ಸಂಪುಟ

ಅಂತಾರಾಷ್ಟ್ರೀಯ ಎನರ್ಜಿ ಏಜೆನ್ಸಿಅಡಿಯಲ್ಲಿ ಅತ್ಯಾಧುನಿಕ ಮೋಟಾರು ಇಂಧನ ತಂತ್ರಜ್ಞಾನ ಸಹಭಾಗಿತ್ವ ಕಾರ್ಯಕ್ರಮದ ಸದಸ್ಯ ರಾಷ್ಟ್ರವಾಗಿ ಭಾರತ ಸೇರ್ಪಡೆಯಾಗಿದ್ದಕ್ಕೆ ಸಂಪುಟ ಅನುಮೋದನೆ

Posted On: 08 NOV 2018 8:40PM by PIB Bengaluru

ಅಂತಾರಾಷ್ಟ್ರೀಯ ಎನರ್ಜಿ ಏಜೆನ್ಸಿಅಡಿಯಲ್ಲಿ ಅತ್ಯಾಧುನಿಕ ಮೋಟಾರು ಇಂಧನ ತಂತ್ರಜ್ಞಾನ ಸಹಭಾಗಿತ್ವ ಕಾರ್ಯಕ್ರಮದ ಸದಸ್ಯ ರಾಷ್ಟ್ರವಾಗಿ ಭಾರತ ಸೇರ್ಪಡೆಯಾಗಿದ್ದಕ್ಕೆ ಸಂಪುಟ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ  ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅಂತಾರಾಷ್ಟ್ರೀಯ ಎನರ್ಜಿ ಏಜೆನ್ಸಿ(ಐಇಎ) ಅಡಿಯಲ್ಲಿ ಅತ್ಯಾಧುನಿಕ ಮೋಟಾರು ಇಂಧನ ತಂತ್ರಜ್ಞಾನ ಸಹಭಾಗಿತ್ವ ಕಾರ್ಯಕ್ರಮ(ಎಎಂಎಫ್ ಟಿಸಿಪಿ) ಸದಸ್ಯ ರಾಷ್ಟ್ರವಾಗಿ ಭಾರತ 2018ರ ಮೇ 9ರಂದು ಸೇರ್ಪಡೆಯಾಗಿದ್ದಕ್ಕೆ ಅನುಮೋದನೆ ನೀಡಲಾಯಿತು. ಎಎಂಎಫ್ ಟಿಸಿಪಿ ಅಂತಾರಾಷ್ಟ್ರೀಯ ಎನರ್ಜಿ ಏಜೆನ್ಸಿ(ಐಇಎ) ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ. 2017ರ ಮಾರ್ಚ್ 30ರಿಂದ ಭಾರತ ಅದರೊಂದಿಗೆ ಸಹಯೋಗ ಹೊಂದಿದೆ.

 

ವಿವರಗಳು :

 

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಎಎಂಎಫ್ ಟಿಸಿಪಿ ಸೇರ್ಪಡೆಯಾಗಿದ್ದರ ಪ್ರಾಥಮಿಕ ಗುರಿ ಎಂದರೆ ಸಾರಿಗೆ ವಲಯದಲ್ಲಿ ಹೆಚ್ಚಿನ ಪರಿಣಾಮಕಾರಿ ಇಂಧನ ಬಳಕೆ ಮತ್ತು ಮಾಲಿನ್ಯವನ್ನು ತಗ್ಗಿಸಲು ಅತ್ಯಾಧುನಿಕ ಮೋಟಾರು ಇಂಧನ/ಪರ್ಯಾಯ ಇಂಧನಗಳ ಮಾರುಕಟ್ಟೆಗೆ ಸಹಕರಿಸುವುದು. ಎಎಂಎಫ್ ಟಿಸಿಪಿ ಇಂಧನ ಅನ್ವೇಷಣೆಗೆ ಅವಕಾಶಗಳನ್ನು ಒದಗಿಸುವ ಜೊತೆಗೆ ಸಾರಿಗೆ ವಲಯದಲ್ಲಿ ಹೊಸ ಮತ್ತು ಪರ್ಯಾಯ ಇಂಧನಗಳನ್ನು ಗುರುತಿಸುವುದು ಹಾಗೂ ಇಂಧನ ವಲಯದಲ್ಲಿ ಮಾಲಿನ್ಯ ತಡೆ ಕುರಿತ ಸಂಶೋಧನಾ ಮತ್ತು ಅಭಿವೃದ್ಧಿ ಸಂಬಂಧಿ ಚಟುವಟಿಕೆಗಳನ್ನು ಉತ್ತೇಜಿಸುವುದಾಗಿದೆ.

 

ಎಎಂಎಫ್ ಟಿಸಿಪಿಯ ಸಂಶೋಧನಾ ಮತ್ತು ಅಭಿವೃದ್ಧಿ ಕೆಲಸಗಳನ್ನು “ಅನೆಕ್ಸ್” ಹೆಸರಿನಲ್ಲಿ ವೈಯಕ್ತಿಕ ಯೋಜನೆಗಳಡಿ ಕೈಗೊಳ್ಳಲಾಗುವುದು. ಹಲವು ವರ್ಷಗಳಲ್ಲಿ ಸುಮಾರು 50ಕ್ಕೂ ಹೆಚ್ಚು “ಅನೆಕ್ಸ್” ಗಳನ್ನು ಎಎಂಎಫ್ ಟಿಸಿಪಿ ಆರಂಭಿಸಲಿದೆ. ಹಲವು ಬಗೆಯ ಇಂಧನಗಳನ್ನು ಈ “ಅನೆಕ್ಸ್” ಒಳಗೊಂಡಿರುತ್ತದೆ. ಅವುಗಳೆಂದರೆ ಸಂಸ್ಕರಿಸಿದ ಇಂಧನಗಳಾದ(ಗ್ಯಾಸೊಲೈನ್ ಮತ್ತು ಡೀಸೆಲ್) ಜೈವಿಕ ಇಂಧನಗಳಾದ(ಎಥೆನಾಲ್ ಮತ್ತು ಜೈವಿಕ ಡೀಸೆಲ್ ಇತ್ಯಾದಿ) ಸಿಂಥೆಟಿಕ್ ಇಂಧನಗಳು(ಮಿಥೆನಾಲ್, ಫಿಶರ್-ಟ್ರೋಪ್ಶ್, ಡಿಎಂಇ ಇತ್ಯಾದಿ) ಮತ್ತು ಇತರ ಅನಿಲಗಳು. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳು ಹಾಗೂ           ಎ ಆರ್ ಎ ಐ, ಸಿ ಐ ಆರ್ ಟಿ, ಐ ಸಿ ಎ ಟಿ ಮತ್ತಿತರ ಆಟೋಮೊಬೈಲ್ ಪರೀಕ್ಷಾ ಸಂಸ್ಥೆಗಳು ಹಾಗೂ ಅತ್ಯಾಧುನಿಕ ಸೌಲಭ್ಯಗಳು ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಭಾಗಿದಾರಿಕೆಯೊಂದಿಗೆ “ಅನೆಕ್ಸ್” ಗಳಿಗೆ ಸಂಪನ್ಮೂಲ ಒದಗಿಸಲಾಗುವುದು.

 

ಪ್ರಧಾನಮಂತ್ರಿಗಳು 2015ರಲ್ಲಿ ನಡೆದ ಊರ್ಜಾ ಸಂಗಮ್ ಸಮಾವೇಶದಲ್ಲಿ ಇಂಧನ ವಲಯದಲ್ಲಿ 2022ರ ವೇಳೆಗೆ ಕನಿಷ್ಠ ಶೇಕಡ 10ರಷ್ಟು ಆಮದು ಪ್ರಮಾಣವನ್ನು ಇಳಿಕೆ ಮಾಡಬೇಕು ಎಂದು ನಿರ್ದೇಶಿಸಿದ್ದರು. ಅನಂತರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸಮಗ್ರ ಕ್ರಿಯಾ ಯೋಜನೆ ರೂಪಿಸಿತ್ತು. ಅದರಲ್ಲಿ ಜೈವಿಕ ಇಂಧನಗಳು, ಅತ್ಯಾಧುನಿಕ/ಪರ್ಯಾಯ ಇಂಧನಗಳು ಮತ್ತು ಪರಿಣಾಮಕಾರಿ ಇಂಧಗಳು ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ. ಎಎಂಎಫ್ ಟಿಸಿಪಿ ಸಹಯೋಗದೊಂದಿಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಸಾರಿಗೆ ವಲಯದಲ್ಲಿ ಪರಿಣಾಮಕಾರಿ ಮತ್ತು ಕಡಿಮೆ ಮಾಲಿನ್ಯದ ಸೂಕ್ತ ಇಂಧನಗಳನ್ನು ಗುರುತಿಸಲು ಹಾಗೂ ಅವುಗಳನ್ನು ನಿಯೋಜಿಸಲು ಎಲ್ಲ ಪ್ರಯತ್ನಗಳನ್ನು ತೀವ್ರಗೊಳಿಸಲಾಯಿತು.

 

ಭಾರತ ಸರ್ಕಾರ ಇತ್ತೀಚೆಗೆ ರಾಷ್ಟ್ರೀಯ ಜೈವಿಕ ಇಂಧನ ನೀತಿ – 2018ನ್ನು ಪ್ರಕಟಿಸಿದ್ದು, ಅದರಲ್ಲಿ 2ಜಿ ಎಥೆನಾಲ್, ಜೈವಿಕ ಸಿ ಎನ್ ಜಿ, ಬಯೋ ಮಿಥೆನಾಲ್, ಡ್ರಾಪಿನ್ ಫ್ಯೂಯೆಲ್, ಡಿಎಂಇ ಮತ್ತಿತರ ಅತ್ಯಾಧುನಿಕ ಜೈವಿಕ ಇಂಧನಗಳ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು  ನೀಡಲಾಗಿದೆ. ಈ ಅತ್ಯಾಧುನಿಕ ಇಂಧನಗಳನ್ನು ನಾನಾ ಬಗೆಯ ತ್ಯಾಜ್ಯಗಳಿಂದ ಉತ್ಪಾದಿಸಲಾಗುವುದು. ಅವುಗಳೆಂದರೆ ಬೆಳೆಯಿಂದ ಉಳಿಯುವ ತ್ಯಾಜ್ಯ, ಘನತ್ಯಾಜ್ಯ, ಕೈಗಾರಿಕಾ ತ್ಯಾಜ್ಯ, ಅನಿಲ ತ್ಯಾಜ್ಯ, ಆಹಾರ ತ್ಯಾಜ್ಯ, ಪ್ಲಾಸ್ಟಿಕ್ ಮತ್ತಿತರವು. ಇವುಗಳಲ್ಲಿ ಕೆಲವು ಅತ್ಯಾಧುನಿಕ ಜೈವಿಕ ಇಂಧನಗಳನ್ನು ಯಶಸ್ವಿಯಾಗಿ ಹಲವು ದೇಶಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಭಾರತದಲ್ಲಿ ಇನ್ನೂ ಸಾರಿಗೆ ವಲಯ ಅದನ್ನು ಬಳಕೆ ಮಾಡಲು ಕಾಯುತ್ತಿದೆ. ಈ ಅತ್ಯಾಧುನಿಕ ಇಂಧನಗಳು ನಮ್ಮ ದೇಶದಲ್ಲಿ ಇನ್ನು ಪ್ರಸ್ತುತ ಅಭಿವೃದ್ಧಿ ಹಂತದಲ್ಲಿವೆ ಮತ್ತು ನಮ್ಮ ಇಂಧನ ಅಗತ್ಯತೆಗಳನ್ನು ಪೂರೈಸಲು ಈ ಇಂಧನಗಳ ಬಳಕೆ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಅಭಿವೃದ್ಧಿ ಮತ್ತು ಸಂಶೋಧನಾ ಚಟುವಟಿಕೆಗಳು ಅತ್ಯವಶ್ಯಕವಾಗಿದೆ. ಎಎಂಎಫ್ ಜೊತೆ ಸಹಯೋಗ ಸಾಧಿಸುವುದರಿಂದ ಎಂಒಪಿ & ಎನ್ ಜಿ ಗೆ ಸಾರಿಗೆ ವಲಯದಲ್ಲಿ ಭವಿಷ್ಯದಲ್ಲಿ ಬಳಕೆಯಾಗಲಿರುವ ಅತ್ಯಾಧುನಿಕ ಜೈವಿಕ ಇಂಧನಗಳನ್ನು ಗುರುತಿಸಲು ಸಹಾಯಕವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಸದಸ್ಯ ರಾಷ್ಟ್ರಗಳ ಅನುಭವ, ಅತ್ಯಾಧುನಿಕ ಜೈವಿಕ ಇಂಧನಗಳನ್ನು ಬಳಕೆ ಮಾಡಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಹೆಚ್ಚುವರಿ ಅನುಕೂಲವಾಗಲಿದೆ.

 

ಎಎಂಎಫ್ ಟಿಸಿಪಿ ಜೊತೆ ಸಹಭಾಗಿತ್ವ ಪಡೆಯುತ್ತಿರುವುದರಿಂದ ವೆಚ್ಚ ಹಂಚಿಕೆಯಾಗುವುದಲ್ಲದೆ, ತಾಂತ್ರಿಕ ಸಂಪನ್ಮೂಲಗಳನ್ನು ಒಂದೆಡೆ ಸೇರಿಸಬಹುದಾಗಿದೆ. ಒಂದೇ ಬಗೆಯ ಕೆಲಸಗಳನ್ನು ಎರಡೆರಡು ಭಾರಿ ಮಾಡುವುದು ತಪ್ಪುತ್ತದೆ. ರಾಷ್ಟ್ರೀಯ ಸಂಶೋಧನಾ ಮತ್ತು ಅಭಿವೃದ್ಧಿ ಸಾಮರ್ಥ್ಯಗಳು ಬಲವರ್ಧನೆಯಾಗಲಿವೆ. ಉತ್ತಮ ಪದ್ಧತಿಗಳು, ಸಂಶೋಧಕರ ಸಂಪರ್ಕಜಾಲ, ಸಂಶೋಧನೆ ಮತ್ತು ವಾಸ್ತವಿಕ ಅನುಷ್ಠಾನವನ್ನು ಸಂಯೋಜಿಸುವುದು ಮತ್ತಿತರ ವಿಭಾಗಗಳಲ್ಲಿ ಮಾಹಿತಿ  ವಿನಿಮಯಕ್ಕೆ ಸಹಕಾರಿಯಾಗಲಿದೆ. ಸದಸ್ಯ ರಾಷ್ಟ್ರವಾದ ನಂತರ ಭಾರತ ಸಾಂಪ್ರದಾಯಿಕ ಇಂಧನಗಳ ಆಮದಿಗೆ ಬದಲಾಗಿ ಮಹತ್ವದ ಪಾತ್ರ ವಹಿಸಲಿರುವ  ಅತ್ಯಾಧುನಿಕ ಜೈವಿಕ ಇಂಧನಗಳು ಮತ್ತು ಮೋಟಾರು ಇಂಧನಗಳ ಹಿತಾಸಕ್ತಿ ವಿಷಯಗಳಲ್ಲಿ ಹೆಚ್ಚಿನ ಅಭಿವೃದ್ಧಿ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲಿದೆ.

 

ಹಿನ್ನೆಲೆ:

 

ಎಎಂಎಫ್ ಟಿಸಿಪಿ, ಶುದ್ಧ ಮತ್ತು ಪರಿಣಾಮಕಾರಿ ಇಂಧನ ಮತ್ತು ವಾಹನ ತಂತ್ರಜ್ಞಾನ ಬಳಕೆ ಉತ್ತೇಜಿಸುವ ರಾಷ್ಟ್ರಗಳ ನಡುವೆ ಸಹಕಾರ ಸಂಬಂಧ ಸಾಧಿಸುವ ಒಂದು ಅಂತಾರಾಷ್ಟ್ರೀಯ ವೇದಿಕೆಯಾಗಿದೆ. ಎಎಂಎಫ್ ಟಿಸಿಪಿ ಸಂಶೋಧನಾ ಮತ್ತು ಅಭಿವೃದ್ಧಿ ಕಾರ್ಯಗಳ ಜೊತೆಗೆ ಅತ್ಯಾಧುನಿಕ ಮೋಟಾರು ಇಂಧನ ವಿತರಣೆ ಜೊತೆಗೆ ಸಾರಿಗೆ ವಲಯದಲ್ಲಿ ಇಂಧನ ಸಂಬಂಧಿ ವಿಷಯಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಉತ್ಪಾದನೆ ಮತ್ತು ಬಳಕೆ ಕುರಿತಂತೆ ಗಮನಹರಿಸಲಿದೆ.

 

ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ 2018ರ ಮೇ 9ರಂದು ಎಎಂಎಫ್ ಟಿಸಿಪಿಯ 16ನೇ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಗೊಂಡಿತು. ಎಎಂಎಫ್ ಟಿಸಿಪಿಯ ಇತರೆ ಸದಸ್ಯ ರಾಷ್ಟ್ರಗಳೆಂದರೆ ಅಮೆರಿಕ, ಚೀನಾ, ಜಪಾನ್, ಕೆನಡ, ಚಿಲಿ, ಇಸ್ರೇಲ್, ಜರ್ಮನಿ, ಆಸ್ಟ್ರೀಯಾ, ಸ್ವೀಡನ್,         ಫಿನ್ ಲ್ಯಾಂಡ್, ಡೆನ್ಮಾರ್ಕ್, ಸ್ಪೇನ್, ಕೊರಿಯಾ ಗಣರಾಜ್ಯ, ಸ್ವಿಟ್ಜರ್ ಲ್ಯಾಂಡ್ ಮತ್ತು ಥೈಲ್ಯಾಂಡ್.  

 

*****  



(Release ID: 1552227) Visitor Counter : 112