ಖ್ಯಾತ ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಛಾಬ್ರಾ ಅವರು ಇಂದು ಗೋವಾದಲ್ಲಿ ನಡೆಯುತ್ತಿರುವ 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ‘ದಿ ಕಾಸ್ಟಿಂಗ್ ಮ್ಯಾಜಿಕ್: ಆಡಿಷನ್ಸ್ ಅನ್ಪ್ಲಗ್ಡ್’ ಎಂಬ ಕಿಕ್ಕಿರಿದು ತುಂಬಿದ್ದ ಮಾಸ್ಟರ್ ಕ್ಲಾಸಿನಲ್ಲಿ ನಟನೆಯ ಆಕಾಂಕ್ಷಿಗಳಿಗೆ ಅಮೂಲ್ಯವಾದ ಒಳನೋಟಗಳು ಮತ್ತು ಕಾರ್ಯಸಾಧ್ಯವಾದ ಸಲಹೆಗಳನ್ನು ಹಂಚಿಕೊಂಡರು. ಈ ಅಧಿವೇಶನದಲ್ಲಿ ಉದಯೋನ್ಮುಖ ನಟರು, ನಟನೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಲು ಬಯಸುವ ಮಧ್ಯವಯಸ್ಕ ವೃತ್ತಿಪರರು, ಬರಹಗಾರರು, ಹೊಸ ಚಿತ್ರನಿರ್ಮಾಪಕರು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಒಳಗೊಂಡ ಉತ್ಸಾಹಿ ಮತ್ತು ವೈವಿಧ್ಯಮಯ ಪ್ರೇಕ್ಷಕರು ಭಾಗವಹಿಸಿದ್ದರು. ದೇಶಾದ್ಯಂತ ಆಗಮಿಸಿದ್ದ ಪ್ರತಿನಿಧಿಗಳು ಹಾಗೂ ಸ್ಥಳೀಯ ಗೋವಾದ ಪ್ರೇಕ್ಷಕರು ಛಾಬ್ರಾ ಅವರೊಂದಿಗೆ ಸಕ್ರಿಯವಾಗಿ ಸಂವಾದ ನಡೆಸಿದರು; ಉತ್ತಮ ನಟನಾಗಲು ಏನು ಬೇಕು, ಆಡಿಷನ್ನಲ್ಲಿ ಯಶಸ್ವಿಯಾಗುವುದು ಹೇಗೆ ಮತ್ತು ಕಾಸ್ಟಿಂಗ್ ಪ್ರಪಂಚದ ಸೂಕ್ಷ್ಮತೆಗಳ ಕುರಿತು ಹಲವಾರು ಪ್ರಶ್ನೆಗಳನ್ನು ಕೇಳಿದರು.
ಛಾಬ್ರಾ ಅವರ ಕುರಿತು ಮಾತನಾಡಿದ ಚಲನಚಿತ್ರೋತ್ಸವದ ನಿರ್ದೇಶಕ ಅಶುತೋಷ್ ಗೋವಾರಿಕರ್, “ಮುಖೇಶ್ ಅವರಲ್ಲಿ ನನಗೆ ಇಷ್ಟವಾಗುವ ಅಂಶವೆಂದರೆ ಪಾತ್ರಕ್ಕೆ ತಕ್ಕ ವ್ಯಕ್ತಿಯನ್ನು ಗುರುತಿಸುವ ಅವರ ಸಾಮರ್ಥ್ಯ. ಪಾತ್ರಕ್ಕೆ ಸರಿಹೊಂದುವ ನಟರನ್ನು ಹುಡುಕಲು ಅವರು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ” ಎಂದರು.
_20261126164744_1baf9f.jpeg)
300ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ವೆಬ್ ಸರಣಿಗಳಿಗೆ ಕಾಸ್ಟಿಂಗ್ ಮಾಡಿರುವ ಛಾಬ್ರಾ, ಕಾಸ್ಟಿಂಗ್ನ ವಿಸ್ತಾರವಾದ ಮತ್ತು ಶ್ರಮದಾಯಕ ಪ್ರಕ್ರಿಯೆಯ ಕುರಿತು ಬೆಳಕು ಚೆಲ್ಲಿದರು. ಸರಿಯಾದ ನಟನನ್ನು ಹುಡುಕುವುದು ಕೇವಲ ದತ್ತಾಂಶಗಳು ಅಥವಾ ಪರಿಚಿತ ಮುಖಗಳನ್ನು ನೋಡುವುದಕ್ಕಿಂತ ಮೀರಿದ್ದಾಗಿದೆ ಎಂದು ಅವರು ಒತ್ತಿ ಹೇಳಿದರು. “ನಮ್ಮ ದೇಶದಲ್ಲಿ ಅಪಾರ ಪ್ರತಿಭೆಯಿದೆ. ಹಿಂದೆ ಕಾಸ್ಟಿಂಗ್ ನಿರ್ದೇಶಕರು ಇಲ್ಲದಿದ್ದಾಗ ಅದು ಕಷ್ಟಕರವಾಗಿತ್ತು. ನಾನು ಪ್ರತಿಭೆಗಳನ್ನು ಹುಡುಕಲು ನನ್ನ ತಂಡವನ್ನು ಎಲ್ಲಾ ಕಡೆಗೆ ಕಳುಹಿಸುತ್ತೇನೆ. ನೀವು ತಳ ಮಟ್ಟಕ್ಕೆ ಹೋಗಬೇಕು. ನಮ್ಮ ದೇಶದಲ್ಲಿ ಹಲವಾರು ಸಾಂಸ್ಕೃತಿಕ ಕಲೆಗಳು ಮತ್ತು ಉಪ-ಸಂಸ್ಕೃತಿಗಳಿವೆ, ಅಲ್ಲಿ ಅಪಾರವಾದ ನೈಜ ಪ್ರತಿಭೆ ಅಡಗಿದೆ” ಎಂದು ಅವರು ಹೇಳಿದರು.
ಕಾಸ್ಟಿಂಗ್ (ಪಾತ್ರದಾರಿಗಳ ಆಯ್ಕೆ) ಕುರಿತಾದ ತಮ್ಮ ಕಾರ್ಯವಿಧಾನವನ್ನು ವಿವರಿಸಿದ ಮುಖೇಶ್ ಛಾಬ್ರಾ, ಚಿತ್ರಕಥೆ ಸಿದ್ಧವಾದ ನಂತರ ನಿರ್ದೇಶಕರು ಮೊದಲು ಸಂಪರ್ಕಿಸುವ ವ್ಯಕ್ತಿ ತಾವೇ ಆಗಿರುತ್ತೇನೆ ಎಂದರು. ಅವರು ಚಿತ್ರಕಥೆಯನ್ನು ಸಂಪೂರ್ಣವಾಗಿ ಓದುವ ಮೂಲಕ ಮತ್ತು ಪಾತ್ರಗಳು ಹಾಗೂ ನಿರ್ದೇಶಕರ ದೃಷ್ಟಿಕೋನವನ್ನು ಚರ್ಚಿಸುವ ಮೂಲಕ ಕೆಲಸ ಪ್ರಾರಂಭಿಸುತ್ತಾರೆ. ಮುಂದಿನ ಹಂತದಲ್ಲಿ ಒಂದು ಪಾತ್ರಕ್ಕೆ ಈಗಾಗಲೇ ಹೆಸರುವಾಸಿಯಾದ ನಟ ಬೇಕೇ ಅಥವಾ ಹೊಸ ಮುಖ ಬೇಕೇ ಎಂದು ನಿರ್ಧರಿಸಲಾಗುತ್ತದೆ, ನಂತರ ಕಥೆ ನಡೆಯುವ ಪ್ರದೇಶಕ್ಕೆ ಹೋಗಿ ಸ್ಥಳೀಯ ಸಮುದಾಯಗಳಲ್ಲಿ ಪ್ರತಿಭೆಗಳನ್ನು ಹುಡುಕಲಾಗುತ್ತದೆ. ಪಾತ್ರವನ್ನು ಅರ್ಥಮಾಡಿಕೊಳ್ಳುವುದು, ಸರಿಯಾದ ವ್ಯಕ್ತಿತ್ವವನ್ನು ಗುರುತಿಸುವುದು ಮತ್ತು ನಿರ್ದೇಶಕರ ದೃಷ್ಟಿಕೋನಕ್ಕೆ ಸರಿಹೊಂದುವ ನಟರನ್ನು ಶಿಫಾರಸು ಮಾಡುವುದು ತಮ್ಮ ಕೆಲಸವಾಗಿದೆ ಎಂದು ಅವರು ವಿವರಿಸಿದರು. “ನಿರ್ದೇಶಕರು ನನ್ನನ್ನು ನನ್ನಲ್ಲಿರುವ ಮಾಹಿತಿಗಾಗಿ ಅಲ್ಲ, ನನ್ನ ಅಭಿಪ್ರಾಯ ಮತ್ತು ಆಲೋಚನೆಗಳಿಗಾಗಿ ನೇಮಿಸಿಕೊಳ್ಳುತ್ತಾರೆ” ಎಂದು ಹೇಳಿದ ಅವರು, ತಮ್ಮನ್ನು ನಟ ಮತ್ತು ನಿರ್ದೇಶಕರ ನಡುವಿನ ಸೇತುವೆ ಎಂದು ವಿವರಿಸಿದರು.

ಈ ಪ್ರಕ್ರಿಯೆಯ ವ್ಯಾಪ್ತಿ ಬಹಳ ದೊಡ್ಡದಾಗಿರುತ್ತದೆ. ‘ದಂಗಲ್’ ಚಿತ್ರದ ಕಾಸ್ಟಿಂಗ್ ಅನ್ನು ಸ್ಮರಿಸಿದ ಛಾಬ್ರಾ, ಅದಕ್ಕೆ ಸುಮಾರು ಎರಡು ವರ್ಷಗಳು ಬೇಕಾಯಿತು ಮತ್ತು ಪಾತ್ರಗಳಿಗಾಗಿ ಸುಮಾರು 14,000 ಹುಡುಗಿಯರು ಆಡಿಷನ್ ನೀಡಿದ್ದರು ಎಂದು ತಿಳಿಸಿದರು. ‘ರಾಮಾಯಣ’ ಚಿತ್ರದ ಕಾಸ್ಟಿಂಗ್ ಪ್ರಕ್ರಿಯೆಯು ಆರು ವರ್ಷಗಳಿಗೂ ಹೆಚ್ಚು ಕಾಲ ನಡೆಯಿತು ಎಂದು ಅವರು ಹೇಳಿದರು. ತಮ್ಮ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿದ ‘ಗ್ಯಾಂಗ್ಸ್ ಆಫ್ ವಾಸೇಪುರ್’ ಚಿತ್ರಕ್ಕಾಗಿ 384 ಜನರನ್ನು ಆಯ್ಕೆ ಮಾಡಿದ್ದನ್ನು ಸಹ ಅವರು ನೆನಪಿಸಿಕೊಂಡರು. “ಗ್ಯಾಂಗ್ಸ್ ಆಫ್ ವಾಸೇಪುರ್ ನನ್ನ ಜೀವನವನ್ನೇ ಬದಲಾಯಿಸಿತು” ಎಂದು ಅವರು ಹೇಳಿದರು.
ಖ್ಯಾತ ಚಿತ್ರನಿರ್ಮಾಪಕರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡ ಛಾಬ್ರಾ, ಪ್ರತಿಯೊಬ್ಬ ನಿರ್ದೇಶಕರಿಗೂ ವಿಶಿಷ್ಟವಾದ ದೃಷ್ಟಿಕೋನ ಮತ್ತು ಕಾರ್ಯಶೈಲಿ ಇರುತ್ತದೆ ಎಂದರು. ಚಿತ್ರನಿರ್ಮಾಪಕರು ಕಲ್ಪಿಸಿಕೊಂಡ ಪಾತ್ರಗಳಿಗೆ ನಟರು ಸರಿಯಾಗಿ ಹೊಂದುವಂತೆ ನೋಡಿಕೊಳ್ಳುವುದು ತಮ್ಮ ಜವಾಬ್ದಾರಿಯಾಗಿದೆ. ಕೆಲವೊಮ್ಮೆ ಕಾಸ್ಟಿಂಗ್ ಪ್ರಕ್ರಿಯೆಯು ಚಿತ್ರಕಥೆಯ ಬರವಣಿಗೆಯ ಮೇಲೂ ಪ್ರಭಾವ ಬೀರುತ್ತದೆ ಎಂದು ಅವರು ಹೇಳಿದರು. ‘ಕಾಯ್ ಪೋ ಚೆ!’ ಚಿತ್ರವನ್ನು ಉಲ್ಲೇಖಿಸಿದ ಅವರು, ರಾಜ್ಕುಮಾರ್ ರಾವ್ ಅವರನ್ನು ಗಮನದಲ್ಲಿಟ್ಟುಕೊಂಡು 'ಗಟ್ಟು' ಪಾತ್ರವನ್ನು ಹೇಗೆ ಬರೆಯಲಾಯಿತು ಎಂಬುದನ್ನು ಸ್ಮರಿಸಿದರು. ನವಾಜುದ್ದೀನ್ ಸಿದ್ದಿಕಿ ಮತ್ತು ಮನೋಜ್ ಬಾಜಪೇಯಿ ಅವರಂತಹ ಪ್ರತಿಭಾವಂತ ನಟರು ಪಾತ್ರಕ್ಕೆ ತಮ್ಮದೇ ಆದ ಶಕ್ತಿಯನ್ನು ತುಂಬುತ್ತಾರೆ, ಇದು ಕೆಲವೊಮ್ಮೆ ನಿರ್ದೇಶಕರು ಪಾತ್ರಗಳ ಬಗ್ಗೆ ಮರುಚಿಂತನೆ ನಡೆಸಲು ಮತ್ತು ಅವುಗಳನ್ನು ಹೊಸದಾಗಿ ರೂಪಿಸಲು ಪ್ರೇರೇಪಿಸುತ್ತದೆ ಎಂದರು.
ಎರಡು ದಶಕಗಳಿಗೂ ಹೆಚ್ಚಿನ ತಮ್ಮ ಪಯಣವನ್ನು ಮೆಲುಕು ಹಾಕಿದ ಛಾಬ್ರಾ, ನಟ ಅಮೀರ್ ಖಾನ್ ತಮ್ಮ ಕೆಲಸವನ್ನು ಮೊದಲು ಗುರುತಿಸಿದವರಲ್ಲಿ ಒಬ್ಬರು ಎಂದು ಹೇಳಿದರು. ಹೊಸ ಪ್ರತಿಭೆಗಳನ್ನು ಹುಡುಕುವ ನಿರಂತರ ಉತ್ಸಾಹವೇ ತಮ್ಮ ಪಯಣಕ್ಕೆ ಪ್ರೇರಣೆಯಾಗಿದೆ ಎಂದರು. ಮುಂದಿನ ಎರಡು ಮೂರು ವರ್ಷಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಚಿತ್ರಗಳು ತಮ್ಮ ಕೈಯಲ್ಲಿದ್ದು, ಈ ಪ್ರಕ್ರಿಯೆಯಲ್ಲಿ ಮೊದಲಿನಂತೆಯೇ ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದರು.
ಕಾಸ್ಟಿಂಗ್ ನಿರ್ದೇಶಕರ ವಿಶಾಲ ದೃಷ್ಟಿಕೋನ
ಕಾಸ್ಟಿಂಗ್ ಎನ್ನುವುದು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಸೃಜನಶೀಲ ಪ್ರಕ್ರಿಯೆಯಾಗಿದ್ದು, ಒಂದು ಚಿತ್ರದಿಂದ ಇನ್ನೊಂದು ಚಿತ್ರಕ್ಕೆ ಮತ್ತು ಕಥೆಯಿಂದ ಕಥೆಗೆ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತವೆ ಎಂದು ಛಾಬ್ರಾ ತಿಳಿಸಿದರು. ಪಾತ್ರಕ್ಕೆ ಹೆಚ್ಚು ಸೂಕ್ತವಾದ ಬೇರೊಬ್ಬ ವ್ಯಕ್ತಿ ಸಿಕ್ಕರೆ ಕೆಲವೊಮ್ಮೆ ಕೊನೆಯ ಕ್ಷಣದಲ್ಲೂ ನಟರನ್ನು ಬದಲಾಯಿಸಬೇಕಾಗುತ್ತದೆ. ಇಂತಹ ನಿರ್ಧಾರಗಳು ಸೃಜನಶೀಲ ಪ್ರಕ್ರಿಯೆಯ ಭಾಗವಾಗಿರುತ್ತವೆ ಮತ್ತು ಚಿತ್ರದ ಅಗತ್ಯಗಳಿಗೆ ಅನುಗುಣವಾಗಿರುತ್ತವೆ ಎಂದು ಅವರು ವಿವರಿಸಿದರು.
ಛಾಬ್ರಾ ಅವರಿಗೆ ಕಾಸ್ಟಿಂಗ್ ಕೇವಲ ವೃತ್ತಿಯಲ್ಲ, ಅದು ಜೀವನದ ಒಂದು ಮಾರ್ಗವಾಗಿದೆ. “ಕಾಸ್ಟಿಂಗ್ ನನಗೆ ಕೇವಲ ಕೆಲಸವಲ್ಲ. ನಾನು ಜೀವನೋಪಾಯಕ್ಕಾಗಿ ಇದನ್ನು ಮಾಡುತ್ತೇನೆ, ಇದೇ ನನ್ನ ಜೀವನ. ಈ ದೇಶಕ್ಕೆ ಆಸ್ಕರ್ ಪ್ರಶಸ್ತಿ ತಂದುಕೊಡುವುದೇ ನನ್ನ ಗುರಿ. ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ” ಎಂದು ಅವರು ಹೇಳಿದರು.
“ತಿರಸ್ಕಾರವು ಸಹ ಪಯಣದ ಒಂದು ಭಾಗ”
ಉದಯೋನ್ಮುಖ ನಟರನ್ನು ಕಾಡುವ ಪ್ರಮುಖ ಚಿಂತೆಗಳಲ್ಲಿ ಒಂದು ತಿರಸ್ಕಾರ ಮತ್ತು ಅದನ್ನು ಎದುರಿಸುವ ಮನೋಸ್ಥೈರ್ಯದ ಮಹತ್ವದ ಬಗ್ಗೆ ಛಾಬ್ರಾ ಮುಕ್ತವಾಗಿ ಮಾತನಾಡಿದರು. “ಇದು ನಿಮ್ಮ ಜೀವನದ ಒಂದು ಭಾಗ, ನೀವು ಇದನ್ನು ಎದುರಿಸಲೇಬೇಕು. ನಾವು ಒಂದು ಪಾತ್ರಕ್ಕೆ ಸರಿಯಾದ ಪ್ರತಿಭೆಯನ್ನು ಮಾತ್ರ ಹುಡುಕುತ್ತೇವೆ. ನೀವು ಯಾವಾಗಲೂ ತಿರಸ್ಕೃತಗೊಂಡಿದ್ದೀರಿ ಎಂದು ಭಾವಿಸಿ ದುಃಖಿಸುತ್ತಾ ಕುಳಿತಿದ್ದರೆ, ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ” ಎಂದು ಅವರು ಹೇಳಿದರು.
ತಮ್ಮದೇ ಅನುಭವವನ್ನು ಉದಾಹರಣೆಯಾಗಿ ನೀಡಿದ ಅವರು, ಚಿತ್ರರಂಗದಲ್ಲಿ ತಮ್ಮ ಪಯಣ ಅಷ್ಟು ಸುಲಭವಾಗಿರಲಿಲ್ಲ ಎಂದು ಹೇಳಿದರು. ಅವರು ಸಹಾಯಕ ನಿರ್ದೇಶಕರಾಗಿ ವೃತ್ತಿಜೀವನ ಆರಂಭಿಸಿದರು, ಆರಂಭದಲ್ಲಿ ಮುಖ್ಯವಾಗಿ ಕಾಸ್ಟಿಂಗ್ ಕೆಲಸ ಮಾಡುತ್ತಾ, ತಮ್ಮ ಸ್ಥಾನವನ್ನು ತಾವು ಕಂಡುಕೊಳ್ಳಲು ವರ್ಷಗಟ್ಟಲೆ ಶ್ರಮಿಸಿದರು. ಆರಂಭಿಕ ದಿನಗಳಲ್ಲಿ ಅನೇಕ ನಿರ್ದೇಶಕರು ತಮ್ಮನ್ನು ತಿರಸ್ಕರಿಸಿದ್ದರು, ಆದರೆ ಇಂದು ಅವರಲ್ಲೇ ಕೆಲವರು ತಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಸ್ಮರಿಸಿದರು. “ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಹೋರಾಡಲೇಬೇಕು. ನನ್ನ ಕಷ್ಟದ ದಿನಗಳ ಬಗ್ಗೆ ಹೇಳಲು ನಾನು ಬಯಸುವುದಿಲ್ಲ, ಆದರೆ ನಾನು ನಿಜವಾಗಿಯೂ ಬಹಳ ಕಷ್ಟದ ದಿನಗಳನ್ನು ಕಂಡಿದ್ದೇನೆ” ಎಂದು ಅವರು ತಿಳಿಸಿದರು.
“ನಟನೆಗೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ, ಪ್ರತಿಭೆಯೊಂದೇ ಮುಖ್ಯ”
ತಮ್ಮ ವೃತ್ತಿಜೀವನ ಸಾಗುತ್ತಿರುವ ವೇಗದ ಬಗ್ಗೆ ನಿರಾಶೆಗೊಳ್ಳದೆ ತಾಳ್ಮೆ, ಸಕಾರಾತ್ಮಕತೆ ಮತ್ತು ತಮ್ಮ ಕಲೆಗೆ ಬದ್ಧರಾಗಿರಲು ಅವರು ನಟರಾಗಲು ಬಯಸುವವರಿಗೆ ಸಲಹೆ ನೀಡಿದರು. “ನೀವು ನಟಿಸಬಲ್ಲಿರಿ ಎಂದು ನಿಮಗೆ ಅನಿಸಿದರೆ, ಆ ಕೆಲಸ ಮಾಡಿ. ಮುನ್ನುಗ್ಗಿ” ಎಂದ ಅವರು, ಪ್ರತಿಭೆಗೆ ವಯಸ್ಸಿನ ಮಿತಿಯಿಲ್ಲ ಎಂದು ಹೇಳಿದರು. “ನಟನೆಗೆ ವಯಸ್ಸಿನೊಂದಿಗೆ ಯಾವುದೇ ಸಂಬಂಧವಿಲ್ಲ, ಪ್ರತಿಭೆಯೊಂದೇ ಮುಖ್ಯ.” ಚಿತ್ರರಂಗಕ್ಕೆ ಎಲ್ಲಾ ತಲೆಮಾರುಗಳ ಕಲಾವಿದರ ಅಗತ್ಯವಿದೆ ಎಂದು ಒತ್ತಿ ಹೇಳಿದ ಅವರು, 40, 50 ಮತ್ತು 60ರ ವಯಸ್ಸಿನವರೂ ನಟನೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಲು ಪ್ರೋತ್ಸಾಹಿಸಿದರು.
ಒಬ್ಬ ನಟನನ್ನು ವಿಶೇಷವಾಗಿಸುವ ಅಂಶಗಳು ಯಾವುವು?
ಛಾಬ್ರಾ ಅವರ ಪ್ರಕಾರ, ಒಂದು ಪಾತ್ರಕ್ಕೆ ಸೂಕ್ತವಾದ ನಟನನ್ನು ಆಯ್ಕೆ ಮಾಡುವಾಗ ಕೇವಲ ಪ್ರತಿಭೆ ಮಾತ್ರ ಮಾನದಂಡವಲ್ಲ. ವ್ಯಕ್ತಿತ್ವ, ಪ್ರಾಮಾಣಿಕತೆ, ಸರಳತೆ ಮತ್ತು ನಿರ್ದೇಶಕರ ಸೂಚನೆಗಳನ್ನು ಗ್ರಹಿಸುವ ಸಾಮರ್ಥ್ಯವೂ ಅಷ್ಟೇ ಮುಖ್ಯ. “ನಟ ನಿರ್ದೇಶಕರ ಸೂಚನೆಗಳಿಗೆ ಒಗ್ಗಿಕೊಳ್ಳುವಂತಿರಬೇಕು. ನಿರ್ದೇಶನಗಳನ್ನು ಪಾಲಿಸುವುದು ಮುಖ್ಯ. ಪ್ರಾಮಾಣಿಕತೆ ಮತ್ತು ಸೂಚನೆಗಳನ್ನು ಅನುಸರಿಸುವುದು ಬಹಳ ಮುಖ್ಯ” ಎಂದು ಅವರು ಹೇಳಿದರು. “ನೀವು ಜೀವನ ಮತ್ತು ಮಾನವ ಭಾವನೆಗಳನ್ನು ಅರಿತರೆ, ನೀವು ನಟನೆಯನ್ನು ಅರಿತಂತೆ” ಎಂದು ಅವರು ಹೇಳಿದರು.
ಪಾತ್ರವೊಂದರ ಆಡಿಷನ್ ನಲ್ಲಿ ಯಶಸ್ವಿಯಾಗುವುದು ಹೇಗೆ?
ಆಡಿಷನ್ ಗೆ ಹೋಗುವ ಎಲ್ಲಾ ಉದಯೋನ್ಮುಖ ನಟರು ಮೊದಲು ಪಾತ್ರ ಮತ್ತು ಅದರ ಹಿನ್ನೆಲೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಛಾಬ್ರಾ ಸಲಹೆ ನೀಡುತ್ತಾರೆ. “ನಿಮ್ಮ ಮನಸ್ಸಿನಲ್ಲಿ ದೃಶ್ಯವನ್ನು ರೂಪಿಸಿಕೊಳ್ಳುವುದು ಮುಖ್ಯ. ನಾವು ನಟನ ಬೌದ್ಧಿಕ ಸಾಮರ್ಥ್ಯವನ್ನು ಅರಿಯಲು ಬಯಸುತ್ತೇವೆ. ದಯವಿಟ್ಟು ನಿಮ್ಮ ಪೂರ್ವಸಿದ್ಧತೆ ಮಾಡಿಕೊಂಡಿರಿ” ಎಂದು ಅವರು ಹೇಳಿದರು.
ಸೆಲ್ಫ್-ಟೇಪ್ ಗಳ ಕುರಿತು ಮಾತನಾಡಿದ ಛಾಬ್ರಾ, ಹಿನ್ನೆಲೆ ಸ್ವಚ್ಛವಾಗಿ ಮತ್ತು ಅಸ್ತವ್ಯಸ್ತವಾಗಿಲ್ಲದಂತೆ ನೋಡಿಕೊಳ್ಳಬೇಕು, ಅನಗತ್ಯ ಮೇಕಪ್ ತಪ್ಪಿಸಬೇಕು ಮತ್ತು ಅಭಿನಯವೇ ಪ್ರಮುಖ ಆಕರ್ಷಣೆಯಾಗಿರುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಟನೊಂದಿಗೆ ಸಂಭಾಷಣೆ ಓದುವ ವ್ಯಕ್ತಿಯು ಸೂಕ್ತವಾದ ಸೂಚನೆಗಳನ್ನು ನೀಡಬೇಕು, ಮತ್ತು ಕಣ್ಣುಗಳು ಹಾಗೂ ಭಾವನೆಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುವ ಕ್ಲೋಸ್-ಅಪ್ ಶಾಟ್ ಇರಬೇಕು ಎಂದರು.
ಯುವ ನಟರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಮೆಚ್ಚುಗೆಯನ್ನು ಅರಸುವುದರ ಬಗ್ಗೆಯೂ ಅವರು ಎಚ್ಚರಿಕೆ ನೀಡಿದರು. ಬದಲಾಗಿ, ಅವರು ತಮ್ಮ ಕಲೆಯನ್ನು ಸುಧಾರಿಸಿಕೊಳ್ಳುವುದು, ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು ಮತ್ತು ಅನುಭವವನ್ನು ಗಳಿಸುವುದರತ್ತ ಗಮನ ಹರಿಸಬೇಕು. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಮತ್ತು ನಟನಾ ಕೌಶಲ್ಯವನ್ನು ಚುರುಕುಗೊಳಿಸಲು ರಂಗಭೂಮಿ ಅತ್ಯುತ್ತಮ ವೇದಿಕೆಯಾಗಿದೆ ಎಂದು ಅವರು ಹೇಳಿದರು. ವಯಸ್ಸು ಅಥವಾ ಹಿಂದಿನ ಅನುಭವವನ್ನು ಲೆಕ್ಕಿಸದೆ, ಮಹತ್ವಾಕಾಂಕ್ಷಿ ಕಲಾವಿದರು ನಾಟಕ ತಂಡಗಳನ್ನು ಸೇರಲು ಮತ್ತು ರಂಗಪ್ರದರ್ಶನಗಳಲ್ಲಿ ಭಾಗವಹಿಸಲು ಅವರು ವಿಶೇಷವಾಗಿ ಪ್ರೋತ್ಸಾಹಿಸಿದರು.
ಉದಯೋನ್ಮುಖ ನಟರು ತಮ್ಮ ಪರಿಶುದ್ಧತೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಬೇಕು, ಕಲಿಕೆಗೆ ಬದ್ಧರಾಗಿರಬೇಕು ಮತ್ತು ಅಸಹನೆ ಅಥವಾ ತಕ್ಷಣದ ಖ್ಯಾತಿಯ ಹಿಂದೆ ಬಿದ್ದು ತಮ್ಮ ಪಯಣವನ್ನು ಹಳಿತಪ್ಪಿಸಲು ಎಂದಿಗೂ ಬಿಡಬಾರದು ಎಂದು ಸಲಹೆ ನೀಡಿದರು. “ಇದೆಲ್ಲವೂ ತಾಳ್ಮೆ ಮತ್ತು ಸಕಾರಾತ್ಮಕತೆಯ ಆಟ. ಅದು ನಿಮಗೆ ಸಿಗಬೇಕೆಂದು ಇದ್ದರೆ, ಖಂಡಿತವಾಗಿಯೂ ಅದು ನಿಮ್ಮ ಬಳಿಗೆ ಬಂದೇ ಬರುತ್ತದೆ” ಎಂದು ಅವರು ಹೇಳಿದರು. “ಸಹಜವಾಗಿರಿ ಮತ್ತು ಸರಳವಾಗಿರಿ” – ಇದು ಅವರು ಉದಯೋನ್ಮುಖ ನಟರಿಗೆ ನೀಡಿದ ಮತ್ತೊಂದು ಮಂತ್ರ.
ಪ್ರತಿಯೊಂದು ಸ್ಮರಣೀಯ ತೆರೆಯ ಮೇಲಿನ ಪಾತ್ರದ ಹಿಂದೆಯೂ ಹುಡುಕಾಟ, ಸಿದ್ಧತೆ ಮತ್ತು ಸಹಯೋಗದ ಶ್ರಮದಾಯಕ ಪ್ರಕ್ರಿಯೆಯಿರುತ್ತದೆ ಎಂಬುದನ್ನು ಅವರ ಮಾಸ್ಟರ್ ಕ್ಲಾಸ್ ಮನಮುಟ್ಟುವಂತೆ ತಿಳಿಸಿತು. ಪ್ರತಿಯೊಬ್ಬ ಮಹತ್ವಾಕಾಂಕ್ಷಿ ನಟನಿಗೆ, ಈ ಪಯಣವು ಜನರನ್ನು ಅರಿಯುವುದು, ಕಲೆಯನ್ನು ಗೌರವಿಸುವುದು ಮತ್ತು ಸರಿಯಾದ ಪಾತ್ರಕ್ಕಾಗಿ ಕಾಯುವ ತಾಳ್ಮೆಯನ್ನು ಹೊಂದುವುದರೊಂದಿಗೆ ಪ್ರಾರಂಭವಾಗುತ್ತದೆ.
Read IFFILOID here: https://www.pib.gov.in/iffi/57/iffiLoid.aspx?yr=2026&lang=1®=48
*****