ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಭಾರತ ಸರ್ಕಾರವು ಭಾರತೀಯ ವೀಸಾ ವ್ಯವಸ್ಥೆಯನ್ನು ಸರಳೀಕರಿಸಿದೆ


ವೀಸಾ ವ್ಯವಸ್ಥೆಯ ಸರಳೀಕರಣದಡಿ, ವೀಸಾದ ಪ್ರಮುಖ ವಿಭಾಗಗಳ ಸಂಖ್ಯೆಯನ್ನು 13ರಿಂದ 09ಕ್ಕೆ ಮತ್ತು ಉಪವಿಭಾಗಗಳ ಸಂಖ್ಯೆಯನ್ನು 49ರಿಂದ 23ಕ್ಕೆ ಇಳಿಸಲಾಗಿದೆ

ವಿದೇಶಿ ಪ್ರವಾಸಿಗರ ಆಗಮನ, ವೈದ್ಯಕೀಯ ಸೇವೆಗಳಿಗಾಗಿ ಭಾರತಕ್ಕೆ ಭೇಟಿ ನೀಡುವವರ ಸಂಖ್ಯೆ ಹಾಗೂ ವಿದೇಶಿ ವಿದ್ಯಾರ್ಥಿಗಳ ಆಗಮನವನ್ನು ಹೆಚ್ಚಿಸುವ ಉದ್ದೇಶದಿಂದ ಭಾರತೀಯ ವೀಸಾ ವ್ಯವಸ್ಥೆಯನ್ನು ಸರಳೀಕರಿಸಲಾಗಿದೆ

ಎಲ್ಲಾ 23 ವೀಸಾ ಉಪವಿಭಾಗಗಳ ಅರ್ಜಿ ನಮೂನೆಗಳಲ್ಲಿ ಭರ್ತಿ ಮಾಡಬೇಕಾದ ಅಂಶಗಳ ಸಂಖ್ಯೆಯನ್ನು ಶೇ.65ರಿಂದ ಶೇ.70ರಷ್ಟು ಕಡಿಮೆ ಮಾಡಲಾಗಿದೆ. ಇದರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗ ಹೆಚ್ಚು ಸರಳ, ವೇಗ ಮತ್ತು ಅರ್ಜಿದಾರ ಸ್ನೇಹಿಯಾಗಿದೆ

ವೀಸಾ ವಿಭಾಗಗಳ ನಡುವಿನ ಉದ್ದೇಶಗಳಲ್ಲಿನ ಪುನರಾವರ್ತನೆಯನ್ನು ಕಡಿಮೆ ಮಾಡುವುದರ ಜೊತೆಗೆ, ಪ್ರವಾಸಿಗರು, ರೋಗಿಗಳು, ವಿದ್ಯಾರ್ಥಿಗಳು, ಸಂಶೋಧಕರು, ಹೂಡಿಕೆದಾರರು ಮತ್ತು ಉದ್ಯಮ ವೃತ್ತಿಪರರು ಸೂಕ್ತ ವೀಸಾ ಆಯ್ಕೆ ಮಾಡಿಕೊಳ್ಳಲು ಪರಿಷ್ಕೃತ ವ್ಯವಸ್ಥೆಯು ಅನುಕೂಲ ಕಲ್ಪಿಸುತ್ತದೆ

ಸ್ಪಷ್ಟ ಉದ್ದೇಶಗಳನ್ನು ಆಧರಿಸಿದ ವೀಸಾ ಆಯ್ಕೆಗಳ ಮೂಲಕ ಭಾರತಕ್ಕೆ ಕಾನೂನುಬದ್ಧ ಪ್ರಯಾಣ, ಶಿಕ್ಷಣ, ಆರೋಗ್ಯ ಸೇವೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಈ ಸರಳೀಕರಣದ ಉದ್ದೇಶವಾಗಿದೆ

ಪ್ರಕಟಣಾ ದಿನಾಂಕ: 11 NOV 2026 7:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಭಾರತ ಸರ್ಕಾರವು ದೇಶದ ವೀಸಾ ವ್ಯವಸ್ಥೆಯನ್ನು ಸರಳೀಕರಿಸಿದೆ. ವಿದೇಶಿ ಪ್ರಜೆಗಳ ಅಗತ್ಯಗಳಿಗೆ ಹೆಚ್ಚು ಸಮರ್ಪಕವಾಗಿ ಸ್ಪಂದಿಸುವ, ಸಂಕ್ಷಿಪ್ತ ಮತ್ತು ಸುಸಂಬದ್ಧ ವೀಸಾ ವ್ಯವಸ್ಥೆಯನ್ನು ರೂಪಿಸುವುದು ಈ ಕ್ರಮದ ಉದ್ದೇಶವಾಗಿದೆ.

2026ರ ಆಗಸ್ಟ್ 27ರಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ವೀಸಾದ ಪ್ರಮುಖ ವಿಭಾಗಗಳ ಸಂಖ್ಯೆಯನ್ನು 13ರಿಂದ 9ಕ್ಕೆ ಮತ್ತು ಉಪವಿಭಾಗಗಳ ಸಂಖ್ಯೆಯನ್ನು 49ರಿಂದ 23ಕ್ಕೆ ಇಳಿಸಿತು. ಇದಕ್ಕೂ ಮೊದಲು, 2025ರ ಅಕ್ಟೋಬರ್‌ನಲ್ಲಿ ಕೈಗೊಂಡಿದ್ದ ಸರಳೀಕರಣದ ಭಾಗವಾಗಿ ಪ್ರಮುಖ ವೀಸಾ ವಿಭಾಗಗಳ ಸಂಖ್ಯೆಯನ್ನು 22ರಿಂದ 13ಕ್ಕೆ ಹಾಗೂ ಉಪವಿಭಾಗಗಳ ಸಂಖ್ಯೆಯನ್ನು 63ರಿಂದ 49ಕ್ಕೆ ಇಳಿಸಲಾಗಿತ್ತು. ಭಾರತದ ವೀಸಾ ವ್ಯವಸ್ಥೆಯನ್ನು ಸರಳೀಕರಿಸುವ ಪ್ರಕ್ರಿಯೆಯಲ್ಲಿ ಭಾರತ ಸರ್ಕಾರವು ಅಭಿವೃದ್ಧಿ ಹೊಂದಿದ ದೇಶಗಳ ವೀಸಾ ವ್ಯವಸ್ಥೆ ಮತ್ತು ಜಾಗತಿಕ ಮಾನದಂಡಗಳನ್ನು ಅಧ್ಯಯನ ಮಾಡಿದೆ.

ಪ್ರಯಾಣದ ಉದ್ದೇಶದಲ್ಲಿ ಸಾಮ್ಯತೆ ಹೊಂದಿರುವ ವೀಸಾ ವಿಭಾಗಗಳನ್ನು ಒಗ್ಗೂಡಿಸುವ ಮೂಲಕ, ಕಾನೂನುಬದ್ಧವಾಗಿ ಭಾರತಕ್ಕೆ ಆಗಮಿಸುವವರಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ ಸೂಕ್ತ ವೀಸಾ ವಿಭಾಗವನ್ನು ಗುರುತಿಸುವಲ್ಲಿ ಹೆಚ್ಚಿನ ಸ್ಪಷ್ಟತೆ ಒದಗಿಸುವ ಉದ್ದೇಶ ಹೊಂದಲಾಗಿದೆ.

ಪ್ರಸ್ತುತ 13 ಉಪವಿಭಾಗಗಳ ಅಡಿಯಲ್ಲಿ ಎಲೆಕ್ಟ್ರಾನಿಕ್ ಪ್ರಯಾಣ ದೃಢೀಕರಣದ (ಎಲೆಕ್ಟ್ರಾನಿಕ್ ಟ್ರಾವೆಲ್ ಆಥರೈಸೇಶನ್) ಮೂಲಕ ಇ-ವೀಸಾ ನೀಡಲಾಗುತ್ತಿದೆ. ಸದ್ಯ 172 ದೇಶಗಳ ಪ್ರಜೆಗಳಿಗೆ ಇ-ವೀಸಾ ಸೌಲಭ್ಯ ಲಭ್ಯವಿದೆ.

ವಿಸಿಟರ್ ವೀಸಾ: ಅಲ್ಪಾವಧಿ ಮತ್ತು ದೀರ್ಘಾವಧಿ ಭೇಟಿಗಳಿಗೆ ಹೆಚ್ಚಿನ ಅನುಕೂಲ

ಈ ಹಿಂದೆ ಟೂರಿಸ್ಟ್ ವೀಸಾ ಎಂದು ಕರೆಯಲಾಗುತ್ತಿದ್ದ ವೀಸಾವನ್ನು ವಿಸಿಟರ್ ವೀಸಾ ಎಂದು ಮರುನಾಮಕರಣ ಮಾಡಲಾಗಿದೆ. ಸಾಂಪ್ರದಾಯಿಕ ಪ್ರವಾಸೋದ್ಯಮದ ಆಚೆಗೂ ಹಲವು ಉದ್ದೇಶಗಳಿಗಾಗಿ ಭೇಟಿ ನೀಡಲು ಅವಕಾಶ ಕಲ್ಪಿಸುವುದನ್ನು ಈ ಹೆಸರು ಪ್ರತಿಬಿಂಬಿಸುತ್ತದೆ. ಅರ್ಜಿದಾರರು ತಮ್ಮ ಭೇಟಿಯ ಸ್ವರೂಪ ಮತ್ತು ಅವಧಿಗೆ ಅನುಗುಣವಾಗಿ ಸೂಕ್ತ ವೀಸಾ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಈ ವಿಭಾಗವನ್ನು V-1 ಮತ್ತು V-2 ಎಂಬ ಎರಡು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ.

V-1 ವೀಸಾ: ಇತರ ಅರ್ಹ ಭೇಟಿಯ ಉದ್ದೇಶಗಳ ಜೊತೆಗೆ, ವ್ಯಾಪಾರ ಸಭೆಗಳು, ವೈದ್ಯಕೀಯ ಸಮಾಲೋಚನೆ, ಕ್ಷೇಮ ಕೇಂದ್ರಗಳಲ್ಲಿ ವಿಶ್ರಾಂತಿ ಮತ್ತು ಆರೋಗ್ಯ ಸುಧಾರಣಾ ಕಾರ್ಯಕ್ರಮಗಳು, ಅಲ್ಪಾವಧಿಯ ವೈದ್ಯಕೀಯ ಚಿಕಿತ್ಸೆ ಹಾಗೂ ಭಾರತೀಯ ಭಾಷೆಗಳು, ಸಂಗೀತ, ಕಲೆ ಮತ್ತು ಕರಕುಶಲ ವಿಷಯಗಳ ಅಲ್ಪಾವಧಿ ಕೋರ್ಸ್‌ಗಳಂತಹ ಚಟುವಟಿಕೆಗಳಿಗೆ ಈ ವೀಸಾ ಅವಕಾಶ ಕಲ್ಪಿಸುತ್ತದೆ. ಈ ವೀಸಾವನ್ನು 30 ದಿನಗಳ ಅವಧಿಗೆ, ಹಲವು ಬಾರಿ ಪ್ರವೇಶಿಸಲು ಅವಕಾಶವಿರುವಂತೆ ನೀಡಲಾಗುತ್ತದೆ.

V-2 ವೀಸಾ: ದೀರ್ಘಾವಧಿಯ ಭೇಟಿಗಳನ್ನು ಉದ್ದೇಶಿಸಿರುವ ಈ ವೀಸಾವನ್ನು ನಿರ್ದಿಷ್ಟಪಡಿಸಿದಂತೆ 1, 5 ಅಥವಾ 10 ವರ್ಷಗಳ ಮಾನ್ಯತೆಯೊಂದಿಗೆ ನೀಡಲಾಗುತ್ತದೆ. V-1 ವೀಸಾದಡಿ ಅನುಮತಿಸಲಾದ ಚಟುವಟಿಕೆಗಳ ಜೊತೆಗೆ ಪರ್ವತಾರೋಹಣಕ್ಕೂ ಇದು ಅವಕಾಶ ಕಲ್ಪಿಸುತ್ತದೆ. ಪರ್ವತಾರೋಹಣಕ್ಕಾಗಿ ಆರು ತಿಂಗಳ ಅವಧಿಯ, ಹಲವು ಬಾರಿ ಪ್ರವೇಶಿಸಲು ಅವಕಾಶವಿರುವ ವೀಸಾ ನೀಡಲಾಗುತ್ತದೆ.

ಅಲ್ಪಾವಧಿಯ ವಿವಿಧ ಭೇಟಿಗಳನ್ನು ಸ್ಪಷ್ಟವಾಗಿ ಗುರುತಿಸಲಾದ ಒಂದೇ ವಿಭಾಗದಡಿ ತರುವ ಮೂಲಕ, ಪ್ರವಾಸದ ಜೊತೆಗೆ ವ್ಯಾಪಾರ ಸಭೆಗಳು, ವೈದ್ಯಕೀಯ ಸಮಾಲೋಚನೆ, ವೆಲ್ನೆಸ್ ರಿಟ್ರೀಟ್‌ಗಳು, ಸಾಂಸ್ಕೃತಿಕ ಕಲಿಕೆ ಅಥವಾ ಅಲ್ಪಾವಧಿಯ ಯೋಗ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬಯಸುವ ಪ್ರಯಾಣಿಕರಿಗೆ ಹೊಸ ವ್ಯವಸ್ಥೆಯು ವೀಸಾ ಆಯ್ಕೆಯನ್ನು ಸರಳಗೊಳಿಸುತ್ತದೆ. ಅರ್ಹ ವ್ಯಕ್ತಿಗಳಿಗೆ ದೀರ್ಘಾವಧಿಯ V-2 ವೀಸಾ ಆಯ್ಕೆಯು ಪುನರಾವರ್ತಿತ ಭೇಟಿಗಳಿಗೆ ನಿರಂತರತೆ ಮತ್ತು ಅನುಕೂಲ ಒದಗಿಸುತ್ತದೆ. ಪರ್ವತಾರೋಹಣಕ್ಕಾಗಿ ಪ್ರತ್ಯೇಕ ಅವಕಾಶ ಕಲ್ಪಿಸಿರುವುದು ಇಂತಹ ಪ್ರಯಾಣಗಳ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುತ್ತದೆ.

ವೈದ್ಯಕೀಯ ವೀಸಾ: ಚಿಕಿತ್ಸೆಯ ನಿರಂತರತೆ ಮತ್ತು ಪುನರಾವರ್ತಿತ ಭೇಟಿಗಳಿಗೆ ಅನುಕೂಲ

ವೈದ್ಯಕೀಯ ವೀಸಾ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳು ಮತ್ತು ಆಯುಷ್ ಪದ್ಧತಿಗಳಡಿ ಚಿಕಿತ್ಸೆ ಪಡೆಯಲು ಪ್ರತ್ಯೇಕ ಅವಕಾಶಗಳನ್ನು ಮುಂದುವರಿಸಲಾಗಿದೆ. ಆಯುಷ್ ಪದ್ಧತಿಗಳಡಿ ನೀಡುವ ಚಿಕಿತ್ಸೆಯನ್ನು ಹೊರತುಪಡಿಸಿದ ಇತರ ವೈದ್ಯಕೀಯ ಚಿಕಿತ್ಸೆಗಳಿಗೆ M-1 ವೀಸಾ ಹಾಗೂ ಆಯುಷ್ ಪದ್ಧತಿಗಳಡಿ ಚಿಕಿತ್ಸೆ ಪಡೆಯಲು M-3 ವೀಸಾ ಅನ್ವಯವಾಗುತ್ತದೆ. M-1 ಮತ್ತು M-3 ವೀಸಾಗಳನ್ನು, ಅವುಗಳ ಇ-ವೀಸಾ ರೂಪಗಳನ್ನೂ ಒಳಗೊಂಡಂತೆ, ಸಾಮಾನ್ಯವಾಗಿ ಒಂದು ವರ್ಷದ ಅವಧಿಗೆ ಹಲವು ಬಾರಿ ಪ್ರವೇಶಿಸಲು ಅವಕಾಶವಿರುವಂತೆ ನೀಡಲಾಗುತ್ತದೆ. ಇದಕ್ಕೆ ಅನುಗುಣವಾಗಿ ವೈದ್ಯಕೀಯ ಸಹಾಯಕರಿಗೂ (ಮೆಡಿಕಲ್ ಅಟೆಂಡೆಂಟ್) ಪ್ರತ್ಯೇಕ ವೀಸಾ ಸೌಲಭ್ಯವಿದೆ. M-1 ಮತ್ತು M-3 ವೀಸಾದಾರರ ಜೊತೆಗಿರುವ ಸಹಾಯಕರಿಗೆ ಕ್ರಮವಾಗಿ M-2 ಮತ್ತು M-4 ವೀಸಾಗಳನ್ನು ನೀಡಲಾಗುತ್ತದೆ.

ಚಿಕಿತ್ಸೆಯ ಸಂದರ್ಭದಲ್ಲಿ ಹಲವು ವೈದ್ಯಕೀಯ ಸಮಾಲೋಚನೆಗಳು, ನಂತರದ ತಪಾಸಣೆಗಳು ಅಥವಾ ವಿವಿಧ ಹಂತಗಳಲ್ಲಿ ನಡೆಯುವ ಚಿಕಿತ್ಸೆಗಳು ಅಗತ್ಯವಿದ್ದಾಗ ಈ ವ್ಯವಸ್ಥೆಯು ರೋಗಿಗಳಿಗೆ ಹೆಚ್ಚಿನ ಅನುಕೂಲ ಒದಗಿಸುತ್ತದೆ. ಹಲವು ಬಾರಿ ಪ್ರವೇಶಿಸಲು ಅವಕಾಶವಿರುವ ವೀಸಾ ಮಾನ್ಯತೆಯಿಂದಾಗಿ ಚಿಕಿತ್ಸೆಯ ಅವಧಿಯಲ್ಲಿ ಪದೇಪದೇ ವೀಸಾ ಅರ್ಜಿ ಸಲ್ಲಿಸುವ ಅಗತ್ಯ ಕಡಿಮೆಯಾಗುತ್ತದೆ. ಆಯುಷ್ ಚಿಕಿತ್ಸೆಗೆ ಪ್ರತ್ಯೇಕ ಅವಕಾಶ ಕಲ್ಪಿಸಿರುವುದರಿಂದ ಅರ್ಜಿದಾರರು ತಮಗೆ ಸೂಕ್ತವಾದ ಚಿಕಿತ್ಸಾ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಜೊತೆಗೆ, ವೈದ್ಯಕೀಯ ಸಹಾಯಕರಿಗೆ (ಮೆಡಿಕಲ್ ಅಟೆಂಡೆಂಟ್) ವೀಸಾ ಸೌಲಭ್ಯ ಲಭ್ಯವಿರುವುದರಿಂದ ರೋಗಿಗಳ ಜೊತೆಗಿರುವವರಿಗೆ ಅನುಕೂಲವಾಗುತ್ತದೆ. ಪ್ರಧಾನಮಂತ್ರಿಯವರ ‘ಹೀಲ್ ಇನ್ ಇಂಡಿಯಾ’ (ಭಾರತದಲ್ಲಿ ಚಿಕಿತ್ಸೆ ಪಡೆಯಿರಿ) ಪರಿಕಲ್ಪನೆಗೆ ಅನುಗುಣವಾಗಿ ಈ ಕ್ರಮವು ಭಾರತದಲ್ಲಿ ವೈದ್ಯಕೀಯ ಮೌಲ್ಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ.

ವಿದ್ಯಾರ್ಥಿ ವೀಸಾ: ಶಿಕ್ಷಣ ಮತ್ತು ಸಂಶೋಧನೆಗೆ ಸ್ಪಷ್ಟವಾದ ಅವಕಾಶಗಳು

ವಿದ್ಯಾರ್ಥಿ ವೀಸಾ ವಿಭಾಗವನ್ನು ಎರಡು ಪ್ರಮುಖ ಉಪವಿಭಾಗಗಳಾಗಿ ಸಂಯೋಜಿಸಲಾಗಿದೆ. ಶಾಲಾ ಶಿಕ್ಷಣ, ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಪಡೆಯುವವರಿಗೆ S-1 ವೀಸಾ ಅನ್ವಯವಾಗುತ್ತದೆ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ಮತ್ತು ಸಂಶೋಧನೆ ಕೈಗೊಳ್ಳುವ ವಿದ್ವಾಂಸರು, ಸಂದರ್ಶಕ ಅಧ್ಯಾಪಕರು, ಸಂಶೋಧನೆಗಾಗಿ ಭಾರತಕ್ಕೆ ಭೇಟಿ ನೀಡುವ ವಿದೇಶಿ ಸಂಶೋಧನಾ ವಿದ್ಯಾರ್ಥಿಗಳು, ವೈಜ್ಞಾನಿಕ ಮತ್ತು ಮಾನವಶಾಸ್ತ್ರೀಯ ಕ್ಷೇತ್ರ ಅಧ್ಯಯನ ಪ್ರವಾಸಗಳು, ಇಂಟರ್ನ್‌ಶಿಪ್ ಮತ್ತು ವಿನಿಮಯ ವಿದ್ಯಾರ್ಥಿಗಳು ಸೇರಿದಂತೆ ನಿರ್ದಿಷ್ಟ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ S-2 ವೀಸಾ ಅನ್ವಯವಾಗುತ್ತದೆ.

‘ಸ್ಟಡಿ ಇನ್ ಇಂಡಿಯಾ’ ಪೋರ್ಟಲ್ ಮೂಲಕ ಭಾರತೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ವಿದೇಶಿ ವಿದ್ಯಾರ್ಥಿಗಳಿಗೆ e-S1 ವೀಸಾವನ್ನು ಗರಿಷ್ಠ ಐದು ವರ್ಷಗಳ ಅವಧಿಗೆ ಅಥವಾ ಶೈಕ್ಷಣಿಕ ಕೋರ್ಸ್‌ನ ಅವಧಿಗೆ, ಇವೆರಡರಲ್ಲಿ ಯಾವುದು ಕಡಿಮೆಯೋ ಆ ಅವಧಿಗೆ, ಹಲವು ಬಾರಿ ಪ್ರವೇಶಿಸಲು ಅವಕಾಶವಿರುವಂತೆ ನೀಡಬಹುದು. ಈ ಸೌಲಭ್ಯಗಳು ವಿದೇಶಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಗುರುತಿಸಬಹುದಾದ ವೀಸಾ ವ್ಯವಸ್ಥೆಯನ್ನು ಒದಗಿಸುವುದರ ಜೊತೆಗೆ ಶೈಕ್ಷಣಿಕ ಯೋಜನೆಗಳನ್ನು ರೂಪಿಸಲು ಹೆಚ್ಚಿನ ಖಚಿತತೆ ನೀಡುತ್ತವೆ. ಕೋರ್ಸ್‌ನ ಅವಧಿಗೆ ಅನುಗುಣವಾಗಿ ಹೆಚ್ಚಿನ ಮಾನ್ಯತೆಯ ವೀಸಾ ನೀಡುವುದರಿಂದ ಕಾರ್ಯವಿಧಾನಕ್ಕೆ ಸಂಬಂಧಿಸಿದ ಅಡಚಣೆಗಳು ಕಡಿಮೆಯಾಗುತ್ತವೆ ಮತ್ತು ಅಧ್ಯಯನದ ಅವಧಿಯಲ್ಲಿ ಅರ್ಹ ವಿದ್ಯಾರ್ಥಿಗಳು ಪ್ರಯಾಣಿಸಲು ಅನುಕೂಲವಾಗುತ್ತದೆ.

ವ್ಯವಹಾರ ವೀಸಾ: ಹೂಡಿಕೆ ಮತ್ತು ವಿಶೇಷ ಚಟುವಟಿಕೆಗಳಿಗೆ ಸ್ಪಷ್ಟವಾದ ಅವಕಾಶಗಳು

ವ್ಯವಹಾರ ವೀಸಾ ವಿಭಾಗವನ್ನು B-1 ಮತ್ತು B-2 ಎಂಬ ಎರಡು ಉಪವಿಭಾಗಗಳಾಗಿ ಸಂಯೋಜಿಸಲಾಗಿದೆ. ಭಾರತದಲ್ಲಿ ಕೈಗಾರಿಕೆ ಅಥವಾ ವ್ಯಾಪಾರ ಉದ್ಯಮಗಳನ್ನು ಸ್ಥಾಪಿಸುವ ವಿದೇಶಿ ಪ್ರಜೆಗಳ ಚಟುವಟಿಕೆಗಳು ಸೇರಿದಂತೆ ದೀರ್ಘಾವಧಿಯ ವ್ಯಾಪಾರ ಚಟುವಟಿಕೆಗಳಿಗೆ B-1 ವೀಸಾ ಅನ್ವಯವಾಗುತ್ತದೆ. ಉತ್ಪಾದನಾ ಹೂಡಿಕೆ ಸಂಬಂಧಿತ ವ್ಯಾಪಾರ ಚಟುವಟಿಕೆಗಳು, ಸಮ್ಮೇಳನಗಳು, ಕ್ರೀಡೆಗಳು, ಪ್ರದರ್ಶನ ಕಲೆಗಳು ಮತ್ತು ಚಲನಚಿತ್ರ ಚಿತ್ರೀಕರಣ ಸೇರಿದಂತೆ ಅಲ್ಪಾವಧಿಯ ಒಪ್ಪಂದ ಆಧಾರಿತ ವ್ಯಾಪಾರ ಚಟುವಟಿಕೆಗಳಿಗೆ B-2 ವೀಸಾ ಅನ್ವಯವಾಗುತ್ತದೆ.

ಸ್ಥಾಪನೆ ಮತ್ತು ಕಾರ್ಯಾರಂಭ, ಗುಣಮಟ್ಟದ ಪರಿಶೀಲನೆ ಹಾಗೂ ಅಗತ್ಯ ನಿರ್ವಹಣೆ, ಉತ್ಪಾದನೆ, ಐಟಿ ಮತ್ತು ಇಆರ್‌ಪಿ ವ್ಯವಸ್ಥೆಗಳ ವಿಸ್ತರಣೆ, ತರಬೇತಿ, ಪೂರೈಕೆ ಸರಪಳಿ ಅಭಿವೃದ್ಧಿ, ಘಟಕ ವಿನ್ಯಾಸ ಮತ್ತು ಕಾರ್ಯಾರಂಭ, ಹಿರಿಯ ನಿರ್ವಹಣಾ ಹಾಗೂ ತಾಂತ್ರಿಕ ಬೆಂಬಲ ಸೇರಿದಂತೆ ತಂತ್ರಜ್ಞಾನ ಮತ್ತು ಸೇವೆಗಳ ವರ್ಗಾವಣೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಭಾರತೀಯ ಕಂಪನಿಗಳು ನೇಮಿಸಿಕೊಳ್ಳುವ ವಿದೇಶಿ ವಿಷಯ ತಜ್ಞರು, ಎಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿಗೆ ವಿಶೇಷ ಅವಕಾಶವನ್ನೂ ಕಲ್ಪಿಸಲಾಗಿದೆ. ಇಂತಹ ಸಿಬ್ಬಂದಿಗೆ ಇ-ವೀಸಾ ವೇದಿಕೆಯ ಮೂಲಕ B-2 ವಿಭಾಗದಡಿ ಪ್ರೊಡಕ್ಷನ್ ಇನ್ವೆಸ್ಟ್‌ಮೆಂಟ್ ಬಿಸಿನೆಸ್ ವೀಸಾ ನೀಡಬಹುದು. ಈ ಹಿಂದೆ ಇದೇ ಉದ್ದೇಶಕ್ಕಾಗಿ ಇ-B4 ವೀಸಾ ಹೆಸರಿನಡಿ ವೀಸಾ ನೀಡಲಾಗುತ್ತಿತ್ತು.

ಈ ವಿಭಜನೆಯಿಂದ ದೀರ್ಘಾವಧಿಯ ಹೂಡಿಕೆ ಮತ್ತು ಅಲ್ಪಾವಧಿಯ ಒಪ್ಪಂದ ಆಧಾರಿತ ಕಾರ್ಯಯೋಜನೆಗಳನ್ನು ರೂಪಿಸುವಾಗ ಉದ್ಯಮಗಳಿಗೆ ಹೆಚ್ಚಿನ ಸ್ಪಷ್ಟತೆ ದೊರೆಯುತ್ತದೆ. ತಾಂತ್ರಿಕ ತಜ್ಞರಿಗಾಗಿ ಪ್ರತ್ಯೇಕ ಅವಕಾಶ ಕಲ್ಪಿಸಿರುವುದರಿಂದ ಕೈಗಾರಿಕಾ ಘಟಕಗಳ ಸ್ಥಾಪನೆ ಮತ್ತು ಕಾರ್ಯಾರಂಭ, ತಂತ್ರಜ್ಞಾನ ವರ್ಗಾವಣೆ, ಸಿಬ್ಬಂದಿಗೆ ತರಬೇತಿ ನೀಡುವುದು ಹಾಗೂ ಉತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ಒದಗಿಸುವುದಕ್ಕಾಗಿ ಅಗತ್ಯ ಪರಿಣತಿಯನ್ನು ಸಕಾಲದಲ್ಲಿ ನಿಯೋಜಿಸಲು ಅನುಕೂಲವಾಗುತ್ತದೆ. ಇದರಿಂದ ಕಂಪನಿಗಳು ಮತ್ತು ವಿದೇಶಿ ವೃತ್ತಿಪರರು ತಮ್ಮ ಕಾರ್ಯಯೋಜನೆಗಳನ್ನು ಹೆಚ್ಚು ಖಚಿತತೆಯಿಂದ ರೂಪಿಸಬಹುದು.

ಸರಳೀಕೃತ, ಉದ್ದೇಶ ಆಧಾರಿತ ವೀಸಾ ವ್ಯವಸ್ಥೆ

ಒಟ್ಟಾರೆಯಾಗಿ, ಈ ಬದಲಾವಣೆಗಳು ವಿವಿಧ ವೀಸಾ ವಿಭಾಗಗಳ ನಡುವಿನ ಪುನರಾವರ್ತನೆಯನ್ನು ಕಡಿಮೆ ಮಾಡುವುದರ ಜೊತೆಗೆ ಪ್ರವಾಸಿಗರು, ರೋಗಿಗಳು, ವಿದ್ಯಾರ್ಥಿಗಳು, ಸಂಶೋಧಕರು, ಹೂಡಿಕೆದಾರರು ಮತ್ತು ಉದ್ಯಮ ವೃತ್ತಿಪರರಿಗೆ ವೀಸಾ ವ್ಯವಸ್ಥೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತು ಸೂಕ್ತ ವೀಸಾ ಆಯ್ಕೆ ಮಾಡಿಕೊಳ್ಳಲು ನೆರವಾಗುತ್ತವೆ. ಅನ್ವಯವಾಗುವ ಅರ್ಹತಾ ಮಾನದಂಡಗಳು ಮತ್ತು ಷರತ್ತುಗಳಿಗೆ ಒಳಪಟ್ಟು, ಸ್ಪಷ್ಟ ಉದ್ದೇಶ ಆಧಾರಿತ ವೀಸಾ ಆಯ್ಕೆಗಳ ಮೂಲಕ ಭಾರತಕ್ಕೆ ಕಾನೂನುಬದ್ಧ ಪ್ರಯಾಣ, ಶಿಕ್ಷಣ, ಆರೋಗ್ಯ ಸೇವೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಈ ಸರಳೀಕರಣದ ಉದ್ದೇಶವಾಗಿದೆ.

ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರಜೆಗಳ ಅನುಕೂಲಕ್ಕಾಗಿ ಸರಳೀಕೃತ ವೀಸಾ ಅರ್ಜಿ ನಮೂನೆಗಳು

ಗೃಹ ವ್ಯವಹಾರಗಳ ಸಚಿವಾಲಯವು ವೀಸಾದ 23 ವಿಭಾಗಗಳು/ಉಪವಿಭಾಗಗಳಿಗೆ ಸಂಬಂಧಿಸಿದ ಅರ್ಜಿ ನಮೂನೆಗಳನ್ನು ಸಮಗ್ರವಾಗಿ ಸರಳೀಕರಿಸುವ ಮತ್ತು ತರ್ಕಬದ್ಧಗೊಳಿಸುವ ಪ್ರಕ್ರಿಯೆಯನ್ನು ಕೈಗೊಂಡಿದೆ. ಎಲ್ಲಾ 23 ವಿಭಾಗಗಳು/ಉಪವಿಭಾಗಗಳ ವೀಸಾ ಅರ್ಜಿ ನಮೂನೆಗಳಲ್ಲಿ ಭರ್ತಿ ಮಾಡಬೇಕಾದ ಅಂಶಗಳು/ಕಾಲಮ್‌ಗಳ ಸಂಖ್ಯೆಯನ್ನು ಶೇ.65ರಿಂದ ಶೇ.70ರಷ್ಟು ಕಡಿಮೆ ಮಾಡಲಾಗಿದೆ. ವೀಸಾ ಪ್ರಕ್ರಿಯೆಗೆ ಅಗತ್ಯವಾದ ಪ್ರಮುಖ ಮಾಹಿತಿಯನ್ನು ಉಳಿಸಿಕೊಂಡೇ, ವಿದೇಶಿ ಪ್ರಜೆಗಳಿಂದ ಪಡೆಯಬೇಕಾದ ಮಾಹಿತಿಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವುದು ಮತ್ತು ಅರ್ಜಿ ನಮೂನೆಗಳನ್ನು ಸರಳಗೊಳಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಇದರಿಂದ ಅರ್ಜಿದಾರರು ಅರ್ಜಿ ಭರ್ತಿ ಮಾಡಲು ತೆಗೆದುಕೊಳ್ಳುವ ಸಮಯ ಮತ್ತು ಶ್ರಮ ಕಡಿಮೆಯಾಗುತ್ತದೆ. ಅಲ್ಲದೆ, ಹೆಚ್ಚು ಕೇಂದ್ರೀಕೃತ ಪರಿಶೀಲನೆ ಮತ್ತು ವೀಸಾ ಅರ್ಜಿಗಳ ತ್ವರಿತ ವಿಲೇವಾರಿಗೆ ಅನುಕೂಲವಾಗುವ ಮೂಲಕ ಆಡಳಿತಾತ್ಮಕ ದಕ್ಷತೆಯೂ ಹೆಚ್ಚುತ್ತದೆ.

ಭಾರತೀಯ ವೀಸಾ ವ್ಯವಸ್ಥೆಯಲ್ಲಿ ಮಾಡಲಾಗಿರುವ ಎಲ್ಲ ಬದಲಾವಣೆಗಳನ್ನು ಜಾರಿಗೆ ತರಲು ಗೃಹ ವ್ಯವಹಾರಗಳ ಸಚಿವಾಲಯವು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳನ್ನು ನವೀಕರಿಸುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಪರಿಷ್ಕೃತ ಸರಳೀಕೃತ ವ್ಯವಸ್ಥೆಯ ಪ್ರಕಾರ ವೀಸಾಗಳನ್ನು ನೀಡಲಾಗುವುದು.

ಪರಿಷ್ಕೃತ ವೀಸಾ ವ್ಯವಸ್ಥೆಯು ಈಗ ಕೆಳಗೆ ಸೂಚಿಸಿರುವಂತೆ ಒಂಬತ್ತು ಪ್ರಮುಖ ವಿಭಾಗಗಳನ್ನು ಒಳಗೊಂಡಿದೆ:

 

ಕ್ರ.ಸಂ.

ವೀಸಾದ ಮುಖ್ಯ ವಿಭಾಗ

ವೀಸಾ ನೀಡುವ ಉದ್ದೇಶ

1

ವ್ಯವಹಾರ ವೀಸಾ (Business Visa

 

ಕೈಗಾರಿಕೆ/ವ್ಯಾಪಾರ ಉದ್ಯಮವನ್ನು ಸ್ಥಾಪಿಸುವುದು ಸೇರಿದಂತೆ ದೀರ್ಘಾವಧಿಯ ವ್ಯವಹಾರ ಚಟುವಟಿಕೆಗಳು; ಕ್ರೀಡೆ ಮತ್ತು ಸಾಂಸ್ಕೃತಿಕ/ವಾಣಿಜ್ಯ ಪ್ರದರ್ಶನಗಳಲ್ಲಿ ಭಾಗವಹಿಸುವಿಕೆ, ಉತ್ಪಾದನಾ ಹೂಡಿಕೆ ಸಂಬಂಧಿತ ವ್ಯವಹಾರ, ಸಮ್ಮೇಳನಗಳಲ್ಲಿ ಭಾಗವಹಿಸುವುದು, ಸಾಕ್ಷ್ಯಚಿತ್ರಗಳು ಮತ್ತು ಜಾಹೀರಾತು ಚಿತ್ರಗಳು ಸೇರಿದಂತೆ ಚಲನಚಿತ್ರಗಳ ಚಿತ್ರೀಕರಣದಂತಹ ಅಲ್ಪಾವಧಿಯ ವ್ಯಾಪಾರ ಚಟುವಟಿಕೆಗಳು.

2

ರಾಜತಾಂತ್ರಿಕ ವೀಸಾ (Diplomatic Visa)

ಭಾರತಕ್ಕೆ ನಿಯೋಜನೆಗೊಂಡ ಅಥವಾ ಭಾರತಕ್ಕೆ ಭೇಟಿ ನೀಡುವ ವಿಶ್ವಸಂಸ್ಥೆಯ ರಾಜತಾಂತ್ರಿಕರು ಸೇರಿದಂತೆ ರಾಜತಾಂತ್ರಿಕರು ಮತ್ತು ಅವರ ಅವಲಂಬಿತರು.

3

ಉದ್ಯೋಗ ವೀಸಾ (Work Visa)

ಭಾರತೀಯ ಕಂಪನಿಗಳು/ಸಂಸ್ಥೆಗಳೊಂದಿಗೆ ದೀರ್ಘಾವಧಿಯ ಉದ್ಯೋಗ, ಎನ್‌ಜಿಒ ಗಳಲ್ಲಿ ಕೆಲಸ ಮಾಡುವುದು ಮತ್ತು ಮಿಷನರಿ ಚಟುವಟಿಕೆಗಳು.

4

ಪತ್ರಕರ್ತರ ವೀಸಾ (Journalist Visa)

ಭಾರತದಲ್ಲಿ ಮಾನ್ಯತೆ ಪಡೆದಿರುವ ಪತ್ರಕರ್ತರು.

5

ವೈದ್ಯಕೀಯ ವೀಸಾ (Medical Visa)

ಆಯುಷ್ ಪದ್ಧತಿಗಳ ಅಡಿಯಲ್ಲಿ ಚಿಕಿತ್ಸೆ ಸೇರಿದಂತೆ ತೀವ್ರ ನಿಗಾ/ಆಸ್ಪತ್ರೆಯಲ್ಲಿ ದಾಖಲಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಭಾರತಕ್ಕೆ ಭೇಟಿ ನೀಡುವ ವಿದೇಶಿಯರು ಮತ್ತು ಅವರ ಸಹಾಯಕರು.

6

ಅಧಿಕೃತ ವೀಸಾ (Official Visa)

ಭಾರತಕ್ಕೆ ನಿಯೋಜನೆಗೊಂಡ ಅಥವಾ ಭಾರತಕ್ಕೆ ಭೇಟಿ ನೀಡುವ ವಿಶ್ವಸಂಸ್ಥೆಯ ರಾಜತಾಂತ್ರಿಕೇತರ ಅಧಿಕಾರಿಗಳು ಸೇರಿದಂತೆ ರಾಜತಾಂತ್ರಿಕೇತರ ಅಧಿಕಾರಿಗಳು ಮತ್ತು ಅವರ ಅವಲಂಬಿತರು.

7

ವಿದ್ಯಾರ್ಥಿ ವೀಸಾ (Student Visa)

ಶಾಲೆ/ಪದವಿ/ಸ್ನಾತಕೋತ್ತರ ಶಿಕ್ಷಣ, ಯೋಗ, ವೈದಿಕ ಸಂಸ್ಕೃತಿ ಮತ್ತು ಭಾರತೀಯ ಸಂಗೀತ/ನೃತ್ಯ, ಬೌದ್ಧ ಅಧ್ಯಯನಗಳು, ಭಾರತೀಯ ಭಾಷೆಗಳು ಮತ್ತು ಭಾರತೀಯ ಜ್ಞಾನ ಪದ್ಧತಿಗಳ ಅಧ್ಯಯನ, ಸಂಶೋಧನೆ, ಇಂಟರ್ನ್‌ಶಿಪ್ ಮತ್ತು ವಿನಿಮಯ ವಿದ್ಯಾರ್ಥಿಗಳು.

8

ವಿಸಿಟರ್ ವೀಸಾ (Visitor Visa)

ಪ್ರವಾಸೋದ್ಯಮ, ವ್ಯಾಪಾರ ಸಭೆಗಳು, ವೈದ್ಯಕೀಯ ಸಮಾಲೋಚನೆಗಳು ಮತ್ತು ವೆಲ್ನೆಸ್ ರಿಟ್ರೀಟ್‌ಗಳು ಸೇರಿದಂತೆ ಅಲ್ಪಾವಧಿಯ ಚಟುವಟಿಕೆಗಳು, ಟ್ರಾನ್ಸಿಟ್ ಮತ್ತು ಪರ್ವತಾರೋಹಣ.

9

ವಿವಿಧೋದ್ದೇಶದ ವೀಸಾ (Miscellaneous Visa)

ಭಾರತೀಯ ಮೂಲದ ವ್ಯಕ್ತಿಗಳು ಮತ್ತು ಅವರ ಪತಿ/ಪತ್ನಿ/ಮಕ್ಕಳು, ಆರೋವಿಲ್ ಫೌಂಡೇಶನ್‌ನಂತಹ ವಿವಿಧ ನಿರ್ದಿಷ್ಟ ಸಂಸ್ಥೆಗಳಿಗೆ ಸೇರಲು ಬರುವವರು, ವಿವಿಧ ದೀರ್ಘಾವಧಿಯ ವೀಸಾಗಳಲ್ಲಿ ಬರುವ ವಿದೇಶಿ ಪ್ರಜೆಗಳ ಅವಲಂಬಿತರು, ಅಫ್ಘಾನಿಸ್ತಾನ್ ಪ್ರಜೆಗಳಿಗೆ ಸ್ಟೇ ವೀಸಾ, ನೆರೆಹೊರೆಯ ದೇಶಗಳ ಕೆಲವು ವರ್ಗಗಳ ಪ್ರಜೆಗಳಿಗೆ ದೀರ್ಘಾವಧಿಯ ವೀಸಾ ಮತ್ತು ಯಾವುದೇ ಇತರ ವೀಸಾ ವಿಭಾಗದ ಅಡಿಯಲ್ಲಿ ಬಾರದ ಇತರ ವಿವಿಧ ಉದ್ದೇಶಗಳು.

 

*****

 


(ಪ್ರಕಟಣೆ ಐ.ಡಿ.: 2335408) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Punjabi , Gujarati , Odia , Tamil , Telugu , Malayalam