ಪ್ರಧಾನ ಮಂತ್ರಿಯವರ ಕಛೇರಿ

ಪ್ರಸಕ್ತ ಕಾಲಘಟ್ಟದಲ್ಲಿ ಮಹಾತ್ಮ ಗಾಂಧಿಯವರ ಪ್ರಸ್ತುತತೆ ಕುರಿತು ECOSOC ಚೇಂಬರ್ಸ್ನಲ್ಲಿ ಪ್ರಧಾನ ಮಂತ್ರಿಯವರು ಮಾಡಿದ ಭಾಷಣದ ಅನುವಾದ

Posted On: 25 SEP 2019 6:00PM by PIB Bengaluru

ಪ್ರಸಕ್ತ ಕಾಲಘಟ್ಟದಲ್ಲಿ ಮಹಾತ್ಮ ಗಾಂಧಿಯವರ ಪ್ರಸ್ತುತತೆ ಕುರಿತು ECOSOC ಚೇಂಬರ್ಸ್ನಲ್ಲಿ ಪ್ರಧಾನ ಮಂತ್ರಿಯವರು ಮಾಡಿದ ಭಾಷಣದ ಅನುವಾದ

 

ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟ್ಟೆರೆಸ್,

ಅಧ್ಯಕ್ಷ ಮೂನ್,

ಪ್ರಧಾನಿ ಲೀ,

ಪ್ರಧಾನಿ ಶೇಖ್ ಹಸೀನಾ,

ಪ್ರಧಾನಿ ಆಂಡ್ರ್ಯೂ ಹೋಲ್ನೆಸ್,

ಪ್ರಧಾನಿ ಅರ್ಡೆರ್ನ್,

ಪ್ರಧಾನಿ ಲೋತಯ್ ಶೆರಿಂಗ್,

 

ಗೌರವಾನ್ವಿತರೇ, ಸ್ನೇಹಿತರೇ,

 

ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯಂದು ಪ್ರಸ್ತುತ ಕಾಲಘಟ್ಟದಲ್ಲಿ ಪ್ರಸ್ತುತತೆ ಕುರಿತು ಚರ್ಚಿಸಲು ಇಂದು ನಾವೆಲ್ಲರೂ ಇಲ್ಲಿ ಸೇರಿದ್ದೇವೆ.

 

ಎಲ್ಲಾ ವಿಶೇಷ ಅತಿಥಿಗಳಿಗೆ ನನ್ನ ಸ್ವಾಗತ. 

 

ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದ ವಿಶ್ವಸಂಸ್ಥೆಗೆ ನನ್ನ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಗಾಂಧೀಜಿ ಒಬ್ಬ ಭಾರತೀಯ ಆದರೆ ಅವರು ಭಾರತಕ್ಕೆ ಮಾತ್ರ ಸೀಮಿತವಲ್ಲ. ಇಂದು ಈ ವೇದಿಕೆಯೇ ಇದಕ್ಕೆ ಜೀವಂತ ಉದಾಹರಣೆಯಾಗಿದೆ.

ಆಡಳಿತದೊಂದಿಗೆ ಮತ್ತು ಸತ್ಯ ಮತ್ತು ಅಹಿಂಸೆಯ ಶಕ್ತಿಯೊಂದಿಗೆ ದೂರದ ಸಂಬಂಧವನ್ನೂ ಸಹ ಹೊಂದಿರದ ವ್ಯಕ್ತಿಯೊಬ್ಬ ಶತಮಾನಗಳಷ್ಟು ಹಳೆಯದಾದ ಸಾಮ್ರಾಜ್ಯವನ್ನು ಬೆಚ್ಚಿಬೀಳಿಸಿದ್ದಲ್ಲದೇ, ಅನೇಕ ದೇಶಭಕ್ತರಲ್ಲಿ ಸ್ವಾತಂತ್ರ್ಯದ ಉತ್ಸಾಹವನ್ನು ಹುಟ್ಟುಹಾಕಿದ್ದು ಇತಿಹಾಸದಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ. 

ಮಹಾತ್ಮ ಗಾಂಧಿ ಅಂತಹ ವ್ಯಕ್ತಿಯಾಗಿದ್ದರು, ಅಧಿಕಾರದಿಂದ ದೂರವಿದ್ದರೂ ಸಹ, ಅವರು ಇನ್ನೂ ಕೋಟ್ಯಂತರ ಜನರ ಹೃದಯವನ್ನು ಆಳುತ್ತಿದ್ದಾರೆ.

ಎಂದಿಗೂ ಅವರನ್ನು ಭೇಟಿ ಮಾಡದಿದ್ದರೂ ಜನರು ಅವರ ಜೀವನದಿಂದ ಎಷ್ಟು ಪ್ರಭಾವಿತರಾಗಿದ್ದಾರೆಂಬುದನ್ನು ನೀವು ಊಹಿಸಬಹುದು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಆಗಿರಲಿ ಅಥವಾ ನೆಲ್ಸನ್ ಮಂಡೇಲಾ ಆಗಿರಲಿ, ಅವರ ಆಲೋಚನೆಗಳ ಆಧಾರವೇ ಮಹಾತ್ಮ ಗಾಂಧಿ, ಅದು ಗಾಂಧಿಯವರ ದೃಷ್ಟಿ.

 

ಸ್ನೇಹಿತರೇ,

ಇಂದು ಪ್ರಜಾಪ್ರಭುತ್ವದ ವ್ಯಾಖ್ಯಾನವು ಜನರು ತಮ್ಮ ಆಯ್ಕೆಯ ಸರ್ಕಾರವನ್ನು ಆರಿಸಬೇಕು ಮತ್ತು ಜನರ ನಿರೀಕ್ಷೆಗೆ ಅನುಗುಣವಾಗಿ ಸರ್ಕಾರ ಕಾರ್ಯನಿರ್ವಹಿಸಬೇಕು ಎಂಬ ಸೀಮಿತ ಅರ್ಥವನ್ನು ಹೊಂದಿದೆ. ಆದರೆ ಮಹಾತ್ಮ ಗಾಂಧಿ ಪ್ರಜಾಪ್ರಭುತ್ವದ ನೈಜ ಶಕ್ತಿಗೆ ಒತ್ತು ನೀಡಿದರು. ಜನರು ಯಾವ ದಿಕ್ಕಿನಲ್ಲಿ ಸಾಗಬೇಕು, ಆಡಳಿತವನ್ನು ಮಾತ್ರ ಅವಲಂಬಿಸದೇ ಹೇಗೆ ಸ್ವಾವಲಂಬಿಗಳಾಗಬೇಕು ಎಂಬುದನ್ನು ತೋರಿಸಿದರು.

 

ಸ್ನೇಹಿತರೇ,

ಮಹಾತ್ಮ ಗಾಂಧಿಯವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರಬಿಂದುವಾಗಿದ್ದರು, ಆದರೆ ಗಾಂಧೀಜಿಯವರು ಸ್ವಾತಂತ್ರವಿದ್ದ ದೇಶದಲ್ಲೇ ಜನಿಸಿದ್ದರೆ ಅವರು ಏನು ಮಾಡುತ್ತಿದ್ದರು ಎಂದು ನಾವು ಒಂದು ಕ್ಷಣ ಯೋಚಿಸಬೇಕು.

ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ಇದು ಮುಖ್ಯ ಆದರೆ ಇದು ಗಾಂಧೀಜಿಯವರ ಕೆಲಸದ ಸಂಪೂರ್ಣ ವಿಸ್ತರಣೆಯಲ್ಲ.

ಮಹಾತ್ಮ ಗಾಂಧಿಯವರು ಸರ್ಕಾರವನ್ನು ಅವಲಂಬಿಸದ ಸಾಮಾಜಿಕ ವ್ಯವಸ್ಥೆಯನ್ನು ಆರಂಭಿಸಿದರು.

ಮಹಾತ್ಮ ಗಾಂಧಿಯವರು ಬದಲಾವಣೆಯನ್ನು ತಂದರು, ಅದು ಎಲ್ಲರಿಗೂ ತಿಳಿದಿದೆ, ಆದರೆ ಅವರು ಜನರ ಆಂತರಿಕ ಶಕ್ತಿಯನ್ನು ಜಾಗೃತಗೊಳಿಸಿದರು ಮತ್ತು ಬದಲಾವಣೆಯನ್ನು ತರಲು ಅವರನ್ನು ಜಾಗೃತಗೊಳಿಸಿದರು ಎಂದು ಹೇಳುವುದು ಸಹ ನ್ಯಾಯವೆನಿಸುತ್ತದೆ.

ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜಿಯವರು ಕಾರಣವಾಗದಿದ್ದರೆ, ಅವರು ಇನ್ನೂ ಸ್ವರಾಜ್ ಮತ್ತು ಸ್ವಾವಲಂಬನೆಯ ಮೂಲ ಅಂಶಗಳೊಂದಿಗೇ ಮುಂದುವರಿಯುತ್ತಿದ್ದರು.

ಗಾಂಧೀಜಿಯವರ ಈ ದೃಷ್ಟಿಕೋನವು ಇಂದು ಭಾರತ ಎದುರಿಸುತ್ತಿರುವ ದೊಡ್ಡ ಸವಾಲುಗಳನ್ನು ಪರಿಹರಿಸುವ ಅತ್ಯುತ್ತಮ ಮಾಧ್ಯಮವಾಗುತ್ತಿದೆ.

ಕಳೆದ 5 ವರ್ಷಗಳಲ್ಲಿ, ನಾವು ಜನರ ಭಾಗವಹಿಸುವಿಕೆಗೆ ಆದ್ಯತೆ ನೀಡಿದ್ದೇವೆ. ಅದು ಸ್ವಚ್ಛ ಭಾರತ ಅಭಿಯಾನವಾಗಲಿ, ಡಿಜಿಟಲ್ ಇಂಡಿಯಾ ಆಗಿರಲಿ, ಜನರೇ ಸ್ವತಃ ಈಗ ಈ ಅಭಿಯಾನಗಳನ್ನು ಮುನ್ನಡೆಸುತ್ತಿದ್ದಾರೆ.

 

ಸ್ನೇಹಿತರೇ,

ಮಹಾತ್ಮ ಗಾಂಧಿ ಅವರು ಹೇಳುತ್ತಿದ್ದರು ನನ್ನ ಜೀವನವೇ ನನ್ನಸಂದೇಶ ಎಂದು. ಗಾಂಧೀಜಿಯವರು ತಮ್ಮ ಜೀವನದಿಂದ ಪ್ರಭಾವ ಬೀರಲು ಎಂದಿಗೂ ಪ್ರಯತ್ನಿಸಲಿಲ್ಲ, ಆದರೆ ಅವರ ಜೀವನವು ಸ್ಫೂರ್ತಿಗೆ ಕಾರಣವಾಯಿತು. ಇಂದು ನಾವು ಹೇಗೆ ಪ್ರಭಾವ ಬೀರಬೇಕು ಎಂಬ ಯುಗದಲ್ಲಿದ್ದೇವೆ. ಆದರೆ ಗಾಂಧೀಜಿಯವರ ದೃಷ್ಟಿ,  ಹೇಗೆ ಪ್ರೇರೇಪಿಸುವುದು ಎಂಬುದಾಗಿತ್ತು.

ಗಾಂಧೀಜಿಯವರ ಪ್ರಜಾಪ್ರಭುತ್ವದ ಬಗೆಗಿನ ನಿಷ್ಠೆಯ ಶಕ್ತಿ ಏನು ಎಂಬುದಕ್ಕೆ ಸಂಬಂಧಿಸಿದ ಒಂದು ಘಟನೆಯನ್ನು ನಾನು ನಿಮಗೆ ಹೇಳಲು ಬಯಸುತ್ತೇನೆ. ಕೆಲವು ವರ್ಷಗಳ ಹಿಂದೆ ನಾನು ಬ್ರಿಟನ್ ರಾಣಿ ಎಲಿಜಬೆತ್ ಅವರನ್ನು ಭೇಟಿಯಾದಾಗ, ಅವರು ನನಗೆ ಭಾವುಕರಾಗಿ ಕರವಸ್ತ್ರವೊಂದನ್ನು ತೋರಿಸಿದರು. ಅದು ಖಾದಿಯಿಂದ ಮಾಡಿದ ಕರವಸ್ತ್ರವಾಗಿದ್ದು, ಗಾಂಧೀಜಿಯವರು ಮದುವೆಯ ಸಮಯದಲ್ಲಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು.

ಹಾಗೆಯೇ ಕಲ್ಪಿಸಿಕೊಳ್ಳಿ, ಯಾರೊಂದಿಗೆ ತತ್ವಗಳ ಸಂಘರ್ಷವಿತ್ತೋ ಅವರೊಂದಿಗಿನ ಸಂಬಂಧದಲ್ಲಿ ಗಾಂಧೀಜಿ ತುಂಬಾ ಸೂಕ್ಷ್ಮತೆಯನ್ನು ಹೊಂದಿದ್ದರು. ಸ್ವಾತಂತ್ರ್ಯ ಹೋರಾಟದ ವಿರುದ್ಧ ಇರುವವವರ ಯೋಗಕ್ಷೇಮ ಮತ್ತು ಗೌರವವನ್ನೂ ಅವರು ಬಯಸಿದ್ದರು.

 

ಸ್ನೇಹಿತರೇ,

ಸಿದ್ಧಾಂತಗಳ ಬಗ್ಗೆ ಅವರಿಗಿದ್ದ ಈ ಬದ್ಧತೆಯೇ ಅಂತಹ ಏಳು ವಿಕೃತಗಳ ಬಗ್ಗೆ ಗಾಂಧೀಜಿಯವರ ಗಮನವನ್ನು ಸೆಳೆಯಿತು.  ಅವುಗಳೆಂದರೆ:

ಕಾಯಕವಿಲ್ಲದ ಸಂಪತ್ತು

ಆತ್ಮಸಾಕ್ಷಿಯಿಲ್ಲದ ಸಂತೋಷ

ಅಕ್ಷರವಿಲ್ಲದ ಜ್ಞಾನ

ನೀತಿ ಇಲ್ಲದ ವ್ಯಾಪಾರ

ಮಾನವೀಯತೆ ಇಲ್ಲದ ವಿಜ್ಞಾನ

ತ್ಯಾಗವಿಲ್ಲದ ಧರ್ಮ

ತತ್ವವಿಲ್ಲದ ರಾಜಕೀಯ

ಅದು ಹವಾಮಾನ ಬದಲಾವಣೆ ಅಥವಾ ಭಯೋತ್ಪಾದನೆಯಾಗಿರಲಿ, ಭ್ರಷ್ಟಾಚಾರ ಅಥವಾ ಸ್ವಾರ್ಥ ಸಾಮಾಜಿಕ ಜೀವನವಾಗಲಿ, ಗಾಂಧೀಜಿಯವರ ಈ ಸಿದ್ಧಾಂತಗಳು ಮಾನವೀಯತೆಯನ್ನು ರಕ್ಷಿಸುವ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತವೆ.

ಗಾಂಧೀಜಿಯವರು ತೋರಿಸಿದ ಈ ಮಾರ್ಗವು ಉತ್ತಮ ಜಗತ್ತಿನ ನಿರ್ಮಾಣಕ್ಕೆ ಪ್ರೇರಕ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ನಾನು ನಂಬಿದ್ದೇನೆ.

ಮಾನವೀಯತೆಯೊಂದಿಗೆ ಗಾಂಧೀಜಿಯವರ ಈ ವಿಚಾರಗಳ ಹರಿವು ಮುಂದುವರಿಯುವವರೆಗೂ, ಗಾಂಧೀಜಿಯವರ ಸ್ಫೂರ್ತಿ ಮತ್ತು ಪ್ರಸ್ತುತತೆ ನಮ್ಮಲ್ಲಿ ಇರುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ.

ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳು!

 

ಧನ್ಯವಾದ.



(Release ID: 1586671) Visitor Counter : 1366