ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
ಪ್ರಕಟಣಾ ದಿನಾಂಕ:
10 NOV 2026 10:06AM by PIB Bengaluru
ಭಾರತವು ವಿಶಾಲವಾದ ಮತ್ತು ವೈವಿಧ್ಯಮಯ ಸಮುದ್ರ ಸಂಪನ್ಮೂಲವನ್ನು ಹೊಂದಿದ್ದು, ಸುಮಾರು 11,099 ಕಿ.ಮೀ. ಕರಾವಳಿ ಮತ್ತು ಸುಮಾರು 24 ಲಕ್ಷ ಚದರ ಕಿ.ಮೀ. ವಿಶೇಷ ಆರ್ಥಿಕ ವಲಯದಿಂದ (ಇಇಝೆಡ್) ಬೆಂಬಲಿತವಾಗಿದೆ. ತನ್ನ ‘ಇಇಝೆಡ್’ ವ್ಯಾಪ್ತಿಯಲ್ಲಿ 58.6 ಲಕ್ಷ ಮೆಟ್ರಿಕ್ ಟನ್ ಸಮುದ್ರ ಮೀನುಗಾರಿಕೆ ಸಾಮರ್ಥ್ಯದ ಅಂದಾಜಿನೊಂದಿಗೆ, ಈ ವಲಯವು ಸುಮಾರು 50 ಲಕ್ಷ ಮೀನುಗಾರರ ಜೀವನೋಪಾಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಜೊತೆಗೆ ಆಹಾರ ಭದ್ರತೆ, ಪೌಷ್ಟಿಕಾಂಶ,ಉದ್ಯೋಗ, ಆದಾಯ ಉತ್ಪಾದನೆ ಮತ್ತು ರಫ್ತು ಗಳಿಕೆಗೆ ಗಣನೀಯ ಕೊಡುಗೆ ನೀಡುತ್ತದೆ. ಭಾರತವು ಇಂದು ಜಾಗತಿಕವಾಗಿ ಮೀನುಗಾರಿಕೆ ಮತ್ತು ಜಲಕೃಷಿ ಉತ್ಪಾದಿಸುವ ಪ್ರಮುಖ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ. 2025-26ರ ಆರ್ಥಿಕ ವರ್ಷದಲ್ಲಿ ಸಮುದ್ರಾಹಾರ ರಫ್ತು ಮೌಲ್ಯವು ಸುಮಾರು 73,890 ಕೋಟಿ ರೂ.ಗಳಷ್ಟಿದ್ದು, ರಾಷ್ಟ್ರೀಯ ಆರ್ಥಿಕತೆ ಮತ್ತು ಜಾಗತಿಕ ಸಮುದ್ರಾಹಾರ ವ್ಯಾಪಾರದಲ್ಲಿ ಹೆಚ್ಚುತ್ತಿರುವ ಈ ವಲಯದ ಪ್ರಾಮುಖ್ಯತೆಯನ್ನು ಇದು ಉಲ್ಲೇಖಿಸುತ್ತದೆ. ಭಾರತದ ಮೀನುಗಾರಿಕಾ ವಲಯವು ಕೇವಲ ಉತ್ಪಾದನೆ-ಕೇಂದ್ರಿತ ಚಟುವಟಿಕೆಯಿಂದ ರಾಷ್ಟ್ರೀಯ ಆರ್ಥಿಕತೆಯ ಕ್ರಿಯಾತ್ಮಕ, ತಂತ್ರಜ್ಞಾನ-ಚಾಲಿತ ಮತ್ತು ಮೌಲ್ಯ-ಆಧಾರಿತ ಆಧಾರಸ್ತಂಭವಾಗಿ ವಿಕಸನಗೊಳ್ಳುತ್ತಿದೆ. 2015ರಿಂದ, ಭಾರತ ಸರ್ಕಾರವು ಪ್ರಮುಖ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಮೀನುಗಾರಿಕಾ ವಲಯದಲ್ಲಿ ಸಾರ್ವಜನಿಕ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಿದ್ದು, 39,272 ಕೋಟಿ ರೂ.ಗಳ ಹೂಡಿಕೆಗೆ ಬದ್ಧವಾಗಿದೆ.

‘ಪಿಎಂಎಂಎಸ್ವೈ’ ಅಡಿಯಲ್ಲಿ, ಮೀನುಗಾರಿಕೆ ಅಭಿವೃದ್ಧಿಯನ್ನು ಬಲಪಡಿಸಲು ದ್ವೀಪ ಪ್ರದೇಶಗಳಿಗೆ ಗಣನೀಯ ಹೂಡಿಕೆಗಳನ್ನು ಯೋಜಿಸಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ 218 ಕೋಟಿ ರೂ.ಗಳ ಹೂಡಿಕೆಯನ್ನು ಹಂಚಿಕೆ ಮಾಡಿದರೆ, ಲಕ್ಷದ್ವೀಪಕ್ಕೆ 175 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇದು ಈ ಆಯಕಟ್ಟಿನ ಪ್ರಮುಖ ಕಡಲ ಪ್ರದೇಶಗಳ ಮೀನುಗಾರಿಕೆ ಸಾಮರ್ಥ್ಯವನ್ನು ಅನಾವರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ದ್ವೀಪ ನೇತೃತ್ವದ ಮೀನುಗಾರಿಕೆ ಅಭಿವೃದ್ಧಿಯ ಮೇಲಿನ ಈ ಗಮನ ಕೇಂದ್ರೀಕರಣವು 2025-26ರ ಕೇಂದ್ರ ಬಜೆಟ್ ನಲ್ಲಿಯೂ ಪ್ರತಿಬಿಂಬಿತವಾಗಿದೆ. ಆಯವ್ಯಯದಲ್ಲಿ ಲಕ್ಷದ್ವೀಪ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ವಿಶೇಷ ಒತ್ತು ನೀಡಿ ವಿಶೇಷ ಆರ್ಥಿಕ ವಲಯ ಮತ್ತು ಸಮುದ್ರಗಳಿಂದ ಮೀನುಗಾರಿಕೆ ಸಂಪನ್ಮೂಲಗಳನ್ನು ಸುಸ್ಥಿರವಾಗಿ ಬಳಸಿಕೊಳ್ಳುವ ನೀತಿ ಚೌಕಟ್ಟನ್ನು ವಿವರಿಸಲಾಗಿದೆ. ಸುಸ್ಥಿರತೆ ಮತ್ತು ವೈಜ್ಞಾನಿಕ ನಿರ್ವಹಣೆಯನ್ನು ಭವಿಷ್ಯದ ವಿಸ್ತರಣೆಯ ಹೃದಯಭಾಗದಲ್ಲಿ ಇರಿಸಕೊಂಡು ಭಾರತೀಯ ‘ಇಇಝೆಡ್’ ಮತ್ತು ಪಕ್ಕದ ಆಳ ಸಮುದ್ರಗಳಲ್ಲಿನ ಕಡಿಮೆ ಬಳಕೆಯಾದ ಸಮುದ್ರ ಮೀನು ಸಂಪನ್ಮೂಲಗಳನ್ನು ಬಳಸಿಕೊಳ್ಳುವಲ್ಲಿ ಈ ದ್ವೀಪ ಪ್ರದೇಶಗಳ ಕಾರ್ಯತಂತ್ರದ ಪ್ರಾಮುಖ್ಯತೆಯ ಸ್ಪಷ್ಟ ಮನ್ನಣೆಯನ್ನು ಇದು ಸೂಚಿಸುತ್ತದೆ.
ಲಕ್ಷದ್ವೀಪ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದ ಸಮುದ್ರ ಭೌಗೋಳಿಕತೆಯಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿವೆ. ದೇಶದ ವಿಶೇಷ ಆರ್ಥಿಕ ವಲಯದ ಸುಮಾರು ಶೇ.40 ರಷ್ಟನ್ನು ಹೊಂದಿರುವ ಎರಡು ದ್ವೀಪ ಸಮೂಹಗಳು ಅರೇಬಿಯನ್ ಸಮುದ್ರ ಮತ್ತು ಬಂಗಾಳಕೊಲ್ಲಿಯುದ್ದಕ್ಕೂ ಭಾರತದ ಅಸ್ತಿತ್ವವನ್ನು ವಿಸ್ತರಿಸುತ್ತವೆ, ಶ್ರೀಮಂತ ಸಾಗರ ಮೀನುಗಾರಿಕೆ ಮೈದಾನಗಳು ಮತ್ತು ಪ್ರಮುಖ ಟ್ಯೂನಾ ವಲಸೆ ಮಾರ್ಗಗಳಿಗೆ ಪ್ರವೇಶವನ್ನು ಹೊಂದಿವೆ. ಲಕ್ಷದ್ವೀಪದ ಲಗೂನ್ ವ್ಯವಸ್ಥೆಗಳು, ಹವಳದ ದಿಬ್ಬಗಳು ಮತ್ತು ಸುತ್ತಮುತ್ತಲಿನ ಆಳ ಸಮುದ್ರದ ನೀರು ಟ್ಯೂನಾ ಮೀನುಗಾರಿಕೆ, ಸಮುದ್ರದ ಜೊಂಡು ಕೃಷಿ ಮತ್ತು ಬಂಡೆ ಆಧಾರಿತ ಜೀವನೋಪಾಯಕ್ಕೆ ಅನುಕೂಲಕರ ಪರಿಸ್ಥಿತಿಗಳನ್ನು ಒದಗಿಸುತ್ತವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ತಮ್ಮ ವ್ಯಾಪಕವಾದ ಕರಾವಳಿ, ವೈವಿಧ್ಯಮಯ ಸಮುದ್ರ ಆವಾಸಸ್ಥಾನಗಳು ಮತ್ತು ಆಗ್ನೇಯ ಏಷ್ಯಾದ ಕಡಲ ಮಾರ್ಗಗಳ ಸಾಮೀಪ್ಯದೊಂದಿಗೆ, ಸುಸ್ಥಿರ ಮೀನುಗಾರಿಕೆ, ಕಡಲ ಕೃಷಿ ಮತ್ತು ಮೌಲ್ಯವರ್ಧಿತ ಸಮುದ್ರಾಹಾರ ಉತ್ಪಾದನೆಯನ್ನು ವಿಸ್ತರಿಸಲು ಇದೇ ರೀತಿಯ ಅವಕಾಶಗಳನ್ನು ಒದಗಿಸುತ್ತವೆ. ಅವುಗಳ ಪರಿಸರ ಶ್ರೀಮಂತಿಕೆ ಮತ್ತು ಆಯಕಟ್ಟಿನ ಸ್ಥಳವು ಈ ದ್ವೀಪಗಳನ್ನು ಹೆಚ್ಚು ವೈವಿಧ್ಯಮಯ ಮತ್ತು ಸಾಗರ ಆಧಾರಿತ ಮೀನುಗಾರಿಕೆ ಆರ್ಥಿಕತೆಯನ್ನು ನಿರ್ಮಿಸುವ ಭಾರತದ ಪ್ರಯತ್ನಗಳಿಗೆ ಕೇಂದ್ರಬಿಂದುವಾಗಿದೆ.

ಹೆಚ್ಚಿನ ಮೌಲ್ಯದ ಸಮುದ್ರ ಮೀನುಗಾರಿಕೆಗಾಗಿ ಸರ್ಕಾರದ ಕಾರ್ಯತಂತ್ರದ ಮಾರ್ಗಸೂಚಿಯ ಕೇಂದ್ರಬಿಂದುವಾಗಿ ಟ್ಯೂನಾ ಅಭಿವೃದ್ಧಿಯು ಹೊರಹೊಮ್ಮಿದೆ. ಲಕ್ಷದ್ವೀಪ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸುತ್ತಮುತ್ತಲಿನ ನೀರು ಯೆಲ್ಲೊಫಿನ್, ಸ್ಕಿಪ್ ಜಾಕ್ ಮತ್ತು ಬಿಗ್ಐ ಟ್ಯೂನಾ ಮೀನುಗಳ ಗಣನೀಯ ಬಳಕೆಯಾಗದ ಸಂಪತ್ತನ್ನು ಹೊಂದಿದ್ದು, ಇದು ಸುಸ್ಥಿರ, ರಫ್ತು-ಆಧಾರಿತ ಮೀನುಗಾರಿಕೆಗೆ ಬಲವಾದ ಸಾಮರ್ಥ್ಯವನ್ನು ಒದಗಿಸುತ್ತದೆ. ಆಧುನಿಕ ಆಳ-ಸಮುದ್ರದ ಹಡಗುಗಳು, ಕೊಕ್ಕೆ-ಮತ್ತು-ಲೈನ್ ಹಾಊ ಪೋಲ್-ಮತ್ತು-ಲೈನ್ನಂತಹ ಆಯ್ದ ಮೀನುಗಾರಿಕೆ ವಿಧಾನಗಳು, ಹಡಗಿನ ಮೇಲಿನ ಸುಧಾರಿತ ನಿರ್ವಹಣೆ, ಕೋಲ್ಡ್-ಚೈನ್ ವಿಸ್ತರಣೆ, ಸಂಸ್ಕರಣೆ ಮತ್ತು ಕ್ಯಾನಿಂಗ್ ಸೌಲಭ್ಯಗಳು ಹಾಗೂ ಪರಿಣಾಮಕಾರಿ ರಫ್ತು ಸಂಪರ್ಕಗಳನ್ನು ಸಂಯೋಜಿಸುವ ವಿಜ್ಞಾನ-ಆಧಾರಿತ ಮತ್ತು ಮೌಲ್ಯ-ಸರಪಳಿ ಆಧಾರಿತ ವಿಧಾನವನ್ನು ಸರ್ಕಾರವು ಮುನ್ನಡೆಸುತ್ತಿದೆ. ಲಕ್ಷದ್ವೀಪದಲ್ಲಿ, ಪಂಚವಾರ್ಷಿಕ ಯೋಜನೆಯು ಟ್ಯೂನಾ ಉತ್ಪಾದನೆಯನ್ನು 50,000 ಟನ್ಗಳಿಗೆ ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಆಳ-ಸಮುದ್ರದ ಹಡಗುಗಳು, ಮದರ್ ವೆಸೆಲ್ಗಳು ಮತ್ತು ದ್ವೀಪಗಳ ಸಾಂಪ್ರದಾಯಿಕ, ಪರಿಸರ ಸ್ನೇಹಿ ಪೋಲ್-ಮತ್ತು-ಲೈನ್ ಮೀನುಗಾರಿಕೆಯ ಅಳವಡಿಕೆಯಿಂದ ಬೆಂಬಲ ನೀಡಲಾಗುತ್ತಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ, ‘ಪಿಎಂಎಂಎಸ್ವೈ’ ಅಡಿಯಲ್ಲಿ ಮೀಸಲಾದ 'ಟ್ಯೂನಾ ಕ್ಲಸ್ಟರ್', ಹೊಸ ಹಡಗುಗಳು, ನವೀಕರಿಸಿದ ಮೀನುಗಾರಿಕಾ ಫ್ಲೀಟ್ಗಳು ಮತ್ತು ವಿಸ್ತರಿತ ಶೈತ್ಯಾಗಾರ ಸಾಮರ್ಥ್ಯ ಸೇರಿದಂತೆ ಫ್ಲೀಟ್ ಆಧುನೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ವೇಗಗೊಳಿಸಲಾಗುತ್ತಿದೆ. ಇದರ ಜೊತೆಗೆ ‘ಎಂಪಿಇಡಿಎ’ಯ ಉಪಸ್ಥಿತಿಯು ಮಾರುಕಟ್ಟೆ ಪ್ರವೇಶವನ್ನು ಸುಧಾರಿಸುವ ಮತ್ತು ದ್ವೀಪಗಳಿಂದ ನೇರ ರಫ್ತುಗಳನ್ನು ಸುಗಮಗೊಳಿಸುವ ನಿರೀಕ್ಷೆಯಿದೆ.
ಟ್ಯೂನಾ ಮೌಲ್ಯ ಸರಪಳಿ ಅಭಿವೃದ್ಧಿಯ ಆಚೆಗೆ, ಸರ್ಕಾರವು ಸಮುದ್ರ ಜೊಂಡು ಮತ್ತು ಅಲಂಕಾರಿಕ ಮೀನುಗಾರಿಕೆಯನ್ನು ದ್ವೀಪ ಆರ್ಥಿಕತೆಯ ಪೂರಕ ಆಧಾರಸ್ತಂಭಗಳಾಗಿ ಮುನ್ನಡೆಸುತ್ತಿದೆ. ಮೀನು ಹಿಡಿಯುವುದಕ್ಕಿಂತಲೂ ಮೀರಿ ಮೀನುಗಾರಿಕೆ ಬೆಳವಣಿಗೆಯ ಮಾದರಿಯನ್ನು ವಿಸ್ತರಿಸುತ್ತಿದೆ. ಲಕ್ಷದ್ವೀಪದ ಸ್ವಚ್ಛ ಲಗೂನ್ ವ್ಯವಸ್ಥೆಗಳು ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಹವಳ-ಸಮೃದ್ಧ ಪರಿಸರ ವ್ಯವಸ್ಥೆಗಳು ಸುಸ್ಥಿರ ಸಮುದ್ರಜೊಂಡು ಕೃಷಿಗೆ ಅನುಕೂಲಕರ ಪರಿಸ್ಥಿತಿಗಳನ್ನು ನೀಡುತ್ತವೆ, ಆಹಾರ, ನ್ಯೂಟ್ರಾಸ್ಯುಟಿಕಲ್ಸ್, ಸೌಂದರ್ಯವರ್ಧಕಗಳು, ಔಷಧಗಳು ಮತ್ತು ಜೈವಿಕ ಕೈಗಾರಿಕಾ ಉತ್ಪನ್ನಗಳಾದ್ಯಂತ ಸಂಭಾವ್ಯ ಅನ್ವಯಿಕೆಗಳನ್ನು ನೀಡುತ್ತವೆ. ಲಕ್ಷದ್ವೀಪವನ್ನು ಮೀಸಲಾದ ಸಮುದ್ರಕಳೆ ಕ್ಲಸ್ಟರ್ ಎಂದು ಘೋಷಿಸುವುದರೊಂದಿಗೆ, ವಿಶ್ವಾಸಾರ್ಹ ಸಮುದ್ರಕಳೆ ಮೌಲ್ಯ ಸರಪಳಿಯನ್ನು ಅಭಿವೃದ್ಧಿಪಡಿಸಲು ಮಾರ್ಗಸೂಚಿಯು ದೊಡ್ಡ ಪ್ರಮಾಣದ ಕೃಷಿ, ಬೀಜ ಬ್ಯಾಂಕುಗಳು, ಮೊಟ್ಟೆಕೇಂದ್ರಗಳು ಮತ್ತು ಸಾಮರ್ಥ್ಯ ವರ್ಧನೆಯನ್ನು ಕಲ್ಪಿಸುತ್ತದೆ. ಅಲಂಕಾರಿಕ ಮೀನುಗಾರಿಕೆಯು ಮತ್ತೊಂದು ಹೆಚ್ಚಿನ ಮೌಲ್ಯದ ಅವಕಾಶವನ್ನು ಸೇರಿಸುತ್ತದೆ, ವಿಶೇಷವಾಗಿ ಲಕ್ಷದ್ವೀಪದಲ್ಲಿ, ಇದು 300 ಕ್ಕೂ ಹೆಚ್ಚು ಬಂಡೆಗಳಿಗೆ ಸಂಬಂಧಿಸಿದ ಅಲಂಕಾರಿಕ ಪ್ರಭೇದಗಳಿಗೆ ಆತಿಥ್ಯ ವಹಿಸುತ್ತದೆ. ಈ ಕಾರ್ಯತಂತ್ರದ ಯೋಜನೆಯು ಮಧ್ಯಮ ಪ್ರಮಾಣದ ಸಾಕಣೆ ಘಟಕಗಳನ್ನು ಸ್ಥಾಪಿಸುವುದು, ಸಂರಕ್ಷಣೆ ಆಧಾರಿತ ಮತ್ತು ನಿಯಂತ್ರಿತ ಸಂಗ್ರಹ ಅಭ್ಯಾಸಗಳನ್ನು ಉತ್ತೇಜಿಸುವುದು ಮತ್ತು ಸುಸ್ಥಿರವಾಗಿ ಮೂಲದ ಅಕ್ವೇರಿಯಂ ಪ್ರಭೇದಗಳಿಗೆ ಮಾರುಕಟ್ಟೆ ಪ್ರವೇಶವನ್ನು ಸುಧಾರಿಸುವತ್ತ ಗಮನ ಹರಿಸುತ್ತದೆ. ಆ ಮೂಲಕ ದುರ್ಬಲ ಸಮುದ್ರ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವುದರ ಜೊತೆಗೆ ದ್ವೀಪ ಸಮುದಾಯಗಳಿಗೆ ವೈವಿಧ್ಯಮಯ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುತ್ತದೆ.
ಈ ಉದಯೋನ್ಮುಖ ಬೆಳವಣಿಗೆಯ ಕ್ಷೇತ್ರಗಳನ್ನು ಸಕ್ರಿಯಗೊಳಿಸಲು, ಮೀನುಗಾರಿಕಾ ಮೂಲಸೌಕರ್ಯಗಳನ್ನು ಆಧುನೀಕರಿಸುವುದು ದ್ವೀಪ ಪ್ರದೇಶಗಳಲ್ಲಿ ಸರ್ಕಾರದ ನೀತಿಯ ಪ್ರಮುಖ ಅಂಶವಾಗಿದೆ. ಫಿಶ್ ಲ್ಯಾಂಡಿಂಗ್ ಕೇಂದ್ರಗಳು, ಐಸ್ ಪ್ಲಾಂಟ್ಗಳು, ಕೋಲ್ಡ್-ಚೈನ್ ಜಾಲಗಳು, ಆನ್ಬೋರ್ಡ್ ಸಂರಕ್ಷಣೆ ವ್ಯವಸ್ಥೆಗಳು, ಮೀನು ಒಟ್ಟುಗೂಡಿಸುವ ಸಾಧನಗಳು, ದೋಣಿ ನಿರ್ಮಾಣ ಅಂಗಳಗಳು, ಮೌಲ್ಯ-ವರ್ಧನೆ ಘಟಕಗಳು ಮತ್ತು ರಫ್ತು ಸೌಲಭ್ಯವನ್ನು ಬೆಂಬಲಿಸುವ ವ್ಯವಸ್ಥೆಗಳು ಸೇರಿದಂತೆ ಮೌಲ್ಯ ಸರಪಳಿಯಾದ್ಯಂತ ಸೌಲಭ್ಯಗಳಿಗೆ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಈ ಕ್ರಮಗಳು ಸ್ಥಳೀಯ ಸಾಮರ್ಥ್ಯವನ್ನು ನಿರ್ಮಿಸುವ, ಮೀನು ಹಿಡಿದ ನಂತರದ ನಷ್ಟವನ್ನು ಕಡಿಮೆ ಮಾಡುವ ಮತ್ತು ದೇಶೀಯ ಹಾಗೂ ರಫ್ತು ಮಾರುಕಟ್ಟೆಗಳನ್ನು ಪ್ರವೇಶಿಸಲು ದ್ವೀಪ ಆಧಾರಿತ ಮೀನುಗಾರಿಕೆಯ ಸನ್ನದ್ಧತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಮಧ್ಯಸ್ಥಿಕೆಗಳು ಭಾರತದ ದ್ವೀಪ ಪ್ರದೇಶಗಳನ್ನು ಹೆಚ್ಚು ವೈವಿಧ್ಯಮಯ ಮತ್ತು ಸುಸ್ಥಿರ ಸಮುದ್ರ ಆರ್ಥಿಕತೆಯ ಕೇಂದ್ರದಲ್ಲಿ ಇರಿಸುವ ದೀರ್ಘಾವಧಿಯ ಪ್ರಯತ್ನವನ್ನು ಸೂಚಿಸುತ್ತವೆ. ಟ್ಯೂನಾ ಮೀನುಗಾರಿಕೆ, ಕಡಲಕಳೆ ಕೃಷಿ, ಅಲಂಕಾರಿಕ ಮೀನುಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ, ಸಂಶೋಧನಾ ಬೆಂಬಲ ಮತ್ತು ಮಾರುಕಟ್ಟೆ ಪ್ರವೇಶವನ್ನು ಜೋಡಿಸುವ ಮೂಲಕ, ಈ ಕಾರ್ಯತಂತ್ರವು ಕೇವಲ ಸಂಪನ್ಮೂಲ ಹೊರತೆಗೆಯುವಿಕೆಯಿಂದಾಚೆ ದ್ವೀಪಗಳ ಒಳಗೆ ಮೌಲ್ಯ ಸೃಷ್ಟಿಯತ್ತ ಸಾಗಲು ಪ್ರಯತ್ನಿಸುತ್ತದೆ. ಉತ್ಪಾದನಾ ಬೆಳವಣಿಗೆಯನ್ನು ಪರಿಸರ ಸುರಕ್ಷತೆಯೊಂದಿಗೆ ಸಮತೋಲನಗೊಳಿಸುವುದು, ಮತ್ತು ಮೀನುಗಾರರು, ಸ್ಥಳೀಯ ಉದ್ಯಮಗಳು ಮತ್ತು ದ್ವೀಪ ಸಮುದಾಯಗಳು ಉದಯೋನ್ಮುಖ ದೇಶೀಯ ಮತ್ತು ರಫ್ತು ಮೌಲ್ಯ ಸರಪಳಿಗಳಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡುವುದರ ಮೇಲೆ ಇದರ ಯಶಸ್ಸು ಅವಲಂಬಿತವಾಗಿರುತ್ತದೆ.
*****