ಸಂಪುಟ

ಜಮ್ಮು ಮತ್ತು ಕಾಶ್ಮೀರದಲ್ಲಿ ಜುಲೈ 3, 2019ರಿಂದ ಆರು ತಿಂಗಳ ಕಾಲ ರಾಷ್ಟ್ರಪತಿ ಆಡಳಿತ ವಿಸ್ತರಣೆಗೆ ಸಚಿವ ಸಂಪುಟ ಅನುಮೋದನೆ.

Posted On: 12 JUN 2019 7:44PM by PIB Bengaluru

ಜಮ್ಮು ಮತ್ತು ಕಾಶ್ಮೀರದಲ್ಲಿ ಜುಲೈ 3, 2019ರಿಂದ ಆರು ತಿಂಗಳ ಕಾಲ ರಾಷ್ಟ್ರಪತಿ ಆಡಳಿತ ವಿಸ್ತರಣೆಗೆ ಸಚಿವ ಸಂಪುಟ ಅನುಮೋದನೆ.

 

ಮುಂಬರುವ  ಸಂಸತ್ ಅಧಿವೇಶನದಲ್ಲಿ ನಿರ್ಣಯ ಮಂಡನೆ

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಅಲ್ಲಿನ ರಾಜ್ಯಪಾಲರ ವರದಿಯನ್ನು ಆಧರಿಸಿ ಜುಲೈ 3, 2019ರಿಂದ ಆರು ತಿಂಗಳ ಕಾಲ ರಾಷ್ಟ್ರಪತಿ ಆಡಳಿತವನ್ನು ವಿಸ್ತರಿಸಲು ಪ್ರಧಾನಿ ಶ್ರೀ.ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಭಾರತ ಸಂವಿಧಾನದ 356(4)ನೇ ವಿಧಿಯ ಅನ್ವಯ ಈ ನಿರ್ಣಯ ಕೈಗೊಳ್ಳಲಾಗಿದೆ.

 

ಪರಿಣಾಮಗಳು:

ಈ ತೀರ್ಮಾನದಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜುಲೈ 3, 2019 ರಿಂದ ಆರು ತಿಂಗಳ ಕಾಲ ರಾಷ್ಟ್ರಪತಿ ಆಡಳಿತ ವಿಸ್ತರಣೆಯಾಗುತ್ತದೆ.

 

ಪ್ರಸಕ್ತ ರಾಷ್ಟ್ರಪತಿ ಆಡಳಿತದ ಅವಧಿಯು ಜುಲೈ 2, 2019ಕ್ಕೆ ಮುಕ್ತಾಯವಾಗುತ್ತದೆ. ಜುಲೈ 3, 2019ರಿಂದ ರಾಜ್ಯದಲ್ಲಿ ಆರು ತಿಂಗಳ ಕಾಲ ರಾಷ್ಟ್ರಪತಿ ಆಡಳಿತ ವಿಸ್ತರಿಸುವಂತೆ ರಾಜ್ಯಪಾಲರು ಶಿಫಾರಸ್ಸು ಮಾಡಿದ್ದರು.

 

ಅನುಷ್ಠಾನ:

ನಿರ್ಣಯಕ್ಕೆ ಅನುಮೋದನೆ ಪಡೆಯಲು ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಎರಡೂ ಸದನಗಳಲ್ಲಿ ಮಂಡಿಸಲಾಗುವುದು.

 

ಹಿನ್ನೆಲೆ:

ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು 20.06.2018ರಂದು ರಾಷ್ಟ್ರಪತಿಯವರ ಅನುಮತಿಯ ಮೇರೆಗೆ ಜಮ್ಮು ಮತ್ತು ಕಾಶ್ಮೀರದ ಸಂವಿಧಾನದ ಸೆಕ್ಷನ್ 92ರ ಅಡಿಯಲ್ಲಿ ಘೋಷಣೆಯೊಂದನ್ನು ಹೊರಡಿಸಿದರು. ಇದರನ್ವಯ ಸರ್ಕಾರದ ಆಡಳಿತವನ್ನು ಅವರು ವಹಿಸಿಕೊಂಡರು. ಮೊದಲು ಅಮಾನತ್ತಿನಲ್ಲಿಟ್ಟಿದ್ದ ರಾಜ್ಯ ವಿಧಾನಸಭೆಯನ್ನು ರಾಜ್ಯಪಾಲರು 21.11.2018 ರಂದು ವಿಸರ್ಜಿಸಿದ್ದರು.

 

ರಾಜ್ಯಪಾಲರು 20.06.2018 ರಂದು ಹೊರಡಿಸಿದ್ದ ಘೋಷಣೆಯು ಆರು ತಿಂಗಳ ನಂತರ 19.12.2018 ರಂದು ಕೊನೆಗೊಂಡಿತು. ಜಮ್ಮು ಮತ್ತು ಕಾಶ್ಮೀರದ ಸಂವಿಧಾನದ ಸೆಕ್ಷನ್ 92ರ ಪ್ರಕಾರ ಇಂತಹ ಘೋಷಣೆಯನ್ನು ಆರು ತಿಂಗಳ ನಂತರ ಮುಂದುವರೆಸಲು ಅವಕಾಶವಿರುವುದಿಲ್ಲ. ಹಾಗಾಗಿ ರಾಜ್ಯಪಾಲರ ಶಿಫಾರಸ್ಸು ಹಾಗೂ ರಾಜ್ಯದ ಪರಿಸ್ಥಿತಿಯನ್ನು ಆಧರಿಸಿ ರಾಷ್ಟ್ರಪತಿಯವರು ಭಾರತ ಸಂವಿಧಾನದ 356ನೇ ವಿಧಿಯನ್ವಯ ರಾಷ್ಟ್ರಪತಿ ಆಡಳಿತದ ಘೋಷಣೆ ಮಾಡಿದರು. ನಂತರ ರಾಷ್ಟ್ರಪತಿಯವರ ಘೋಷಣೆಗೆ ಅನುಮೋದನೆ ನೀಡಿದ ನಿರ್ಣಯವು ಲೋಕಸಭೆಯಲ್ಲಿ 28.12.2018 ಮತ್ತು ರಾಜ್ಯಸಭೆಯಲ್ಲಿ 03.01.2019ರಂದು ಅಂಗೀಕಾರವಾಯಿತು.

 

ಪ್ರಸಕ್ತ ಇರುವ ರಾಷ್ಟ್ರಪತಿ ಆಡಳಿತವು ಜುಲೈ 2, 2019ರಂದು ಕೊನೆಯಾಗಲಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜುಲೈ 3, 2019 ರಿಂದ ಮುಂದಿನ ಆರು ತಿಂಗಳ ಕಾಲ ವಿಸ್ತರಿಸುವಂತೆ ರಾಜ್ಯಪಾಲರು ಶಿಫಾರಸ್ಸು ಮಾಡಿದ್ದರು.(Release ID: 1574208) Visitor Counter : 154