ಪ್ರಧಾನ ಮಂತ್ರಿಯವರ ಕಛೇರಿ

ವೈದ್ಯಕೀಯ ಸಮುದಾಯ, ವೈದ್ಯರು, ನರ್ಸ್ ಗಳು ಮತ್ತು ಲ್ಯಾಬ್ ತಂತ್ರಜ್ಞರೊಂದಿಗೆ ಪ್ರಧಾನಿ ಸಂವಾದ

Posted On: 24 MAR 2020 7:53PM by PIB Bengaluru

ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ರಾಷ್ಟ್ರಕ್ಕೆ ಸ್ವಾರ್ಥರಹಿತ ಸೇವೆ ನೀಡುತ್ತಿರುವ ವೈದ್ಯಕೀಯ ಸಮುದಾಯಕ್ಕೆ ಧನ್ಯವಾದ ಸಮರ್ಪಿಸಿದ ಪ್ರಧಾನಿ : ನಿಮ್ಮ ಆಶಾವಾದ ರಾಷ್ಟ್ರಕ್ಕೆ ಹೆಚ್ಚಿನ ವಿಶ್ವಾಸ ತುಂಬಿದ್ದು, ಅದು ವಿಜಯಶಾಲಿಯಾಗಲಿದೆ; ವೈದ್ಯಕೀಯ ಚಿಕಿತ್ಸೆಗಳಿಗೆ ಟೆಲಿ ಸಮಾಲೋಚನೆಗಳನ್ನು ಗರಿಷ್ಠ ಬಳಕೆ ಪ್ರಸ್ತಾವಗಳ ಬಗ್ಗೆ ಸರಕಾರ ಪರಿಶೀಲನೆ; ಪಿಎಂ: ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರ ಸುರಕ್ಷತೆಗೆ ಗರಿಷ್ಠ ಪ್ರಾಮುಖ್ಯತೆ ನೀಡಬೇಕು; ಪ್ರಧಾನಿ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ದೇಶಾದ್ಯಂತ ವೈದ್ಯರು, ನರ್ಸ್ ಗಳು ಮತ್ತು ಲ್ಯಾಬ್ ತಂತ್ರಜ್ಞರು ಸೇರಿದಂತೆ ವೈದ್ಯಕೀಯ ಸಮುದಾಯದೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಪ್ರಧಾನಮಂತ್ರಿ ಅವರು ಕೋವಿಡ್-19 ನಿಯಂತ್ರಣ ವಿರುದ್ಧ ಹೋರಾಟದಲ್ಲಿ ಭಾರತದಲ್ಲಿನ ವೈದ್ಯಕೀಯ ವೃತ್ತಿಪರರ ಸ್ವಾರ್ಥರಹಿತ ಸೇವೆಗೆ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ಇಡೀ ದೇಶ ‘ಜನತಾ ಕರ್ಫ್ಯೂ’ ವೇಳೆ ನಿಮಗೆ ಗೌರವ ಸಲ್ಲಿಸಿದೆ ಮತ್ತು ರಾಷ್ಟ್ರಕ್ಕಾಗಿ ನೀವು ಸಲ್ಲಿಸುತ್ತಿರುವ ಸೇವೆಗೆ ಮತ್ತೊಮ್ಮೆ ಧನ್ಯವಾದಗಳು. ವೈದ್ಯಕೀಯ ಸಮುದಾಯಕ್ಕೆ ಬೆಂಬಲವಾಗಿ ನಿಂತು ನೆರವು ನೀಡುತ್ತಿರುವ ಅವರ ಕುಟುಂಬದವರ ಕಾರ್ಯವನ್ನು ಗುರುತಿಸುವುದೂ ಸಹ ಅತ್ಯಂತ ಪ್ರಮುಖವಾದುದು ಎಂದು ಅವರು ಹೇಳಿದ್ದಾರೆ.
ದೇಶದ ಮುಂದಿರುವ ಸವಾಲು ಅನಿರೀಕ್ಷಿತ ಮತ್ತು ಐತಿಹಾಸಿಕ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ಸಂದರ್ಭದಲ್ಲಿ, ಇಡೀ ದೇಶ ಭರವಸೆಯೊಂದಿಗೆ ವೈದ್ಯಕೀಯ ಸಮುದಾಯವನ್ನು ನೋಡುತ್ತಿದೆ ಮತ್ತು ಅಂತಹ ಭಾರಿ ಸವಾಲನ್ನು ಎದುರಿಸುವ ವೇಳೆ ಅವರ ನೈತಿಕ ಶಕ್ತಿ ಕುಂದದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಸರ್ಕಾರದಿಂದ ವೈದ್ಯಕೀಯ ಸಮುದಾಯಕ್ಕೆ ಎಲ್ಲ ರೀತಿಯ ನೆರವಿನ ಭರವಸೆ ನೀಡಿದ ಪ್ರಧಾನಮಂತ್ರಿ,  ಸೋಂಕು ಹರಡುವುದನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು ಮತ್ತು ಅಗತ್ಯ ಶಿಷ್ಠಾಚಾರಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು. ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ಬಗ್ಗೆ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುವಂತೆ ಸೂಚಿಸಿದ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ವಯಂ-ದಿಗ್ಬಂಧನ( ಸೆಲ್ಫ್ ಕ್ವಾರಂಟೈನ್ ) ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಡಿ ಮತ್ತು ಎಲ್ಲಿ ಚಿಕಿತ್ಸೆ ಪಡೆಯಬಹುದು ಎಂಬ ಬಗ್ಗೆ ಮಾಹಿತಿ ನೀಡಿ ಎಂದು ಹೇಳಿದರು.
          ಎಲ್ಲ ಬಗೆಯ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಕರೆ ನೀಡಿದ ಅವರು, ಅವೈಜ್ಞಾನಿಕ ಚಿಕಿತ್ಸೆಗಳ ಮತ್ತು ತಪ್ಪು ಮಾಹಿತಿಯ ವಿರುದ್ಧ ಅರಿವು ಮೂಡಿಸಬೇಕೆಂದರು. ಮುಂದಿರುವ ಸವಾಲನ್ನು ಎದುರಿಸಲು  ಆರೋಗ್ಯ ಕಾರ್ಯಕರ್ತರು ಮತ್ತು ತಂತ್ರಜ್ಞರನ್ನು ಸಜ್ಜುಗೊಳಿಸಲು ಅವರ ಕೌಶಲ್ಯ ಉನ್ನತೀಕರಣಕ್ಕೆ ತ್ವರಿತ ತರಬೇತಿ ನೀಡುವ ಅಗತ್ಯವಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.
ಇಂತಹ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಸಮರ್ಥ ನಾಯಕತ್ವದೊಂದಿಗೆ ದೇಶ ಮುನ್ನಡೆಸುತ್ತಿರುವುದಕ್ಕೆ ವೈದ್ಯಕೀಯ ಸಮುದಾಯದ ಪ್ರತಿನಿಧಿಗಳು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. “ಸಂಕಲ್ಪ ಮತ್ತು ಸಂಯಮ’ ಮಂತ್ರಕ್ಕಾಗಿ ಅವರು ಪ್ರಧಾನಿ ಅವರಿಗೆ ಧನ್ಯವಾದಗಳನ್ನು ಹೇಳಿದರು. ಆಖಿಲ ಭಾರತ ನರ್ಸ್ ಗಳ ಒಕ್ಕೂಟ ಪ್ರಧಾನಮಂತ್ರಿ ಅವರಿಗೆ 200ನೇ ವರ್ಷದ ಫ್ಲೊರೆನ್ಸ್ ನೈಟಿಂಗೇಲ್ ಆಚರಣೆಗೆ ನೆರವು ನೀಡಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.
ಪ್ರತಿನಿಧಿಗಳು ವೈದ್ಯಕೀಯ ನೆರವಲ್ಲದೆ, ಅಗತ್ಯವಿರುವವರಿಗೆ ಮಾನಸಿಕ ಸಹಾಯವನ್ನೂ ಸಹ ಒದಗಿಸುವ ಪ್ರಯತ್ನಗಳ ಕುರಿತು ಮಾತನಾಡಿದರು. ಅವರು ಕ್ವಾರಂಟೈನ್ ಕ್ರಮಗಳ ಪ್ರಾಮುಖ್ಯತೆ, ಕೋವಿಡ್ -19 ಪ್ರಕರಣಗಳನ್ನು ಎದುರಿಸಲು ಇಲಾಖೆಗಳು/ನಿಗದಿತ ಆಸ್ಪತ್ರೆಗಳ ಅಗತ್ಯತೆ ಮತ್ತು ಆನ್ ಲೈನ್ ತರಬೇತಿ ಮಾದರಿಗಳ ವ್ಯವಸ್ಥೆಗಳ ಬಗ್ಗೆ ಮಾತನಾಡಿದರು. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಸಮುದಾಯದೊಂದಿಗೆ ಸಮುದಾಯ ಎಷ್ಟು ಸೂಕ್ಷ್ಮ ರೀತಿಯಲ್ಲಿ ವರ್ತಿಸಬೇಕೆಂಬ ಪ್ರಾಮುಖ್ಯತೆ ಬಗ್ಗೆ ಅವರು ಮಾತನಾಡಿದರು.  
ವಿಸ್ತೃತ ಹಾಗೂ ಬಹು ಆಯಾಮದ ಸಲಹೆಗಳನ್ನು ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ವೈದ್ಯಕೀಯ ಸಮುದಾಯಕ್ಕೆ ಧನ್ಯವಾದಗಳನ್ನು ಹೇಳಿದರು. ವೈದ್ಯಕೀಯ ಚಿಕಿತ್ಸೆಗಳಿಗೆ ಟೆಲಿ ಸಮಾಲೋಚನೆಗಳನ್ನು ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡಿಕೊಳ್ಳುವ ಪ್ರಸ್ತಾಪದ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಅವರು ಹೇಳಿದರು. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಸುರಕ್ಷತೆ ವಿಷಯಗಳನ್ನು ಹೆಚ್ಚಿನ ಆದ್ಯತೆ ನೀಡಬೇಕೆಂದು ಪ್ರಧಾನಿ ಹೇಳಿದರು. ವೈದ್ಯಕೀಯ ಸಮುದಾಯದ ಆಶಾವಾದ ಮತ್ತು ಸಕಾರಾತ್ಮಕ ಧ್ವನಿ, ನಾವು ಸವಾಲನ್ನು ಯಶಸ್ವಿಯಾಗಿ ಎದುರಿಸುವುದು ಮತ್ತು ಜಯಗಳಿಸುವ ಹೆಚ್ಚಿನ ವಿಶ್ವಾಸವನ್ನು ದೇಶದ ಜನರಲ್ಲಿ ಮೂಡಿಸಿದೆ ಎಂದು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಕೂಡ ವೈದ್ಯಕೀಯ ಸಮುದಾಯದ ಕೊಡುಗೆಯನ್ನು ಸ್ಮರಿಸಿದರು. ಅವರ ಕ್ರಿಯಾಶೀಲ ಮತ್ತು ಉತ್ತಮ ಸ್ಪಂದನೆ ಪರಿಸ್ಥಿತಿ ನಿಭಾಯಿಸಲು ಹೆಚ್ಚಿನ ಮಟ್ಟದಲ್ಲಿ ಸಹಾಯಕವಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ ಮತ್ತು ಡಿಜಿ, ಐಸಿಎಂ ಆರ್ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.


 
***



(Release ID: 1608026) Visitor Counter : 170