ಸಂವಹನ ಸಚಿವಾಲಯ
azadi ka amrit mahotsav

ಹಸ್ತಲಿಖಿತ ಅಂಚೆಪತ್ರಗಳ ಮೂಲಕ ಹಬ್ಬದ ಸಂತಸವನ್ನು ಹರಡಲು 11 ತಾಣಗಳ 15 ವಿಮಾನಗಳಲ್ಲಿ 'ಡಿಜಿಟಲ್ ಡಿಟಾಕ್ಸ್ 2.0' ತಂದ ಇಂಡಿಯಾ ಪೋಸ್ಟ್ ಮತ್ತು ಇಂಡಿಗೋ


ಡಿಜಿಟಲ್ ಯುಗದಲ್ಲಿ ಹಬ್ಬದ ಶುಭಾಶಯಗಳಿಗೆ ವೈಯಕ್ತಿಕ ಸ್ಪರ್ಶವನ್ನು ನೀಡಿ ಮರುಜೀವ ಗೊಳಿಸುವ ಮೂಲಕ ದೀಪಾವಳಿಯ ಸಂಭ್ರಮಕ್ಕೆ ಮೆರಗು ನೀಡಿದ ಅಭಿಯಾನ

ಪ್ರಕಟಣಾ ದಿನಾಂಕ: 10 NOV 2026 5:17PM by PIB Bengaluru

ಸಂವಹನ ಸಚಿವಾಲಯದ ಅಂಚೆ ಇಲಾಖೆಯು, ಇಂಡಿಗೋ ಸಹಯೋಗದೊಂದಿಗೆ, ತನ್ನ ಮೊದಲ ಆವೃತ್ತಿಗೆ ವ್ಯಕ್ತವಾದ ಅಭೂತಪೂರ್ವ ಪ್ರತಿಕ್ರಿಯೆಯ ನಂತರ, ವಿಮಾನ ಪ್ರಯಾಣದ ವೇಳೆ ಅಂಚೆಪತ್ರ ಬರವಣಿಗೆ ಚಟುವಟಿಕೆಯ ಎರಡನೇ ಆವೃತ್ತಿಯಾದ 'ಡಿಜಿಟಲ್ ಡಿಟಾಕ್ಸ್ 2.0' (Digital Detox 2.0) ಅನ್ನು ಆಯೋಜಿಸಿತು. ಹಬ್ಬದ ಋತುವಿನ ಸಂದರ್ಭದಲ್ಲಿ ನಡೆದ ಈ ಉಪಕ್ರಮವು ಪ್ರಯಾಣಿಕರಿಗೆ ಹಸ್ತಲಿಖಿತ ಅಂಚೆಪತ್ರಗಳ ಮೂಲಕ ತಮ್ಮ ಪ್ರೀತಿಪಾತ್ರರಿಗೆ ಹೃತ್ಪೂರ್ವಕ ದೀಪಾವಳಿ ಶುಭಾಶಯಗಳನ್ನು ತಿಳಿಸಲು ಒಂದು ಅನನ್ಯ ಅವಕಾಶವನ್ನು ಒದಗಿಸಿತು.

 

ಈ ಅಭಿಯಾನವನ್ನು ಚಂಡೀಗಢ, ರಾಂಚಿ, ಬಾಗ್‌ಡೋಗ್ರಾ, ದೆಹಲಿ, ಮುಂಬೈ, ಗೋವಾ, ಪುಣೆ, ಅಹಮದಾಬಾದ್, ಕೋಲ್ಕತ್ತಾ, ವಾರಣಾಸಿ ಮತ್ತು ಜೈಪುರ ಸೇರಿದಂತೆ 11 ತಾಣಗಳನ್ನು ಒಳಗೊಂಡ 15 ಇಂಡಿಗೋ ವಿಮಾನಗಳಲ್ಲಿ ನಡೆಸಲಾಯಿತು. ಪ್ರಯಾಣಿಕರಿಗೆ ಅಂಚೆಪತ್ರಗಳು, ಶುಭಾಶಯ ಪತ್ರಗಳು ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಲಾದ ದೀಪಾವಳಿ ಸ್ಟಿಕ್ಕರ್‌ಗಳ ಮೂಲಕ ಡಿಐವೈ (DIY) ಅಂಚೆಪತ್ರಗಳನ್ನು ಒಳಗೊಂಡ ವಿಶೇಷವಾಗಿ ವಿನ್ಯಾಸಗೊಳಿಸಿದ 'ಡಿಜಿಟಲ್ ಡಿಟಾಕ್ಸ್ ಕಿಟ್‌ಗಳನ್ನು' ನೀಡಲಾಯಿತು, ಇದು ತಮ್ಮ ಸ್ಕ್ರೀನ್‌ಗಳಿಂದ ಕೊಂಚ ವಿರಾಮ ತೆಗೆದುಕೊಂಡು ವೈಯಕ್ತೀಕರಿಸಿದ ಹಬ್ಬದ ಸಂದೇಶಗಳನ್ನು ಬರೆಯಲು ಅವರನ್ನು ಪ್ರೋತ್ಸಾಹಿಸಿತು.

ತನ್ನ ಮೊದಲ ಆವೃತ್ತಿಯ ಯಶಸ್ಸನ್ನು ಆಧರಿಸಿ, ಈ ಉಪಕ್ರಮವು ಸಭ್ಯ ಹಾಗೂ ಗಮನಪೂರ್ವಕವಾದ ಸಂವಹನವನ್ನು ಉತ್ತೇಜಿಸುವದರ ಜೊತೆಗೆ ಕೈಬರಹದ ಮೂಲಕ ಸಂಪರ್ಕ ಸಾಧಿಸುವ ಸಂಪ್ರದಾಯವನ್ನು ಮರುಜೀವಗೊಳಿಸಲು ಪ್ರಯತ್ನಿಸಿತು. ವಿಮಾನ ಪ್ರಯಾಣಿಕರಿಗೆ ಪತ್ರ ಬರೆಯುವ ಅನುಭವವನ್ನು ಒದಗಿಸುವ ಮೂಲಕ, ಈ ಅಭಿಯಾನವು ಹೆಚ್ಚುತ್ತಿರುವ ಡಿಜಿಟಲ್ ಜಗತ್ತಿನಲ್ಲಿ ವೈಯಕ್ತಿಕ ಪತ್ರ ವ್ಯವಹಾರಕ್ಕಿರುವ ಶಾಶ್ವತ ಆಕರ್ಷಣೆಯನ್ನು ಸಾರಿ ಹೇಳಿತು.

ಪ್ರಯಾಣಿಕರು ಈ ಉಪಕ್ರಮವನ್ನು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ಅಭಿಯಾನದ ತಮ್ಮ ಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು. ಒಬ್ಬ ಪ್ರಯಾಣಿಕರು, "30,000 ಅಡಿ ಎತ್ತರದಲ್ಲಿ ಅಂಚೆಪತ್ರ ಬರೆಯುವುದು ಒಂದು ಅದ್ಭುತ ಅನುಭವವಾಗಿತ್ತು ಮತ್ತು ಇದನ್ನು ನಾನು ಜೀವನಪರ್ಯಂತ ನೆನಪಿನಲ್ಲಿಡುತ್ತೇನೆ," ಎಂದು ಅಭಿಪ್ರಾಯಪಟ್ಟರು. ಮತ್ತೊಬ್ಬ ಸ್ಪರ್ಧಿ, "ನಾನು ಅಂಚೆಪತ್ರ ಬರೆಯುತ್ತಿರುವುದು ಇದೇ ಮೊದಲು. ತ್ವರಿತ ಡಿಜಿಟಲ್ ಸಂಪರ್ಕದ ಈ ಯುಗದಲ್ಲಿ ಹಸ್ತಲಿಖಿತ ಸಂದೇಶಗಳು ಎಷ್ಟು ವಿಶೇಷವಾಗಿರಬಹುದು ಎಂಬುದನ್ನು ಇದು ನನಗೆ ಅರಿತುಕೊಳ್ಳುವಂತೆ ಮಾಡಿದೆ," ಎಂದು ಹಂಚಿಕೊಂಡರು. ಹಬ್ಬದ ಸ್ಪರ್ಶವನ್ನು ಮೆಚ್ಚಿದ ಇನ್ನೊಬ್ಬ ಪ್ರಯಾಣಿಕರು, "ಕೈಯಿಂದ ಬರೆದ ಅಂಚೆಪತ್ರದ ಮೂಲಕ ದೀಪಾವಳಿ ಶುಭಾಶಯಗಳನ್ನು ಕಳುಹಿಸುವುದು ಡಿಜಿಟಲ್ ಸಂದೇಶಕ್ಕಿಂತ ಹೆಚ್ಚು ವೈಯಕ್ತಿಕ ಮತ್ತು ಅರ್ಥಪೂರ್ಣವೆನಿಸಿತು," ಎಂದು ಹೇಳಿದರು.

 

  

ಡಿಜಿಟಲ್ ಡಿಟಾಕ್ಸ್ 2.0 ಮೂಲಕ, ಇಂಡಿಯಾ ಪೋಸ್ಟ್  ದೀಪಾವಳಿ ಆಚರಣೆಗಳಿಗೆ ವೈಯಕ್ತಿಕ ಸ್ಪರ್ಶವನ್ನು ಸೇರಿಸುವುದರ ಜೊತೆಗೆ ಪತ್ರಗಳ ಮೂಲಕ ಜನರನ್ನು ಬೆಸೆಯುವ ಸದಾಕಾಲದ ಸಂಪ್ರದಾಯವನ್ನು ಆಚರಿಸುವ ತನ್ನ ನವೀನ ಸಾರ್ವಜನಿಕ ಸಂಪರ್ಕ ಬದ್ಧತೆಯನ್ನು ಪುನರುಚ್ಚರಿಸಿತು.

 

*****


(ಪ್ರಕಟಣೆ ಐ.ಡಿ.: 2334839) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: Telugu , English , Urdu , Marathi , हिन्दी , Tamil , Malayalam