ರಾಷ್ಟ್ರಪತಿಗಳ ಕಾರ್ಯಾಲಯ
ಭಾರತದ ಘನತೆವೆತ್ತ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ಭಾರತದ 73ನೇ ಸ್ವಾತಂತ್ರ್ಯ ದಿನದ ಮುನ್ನಾದಿನ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣ
Posted On:
14 AUG 2019 7:39PM by PIB Bengaluru
ಭಾರತದ ಘನತೆವೆತ್ತ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ಭಾರತದ 73ನೇ ಸ್ವಾತಂತ್ರ್ಯ ದಿನದ ಮುನ್ನಾದಿನ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣ
ನನ್ನ ಆತ್ಮೀಯ ದೇಶವಾಸಿಗಳೇ,
1. ನಾನು 73ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಶುಭಾಶಯಗಳನ್ನು ಸಲ್ಲಿಸುತ್ತೇನೆ. ತವರಿನಲ್ಲೇ ಇರಲಿ ಇಲ್ಲ ವಿದೇಶದಲ್ಲೇ ಇರಲಿ, ಭಾರತ ಮಾತೆಯ ಎಲ್ಲ ಮಕ್ಕಳಿಗೂ ಇಂದು ಸಂತೋಷದ ಹಾಗೂ ಭಾವನಾತ್ಮಕ ದಿನವಾಗಿದೆ. ವಸಾಹತುಶಾಹಿ ಆಳ್ವಿಕೆಯಿಂದ ನಮಗೆ ಸ್ವಾತಂತ್ರ್ಯವನ್ನು ಕೊಡಿಸಲು ಹೋರಾಡಿದ, ಶ್ರಮಿಸಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳನ್ನು ನಾವು ಕೃತಜ್ಞತೆಯಿಂದ ಸ್ಮರಿಸುತ್ತೇವೆ.
2. ನಾವು ಅತ್ಯಂತ ವಿಶೇಷ ಸಂದರ್ಭದಲ್ಲಿ ಸ್ವತಂತ್ರ ಭಾರತದ 72ನೇ ವರ್ಷವನ್ನು ಪೂರೈಸಿದ್ದೇವೆ. ಇಂದಿನಿಂದ ಕೆಲವೇ ವಾರಗಳಲ್ಲಿ ಅಂದರೆ ಅಕ್ಟೋಬರ್ 2ರಂದು, ರಾಷ್ಟ್ರವನ್ನು ಸ್ವತಂತ್ರಗೊಳಿಸುವ ನಮ್ಮ ಯಶಸ್ವಿ ಪ್ರಯತ್ನಕ್ಕೆ ಮತ್ತು ಎಲ್ಲಾ ಅಸಮಾನತೆಗಳಿಂದ ನಮ್ಮ ಸಮಾಜವನ್ನು ಸುಧಾರಿಸುವ ನಮ್ಮ ನಿರಂತರ ಪ್ರಯತ್ನಗಳಿಗೆ ದಾರಿದೀಪವಾಗಿರುವ, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ 150ನೇ ಜಯಂತಿಯನ್ನು ನಾವು ಆಚರಿಸಲಿದ್ದೇವೆ.
3. ಸಮಕಾಲೀನ ಭಾರತವು ಮಹಾತ್ಮ ಗಾಂಧಿಜೀ ಅವರು ಜೀವಿಸುತ್ತಿದ್ದ ಮತ್ತು ದುಡಿದ ಭಾರತಕ್ಕಿಂತ ಬಹಳ ಭಿನ್ನವಾಗಿದೆ. ಆದಾಗ್ಯೂ ಗಾಂಧೀಜಿ ಅವರು ಇಂದಿಗೂ ಅತ್ಯಂತ ಪ್ರಸ್ತುತವಾಗಿದ್ದಾರೆ. ಸುಸ್ಥಿರತೆ, ಪರಿಸರ ಸಂವೇದನಾಶೀಲತೆ ಮತ್ತು ಪ್ರಕೃತಿಯೊಂದಿಗೆ ಸೌಹಾರ್ದ ಬದುಕು ಕುರಿತ ಅವರ ಪ್ರತಿಪಾದನೆಗಳು, ಇಂದು ನಾವು ಎದುರಿಸುತ್ತಿರುವ ಸವಾಲುಗಳನ್ನು ಅವರು ಅಂದೇ ಊಹಿಸಿದ್ದರೆಂಬುದಕ್ಕೆಸಾಕ್ಷಿ. ಪ್ರತೀಕೂಲ ಸ್ಥಿತಿಯಲ್ಲಿರುವ ನಮ್ಮ ದೇಶವಾಸಿಗಳಿಗಾಗಿ ಮತ್ತು ಕುಟುಂಬಗಳಿಗಾಗಿ ನಾವು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವಾಗ, ಪುನರ್ ನವೀಕರಿಸುವ ಇಂಧನವಾಗಿ ಸೌರಶಕ್ತಿಯನ್ನು ಬಳಕೆ ಮಾಡುವಾಗ, ನಾವು ಗಾಂಧೀಜಿ ಅವರ ತತ್ವಗಳನ್ನು ಕಾರ್ಯರೂಪಕ್ಕೆತರುತ್ತೇವೆ.
4. ಈ ವರ್ಷ ಸಾರ್ವಕಾಲಿಕ ಶ್ರೇಷ್ಠ, ಬುದ್ಧಿವಂತ ಮತ್ತು ಪ್ರಭಾವಿ ಭಾರತೀಯರಲ್ಲಿ ಒಬ್ಬರಾದ - ಗುರುನಾನಕ್ ದೇವ್ ಅವರ 550 ನೇ ಜನ್ಮದಿನೋತ್ಸವ ವರ್ಷವೂ ಸಹ ಆಗಿದೆ. ಅವರು ಸಿಖ್ ಧರ್ಮದ ಸಂಸ್ಥಾಪಕರು, ಆದರೆ ಅವರು ಪಡೆದ ಗೌರವ ಮತ್ತು ಆದರ ಸಿಖ್ ಸಹೋದರ ಸಹೋದರಿಯರನ್ನು ಮೀರಿ ನಿಲ್ಲುತ್ತದೆ. ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ವಾಸಿಸುವ ಕೋಟ್ಯಂತರ ಭಕ್ತರು ಅವರ ಮೇಲೆ ಆಳವಾದ ನಂಬಿಕೆಯನ್ನು ಇಟ್ಟಿದ್ದಾರೆ. ಈ ಶುಭ ಸಂದರ್ಭದಲ್ಲಿ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಅರ್ಪಿಸುತ್ತೇನೆ.
ದೇಶವಾಸಿಗಳೇ,
5. ನಮ್ಮನ್ನು ಸ್ವಾತಂತ್ರ್ಯದತ್ತ ಕೊಂಡೊಯ್ದ ಪ್ರಖ್ಯಾತ ಪೀಳಿಗೆ, ರಾಜಕೀಯ ಅಧಿಕಾರ ಹಸ್ತಾಂತರದ ದೃಷ್ಟಿಯಿಂದ ಮಾತ್ರವೇ ಸ್ವಾತಂತ್ರ್ಯವನ್ನು ಗ್ರಹಿಸಲಿಲ್ಲ. ರಾಷ್ಟ್ರವನ್ನು ಬೆಸೆಯಲು ಮತ್ತು ರಾಷ್ಟ್ರವನ್ನು ಕಟ್ಟಲು ದೀರ್ಘ ಮತ್ತು ದೀರ್ಘ ಪ್ರಕ್ರಿಯೆಯ ಸೋಪಾನ ಎಂದು ಪರಿಗಣಿಸಿದರು. ಅವರ ಉದ್ದೇಶ ಪ್ರತಿಯೊಬ್ಬ ವ್ಯಕ್ತಿಯ ಬದುಕನ್ನು, ಪ್ರತಿ ಕುಟುಂಬದ ಮತ್ತು ಒಟ್ಟಾರೆ ಸಮಾಜವನ್ನು ಸುಧಾರಿಸುವುದಾಗಿತ್ತು.
6. ಈ ಹಿನ್ನೆಲೆಯಲ್ಲಿ, ಇತ್ತೀಚೆಗೆ ಜಮ್ಮು –ಕಾಶ್ಮೀರ ಮತ್ತು ಲಡಾಖ್ ನಲ್ಲಿ ಆದ ಬದಲಾವಣೆಗಳು ಈ ವಲಯಕ್ಕೆ ಅಪಾರ ಪ್ರಯೋಜನ ತರಲಿದೆ ಎಂಬ ವಿಶ್ವಾಸ ನನಗಿದೆ. ಆ ಬದಲಾವಣೆಗಳು ದೇಶದ ಇತರ ಭಾಗದ ಸಹ ನಾಗರಿಕರು ಪಡೆಯುತ್ತಿರುವ ಸೌಲಭ್ಯ, ಹಕ್ಕುಗಳನ್ನು ತಾವೂ ಅನುಭವಿಸಲು ಅವಕಾಶ ಮಾಡಿಕೊಡುತ್ತದೆ. ಇವುಗಳಲ್ಲಿ ಪ್ರಗತಿಪರ, ಸಮತಾವಾದಿ ಕಾನೂನುಗಳು ಮತ್ತು ಶಿಕ್ಷಣದ ಹಕ್ಕಿಗೆ ಸಂಬಂಧಿಸಿದ ನಿಯಮಗಳು; ಮಾಹಿತಿ ಹಕ್ಕಿನ ಮೂಲಕ ಸಾರ್ವಜನಿಕ ಮಾಹಿತಿಯನ್ನು ಪಡೆಯುವುದು; ಸಾಂಪ್ರದಾಯಿಕವಾಗಿ ವಂಚಿತ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ ಮತ್ತು ಇತರ ಸೌಲಭ್ಯಗಳಲ್ಲಿ ಮೀಸಲಾತಿ; ಮತ್ತು ದಿಢೀರ್ ತ್ರಿವಳಿ ತಲಾಖ್ ನಂತಹ ಅಸಮಾನ ಅಭ್ಯಾಸಗಳನ್ನು ರದ್ದುಗೊಳಿಸುವ ಮೂಲಕ ನಮ್ಮ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವುದೂ ಸೇರಿವೆ.
7. ಈ ಮುನ್ನ ಬೇಸಿಗೆಯಲ್ಲಿ ಭಾರತದ ಜನರು ಮಾನವ ಇತಿಹಾಸದಲ್ಲೇ ಅತ್ಯಂತ ಬೃಹತ್ ಆದ ಪ್ರಜಾಪ್ರಭುತ್ವದ ಪ್ರಕ್ರಿಯೆಯಾದ 17ನೇ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗಿಯಾದರು. ಇದಕ್ಕಾಗಿ ನಾನು ನಮ್ಮ ಮತದಾರರನ್ನು ಅಭಿನಂದಿಸಲೇಬೇಕು. ಅವರು ಉತ್ಸಾಹದೊಂದಿಗೆ ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದರು. ಅವರು ತಮ್ಮ ಮತದಾನದ ಹಕ್ಕಿನ ಜೊತೆಗೆ ಚುನಾವಣಾ ಜವಾಬ್ದಾರಿಯನ್ನೂ ನಿರ್ವಹಿಸಿದರು.
8. ಪ್ರತಿಯೊಂದು ಚುನಾವಣೆಯೂ ಒಂದು ಹೊಸ ಆರಂಭಕ್ಕೆಕಾರಣವಾಗುತ್ತದೆ. ಪ್ರತಿ ಚುನಾವಣೆಯೂ ಭಾರತದ ಸಂಘಟಿತ ವಿಶ್ವಾಸ ಮತ್ತು ಆಶಾವಾದದ ನವೀಕರಣವಾಗಿದೆ – ವಿಶ್ವಾಸ ಮತ್ತು ಆಶಾವಾದವನ್ನು ಹೋಲಿಸಬಹುದು, 1947ರ ಆಗಸ್ಟ್ 15ರಂದು ನಾವು ಏನು ಅನುಭವ ಪಡೆದೆವು ಎಂಬುದನ್ನು ನಾನು ಹೇಳ ಬಯಸುತ್ತೇನೆ. ಈಗ ನಾವೆಲ್ಲರೂ, ಭಾರತದ ಪ್ರತಿಯೊಬ್ಬರೂ ಒಗ್ಗೂಡಿ ದುಡಿದು, ನಮ್ಮ ರಾಷ್ಟ್ರವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಿದೆ.
9. ಈ ನಿಟ್ಟಿನಲ್ಲಿ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಸಂಸತ್ ಅಧಿವೇಶನವು ದೀರ್ಘ ಮತ್ತು ಫಲಪ್ರದವಾದ ಕಲಾಪವನ್ನು ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ನಡೆಸಿತು ಎಂಬುದನ್ನು ನಾನು ಉಲ್ಲೇಖಿಸಲು ಹರ್ಷಿಸುತ್ತೇನೆ. ಪಕ್ಷಾತೀತವಾಗಿ ಮತ್ತು ರಚನಾತ್ಮಕ ಚರ್ಚೆಯ ಮೂಲಕ ಹಲವು ಮಹತ್ವದ ವಿಧೇಯಕಗಳು ಅನುಮೋದನೆಯಾಗಿವೆ. ಇದು ಮುಂದಿನ ಐದು ವರ್ಷಗಳಲ್ಲಿ ಏನೆಲ್ಲಾ ಇರಬಹುದು ಎಂಬುದರ ಸೂಚಕ ಮಾತ್ರ ಎಂಬ ವಿಶ್ವಾಸ ನನಗಿದೆ. ಈ ಸಂಸ್ಕೃತಿಯನ್ನು ನಮ್ಮ ಎಲ್ಲ ವಿಧಾನಸಭೆಗಳಲ್ಲೂ ಅಳವಡಿಸಿಕೊಳ್ಳುವಂತೆ ನಾನು ಮನವಿ ಮಾಡುತ್ತೇನೆ.
10. ಇದು ಏಕೆ ಮಹತ್ವ? ಇದು ಮಹತ್ವವಾದುದು ಏಕೆಂದರೆ ಚುನಾಯಿತ ಪ್ರತಿನಿಧಿಗಳು ಮತದಾರರು ತಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಅವರು ತಕ್ಕವರಾಗಿರಬೇಕು. ಇದು ಏಕೆ ಮಹತ್ವವಾದ್ದೆಂದರೆ ರಾಷ್ಟ್ರಕಟ್ಟುವ ಕೆಲಸಕ್ಕೆ -ನಿರಂತರವಾದದ್ದು, ಇದರಲ್ಲಿ ಸ್ವಾತಂತ್ರ್ಯ ಮಹತ್ವದ ಮೈಲಿಗಲ್ಲು - ಪ್ರತಿಯೊಂದು ಸಂಸ್ಥೆ ಮತ್ತು ಪ್ರತಿಯೊಬ್ಬ ಬಾಧ್ಯಸ್ಥರೂ ಒಟ್ಟಾಗಿ ಶ್ರಮಿಸಿ, ಸಾಮರಸ್ಯದಿಂದ ಕೆಲಸ ಮಾಡಿ ಮತ್ತು ಒಗ್ಗಟ್ಟಿನಿಂದ ದುಡಿಯುವುದು ಅಗತ್ಯವಾಗಿರುತ್ತದೆ. ರಾಷ್ಟ್ರ ನಿರ್ಮಾಣ, ಅಂತಿಮವಾಗಿ, ಮತದಾರರು ಮತ್ತು ಅವರ ಪ್ರತಿನಿಧಿಗಳ ನಡುವೆ, ನಾಗರಿಕರು ಮತ್ತು ಸರ್ಕಾರದ ನಡುವೆ ಮತ್ತು ನಾಗರಿಕ ಸಮಾಜ ಮತ್ತು ರಾಜ್ಯಗಳ ನಡುವೆ ಗರಿಷ್ಠ ಸಹಯೋಗ ರೂಪಿಸುವುದಾಗಿದೆ.
11. ಸೌಲಭ್ಯ ನೀಡುವವರಾಗಿ ಮತ್ತು ಅನುಷ್ಠಾನ ಮಾಡುವವರಾಗಿ ಇಲ್ಲಿ ರಾಜ್ಯ ಮತ್ತು ಸರ್ಕಾರಗಳಿಗೆ ಮಹತ್ವದ ಪಾತ್ರವಿದೆ. ಅಂತೆಯೇ, ನಮ್ಮ ಪ್ರಮುಖ ಸಂಸ್ಥೆಗಳು ಮತ್ತು ನೀತಿ ನಿರೂಪಕರಿಗೆ ನಾಗರಿಕರ ಆಶಯಗಳ ಕುರಿತು ಅಧ್ಯಯನ ಮಾಡಿ, ಜನರ ಆಶಯ ಗೌರವಿಸಿ ಮತ್ತು ನಮ್ಮ ಜನರ ಚಿಂತನೆಗಳು ಮತ್ತು ಇಚ್ಛೆಗಳಿಗೆ ಸ್ಪಂದಿಸುವುದು ನಿರ್ಣಾಯಕವಾಗುತ್ತದೆ. ಭಾರತದ ರಾಷ್ಟ್ರಪತಿಯಾಗಿ ದೇಶದಾದ್ಯಂತ ಸಂಚರಿಸಲು ನನಗೆ ಅವಕಾಶವಿದೆ. ಈ ಭೇಟಿಗಳ ವೇಳೆ, ನಾನು ವಿವಿಧ ಕ್ಷೇತ್ರಗಳ ದೇಶವಾಸಿಗಳನ್ನು ಸಹ ಭೇಟಿಯಾಗುತ್ತೇನೆ. ಭಾರತದ ಜನರ ಆಸಕ್ತಿ ಮತ್ತು ಅಭಿರುಚಿಗಳು ವಿಭಿನ್ನವಾಗಿವೆ ಎಂಬುದನ್ನು ನಾನು ಅರಿತುಕೊಂಡಿದ್ದೇನೆ, ಆದರೂ ಅವರೆಲ್ಲರ ಕನಸು ಒಂದೇ ಆಗಿರುತ್ತದೆ. 1947 ಕ್ಕಿಂತ ಮೊದಲು, ಎಲ್ಲಾ ಭಾರತೀಯರ ಗುರಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವುದೇ ಆಗಿತ್ತು. ಇಂದು, ನಮ್ಮ ಗುರಿ ವೇಗವರ್ಧಿತ ಅಭಿವೃದ್ಧಿಯಾಗಿದೆ. ಸಮರ್ಥ ಮತ್ತು ಪಾರದರ್ಶಕ ಆಡಳಿತಕ್ಕಾಗಿ; ನಮ್ಮ ದೈನಂದಿನ ಬದುಕಿನಲ್ಲಿ ಸರ್ಕಾರದ ಪುಟ್ಟ ಹೆಜ್ಜೆಗುರುತುಗಳಿಗಾಗಿ ನಮ್ಮ ಕನಸಿದೆ.
12. ಈ ಎಲ್ಲ ಕನಸುಗಳನ್ನು ನನಸು ಮಾಡುವುದು ಅಗತ್ಯ. ಜನರ ಆಕಾಂಕ್ಷೆಗಳು ಅವರ ಜನಾದೇಶದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಸರ್ಕಾರವು ತನ್ನ ಪಾತ್ರವನ್ನು ವಹಿಸುತ್ತಿದ್ದರೂ, ಹೆಚ್ಚಿನ ಅವಕಾಶ ಮತ್ತು ಸಾಮರ್ಥ್ಯವು 130 ಕೋಟಿ ಭಾರತೀಯರ ಕೌಶಲ್ಯ, ಪ್ರತಿಭೆ, ನಾವೀನ್ಯತೆ, ಸೃಜನಶೀಲತೆ ಮತ್ತು ಉದ್ಯಮಶೀಲತೆಯಲ್ಲಿದೆ ಎಂದು ನಾನು ಪ್ರತಿಪಾದಿಸುತ್ತೇನೆ. ಈ ಎಲ್ಲ ಗುಣಲಕ್ಷಣಗಳು ಹೊಸದೇನೂ ಅಲ್ಲ. ಅವರು ಭಾರತವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಸಾವಿರಾರು ವರ್ಷಗಳಿಂದ ನಮ್ಮ ನಾಗರಿಕತೆಯನ್ನು ಪೋಷಿಸಿದ್ದಾರೆ. ನಮ್ಮ ಸುದೀರ್ಘ ಇತಿಹಾಸದಲ್ಲಿ ನಮ್ಮ ಜನರು ಕಷ್ಟಗಳನ್ನು ಮತ್ತು ಸವಾಲುಗಳನ್ನು ಎದುರಿಸಿದ ಸಂದರ್ಭಗಳಿವೆ. ಅಂಥ ಸನ್ನಿವೇಶಗಳಲ್ಲಿ ಕೂಡ, ನಮ್ಮ ಸಮಾಜ ಸ್ಥಿತಿಸ್ಥಾಪಕತ್ವವನ್ನು ಸಾಬೀತುಪಡಿಸಿದೆ; ಸಾಮಾನ್ಯ ಕುಟುಂಬಗಳೂ ಅಸಾಮಾನ್ಯ ಶೌರ್ಯ ಪ್ರದರ್ಶಿಸಿವೆ; ಮತ್ತು ಹಲವು ವ್ಯಕ್ತಿಗಳು ಉಳಿಯಲು ಮತ್ತು ಅಭಿವೃದ್ಧಿ ಹೊಂದಲು ಬಲ ಕಂಡುಕೊಂಡಿದ್ದಾರೆ. ಇಂದು, ಸರ್ಕಾರ ಪೂರಕವಾದ ಮತ್ತು ಸೂಕ್ತವಾದ ವಾತಾವರಣ ರೂಪಿಸಿದೆ, ಈಗ ನಾವು ನಮ್ಮ ಜನರು ಏನು ಸಾಧಿಸುತ್ತಾರೆ ಎಂಬುದನ್ನು ಊಹಿಸಿಕೊಳ್ಳಬಹುದು.
13. ಪಾರದರ್ಶಕ, ಸಮಗ್ರ ಬ್ಯಾಂಕಿಂಗ್ ವ್ಯವಸ್ಥೆ, ಆನ್ ಲೈನ್ ಸ್ನೇಹಿ ತೆರಿಗೆ ವ್ಯವಸ್ಥೆ ಮತ್ತು ಅರ್ಹ ಉದ್ದಿಮೆದಾರರಿಗೆ ಸುಗಮವಾಗಿ ಬಂಡವಾಳದ ಲಭ್ಯತೆಯಿಂದ ಸರ್ಕಾರ, ಹಣಕಾಸು ಮೂಲಸೌಕರ್ಯವನ್ನು ನಿರ್ಮಾಣ ಮಾಡಬಹುದು. ಬಡವರಲ್ಲೇ ಕಡುಬಡವರಿಗೆ ಮನೆಗಳ ನಿರ್ಮಾಣ, ಪ್ರತಿ ಮನೆಗೂ ಇಂಧನ, ಶೌಚಾಲಯ ಮತ್ತು ನೀರಿನ ಲಭ್ಯತೆಯೊಂದಿಗೆ ಸರ್ಕಾರ ಭೌತಿಕ ಮೂಲಸಕೌರ್ಯ ನಿರ್ಮಾಣ ಮಾಡಬಹುದು. ದೇಶದ ಕೆಲವು ಭಾಗಗಳಲ್ಲಿ ಪ್ರವಾಹ ಮತ್ತು ವಿಪತ್ತು ಹಾಗೂ ಮತ್ತೆ ಕೆಲವು ಭಾಗದಲ್ಲಿನ ನೀರಿನ ಕೊರತೆಯ ವಿರೋಧಾಭಾಸಗಳನ್ನು ಎದುರಿಸಲು ಸಾಂಸ್ಥಿಕ ಮೂಲಸೌಕರ್ಯ ನಿರ್ಮಿಸಬಹುದು. ಅಗಲವಾದ, ಉತ್ತಮ ಹೆದ್ದಾರಿಗಳು ಮತ್ತು ಸುರಕ್ಷಿತ, ವೇಗದ ರೈಲುಗಳು; ದೇಶದ ಒಳಗೆ ವಿಮಾನ ನಿಲ್ದಾಣಗಳು ಮತ್ತು ಕರಾವಳಿಯಲ್ಲಿ ಬಂದರುಗಳ ಮೂಲಕ ಸರ್ಕಾರ ಸಂಪರ್ಕ ಮೂಲಸೌಕರ್ಯ ನಿರ್ಮಾಣ ಮಾಡಬಹುದು. ಡಿಜಿಟಲ್ ಇಂಡಿಯಾ ಮೂಲಕ ಸರ್ಕಾರವು ಸಾರ್ವತ್ರಿಕ ದತ್ತಾಂಶ ಪ್ರವೇಶದ ಮೂಲಕ ಶ್ರೀಸಾಮಾನ್ಯರಿಗೂ ಪ್ರಯೋಜನ ತರಬಹುದು.
14. ಸಮಗ್ರ ಆರೋಗ್ಯ ಆರೈಕೆ ಕಾರ್ಯಕ್ರಮ ಮತ್ತು ದಿವ್ಯಾಂಗದ ದೇಶವಾಸಿಗಳನ್ನು ಮುಖ್ಯವಾಹಿನಿಗೆ ತರುವ ಸೌಲಭ್ಯಗಳ ಮೂಲಕ ಸರ್ಕಾರ ಸಾಮಾಜಿಕ ಮೂಲಸೌಕರ್ಯ ನಿರ್ಮಿಸಬಹುದು. ಲಿಂಗ ಸಮಾನತೆ ತರುವ ಶಾಸನಗಳನ್ನು ರೂಪಿಸುವ ಮೂಲಕ ಮತ್ತು ಪುರಾತನ ಕಾಯಿದೆ ತೆಗೆದು ಹಾಕುವ ಮೂಲಕ ನಮ್ಮ ಜನರ ಬದುಕು ಸುಗಮವಾಗಲು ಸರ್ಕಾರ ಕಾನೂನು ಮೂಲಸೌಕರ್ಯ ರೂಪಿಸಬಹುದು.
15. ಆದಾಗ್ಯೂ, ನಮ್ಮ ಸಮಾಜಕ್ಕೆ ಮತ್ತು ನಾಗರಿಕರಿಗೆ ಅತ್ಯಂತ ಮುಖ್ಯವಾದದ್ದು ಯಾವುದೆಂದರೆ, – ತಮಗಾಗಿ ಮತ್ತು ತಮ್ಮ ಕುಟುಂಬದವರ ಪ್ರಯೋಜನಕ್ಕಾಗಿ, ಮತ್ತು ಸಮಾಜದ ಉಪಯೋಗಕ್ಕಾಗಿ ಮತ್ತು ನಮ್ಮೆಲ್ಲರಿಗಾಗಿ- ಈ ಮೂಲಸೌಕರ್ಯಗಳ ಬಳಕೆಯಾಗಬೇಕಿದೆ
16. ಉದಾಹರಣೆಗೆ, ರೈತರು ದೊಡ್ಡ ಮಾರುಕಟ್ಟೆಗಳಿಗೆ ಹೋಗಿ, ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಪಡೆದಾಗ ಮಾತ್ರವೇ ಗ್ರಾಮೀಣ ರಸ್ತೆಗಳು ಮತ್ತು ಉತ್ತಮ ಸಂಪರ್ಕಗಳಿಗೆ ಅರ್ಥ ಬರುತ್ತದೆ. ನಮ್ಮ ಉದ್ದಿಮೆದಾರರು, ಅದು ಸಣ್ಣ ನವೋದ್ಯಮವಾಗಿರಲಿ ಅಥವಾ ದೊಡ್ಡ ಕೈಗಾರಿಕೆಯೇ ಆಗಿರಲಿ, ಪ್ರಾಮಾಣಿಕ ಮತ್ತು ಊಹಾತ್ಮಕ ಉದ್ದಿಮೆಗಳ ನಿರ್ಮಾಣಕ್ಕೆ ಇದರ ಬಳಕೆಯಾದಾಗ ಮತ್ತು ಸುಸ್ಥಿರ ಉದ್ಯೋಗ ಸೃಷ್ಟಿಯಾದಾಗ ಮಾತ್ರವೇ ಹಣಕಾಸು ಸುಧಾರಣೆಗಳಿಗೆ ಮತ್ತು ವಾಣಿಜ್ಯದ ಸುಗಮ ನಿಯಮಗಳಿಗೆ ಅರ್ಥ ಬರುತ್ತದೆ. ಭಾರತದ ಮಹಿಳೆ ಸಬಲೆಯಾದಾಗ ಮತ್ತು ಅವರ ಗೌರವ ಹೆಚ್ಚಾದಾಗ, ಅವರು ಹೊರ ಜಗತ್ತಿಗೆ ಹೋಗಿ ತಮ್ಮ ಆಕಾಂಕ್ಷೆಗಳನ್ನು ಈಡೇರಿಸುವಂತೆ ಮಾಡಿದಾಗ ಮಾತ್ರವೇ ಶೌಚಾಲಯಗಳ ಸಾರ್ವತ್ರಿಕ ಲಭ್ಯತೆ, ಗೃಹೋಪಯೋಗಿ ನೀರಿನ ಬಳಕೆಗೆ ಅರ್ಥ ಬರುತ್ತದೆ. ಅವರು ತಾವು ಬಯಸಿದ ರೀತಿಯಲ್ಲಿ –ತಾಯಿಯಾಗಿ ಮತ್ತು ಗೃಹಿಣಿಯಾಗಿ – ಮತ್ತು ವೃತ್ತಿಪರರಾಗಿ ಮತ್ತು ತಮ್ಮ ಸ್ವಂತ ಗುರಿಯೊಂದಿಗೆ ವ್ಯಕ್ತಿಯಾಗಿ ಸಾಧನೆ ಮಾಡಬಹುದು.
17. ನಮ್ಮೆಲ್ಲರಿಗೂ ಸೇರಿದ ಇಂಥ ಮೂಲಸೌಕರ್ಯಗಳನ್ನು ಬಳಸುವುದು ಮತ್ತು ರಕ್ಷಿಸುವುದು ಭಾರತದ ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯ. ಇದು ಮತ್ತೊಂದು ಸ್ವಾತಂತ್ರ್ಯವನ್ನು ಶ್ರಮಪಟ್ಟು ಸಂಪಾದಿಸಿದಂತೆಯೇ ಸರಿ. ನಾಗರಿಕ ಮನಸ್ಸಿನ ಭಾರತೀಯರು, ಇಂಥ ಮೂಲಸೌಕರ್ಯಗಳ ಮತ್ತು ಸೌಲಭ್ಯಗಳನ್ನು ಗೌರವಿಸುತ್ತಾರೆ ಮತ್ತು ಅವುಗಳ ಒಡೆತನದ ಹೊಣೆಯನ್ನು ಹೊರುತ್ತಾರೆ. ಅವರು ಹಾಗೆ ಮಾಡುವಾಗ, ಅದೇ ಮನೋಭಾವವನ್ನು ಪ್ರದರ್ಶಿಸುತ್ತಾರೆ ಮತ್ತು ನಮ್ಮ ಸಶಸ್ತ್ರ ಪಡೆ ಮತ್ತು ಅರೆಸೇನಾಪಡೆ ಮತ್ತು ಪೊಲೀಸ್ ಪಡೆಗಳಲ್ಲಿ ಸೇವೆ ಸಲ್ಲಿಸುವ ಧೀರ ಪುರುಷರು ಮತ್ತು ಮಹಿಳೆಯರಂತೆ ವರ್ತಿಸುತ್ತಾರೆ. ನೀವು ನಮ್ಮ ರಾಷ್ಟ್ರವನ್ನು ಗಡಿಯಲ್ಲಿ ಕಾಯುತ್ತಿರಲಿ ಅಥವಾ ಸಿಟ್ಟಿನಿಂದ ಅಥವಾ ಇನ್ನಾವುದೇ ಕಾರಣಕ್ಕೆ ಸಂಚರಿಸುತ್ತಿರುವ ರೈಲಿಗೆ ಅಥವಾ ಇನ್ನಾವುದೇ ಸಾರ್ವಜನಿಕ ಆಸ್ತಿಗೆ ಕಲ್ಲು ಎಸೆಯುವವರನ್ನು ತಡೆದು ನೀವು ಹಂಚಿಕೆಯ ಆಸ್ತಿಯನ್ನು ಉಳಿಸುತ್ತೀರಿ. ಇದು ಕೇವಲ ಕಾನೂನಿನ ಪಾಲನೆಯಷ್ಟೇ ಅಲ್ಲ, ಇದು ನಮ್ಮ ಅಂತಃಪ್ರಜ್ಞೆಗೆ ನೀಡುವ ಉತ್ತರವೂ ಆಗಿದೆ.
ದೇಶವಾಸಿಗಳೇ,
18. ನಾನು ಈವರೆಗೆ ದೇಶ ಮತ್ತು ಸಮಾಜ, ಸರ್ಕಾರ ಮತ್ತು ನಾಗರಿಕರು ಪರಸ್ಪರ ಹೇಗೆ ನೋಡಬೇಕು ಮತ್ತು ಹೇಗೆ ಪರಸ್ಪರರಿಗೆ ಹೇಗೆ ಸಹಕಾರ ನೀಡಬೇಕು ಎಂಬ ಬಗ್ಗೆ ಮಾತನಾಡಿದೆ, ನಾನು ಭಾರತೀಯರಾದ ನಾವು ಪ್ರತಿಯೊಬ್ಬರನ್ನೂ ಹೇಗೆ ನೋಡಬೇಕು ಎಂಬ ಬಗ್ಗೆ ತಿಳಿಸಲು ಬಯಸುತ್ತೇನೆ – ನಾವು ನಮ್ಮ ಸಹ ದೇಶವಾಸಿಗಳಿಂದ ಅದನ್ನೇ ಬಯಸುತ್ತೇವೆ, ನಾವು ಹಾಗೆ ಇರಬೇಕು ಎಂದು ನಿರೀಕ್ಷಿಸುತ್ತೇವೆ. ಸಾವಿರಾರು ವರ್ಷಗಳಿಂದ, ಶತಮಾನಗಳಿಂದ ಭಾರತ ವಿರಳವಾದ ನ್ಯಾಯಿಕ ಸಮಾಜವಾಗಿದೆ. ಅದು ಎಂದಿಗೂ ಸುಗಮ ನಡೆಯನ್ನು ಒಳಗೊಂಡಿದೆ – ನೀವೂ ಬದುಕಿ – ಬದುಕಲು ಬಿಡಿ- ತತ್ವವನ್ನು ಅಳವಡಿಸಿಕೊಂಡಿದೆ. ನಾವು ಪ್ರತಿಯೊಬ್ಬರ ವ್ಯಕ್ತಿತ್ವಕ್ಕೂ ಗೌರವ ಕೊಡುತ್ತೇವೆ. – ಭಾಷೆ, ಮತ ಮತ್ತು ಪ್ರದೇಶದ ಗಡಿಗಳನ್ನು ಮೀರಿ ನಾವು ಪರಸ್ಪರ ಗೌರವಿಸುತ್ತಿದ್ದೇವೆ. ಭಾರತದ ಇತಿಹಾಸ ಮತ್ತು ಗುರಿ, ಭಾರತದ ಪರಂಪರೆ ಮತ್ತು ಭವಿಷ್ಯ, ಸಹಬಾಳ್ವೆ ಮತ್ತು ರಾಜಿ, ಸುಧಾರಣೆ ಮತ್ತು ಸಾಮರಸ್ಯ - ನಮ್ಮ ಹೃದಯಗಳನ್ನು ವಿಶಾಲಗೊಳಿಸುವ ಮತ್ತು ಇತರರ ವಿಚಾರಗಳನ್ನು ಸ್ವೀಕರಿಸುವುದಾಗಿದೆ.
19. ಈ ಸಹಕಾರದ ಸ್ಫೂರ್ತಿಯನ್ನೇ ನಾವು ನಮ್ಮ ರಾಜತಾಂತ್ರಿಕ ಪ್ರಯತ್ನಗಳಿಗೆ ತಂದಿರುವುದು, ಎಲ್ಲ ಖಂಡಗಳಲ್ಲೂ ನಮ್ಮ ಅನುಭವ ಮತ್ತು ನಮ್ಮ ಸಾಮರ್ಥ್ಯವನ್ನು ನಾವು ನಮ್ಮ ಪಾಲುದಾರ ರಾಷ್ಟ್ರಗಳೊಂದಿಗೆ ಸಂತೋಷವಾಗಿ ಹಂಚಿಕೊಳ್ಳುತ್ತಿರುವುದು. ತವರಿನಲ್ಲಾಗಲೀ ಅಥವಾ ವಿದೇಶದಲ್ಲೇ ಆಗಲಿ, ದೇಶೀಯ ನಡೆಯಲ್ಲಿ ಮತ್ತು ವಿದೇಶೀ ನೀತಿಯಲ್ಲಿ, ನಾವು ಭಾರತದ ಅನನ್ಯತೆಯಲ್ಲಿ ಸದಾ ಪ್ರಜ್ಞಾಪೂರ್ವಕವಾಗಿರುತ್ತೇವೆ.
20. ನಮ್ಮದು ಯುವಜನರ ದೇಶ, ನಮ್ಮ ಸಮಾಜ ರೂಪಿಸುವಲ್ಲಿ ಯುವಜನರ ಪಾತ್ರ ಹೆಚ್ಚಿದೆ. ನಮ್ಮ ಯುವಜನರ ಚೈತನ್ಯವನ್ನು ನಾವು ಹಲವು ದಿಕ್ಕುಗಳಲ್ಲಿ ಹರಿಸಿದ್ದೇವೆ - ಶ್ರೇಷ್ಠತೆಯ ಅನ್ವೇಷಣೆಯಲ್ಲಿ ಕ್ರೀಡೆಯಿಂದ ವಿಜ್ಞಾನದವರೆಗೆ, ವಿದ್ಯಾರ್ಥಿವೇತನದಿಂದ ಮೃದು ಕೌಶಲ್ಯಗಳವರೆಗೆ ಹರಿಸಿದ್ದೇವೆ. ಇದು ಹೃದಯಸ್ಪರ್ಶಿ. ಅದೇನೇ ಇದ್ದರೂ, ನಮ್ಮ ಯುವಜನರು ಮತ್ತು ನಮ್ಮ ಮುಂದಿನ ಪೀಳಿಗೆಗೆ ನಾವು ಅದರಲ್ಲೂ ಶಾಲಾ ಕೊಠಡಿಯಲ್ಲಿ ನೀಡುವ ಬಹುದೊಡ್ಡ ಉಡುಗೊರೆ ಎಂದರೆ, ಕುತೂಹಲಭರಿತ ಸಂಸ್ಕೃತಿಯನ್ನು ಸಾಂಸ್ಥಿಕಗೊಳಿಸಿ ಪ್ರೋತ್ಸಾಹಿಸುವುದಾಗಿದೆ. ನಾವು ನಮ್ಮ ಮಕ್ಕಳ ಮಾತೂ ಆಲಿಸೋಣ – ಅವರಿಂದ ನಾವು ಭವಿತವ್ಯದ ನೋಟವನ್ನು ಕಾಣೋಣ.
- ನಾನು ಈ ಕೆಳಗಿನ ಮಾತುಗಳನ್ನು ವಿಶ್ವಾಸಭರಿತವಾಗಿ ಮತ್ತು ನಂಬಿಕೆಯಿಂದ ಹೇಳುತ್ತೇನೆ - ಭಾರತ ದುರ್ಬಲರ ಧ್ವನಿ ಆಲಿಸುವುದರಲ್ಲಿ ಎಂದಿಗೂ ತನ್ನ ಸಾಮರ್ಥ್ಯ ಕಳೆದುಕೊಳ್ಳುವುದಿಲ್ಲ; ಅದು ತನ್ನ ಪುರಾತನ ಆದರ್ಶಗಳ ದೃಷ್ಟಿಯನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ; ಅದು ತನ್ನ ಸಾಹಸ ಪ್ರಜ್ಞೆ ಮತ್ತು ನ್ಯಾಯ ಸಮ್ಮತ ಪ್ರಜ್ಞೆಯನ್ನು ಎಂದಿಗೂ ಮರೆಯುವುದಿಲ್ಲ. ನಾವು ಭಾರತೀಯರು, ಚಂದ್ರ ಮತ್ತು ಮಂಗಳನ ಅನ್ವೇಷಣೆ ಮಾಡುತ್ತಿರುವ ಧೈರ್ಯಶಾಲಿಗಳು. ನಮ್ಮ ಭೂಮಿಯ ಮೇಲಿರುವ ಪ್ರತಿ ನಾಲ್ಕು ಹುಲಿಗಳ ಪೈಕಿ ಮೂರು ಹುಲಿಗಳಿಗೆ ಅಕ್ಕರೆಯ ನೆಲೆ ನೀಡಿರುವ ಜನ ನಾವು, ಇದು ಪ್ರಕೃತಿಗೆ ಮತ್ತು ಸಕಲ ಜೀವರಾಶಿಗಳಿಗೆ ಒತ್ತು ನೀಡುವ ಭಾರತೀಯತೆಯ ವೈಶಿಷ್ಟ್ಯ.
22. ನೂರು ವರ್ಷಗಳ ಹಿಂದೆ, ಸ್ಫೂರ್ತಿದಾಯಕ ಕವಿ ಸುಬ್ರಮಣಿಯನ್ ಭಾರತಿ ಅವರು ನಮ್ಮ ಸ್ವಾತಂತ್ರ್ಯ ಚಳವಳಿಗೆ ಮತ್ತು ಅದರ ವಿಸ್ತರಿತ ಗುರಿಗಳಿಗೆ ಈ ಕೆಳಗಿನ ಸಾಲುಗಳ ಮೂಲಕ ತಮಿಳಿನಲ್ಲಿ ಒಂದು ಧ್ವನಿ ನೀಡಿದ್ದಾರೆ.: [I QUOTE]
ಮಂದರಮ್ ಕಾರ್ಪೊಮ್, ವಿನಯ ತಂದರಮ್ ಕಾರ್ಪೊಮ್
ವಾನಯ ಅಲಪ್ಪೋಮ್, ಕಡಲ ಮೀನಯ ಅಲಪ್ಪೊಮ್
ಚಂದಿರ ಅ ಮಂಡಲತು, ಇಯಲ ಕಂಡು ತೇಲಿವೋಮ್
ಸಂದಿ, ತೇರುಪೆರುಕ್ಕುಮ್ ಸಾತಿರಮ್ ಕರ್ಪೂಮ್
ಇದನ್ನು ಹೀಗೆ ವ್ಯಾಖ್ಯಾನಿಸಬಹುದು: [I QUOTE]
ನಾವು ಶಾಸನ ಮತ್ತು ವಿಜ್ಞಾನ ಎರಡನ್ನೂ ಕಲಿಯುತ್ತೇವೆ
ನಾವು ಸ್ವರ್ಗ ಮತ್ತು ಸಾಗರಗಳೆರಡನ್ನೂ ಅನ್ವೇಷಿಸುತ್ತೇವೆ
ನಾವು ಚಂದ್ರನ ರಹಸ್ಯಗಳನ್ನು ಬಿಚ್ಚಿಡುತ್ತೇವೆ
ಮತ್ತು ನಾವು ನಮ್ಮ ಬೀದಿಗಳನ್ನು ಸಹ ಸ್ವಚ್ಛಗೊಳಿಸುತ್ತೇವೆ
[UNQUOTE]
ದೇಶವಾಸಿಗಳೇ,
23. ಆ ಆದರ್ಶಗಳು, ಕೇಳುವ ಮತ್ತು ಕಲಿಯುವ ಮತ್ತು ಉತ್ತಮರಾಗುವ ಆ ತುಡಿತ, ಆ ಕುತೂಹಲ ಮತ್ತು ಸಹೋದರತ್ವ ಶಾಶ್ವತವಾಗಿ ನಮ್ಮೊಂದಿಗೆ ಸದಾ ಇರಲಿ, ಇದು ನಮ್ಮನ್ನು ಸದಾ ಹರಸಲಿ ಮತ್ತು ಅದು ಭಾರತವನ್ನು ಸದಾ ಹರಸಲಿ.
24. ಇದರೊಂದಿಗೆ ನಾನು ಮತ್ತೊಮ್ಮೆ ನಿಮಗೂ ನಿಮ್ಮ ಕುಟುಂಬದವರಿಗೂ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಶುಭ ಕೋರುತ್ತೇನೆ.
ಧನ್ಯವಾದಗಳು
ಜೈಹಿಂದ್!
(Release ID: 1582048)
Visitor Counter : 390