ಖ್ಯಾತ ಚಲನಚಿತ್ರ ನಿರ್ದೇಶಕರಾದ ಅಲೀನಾ ಸೆರ್ಬಾನ್ ಅವರು ಬರೆದು ನಿರ್ದೇಶಿಸಿರುವ ಬಹುಭಾಷಾ ಚಿತ್ರ ಐ ಮ್ಯಾಟರ್ (Eu Contez) 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ಮಧ್ಯಂತರ ವಿಶೇಷ ಚಿತ್ರವಾಗಿ ಭಾರತೀಯ ಪ್ರಥಮ ಪ್ರದರ್ಶನ ಕಾಣಲಿದೆ. ರೊಮೇನಿಯಾ, ಜರ್ಮನಿ ಮತ್ತು ಬೆಲ್ಜಿಯಂ ದೇಶಗಳ ಸಹನಿರ್ಮಾಣದ ಈ 101 ನಿಮಿಷಗಳ ಚಿತ್ರವು ವ್ಯಕ್ತಿಯ ಗುರುತು, ಕುಟುಂಬ, ಸಮಾಜದಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳುವ ಹಂಬಲ ಮತ್ತು ಗತಕಾಲದ ಪರಿಸ್ಥಿತಿಗಳನ್ನು ಮೀರಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಪ್ರಯತ್ನದ ಕಥೆಯನ್ನು ಹೇಳುತ್ತದೆ. ರೊಮೇನಿಯನ್ ಮತ್ತು ರೊಮಾನಿ ಭಾಷೆಗಳ ಸಂಭಾಷಣೆಗಳನ್ನು ಒಳಗೊಂಡಿರುವ ಈ ಚಿತ್ರವು ಯುರೋಪಿನ ವಿಶಿಷ್ಟ ಚಲನಚಿತ್ರ ಕಥನವನ್ನು ಉತ್ಸವಕ್ಕೆ ಪರಿಚಯಿಸಲಿದೆ.
ಈ ಚಿತ್ರವು ತಾನು ಬೆಳೆದ ಅನಾಥಾಶ್ರಮವನ್ನು ಬಿಟ್ಟು ಹೊಸ ಬದುಕು ಆರಂಭಿಸಲು ಸಿದ್ಧಳಾಗಿರುವ ರೆಬೆಕಾ ಎಂಬ ಯುವ ರೊಮಾ ಮಹಿಳೆಯ ಕಥೆಯನ್ನು ಹೇಳುತ್ತದೆ. ಆಕೆಯ ತಂದೆ ಜೈಲಿನಿಂದ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ, ತಾನು ಸದಾ ಹಂಬಲಿಸುತ್ತಿದ್ದ ಕುಟುಂಬದ ಪ್ರೀತಿ ಮತ್ತು ಆಸರೆಯನ್ನು ಕಂಡುಕೊಂಡು ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸುವ ನಿರೀಕ್ಷೆ ಆಕೆಯಲ್ಲಿದೆ. ನಟನೆಯನ್ನು ಅಧ್ಯಯನ ಮಾಡಲು ವಿಶ್ವವಿದ್ಯಾಲಯಕ್ಕೆ ಪ್ರವೇಶ ದೊರೆತಿರುವುದು ಆಕೆಯಲ್ಲಿ ಹೊಸ ಭರವಸೆ ಮೂಡಿಸುತ್ತದೆ. ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುವ ಅವಕಾಶವೂ ಆಕೆಗೆ ಸಿಗುತ್ತದೆ. ಆದರೆ, ತನಗೆ ಅಪರಿಚಿತವಾದ ಹೊಸ ಪರಿಸರದಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುವಾಗ, ಗತಕಾಲದ ಮರೆಯಲಾಗದ ಅನುಭವಗಳು ಮತ್ತೆ ಎದುರಾಗುತ್ತವೆ. ಅವು ಆಕೆಯನ್ನು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸನ್ನಿವೇಶಕ್ಕೆ ತಳ್ಳುತ್ತವೆ.
ರೆಬೆಕಾಳ ಬದುಕಿನ ಪಯಣದ ಮೂಲಕ ಐ ಮ್ಯಾಟರ್ ಚಿತ್ರವು ಸ್ಥಿರವಾದ ಕುಟುಂಬದ ವಾತಾವರಣವಿಲ್ಲದೆ ಬೆಳೆಯುವಾಗ ಎದುರಾಗುವ ಭಾವನಾತ್ಮಕ ಸವಾಲುಗಳು, ಸಮಾಜದಲ್ಲಿ ಸ್ವೀಕಾರ ಮತ್ತು ಪ್ರೀತಿ ಪಡೆಯುವ ಹಂಬಲ ಹಾಗೂ ಸಮಾಜದಲ್ಲಿ ತನಗೆ ಸೂಕ್ತವಾದ ಸ್ಥಾನ ಕಂಡುಕೊಳ್ಳುವ ದೃಢಸಂಕಲ್ಪವನ್ನು ಕಟ್ಟಿಕೊಡುತ್ತದೆ. ರೊಮಾ ಯುವತಿಯ ಅನುಭವಗಳ ಹಿನ್ನೆಲೆಯೊಂದಿಗೆ ಸಾಗುವ ಈ ಚಿತ್ರವು ಸಾಮಾಜಿಕ ಒಳಗೊಳ್ಳುವಿಕೆ, ಮಾನವ ಘನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದಂತಹ ಮಹತ್ವದ ಪ್ರಶ್ನೆಗಳನ್ನೂ ಚರ್ಚಿಸುತ್ತದೆ.

ಅಲೀನಾ ಸೆರ್ಬಾನ್ ಅವರ ಚೊಚ್ಚಲ ಪೂರ್ಣಪ್ರಮಾಣದ ನಿರ್ದೇಶನದ ಚಿತ್ರ ಇದಾಗಿದೆ. ಅವರು ಖ್ಯಾತ ನಟಿ ಮತ್ತು ನಾಟಕಕಾರರೂ ಆಗಿದ್ದಾರೆ. ಬುಕಾರೆಸ್ಟ್‌ನ ರಾಷ್ಟ್ರೀಯ ರಂಗಭೂಮಿ ಮತ್ತು ಚಲನಚಿತ್ರ ವಿಶ್ವವಿದ್ಯಾಲಯದ ಪದವೀಧರೆಯಾಗಿರುವ ಅವರು, ನ್ಯೂಯಾರ್ಕ್ ವಿಶ್ವವಿದ್ಯಾಲಯದ ಟಿಶ್ ಸ್ಕೂಲ್ ಆಫ್ ದಿ ಆರ್ಟ್ಸ್ ಮತ್ತು ಲಂಡನ್‌ನ ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್‌ನಲ್ಲಿಯೂ ತರಬೇತಿ ಪಡೆದಿದ್ದಾರೆ. ಅವರ ಹಿಂದಿನ ಚಿತ್ರಗಳಲ್ಲಿ ಕಾನ್ ಚಲನಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡ ಅಲೋನ್ ಅಟ್ ಮೈ ವೆಡ್ಡಿಂಗ್ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಗಳೂ ಸೇರಿದಂತೆ ಹಲವು ಗೌರವಗಳನ್ನು ತಂದುಕೊಟ್ಟ ಜಿಪ್ಸಿ ಕ್ವೀನ್ ಸೇರಿವೆ. ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಹೌಸ್‌ಕೀಪಿಂಗ್ ಫಾರ್ ಬಿಗಿನರ್ಸ್ ಚಿತ್ರದಲ್ಲಿಯೂ ಅವರು ಅಭಿನಯಿಸಿದ್ದಾರೆ.
ಐ ಮ್ಯಾಟರ್ ಚಿತ್ರವು 2026ರ ಸೆಪ್ಟೆಂಬರ್‌ನಲ್ಲಿ ನಡೆದ 83ನೇ ವೆನಿಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 'ವೆನಿಸ್ ಸ್ಪಾಟ್‌ಲೈಟ್' ವಿಭಾಗದಲ್ಲಿ ಮೊದಲ ಪ್ರದರ್ಶನ ಕಂಡಿತು. ಈ ಸಂದರ್ಭದಲ್ಲಿ ಪ್ರತಿಷ್ಠಿತ 'ಅರ್ಮಾನಿ ಬ್ಯೂಟಿ ಪ್ರೇಕ್ಷಕರ ಪ್ರಶಸ್ತಿ'ಯನ್ನು ಪಡೆದುಕೊಂಡಿತು. ಚಿತ್ರದಲ್ಲಿ ರೆಬೆಕಾ ಪಾತ್ರದಲ್ಲಿ ಡೆನಿಸಾ ಫಾರ್ಕಾಸ್ ಅಭಿನಯಿಸಿದ್ದು, ಅವರೊಂದಿಗೆ ಸೊರಿನ್ ಮಿಹಾಯ್, ಆಂಜೆಲಿನಾ ಪಾವೆಲ್, ವನೆಸ್ಸಾ ಡಾನ್ಸಿಯಾ, ರೈಸಾ ಮಿಹಾಯ್, ಅಲೆಕ್ಸಾಂಡ್ರು ಸ್ಟಾಂಕು, ಅಲೀನಾ ಬೆರ್ಜುಂಟಿಯಾನು ಮತ್ತು ನತಾಲಿಯಾ ಕಾಲಿನ್ ನಟಿಸಿದ್ದಾರೆ.
ಐಎಫ್‌ಎಫ್‌ಐ 2026ರ ಮಧ್ಯಂತರ ವಿಶೇಷ ಪ್ರದರ್ಶನವಾಗಿ ಐ ಮ್ಯಾಟರ್ ಚಿತ್ರವು 2026ರ ನವೆಂಬರ್ 24ರಂದು ಸಂಜೆ 4:30ಕ್ಕೆ ಪಿವಿಆರ್ ಐನಾಕ್ಸ್ ಪಣಜಿ (ಆಡಿಟೋರಿಯಂ 1) ಮತ್ತು ಪಿವಿಆರ್ ಐನಾಕ್ಸ್ ಪೊರ್ವೊರಿಮ್ (ಆಡಿಟೋರಿಯಂ 1) ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರದ ನಿರ್ದೇಶಕಿ ಅಲೀನಾ ಸೆರ್ಬಾನ್ ಮತ್ತು ನಾಯಕ ನಟಿ ಡೆನಿಸಾ ಫಾರ್ಕಾಸ್ ಅವರು ವಿಶೇಷ ಅತಿಥಿಗಳಾಗಿ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಚಿತ್ರ ಪ್ರದರ್ಶನದ ದಿನದಂದು ಪಿವಿಆರ್ ಐನಾಕ್ಸ್ ಪಣಜಿಯಲ್ಲಿ ಚಿತ್ರದ ಅತಿಥಿಗಳೊಂದಿಗೆ ರೆಡ್ ಕಾರ್ಪೆಟ್ ಕಾರ್ಯಕ್ರಮವೂ ನಡೆಯಲಿದೆ.

ನವೆಂಬರ್ 20ರಿಂದ 28ರವರೆಗೆ ಗೋವಾದ ವಿವಿಧ ಸ್ಥಳಗಳಲ್ಲಿ ನಡೆಯಲಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 86 ದೇಶಗಳ 150ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಸ್ಪರ್ಧಾತ್ಮಕ ಮತ್ತು ಸ್ಪರ್ಧಾತ್ಮಕವಲ್ಲದ ವಿಭಾಗಗಳು, ವಿಶೇಷವಾಗಿ ಆಯ್ಕೆ ಮಾಡಲಾದ ಚಿತ್ರಗಳ ಪ್ಯಾಕೇಜ್‌ಗಳು, ಹಿನ್ನೋಟ ಪ್ರದರ್ಶನಗಳು, ಗೌರವ ಸಮರ್ಪಣೆಗಳು ಮತ್ತು ವಿಷಯಾಧಾರಿತ ಚಿತ್ರ ಪ್ರದರ್ಶನಗಳ ಮೂಲಕ ವಿವಿಧ ಪ್ರಕಾರಗಳು, ದೇಶಗಳು ಮತ್ತು ಭಾಷೆಗಳ ಚಿತ್ರಗಳನ್ನು ಉತ್ಸವದಲ್ಲಿ ಪರಿಚಯಿಸಲಾಗುತ್ತದೆ. ಆ ಮೂಲಕ ಸಾಂಸ್ಕೃತಿಕ ವಿನಿಮಯ ಮತ್ತು ಚಲನಚಿತ್ರ ಕಲೆಯ ಶ್ರೇಷ್ಠತೆಗೆ ವೇದಿಕೆ ಕಲ್ಪಿಸಲಾಗುತ್ತದೆ.
*****