Technology
ಡಿಜಿಟಲ್ ಮೂಲಸೌಕರ್ಯದ ಮೂಲಕ ಆಡಳಿತದ ಸಬಲೀಕರಣ
प्रविष्टि तिथि:
12 AUG 2026 18:34 PM
ಸಂಪರ್ಕಿತ ಮತ್ತು ನಾಗರಿಕ-ಕೇಂದ್ರೀಕೃತ ಭಾರತದ ನಿರ್ಮಾಣ
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ಭಾರತದ ಆಡಳಿತದಲ್ಲಿ ಮೂಲಭೂತ ಪರಿವರ್ತನೆಯಾಗಿದೆ. ಹಿಂದೆ ವ್ಯಾಪಕ ಕಾಗದಪತ್ರಗಳು ಮತ್ತು ಭೌತಿಕ ಕಚೇರಿಗಳನ್ನು ನೆಚ್ಚಿಕೊಂಡಿದ್ದ ಸಾರ್ವಜನಿಕ ಸೇವೆಗಳು ಈಗ ಸಮಗ್ರ ಡಿಜಿಟಲ್ ವೇದಿಕೆಗಳ ಮೂಲಕ ಲಭ್ಯವಿವೆ. ಕಳೆದ 12 ವರ್ಷಗಳಲ್ಲಿ, ಡಿಪಿಐ ಅಭೂತಪೂರ್ವ ಪ್ರಮಾಣದಲ್ಲಿ ನಾಗರಿಕರು, ಸರ್ಕಾರಗಳು ಮತ್ತು ಸಂಸ್ಥೆಗಳನ್ನು ಸಂಪರ್ಕಿಸಿದೆ. ಇದು ಆಡಳಿತವನ್ನು ವೇಗವಾಗಿ, ಪಾರದರ್ಶಕವಾಗಿ ಮತ್ತು ನಾಗರಿಕರ ಅಗತ್ಯಗಳಿಗೆ ಹೆಚ್ಚು ಸ್ಪಂದಿಸುವಂತೆ ಮಾಡಿದೆ.
ಡಿಜಿಟಲ್ ಮೂಲಸೌಕರ್ಯವು ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಆಧಾರಸ್ತಂಭವಾಗಿ ಹೊರಹೊಮ್ಮಿದೆ. ಡಿಜಿಟಲ್ ಅರ್ಥವ್ಯವಸ್ಥೆಯು ಈಗ ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ ಸುಮಾರು 12-14% ಕೊಡುಗೆ ನೀಡುತ್ತಿದ್ದು, ಮುಂದಿನ ದಶಕದಲ್ಲಿ ಇದು 20% ತಲುಪುವ ನಿರೀಕ್ಷೆಯಿದೆ. ಸ್ಟೇಟ್ ಆಫ್ ಇಂಡಿಯಾಸ್ ಡಿಜಿಟಲ್ ಎಕಾನಮಿ ರಿಪೋರ್ಟ್ 2026 ರ ಪ್ರಕಾರ, ಭಾರತವು ಈಗ ವಿಶ್ವದ ಐದನೇ ಅತಿದೊಡ್ಡ ಡಿಜಿಟಲೀಕೃತ ಅರ್ಥವ್ಯವಸ್ಥೆಯಾಗಿದೆ ಮತ್ತು ಜಿ20 ರಾಷ್ಟ್ರಗಳಲ್ಲಿ ನಾಲ್ಕನೇ ಉನ್ನತ ಸ್ಥಾನದಲ್ಲಿದೆ. ಭಾರತವು ತನ್ನ 80 ನೇ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸುತ್ತಿರುವಾಗ, ಡಿಜಿಟಲ್ ಆಡಳಿತದ ನಿರಂತರ ವಿಸ್ತರಣೆಯು ಸೇವಾ ವಿತರಣೆಯನ್ನು ಬಲಪಡಿಸುತ್ತಿದೆ, ಆರ್ಥಿಕ ಅವಕಾಶಗಳನ್ನು ಸಕ್ರಿಯಗೊಳಿಸುತ್ತಿದೆ ಮತ್ತು ವಿಕಸಿತ ಭಾರತದ ಕಲ್ಪನೆಯನ್ನು ಮುನ್ನಡೆಸುತ್ತಿದೆ.
ಭಾರತದ ಡಿಜಿಟಲ್ ಸ್ವಾವಲಂಬನೆಗೆ ಪ್ರಮುಖ ಮೈಲಿಗಲ್ಲುಗಳು
ಎಲೆಕ್ಟ್ರಾನಿಕ್ಸ್ ಉತ್ಪಾದನೆ: ಭಾರತದ ಸ್ವಾವಲಂಬನೆಗೆ ಉತ್ತೇಜನ

'ಮೇಕ್ ಇನ್ ಇಂಡಿಯಾ' ಪರಿಕಲ್ಪನೆಯ ಮಾರ್ಗದರ್ಶನದಲ್ಲಿ, ಭಾರತವು ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದೆ. ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆ, ಎಲೆಕ್ಟ್ರಾನಿಕ್ಸ್ ಕಾಂಪೊನೆಂಟ್ಸ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್, ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM), ಮತ್ತು ಪರಿಷ್ಕೃತ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ಸ್ (EMC 2.0) ಸೇರಿದಂತೆ ಪ್ರಮುಖ ಉಪಕ್ರಮಗಳು ಭಾರತದಲ್ಲಿ ದೇಶೀಯ ಉತ್ಪಾದನೆಯನ್ನು ಬಲಪಡಿಸಿವೆ.
- ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ 7 ಪಟ್ಟು ಬೆಳವಣಿಗೆ: ಎಲೆಕ್ಟ್ರಾನಿಕ್ಸ್ ಉತ್ಪಾದನೆಯು 2014-15 ರಲ್ಲಿ ₹1.9 ಲಕ್ಷ ಕೋಟಿಯಿಂದ 2025-26 ರಲ್ಲಿ ₹13.11 ಲಕ್ಷ ಕೋಟಿಗೆ ಹೆಚ್ಚಾಗಿದೆ.
- ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ 11 ಪಟ್ಟು ಏರಿಕೆ: ಇದೇ ಅವಧಿಯಲ್ಲಿ ಎಲೆಕ್ಟ್ರಾನಿಕ್ಸ್ ರಫ್ತು ₹38,000 ಕೋಟಿಯಿಂದ ₹4.24 ಲಕ್ಷ ಕೋಟಿಗೆ ಬೆಳೆದಿದೆ.
- ಮೂರನೇ ಅತಿದೊಡ್ಡ ರಫ್ತು ವಲಯ: ಎಲೆಕ್ಟ್ರಾನಿಕ್ ಸರಕುಗಳು ಈಗ ಭಾರತದ ಮೂರನೇ ಅತಿದೊಡ್ಡ ರಫ್ತು ವಿಭಾಗವಾಗಿ ಹೊರಹೊಮ್ಮಿದ್ದು, 2025-26 ಹಣಕಾಸು ವರ್ಷದಲ್ಲಿ ರಫ್ತು 47.96 ಬಿಲಿಯನ್ ಅಮೆರಿಕನ್ ಡಾಲರ್‌ಗೆ ತಲುಪಿದೆ.
- ಉದ್ಯೋಗ ಮತ್ತು ಮಹಿಳೆಯರ ಭಾಗವಹಿಸುವಿಕೆ: ಎಲೆಕ್ಟ್ರಾನಿಕ್ ಉತ್ಪಾದನಾ ವ್ಯವಸ್ಥೆಯು ಸುಮಾರು 25 ಲಕ್ಷ ಉದ್ಯೋಗಗಳಿಗೆ ಬೆಂಬಲ ನೀಡುತ್ತಿದ್ದು, ಒಟ್ಟು ಉದ್ಯೋಗಿಗಳಲ್ಲಿ ಮಹಿಳೆಯರ ಪಾಲು ಸುಮಾರು 30% ರಷ್ಟಿದೆ.
ಭಾರತದ ಸೆಮಿಕಂಡಕ್ಟರ್ ಸಮಗ್ರ ವ್ಯವಸ್ಥೆಯ ನಿರ್ಮಾಣ
ಭಾರತದ ಸೆಮಿಕಂಡಕ್ಟರ್ ಸಮಗ್ರ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸಂಪುಟವು ₹1.27 ಲಕ್ಷ ಕೋಟಿ ವೆಚ್ಚದ 'ಸೆಮಿಕಾನ್ 2.0' ಗೆ ಅನುಮೋದನೆ ನೀಡಿದೆ. ISM 1.0 ಅಡಿಯಲ್ಲಿ, ₹1.64 ಲಕ್ಷ ಕೋಟಿ ಮೌಲ್ಯದ 12 ಸೆಮಿಕಂಡಕ್ಟರ್ ಘಟಕಗಳಿಗೆ ಅನುಮೋದನೆ ನೀಡಲಾಗಿದೆ. ಮೂರು ಸೌಲಭ್ಯಗಳು ಈಗಾಗಲೇ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿದ್ದು, ಮತ್ತೊಂದು ಘಟಕವು ಈ ವರ್ಷ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
ಮೊಬೈಲ್ ಫೋನ್‌ಗಳು: ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿ

- ಜಾಗತಿಕ ಮೊಬೈಲ್ ಉತ್ಪಾದನಾ ಕೇಂದ್ರ: ಭಾರತವು ಈಗ ವಿಶ್ವದ 2ನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ದೇಶವಾಗಿದ್ದು, 2014-15 ಹಣಕಾಸು ವರ್ಷದಲ್ಲಿ 153 ನೇ ಅತಿದೊಡ್ಡ ರಫ್ತು ವಸ್ತುವಾಗಿದ್ದ ಮೊಬೈಲ್ ಫೋನ್‌ಗಳು, 2025-26 ಹಣಕಾಸು ವರ್ಷದಲ್ಲಿ ಭಾರತದ ಅತಿದೊಡ್ಡ ರಫ್ತು ಉತ್ಪನ್ನವಾಗಿ ಹೊರಹೊಮ್ಮಿವೆ.
- ಮೊಬೈಲ್ ಫೋನ್ ಉತ್ಪಾದನೆಯಲ್ಲಿ 33 ಪಟ್ಟು ಹೆಚ್ಚಳ: ಉತ್ಪಾದನೆಯು 2014-15 ರಲ್ಲಿ ₹18,000 ಕೋಟಿಯಿಂದ 2025-26 ರಲ್ಲಿ ₹6.27 ಲಕ್ಷ ಕೋಟಿಗೆ ಏರಿಕೆಯಾಗಿದೆ.
- ಮೊಬೈಲ್ ಫೋನ್ ರಫ್ತಿನಲ್ಲಿ 165 ಪಟ್ಟು ಜಿಗಿತ: ಇದೇ ಅವಧಿಯಲ್ಲಿ ರಫ್ತು ₹1,500 ಕೋಟಿಯಿಂದ ₹2.59 ಲಕ್ಷ ಕೋಟಿಗೆ ಹೆಚ್ಚಾಗಿದೆ.
- ಉದ್ಯೋಗ ಮತ್ತು ಮಹಿಳೆಯರ ಭಾಗವಹಿಸುವಿಕೆ: ಮೊಬೈಲ್ ತಯಾರಿಕಾ ಕ್ಷೇತ್ರದಲ್ಲಿರುವ 12 ಲಕ್ಷ ಉದ್ಯೋಗಗಳಲ್ಲಿ ಸುಮಾರು 70% ರಷ್ಟು ಮಹಿಳೆಯರಿದ್ದಾರೆ.
ಸುಧಾರಿತ ದೂರಸಂಪರ್ಕ ಮೂಲಸೌಕರ್ಯ
- ದೂರವಾಣಿ ಸಂಪರ್ಕ: ದೂರವಾಣಿ ಸಂಪರ್ಕಗಳು 2014 ರಲ್ಲಿದ್ದ 93.3 ಕೋಟಿಯಿಂದ 2026 ರ ಜೂನ್ ಅಂತ್ಯದ ವೇಳೆಗೆ 134.8+ ಕೋಟಿಗೆ ಏರಿಕೆಯಾಗಿವೆ.
- ಹೆಚ್ಚಿನ ಟೆಲಿ-ಸಾಂದ್ರತೆ : ಟೆಲಿ-ಸಾಂದ್ರತೆಯು 2014 ರಲ್ಲಿ 75.23% ರಷ್ಟಿದ್ದು, 2026 ರ ಜೂನ್ ಅಂತ್ಯಕ್ಕೆ 94.31% ಗೆ ಬೆಳೆದಿದೆ.
- ವೈರ್‌ಲೆಸ್ ಮೊಬೈಲ್ ಚಂದಾದಾರರು: ಸಕ್ರಿಯ ವೈರ್‌ಲೆಸ್ ಮೊಬೈಲ್ ಚಂದಾದಾರರ ಸಂಖ್ಯೆ ಜೂನ್ 2026 ರಲ್ಲಿ 1201.06 ಮಿಲಿಯನ್‌ಗೆ ತಲುಪಿದೆ.
ಇಂಟರ್ನೆಟ್ ಮತ್ತು ಡಿಜಿಟಲ್ ಸಂಪರ್ಕ

- ಇಂಟರ್ನೆಟ್ ಬಳಕೆದಾರರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚು: ಇಂಟರ್ನೆಟ್ ಚಂದಾದಾರರು 2014 ರಲ್ಲಿದ್ದ 25.15 ಕೋಟಿಯಿಂದ 2026 ರ ಮಾರ್ಚ್ ಅಂತ್ಯಕ್ಕೆ 109.2+ ಕೋಟಿಗೆ ಹೆಚ್ಚಳವಾಗಿದ್ದಾರೆ.
- ಲಭ್ಯವಿರುವ ಮೊಬೈಲ್ ಡೇಟಾ: ವೈರ್‌ಲೆಸ್ ಡೇಟಾ ವೆಚ್ಚವು 2014 ರಲ್ಲಿ ಪ್ರತಿ ಜಿಬಿಗೆ ₹308 ರಷ್ಟಿದ್ದುದು 2026 ರಲ್ಲಿ ಪ್ರತಿ ಜಿಬಿಗೆ ₹7.51 ಕ್ಕೆ ಇಳಿಕೆಯಾಗಿದೆ, ಇದರಿಂದಾಗಿ ಡಿಜಿಟಲ್ ಸೇವೆಗಳು ಹೆಚ್ಚು ಕೈಗೆಟುಕುವಂತಿವೆ.
- ಮೊಬೈಲ್ ಬ್ರಾಡ್‌ಬ್ಯಾಂಡ್ ವೇಗ: ಒಕ್ಲಾ ನ ಜಾಗತಿಕ ಸ್ಪೀಡ್‌ಟೆಸ್ಟ್ ಸೂಚ್ಯಂಕದ ಪ್ರಕಾರ ಸರಾಸರಿ ಮೊಬೈಲ್ ಬ್ರಾಡ್‌ಬ್ಯಾಂಡ್ ಡೌನ್‌ಲೋಡ್ ವೇಗವು ಮಾರ್ಚ್ 2022 ರಲ್ಲಿ 13.67 ಎಂಬಿಪಿಎಸ್ ರಷ್ಟಿದ್ದು, ಡಿಸೆಂಬರ್ 2025 ರಲ್ಲಿ 132.00 ಎಂಬಿಪಿಎಸ್ ಗೆ ಹೆಚ್ಚಾಗಿದೆ.
- ದೇಶವ್ಯಾಪಿ 5G ಹರಡುವಿಕೆ: 5G ಸೇವೆಗಳು ಈಗ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 99.9% ಜಿಲ್ಲೆಗಳಲ್ಲಿ ಲಭ್ಯವಿದೆ. ಜೂನ್ 2026 ರಲ್ಲಿ 5G ಬೇಸ್ ಟ್ರಾನ್ಸ್‌ಸಿವರ್ ಸ್ಟೇಷನ್‌ಗಳ ಸಂಖ್ಯೆ 5.63 ಲಕ್ಷಕ್ಕೆ ತಲುಪಿದೆ.
- ಗ್ರಾಮೀಣ ಮೊಬೈಲ್ ಸಂಪರ್ಕದ ವಿಸ್ತರಣೆ: ಬಿಎಸ್‌ಎನ್‌ಎಲ್ ಮತ್ತು ಇತರ ಆಪರೇಟರ್‌ಗಳಿಂದ ಒಟ್ಟು 6.31 ಲಕ್ಷ ಹಳ್ಳಿಗಳಿಗೆ 4G ಸೇವೆಗಳನ್ನು ತಲುಪಿಸಲಾಗಿದೆ.
- ಭಾರತ್‌ನೆಟ್ ಉಪಕ್ರಮದಡಿಯಲ್ಲಿ ಸಂಪರ್ಕ: ಜೂನ್ 2026 ರ ವೇಳೆಗೆ, 8.5 ಲಕ್ಷಕ್ಕೂ ಹೆಚ್ಚು ಕಿಲೋಮೀಟರ್ ಆಪ್ಟಿಕಲ್ ಫೈಬರ್ ಕೇಬಲ್ ಬೆಂಬಲದೊಂದಿಗೆ 2.21 ಲಕ್ಷ ಗ್ರಾಮ ಪಂಚಾಯಿತಿಗಳು ಸೇವೆಗೆ ಸಿದ್ಧವಾಗಿವೆ.
- ಪಿಎಂ ವಾಣಿ: ಪಿಎಂ- ವಾಣಿ ಸಾರ್ವಜನಿಕ ಡೇಟಾ ಕಚೇರಿಗಳು ಮತ್ತು ಇತರ ವ್ಯವಸ್ಥೆಯ ಪಾಲುದಾರರ ನೆಟ್‌ವರ್ಕ್ ಮೂಲಕ ಕೈಗೆಟುಕುವ ಸಾರ್ವಜನಿಕ ವೈ-ಫೈ ಅನ್ನು ಒದಗಿಸುತ್ತದೆ. 28 ಫೆಬ್ರವರಿ 2026 ರ ವೇಳೆಗೆ ದೇಶಾದ್ಯಂತ 4 ಲಕ್ಷಕ್ಕೂ ಹೆಚ್ಚು ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲಾಗಿದೆ. ಮೇ 2026 ರಲ್ಲಿ ಪರಿಚಯಿಸಲಾದ ಹೊಸ ಸುಧಾರಣೆಗಳು ಕ್ಯೂಆರ್-ಆಧಾರಿತ ದೃಢೀಕರಣ, 15, 30 ಮತ್ತು 60-ನಿಮಿಷಗಳ ವೈ-ಫೈ ಯೋಜನೆಗಳು ಮತ್ತು ಪ್ರಮಾಣೀಕೃತ ಹಾಟ್‌ಸ್ಪಾಟ್ ಹೆಸರುಗಳನ್ನು ಸಕ್ರಿಯಗೊಳಿಸುತ್ತವೆ.
ಭಾರತವು 6ಜಿ ಯುಗಕ್ಕೆ ಸಿದ್ಧವಾಗುತ್ತಿದೆ
'ಭಾರತ್ 6ಜಿ ವಿಷನ್' ಸ್ವದೇಶಿ ಸಂಶೋಧನೆ, ಬೌದ್ಧಿಕ ಆಸ್ತಿ, ಮಾನದಂಡಗಳ ಅಭಿವೃದ್ಧಿ ಮತ್ತು ಮುಂದಿನ ಪೀಳಿಗೆಯ ಟೆಲಿಕಾಂ ನಾವೀನ್ಯತೆಯ ಮೇಲೆ ಗಮನ ಹರಿಸುವ ಮೂಲಕ 2030 ರ ವೇಳೆಗೆ 6ಜಿ ತಂತ್ರಜ್ಞಾನದಲ್ಲಿ ಭಾರತವನ್ನು ಜಾಗತಿಕ ನಾಯಕರನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.
ಯುಪಿಐ: ತಡೆರಹಿತ ಡಿಜಿಟಲ್ ಪಾವತಿಗಳಿಗೆ ಶಕ್ತಿ

- ಯುಪಿಐ ಜಾಗತಿಕ ರಿಯಲ್-ಟೈಮ್ ಪಾವತಿ ವಹಿವಾಟಿನ ಪ್ರಮಾಣದಲ್ಲಿ ಸುಮಾರು 50% ರಷ್ಟನ್ನು ಹೊಂದಿದ್ದು, ಪ್ರಮಾಣದ ಆಧಾರದ ಮೇಲೆ ವಿಶ್ವದ ಅತಿದೊಡ್ಡ ರಿಯಲ್-ಟೈಮ್ ಪಾವತಿ ವ್ಯವಸ್ಥೆಯಾಗಿದೆ.
- ವಹಿವಾಟಿನ ಪ್ರಮಾಣ: ಯುಪಿಐ 2025-26 ಹಣಕಾಸು ವರ್ಷದಲ್ಲಿ ₹314.23 ಲಕ್ಷ ಕೋಟಿ ಮೌಲ್ಯದ 24,161.69 ಕೋಟಿ ವಹಿವಾಟುಗಳನ್ನು ಸಂಸ್ಕರಿಸಿದೆ.
- ಭಾರತದ ಅತಿದೊಡ್ಡ ಡಿಜಿಟಲ್ ಪಾವತಿ ಜಾಲ: ಯುಪಿಐ 55.49 ಕೋಟಿಗೂ ಹೆಚ್ಚು ವ್ಯಕ್ತಿಗಳಿಗೆ, 6.5 ಕೋಟಿ ವ್ಯಾಪಾರಿಗಳಿಗೆ ಸೇವೆ ಸಲ್ಲಿಸುತ್ತಿದೆ ಮತ್ತು 731 ಬ್ಯಾಂಕ್‌ಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುತ್ತದೆ, ಇದು ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ.
- ಭಾರತದ ಡಿಜಿಟಲ್ ಪಾವತಿಗಳಲ್ಲಿ ಯುಪಿಐ ನ ಪಾಲು: 2025–26 ರ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಡಿಜಿಟಲ್ ಪಾವತಿ ವಹಿವಾಟುಗಳ ಪ್ರಮಾಣದಲ್ಲಿ ಯುಪಿಐ ಶೇಕಡಾ 85% ರಷ್ಟು ಪಾಲನ್ನು ಹೊಂದಿದೆ.
- ಮಾಸಿಕ ವಹಿವಾಟುಗಳ ಜಿಗಿತ: 2016 ರಲ್ಲಿ ತಿಂಗಳಿಗೆ 0.01 ಕೋಟಿ ಇದ್ದ ಯುಪಿಐ ವಹಿವಾಟುಗಳು 2025 ರ ವೇಳೆಗೆ ತಿಂಗಳಿಗೆ 2,000+ ಕೋಟಿಗೂ ಹೆಚ್ಚು ವಹಿವಾಟುಗಳಿಗೆ ಏರಿಕೆಯಾಗಿವೆ, ಇದು ಭಾರತದಾದ್ಯಂತ ಇದರ ವೇಗದ ಅಳವಡಿಕೆಯನ್ನು ತೋರಿಸುತ್ತದೆ.
- ಜಾಗತಿಕ ಮಟ್ಟದಲ್ಲಿ ಯುಪಿಐ: ಯುಪಿಐ ಅನ್ನು ಈಗ ಕಾಂಬೋಡಿಯಾ, ಸಿಂಗಾಪುರ, ಯುಎಇ, ಫ್ರಾನ್ಸ್, ಮಾರಿಷಸ್ ಮುಂತಾದ 11 ವಿದೇಶಗಳಲ್ಲಿ ಸ್ವೀಕರಿಸಲಾಗುತ್ತಿದೆ.
ಡಿಜಿಟಲ್ ವಾಣಿಜ್ಯ
- ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್: ಒಎನ್‌ಡಿಸಿ ವೇದಿಕೆಗಳಾದ್ಯಂತ ಕೊಳ್ಳುವವರನ್ನು ಮತ್ತು ಮಾರಾಟಗಾರರನ್ನು ಸಂಪರ್ಕಿಸುವ ಮುಕ್ತ ಡಿಜಿಟಲ್ ವಾಣಿಜ್ಯ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ.
- ಜೂನ್ 2026 ರ ವೇಳೆಗೆ, ಇದು 20 ಕೋಟಿಗೂ ಹೆಚ್ಚು ಕೊಳ್ಳುವವರನ್ನು, 5 ಲಕ್ಷ ಮಾರಾಟಗಾರರನ್ನು, 1,000 ನಗರಗಳಲ್ಲಿ ಉಪಸ್ಥಿತಿಯನ್ನು ಮತ್ತು ತಿಂಗಳಿಗೆ ಸುಮಾರು 90 ಲಕ್ಷ ವಹಿವಾಟುಗಳನ್ನು ಹೊಂದಿತ್ತು.
- ಇದು ಇ-ಸರಸ್ ಮತ್ತು ಇಂಡಿಯಾಹ್ಯಾಂಡ್‌ಮೇಡ್ ಜೊತೆಗಿನ ಸಂಯೋಜನೆಯಿಂದ 11 ಕ್ಕೂ ಹೆಚ್ಚು ಬೈಯರ್ ಆಪ್‌ಗಳ ಮೂಲಕ ಸ್ವಸಹಾಯ ಸಂಘಗಳು, ನೇಕಾರರು ಮತ್ತು ಕುಶಲಕರ್ಮಿಗಳಿಗೆ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸಿದೆ, ಆದರೆ 'ಸಹಾಯಕ್' ವಾಟ್ಸಾಪ್ ಬೋಟ್ 5 ಭಾಷೆಗಳಲ್ಲಿ ಸಣ್ಣ ಉದ್ಯಮಗಳಿಗೆ ಬೆಂಬಲ ನೀಡುತ್ತದೆ.
- ಗವರ್ನ್ಮೆಂಟ್ ಇ-ಮಾರ್ಕೆಟ್ಪ್ಲೇಸ್: ಜೆಮ್ ಪಾರದರ್ಶಕ, ಪರಿಣಾಮಕಾರಿ ಮತ್ತು ಕಾಗದರಹಿತವಾಗಿಸುವ ಮೂಲಕ ಸಾರ್ವಜನಿಕ ಸಂಗ್ರಹಣೆಯನ್ನು ಪರಿವರ್ತಿಸಿದೆ.
- ಜೂನ್ 2026 ರ ವೇಳೆಗೆ, ಇದು 2025-26 ಹಣಕಾಸು ವರ್ಷದಲ್ಲಿ ₹5 ಲಕ್ಷ ಕೋಟಿ ಸೇರಿದಂತೆ ಒಟ್ಟು ₹18.4 ಲಕ್ಷ ಕೋಟಿಗೂ ಹೆಚ್ಚು ಗ್ರಾಸ್ ಮರ್ಚಂಡೈಸ್ ಮೌಲ್ಯವನ್ನು ದಾಖಲಿಸಿದೆ ಮತ್ತು 11 ಲಕ್ಷಕ್ಕೂ ಹೆಚ್ಚು ಎಂಎಸ್ಎಂಇಗಳಿಗೆ ಸರ್ಕಾರಿ ಮಾರುಕಟ್ಟೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ.
- ಸ್ವಾಯತ್ ಉಪಕ್ರಮವು ನವೋದ್ಯಮಗಳು, ಮಹಿಳೆಯರು ಮತ್ತು ಯುವಕರ ನೇತೃತ್ವದ ಉದ್ಯಮಗಳು ಸರ್ಕಾರಿ ಖರೀದಿದಾರರನ್ನು ನೇರವಾಗಿ ತಲುಪಲು ಅನುವು ಮಾಡಿಕೊಡುವ ಮೂಲಕ ಜೆಮ್ ಮೂಲಕ ಒಳಗೊಳ್ಳುವ ಸಾರ್ವಜನಿಕ ಸಂಗ್ರಹಣೆಯನ್ನು ಉತ್ತೇಜಿಸುತ್ತದೆ.
- 2025-26 ಹಣಕಾಸು ವರ್ಷದ ವೇಳೆಗೆ, ಮಹಿಳಾ ನೇತೃತ್ವದ ಉದ್ಯಮಗಳು ₹83,323 ಕೋಟಿ ಮತ್ತು ನವೋದ್ಯಮಗಳು ₹54,005.8 ಕೋಟಿ ಒಟ್ಟು ಆರ್ಡರ್ ಮೌಲ್ಯವನ್ನು ದಾಖಲಿಸಿದ್ದು, ಈ ಉಪಕ್ರಮದ ಬೆಳೆಯುತ್ತಿರುವ ವ್ಯಾಪ್ತಿಯನ್ನು ಪ್ರದರ್ಶಿಸುತ್ತವೆ.
G2C ಸೇವೆಗಳಲ್ಲಿ ಕ್ರಾಂತಿ ತರುತ್ತಿರುವ ಇ-ಆಡಳಿತ ಉಪಕ್ರಮಗಳು
- ಡಿಜಿಲಾಕರ್ : ಡಿಜಿಲಾಕರ್ ಭೌತಿಕ ದಾಖಲೆಗಳ ಬದಲಿಗೆ ಸುರಕ್ಷಿತ ಡಿಜಿಟಲ್ ವ್ಯಾಲೆಟ್ ಒದಗಿಸುತ್ತಿದೆ. 31 ಜುಲೈ 2026 ರ ವೇಳೆಗೆ, ಈ ವೇದಿಕೆಯು 72 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿದೆ ಮತ್ತು 934+ ಕೋಟಿಗೂ ಹೆಚ್ಚು ದಾಖಲೆಗಳನ್ನು ನೀಡಿದೆ.
- ಉಮಂಗ್ : ಉಮಂಗ್ ಸರ್ಕಾರಿ ಸೇವೆಗಳಿಗೆ ಏಕೈಕ ಡಿಜಿಟಲ್ ಗೇಟ್‌ವೇ ಆಗಿದ್ದು, 2017 ರಲ್ಲಿ 166 ಸೇವೆಗಳಿಂದ 23 ಜುಲೈ 2026 ರ ವೇಳೆಗೆ 2585 ಸೇವೆಗಳಿಗೆ ವಿಸ್ತರಿಸಿದೆ. ವಹಿವಾಟುಗಳು 4.6 ಕೋಟಿಯಿಂದ 23 ಜುಲೈ 2026 ರ ವೇಳೆಗೆ 798 ಕೋಟಿಗೂ ಹೆಚ್ಚು ಬೆಳೆದಿದ್ದು, ಇದು ವ್ಯಾಪಕ ಡಿಜಿಟಲ್ ಅಳವಡಿಕೆಯನ್ನು ಪ್ರತಿಬಿಂಬಿಸುತ್ತದೆ.
- ಗುರುತಿನ ವ್ಯವಸ್ಥೆ: ಸುರಕ್ಷಿತ ಮತ್ತು ತ್ವರಿತ ಡಿಜಿಟಲ್ ದೃಢೀಕರಣಕ್ಕಾಗಿ ವಿಶ್ವಾಸಾರ್ಹ ಜೈವಿಕ ಮಿತಿ (Biometric) ಆಧಾರಿತ ಗುರುತಿನ ವೇದಿಕೆಯನ್ನು ಸ್ಥಾಪಿಸಲಾಗಿದೆ. ಈ ಗುರುತಿನ ದಾಖಲೆಗಳ ವಿತರಣೆಯು 2010-11 ರಲ್ಲಿ 0.42 ಕೋಟಿಯಿಂದ ಜುಲೈ 2026 ರ ವೇಳೆಗೆ 145 ಕೋಟಿಗೂ ಹೆಚ್ಚಾಗಿದೆ.
- ಕಾಮನ್ ಸರ್ವಿಸ್ ಸೆಂಟರ್ಗಳು (ಸಿಎಸ್‌ಸಿ): ಸಿಎಸ್‌ಸಿ ಗಳು ನಾಗರಿಕ ಸೇವೆಗಳಿಗೆ ಭೌತಿಕ ಪ್ರವೇಶ ಕೇಂದ್ರಗಳನ್ನು ಒದಗಿಸುತ್ತವೆ, ಇದರಿಂದ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯ ಕಡಿಮೆಯಾಗುತ್ತದೆ. ಜೂನ್ 2026 ರ ವೇಳೆಗೆ, ಭಾರತದಾದ್ಯಂತ 5.16 ಲಕ್ಷಕ್ಕೂ ಹೆಚ್ಚು ಸಿಎಸ್‌ಸಿ ಗಳು ಕಾರ್ಯಾಚರಿಸುತ್ತಿದ್ದವು.
- ನೇರ ನಗದು ವರ್ಗಾವಣೆ: 56 ಸಚಿವಾಲಯಗಳ 318 ಯೋಜನೆಗಳಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಕಲ್ಯಾಣ ಪ್ರಯೋಜನಗಳನ್ನು ವರ್ಗಾಯಿಸಲು ಈ ವ್ಯವಸ್ಥೆ ಅನುವು ಮಾಡಿಕೊಡುತ್ತದೆ. ದೇಶಾದ್ಯಂತ DBT ಮೂಲಕ ₹52 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ವರ್ಗಾಯಿಸಲಾಗಿದೆ.
ಶಿಕ್ಷಣದ ಪ್ರವೇಶವನ್ನು ಸುಲಭಗೊಳಿಸುತ್ತಿರುವ ಡಿಜಿಟಲ್ ವೇದಿಕೆಗಳು
- ದೀಕ್ಷಾ: ದೀಕ್ಷಾ ಪಠ್ಯಕ್ರಮ-ಸಂಬಂಧಿತ ವಿಷಯ, ಕ್ಯೂಆರ್-ಕೋಡ್ ಪಠ್ಯಪುಸ್ತಕಗಳು, ಶಿಕ್ಷಕರ ತರಬೇತಿ ಮತ್ತು ಸುಲಭವಾಗಿ ಲಭ್ಯವಾಗುವ ಕಲಿಕಾ ಸಂಪನ್ಮೂಲಗಳನ್ನು ಒದಗಿಸುತ್ತದೆ. 10 ಆಗಸ್ಟ್ 2026 ರಂತೆ, ಇದು 2.35 ಕೋಟಿ ನೋಂದಾಯಿತ ಬಳಕೆದಾರರನ್ನು ಮತ್ತು 3.58 ಲಕ್ಷ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ.
- ಸ್ವಯಂ: ಸ್ವಯಂ 9 ನೇ ತರಗತಿಯಿಂದ ಸ್ನಾತಕೋತ್ತರ ಮಟ್ಟದವರೆಗೆ ಉಚಿತ ಕೋರ್ಸ್‌ಗಳನ್ನು ನೀಡುತ್ತದೆ. 10 ಆಗಸ್ಟ್ 2026 ರಂತೆ, ಈ ವೇದಿಕೆಯು ವಿವಿಧ ವಿಷಯಗಳಲ್ಲಿ 20,000 ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಹೊಂದಿದ್ದು, ಒಟ್ಟು 6.5 ಕೋಟಿಗೂ ಹೆಚ್ಚು ನೋಂದಣಿಗಳನ್ನು ಹೊಂದಿದೆ.
- ಸ್ವಯಂ ಪ್ರಭಾ: ಇದು ಜಿಸ್ಯಾಟ್-15 ಉಪಗ್ರಹದ ಮೂಲಕ 24x7 ಉತ್ತಮ ಗುಣಮಟ್ಟದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಬಿತ್ತರಿಸಲು 40 ಡಿಟಿಹೆಚ್ ಚಾನಲ್‌ಗಳನ್ನು ಬಳಸುತ್ತದೆ, ಇದರಿಂದ ವಿದ್ಯಾರ್ಥಿಗಳು ಇಂಟರ್ನೆಟ್ ಸಂಪರ್ಕವಿಲ್ಲದೆಯೂ ಕಲಿಕೆಯನ್ನು ಪಡೆಯಬಹುದು.
-
- ಪಿಎಂ ಇ-ವಿದ್ಯಾ : ಪಿಎಂ ಇ-ವಿದ್ಯಾಗೆ ದೀಕ್ಷಾ, ಸ್ವಯಂ, ಸ್ವಯಂ ಪ್ರಭಾ, ಸಮುದಾಯ ರೇಡಿಯೋ ಮತ್ತು ಶೈಕ್ಷಣಿಕ ಟಿವಿಗಳನ್ನು ಸಂಯೋಜಿಸಿ ತಡೆರಹಿತ ಮತ್ತು ಸಮಗ್ರ ಕಲಿಕೆಯನ್ನು ಬೆಂಬಲಿಸಲಾಗುತ್ತದೆ.
-
- ಅಪಾರ್ : ಅಪಾರ್ ಶೈಕ್ಷಣಿಕ ದಾಖಲೆಗಳನ್ನು ಸಂಗ್ರಹಿಸಲು ಮತ್ತು ಪರಿಶೀಲಿಸಲು ವಿದ್ಯಾರ್ಥಿಗಳಿಗೆ ಅನನ್ಯ ಡಿಜಿಟಲ್ ಶೈಕ್ಷಣಿಕ ಗುರುತನ್ನು ಒದಗಿಸುತ್ತದೆ. ಜೂನ್ 2026 ರ ವೇಳೆಗೆ 33.74 ಕೋಟಿಗೂ ಹೆಚ್ಚು ಅಪಾರ್ ಐಡಿಗಳನ್ನು ನೀಡಲಾಗಿದೆ.
ಪರೀಕ್ಷಾ ಅಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ಚೌಕಟ್ಟು
2026 ರ ಜುಲೈ 31 ರಂದು ಲೋಕಸಭೆಯಲ್ಲಿ ಮಂಡಿಸಲಾದ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ 2026, ಕಠಿಣ ಶಿಕ್ಷೆಗಳು ಮತ್ತು ಕಾಲಮಿತಿಯ ನ್ಯಾಯ ವ್ಯವಸ್ಥೆಯನ್ನು ಪ್ರಸ್ತಾಪಿಸುತ್ತದೆ. ಈ ವಿಧೇಯಕದ ಅಡಿಯಲ್ಲಿ:
ವ್ಯಕ್ತಿಗತವಾಗಿ ಅಕ್ರಮ ಎಸಗುವವರಿಗೆ 5 ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು ₹50 ಲಕ್ಷದವರೆಗೆ ದಂಡ.
ಸೇವಾ ಪೂರೈಕೆದಾರರಿಗೆ ₹5 ಕೋಟಿಯವರೆಗೆ ದಂಡ ಮತ್ತು 8 ವರ್ಷಗಳ ನಿಷೇಧ.
ಸಂಘಟಿತ ಪರೀಕ್ಷಾ-ಅಕ್ರಮ ಸಿಂಡಿಕೇಟ್‌ಗಳಿಗೆ 7 ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ ₹10 ಕೋಟಿ ದಂಡ.
ತನಿಖೆಯನ್ನು 2 ತಿಂಗಳೊಳಗೆ ಪೂರ್ಣಗೊಳಿಸಬೇಕು, ಚಾರ್ಜ್‌ಶೀಟ್ ಸಲ್ಲಿಸಿದ 3 ತಿಂಗಳೊಳಗೆ ವಿಚಾರಣೆ ಮುಗಿಸಬೇಕು ಮತ್ತು ಹೈಕೋರ್ಟ್ ಮೆಟ್ಟಿಲೇರುವ ಮೇಲ್ಮನವಿಗಳನ್ನು 3 ತಿಂಗಳೊಳಗೆ ವಿಲೇವಾರಿ ಮಾಡಬೇಕು.
ಭಾರತದ ಡಿಜಿಟಲ್ ಕಾರ್ಯಪಡೆಗೆ ಶಕ್ತಿ ತುಂಬುವುದು
- ಫ್ಯೂಚರ್ಸ್ಕಿಲ್ಸ್ ಪ್ರೈಮ್: ಇದು ಇಂದಿನ ವೇಗವಾಗಿ ವಿಕಸನಗೊಳ್ಳುತ್ತಿರುವ ಡಿಜಿಟಲ್ ಜಗತ್ತಿನಲ್ಲಿ ಅಗತ್ಯವಿರುವ ಕಟಿಂಗ್-ಎಡ್ಜ್ ಕೌಶಲ್ಯಗಳನ್ನು ಕಲಿಯುವವರಿಗೆ ಒದಗಿಸುತ್ತದೆ. 10 ಆಗಸ್ಟ್ 2026 ರಂತೆ, ಡಿಜಿಟಲ್ ಕೌಶಲ್ಯಗಳಿಗಾಗಿ 34 ಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಈ ವೇದಿಕೆ ಹೊಂದಿದೆ.
- ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್: ಎಸ್‌ಐಡಿಎಚ್ ಕೌಶಲ್ಯ ತರಬೇತಿ, ಡಿಜಿಟಲ್ ಕಲಿಕೆ ಮತ್ತು ಉದ್ಯೋಗಾವಕಾಶಗಳನ್ನು ಒಂದೇ ವೇದಿಕೆಗೆ ತರುತ್ತದೆ. 2 ಆಗಸ್ಟ್ 2026 ರಂತೆ, ಇದು 20.10 ಮಿಲಿಯನ್ ನೋಂದಣಿಗಳನ್ನು ಹೊಂದಿದೆ, 3,643 ಕೋರ್ಸ್‌ಗಳನ್ನು ಒದಗಿಸುತ್ತದೆ ಮತ್ತು 1 ಮಿಲಿಯನ್‌ಗೂ ಹೆಚ್ಚು ಅವಕಾಶಗಳನ್ನು ಸೃಷ್ಟಿಸಿದೆ.
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫರ್ಮೇಷನ್ ಟೆಕ್ನಾಲಜಿ: ಎನ್‌ಐಇಎಲ್‌ಐಟಿ ಭಾರತದಾದ್ಯಂತ 56 ಕೇಂದ್ರಗಳು ಮತ್ತು 9,000 ಕ್ಕೂ ಹೆಚ್ಚು ಪಾಲುದಾರ ಸಂಸ್ಥೆಗಳ ಮೂಲಕ ಕಂಪ್ಯೂಟರ್ ಪರಿಕಲ್ಪನೆಗಳ ಜಾಗೃತಿ ಮತ್ತು ಕಂಪ್ಯೂಟರ್ ಪರಿಕಲ್ಪನೆಗಳ ಕೋರ್ಸ್ ಸೇರಿದಂತೆ ಡಿಜಿಟಲ್ ಸಾಕ್ಷರತೆ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ತಲುಪಿಸುತ್ತದೆ. ಕಳೆದ ಮೂರು ಹಣಕಾಸು ವರ್ಷಗಳಲ್ಲಿ 31.92 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ.
- ಇಂಡಿಯಾ ಎಐ ಮಿಷನ್ : ಇಂಡಿಯಾ ಎಐ ಮಿಷನ್ ಎಐ ಶಿಕ್ಷಣ, ಮೂಲಸೌಕರ್ಯ ಮತ್ತು ಜವಾಬ್ದಾರಿಯುತ ಎಐ ಅಳವಡಿಕೆಯನ್ನು ಬಲಪಡಿಸುತ್ತಿದೆ. ಇದು 'ಇಂಡಿಯಾ ಎಐ ಕೋಶ್' ನಂತಹ ಉಪಕ್ರಮಗಳ ಮೂಲಕ ಶಾಲೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವೃತ್ತಿಪರ ತರಬೇತಿ ಕಾರ್ಯಕ್ರಮಗಳಲ್ಲಿ ಎಐ ಕೌಶಲ್ಯವನ್ನು ಉತ್ತೇಜಿಸುತ್ತಿದೆ.
ಭಾರತದ ಬೆಳೆಯುತ್ತಿರುವ ಡಿಜಿಟಲ್ ವೇಗ
ಭಾರತದ ಡಿಜಿಟಲ್ ಬೆಳವಣಿಗೆಯು ನಾಗರಿಕರು, ಉದ್ಯಮಗಳು ಮತ್ತು ಸಂಸ್ಥೆಗಳು ಸರ್ಕಾರ ಮತ್ತು ಅರ್ಥವ್ಯವಸ್ಥೆಯೊಂದಿಗೆ ಸಂವಹನ ನಡೆಸುವ ವಿಧಾನವನ್ನು ಬದಲಾಯಿಸುತ್ತಿದೆ. ವೇಗವಾಗಿ ವಿಸ್ತರಿಸುತ್ತಿರುವ ಡಿಜಿಟಲ್ ವ್ಯವಸ್ಥೆಯು ವೇಗದ ಸೇವೆಗಳು, ಹೆಚ್ಚಿನ ಪಾರದರ್ಶಕತೆ ಮತ್ತು ವ್ಯಾಪಕ ಪ್ರವೇಶವನ್ನು ಸಕ್ರಿಯಗೊಳಿಸುತ್ತಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ನಾವೀನ್ಯತೆ, ಉದ್ಯಮಶೀಲತೆ ಮತ್ತು ಒಳಗೊಳ್ಳುವ ಬೆಳವಣಿಗೆಗೆ ಬಲವಾದ ಅಡಿಪಾಯವನ್ನು ಸೃಷ್ಟಿಸುತ್ತಿದೆ. ಉದಯೋನ್ಮುಖ ತಂತ್ರಜ್ಞಾನಗಳ ಹೆಚ್ಚುತ್ತಿರುವ ಅಳವಡಿಕೆಯು ಕ್ಷೇತ್ರಗಳಾದ್ಯಂತ ಹೊಸ ಅವಕಾಶಗಳನ್ನು ತೆರೆಯುತ್ತಿದೆ ಮತ್ತು ಭಾರತದ ಜಾಗತಿಕ ಡಿಜಿಟಲ್ ಉಪಸ್ಥಿತಿಯನ್ನು ಬಲಪಡಿಸುತ್ತಿದೆ. ಡಿಜಿಟಲ್ ಸಾಮರ್ಥ್ಯಗಳು ಆಡಳಿತವನ್ನು ಹೆಚ್ಚು ಸ್ಪಂದಿಸುವಂತೆ, ಪರಿಣಾಮಕಾರಿಯಾಗಿ ಮತ್ತು ನಾಗರಿಕ-ಕೇಂದ್ರೀಕೃತವಾಗಿ ಮಾಡುತ್ತಿವೆ. ಈ ಪರಿವರ್ತನೆಯು ತಂತ್ರಜ್ಞಾನವನ್ನು ಆರ್ಥಿಕ ಅವಕಾಶ ಮತ್ತು ಸಾಮಾಜಿಕ ಅಭಿವೃದ್ಧಿಯ ಪ್ರಮುಖ ಶಕ್ತಿಯನ್ನಾಗಿ ಮಾಡುತ್ತಿದೆ. ಈ ಎಲ್ಲಾ ಪ್ರಗತಿಗಳು ಒಟ್ಟಾಗಿ ಡಿಜಿಟಲ್ ಸಾಮರ್ಥ್ಯವುಳ್ಳ ಮತ್ತು 'ವಿಕಸಿತ ಭಾರತ'ದ ಅಡಿಪಾಯವನ್ನು ಬಲಪಡಿಸುತ್ತಿವೆ.
References
Ministry of Communications
Ministry of Electronics & IT
Ministry of Finance
PIB Backgrounder
Ministry of Commerce & Industry
Digital India Initiatives
State of India’s Digital Economy 2026
Empowering Governance through Digital Infrastructure
*****
(तथ्य सामग्री आईडी: 150887)
आगंतुक पटल : 4
Provide suggestions / comments