ಪ್ರಧಾನ ಮಂತ್ರಿಯವರ ಕಛೇರಿ

ಅಹ್ಮದಾಬಾದ್ ಶಾಪಿಂಗ್ ಹಬ್ಬ-2019ಕ್ಕೆ ಪ್ರಧಾನ ಮಂತ್ರಿ ಚಾಲನೆ. 

Posted On: 17 JAN 2019 9:20PM by PIB Bengaluru

ಅಹ್ಮದಾಬಾದ್ ಶಾಪಿಂಗ್ ಹಬ್ಬ-2019ಕ್ಕೆ ಪ್ರಧಾನ ಮಂತ್ರಿ ಚಾಲನೆ. 

ಸರಕಾರವು ದೇಶದಲ್ಲಿ ವ್ಯಾಪಾರೋದ್ಯಮಕ್ಕೆ ಅನುಕೂಲಕರ ಪರಿಸರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಪ್ರವೃತ್ತವಾಗಿದೆ ಎನ್ನುತ್ತಾರೆ ಪ್ರಧಾನ ಮಂತ್ರಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹ್ಮದಾಬಾದಿನ ಸಾಬರಮತಿ ನದಿ ದಂಡೆಯಲ್ಲಿ ಅಹ್ಮದಾಬಾದ್ ಶಾಪಿಂಗ್ ಹಬ್ಬ-2019 ನ್ನು ಉದ್ಘಾಟಿಸಿದರು. ಗುಜರಾತಿನಾದ್ಯಂತದಿಂದ ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ಶಾಪಿಂಗ್ ಮಾಲ್ ಗಳವರೆಗೆ ಮತ್ತು ಕರಕುಶಲಗಾರರಿಂದ ಹಿಡಿದು ಹೊಟೇಲುಗಳು, ರೆಸ್ಟೋರೆಂಟ್ ಸಂಪರ್ಕಿತ ವ್ಯಾಪಾರೋದ್ಯಮಿಗಳು ಇಲ್ಲಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಉತ್ತೇಜನಕ್ಕಾಗಿ ಆಗಮಿಸಿದ್ದಾರೆ. ರೋಮಾಂಚಕ ಗುಜರಾತ್ ಶೃಂಗದ ಜೊತೆಯಲ್ಲಿ ಏಕಕಾಲಕ್ಕೆ ಇದನ್ನು ಆಯೋಜಿಸಿರುವುದರಿಂದ ಇದೊಂದು ವಿಶಿಷ್ಟ ಹಬ್ಬವಾಗಿದೆ. 

ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನ ಮಂತ್ರಿ ಅವರು ಮಾತನಾಡಿದರು. ಈ ಕಾರ್ಯಕ್ರಮವನ್ನು ಮುಕ್ತ ಕಂಠದಿಂದ ಪ್ರಶಂಶಿಸಿದ ಅವರು “ ಸಾಮಾನ್ಯವಾಗಿ ಇಂತಹ ದೊಡ್ಡ ವ್ಯಾಪಾರೋದ್ಯಮ ಮೇಳಗಳನ್ನು ನಾವು ವಿದೇಶಗಳಲ್ಲಿ ನೋಡುತ್ತಿರುತ್ತೇವೆ.ಈಗ ರೋಮಾಂಚಕ ಗುಜರಾತ್ ಜೊತೆಗೆ ಅಹ್ಮದಾಬಾದ್ ಶಾಪಿಂಗ್ ಹಬ್ಬ ಆರಂಭಗೊಂಡಿರುವುದು ಒಂದು ಶ್ಲಾಘನೀಯ ಉಪಕ್ರಮ “ ಎಂದರು. 

”ಸರಕಾರವು ದೇಶದಲ್ಲಿ ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಕಳೆದ 4 ವರ್ಷಗಳಲ್ಲಿ ಹಳೆಯ ಕಾಯ್ದೆಗಳನ್ನು ರದ್ದು ಮಾಡಲಾಗಿದೆ ಮತ್ತು ನೂರಾರು ಕಾಯ್ದೆಗಳನ್ನು ಸರಳಗೊಳಿಸಲಾಗಿದೆ” ಎಂದವರು ಹೇಳಿದರು. ಇಂತಹ ಪ್ರಯತ್ನಗಳಿಂದಾಗಿ ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣಗಳ ಪಟ್ಟಿಯಲ್ಲಿ ನಮ್ಮ ಸ್ಥಾನ 142 ರಿಂದ 77ಕ್ಕೆ ಜಿಗಿಯುವಂತಾಯಿತು “ ಎಂದವರು ಹೇಳಿದರು. “ ಸಣ್ಣ ಉದ್ಯಮಗಳಿಗೆ ಅನುಕೂಲವಾಗುವಂತೆ ಪ್ರಕ್ರಿಯೆಗಳನ್ನು ಸರಳಗೊಳಿಸುವುದಕ್ಕೆ ನಾವು ಸತತವಾಗಿ ಪ್ರಯತ್ನಿಸುತ್ತಿದ್ದೇವೆ . ನಾವು ಜಿ.ಎಸ್.ಟಿ. ಮತ್ತು ಇತರ ರಿಟರ್ನ್ಸ್ ಗಳ ಆಧಾರದಲ್ಲಿ ಸಣ್ಣ ಉದ್ಯಮಗಳಿಗೆ ಬ್ಯಾಂಕುಗಳು ಸಾಲ ನೀಡುವ ವ್ಯವಸ್ಥೆಯತ್ತ ಸಾಗುತ್ತಿದ್ದೇವೆ. ನಾವು 1 ಕೋ.ರೂ.ಗಳವರೆಗಿನ ಸಾಲಕ್ಕೆ 59 ನಿಮಿಷಗಳೊಳಗೆ ಅನುಮೋದನೆ ನೀಡುತ್ತಿದ್ದೇವೆ” ಎಂದೂ ಪ್ರಧಾನಮಂತ್ರಿ ಅವರು ಹೇಳಿದರು. 

ಇದಕ್ಕೆ ಮೊದಲು ಇಂದು ಪ್ರಧಾನ ಮಂತ್ರಿ ಅವರು ರೋಮಾಂಚಕ ಗುಜರಾತ್ ಜಾಗತಿಕ ವ್ಯಾಪಾರ ಮೇಳವನ್ನು ಗಾಂಧಿನಗರದಲ್ಲಿರುವ ಮಹಾತ್ಮಾ ಮಂದಿರ ವಸ್ತುಪ್ರದರ್ಶನ ಮತ್ತು ಸಮ್ಮೇಳನ ಕೇಂದ್ರದಲ್ಲಿ ಉದ್ಘಾಟಿಸಿದರು. ಇದರೊಂದಿಗೆ ಜನವರಿ 18-20 ರವರೆಗೆ ಗಾಂಧಿನಗರದಲ್ಲಿ ಆಯೋಜನೆಯಾಗಿರುವ ರೋಮಾಂಚಕ ಗುಜರಾತ್ ಶೃಂಗದ 9 ನೇ ಆವೃತ್ತಿಗೆ ವೇದಿಕೆ ಸಿದ್ದಗೊಂಡಿದೆ. ಈ ಶೃಂಗದಲ್ಲಿ ರಾಜ್ಯಗಳ ಮುಖ್ಯಸ್ಥರು, ಜಾಗತಿಕ ಕೈಗಾರಿಕೋದ್ಯಮದ ನಾಯಕರು, ಮತ್ತು ಚಿಂತಕರು ಪಾಲ್ಗೊಳ್ಳುತ್ತಿದ್ದಾರೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಶೃಂಗದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡುವರು. 



(Release ID: 1560680) Visitor Counter : 56