ಸಂಪುಟ

ಜನಸ್ನೇಹಿ ಆಧಾರ್    

Posted On: 12 JUN 2019 7:51PM by PIB Bengaluru

ಜನಸ್ನೇಹಿ ಆಧಾರ್    

ಕಾನೂನಿನ ಅವಕಾಶವಿರುವುದನ್ನು ಹೊರತುಪಡಿಸಿ ಯಾವುದೇ ವ್ಯಕ್ತಿ ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಲ್ಲ.  ಕೆ ವೈ ಸಿ  ದಾಖಲೆಗಳಿಗಾಗಿ ಸ್ವಯಂಪ್ರೇರಿತವಾಗಿ ಆಧಾರ್ ಸಂಖ್ಯೆಯನ್ನು ನೀಡಿದರೆ ಸ್ವೀಕರಿಸಬಹುದು. ಆಧಾರ್ ಮತ್ತು ಇತರ ಕಾನೂನುಗಳು (ತಿದ್ದುಪಡಿ) ಮಸೂದೆ, 2019ಕ್ಕೆ ಸಂಪುಟ ಸಭೆಯ ಅನುಮೋದನೆ.    

 

ಆಧಾರ್ ಅನ್ನು ಜನಸ್ನೇಹಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ‘ಆಧಾರ್ ಮತ್ತು ಇತರ ಕಾನೂನುಗಳು (ತಿದ್ದುಪಡಿ) ಮಸೂದೆ, 2019ಕ್ಕೆ ಅನುಮೋದನೆ ನೀಡಿದೆ. ಇದು ಆಧಾರ್ ಮತ್ತು ಇತರ ಕಾನೂನುಗಳು (ತಿದ್ದುಪಡಿ) ಸುಗ್ರೀವಾಜ್ಞೆ, 2019ರ ಬದಲಿಗೆ ಬರಲಿದೆ . ಮಾರ್ಚ್ 2, 2019ರಂದು ರಾಷ್ಟ್ರಪತಿಯವರು ಹೊರಡಿಸಿದ್ದ ಸುಗ್ರೀವಾಜ್ಞೆಯಲ್ಲಿ ಪ್ರಸ್ತಾವಿಸಿದ್ದ ತಿದ್ದುಪಡಿಗಳೇ ಮಸೂದೆಯಲ್ಲಿವೆ. ಮಸೂದೆಯು ಮುಂಬರುವ ಸಂಸತ್ ಅಧಿವೆಶನದಲ್ಲಿ ಮಂಡನೆಯಾಗಲಿದೆ.

 

ಈ ತೀರ್ಮಾನವು ಆಧಾರ್ ಅನ್ನು ಜನಸ್ನೇಹಿ ಹಾಗೂ ನಾಗರೀಕ ಕೇಂದ್ರಿತವನ್ನಾಗಿಸಲು ನೆರವಾಗಲಿದೆ.

 

ಪರಿಣಾಮ:

·        ಈ ನಿರ್ಧಾರದಿಂದಾಗಿ ಆಧಾರ್ ದುರ್ಬಳಕೆಯನ್ನು ತಡೆಗಟ್ಟಿ, ಸಾರ್ವಜನಿಕ ಹಿತಾಸಕ್ತಿಗಾಗಿ ಕೆಲಸ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಕ್ಕೆ ಹೆಚ್ಚಿನ ಬಲ ಬರುತ್ತದೆ.

 

·        ಈ ತಿದ್ದುಪಡಿಯಿಂದಾಗಿ ಸಂಸತ್ತಿನಲ್ಲಿ ರೂಪಿತವಾದ ಕಾನೂನು ನೀಡುವ ಅವಕಾಶವನ್ನು ಹೊರತುಪಡಿಸಿ ಬೇರೆ ಯಾವುದೇ ಸಂದರ್ಭದಲ್ಲೂ ಯಾವುದೇ ವ್ಯಕ್ತಿಯನ್ನೂ ಪುರಾವೆಗಾಗಿ ಅಥವಾ ಗುರುತಿನ ದೃಢೀಕರಣಕ್ಕಾಗಿ ಆಧಾರ್ ಸಂಖ್ಯೆಯನ್ನು ನೀಡುವಂತೆ ಕೇಳುವುದು ಕಡ್ಡಾಯವಲ್ಲ.

 

·        ಸಾರ್ವಜನಿಕರ ಅನುಕೂಲಕ್ಕಾಗಿ ಬ್ಯಾಂಕ್ ಖಾತೆಗಳನ್ನು ತೆರೆಯುವಾಗ ಆಧಾರ್ ಸಂಖ್ಯೆಯನ್ನು ಕೆ ವೈ ಸಿ ದಾಖಲೆಯಾಗಿ ಸ್ವಯಂಪ್ರೇರಿತವಾಗಿ ನೀಡಿದರೆ ಬಳಸಿಕೊಳ್ಳಲು ತಿದ್ದುಪಡಿಯಲ್ಲಿ ಅವಕಾಶ ನೀಡಲಾಗಿದೆ. ಈ ಅವಕಾಶವನ್ನು 1885ರ ಟೆಲಿಗ್ರಾಫ್ ಕಾನೂನು ಮತ್ತು 2002ರ ಅಕ್ರಮ ಹಣ ಸಾಗಣೆ ತಡೆಗಟ್ಟುವ ಕಾನೂನಿನನಡಿಯಲ್ಲಿ ನೀಡಲಾಗಿದೆ.

 

ವಿವರಗಳು:

ತಿದ್ದುಪಡಿಗಳ ಪ್ರಮುಖ ಅಂಶಗಳು ಹೀಗಿವೆ:

 

·        ಆಧಾರ್ ಸಂಖ್ಯೆಯನ್ನು ಹೊಂದಿರುವವರ ಒಪ್ಪಿಗೆಯೊಂದಿಗೆ ದೃಢೀಕರಣ ಅಥವಾ ಆಫ್ ಲೈನ್ ಪರಿಶೀಲನೆ ಮೂಲಕ ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಆಧಾರ್ ಸಂಖ್ಯೆಯ ಸ್ವಯಂಪ್ರೇರಿತ ಬಳಕೆಗೆ ಅವಕಾಶ ಒದಗಿಸುತ್ತದೆ.

 

·        ಹನ್ನೆರಡು ಅಂಕಿಯ ಆಧಾರ್ ಸಂಖ್ಯೆ ಮತ್ತು ವ್ಯಕ್ತಿಯ ನಿಜವಾದ ಆಧಾರ್ ಸಂಖ್ಯೆಯನ್ನು ರಹಸ್ಯವಾಗಿಡಲು ಅದರ ಪರ್ಯಾಯ ವರ್ಚುವಲ್ ಗುರುತನ್ನು ಬಳಸುವುದು.

 

·        ಆಧಾರ್ ಸಂಖ್ಯೆ ಹೊಂದಿರುವ ಮಕ್ಕಳು ಹದಿನೆಂಟು ವರ್ಷಗಳ ವಯಸ್ಸಿನಲ್ಲಿ ತಮ್ಮ ಆಧಾರ್ ಸಂಖ್ಯೆಯನ್ನು ರದ್ದುಗೊಳಿಸುವ  ಆಯ್ಕೆಯನ್ನು ಹೊಂದುತ್ತಾರೆ.

 

·        ಪ್ರಾಧಿಕಾರವು ನಿಗದಿಪಡಿಸಿದ ಗೌಪ್ಯತೆ ಮತ್ತು ಭದ್ರತೆಯ ಮಾನದಂಡಗಳಿಗೆ ಅನುಸಾರವಾಗಿ ಮಾತ್ರ ದೃಢೀಕರಣವನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ. ಸಂಸತ್ತು ರೂಪಿಸಿದ ಯಾವುದೇ ಕಾನೂನಿನ ಅಡಿಯಲ್ಲಿ ಅಥವಾ ರಾಷ್ಟ್ರದ ಹಿತಾಸಕ್ತಿಯನ್ನು ಹೊಂದಿರುವುದೆಂದು ಕೇಂದ್ರ ಸರ್ಕಾರದಿಂದ ಸೂಚಿಸಲಾಗುವ ಸಂದರ್ಭದಲ್ಲಿ ದೃಢೀಕರಣಕ್ಕೆ ಅನುಮತಿಯಿದೆ.

 

·        1885 ರ ಟೆಲಿಗ್ರಾಫ್ ಕಾಯಿದೆ ಮತ್ತು 2002 ರ ಹಣದ ಕ್ರಮ ಸಾಗಾಟ ತಡೆಗಟ್ಟುವ ಕಾನೂನಿನ ಅಡಿಯಲ್ಲಿ ಕೆ ವೈ ಸಿ ದಾಖಲೆಯಾಗಿ ಸ್ವಯಂಪ್ರೇರಿತ ಆಧಾರದ ಮೇಲೆ ದೃಢೀಕರಣಕ್ಕಾಗಿ ಆಧಾರ್ ಸಂಖ್ಯೆಯ ಬಳಕೆಗೆ ಅನುಮತಿಯಿದೆ.

 

·        ಖಾಸಗಿ ಸಂಸ್ಥೆಗಳಿಂದ ಆಧಾರ್ ಬಳಕೆಗೆ ಸಂಬಂಧಿಸಿದಂತೆ ಆಧಾರ್ ಕಾಯಿದೆಯ 57 ನೇ ವಿಭಾಗವನ್ನು ಕೈಬಿಡಲು ಉದ್ದೇಶಿಸಲಾಗಿದೆ.

 

·        ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ  ನಿಧಿಯನ್ನು ಸ್ಥಾಪಿಸಲು ಅವಕಾಶ ಒದಗಿಸುತ್ತದೆ;

 

·        ಆಧಾರ್ ಕಾಯಿದೆಯ ಉಲ್ಲಂಘನೆ ಮತ್ತು ಆಧಾರ್ ವ್ಯವಸ್ಥೆಯಲ್ಲಿನ ನಿಬಂಧನೆಗಳ ಬಗ್ಗೆ ಸಂಬಂಧಿಸಿದಂತೆ ನಾಗರಿಕ ದಂಡಗಳಿಗೆ ಅವಕಾಶ ಒದಗಿಸುತ್ತದೆ.

 

ಹಿನ್ನೆಲೆ:

ಫೆಬ್ರವರಿ 28, 2019ರಂದು ನಡೆದ ಸಂಪುಟ ಸಭೆಯಲ್ಲಿ ಆಧಾರ್ ಮತ್ತು ಇತರ ಕಾನೂನುಗಳು (ತಿದ್ದುಪಡಿ) ಸುಗ್ರೀವಾಜ್ಞೆ, 2019ನ್ನು ಪರಿಗಣಿಸಲಾಗಿತ್ತು ಮತ್ತು ರಾಷ್ಟ್ರಪತಿಯವರು ಮಾರ್ಚ್ 2, 2019ರಂದು ಸುಗ್ರೀವಾಜ್ಞೆ ಹೊರಡಿಸಿದ್ದರು.

 

ಸುಪ್ರೀಂ ಕೋರ್ಟ್ ನ ನಿರ್ದೇಶನಗಳು ಹಾಗೂ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ (ನಿವೃತ್ತ) ಆಯೋಗದ ಶಿಫಾರಸ್ಸುಗಳ ಅನುಸಾರ ಆಧಾರ್ ಕಾನೂನನ್ನು ಬಲಪಡಿಸಲು ಆಧಾರ್ ಮತ್ತು ಇತರ ಕಾನೂನುಗಳು (ತಿದ್ದುಪಡಿ) ಸುಗ್ರೀವಾಜ್ಞೆ, 2019 ಒಂದು ಭಾಗವಾಗಿದೆ.



(Release ID: 1574233) Visitor Counter : 143