ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವ ಜೈವಿಕ ಇಂಧನ ದಿನ ಅಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ಮೋದಿ ಭಾಷಣ 

Posted On: 10 AUG 2018 12:42PM by PIB Bengaluru

ವಿಶ್ವ ಜೈವಿಕ ಇಂಧನ ದಿನ ಅಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ಮೋದಿ ಭಾಷಣ 
 

ವಿಶ್ವ ಜೈವಿಕ ಇಂಧನ ದಿನದ ಅಂಗವಾಗಿ ಹೊಸದಿಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು. ರೈತರು, ವಿಜ್ಞಾನಿಗಳು, ಉದ್ಯಮಪತಿಗಳು, ವಿದ್ಯಾರ್ಥಿಗಳು, ಸರಕಾರಿ ಅಧಿಕಾರಿಗಳು ಮತ್ತು ಶಾಸಕರನ್ನು ಒಳಗೊಂಡ ವೈವಿಧ್ಯಮಯ ಸಭಾ ಸದರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜೈವಿಕ ಇಂಧನಗಳು 21 ನೇ ಶತಮಾನದಲ್ಲಿ ಭಾರತಕ್ಕೆ ಹೊಸ ವೇಗವನ್ನು , ಚಲನೆಯನ್ನು ತಂದುಕೊಡಬಲ್ಲವು ಎಂದು ಅವರು ಹೇಳಿದರು. ಬೆಳೆಗಳಿಂದ ಉತ್ಪಾದನೆಯಾಗುವ ಇಂಧನ ಇದಾಗಿದೆ, ಮತ್ತು ಇದು ಹಳ್ಳಿಗಳಲ್ಲಿ ಮತ್ತು ನಗರಗಳಲ್ಲಿ ವಾಸಿಸುತ್ತಿರುವ ಜನರ ಬದುಕನ್ನು ಬದಲಿಸಬಲ್ಲುದು ಎಂದರು.

ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಜೈವಿಕ ಇಂಧನಗಳಿಂದ ಎಥೆನಾಲ್ ಉತ್ಪಾದಿಸುವ ಯೋಜನೆ ಆರಂಭವಾಯಿತು. 2014 ರ ಬಳಿಕ ಎಥೆನಾಲ್ ಮಿಶ್ರಣಕ್ಕೆ ಸಂಬಂಧಿಸಿ ಪ್ರಗತಿಪಥವನ್ನು ರೂಪಿಸಲಾಯಿತು ಎಂದರು. ಈ ಪ್ರಯತ್ನದಿಂದ ರೈತರಿಗೆ ಲಾಭವಾಗಿದ್ದಲ್ಲದೆ, ಈ ಕ್ರಮ ಕಳೆದ ವರ್ಷ 4,000 ಕೋಟಿ ರೂ.ಗಳ ವಿದೇಶೀ ವಿನಿಮಯವನ್ನು ಉಳಿಸಲು ಸಹಾಯ ಮಾಡಿತು. ಮತ್ತು ಮುಂದಿನ ನಾಲ್ಕು ವರ್ಷಗಳಲ್ಲಿ ಇದನ್ನು 12,000 ಕೋ.ರೂ.ಗಳಿಗೇರಿಸಲು ಗುರಿ ನಿಗದಿ ಮಾಡಲಾಗಿದೆ ಎಂದೂ ಪ್ರಧಾನ ಮಂತ್ರಿಗಳು ಹೇಳಿದರು.

ಜೀವರಾಶಿಯನ್ನು ಜೈವಿಕ ಅನಿಲವನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ಕೇಂದ್ರ ಸರಕಾರ ಹೆಚ್ಚು ಹೂಡಿಕೆ ಮಾಡುತ್ತಿದೆ. 12 ಆಧುನಿಕ ತೈಲ ಶುದ್ದೀಕರಣಾಗಾರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು. 

ಜನಧನ್, ವಂಧನ್ ಮತ್ತು ಗೋಬರ್ಧನ್ ಗಳಂತಹ ಯೋಜನೆಗಳು ಬಡವರ, ಬುಡಕಟ್ಟು ಜನರ ಮತ್ತು ರೈತರ ಜೀವನವನ್ನು ಬದಲಾಯಿಸಲು ಸಹಾಯ ಮಾಡುತ್ತಿವೆ . ಜೈವಿಕ ಇಂಧನಗಳ ಪರಿವರ್ತನಾ ಸಾಮರ್ಥ್ಯವನ್ನು ವಿದ್ಯಾರ್ಥಿಗಳು, ಶಿಕ್ಷಕರು, ವಿಜ್ಞಾನಿಗಳು, ಉದ್ಯಮಪತಿಗಳು ಮತ್ತು ಜನರ ಸಹಭಾಗಿತ್ವದಿಂದ ಅನಾವರಣಗೊಳಿಸಬಹುದು ಎಂದ ಅವರು ಹಾಜರಿದ್ದ ಎಲ್ಲರೂ ಜೈವಿಕ ಇಂಧನಗಳ ಲಾಭವನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯಲು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು. 

ಪ್ರಧಾನ ಮಂತ್ರಿಗಳು ಈ ಸಂಧರ್ಭದಲ್ಲಿ “ಜೈವಿಕ ಇಂಧನಗಳ ರಾಷ್ಟ್ರೀಯ ನೀತಿ 2018 ” ರ ಕಿರು ಪುಸ್ತಕವನ್ನು ಬಿಡುಗಡೆ ಮಾಡಿದರು. ಜೊತೆಗೆ ಪರಿಸರ ಏಕಗವಾಕ್ಷ ಹಬ್ ನ ಕ್ರಿಯಾತ್ಮಕ ಮತ್ತು ಪ್ರತಿಕ್ರಿಯಾತ್ಮಕ ಸೌಲಭ್ಯ ವ್ಯವಸ್ಥೆಯನ್ನು (ಪರಿವೇಶ್ ) ಕಾರ್ಯಾರಂಭಗೊಳಿಸಿದರು. 
 

####



(Release ID: 1542857) Visitor Counter : 74