ಪ್ರಧಾನ ಮಂತ್ರಿಯವರ ಕಛೇರಿ

ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆಗೆ ಪ್ರಧಾನ ಮಂತ್ರಿ ಸ್ವಾಗತ

Posted On: 19 JUN 2019 11:55AM by PIB Bengaluru

ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆಗೆ ಪ್ರಧಾನ ಮಂತ್ರಿ ಸ್ವಾಗತ

 

ಹದಿನೇಳನೇ ಲೋಕಸಭೆಗೆ ಸ್ಪೀಕರ್ ಆಗಿ ಶ್ರೀ ಓಂ ಬಿರ್ಲಾ ಅವರು ಸದನದ ಅತ್ಯುನ್ನತ ಸಂಪ್ರದಾಯದನ್ವಯ  ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.

ಲೋಕಸಭೆಯಲ್ಲಿಂದು ಶ್ರೀ ಓಂ ಬಿರ್ಲಾ ಅವರನ್ನು ಅಭಿನಂದಿಸಿ ಮಾತನಾಡಿದ ಪ್ರಧಾನ ಮಂತ್ರಿ ಅವರು ಇಂತಹ ಗೌರವಾನ್ವಿತ ವ್ಯಕ್ತಿಯನ್ನು ಸದನದ ಸ್ಪೀಕರ್ ಆಗಿ ಹೊಂದಿರುವುದು ಎಲ್ಲಾ ಸದಸ್ಯರಿಗೆ ಹೆಮ್ಮೆಯ ಸಂದರ್ಭ ಎಂದರು.

ಹಲವಾರು ವರ್ಷಗಳಿಂದ ಶ್ರೀ ಓಂ ಬಿರ್ಲಾ ಅವರು ಸಾರ್ವಜನಿಕ ಜೀವನದಲ್ಲಿದ್ದಾರೆ. ವಿದ್ಯಾರ್ಥಿ ಜೀವನದಿಂದ ಆರಂಭಗೊಂಡು ನಿರಂತರವಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ರಾಜಸ್ತಾನದ ಕೋಟಾ ಕ್ಷೇತ್ರದ ಒಟ್ಟು ಅಭಿವೃದ್ದಿ ಮತ್ತು ಅದರ ಪರಿವರ್ತನೆಯಲ್ಲಿ ಓಂ ಬಿರ್ಲಾ ಅವರು ವಹಿಸಿದ ಪಾತ್ರವನ್ನು ಕೊಂಡಾಡಿದರು.

ಹೊಸದಾಗಿ ಆಯ್ಕೆಯಾದ ಸ್ಪೀಕರ್ ಜೊತೆಗಿನ ತಮ್ಮ ಧೀರ್ಘಕಾಲೀನ ಸಂಬಂಧವನ್ನು ಪ್ರಧಾನ ಮಂತ್ರಿ ಅವ್ರು ಸ್ಮರಿಸಿಕೊಂಡರಲ್ಲದೆ ಭೂಕಂಪದ ಬಳಿಕ ಕಛ್ ಪುನರ್ನಿರ್ಮಾಣದಲ್ಲಿ ಮತ್ತು ಮಹಾಪೂರದ ಬಳಿಕ ಕೇದಾರನಾಥ ಪುನರ್ನಿರ್ಮಾಣದಲ್ಲಿ ಅವರ ಪ್ರಯತ್ನ ಮತ್ತು ಕೊಡುಗೆಗಳನ್ನು , ಅವರ ಅರ್ಪಣಾ ಭಾವವನ್ನೂ ವಿಶೇಷವಾಗಿ ಉಲ್ಲೇಖಿಸಿದರು. ಹದಿನೇಳನೇ ಲೋಕಸಭೆಗೆ ಸಹಾನುಭೂತಿ ಇರುವ ನಾಯಕರು ಸ್ಪೀಕರ್ ಆಗಿ ದೊರೆತಿದ್ದಾರೆ ಎಂದೂ ಪ್ರಧಾನ ಮಂತ್ರಿ ಹೇಳಿದರು.

ಸದನವನ್ನು ಯಶಸ್ವಿಯಾಗಿ ನಡೆಸುವಲ್ಲಿ ಸದಸ್ಯರಿಂದ ಪೂರ್ಣ ಸಹಕಾರ ಲಭಿಸುವುದಾಗಿ ಪ್ರಧಾನ ಮಂತ್ರಿ ಅವರು ಸ್ಪೀಕರ್ ಅವರಿಗೆ ಭರವಸೆ ನೀಡಿದರು.


(Release ID: 1574920)