ಪ್ರಧಾನ ಮಂತ್ರಿಯವರ ಕಛೇರಿ

ಹ್ಯೂಸ್ಟನ್‌ನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ

Posted On: 22 SEP 2019 11:47PM by PIB Bengaluru

ಹ್ಯೂಸ್ಟನ್‌ನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಜೆ ಟ್ರಂಪ್‌ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ಟೆಕ್ಸಾಸ್‌ನ ಹ್ಯೂಸ್ಟನ್‌ ಎನ್‌ಆರ್‌ಜಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ’ಹೌಡಿ ಮೋದಿ’ ವಿಶೇಷ ಕಾರ್ಯಕ್ರಮದಲ್ಲಿ  ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 50 ಸಾವಿರಕ್ಕೂ ಹೆಚ್ಚು ಮಂದಿಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಪ್ರಧಾನ ಮಂತ್ರಿ ಅವರ ಜತೆ ಅಮೆರಿಕ ಜತೆ ಡೊನಾಲ್ಡ್‌ ಜೆ. ಟ್ರಂಪ್‌ ಅವರು ಭಾಗಿಯಾಗಿದ್ದರು.

ಅಪಾರ ಸಂಖ್ಯೆಯಲ್ಲಿ ಸೇರಿದ್ದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಶ್ರೀ  ನರೇಂದ್ರ ಮೋದಿ ಅವರು ಹ್ಯೂಸ್ಟನ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಜತೆಗೆ, ಹೊಸ ‘ಕೆಮಿಸ್ಟ್ರಿ’ ಸಹ ನಡೆದಿದೆ. ಇಂತಹ ವಿಶಿಷ್ಟ ಕಾರ್ಯಕ್ರಮದಲ್ಲಿ ಡೊನಾಲ್ಟ್‌ ಟ್ರಂಪ್ ಮತ್ತು ಸೆನೆಟರ್‌ಗಳು ಭಾಗಿಯಾಗಿ ಭಾರತದ ಪ್ರಗತಿಯ ಬಗ್ಗೆ ಮಾತನಾಡಿರುವುದು 1.3 ಬಿಲಿಯನ್‌ ಭಾರತೀಯರ ಸಾಧನೆಯನ್ನು ಗೌರವಿಸುವುದಾಗಿದೆ ಎಂದು ಹೇಳಿದರು.

ಕ್ರೀಡಾಂಗಣದಲ್ಲಿ ಸೇರಿರುವ ಜನರ ಉತ್ಸಾಹ, ಕುತೂಹಲ, ಬೆಂಬಲವು ಭಾರತ ಮತ್ತು ಅಮೆರಿಕ ನಡುವಣ ಶಕ್ತಿಯ ಸಮ್ಮಿಲನವಾಗಿದೆ ಎಂದು ವಿಶ್ಲೇಷಿಸಿದರು.

‘ಈ ಕಾರ್ಯಕ್ರಮದ ಹೆಸರು ಹೌಡಿ ಮೋದಿ. ಆದರೆ, ಕೇವಲ ಒಬ್ಬ ಮೋದಿ ಏನೂ ಅಲ್ಲ,  ಭಾರತದಲ್ಲಿನ 130 ಕೋಟಿ ಜನರ ಆಶೋತ್ತರಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುವ ಸಾಮಾನ್ಯ ವ್ಯಕ್ತಿ ನಾನು. ಹೀಗಾಗಿ, ನೀವು ಹೌಡಿ ಮೋದಿ ಎಂದು ಕೇಳಿದರೆ, ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಉತ್ತರಿಸುತ್ತೇನೆ ಎಂದು ಪ್ರಧಾನಿ ಹೇಳಿದರು. ‘ಎಲ್ಲವೂ ಚೆನ್ನಾಗಿದೆ’ ಎಂದು ಭಾರತದ ಹಲವು ಭಾಷೆಗಳಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ,  ವೈವಿಧ್ಯತೆಯಲ್ಲೇ ಏಕತೆಯೇ ಕ್ರಿಯಾಶೀಲ ಪ್ರಜಾಪ್ರಭುತ್ವದ ಶಕ್ತಿಯಾಗಿದೆ.

‘ಇಂದು ನವ ಭಾರತದ ಸೃಷ್ಟಿಗಾಗಿ ಭಾರತ ದೃಢವಾದ ಹೆಜ್ಜೆಯನ್ನಿಟ್ಟು ಶ್ರಮಿಸುತ್ತಿದೆ’ ಎಂದು ಪ್ರಧಾನಿ ಹೇಳಿದರು.

‘ನವ ಮತ್ತು ಉತ್ತಮ ಭಾರತಕ್ಕಾಗಿ ಸಾಕಷ್ಟು ಪ್ರಯತ್ನಗಳು ಸಾಗಿವೆ. ನಾವು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಅವುಗಳಿಂದ ಹಿಂದೆ ಸರಿದಿಲ್ಲ. ಬಾರತವು ಕೇವಲ ತೋರಿಕೆಯ ಬದಲಾವಣೆಗಳನ್ನು ಕೈಗೊಳ್ಳುತ್ತಿಲ್ಲ.  ನಾವು ಶಾಶ್ವತ ಪರಿಹಾರಕ್ಕಾಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಮತ್ತು ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಿದ್ದೇವೆ’ ಎಂದು ಪ್ರಧಾನಿ ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಎನ್‌ಡಿಎ ಸರ್ಕಾರದ ಸಾಧನೆಗಳನ್ನು ವಿವರಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು, ‘ಕಳೆದ ಐದು ವರ್ಷಗಳ ಅವಧಿಯಲ್ಲಿ 130 ಕೋಟಿ ಜನತೆ ತಾವು ಕಲ್ಪನೆ ಮಾಡಿಕೊಂಡಿದ್ದನ್ನೆಲ್ಲಾ ಸಾಧಿಸಿದ್ದಾರೆ. ನಾವು ಉನ್ನತ ಉದ್ದೇಶವಿಟ್ಟುಕೊಂಡಿದ್ದೇವೆ. ಉನ್ನತ ಪ್ರಗತಿಗಾಗಿಯೇ ಶ್ರಮಿಸುತ್ತಿದ್ದೇವೆ’ ಎಂದು ಹೇಳಿದರು. ಪ್ರತಿಯೊಂದು ಮನೆಗೂ ಅಡುಗೆ ಅನಿಲ ಒದಗಿಸುವ ಕಾರ್ಯದಲ್ಲಿ ಮಹತ್ವದ ಪರಿವರ್ತನೆ ಸಾಧಿಸಲಾಗಿದೆ. ಗ್ರಾಮೀಣ ಸ್ವಚ್ಛತೆ ಸುಧಾರಣೆಯಾಗಿದೆ, ಗ್ರಾಮೀಣ ಪ್ರದೇಶದಲ್ಲಿ ರಸ್ತೆಯಂತಹ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ, ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ. ಇಂತಹ ಹಲವಾರು ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.

‘ಸುಲಲಿತ ಬದುಕು’ ಮತ್ತು ‘ಸುಲಲಿತ ಉದ್ಯಮ’ಕ್ಕಾಗಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಅವರು ಪುನರುಚ್ಛಿಸಿದರು. ‘ಸುಲಲಿತ ಬದುಕಿಗಾಗಿ’ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಪ್ರಸ್ತುತವಲ್ಲದ ಕೆಲವು ಕಾನೂನುಗಳನ್ನು ಸಹ ರದ್ದುಪಡಿಸಲಾಗಿದೆ. ಸೇವೆಗಳನ್ನು ತ್ವರಿತಗತಿಯಲ್ಲಿ ಒದಗಿಸಲು ಕ್ರಮಕೈಗೊಳ್ಳಲಾಗಿದೆ.  ಅಗ್ಗವಾದ ದರದಲ್ಲಿ ಡಾಟಾಗಳನ್ನು ಒದಗಿಸಲಾಗಿದೆ. ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗಿದೆ. ಜಿಎಸ್‌ಟಿ ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು. ತಮ್ಮ ಸರ್ಕಾರದಲ್ಲಿ ಅಭಿವೃದ್ಧಿಯು ಪ್ರತಿಯೊಬ್ಬ ಭಾರತೀಯನಿಗೂ ತಲುಪುತ್ತದೆ ಎಂದು ಪ್ರಧಾನಿ ತಿಳಿಸಿದರು.

370ನೇ ವಿಧಿಯನ್ನು ರದ್ದುಪಡಿಸಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿ ಅವರು, ಇಂತಹ ಕಠಿಣ ನಿರ್ಧಾರವನ್ನು ಕೈಗೊಳ್ಳಲು ಸಹಕರಿಸಿದ ಭಾರತದ ಎಲ್ಲ ಸಂಸದರಿಗೆ ನಿಂತುಕೊಂಡು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಬೇಕು ಎಂದು ಕ್ರೀಡಾಂಗಣದಲ್ಲಿ ನೆರೆದಿದ್ದ ಸಭಿಕರನ್ನು ಕೋರಿದರು. 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಜನರನ್ನು ಅಭಿವೃದ್ಧಿಯ ಪಥದಿಂದ ದೂರವಿಟ್ಟಿತ್ತು. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಜನತೆಗೂ ಇನ್ನು ಮುಂದೆ ಪ್ರತಿಯೊಬ್ಬ ಭಾರತಿಯನೀಗೂ ದೊರೆಯುವ ರೀತಿಯಲ್ಲೇ ಎಲ್ಲ ಹಕ್ಕುಗಳು ದೊರೆಯಲಿವೆ’ ಎಂದು ಪ್ರಧಾನಿ ವಿವರಿಸಿದರು.

ಭಯೋತ್ಪಾದನೆ ಮತ್ತು ಅದಕ್ಕೆ ಬೆಂಬಲ ನೀಡುವವರ ವಿರುದ್ಧ ಕಠಿಣವಾದ ನಿರ್ಧಾರದೊಂದಿಗೆ ಹೋರಾಟ ಮಾಡುವ ಸಮಯ ಇದೀಗ ಬಂದಿದೆ ಎಂದು ಹೇಳಿದ ಪ್ರಧಾನಿ ಅವರು, ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುತ್ತಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಾರ್ಯ ಮತ್ತು ದೃಢವಾದ ನಿಲುವು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಅವರು ಅಧ್ಯಕ್ಷ ಟ್ರಂಪ್‌ ಮತ್ತು ಅವರ ಕುಟುಂಬಕ್ಕೆ ಇದೇ ಸಂದರ್ಭದಲ್ಲಿ ಆಹ್ವಾನ ನೀಡಿದರು. ‘ನಮ್ಮ ಸ್ನೇಹ ಭಾರತ ಮತ್ತು ಅಮೆರಿಕದ ಕ್ರಿಯಾಶೀಲ ಭವಿಷ್ಯಕ್ಕಾಗಿ ಮತ್ತು ಅಭಿವೃದ್ಧಿಯ ಉತ್ತುಂಗ ಸ್ಥಿತಿಯತ್ತ ಸಾಗಲು ಸಹಕಾರಿಯಾಗಲಿದೆ’ ಎಂದು ಪ್ರಧಾನಿ ಹೇಳಿದರು.

’ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಡೊನಾಲ್ಡ್‌ ಜೆ. ಟ್ರಂಪ್‌ ಅವರನ್ನು ಆಹ್ವಾನಿಸಿರುವುದು ಗೌರವ ತರುವ ವಿಷಯವಾಗಿದೆ. ಅಮೆರಿಕದ ಅಧ್ಯಕ್ಷರು ಎಲ್ಲೆಡೆಯೂ ತಮ್ಮ ಪ್ರಭಾವ ಮತ್ತು ಛಾಪು ಮೂಡಿಸಿದ್ದಾರೆ. ಅಮೆರಿಕ ಅಧ್ಯಕ್ಷರ ನಾಯಕತ್ವ ನಿಜಕ್ಕೂ ಪ್ರಶಂಸನೀಯ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದರು

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಡೊನಾಲ್ಡ್‌ ಜೆ. ಟ್ರಂಪ್‌,  ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಭಾರತಕ್ಕಾಗಿ ಮತ್ತು ಆ ದೇಶದ ನಾಗರಿಕರಾಗಿ ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ್ದಕ್ಕಾಗಿ ಮೋದಿ ಅವರಿಗೆ ಅಭಿನಂದನೆಗಳು ಎಂದು ಹೇಳಿದರು.

ಭಾರತ ಮತ್ತು ಅಮೆರಿಕದ ಸಂಬಂಧ ಈಗ ಎಂದೆಂದಿಗಿಂತಲೂ ಉತ್ತಮವಾಗಿದೆ ಎಂದು ಹೇಳಿದರು.

ಬೆಳವಣಿಗೆ ಪರ ನೀತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಟ್ರಂಪ್‌ ಅವರು, ‘ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸುಮಾರು 300 ಮಿಲಿಯನ್‌ ಜನರನ್ನು ಬಡತನದಿಂದ ಮುಕ್ತಗೊಳಿಸಿದ್ದಾರೆ, ಇದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ  ಜಗತ್ತು  ಬಲಿಷ್ಠವಾದ ಮತ್ತು ಕ್ರಿಯಾಶೀಲವಾದ ಭಾರತವನ್ನು ನೋಡುತ್ತಿದೆ. ಭಾರತೀಯ ಸಮುದಾಯ ಅಮೆರಿಕಕ್ಕೆ ನೀಡುತ್ತಿರುವ ಕೊಡುಗೆ ಪ್ರಶಂಸನೀಯ, ಈ ಸಮುದಾಯದ ಅಭಿವೃದ್ಧಿಗಾಗಿ ಎಲ್ಲ ರೀತಿಯ ಕ್ರಮಕೈಗೊಳ್ಳುವುದಾಗಿ ಟ್ರಂಪ್‌ ಹೇಳಿದರು.

ಪ್ರಧಾನಿ ಅವರನ್ನು ಹ್ಯೂಸ್ಟನ್‌ಗೆ ಬರಮಾಡಿಕೊಂಡ ಸದನದ ನಾಯಕ ಸ್ಟೆನಿಹೋನರ್‌ ಮಾತನಾಡಿ, ಆಧುನಿಕ ಭಾರತ ಅಮೆರಿಕಗೆ ಸ್ಫೂರ್ತಿಯಾಗಿದೆ, ಹಲವು ರೀತಿಯ ಸವಾಲುಗಳನ್ನು ಎದುರಿಸುತ್ತಾ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದೃಢವಾದ ಹೆಜ್ಜೆಯನ್ನಿಡುತ್ತಾ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ. ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಾನ್‌ ಸಾಧನೆಯನ್ನು ಮಾಡುತ್ತಿದೆ. ಜತೆ, ಜತೆಗೆ, ಲಕ್ಷಾಂತರ ಮಂದಿಯನ್ನು ಬಡತನದಿಂದ ವಿಮೋಚನೆಗೊಳಿಸುವ ಕೈಂಕರ್ಯದಲ್ಲೂ ಸಾಗಿದೆ ಎಂದು ಹೇಳಿದರು.

ಈ ಮೊದಲು, ಹ್ಯೂಸ್ಟನ್‌ ಮೇಯರ್‌ ಸಿಲ್ವೆಸ್ಟರ್‌ ಟರ್ನರ್‌ ಅವರು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಗೌರವಾರ್ಥ ಮತ್ತು ಭಾರತ ಮತ್ತು ಹ್ಯೂಸ್ಟನ್‌ ಸಂಬಂಧ ಬಿಂಬಿಸುವ ‘ಕೀ’ ನೀಡಿದರು.


(Release ID: 1586128) Visitor Counter : 177