ಪ್ರಕಟಣಾ ದಿನಾಂಕ:
18 NOV 2026 10:29AM by PIB Bengaluru
ಗ್ರಾಮೀಣಾಭಿವೃದ್ಧಿ ಸಚಿವಾಲಯವು 'ವಿಕಸಿತ ಭಾರತ – ಗ್ರಾಮೀಣ ಉದ್ಯೋಗ ಮತ್ತು ಜೀನೋಪಾಯ ಯೋಜನೆ (ವಿಬಿ-ಜಿ ರಾಮ್ ಜಿ) ಕಾಯ್ದೆ-2025' ರ ಅನುಷ್ಠಾನದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಾಗರಿಕರ ಭಾಗವಹಿಸುವಿಕೆಗಾಗಿ ಒಂಬುಡ್ಸ್ಮನ್ (ಲೋಕಪಾಲ) ಮತ್ತು ಮೇಲ್ಮನವಿ ಪ್ರಾಧಿಕಾರದ ಮಾರ್ಗಸೂಚಿಗಳ ಮೂಲಕ ಚೌಕಟ್ಟನ್ನು ಮತ್ತಷ್ಟು ಬಲಪಡಿಸಿದೆ.
ಕಾರ್ಮಿಕರ ಶಾಸನಬದ್ಧ ಹಕ್ಕುಗಳನ್ನು ರಕ್ಷಿಸಲು, ಅನುಷ್ಠಾನಕ್ಕೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಕಾರ್ಯಕ್ರಮದ ಪ್ರಯೋಜನಗಳ ಜವಾಬ್ದಾರಿಯುತ ವಿತರಣೆಯನ್ನು ಉತ್ತೇಜಿಸಲು ಸಾಂಸ್ಥಿಕ ಕಾರ್ಯವಿಧಾನಗಳನ್ನು ಬಲಪಡಿಸುವ ಮೂಲಕ ಈ ಮಾರ್ಗಸೂಚಿಗಳು ‘ವಿಬಿ-ಜಿ ರಾಮ್ ಜಿ’ ಕಾಯ್ದೆಯ ಆಶಯವನ್ನು ಬಲಪಡಿಸುತ್ತವೆ. ಒಂಬುಡ್ಸ್ಮನ್(ಲೋಕಪಾಲರು) ಕಾರ್ಯಕ್ರಮದ ಹೊಣೆಗಾರಿಕೆ ಚೌಕಟ್ಟಿನಲ್ಲಿ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ, ಇದು ಗ್ರಾಮೀಣ ನಾಗರಿಕರಿಗೆ ದೂರುಗಳನ್ನು ನೀಡಲು ಮತ್ತು ಸೂಕ್ತ ಪರಿಹಾರವನ್ನು ಪಡೆಯಲು ಸುಲಭವಾದ ವ್ಯವಸ್ಥೆಯನ್ನು ಒದಗಿಸುತ್ತದೆ.
ಜಿಲ್ಲಾ ಮಟ್ಟದಲ್ಲಿ ನಿಯೋಜಿತ ‘ಒಂಬುಡ್ಸ್ಮನ್’ ವ್ಯವಸ್ಥೆಯು, ಜಾಬ್ ಕಾರ್ಡ್ಗಳು, ಉದ್ಯೋಗ, ವೇತನ ಪಾವತಿಗಳು, ವಿಳಂಬ ಪರಿಹಾರ, ಕೆಲಸದ ಸ್ಥಳದ ಸೌಲಭ್ಯಗಳು, ಮಸ್ಟರ್ ರೋಲ್ಗಳು ಮತ್ತು ಶಾಸನಬದ್ಧ ಹಕ್ಕುಗಳ ನಿರಾಕರಣೆಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಹರಿಸುತ್ತದೆ. ಪ್ರಸ್ತುತ ಹೊರಡಿಸಲಾದ ಮಾರ್ಗಸೂಚಿಗಳು ತಾರತಮ್ಯ, ಕಿರುಕುಳ ಮತ್ತು ಮಹಿಳೆಯರು ಹಾಗೂ ದುರ್ಬಲ ಗುಂಪುಗಳ ಹಕ್ಕುಗಳು ಸೇರಿದಂತೆ ಕಾರ್ಮಿಕರ ಹಕ್ಕುಗಳ ಉಲ್ಲಂಘನೆಗಳನ್ನು ಸಹ ಒಳಗೊಂಡಿದ್ದು, ಅಂತಹ ಸಮಸ್ಯೆಗಳಿಗೆ ಸೂಕ್ತ ಗಮನ ಹರಿಸುವುದನ್ನು ಖಚಿತಪಡಿಸುತ್ತವೆ.
ಗ್ರಾಮೀಣಾಭಿವೃದ್ಧಿ, ಸಾರ್ವಜನಿಕ ಆಡಳಿತ, ಕಾನೂನು, ಶಿಕ್ಷಣ, ಸಮಾಜ ಕಾರ್ಯ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅರ್ಹ ಅಭ್ಯರ್ಥಿಗಳ ವಿಸ್ತೃತ ಆಯ್ಕೆಯ ಮೂಲಕ ಒಂಬುಡ್ಸ್ಮನ್ಗಳ ಸಾಂಸ್ಥಿಕ ಸಾಮರ್ಥ್ಯವನ್ನು ಈ ಮಾರ್ಗಸೂಚಿಗಳು ಬಲಪಡಿಸುತ್ತವೆ. ನಿರಂತರತೆ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆಯನ್ನು ಬೆಂಬಲಿಸಲು ಅಧಿಕಾರಾವಧಿ ಮತ್ತು ಸಂಭಾವನೆಗೆ ಸಂಬಂಧಿಸಿದ ನಿಬಂಧನೆಗಳನ್ನು ಸಹ ಪರಿಷ್ಕರಿಸಲಾಗಿದೆ. ಕ್ಷೇತ್ರ ಭೇಟಿಗಳು, ಸಮುದಾಯದೊಂದಿಗೆ ಬೆರೆಯುವಿಕೆ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಬಳಕೆಗೆ ಒತ್ತು ನೀಡಲಾಗಿದೆ.
ಒಂಬುಡ್ಸ್ಮನ್ಗಳಿಗಾಗಿ ಸಮರ್ಪಿತ ಡಿಜಿಟಲ್ ವೇದಿಕೆಯು ಇದರ ಪ್ರಮುಖ ವೈಶಿಷ್ಟ್ಯವಾಗಿದ್ದು, ಇದು ದೂರುಗಳ ಆನ್ಲೈನ್ ನೋಂದಣಿ ಮತ್ತು ಟ್ರ್ಯಾಕಿಂಗ್, ವಿಚಾರಣೆಗಳ ದಾಖಲಾತಿ, ತೀರ್ಪುಗಳನ್ನು ಅಪ್ಲೋಡ್ ಮಾಡುವುದು ಮತ್ತು ಕೈಗೊಂಡ ಕ್ರಮಗಳ ಮೇಲ್ವಿಚಾರಣೆಯನ್ನು ಸುಗಮಗೊಳಿಸುತ್ತದೆ. ಕ್ಷೇತ್ರ ಭೇಟಿಗಳ ಸಮಯದಲ್ಲಿ ಜಿಯೋ-ಟ್ಯಾಗ್ ಮತ್ತು ಸಮಯ-ಮುದ್ರೆಯ (ಟೈಮ್-ಸ್ಟ್ಯಾಂಪ್ಡ್) ಛಾಯಾಚಿತ್ರಗಳು ಕುಂದುಕೊರತೆ ನಿವಾರಣಾ ಪ್ರಕ್ರಿಯೆಯಲ್ಲಿ ದಾಖಲಾತಿ, ನಿಖರತೆ ಮತ್ತು ಪಾರದರ್ಶಕತೆಯನ್ನು ಮತ್ತಷ್ಟು ಬಲಪಡಿಸುತ್ತವೆ.
ಸಮುದಾಯದ-ನೇತೃತ್ವದ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಪ್ರಮುಖ ಕಾರ್ಯವಿಧಾನವಾಗಿ ಸಾಮಾಜಿಕ ಲೆಕ್ಕಪರಿಶೋಧನೆಯ (ಸೋಶಿಯಲ್ ಆಡಿಟ್) ಪಾತ್ರವನ್ನು ಮಾರ್ಗಸೂಚಿಗಳು ಬಲಪಡಿಸುತ್ತವೆ. ಒಂಬುಡ್ಸ್ಮನ್ಗಳು ಪ್ರತಿ ತಿಂಗಳು ಕನಿಷ್ಠ ಮೂರು ಸಾಮಾಜಿಕ ಲೆಕ್ಕಪರಿಶೋಧನೆ ಸಾರ್ವಜನಿಕ ವಿಚಾರಣೆಗಳು ಅಥವಾ ಗ್ರಾಮ ಸಭೆಗಳಿಗೆ ಹಾಜರಾಗಲಿದ್ದಾರೆ, ಇದು ನಾಗರಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಲು ಮತ್ತು ಸೂಕ್ತ ಮುಂದಿನ ಕ್ರಮಗಳನ್ನು ಸುಗಮಗೊಳಿಸಲು ಅವಕಾಶವನ್ನು ಒದಗಿಸುತ್ತದೆ. ಸಾಮಾಜಿಕ ಲೆಕ್ಕಪರಿಶೋಧನಾ ವರದಿಗಳು ಮತ್ತು ಸಮುದಾಯದ ಪ್ರತಿಕ್ರಿಯೆಗಳು, ವೈಯಕ್ತಿಕ ದೂರುಗಳ ಜೊತೆಗೆ, ನಿಗದಿತ ಕಾರ್ಯವಿಧಾನಗಳಿಗೆ ಅನುಗುಣವಾಗಿ ನ್ಯೂನತೆಗಳನ್ನು ಗುರುತಿಸಲು ಮತ್ತು ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ನೆರವಾಗುತ್ತವೆ.
ಡಿಜಿಟಲ್ ಮೇಲ್ವಿಚಾರಣೆ, ಸಾರ್ವಜನಿಕ ಬಹಿರಂಗಪಡಿಸುವಿಕೆ ಮತ್ತು ಸಾಮಾಜಿಕ ಲೆಕ್ಕಪರಿಶೋಧನೆ ಸೇರಿದಂತೆ ವಿಬಿ-ಜಿ ರಾಮ್ ಜಿ ಅಡಿಯಲ್ಲಿನ ಇತರ ಹೊಣೆಗಾರಿಕೆ ಕ್ರಮಗಳಿಗೆ ಒಂಬುಡ್ಸ್ಮನ್ ಮತ್ತು ಮೇಲ್ಮನವಿ ಪ್ರಾಧಿಕಾರದ ಚೌಕಟ್ಟು ಪೂರಕವಾಗಿದೆ. ಒಟ್ಟಾರೆಯಾಗಿ, ಈ ಕಾರ್ಯವಿಧಾನಗಳು ಪಾರದರ್ಶಕ ಅನುಷ್ಠಾನವನ್ನು ಉತ್ತೇಜಿಸುವ, ಮೇಲ್ವಿಚಾರಣೆಯನ್ನು ಬಲಪಡಿಸುವ ಮತ್ತು ವ್ಯವಸ್ಥಿತ ಹಾಗೂ ಜವಾಬ್ದಾರಿಯುತ ಪ್ರಕ್ರಿಯೆಯ ಮೂಲಕ ಕುಂದುಕೊರತೆಗಳನ್ನು ಪರಿಹರಿಸುವುದನ್ನು ಖಚಿತಪಡಿಸುವ ಗುರಿಯನ್ನು ಹೊಂದಿವೆ.
ಈ ಮಾರ್ಗಸೂಚಿಗಳ ಮೂಲಕ, ಸರ್ಕಾರವು ‘ವಿಬಿ-ಜಿ ರಾಮ್ ಜಿ’ ಅಡಿಯಲ್ಲಿ ನಾಗರಿಕ-ಕೇಂದ್ರಿತ ಆಡಳಿತವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದ್ದು, ಗ್ರಾಮೀಣ ಕಾರ್ಮಿಕರಿಗೆ ತಮ್ಮ ಕುಂದುಕೊರತೆ ನಿವಾರಣೆಗೆ ಸುಲಭವಾದ ಮಾರ್ಗಗಳು ಮತ್ತು ಅನುಷ್ಠಾನದಲ್ಲಿ ಪಾರದರ್ಶಕತೆ, ಸ್ಪಂದನೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ.
*****