ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಬಿಆರ್‌ಇ ಶೃಂಗಸಭೆ ಮತ್ತು ಎಕ್ಸ್‌ಪೋ 2026ರ ವೇಳೆ ಜಾಗತಿಕ ಸೌರ ಸಹಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಶ್ರೀ ಪ್ರಲ್ಹಾದ್ ಜೋಶಿ


ಸತತ 3ನೇ ಅವಧಿಗೆ ಐಎಸ್‌ಎ ಅಧ್ಯಕ್ಷರಾಗಿ ಭಾರತ ಆಯ್ಕೆ: ಕೇಂದ್ರ ಎನ್‌ಆರ್‌ಇ ಸಚಿವರು

ಸೌರಶಕ್ತಿ ಮತ್ತು ಅಗ್ರಿ-ಪಿವಿ ಮೂಲಕ 30 ಲಕ್ಷ ರೈತರಿಗೆ ಸಶಕ್ತೀಕರಣ: ಶ್ರೀ ಜೋಶಿ

ಪ್ರಕಟಣಾ ದಿನಾಂಕ: 03 NOV 2026 4:31PM by PIB Bengaluru

ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ, ಶಿಕ್ಷಣ ಹಾಗೂ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, ಇಂದು ನವದೆಹಲಿಯಲ್ಲಿ ನಡೆದ 'ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026' ರ ಸುದ್ಧಿಗೋಷ್ಠಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿ, ಅಂತಾರಾಷ್ಟ್ರೀಯ ಸೌರ ಸಹಕಾರವನ್ನು ಮುನ್ನಡೆಸಲು ಹಾಗೂ ಪ್ರಗತಿಯ ಸೌಲತ್ತುಗಳನ್ನು ಸಮಾನವಾಗಿ ಹಂಚಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದರ್ಶಿ ನಾಯಕತ್ವದಲ್ಲಿ, 'ಪವರ್ ಟು ಎಂಪವರ್' ದೃಷ್ಟಿಕೋನ ಮತ್ತು 'ಒಂದು ಸೂರ್ಯ, ಒಂದು ಪ್ರಪಂಚ, ಒಂದು ಗ್ರಿಡ್' ತತ್ವದ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಸೌರ ಒಕ್ಕೂಟದ (ISA) ಸಹಕಾರವನ್ನು ಮುನ್ನಡೆಸುವ ತನ್ನ ಬದ್ಧತೆಯಲ್ಲಿ ಭಾರತವು ಅಚಲವಾಗಿದೆ ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು. ಸತತ ಮೂರನೇ ಅವಧಿಗೆ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷರಾಗಿ ಭಾರತ ಆಯ್ಕೆಯಾಗಿದೆ.

ಈ ದೃಢ ನಂಬಿಕೆಯು 2015ರಲ್ಲಿ ಅಂತಾರಾಷ್ಟ್ರೀಯ ಸೌರ ಒಕ್ಕೂಟವನ್ನು ಸ್ಥಾಪಿಸಲು ಭಾರತ ಮತ್ತು ಫ್ರಾನ್ಸ್ ಅನ್ನು ಒಂದೆಡೆ ತಂದಿತು ಎಂದು ಅವರು ಸ್ಮರಿಸಿದರು. ಇಂದು, 130 ಐಎಸ್‌ಎ ಸಹಿ ಮಾಡಿದ ಮತ್ತು ಸದಸ್ಯ ದೇಶಗಳೊಂದಿಗೆ, ಈ ದೃಷ್ಟಿಕೋನವು ಅಂತಾರಾಷ್ಟ್ರೀಯ ಸಹಕಾರಕ್ಕೆ, ವಿಶೇಷವಾಗಿ ಗ್ಲೋಬಲ್ ಸೌತ್‌ಗೆ ಪ್ರಬಲ ವೇದಿಕೆಯಾಗಿ ವಿಕಸನಗೊಂಡಿದೆ.

ಬಿಆರ್‌ಇ ಶೃಂಗಸಭೆ ಮತ್ತು ಎಕ್ಸ್‌ಪೋ 2026 ಅನ್ನು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 2, 2026 ರಂದು ಉದ್ಘಾಟಿಸಿದ್ದು, ನವೆಂಬರ್ 5, 2026 ರಂದು ಮುಕ್ತಾಯಗೊಳ್ಳಲಿದೆ. ಕಳೆದ ಎರಡು ದಿನಗಳ ಮತ್ತು ಮುಂಬರುವ ಎರಡು ದಿನಗಳ ಚರ್ಚೆಗಳು ಸೌರ ಬದ್ಧತೆಗಳಿಂದ ಹೂಡಿಕೆಗಳತ್ತ, ಸಹಭಾಗಿತ್ವಗಳಿಂದ ಯೋಜನೆಗಳತ್ತ ಮತ್ತು ಆಕಾಂಕ್ಷೆಗಳಿಂದ ಪರಿಣಾಮಕಾರಿ ಬದಲಾವಣೆಯತ್ತ ಸಾಗುವ ಸ್ಪಷ್ಟ ಆದ್ಯತೆಯನ್ನು ಬಲಪಡಿಸಲಿವೆ ಎಂದು ಶ್ರೀ ಜೋಶಿ ತಿಳಿಸಿದರು.

ಒಕ್ಕೂಟದ ಪ್ರಮುಖ ಆದ್ಯತೆಗಳ ಬಗ್ಗೆ ಒತ್ತಿ ಹೇಳಿದ ಸಚಿವರು, ಸೌರಶಕ್ತಿ ನಿಯೋಜನೆಗೆ ಅತ್ಯಂತ ಅಗತ್ಯವಿರುವಲ್ಲಿ ಆರ್ಥಿಕ ಬೆಂಬಲ ನೀಡುವುದರ ಮಹತ್ವವನ್ನು ಅವರು ಒತ್ತಿ ಹೇಳಿದರು. 200 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚದ ಆಫ್ರಿಕಾ ಸೋಲಾರ್ ಫೆಸಿಲಿಟಿಯು ಆಫ್ರಿಕಾದ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆಯನ್ನು ಮುಕ್ತಗೊಳಿಸುವತ್ತ ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದರು. ಸುಮಾರು ₹225 ಕೋಟಿ (25 ಮಿಲಿಯನ್ ಅಮೆರಿಕನ್ ಡಾಲರ್) ಭಾರತದ ಬದ್ಧತೆಯು, ಸೌಲಭ್ಯ ವಂಚಿತ ಸಮುದಾಯಗಳಿಗೆ ಕೈಗೆಟುಕುವ ಬೆಲೆಯ ಸೌರಶಕ್ತಿಯನ್ನು ತಲುಪಿಸುವ ತನ್ನ ಸಂಕಲ್ಪವನ್ನು ಬಲಪಡಿಸಿದೆ. 300 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚದ ನೈಜೀರಿಯಾ ಡಿಸ್ಟ್ರಿಬ್ಯೂಟೆಡ್ ರಿನೂವಬಲ್ ಎನರ್ಜಿ ಫಂಡ್ ಇಡೀ ಖಂಡದಾದ್ಯಂತ ಈ ವಿಧಾನವನ್ನು ವಿಸ್ತರಿಸಲು ಮಾದರಿಯನ್ನು ಒದಗಿಸಿದೆ ಎಂದು ಅವರು ಉಲ್ಲೇಖಿಸಿದರು.

ಜನರ ಜೀವನವನ್ನು ರೂಪಾಂತರಿಸುವಲ್ಲಿ ಸೌರಶಕ್ತಿಯ ಪಾತ್ರದ ಕುರಿತು ಉಲ್ಲೇಖಿಸಿದ ಶ್ರೀ ಜೋಶಿ ಅವರು, ಬೃಹತ್ ಪ್ರಮಾಣದಲ್ಲಿ ಪರಿಹಾರಗಳನ್ನು ತಲುಪಿಸುವ ಮಹತ್ವವದ  ಬಗ್ಗೆ  ಒತ್ತಿ ಹೇಳಿದರು. ಫಿಜಿ, ಮಡಗಾಸ್ಕರ್, ಕೊಮೊರೊಸ್ ಮತ್ತು ಸೀಶೆಲ್ಸ್‌ನಲ್ಲಿ ಐಎಸ್‌ಎ-ಬೆಂಬಲಿತ ಉಪಕ್ರಮಗಳು ಆರೋಗ್ಯ ಸೌಲಭ್ಯಗಳು ಮತ್ತು ಶಾಲೆಗಳಿಗೆ ವಿದ್ಯುತ್ ನೀಡುವುದು, ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಮತ್ತು ಕೃಷಿ ಶೀತಲ ಶೇಖರಣೆಯನ್ನು ಬೆಂಬಲಿಸುವುದರ ಮೂಲಕ ಸೌರಶಕ್ತಿಯು ಜೀವನೋಪಾಯವನ್ನು ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಹೇಗೆ ಬಲಪಡಿಸುತ್ತದೆ ಎಂಬುದನ್ನು ಪ್ರದರ್ಶಿಸಿವೆ ಎಂದು ಅವರು ತಿಳಿಸಿದರು. ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವಿಸ್ತರಿಸಬಹುದಾದ ಮಾದರಿಗಳನ್ನು ಸೃಷ್ಟಿಸಲು ಮಾರೀಷಸ್‌ನಿಂದ ಪ್ರಾರಂಭಿಸಿ, ಒಕ್ಕೂಟವು ಸಂಯೋಜಿತ ಸೌರ ಮತ್ತು ಶೇಖರಣಾ ಅವಕಾಶಗಳನ್ನು ಮುನ್ನಡೆಸುತ್ತಿದೆ ಎಂದು ಅವರು ತಿಳಿಸಿದರು.

ಸೌರಶಕ್ತಿ ಮತ್ತು ಅಗ್ರಿ-ಪಿವಿಗೆ ವಿಸ್ತರಿಸುವ ಮೂಲಕ 30 ಲಕ್ಷ ರೈತರನ್ನು ಸಶಕ್ತಗೊಳಿಸುವ ಮಹತ್ವವದ  ಬಗ್ಗೆ ಕೇಂದ್ರ ಸಚಿವರು ಒತ್ತಿ ಹೇಳಿದರು. ಭಾರತದ ಪಿಎಂ-ಕುಸುಮ್ ಉಪಕ್ರಮವು ಸೌರಚಾಲಿತ ಕೃಷಿಯು ನೀರಾವರಿ ವೆಚ್ಚವನ್ನು ಹೇಗೆ ಕಡಿಮೆ ಮಾಡುತ್ತದೆ ಮತ್ತು ಹೆಚ್ಚುವರಿ ಆದಾಯದ ಅವಕಾಶಗಳನ್ನು ಹೇಗೆ ಸೃಷ್ಟಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಅವರು ತಿಳಿಸಿದರು. ಐಎಸ್‌ಎ ಮೂಲಕ, ಈ ಮಾದರಿಯನ್ನು ಸದಸ್ಯ ದೇಶಗಳಾದ್ಯಂತ, ವಿಶೇಷವಾಗಿ ಆಫ್ರಿಕಾದಲ್ಲಿ ಅಳವಡಿಸಿಕೊಳ್ಳಲು ಶ್ರಮಿಸಲಾಗುತ್ತಿದ್ದು, ರೈತರನ್ನು ಇಂಧನ ಪರಿವರ್ತನೆಯ ಕೇಂದ್ರದಲ್ಲರಿಸಲಾಗಿದೆ.

ರಾಷ್ಟ್ರೀಯ ಸಾಮರ್ಥ್ಯಗಳನ್ನು ಬಲಪಡಿಸುವ ಕುರಿತು ಮಾತನಾಡಿದ ಶ್ರೀ ಜೋಶಿ ಅವರು, 17 ಸೌರ ತಂತ್ರಜ್ಞಾನ ಅಪ್ಲಿಕೇಶನ್ ರಿಸೋರ್ಸ್ ಸೆಂಟರ್‌ಗಳು, ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್ - ಶೈನ್ (SHINE - ಸ್ಟ್ರಾಟೆಜಿಕ್ ಹಬ್ ಫಾರ್ ಇನ್ನೋವೇಶನ್ ಅಂಡ್ ಎಕ್ಸಿಕ್ಯೂಶನ್) ಮತ್ತು ಎಐ-ಸಮರ್ಥಿತ ಐಎಸ್‌ಎ ಅಕಾಡೆಮಿ ಸ್ಥಾಪನೆಯ ಪ್ರಾಮುಖ್ಯತೆಯ ಬಗ್ಗೆ ಹೇಳಿದರು. ಸೌರಶಕ್ತಿ ನಿಯೋಜನೆಯನ್ನು ವೇಗಗೊಳಿಸಲು ಸಾಂಸ್ಥಿಕ ಬಲವರ್ಧನೆ, ಕೌಶಲ್ಯ ಅಭಿವೃದ್ಧಿ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದರ ಮೇಲೆ ಮುಖ್ಯ ಗಮನ ಹರಿಸಲಾಗಿದೆ ಎಂದು ಅವರು ತಿಳಿಸಿದರು.

ತಾಂತ್ರಿಕ ಪ್ರಗತಿಗಳ ಸನ್ನಿವೇಶದಲ್ಲಿ ಶುದ್ಧ ಇಂಧನದ ಬೆಳೆಯುತ್ತಿರುವ ಮಹತ್ವದ ಕುರಿತು ಒತ್ತಿ ಹೇಳಿದ ಸಚಿವರು, ಕೃತಕ ಬುದ್ಧಿಮತ್ತೆಯು ಆರ್ಥಿಕತೆಗಳನ್ನು ಮರುರೂಪಿಸುತ್ತಿದ್ದಂತೆ, ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಶುದ್ಧ ವಿದ್ಯುತ್ ಪಡೆಯುವುದು ಇನ್ನು ಹೆಚ್ಚಿನ ಮಹತ್ವದ ಕಾರ್ಯತಂತ್ರದ ಅಗತ್ಯವಾಗಲಿದೆ ಎಂದು ಅವರು ಹೇಳಿದರು.

ವಿಧಾನಸಭೆಯಿಂದ ಬಂದ ಸಂದೇಶ ಸ್ಪಷ್ಟವಾಗಿದೆ ಎಂದು ಶ್ರೀ ಜೋಶಿ ಒತ್ತಿ ಹೇಳಿದರು: ಸೌರಶಕ್ತಿಯ ಭವಿಷ್ಯವನ್ನು ಹಂಚಿಕೆಯ ಜವಾಬ್ದಾರಿ, ನಿರಂತರ ಹೂಡಿಕೆ ಮತ್ತು ಸಾಮೂಹಿಕ ಕ್ರಿಯೆಯ ಮೂಲಕ ನಿರ್ಮಿಸಬೇಕು.

ಭಾರತ ಸರ್ಕಾರದ ಪರವಾಗಿ, ಭಾರತದ ಮೇಲೆ ವಿಶ್ವಾಸವಿಟ್ಟು ಸತತ ಮೂರನೇ ಅವಧಿಗೆ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷತೆಗೆ ಆಯ್ಕೆ ಮಾಡಿದ್ದಕ್ಕಾಗಿ ಅವರು ಎಲ್ಲಾ ಸದಸ್ಯ ದೇಶಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಐಎಸ್‌ಎ ಸಹ-ಅಧ್ಯಕ್ಷರಾಗಿ ಮರು-ಆಯ್ಕೆಯಾದ ಫ್ರಾನ್ಸ್ ಮತ್ತು ಅದರ ಸಚಿವರಿಗೆ ಅವರು ಅಭಿನಂದನೆ ಸಲ್ಲಿಸಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ ಶ್ರೀ ಜೋಶಿ ಅವರು, ಭಾರತವು ತನ್ನ ಹೊಸ ಅವಧಿಯನ್ನು ಪ್ರಾರಂಭಿಸುತ್ತಿದ್ದಂತೆ, ಹೂಡಿಕೆಯನ್ನು ಕ್ರೋಢೀಕರಿಸುವುದು, ನಿಯೋಜನೆಯನ್ನು ವೇಗಗೊಳಿಸುವುದು ಮತ್ತು ಸಾಮೂಹಿಕ ಆಕಾಂಕ್ಷೆಗಳನ್ನು ಸಮುದಾಯಗಳು ಹಾಗೂ ರಾಷ್ಟ್ರಗಳಿಗೆ ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸುವುದರ ಮೇಲೆಯೇ ಗಮನ ಮುಂದುವರಿಯಲಿದೆ ಎಂದು ತಿಳಿಸಿದರು. ತಮ್ಮ ನಿರಂತರ ವಿಶ್ವಾಸ ಮತ್ತು ಸಹಭಾಗಿತ್ವಕ್ಕಾಗಿ ಅವರು ಎಲ್ಲಾ ಸದಸ್ಯ ದೇಶಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಎಮ್‌ಎನ್‌ಆರ್‌ಇ (ಎಂಎನ್‌ಆರ್‌ಇ) ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ, ಐಎಸ್‌ಎ ಮಹಾನಿರ್ದೇಶಕರಾದ ಆಶಿಶ್ ಖನ್ನಾ, ಫ್ರಾನ್ಸ್‌ನ ಪರಿಸರ ಪರಿವರ್ತನೆ ಸಚಿವರಾದ ಪ್ರತಿನಿಧಿ ಮ್ಯಾಥ್ಯೂ ಲೆಫೆವ್ರೆ, ಡೆನ್ಮಾರ್ಕ್‌ನ ವಾಣಿಜ್ಯ ಮತ್ತು ಸ್ಪರ್ಧಾತ್ಮಕತೆ ಸಚಿವರಾದ ಮಾರ್ಟಿನ್ ಲಿಡೆಗಾರ್ಡ್, ಸುರಿನಾಮ್ ದೇಶದ ನೈಸರ್ಗಿಕ ಸಂಪನ್ಮೂಲ ಸಚಿವಾಲಯದ ಸಚಿವರಾದ ಹೆಚ್.ಇ. ಡೇವಿಡ್ ಅಬಿಯಾಮೊಫೊ, ಸೀಶೆಲ್ಸ್ ದೇಶದ ಉದ್ಯಮ ಮತ್ತು ಉದ್ಯಮಶೀಲತೆ ಸಚಿವಾಲಯದ ಸಚಿವರಾದ ಹೆಚ್.ಇ. ಜಿರಾಲ್ಡಾ ಡೆಸಾಬಿನ್ ಮತ್ತು ಶ್ರೀಲಂಕಾದ ಇಂಧನ ಸಚಿವಾಲಯದ ಉಪ ಸಚಿವರಾದ ಹೆಚ್.ಇ. ಮುಹಮ್ಮದು ಅರ್ಕಮ್ ಇಲ್ಯಾಸ್ ಉಪಸ್ಥಿತರಿದ್ದರು.

 

*****


(ಪ್ರಕಟಣೆ ಐ.ಡಿ.: 2332110) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: Gujarati , English , Urdu , Nepali , Marathi , हिन्दी , Odia , Tamil , Telugu