ಸಂಪುಟ

ಮಹಾತ್ಮಾಗಾಂಧಿ ಅವರ 150ನೇ ಜಯಂತಿಯ ಸಂದರ್ಭದಲ್ಲಿ ಕೈದಿಗಳ ವಿಶೇಷ ವಿಮೋಚನೆಗೆ ಸಂಪುಟದ ಅನುಮೋದನೆ

Posted On: 18 JUL 2018 5:42PM by PIB Bengaluru

ಮಹಾತ್ಮಾಗಾಂಧಿ ಅವರ 150ನೇ ಜಯಂತಿಯ ಸಂದರ್ಭದಲ್ಲಿ ಕೈದಿಗಳ ವಿಶೇಷ ವಿಮೋಚನೆಗೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಹಾತ್ಮಾಗಾಂಧಿ ಅವರ 150ನೇ ಜಯಂತಿಯ ಆಚರಣೆಯ ಭಾಗವಾಗಿ ಕೈದಿಗಳ ವಿಶೇಷ ಬಿಡುಗಡೆ ಕರುಣಿಸಲು ತನ್ನ ಅನುಮೋದನೆ ನೀಡಿದೆ.

 

ಮಹಾತ್ಮಾಗಾಂಧಿ ಅವರ 150ನೇ ಜಯಂತಿಯ ಸ್ಮರಣೆಯ ಭಾಗವಾಗಿ, ಈ ಕೆಳಕಂಡ ವರ್ಗಗಳ ಕೈದಿಗಳನ್ನು ವಿಶೇಷ ಬಿಡುಗಡೆಗೆ ಪರಿಗಣಿಸಿ ಮತ್ತು ಮೂರು ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಪ್ರಥಮ ಹಂತದಲ್ಲಿ 2018ರರ ಅಕ್ಟೋಬರ್ 2ರಂದು (ಮಹಾತ್ಮಾಗಾಂಧಿ ಅವರ ಜಯಂತಿಯಂದು) ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ, ಎರಡನೇ ಹಂತದಲ್ಲಿ 2019ರ ಏಪ್ರಿಲ್ 10ರಂದು (ಚಂಪಾರಣ್ ಸತ್ಯಾಗ್ರಹದ ವರ್ಷಾಚರಣೆಯಂದು) ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಮತ್ತು ಮೂರನೇ ಹಂತದಲ್ಲಿ 2019ರ ಅಕ್ಟೋಬರ್ 2ರಂದು (ಮಹಾತ್ಮಾ ಗಾಂಧಿ ಅವರ ಜಯಂತಿಯಂದು) ಕೈದಿಗಳ ಬಿಡುಗಡೆ ಮಾಡಲಾಗುತ್ತದೆ:-

 

(a)       ವಿಧಿಸಲಾಗಿರುವ ವಾಸ್ತವ ಶಿಕ್ಷೆಯ ಅವಧಿಯಲ್ಲಿ ಶೇ.50ರಷ್ಟು ಪೂರ್ಣಗೊಳಿಸಿರುವ 55 ವರ್ಷ ಮತ್ತು ಮೇಲ್ಪಟ್ಟ ಮಹಿಳಾ ಅಪರಾಧಿಗಳು.

(b)      ವಿಧಿಸಲಾಗಿರುವ ವಾಸ್ತವ ಶಿಕ್ಷೆಯ ಅವಧಿಯಲ್ಲಿ ಶೇ.50ರಷ್ಟು ಪೂರ್ಣಗೊಳಿಸಿರುವ 55 ವರ್ಷ ಮತ್ತು ಮೇಲ್ಪಟ್ಟ ತೃತೀಯಲಿಂಗಿ ಅಪರಾಧಿಗಳು.

(c)       ವಿಧಿಸಲಾಗಿರುವ ವಾಸ್ತವ ಶಿಕ್ಷೆಯ ಅವಧಿಯಲ್ಲಿ ಶೇ.50ರಷ್ಟು ಪೂರ್ಣಗೊಳಿಸಿರುವ 60 ವರ್ಷ ಮತ್ತು ಮೇಲ್ಪಟ್ಟ ಪುರುಷ ಅಪರಾಧಿಗಳು.

(d)      ವಿಧಿಸಲಾಗಿರುವ ವಾಸ್ತವ ಶಿಕ್ಷೆಯ ಅವಧಿಯಲ್ಲಿ ಶೇ.50ರಷ್ಟು ಪೂರ್ಣಗೊಳಿಸಿರುವ ಶೇ.70 ಅಥವಾ ಮೇಲ್ಪಟ್ಟ ಪ್ರಮಾಣದ ವೈಕಲ್ಯವನ್ನು ಹೊಂದಿದ ವಿಕಲಚೇತನರು/ದಿವ್ಯಾಂಗದ ಅಪರಾಧಿಗಳು.

(e)       ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅಪರಾಧಿಗಳು.

(f)        ವಿಧಿಸಲಾಗಿರುವ ವಾಸ್ತವ ಶಿಕ್ಷೆಯ ಅವಧಿಯಲ್ಲಿ ಮೂರನೇ ಎರಡರಷ್ಟು (ಶೇ.66) ಪೂರ್ಣಗೊಳಿಸಿರುವ ಕೈದಿಗಳು.

 

ಈ ವಿಶೇಷ ಬಿಡುಗಡೆಯ ಸೌಲಭ್ಯವನ್ನು ಗಂಭೀರ ಸ್ವರೂಪದ  ಮತ್ತು ಘೋರ ಅಪರಾಧ ಅಂದರೆ ವರದಕ್ಷಿಣೆ ಸಾವು, ಅತ್ಯಾಚಾರ, ಮಾನವ ಕಳ್ಳಸಾಗಣೆ ಮತ್ತು ಪೋಟಾ, ಯುಎಪಿಎ, ಟಾಡಾ, ಎಫ್.ಐ.ಸಿ.ಎನ್, ಪೋಸ್ಕೋ ಕಾಯಿದೆ, ಅಕ್ರಮ ಹಣ ವರ್ಗಾವಣೆ, ಫೆಮಾ, ಎನ್.ಡಿ.ಪಿ.ಎಸ್,ಭ್ರಷ್ಟಾಚಾರ ನಿಗ್ರಹ ಕಾಯಿದೆ ಇತ್ಯಾದಿಗಳ ಅಡಿಯಲ್ಲಿ ಶಿಕ್ಷೆಗೆ ಗುರಿಯಾದ; ಮರಣದಂಡನೆ ಅಥವಾ ಮರಣದಂಡನೆಯ ಬದಲಿಗೆ ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾದಂಥ ಅಪರಾಧಗಳಿಗೆ ಶಿಕ್ಷೆಗೊಳಗಾದ ಕೈದಿಗಳಿಗೆ ನೀಡಲಾಗುವುದಿಲ್ಲ.

 

ಗೃಹ ವ್ಯವಹಾರಗಳ ಸಚಿವಾಲಯವು ಅರ್ಹ ಕೈದಿಗಳ ಬಿಡುಗಡೆಗೆ ಪ್ರಕ್ರಿಯೆ ಆರಂಭಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಿದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತಗಳಿಗೆ ಪ್ರಕರಣಗಳ ಪರಿಶೀಲನೆಗೆ ಸಮಿತಿ ರಚಿಸುವಂತೆಯೂ ಸಲಹೆ ನೀಡಲಾಗುತ್ತದೆ. ರಾಜ್ಯ ಸರ್ಕಾರಗಳು ಸಮಿತಿಯ ಶಿಫಾರಸುಗಳನ್ನು ಪರಿಗಣನೆ ಮತ್ತು ಸಂವಿಧಾನದ 161ನೇ ವಿಧಿಯಡಿ ಅನುಮೋದನೆಗಾಗಿ ರಾಜ್ಯಪಾಲರುಗಳ ಮುಂದೆ ಸಲ್ಲಿಸಲಿವೆ. ಅನುಮೋದನೆಯ ಬಳಿಕ 2018ರ ಅಕ್ಟೋಬರ್ 2, 2019ರ ಏಪ್ರಿಲ್ 10 ಮತ್ತು 2019ರ ಅಕ್ಟೋಬರ್ 2ರಂದು ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ.

 

ಹಿನ್ನೆಲೆ:

ಮಹಾತ್ಮಾಗಾಂಧಿ ಅವರ 150ನೇ ಜಯಂತಿ ಮಹತ್ವದ ಸಂದರ್ಭವಾಗಿದ್ದು, ಈ ಮಹತ್ವದ ಸಂದರ್ಭದಲ್ಲಿ ಕೈದಿಗಳಿಗೆ ವಿಶೇಷವಾದ ವಿಮೋಚನೆ ನೀಡುವುದು ಅಪೇಕ್ಷಣೀಯ ಮತ್ತು ಸ್ಮರಣಾರ್ಥವೆಂದು ಮತ್ತು ರಾಷ್ಟ್ರಪಿತನಿಗೆ ಹಾಗೂ ಮಹಾತ್ಮಾಗಾಂಧಿ ಅವರು ಪ್ರತಿಪಾದಿಸುತ್ತಿದ್ದ ಮಾನವೀಯ ಮೌಲ್ಯಗಳಿಗೆ ಗೌರವಾರ್ಪಣೆ ಎಂದು ಪರಿಗಣಿಸಲಾಗಿದೆ.



(Release ID: 1539392) Visitor Counter : 118