ಪ್ರಧಾನ ಮಂತ್ರಿಯವರ ಕಛೇರಿ

ಕಾರ್ಯದರ್ಶಿಗಳ ಜೊತೆ ಪ್ರಧಾನ ಮಂತ್ರಿ ಸಂವಾದ

Posted On: 10 JUN 2019 8:52PM by PIB Bengaluru

ಕಾರ್ಯದರ್ಶಿಗಳ ಜೊತೆ ಪ್ರಧಾನ ಮಂತ್ರಿ ಸಂವಾದ

 

ಆಡಳಿತ ಪರ ಅಲೆಯ ಕೀರ್ತಿ  ಅಧಿಕಾರಿಗಳ ತಂಡಕ್ಕೆ ಸಲ್ಲಬೇಕು: ಪ್ರಧಾನ ಮಂತ್ರಿ  ಶ್ರೀ ಮೋದಿ

ಚುನಾವಣಾ ತೀರ್ಪು ಯಥಾಸ್ಥಿತಿಯನ್ನು ಬದಲಿಸುವ ಜನತೆಯ ಆಶೋತ್ತರಗಳನ್ನು ಮತ್ತು ಅವರಿಗಾಗಿ ಉತ್ತಮ ಬದುಕಿನ ನಿರೀಕ್ಷೆಯನ್ನು ಪ್ರತಿಬಿಂಬಿಸುತ್ತದೆ: ಪ್ರಧಾನ ಮಂತ್ರಿ ಶ್ರೀ ಮೋದಿ.

ಎಲ್ಲಾ ಸಚಿವಾಲಯಗಳೂ “ಜೀವಿಸಲು ಅನುಕೂಲಕರ ವಾತಾವರಣ”  ಸುಧಾರಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ  ಆದ್ಯತೆ ನೀಡಬೇಕು: ಪ್ರಧಾನ ಮಂತ್ರಿ .

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೋಕ ಕಲ್ಯಾಣ ಮಾರ್ಗದಲ್ಲಿ ಭಾರತ ಸರಕಾರದ ಎಲ್ಲಾ ಕಾರ್ಯದರ್ಶಿಗಳ ಜೊತೆ ಸಂವಾದ ನಡೆಸಿದರು.

ಕೇಂದ್ರ ಸಚಿವರಾದ ಶ್ರೀ ರಾಜ್ ನಾಥ್ ಸಿಂಗ್, ಶ್ರೀ ಅಮಿತ್ ಶಾ, ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಡಾ. ಜಿತೇಂದ್ರ ಸಿಂಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂವಾದವನ್ನು ಆರಂಭಿಸಿದ ಸಂಪುಟ ಕಾರ್ಯದರ್ಶಿ ಶ್ರೀ ಕೆ.ಪಿ.ಸಿನ್ಹಾ ಅವರು ಸರಕಾರದ ಹಿಂದಿನ ಅವಧಿಯಲ್ಲಿ ಪ್ರಧಾನ ಮಂತ್ರಿ  ಅವರು ಹೇಗೆ ನಿರ್ದೇಶಕರು/ಉಪ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳವರೆಗೂ ನೇರ ಸಂವಾದ ನಡೆಸಿರುವರೆಂಬುದನ್ನು ನೆನಪಿಸಿಕೊಂಡರು.

ಮುನ್ನೋಟವನ್ನು ಪ್ರಸ್ತುತಪಡಿಸಿದ ಸಂಪುಟ ಕಾರ್ಯದರ್ಶಿ  ಅವರು ಕಾರ್ಯದರ್ಶಿಗಳ  ವಲಯ ಗುಂಪುಗಳ ಎದುರು ಇರುವ ಎರಡು ಪ್ರಮುಖ ಕೆಲಸಗಳನ್ನು ಪ್ರಸ್ತಾಪಿಸಿದರು. (ಎ) ಪ್ರತೀ ಸಚಿವಾಲಯಕ್ಕೂ ನಿರ್ದಿಷ್ಟ ಗುರಿಗಳು ಮತ್ತು ಮೈಲಿಗಲ್ಲುಗಳನ್ನು ಸ್ಪಷ್ಟಪಡಿಸುವ ಐದು ವರ್ಷಗಳ ನೀತಿ ದಾಖಲೆ (ಬಿ) ಪ್ರತೀ ಸಚಿವಾಲಯದಲ್ಲಿಯೂ ಪ್ರಮುಖ ಪರಿಣಾಮಕಾರಿ ನಿರ್ಧಾರ, ಇದಕ್ಕೆ ಸಂಬಂಧಿಸಿದ ಮಂಜೂರಾತಿಯನ್ನು ನೂರು ದಿನಗಳ ಒಳಗೆ ಪಡೆಯುವುದು.

ಸಂವಾದದ ಸಂದರ್ಭದಲ್ಲಿ ವಿವಿಧ ಕಾರ್ಯದರ್ಶಿಗಳು ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವಿಕೆ, ಕೃಷಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ , ಮಾಹಿತಿ ತಂತ್ರಜ್ಞಾನ ಉಪಕ್ರಮಗಳು, ಶಿಕ್ಷಣ ಸುಧಾರಣೆ, ಆರೋಗ್ಯ, ಕೈಗಾರಿಕಾ ನೀತಿ, ಆರ್ಥಿಕ ಪ್ರಗತಿ, ಕೌಶಲ್ಯ ಅಭಿವೃದ್ದಿ ಇತ್ಯಾದಿ ವಿಷಯಗಳ ಬಗ್ಗೆ ತಮ್ಮ ಚಿಂತನೆ ಮತ್ತು ಆಲೋಚನೆಗಳನ್ನು ಹಂಚಿಕೊಂಡರು.

ಸಂವಾದದಲ್ಲಿ ಪ್ರಧಾನ ಮಂತ್ರಿ ಅವರು 2014 ರ ಜೂನ್ ತಿಂಗಳಲ್ಲಿ ಕಾರ್ಯದರ್ಶಿಗಳ ಜೊತೆ ತಾವು ನಡೆಸಿದ ಮೊದಲ ಸಂವಾದವನ್ನು ನೆನಪಿಸಿಕೊಂಡರು. ಇತ್ತೀಚಿನ ಸಾರ್ವತ್ರಿಕ ಚುನಾವಣೆ ಆಡಳಿತ ಪರ ಫಲಿತಾಂಶ ನೀಡಿದ್ದು, ಇದರ ಕೀರ್ತಿಯು  ಕಳೆದ ಐದು ವರ್ಶಗಳಲ್ಲಿ ಕಠಿಣ ಪರಿಶ್ರಮದೊಂದಿಗೆ ಯೋಜನೆಗಳನ್ನು ರೂಪಿಸಿ, ಅತ್ಯುತ್ತಮ ಫಲಿತಾಂಶಗಳನ್ನು ಒದಗಿಸಿದ ಅಧಿಕಾರಿಗಳ ಇಡೀಯ ತಂಡಕ್ಕೆ ಸಲ್ಲಬೇಕಾದುದು ಎಂದೂ ಅವರು ಹೇಳಿದರು. ಈ ಚುನಾವಣೆ ಧನಾತ್ಮಕ ಮತಗಳನ್ನು ಗುರುತಿಸಿದೆ, ಇದಕ್ಕೆ ಕಾರಣ ಸಾಮಾನ್ಯ ಜನತೆ ತಮ್ಮ ದೈನಂದಿನ ಜೀವನವನ್ನು ಆಧರಿಸಿ ಬೆಳೆಸಿಕೊಂಡ ಭಾವನೆ , ಮತ್ತು ವಿಶ್ವಾಸ. ಇದು ಧನಾತ್ಮಕ ಮತಗಳಾಗಿದೆ ಎಂದೂ ಅವರು ಹೇಳಿದರು. 

ಭಾರತೀಯ ಮತದಾರ ಮುಂದಿನ ಐದು ವರ್ಷಗಳ ಚಿಂತನೆಗೆ ಒಂದು ಚೌಕಟ್ಟು ರೂಪಿಸಿದ್ದಾನೆ ಮತ್ತು ಅದು ನಮ್ಮೆದುರು ಒಂದು ಅವಕಾಶವಾಗಿ ಇದೆ  ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಜನತೆಯ ಭಾರೀ ಪ್ರಮಾಣದ ನಿರೀಕ್ಷೆಗಳನ್ನು ಸವಾಲು ಎಂದು ಪರಿಗಣಿಸದೆ ಅದನ್ನೊಂದು ಅವಕಾಶವಾಗಿ ಪರಿಗಣಿಸಬೇಕು ಎಂದರು. ಚುನಾವಣಾ ತೀರ್ಪು ಯಥಾಸ್ಥಿತಿಯನ್ನು ಬದಲಿಸಲು ಜನತೆ ಹೊಂದಿರುವ  ಆಶಯ ಮತ್ತು ಆಶೋತ್ತರಗಳನ್ನು ಹಾಗು  ಅವರಿಗಾಗಿ ಉತ್ತಮ ಜೀವನವನ್ನು ಅಪೇಕ್ಷಿಸುವ ನಿರೀಕ್ಷೆಯನ್ನು ಪ್ರತಿಬಿಂಬಿಸುತ್ತದೆ ಎಂದೂ ಅವರು ಹೇಳಿದರು.

ಜನಾಂಗೀಯ ವೈವಿಧ್ಯತೆ ಮತ್ತು ವಯೋಮಾನ ಸಂಬಂಧಿತ ಜನಸಂಖ್ಯೀಯ ಲಾಭದ ಬಗ್ಗೆ  ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು ರಾಷ್ಟ್ರದ ಪ್ರಗತಿಯಲ್ಲಿ ಜನಸಂಖ್ಯೀಯ ಪ್ರಯೋಜನಗಳನ್ನು  ದಕ್ಷತೆಯಿಂದ ಬಳಸಿಕೊಳ್ಳಬೇಕು ಎಂದರು. ಕೇಂದ್ರ ಸರಕಾರದ ಪ್ರತಿಯೊಂದು ಇಲಾಖೆಯೂ, ಪ್ರತೀ ರಾಜ್ಯದ ಪ್ರತೀ ಜಿಲ್ಲೆಯೂ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದವರು ನುಡಿದರು. “ ಮೇಕ್ ಇನ್ ಇಂಡಿಯಾ” ಉಪಕ್ರಮದ ಮಹತ್ವದ ಬಗ್ಗೆ ಪ್ರಸ್ತಾಪಿಸಿದ ಅವರು ಈ ನಿಟ್ಟಿನಲ್ಲಿ ಆಗಬೇಕಾಗಿರುವ ಭೌತಿಕ ಪ್ರಗತಿಯ ಅಗತ್ಯವನ್ನೂ ಉಲ್ಲೇಖಿಸಿದರು.

’ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣ” ನಿರ್ಮಾಣ ನಿಟ್ಟಿನಲ್ಲಿ ಭಾರತದ ಪ್ರಗತಿ ಸಣ್ಣ ಉದ್ಯಮಗಳು ಮತ್ತು ವ್ಯಾಪಾರೋದ್ಯಮಿಗಳಿಗೆ ಹೆಚ್ಚಿನ ಅನುಕೂಲತೆಗಳನ್ನು ಒದಗಿಸುವಂತಾಗಬೇಕು ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಸರಕಾರದ ಪ್ರತೀ ಸಚಿವಾಲಯವೂ “ಜೀವಿಸಲು ಅನುಕೂಲಕರ ವಾತಾವರಣ” ನಿರ್ಮಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಬೇಕು ಎಂದೂ ಹೇಳಿದರು.

ಜಲ, ಮೀನುಗಾರಿಕೆ ಮತ್ತು ಪಶು ಸಂಗೋಪನೆಗಳು ಕೂಡಾ ಸರಕಾರಕ್ಕೆ ಪ್ರಮುಖ ಆದ್ಯತೆಯ ಕ್ಷೇತ್ರಗಳಾಗಿರುತ್ತವೆ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು.

ದೇಶವನ್ನು ಮುಂದೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯದರ್ಶಿಗಳಲ್ಲಿ ದೂರದೃಷ್ಟಿ, ಬದ್ದತೆ, ಮತ್ತು ಶಕ್ತಿ ಇರುವುದನ್ನು ತಾವು ಮನಗಂಡಿರುವುದಾಗಿ ಅವರು  ಇಂದಿನ ಸಂವಾದದಲ್ಲಿ ಹೇಳಿದರು. ತಂಡದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಪ್ರತೀ ಇಲಾಖೆಗಳ ದಕ್ಷತೆ ಮತ್ತು ಫಲಿತಾಂಶ ಹೆಚ್ಚಳಕ್ಕೆ ತಂತ್ರಜ್ಞಾನವನ್ನು ಬಳಸುವಂತೆ ಮನವಿ ಮಾಡಿದರು.

ಎಲ್ಲಾ ಇಲಾಖೆಗಳೂ ಬರಲಿರುವ ಸ್ವಾತಂತ್ರ್ಯದ 75  ನೇ ವರ್ಷಾಚರಣೆಯ ಸಂದರ್ಭವನ್ನು ಉತ್ತಮವಾಗಿ ಬಳಸಿಕೊಳ್ಳಬೇಕು, ಇದು ದೇಶದ ಒಳಿತಿಗೆ ಕಾಣಿಕೆಗಳನ್ನು ಕೊಡಲು ಜನತೆಗೆ ಪ್ರೇರೇಪಣೆ ನೀಡಬಲ್ಲುದು ಎಂದು ಪ್ರಧಾನ ಮಂತ್ರಿ ಹೇಳಿದರು. ಜನತೆಯ ಆಶೋತ್ತರಗಳನ್ನು ಈಡೇರಿಸಲು ಪ್ರತಿಯೊಬ್ಬರೂ ವಾಸ್ತವಾಂಶ ಅರಿತು ಶ್ರಮವಹಿಸಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.



(Release ID: 1573849) Visitor Counter : 77