ಸಂಪುಟ

ಭಾರತ  ಮತ್ತು ಫಿನ್ ಲ್ಯಾಂಡ್ ನಡುವೆ ಪರಿಸರ ಸಹಕಾರಕ್ಕೆ ಸಂಬಂಧಿಸಿದ ಒಡಂಬಡಿಕೆಗೆ ಕೇಂದ್ರ ಸಂಪುಟ  ಅನುಮೋದನೆ 

Posted On: 10 OCT 2018 1:34PM by PIB Bengaluru

ಭಾರತ  ಮತ್ತು ಫಿನ್ ಲ್ಯಾಂಡ್ ನಡುವೆ ಪರಿಸರ ಸಹಕಾರಕ್ಕೆ ಸಂಬಂಧಿಸಿದ ಒಡಂಬಡಿಕೆಗೆ ಕೇಂದ್ರ ಸಂಪುಟ  ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಭಾರತ ಮತ್ತು ಫಿನ್ ಲ್ಯಾಂಡ್ ನಡುವೆ ಪರಿಸರ ಸಹಕಾರಕ್ಕೆ ಸಂಬಂಧಿಸಿದ ಒಡಂಬಡಿಕೆಗೆ ಅನುಮೋದನೆ ನೀಡಿತು. 

ಉಭಯ ದೇಶಗಳ ನಡುವೆ ಪರಿಸರ ಸಂರಕ್ಷಣಾ ವಲಯದಲ್ಲಿ ಅತ್ಯಂತ ನಿಕಟ ಮತ್ತು ದೀರ್ಘಕಾಲೀನ ಸಹಕಾರವನ್ನು ಉತ್ತೇಜಿಸಲು ಮತ್ತು ಸ್ಥಾಪಿಸುವ ಅಂಶ ಈ ಒಡಂಬಡಿಕೆಯಲ್ಲಿ ಸೇರಿದೆ. ಅಲ್ಲದೆ ಎರಡೂ ದೇಶಗಳ ಕಾನೂನು ಮತ್ತು ನ್ಯಾಯಕ್ಕೆ ಅನುಗುಣವಾಗಿ ಪರಸ್ಪರ ಅನುಕೂಲವಾಗುವ ಮತ್ತು ಅನ್ಯೋನ್ಯತೆ ಹಾಗೂ ಸಮಾನತೆಯ ಆಧಾರದ ಮೇಲೆ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಮಾಡುವುದು ಒಪ್ಪಂದದಲ್ಲಿ ಅಡಕವಾಗಿದೆ.

ಒಪ್ಪಂದದನ್ವಯ ಉತ್ತಮ ಪರಿಸರ ರಕ್ಷಣೆ, ಉತ್ತಮ ಸಂರಕ್ಷಣೆ ಮತ್ತು ಹವಾಮಾನ ವೈಪರೀತ್ಯದ ಉತ್ತಮ ನಿರ್ವಹಣೆ ಮತ್ತು ವನ್ಯಜೀವಿ ರಕ್ಷಣೆ/ಸಂರಕ್ಷಣೆ ವಿಷಯಗಳಲ್ಲಿ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಮತ್ತು ಇತ್ತೀಚಿನ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.

 

ಒಪ್ಪಂದದನ್ವಯ ಈ ಕೆಳಗಿನ ವಲಯಗಳಲ್ಲಿ ಪರಸ್ಪರ ಸಹಕಾರ ಸಂಬಂಧ ಸಾಧಿಸಬಹುದಾಗಿದೆ.

1.        ವಾಯು ಮತ್ತು ಜಲಮಾಲಿನ್ಯ ನಿಯಂತ್ರಣ ಮತ್ತು ಶುದ್ಧೀಕರಣ, ಕಲುಷಿತ ಮಣ್ಣಿನ ಮರು ಪೂರಣ.

2.      ಅಪಾಯಕಾರಿ ತ್ಯಾಜ್ಯ ಸೇರಿದಂತೆ ಎಲ್ಲ ಬಗೆಯ ತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ತಂತ್ರಜ್ಞಾನ.

3.      ಅರಣ್ಯ ಸೇರಿದಂತೆ ಎಲ್ಲ ಬಗೆಯ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ, ಕಡಿಮೆ ಇಂಗಾಲದ ಪರಿಹಾರಗಳ ಬಳಕೆ ಮತ್ತು ಸುತ್ತುವಳಿ ಆರ್ಥಿಕತೆ ಉತ್ತೇಜನ.

4.      ಹವಾಮಾನ ವೈಪರೀತ್ಯ

5.      ಪರಿಸರ ಮತ್ತು ಅರಣ್ಯದ ಮೇಲೆ ನಿಗಾ ಹಾಗೂ ದತ್ತಾಂಶ ನಿರ್ವಹಣೆ

6.      ಕರಾವಳಿ ಸಂಪನ್ಮೂಲ ಮತ್ತು ಮತ್ಸ್ಯ ಸಂಪತ್ತು ಸಂರಕ್ಷಣೆ

7.      ದ್ವೀಪಗಳು ಮತ್ತು ಸಾಗರದ ಒಳನಾಡು ಜಲ ನಿರ್ವಹಣೆ ಮತ್ತು

8.      ಉಭಯ ದೇಶಗಳು ನಿರ್ಧರಿಸಿದ ಇನ್ನಿತರೆ ಜಂಟಿ ಕಾರ್ಯಗಳು

 

ಹಿನ್ನೆಲೆ:

  ಪರಿಸರಕ್ಕೆ ಸಂಬಂಧಿಸಿದ ಆತಂಕಗಳು ಹೆಚ್ಚುತ್ತಿರುವುದು ಯಾವುದೇ ಒಂದು ದೇಶಕ್ಕೆ ಸೀಮಿತವಾದವಲ್ಲ. ಅವು ಇಡೀ ಜಗತ್ತು ಎದುರಿಸುತ್ತಿರುವ ಸವಾಲುಗಳಾಗಿವೆ. ಭಾರತ ಇಡೀ ವಿಶ್ವದಲ್ಲೇ ಆರ್ಥಿಕವಾಗಿ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿದ್ದು, ಇದು ಅತ್ಯಂತ ಉದ್ದನೆಯ ಸಮುದ್ರ ತೀರ ಮತ್ತು ಶ್ರೀಮಂತ ಜೀವವೈವಿಧ್ಯತೆಯನ್ನು ಒಳಗೊಂಡಿದೆ. ಫಿನ್ ಲ್ಯಾಂಡ್ ನ ಪ್ರಮುಖ ಪರಿಸರ ವಿಷಯಗಳೆಂದರೆ ವಾಯು ಮತ್ತು ಜಲಮಾಲಿನ್ಯ ಹಾಗೂ ವನ್ಯಜೀವಿ ಸಂರಕ್ಷಣೆ. ಫಿನ್ ಲ್ಯಾಂಡ್ ನ ಪ್ರಧಾನ ಪರಿಸರ ಸಂಸ್ಥೆಯೆಂದರೆ ಪರಿಸರ ಸಚಿವಾಲಯ ಅದು 1983ರಲ್ಲಿ ಸ್ಥಾಪನೆಯಾಯಿತು. ದೇಶದೊಳಗಿನ ಕೈಗಾರಿಕಾ ಮಾಲಿನ್ಯ ಮತ್ತು ನೆರೆಹೊರೆಯ ರಾಷ್ಟ್ರಗಳ ಮಾಲಿನ್ಯದಿಂದಾಗಿ

ಉಭಯ ದೇಶಗಳಲ್ಲಿ ವಾಯು ಮತ್ತು ಜಲ ಪೂರೈಕೆ ಪರಿಶುದ್ಧತೆಯ ಮೇಲೆ ಪರಿಣಾಮ ಬೀರಿದೆ.

ಅಲ್ಲದೆ ಜಲಮಾಲಿನ್ಯ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಬೇಡಿಕೆ ಹೆಚ್ಚಳ ಮತ್ತಿತರ ಸವಾಲುಗಳನ್ನು ಎದುರಿಸುತ್ತಿವೆ. ಅಲ್ಲದೆ, ತ್ಯಾಜ್ಯ ನೀರಿನ ನಿರ್ವಹಣೆ, ವಾಯು ಮತ್ತು ಜಲಮಾಲಿನ್ಯ ನಿಯಂತ್ರಣ, ನೈಸರ್ಗಿಕ ಸಂಪನ್ಮೂಲಗಳ ಬೇಡಿಕೆ ಹೆಚ್ಚಳ, ಅಪಾಯದ ಅಂಚಿನಲ್ಲಿರುವ ಸಂತತಿಗಳ ರಕ್ಷಣೆ ಮತ್ತಿತರ ಪರಿಸರ ಸವಾಲುಗಳನ್ನು ಉಭಯ ದೇಶಗಳು ಎದುರಿಸುತ್ತಿವೆ.

ಹೆಚ್ಚುತ್ತಿರುವ ಪರಿಸರದ ಆತಂಕಗಳನ್ನು ನಿಯಂತ್ರಿಸುವ ತುರ್ತು ಅಗತ್ಯವಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳು ಪರಿಸರ ರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ವಲಯದಲ್ಲಿ ಅತ್ಯಂತ ನಿಕಟ ಮತ್ತು ದೀರ್ಘಕಾಲೀನ ಸಹಕಾರ ಸಂಬಂಧವನ್ನು ಉತ್ತೇಜಿಸಲು ಮತ್ತು ಸ್ಥಾಪಿಸಲು ಪರಸ್ಪರ ಜಂಟಿಯಾಗಿ ಕೈಜೋಡಿಸಿವೆ. ಉತ್ತಮ ರೀತಿಯಲ್ಲಿ ಪರಿಸರ ರಕ್ಷಣೆ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಹಾಗೂ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಉದ್ದೇಶವಿದೆ.

 

**************   



(Release ID: 1549503) Visitor Counter : 95