ಪ್ರಕಟಣಾ ದಿನಾಂಕ:
21 NOV 2026 10:25AM by PIB Bengaluru
ರಾಷ್ಟ್ರೀಯ ಎಚ್ಪಿವಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಒಂಬತ್ತು ತಿಂಗಳೊಳಗೆ 1 ಕೋಟಿಗೂ ಹೆಚ್ಚು ‘ಹ್ಯೂಮನ್ ಪ್ಯಾಪಿಲೋಮಾವೈರಸ್’ (ಎಚ್ಪಿವಿ) ಲಸಿಕೆ ಡೋಸ್ಗಳನ್ನು ನೀಡುವ ಮೂಲಕ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಪ್ರಯತ್ನದಲ್ಲಿ ಭಾರತವು ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ. ಈ ಸಾಧನೆಯು ಗರ್ಭಕಂಠದ ಕ್ಯಾನ್ಸರ್ಗೆ ಕಾರಣವಾಗಬಹುದಾದ ‘ಎಚ್ಪಿವಿ’ ಸೋಂಕುಗಳಿಂದ ಹದಿಹರೆಯದ ಬಾಲಕಿಯರನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದ್ದು, ದೇಶಾದ್ಯಂತ ರೋಗ ತಡೆಗಟ್ಟುವ ಆರೋಗ್ಯ ಸೇವೆಗಳ ಹೆಚ್ಚುತ್ತಿರುವ ವ್ಯಾಪ್ತಿಯನ್ನು ಪ್ರತಿಬಿಂಬಿಸುತ್ತದೆ.
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 2026ರಲ್ಲಿ ಚಾಲನೆ ನೀಡಿದ ಈ ರಾಷ್ಟ್ರವ್ಯಾಪಿ ಅಭಿಯಾನವು, ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಪೋಷಕರ ಒಪ್ಪಿಗೆಯೊಂದಿಗೆ 14 ವರ್ಷದ ಬಾಲಕಿಯರಿಗೆ ಉಚಿತ, ಸುರಕ್ಷಿತ ಮತ್ತು ಸ್ವಯಂಪ್ರೇರಿತ ಸಿಂಗಲ್-ಡೋಸ್ ಎಚ್ಪಿವಿ ಲಸಿಕೆಯನ್ನು ಒದಗಿಸುತ್ತದೆ. ಭವಿಷ್ಯದ ಪೀಳಿಗೆಯ ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡುವ ಗುರಿಯೊಂದಿಗೆ, ಈ ಉಪಕ್ರಮವು ಭಾರತದ ರೋಗ ತಡೆಗಟ್ಟುವ ಆರೋಗ್ಯ ರಕ್ಷಣಾ ವಿಧಾನದಲ್ಲಿ ಒಂದು ಪ್ರಮುಖ ಪ್ರಗತಿಯನ್ನು ಸೂಚಿಸುತ್ತದೆ.
ಭಾರತದ ಮಹಾನೋಂದಣಾಧಿಕಾರಿಗಳ (ಆರ್ಜಿಐ) 2021ರ ಜನಸಂಖ್ಯಾ ಅಂದಾಜಿನ ಆಧಾರದ ಮೇಲೆ ಗುರುತಿಸಲಾದ ಸುಮಾರು 1.2 ಕೋಟಿ ಬಾಲಕಿಯರ ವಾರ್ಷಿಕ ಗುರಿ ಸಮೂಹದ ವಿರುದ್ಧ ಈ ಅಭಿಯಾನವು ಸುಮಾರು 87% ರಷ್ಟು ಒಟ್ಟು ವ್ಯಾಪ್ತಿಯನ್ನು ಸಾಧಿಸಿದೆ. ಒಂಬತ್ತು ತಿಂಗಳೊಳಗೆ 1 ಕೋಟಿ ಡೋಸ್ಗಳ ಮೈಲುಗಲ್ಲನ್ನು ತಲುಪಿರುವುದು ಈ ಉಪಕ್ರಮದ ವ್ಯಾಪ್ತಿ ಮತ್ತು ವೇಗವನ್ನು ಒತ್ತಿಹೇಳುತ್ತದೆ; ಇದಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಆರೋಗ್ಯ ವೃತ್ತಿಪರರು, ಮುಂಚೂಣಿ ಕಾರ್ಯಕರ್ತರು, ಶಿಕ್ಷಕರು, ಪೋಷಕರು ಮತ್ತು ಸ್ಥಳೀಯ ಸಮುದಾಯಗಳ ಸಮನ್ವಯದತ ಪ್ರಯತ್ನಗಳು ಬೆಂಬಲವಾಗಿ ನಿಂತಿವೆ.

ಆರು ರಾಜ್ಯಗಳಲ್ಲಿ 100% ಗುರಿ ಸಾಧನೆ; ದೇಶಾದ್ಯಂತ ಗಮನಾರ್ಹ ಪ್ರಗತಿ
‘ಎಚ್ಪಿವಿ’ ಲಸಿಕಾ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿರಂತರ ಪ್ರಗತಿಯನ್ನು ತೋರಿವೆ. ಹಲವು ರಾಜ್ಯಗಳು ತಮ್ಮ ಗುರುತಿಸಲಾದ ಗುರಿ ಜನಸಂಖ್ಯೆಯಲ್ಲಿ ಉನ್ನತ ಮಟ್ಟದ ವ್ಯಾಪ್ತಿಯನ್ನು ಸಾಧಿಸಿವೆ.
ಗುಜರಾತ್, ಉತ್ತರ ಪ್ರದೇಶ, ಆಂಧ್ರಪ್ರದೇಶ, ಮಿಜೋರಾಂ, ಮಧ್ಯಪ್ರದೇಶ ಮತ್ತು ಬಿಹಾರ - ಈ ಆರು ರಾಜ್ಯಗಳು ಅಭಿಯಾನದಡಿ ತಮ್ಮ ಗುರುತಿಸಲಾದ ಗುರಿ ಜನಸಂಖ್ಯೆಯ 100% ವ್ಯಾಪ್ತಿಯನ್ನು ಸಾಧಿಸಿವೆ.
ಉತ್ತಮ ಸಾಧನೆ ಮಾಡಿದ ಇತರ ರಾಜ್ಯಗಳ ಪೈಕಿ, ಅಸ್ಸಾಂ 95.63% ವ್ಯಾಪ್ತಿಯನ್ನು ದಾಖಲಿಸಿದ್ದು, ನಂತರದ ಸ್ಥಾನಗಳಲ್ಲಿ ತೆಲಂಗಾಣ (95.28%), ಕರ್ನಾಟಕ (93.16%) ಮತ್ತು ಉತ್ತರಾಖಂಡ (90.17%) ಇವೆ.
ಛತ್ತೀಸ್ಗಢ (86.21%) ಮತ್ತು ರಾಜಸ್ಥಾನ (85.23%) 80% ವ್ಯಾಪ್ತಿಯ ಗಡಿಯನ್ನು ದಾಟಿವೆ. ಕೇರಳ (77.02%), ತಮಿಳುನಾಡು (76.12%),ಒಡಿಶಾ (74.90%) ಹಾಗೂ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶ (72.99%) ಶೇ. 70 ಕ್ಕಿಂತ ಹೆಚ್ಚು ವ್ಯಾಪ್ತಿಯನ್ನು ಸಾಧಿಸಿವೆ.
ಒಟ್ಟು ಸಂಖ್ಯೆಯ ದೃಷ್ಟಿಯಿಂದ ನೋಡಿದರೆ, 29.33 ಲಕ್ಷಕ್ಕೂ ಹೆಚ್ಚು 14 ವರ್ಷದ ಬಾಲಕಿಯರಿಗೆ ಲಸಿಕೆ ನೀಡುವ ಮೂಲಕ ಉತ್ತರ ಪ್ರದೇಶ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ನಂತರದ ಸ್ಥಾನಗಳಲ್ಲಿ ಬಿಹಾರ (13.70 ಲಕ್ಷಕ್ಕೂ ಹೆಚ್ಚು) ಮತ್ತು ಗುಜರಾತ್ (7.75 ಲಕ್ಷಕ್ಕೂ ಹೆಚ್ಚು ಬಾಲಕಿಯರು) ಇವೆ.
ವೈವಿಧ್ಯಮಯ ಭೌಗೋಳಿಕ, ಜನಸಂಖ್ಯಾ ಮತ್ತು ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಹೊಂದಿರುವ ರಾಜ್ಯಗಳಲ್ಲಿನ ಈ ಪ್ರಗತಿಯು ಅಭಿಯಾನದ ವ್ಯಾಪಕತೆ ಮತ್ತು ಸ್ಥಳೀಯವಾಗಿ ಅಳವಡಿಸಿಕೊಂಡ ಅನುಷ್ಠಾನ ತಂತ್ರಗಳ ಪರಿಣಾಮಕಾರಿತ್ವವನ್ನು ಎತ್ತಿ ತೋರಿಸುತ್ತದೆ.
ಕೇಂದ್ರ-ರಾಜ್ಯಗಳ ಬಲವಾದ ಸಮನ್ವಯದಿಂದ ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನಕ್ಕೆ ವೇಗ
ಈ ಮೈಲಿಗಲ್ಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ನಡುವಿನ ನಿರಂತರ ಸಮನ್ವಯವನ್ನು ಪ್ರತಿಬಿಂಬಿಸುತ್ತದೆ. ಇದಕ್ಕೆ ಜಿಲ್ಲಾಡಳಿತಗಳು, ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ಮುಂಚೂಣಿ ಆರೋಗ್ಯ ತಂಡಗಳು ಬೆಂಬಲ ನೀಡಿವೆ.
ಗ್ರಾಮೀಣ, ನಗರ, ದೂರದ ಮತ್ತು ಭೌಗೋಳಿಕವಾಗಿ ಸವಾಲಿನ ಪ್ರದೇಶಗಳಲ್ಲಿ ಲಸಿಕೆ ಲಭ್ಯತೆಯನ್ನು ವಿಸ್ತರಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಶೇಷ ವಿಧಾನಗಳನ್ನು ಅಳವಡಿಸಿಕೊಂಡಿವೆ. ಬಿಹಾರ, ತಮಿಳುನಾಡು ಮತ್ತು ಸಿಕ್ಕಿಂನಲ್ಲಿನ ರಾಜ್ಯ-ನೇತೃತ್ವದ ಉಪಕ್ರಮಗಳನ್ನು ಸಹ ರಾಷ್ಟ್ರೀಯ ಅಭಿಯಾನದೊಂದಿಗೆ ಸಂಯೋಜಿಸಿ, ವ್ಯಾಪ್ತಿ ಮತ್ತು ಅನುಷ್ಠಾನವನ್ನು ಬಲಪಡಿಸಲಾಗಿದೆ.
ಈ ಅಭಿಯಾನವು ಸಮುದಾಯದ ಪಾಲ್ಗೊಳ್ಳುವಿಕೆ, ಪೋಷಕರಲ್ಲಿ ಜಾಗೃತಿ ಮತ್ತು ‘ಎಚ್ಪಿವಿ’ ಲಸಿಕೆಯ ಕುರಿತು ವಿಶ್ವಾಸಾರ್ಹ, ವಿಜ್ಞಾನ ಆಧಾರಿತ ಮಾಹಿತಿಯ ಪ್ರಸಾರಕ್ಕೆ ವಿಶೇಷ ಒತ್ತು ನೀಡಿದೆ.
ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು ಮತ್ತು ‘ಏಮ್ಸ್’ ನಂತಹ ಪ್ರಮುಖ ವೈದ್ಯಕೀಯ ಸಂಸ್ಥೆಗಳ ತಜ್ಞರು ಸೇರಿದಂತೆ ಆರೋಗ್ಯ ವೃತ್ತಿಪರರು ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮತ್ತು ಲಸಿಕೆಯ ಸುರಕ್ಷತೆ ಹಾಗೂ ಪರಿಣಾಮಕಾರಿತ್ವದ ಕುರಿತಾದ ಆತಂಕಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಶಾಲಾ ಶಿಕ್ಷಕರು, ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು (ಆಶಾ ಕಾರ್ಯಕರ್ತೆಯರು), ಹೆರಿಗೆ ದಾದಿಯರು ಮತ್ತು ಇತರ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಪೋಷಕರು ಮತ್ತು ಸಮುದಾಯಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ಮೂಲಕ ತಿಳಿವಳಿಕೆಯುಳ್ಳ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿದ್ದಾರೆ. ಜತೆಗೆ ಲಸಿಕೆ ಬಗ್ಗೆ ತಪ್ಪು ಮಾಹಿತಿಯನ್ನು ತಡೆದಿದ್ದಾರೆ.
ಈ ಸಾಮೂಹಿಕ ಪ್ರಯತ್ನಗಳು ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸಲು ಮತ್ತು ಸಮಾಜದ ವಿವಿಧ ವರ್ಗಗಳಲ್ಲಿ ಎಚ್ಪಿವಿ ಲಸಿಕೆಯ ಸ್ವೀಕಾರಾರ್ಹತೆಯನ್ನು ಹೆಚ್ಚಿಸಲು ಸಹಾಯ ಮಾಡಿವೆ.
ಡಿಜಿಟಲ್ ಮೇಲ್ವಿಚಾರಣೆ ಮತ್ತು ಲಸಿಕೆ ಲಭ್ಯತೆಯನ್ನು ಬಲಪಡಿಸಿದ ‘ಯು-ವಿನ್’
ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಡಿಜಿಟಲ್ ಆರೋಗ್ಯ ಮೂಲಸೌಕರ್ಯವು ಬಹಳ ಸಹಾಯಕವಾಗಿದ್ದು, ‘ಯು-ವಿನ್’ ವೇದಿಕೆಯು ನೈಜ-ಸಮಯದ ಮೇಲ್ವಿಚಾರಣೆ, ಫಲಾನುಭವಿಗಳ ಟ್ರ್ಯಾಕಿಂಗ್ ಮತ್ತು ಡಿಜಿಟಲ್ ಲಸಿಕಾ ದಾಖಲೆಗಳಿಗೆ ಬೆಂಬಲ ನೀಡುತ್ತಿದೆ.
ಕಾರ್ಯಕ್ರಮದ ವ್ಯವಸ್ಥಾಪಕರು ಜಿಲ್ಲಾ ಮಟ್ಟದಲ್ಲಿ ಲಸಿಕಾ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು, ವ್ಯಾಪ್ತಿಯಲ್ಲಿನ ಅಂತರಗಳನ್ನು ಮತ್ತು ಇನ್ನೂ ಲಸಿಕೆ ಪಡೆಯದ ಅರ್ಹ ಬಾಲಕಿಯರನ್ನು ಗುರುತಿಸಲು ಹಾಗೂ ಹೆಚ್ಚು ಪರಿಣಾಮಕಾರಿ ಯೋಜನೆ ಮತ್ತು ಸಂಪನ್ಮೂಲ ಹಂಚಿಕೆಗೆ ಈ ವೇದಿಕೆಯನ್ನು ಬಳಸುತ್ತಿದ್ದಾರೆ.
ಈ ವೇದಿಕೆಯು ಪೋಷಕರು ತಮ್ಮ ಪುತ್ರಿಯರಿಗಾಗಿ ‘ಎಚ್ಪಿವಿ’ ಲಸಿಕೆ ಸ್ಲಾಟ್ಗಳನ್ನು ಬುಕ್ ಮಾಡಲು ಮತ್ತು ಡಿಜಿಟಲ್ ಲಸಿಕಾ ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ, ಇದು ಲಸಿಕಾ ಪ್ರಕ್ರಿಯೆಯನ್ನು ಹೆಚ್ಚು ಸುಲಭ, ಅನುಕೂಲಕರ ಮತ್ತು ಪಾರದರ್ಶಕವಾಗಿಸಿದೆ.
ಕ್ಷೇತ್ರ ಮಟ್ಟದ ಅನುಷ್ಠಾನದೊಂದಿಗೆ ಡಿಜಿಟಲ್ ಮೇಲ್ವಿಚಾರಣೆಯ ಸಂಯೋಜನೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಾರ್ಯಕ್ರಮದ ನಿರ್ವಹಣೆಯನ್ನು ಬಲಪಡಿಸಲು ಮತ್ತು ಅರ್ಹ ಫಲಾನುಭವಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಲು ಸಹಾಯ ಮಾಡುತ್ತಿದೆ.
‘ಎಚ್ಪಿವಿ’ ಲಸಿಕೆ: ಗರ್ಭಕಂಠದ ಕ್ಯಾನ್ಸರ್ ವಿರುದ್ಧದ ಸಾಬೀತಾದ ಕ್ರಮ
ಗರ್ಭಕಂಠದ ಕ್ಯಾನ್ಸರ್ ಒಂದು ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಉಳಿದಿದ್ದು, ಮಹಿಳೆಯರಲ್ಲಿ ಕ್ಯಾನ್ಸರ್ ಸಂಬಂಧಿತ ಅನಾರೋಗ್ಯ ಮತ್ತು ಮರಣಕ್ಕೆ ಪ್ರಮುಖ ಕಾರಣವಾಗಿದೆ. ಕೆಲವು ಹೆಚ್ಚಿನ ಅಪಾಯದ ‘ಹ್ಯೂಮನ್ ಪ್ಯಾಪಿಲೋಮಾ ವೈರಸ್’ ವಿಧಗಳ ನಿರಂತರ ಸೋಂಕು ಬಹುಪಾಲು ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಿಗೆ ಕಾರಣವಾಗುತ್ತದೆ.
ಗರ್ಭಕಂಠದ ಕ್ಯಾನ್ಸರ್ಗೆ ಕಾರಣವಾಗಬಹುದಾದ ‘ಎಚ್ಪಿವಿ’ ಸೋಂಕುಗಳ ಅಪಾಯವನ್ನು ಕಡಿಮೆ ಮಾಡಲು ಲಭ್ಯವಿರುವ ಅತ್ಯಂತ ಪರಿಣಾಮಕಾರಿ ತಡೆಗಟ್ಟುವ ಕ್ರಮಗಳಲ್ಲಿ ‘ಎಚ್ಪಿವಿ’ ಲಸಿಕೆಯೂ ಒಂದಾಗಿದೆ.
‘ರಾಷ್ಟ್ರೀಯ ಎಚ್ಪಿವಿ ಲಸಿಕಾ ಅಭಿಯಾನ’ವು ‘ಎಚ್ಪಿವಿ’ ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಕುರಿತಾದ ವ್ಯಾಪಕ ಜಾಗತಿಕ ವೈಜ್ಞಾನಿಕ ಪುರಾವೆಗಳಿಂದ ಬೆಂಬಲಿತವಾಗಿದೆ. ವಿಶ್ವಾದ್ಯಂತ 800 ದಶಲಕ್ಷಕ್ಕೂ ಹೆಚ್ಚು ‘ಎಚ್ಪಿವಿ’ ಲಸಿಕೆ ಡೋಸ್ಗಳನ್ನು ನೀಡಲಾಗಿದೆ. ಸುಮಾರು ಎರಡು ದಶಕಗಳ ವೈಜ್ಞಾನಿಕ ಸಂಶೋಧನೆ ಮತ್ತು ನೈಜ-ಪ್ರಪಂಚದ ಅನುಭವವು ಲಸಿಕೆ-ಗುರಿಪಡಿಸಿದ ‘ಎಚ್ಪಿವಿ’ ಸೋಂಕುಗಳು ಮತ್ತು ಅದಕ್ಕೆ ಸಂಬಂಧಿಸಿದ ಪೂರ್ವ-ಕ್ಯಾನ್ಸರ್ ಸ್ಥಿತಿಗಳ ವಿರುದ್ಧ ಬಲವಾದ ರಕ್ಷಣೆಯನ್ನು ಸಾಬೀತುಪಡಿಸಿದೆ.
14ನೇ ವಯಸ್ಸಿನಲ್ಲಿ ಬಾಲಕಿಯರಿಗೆ ಲಸಿಕೆ ನೀಡುವ ಮೂಲಕ, ಸಂಭಾವ್ಯ ‘ಎಚ್ಪಿವಿ’ ಸೋಂಕಿಗೆ ಒಳಗಾಗುವ ಮೊದಲೇ ರಕ್ಷಣೆ ಒದಗಿಸಲು ಅಭಿಯಾನವು ಉದ್ದೇಶಿಸಿದೆ; ಆ ಮೂಲಕ ಗರ್ಭಕಂಠದ ಕ್ಯಾನ್ಸರ್ನ ದೀರ್ಘಕಾಲೀನ ತಡೆಗಟ್ಟುವಿಕೆಗೆ ಇದು ಕೊಡುಗೆ ನೀಡುತ್ತದೆ.
ಫಲಾನುಭವಿಗಳ ಸುರಕ್ಷತೆಗೆ ಕೇಂದ್ರ ಆದ್ಯತೆ
ಪ್ರತಿಯೊಬ್ಬ ಫಲಾನುಭವಿಯ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವುದು ಅಭಿಯಾನದ ಮೂಲಭೂತ ಆದ್ಯತೆಯಾಗಿದೆ.
ಎಲ್ಲಾ ಲಸಿಕಾ ಅವಧಿಗಳನ್ನು ನಿಗದಿತ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ತರಬೇತಿ ಪಡೆದ ವೈದ್ಯಾಧಿಕಾರಿಗಳ ನೇರ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತದೆ. ಲಸಿಕೆ ನೀಡಿದ ನಂತರದ ಯಾವುದೇ ಅಪರೂಪದ ಅಡ್ಡಪರಿಣಾಮಗಳ (ಎಇಎಫ್ಐ) ತ್ವರಿತ ಮೌಲ್ಯಮಾಪನ, ಮೇಲ್ವಿಚಾರಣೆ ಮತ್ತು ನಿರ್ವಹಣೆಗೆ ಅನುಕೂಲವಾಗುವಂತೆ ಲಸಿಕಾ ಕೇಂದ್ರಗಳನ್ನು 24×7 ಆರೋಗ್ಯ ಕೇಂದ್ರಗಳೊಂದಿಗೆ ಜೋಡಿಸಲಾಗಿದೆ.
ತರಬೇತಿ ಪಡೆದ ಆರೋಗ್ಯ ಸಿಬ್ಬಂದಿಯು ಮತ್ತು ಸೂಕ್ತ ವೈದ್ಯಕೀಯ ವ್ಯವಸ್ಥೆಗಳ ಬೆಂಬಲದೊಂದಿಗೆ ಅಭಿಯಾನವು ಸ್ಥಾಪಿತ ಲಸಿಕಾ ಸುರಕ್ಷತಾ ಶಿಷ್ಟಾಚಾರಗಳನ್ನು ಅನುಸರಿಸುತ್ತದೆ.
ಲಸಿಕಾ ಕಾರ್ಯಕ್ರಮದಲ್ಲಿ ವಿಶ್ವಾಸವನ್ನು ಕಾಯ್ದುಕೊಳ್ಳಲು ಸಚಿವಾಲಯವು ಪಾರದರ್ಶಕ ಸಂವಹನ, ವೈಜ್ಞಾನಿಕ ಪುರಾವೆ ಮತ್ತು ತಿಳುವಳಿಕೆಯುಳ್ಳ ಪೋಷಕರ ಒಪ್ಪಿಗೆಗೆ ನಿರಂತರವಾಗಿ ಒತ್ತು ನೀಡುತ್ತಿದೆ.
ಅರ್ಹ ಬಾಲಕಿಯರ ಸಾರ್ವತ್ರಿಕ ವ್ಯಾಪ್ತಿಯತ್ತ ವೇಗ ಕಾಯ್ದುಕೊಳ್ಳುವುದು
1 ಕೋಟಿ ಡೋಸ್ಗಳ ಮೈಲುಗಲ್ಲನ್ನು ಸಾಧಿಸಿದ ನಂತರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಉಳಿದ ಅರ್ಹ ಬಾಲಕಿಯರನ್ನು ತಲುಪಲು ಮತ್ತು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕಾ ವ್ಯಾಪ್ತಿಯನ್ನು ಮತ್ತಷ್ಟು ಬಲಪಡಿಸಲು ಗಮನಹರಿಸಿದೆ.
ಗುರಿ ತಲುಪುವಿಕೆಯಲ್ಲಿನ ಅಂತರಗಳನ್ನು ನೀಗಿಸಲು, ಜಾಗೃತಿ ಹೆಚ್ಚಿಸಲು ಮತ್ತು ‘ಎಚ್ಪಿವಿ’ ಲಸಿಕೆಯ ಸಮಾನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು, ವೈದ್ಯಕೀಯ ವೃತ್ತಿಪರರು, ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಶಿಕ್ಷಣ ಸಂಸ್ಥೆಗಳು ಮತ್ತು ಸಮುದಾಯಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ.
ಅರ್ಹ 14 ವರ್ಷದ ಬಾಲಕಿಯರ ಪೋಷಕರು ಮತ್ತು ಪಾಲಕರು ಮಾಹಿತಿ ಪಡೆಯಲು ಹಾಗೂ ಲಸಿಕೆ ಸ್ಲಾಟ್ಗಳನ್ನು ಬುಕ್ ಮಾಡಲು ತಮ್ಮ ಹತ್ತಿರದ ನಿಗದಿತ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ ಅಥವಾ ‘ಯು-ವಿನ್’ ವೇದಿಕೆಯನ್ನು ಬಳಸುವಂತೆ ಪ್ರೋತ್ಸಾಹಿಸಲಾಗಿದೆ.
ಒಂಬತ್ತು ತಿಂಗಳೊಳಗೆ 1 ಕೋಟಿಗೂ ಹೆಚ್ಚು ‘ಎಚ್ಪಿವಿ’ ಲಸಿಕೆ ಡೋಸ್ಗಳನ್ನು ನೀಡಿರುವ ಸಾಧನೆಯು ಕೇವಲ ಸಂಖ್ಯಾತ್ಮಕ ಮೈಲುಗಲ್ಲಲ್ಲ. ಇದು ಭಾರತದ ಹದಿಹರೆಯದ ಬಾಲಕಿಯರ ಆರೋಗ್ಯದ ಮೇಲಿನ ಮಹತ್ವದ ಹೂಡಿಕೆ ಮತ್ತು ಪ್ರಾಣಾಪಾಯಕಾರಿ ಕಾಯಿಲೆಯ ತಡೆಗಟ್ಟುವಿಕೆಯನ್ನು ಪ್ರತಿನಿಧಿಸುತ್ತದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಪ್ರಾರಂಭವಾದ ‘ರಾಷ್ಟ್ರೀಯ ಎಚ್ಪಿವಿ ಲಸಿಕಾ ಅಭಿಯಾನ’ವು, ರೋಗ ತಡೆಗಟ್ಟುವ ಆರೋಗ್ಯ ರಕ್ಷಣೆಗೆ ಭಾರತ ನೀಡುತ್ತಿರುವ ಹೆಚ್ಚಿನ ಒತ್ತು ಮತ್ತು ತಡೆಗಟ್ಟಬಹುದಾದ ಅನಾರೋಗ್ಯದಿಂದ ಮಹಿಳೆಯರನ್ನು ರಕ್ಷಿಸುವ ಬದ್ಧತೆಯನ್ನು ಸೂಚಿಸುತ್ತದೆ.
ಇಂದು ನೀಡಲಾಗುವ ಪ್ರತಿಯೊಂದು ‘ಎಚ್ಪಿವಿ’ ಲಸಿಕೆ ಡೋಸ್ ಭಾರತದ ಪುತ್ರಿಯರ ಆರೋಗ್ಯಕರ ಭವಿಷ್ಯದತ್ತ ಹಾಗೂ ಕಡಿಮೆ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ನಿಂದ ಬಳಲುವ ಭವಿಷ್ಯದತ್ತ ಇಡುವ ಒಂದು ಹೆಜ್ಜೆಯಾಗಿದೆ.
ಈ ಮೈಲುಗಲ್ಲು ಪ್ರತಿಯೊಬ್ಬ ಅರ್ಹ ಬಾಲಕಿಗೂ ರೋಗ ತಡೆಗಟ್ಟುವ ಆರೋಗ್ಯ ಸೇವೆಯನ್ನು ಲಭ್ಯವಾಗಿಸುವ ಮತ್ತು ಗರ್ಭಕಂಠದ ಕ್ಯಾನ್ಸರ್ ಹೊರೆಯನ್ನು ಕಡಿಮೆ ಮಾಡುವ ರಾಷ್ಟ್ರೀಯ ಗುರಿಯನ್ನು ಮುನ್ನಡೆಸುವ ಭಾರತ ಸರ್ಕಾರದ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ.
*****