎಂದರು. 
ಕರ್ನಾಟಕದ ರಾಜ್ಯಪಾಲರಾದ ಶ್ರೀ ವಜೂಭಾಯ್ ವಾಲಾ, ಪಿಡುಗಿನ ವಿರುದ್ಧ ಸಮಾಜ ಸಾಮೂಹಿಕವಾಗಿ ಹೋರಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಸುಮಾರು 8,000 ರೆಡ್ ಕ್ರಾಸ್ ಸೊಸೈಟಿಯ ಸ್ವಯಂ ಸೇವಕರು, ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ, ಸಾಮಾಜಿಕ ಸಂಘಟನೆ, ಅಕ್ಷಯ ಪಾತ್ರ ರಾಜ್ಯಾದ್ಯಂತ ಆಹಾರ ಪ್ಯಾಕೇಟ್ ಗಳನ್ನು ವಿತರಣೆ ಮಾಡುತ್ತಿದೆ ಎಂದು ಹೇಳಿದರು. 
ಹರಿಯಾಣ ರಾಜ್ಯಪಾಲರಾದ ಶ್ರೀ ಸತ್ಯದೇವ್ ನಾರಾಯಣ ಆರ್ಯ, ರಾಜ್ಯ ಎಲ್ಲ ಸವಾಲುಗಳನ್ನು ಎದುರಿಸಲು ಸಂಪೂರ್ಣವಾಗಿ ಸನ್ನದ್ಧವಾಗಿದೆ ಎಂದರು. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ಅನಿಲ್ ಬೈಜಾಲ್, ರಾಜ್ಯ ಸರ್ಕಾರ ಮತ್ತು ಇತರೆ ಸಂಸ್ಥೆಗಳು ಅತ್ಯಂತ ಸಮನ್ವಯದೊಂದಿಗೆ ಲಾಕ್ ಡೌನ್ ಜಾರಿಗೆ ಮತ್ತು ಜನರ ಸಮಸ್ಯೆಗಳನ್ನು ನಿವಾರಿಸಲು ಕಾರ್ಯೋನ್ಮುಖವಾಗಿದೆ ಎಂದರು. ಅಲ್ಲದೆ ಪರಿಸ್ಥಿತಿಯ ಬಗ್ಗೆ ತಿಳಿಯಲು ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಮುಖ್ಯಮಂತ್ರಿ ಪ್ರತಿ ದಿನ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಡಿಸಿಪಿಗಳು ಸಮನ್ವಯದಿಂದ ಪರಿಹಾರ ಕಾರ್ಯಗಳಿಗೆ ನೆರವು ನೀಡುತ್ತಿರುವುದೇ ಅಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು. 
ಗುಜರಾತ್ ನ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವ್ ವ್ರತ್ ಅವರು, ರಾಜ್ಯದಲ್ಲಿ ಕ್ವಾರಂಟೈನ್ ಸೌಕರ್ಯಗಳನ್ನು ಹೆಚ್ಚಿನ ಮಟ್ಟದಲ್ಲಿ ಮಾಡಲಾಗಿದೆ ಎಂದರು. ಮಾರ್ಗಸೂಚಿಗಳನ್ನು ಅನುಸರಿಸುವಂತೆ ಜನರನ್ನು ಉತ್ತೇಜಿಸಲು ಮಾಧ್ಯಮಗಳ ಮೂಲಕ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಸವಾಲನ್ನು ಎದುರಿಸಲು ಸಂಪನ್ಮೂಲಗಳನ್ನು ಕ್ರೂಡೀಕರಿಸಲು ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳು, ಖಾಸಗಿ ವಲಯ, ಸ್ವಯಂ ಸೇವಾ ಮತ್ತು ಸಾಂಸ್ಕೃತಿಕ ಸಂಘಟನೆಗಳನ್ನು ಸೆಳೆಯಲಾಗಿದೆ ಮತ್ತು ಸರ್ಕಾರದಿಂದ ಸಮಗ್ರ ಪ್ರಯತ್ನಗಳು ನಡೆದಿವೆ ಎಂದು ಹೇಳಿದರು. 
ತೆಲಂಗಾಣದ ಗವರ್ನರ್ ಡಾ. ತಮಿಳ್ ಸೈ ಸುಂದರ್ ರಾಜನ್, ರಾಜ್ಯದಲ್ಲಿ ಸೋಂಕು ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯ ಸರ್ಕಾರ ಜಾಗೃತಿ ಮೂಡಿಸಲು ವ್ಯಾಪಕವಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಹೇಳಿದರು. ರಾಜಭವನದ ಸುತ್ತಮುತ್ತ ವಾಸಿಸುತ್ತಿರುವ ಸುಮಾರು 800 ಕುಟುಂಬಗಳಿಗೆ ರಾಜಭವನದಿಂದಲೇ ಆಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಶ್ರೀ ಎಂ. ವೆಂಕಯ್ಯನಾಯ್ಡು ಅವರು, ಸಾಂಕ್ರಾಮಿಕ ರೋಗದ ತೀವ್ರತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಿಸಲು ಕಲಾವಿದರು, ಚಿತ್ರತಾರೆಯರು, ಬರಹಗಾರರು ಮತ್ತು ಬುದ್ಧಿಜೀವಿಗಳ ಸಹಾಯವನ್ನು ಪಡೆದುಕೊಳ್ಳುವಂತೆ ತೆಲಂಗಾಣ ರಾಜ್ಯಪಾಲರಿಗೆ ಸಲಹೆ ನೀಡಿದರು. 
ಪಶ್ಚಿಮಬಂಗಾಳದ ರಾಜ್ಯಪಾಲರಾದ ಶ್ರೀ ಜಗದೀಪ್ ಧನ್ ಕರ್, ಅಗತ್ಯಬಿದ್ದರೆ ರಾಜ್ಯದಲ್ಲಿ ವಿಶ್ವ ವಿದ್ಯಾಲಯಗಳನ್ನು ಬಳಸಿಕೊಳ್ಳಲು ಸಿದ್ಧರಿದ್ದೇವೆ, ಅಲ್ಲದೆ ಲಭ್ಯವಿರುವ ಸೀಮಿತ ಸಂಪನ್ಮೂಲದಲ್ಲಿ ರೋಗದ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅತ್ಯುತ್ತಮ ಕಾರ್ಯದಲ್ಲಿ ರೆಡ್ ಕ್ರಾಸ್ ಸಂಸ್ಥೆ ತೊಡಗಿದೆ ಎಂದು ಹೇಳಿದರು. 
ಹಿಮಾಚಲ ಪ್ರದೇಶ ರಾಜ್ಯಪಾಲರಾದ ಶ್ರೀ ಬಂಡಾರು ದತ್ತಾತ್ತೇಯ, ರಾಜ್ಯದಲ್ಲಿ ಜನರಿಗೆ ಸಹಾಯ ಮಾಡಲು ರೆಡ್ ಕ್ರಾಸ್ ಸೊಸೈಟಿ ದಿನದ 24 ಗಂಟೆಯೂ ಶ್ರಮಿಸುತ್ತಿದೆ ಎಂದರು. ಆದಿವಾಸಿ ಜನಸಂಖ್ಯೆ ಇರುವ ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಲು ವಿಶೇಷ ಪ್ರಯತ್ನಗಳನ್ನು ನಡೆಸಲಾಗಿದೆ ಎಂದರು. 
ಬಿಹಾರ ರಾಜ್ಯಪಾಲರಾದ ಶ್ರೀ ಫಗು ಚೌವ್ಹಾಣ್, ಬಿಹಾರ ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡಿದೆ ಹಾಗಾಗಿ ರಾಜ್ಯದಲ್ಲಿ ರೋಗ ಸುಲಭವಾಗಿ ಹರಡುವ ಸಾಧ್ಯತೆಗಳಿವೆ ಎಂದರು. ಆದರೆ ಬಿಹಾರ ಸರ್ಕಾರ, ಕೊರೋನಾ ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ರೆಡ್ ಕ್ರಾಸ್ ಸಂಸ್ಥೆ, ತನ್ನ ಸ್ವಯಂ ಸೇವಕರನ್ನು ಬಳಸಿಕೊಂಡು ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ, ಜಿಲ್ಲಾಡಳಿತಗಳಿಗೆ ಅದರ ಆಂಬುಲೆನ್ಸ್ ಗಳ ಬಳಕೆಗೆ ಲಭ್ಯವಿದೆ ಎಂದರು. 
ತಮಿಳುನಾಡಿನ ರಾಜ್ಯಪಾಲರಾದ ಶ್ರೀ ಬನ್ವರಿಲಾಲ್ ಪುರೋಹಿತ್, ಕಟ್ಟಡ ನಿರ್ಮಾಣ ಕೆಲಸಗಾರರಿಗೆ ಅಕ್ಕಿ ಮತ್ತು ಬೇಳೆ ಒದಗಿಸುವ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೆ ಪಡಿತರ ಚೀಟಿ ಹೊಂದಿರುವವರಿಗೆ ಪಿಡಿಎಸ್ ಯೋಜನೆಯಡಿ 1000 ರೂ. ನಗದು ನೀಡಲಾಗುವುದು ಮತ್ತು ಅಮ್ಮ ಕ್ಯಾಂಟೀನ್ ಗಳಲ್ಲಿ ರಿಯಾಯಿತಿ ದರದಲ್ಲಿ ಆಹಾರ ನೀಡಲಾಗುವುದು ಎಂದರು. ಉಪರಾಷ್ಟ್ರಪತಿಗಳು ಈ ಕಾರ್ಯಕ್ಕೆ ಚಲನಚಿತ್ರ ಕಲಾವಿದರು, ಖಾಸಗಿ ವಲಯ ಮತ್ತು ಧಾರ್ಮಿಕ ನಾಯಕರ ನೆರವು ಪಡೆದುಕೊಳ್ಳುವಂತೆ ಸಲಹೆ ನೀಡಿದರು. 
ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀ ಲಾಲ್ ಜಿ ಟಂಡನ್, ಮಧ್ಯಪ್ರದೇಶ ರಾಜ್ಯಾಡಳಿತ ಕೈಗೊಂಡಿರುವ ಕ್ಷಿಪ್ರ ಕಾರ್ಯಗಳನ್ನು ಶ್ಲಾಘಿಸಿದರು. ದಿನಗೂಲಿ ನೌಕರರಿಗೆ ಆಹಾರ ಒದಗಿಸುವುದನ್ನು ಖಾತ್ರಿಪಡಿಸುವಂತಹ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದರು. ರಾಜ್ಯದಲ್ಲಿ ರೆಡ್ ಕ್ರಾಸ್ ಸಂಸ್ಥೆ ಶ್ಲಾಘನೀಯ ಕೆಲಸ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು. 
ಪಂಜಾಬ್ ರಾಜ್ಯಪಾಲರು ಮತ್ತು ಚಂಡಿಗಢದ ಆಡಳಿತಾಧಿಕಾರಿ ಶ್ರೀ ವಿ.ಪಿ. ಸಿಂಗ್ ಬದ್ನೋರೆ, ರೆಡ್ ಕ್ರಾಸ್ ಸಂಸ್ಥೆ, ಚಂಡಿಗಢದಲ್ಲಿ ಆಹಾರ ಪ್ಯಾಕೆಟ್ ಗಳನ್ನು ಪೂರೈಸಲು ಸಹಕರಿಸುತ್ತಿದೆ ಎಂದರು. ಕೋವಿಡ್-19ನಿಂದ ಎದುರಾಗಿರುವ ಸವಾಲುಗಳನ್ನು ಹತ್ತಿಕ್ಕಲು ಪಂಜಾಬ್ ಮತ್ತು ಚಂಡಿಗಢದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. 
ರಾಜಸ್ತಾನ ರಾಜ್ಯಪಾಲರಾದ ಶ್ರೀ ಕಲ್ರಾಜ್ ಮಿಶ್ರಾ, ಜನರು ದೇಣಿಗೆ ನೀಡಲು ಅನುಕೂಲವಾಗುವಂತೆ ನಿಧಿಯನ್ನು ಸ್ಥಾಪಿಸಲಾಗಿದೆ ಎಂದರು. ಸವಾಲನ್ನು ಎದುರಿಸಲು ಎಲ್ಲ ಸಂಸ್ಥೆಗಳು ನೆರವು ನೀಡುತ್ತಿವೆ ಮತ್ತು ಜನರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. 
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಮತ್ತು ಚಂಡಿಗಢದ ಆಡಳಿತಾಧಿಕಾರಿ ಸೇರಿದಂತೆ 15 ರಾಜ್ಯಗಳ ರಾಜ್ಯಪಾಲರು ಭಾಗವಹಿಸಿದ್ದ ಮತ್ತು ತಮ್ಮ ಚಿಂತನೆಗಳನ್ನು ಹಂಚಿಕೊಂಡ ಸಮಾವೇಶವನ್ನು ಸಮಾಪನಗೊಳಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಪ್ರತಿಯೊಬ್ಬರೂ ಪರಿಸ್ಥಿತಿಯನ್ನು ಅವಲೋಕಿಸಬೇಕು ಮತ್ತು ಕೊರೋನಾ ಸೋಂಕಿನ ವಿರುದ್ಧದ ಸಮರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಎಲ್ಲರೂ ಕೊಡುಗೆ ನೀಡಬೇಕು ಎಂದರು ಕರೆ ನೀಡಿದರು. ಈ ಅನುಭವಗಳನ್ನು ಮತ್ತು ಉತ್ತಮ ಪದ್ಧತಿಗಳನ್ನು ಆಧರಿಸಿ ದೇಶದ ಇತರೆ ಭಾಗಗಳಲ್ಲೂ ಸಹ ಅವುಗಳನ್ನು ಅಳವಡಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು. 

*****


(Release ID: 1608736) Visitor Counter : 633