ಸಂಪುಟ
ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಅಡಿಯಲ್ಲಿ ತಮಿಳುನಾಡು ಮತ್ತು ತೆಲಂಗಾಣದಲ್ಲಿ ಎರಡು ಹೊಸ ಎ.ಐ.ಐ.ಎಂ.ಎಸ್. ಸ್ಥಾಪನೆಗೆ ಸಂಪುಟ ಅನುಮೋದನೆ.
Posted On:
17 DEC 2018 8:59PM by PIB Bengaluru
ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಅಡಿಯಲ್ಲಿ ತಮಿಳುನಾಡು ಮತ್ತು ತೆಲಂಗಾಣದಲ್ಲಿ ಎರಡು ಹೊಸ ಎ.ಐ.ಐ.ಎಂ.ಎಸ್. ಸ್ಥಾಪನೆಗೆ ಸಂಪುಟ ಅನುಮೋದನೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಂಪುಟ ಸಭೆಯು ತಮಿಳುನಾಡಿನ ಮಧುರೈಯಲ್ಲಿ 1,264 ಕೋ.ರೂ. ವೆಚ್ಚದಲ್ಲಿ ಮತ್ತು ತೆಲಂಗಾಣದ ಬೀಬಿನಗರದಲ್ಲಿ 1,028 ಕೋ.ರೂ. ವೆಚ್ಚದಲ್ಲಿ ಎರಡು ಹೊಸ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಅನುಮೋದನೆ ನೀಡಿತು. ಈ ಎ.ಐ.ಐ.ಎಂ.ಎಸ್. ಗಳನ್ನು ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನಾ (ಪಿ.ಎಂ.ಎಸ್.ಎಸ್. ವೈ) ಅಡಿಯಲ್ಲಿ ಸ್ಥಾಪಿಸಲಾಗುವುದು.
ಈ ಎರಡು ಮೇಲ್ಕಾಣಿಸಿದ ಎರಡು ಎ.ಐ.ಐ.ಎಂ.ಎಸ್.ಗಳಿಗೆ ತಲಾ ಒಂದೊಂದು ನಿರ್ದೇಶಕ ಹುದ್ದೆಯನ್ನು ಮೂಲ ವೇತನ 2,25,000 ರೂ. (ನಿಗದಿತ) ಮತ್ತು ಎನ್.ಪಿ.ಎ.(ವೇತನ + ಎನ್.ಪಿ.ಎ. ಒಟ್ಟುಗೂಡಿಸಿದಾಗ ಮೊತ್ತವು 2,37,500 ರೂ. ದಾಟದಂತಹ ) ವೇತನ ಶ್ರೇಣಿಯಲ್ಲಿ ಸೃಜಿಸಲು ಕೇಂದ್ರ ಸಂಪುಟವು ಅನುಮೋದನೆ ನೀಡಿತು.
ಲಾಭಗಳು:
· ಪ್ರತೀ ಹೊಸ ಎ.ಐ.ಐ.ಎಂ.ಎಸ್. 100 ಪದವಿ (ಎಂ.ಬಿ.ಬಿ.ಎಸ್.) ಮತ್ತು 60 ಬಿ.ಎಸ್.ಸಿ (ನರ್ಸಿಂಗ್) ಸೀಟುಗಳನ್ನು ಸೇರಿಸಲಿದೆ.
· ಪ್ರತೀ ಹೊಸ ಎ.ಐ.ಐ.ಎಂ.ಎಸ್. 15-20 ವಿಶೇಷ ತಜ್ಞತೆಯ ಇಲಾಖೆಗಳನ್ನು ಹೊಂದಿರುತ್ತದೆ.
· ಪ್ರತೀ ಹೊಸ ಎ.ಐ.ಐ.ಎಂ.ಎಸ್. ಸುಮಾರು 750 ಹಾಸಿಗೆಗಳ ಆಸ್ಪತ್ರೆಯನ್ನು ಹೊಂದಲಿದೆ.
· ಪ್ರಸ್ತುತ ಕಾರ್ಯಾಚರಿಸುತ್ತಿರುವ ಎ.ಐ.ಐ.ಎಂ.ಎಸ್. ಗಳ ಅಂಕಿ ಅಂಶಗಳ ಪ್ರಕಾರ ಪ್ರತೀ ಹೊಸ ಎ.ಐ.ಐ.ಎಂ.ಎಸ್. ದಿನ ನಿತ್ಯ 1500 ಹೊರ ರೋಗಿಗಳ ಅಗತ್ಯವನ್ನು ಈಡೇರಿಸಲಿದೆ ಮತ್ತು ತಿಂಗಳಿಗೆ 1000 ಒಳ ರೋಗಿಗಳ ಆವಶ್ಯಕತೆಯನ್ನು ಪೂರೈಸಲಿದೆ.
ಯೋಜನೆಯ ವಿವರಗಳು:
ಹೊಸ ಎ.ಐ.ಐ.ಎಂ.ಎಸ್. ಸ್ಥಾಪನೆಯಲ್ಲಿ ಆಸ್ಪತ್ರೆ ನಿರ್ಮಾಣ, ವೈದ್ಯಕೀಯ ಮತ್ತು ನರ್ಸಿಂಗ್ ಕೋರ್ಸುಗಳ ಬೋಧನಾ ಬ್ಲಾಕ್, ನಿವಾಸಿ ಸಂಕೀರ್ಣ, ಮತ್ತು ಪೂರಕ ಸವಲತ್ತುಗಳು/ಸೇವೆಗಳು ಹೊಸದಿಲ್ಲಿಯಲ್ಲಿರುವ ಎ.ಐ.ಐ.ಎಂ.ಎಸ್. ಮತ್ತು ಪಿ.ಎಂ.ಎಸ್.ಎಸ್.ವೈ. ಹಂತ 1 ರಡಿಯಲ್ಲಿ ಕೈಗೆತ್ತಿಕೊಳ್ಳಲಾದ ಇತರ ಆರು ಹೊಸ ಎ.ಐ.ಐ.ಎಂ.ಎಸ್. ಗಳ ಮಾದರಿಯಲ್ಲಿ ಇರುತ್ತವೆ. ಗುಣಮಟ್ಟದ ತೃತೀಯ ಹಂತದ ಆರೋಗ್ಯ ಸೇವೆ, ವೈದ್ಯಕೀಯ ಶಿಕ್ಷಣ, ನರ್ಸಿಂಗ್ ಶಿಕ್ಷಣ ಮತ್ತು ಸಂಶೋಧನೆ ಅವಕಾಶಗಳನ್ನು ಆ ಪ್ರಾದೇಶಿಕ ವಲಯದಲ್ಲಿ ಒದಗಿಸಿಕೊಡುವುದು ರಾಷ್ಟ್ರೀಯ ಮಹತ್ವದ ಸಂಸ್ಥೆಗಳಾದ ಎ.ಐ.ಐ.ಎಂ.ಎಸ್. ಗಳ ಪ್ರಮುಖ ಧ್ಯೇಯೋದ್ದೇಶ.
ಪ್ರಸ್ತಾವಿತ ಸಂಸ್ಥೆಯು ತುರ್ತು ಚಿಕಿತ್ಸಾ/ ಟ್ರೂಮಾ ಹಾಸಿಗೆಗಳು, ಆಯುಷ್ ಹಾಸಿಗೆಗಳು, ಖಾಸಗಿ ಹಾಸಿಗೆಗಳು ಮತ್ತು ಐ.ಸಿ.ಯು. ವಿಶೇಷ ಚಿಕಿತ್ಸಾ ಮತ್ತು ಸೂಪರ್ ಸ್ಪೆಷಾಲಿಟಿ ಹಾಸಿಗೆಗಳನ್ನು ಒಳಗೊಂಡ ಆಸ್ಪತ್ರೆಯನ್ನು ಹೊಂದಿರುತ್ತದೆ. ಇದರ ಜೊತೆಗೆ ವೈದ್ಯಕೀಯ ಕಾಲೇಜು, ಆಯುಷ್ ಬ್ಲಾಕ್, ಸಭಾಂಗಣ, ರಾತ್ರಿ ತಂಗುವಿಕೆ ವ್ಯವಸ್ಥೆ, ಅತಿಥಿ ಗೃಹ, ಹಾಸ್ಟೆಲ್, ನಿವಾಸೀ ಸೌಲಭ್ಯಗಳೂ ಇರುತ್ತವೆ. ಹೊಸ ಎ.ಐ.ಐ.ಎಂ.ಎಸ್.ಗಳ ಸ್ಥಾಪನೆಯಿಂದ ಆರು ಹೊಸ ಎ.ಐ.ಐ.ಎಂ.ಎಸ್. ಗಳ ಮಾದರಿಯಲ್ಲಿಯೇ ಅವುಗಳ ನಿರ್ವಹಣೆ ಮತ್ತು ಮುಂದುವರಿಕೆಗೆ ಬಂಡವಾಳ ಆಸ್ತಿ ನಿರ್ಮಾಣವಾಗಲಿದ್ದು, ಅವಶ್ಯ ವಿಶೇಷ ತಜ್ಞತೆಯ ಮಾನವ ಸಂಪನ್ಮೂಲವೂ ರೂಪುಗೊಳ್ಳುತ್ತದೆ. ಈ ಸಂಸ್ಥೆಗಳ ಆವರ್ತ ವೆಚ್ಚವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪಿ.ಎಂ.ಎಸ್.ಎಸ್.ವೈ.ಯ ಯೋಜನಾ ಅಂದಾಜು ಶೀರ್ಷಿಕೆಯಡಿ ಅನುದಾನ ಮೂಲಕ ಭರಿಸಲಾಗುವುದು.
ತಮಿಳುನಾಡಿನ ಹೊಸ ಎ.ಐ.ಐ.ಎಂ.ಎಸ್. ಮತ್ತು ತೆಲಂಗಾಣದ ಎ.ಐ.ಐ.ಎಂ.ಎಸ್. ಸ್ಥಾಪನೆಗೆ 45 ತಿಂಗಳ ಕಾಲ ಮಿತಿಯನ್ನು ಹಾಕಿಕೊಳ್ಳಲಾಗಿದೆ. ಇದು 10 ತಿಂಗಳ ನಿರ್ಮಾಣ ಪೂರ್ವ ಹಂತ , 32 ತಿಂಗಳ ನಿರ್ಮಾಣ ಹಂತ ಮತ್ತು 3 ತಿಂಗಳ ಸ್ಥಿರತೆ/ಕಾರ್ಯಾಚರಣೆಯ ಹಂತಗಳನ್ನು ಒಳಗೊಂಡಿದೆ.ಹೊಸ ಎ.ಐ.ಐ.ಎಂ.ಎಸ್. ಗಳ ನಿರ್ಮಾಣ ವೆಚ್ಚ ಮತ್ತು ನಿರ್ವಹಣಾ ವೆಚ್ಚಗಳನ್ನು ಕೇಂದ್ರ ಸರಕಾರವು ಪಿ.ಎಂ.ಎಸ್.ಎಸ್.ವೈ. ಅಡಿಯಲ್ಲಿ ಭರಿಸುತ್ತದೆ.
ಪರಿಣಾಮ:
ಹೊಸ ಎ.ಐ.ಐ.ಎಂ.ಎಸ್.ಗಳ ಸ್ಥಾಪನೆ ಆ ವಲಯದಲ್ಲಿ ಆರೋಗ್ಯ ಶಿಕ್ಷಣ ಮತ್ತು ತರಬೇತಿಯನ್ನು ಪರಿವರ್ತಿಸುವುದು ಮಾತ್ರವಲ್ಲ ಆರೋಗ್ಯ ರಕ್ಷಣಾ ವೃತ್ತಿಪರರ ಕೊರತೆಯನ್ನೂ ನೀಗಿಸಲಿದೆ. ಹೊಸ ಎ.ಐ.ಐ.ಎಂ.ಎಸ್.ಗಳ ಸ್ಥಾಪನೆಯಿಂದ ಆ ಪ್ರಾದೇಶಿಕ ವಲಯದಲ್ಲಿ ಜನರಿಗೆ ಸೂಪರ್ ಸ್ಪೆಷಾಲಿಟಿ ಆರೋಗ್ಯ ಶುಶ್ರೂಷಾ ವ್ಯವಸ್ಥೆಯನ್ನು ಒದಗಿಸುವುದಲ್ಲದೆ ಜೊತೆಗೆ ವೈದ್ಯರ ದೊಡ್ಡ ಸಮೂಹ ಮತ್ತು ಇತರ ಆರೋಗ್ಯ ಕಾರ್ಯಕರ್ತರ ಸಮೂಹವನ್ನು ಸೃಷ್ಟಿಸಲಿದೆ. ಇದು ಆ ಪ್ರದೇಶದಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ನಿನಡಿ (ಎನ್.ಎಚ್.ಎಂ.) ಕಲ್ಪಿಸಬಹುದಾದ ಪ್ರಾಥಮಿಕ ಮತ್ತು ಎರಡನೆ ಹಂತದ ಸಂಸ್ಥೆಗಳಿಗೆ/ಸೌಲಭ್ಯಗಳಿಗೆ ಮಾನವ ಸಂಪನ್ಮೂಲ ಒದಗಿಸಲು ಸಹಕಾರಿಯಾಗಲಿದೆ. ಹೊಸ ಎ.ಐ.ಐ.ಎಂ.ಎಸ್. ಗಳ ನಿರ್ಮಾಣ ಕಾರ್ಯಕ್ಕೆ ಹಣಕಾಸನ್ನು ಪೂರ್ಣವಾಗಿ ಕೇಂದ್ರ ಸರಕಾರ ಒದಗಿಸಲಿದೆ. ಹೊಸ ಎ.ಐ.ಐ.ಎಂ.ಎಸ್. ಗಳ ಕಾರ್ಯಾಚರಣಾ ಮತ್ತು ನಿರ್ವಹಣಾ ವೆಚ್ಚವನ್ನೂ ಸಂಪೂರ್ಣವಾಗಿ ಕೇಂದ್ರ ಸರಕಾರವೇ ಭರಿಸಲಿದೆ.
ಉದ್ಯೋಗ ಸೃಷ್ಟಿ:
ರಾಜ್ಯಗಳಲ್ಲಿ ಹೊಸ ಎ.ಐ.ಐ.ಎಂ.ಎಸ್.ಗಳ ಸ್ಥಾಪನೆಯಿಂದ ಪ್ರತೀ ಎ.ಐ.ಐ.ಎಂ.ಎಸ್.ಗಳಲ್ಲಿ ವಿವಿಧ ಬೋಧಕ ಮತ್ತು ಬೋಧಕೇತರ ವರ್ಗದಲ್ಲಿ 3000 ಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಜೊತೆಗೆ ಸೌಕರ್ಯಗಳು ಮತ್ತು ಸೇವೆಗಳಿಂದಾಗಿ ಶಾಪಿಂಗ್ ಕೇಂದ್ರ, ಕ್ಯಾಂಟೀನ್ ಇತ್ಯಾದಿಗಳು ಈ ಹೊಸ ಎ.ಐ.ಐ.ಎಂ.ಎಸ್. ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದು ಪರೋಕ್ಷ ಉದ್ಯೋಗಗಳ ಸೃಷ್ಟಿಯಾಗಲಿದೆ.
ವಿವಿಧ ಹೊಸ ಎ.ಐ.ಐ.ಎಂ.ಎಸ್. ಗಳಿಗೆ ಭೌತಿಕ ಮೂಲಸೌಕರ್ಯ ಒದಗಿಸುವ ನಿರ್ಮಾಣ ಕಾರ್ಯ ಚಟುವಟಿಕೆ ನಿರ್ಮಾಣ ಹಂತದಲ್ಲಿಯೂ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.
ಹಿನ್ನೆಲೆ:
ಕೇಂದ್ರೀಯ ವಲಯದ ಯೋಜನೆಯಾದ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನಾ (ಪಿ.ಎಂ.ಎಸ್.ಎಸ್.ವೈ.) ದೇಶದ ವಿವಿಧ ಭಾಗಗಳಲ್ಲಿ ಕೈಗೆಟಕುವ ದರದಲ್ಲಿ ತೃತೀಯ ಹಂತದ ಆರೋಗ್ಯ ಸೇವೆಗಳ ಲಭ್ಯತೆಯಲ್ಲಿರುವ ಅಸಮಾನತೆಯನ್ನು ಸರಿಪಡಿಸುವ ಉದ್ದೇಶವನ್ನು ಮತ್ತು ನಿರ್ದಿಷ್ಟವಾಗಿ ಹೆಚ್ಚಿನ ಸವಲತ್ತುಗಳಿಲ್ಲದ ರಾಜ್ಯಗಳಲ್ಲಿ ಗುಣ ಮಟ್ಟದ ವೈದ್ಯ ಶಿಕ್ಷಣ ಸೌಲಭ್ಯಗಳನ್ನು ಒದಗಿಸುವ ಇರಾದೆಯನ್ನು ಹೊಂದಿದೆ.
ತಮಿಳುನಾಡಿನಲ್ಲಿ ಎ.ಐ.ಐ.ಎಂ.ಎಸ್. ಸ್ಥಾಪನೆಯನ್ನು 2015-16 ರ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರು ಘೋಷಿಸಿದ್ದರು. ಮತ್ತು ತೆಲಂಗಾಣದಲ್ಲಿ ಎ.ಐ.ಐ.ಎಂ.ಎಸ್. ಸ್ಥಾಪನೆಗೆ ಸಂಬಂಧಿಸಿ 2018 ರ ಏಪ್ರಿಲ್ ತಿಂಗಳಲ್ಲಿ ಹಣಕಾಸು ಸಚಿವಾಲಯವು ತನ್ನ ತಾತ್ವಿಕ ಅನುಮೋದನೆಯನ್ನು ತಿಳಿಸಿತ್ತು.
(Release ID :186520)
(Release ID: 1556346)
Visitor Counter : 123