ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವೆಂಬರ್ 3 ರಂದು ಸುಮಾರು 21,800 ಕೋಟಿ ರೂ. ಮೌಲ್ಯದ ಪುಣೆ ಮೆಟ್ರೋ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಅವರಿಂದ 8,300 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ಪುಣೆ ಮೆಟ್ರೋ ಲೈನ್ 3 (ಪಿಂಕ್ ಲೈನ್) ಉದ್ಘಾಟನೆ

ಹಿಂಜೆವಾಡಿ ಐಟಿ ಹಬ್ ಮತ್ತು ಶಿವಾಜಿನಗರದ ನಡುವೆ ಮೆಟ್ರೋ ಸಂಪರ್ಕ ಕಲ್ಪಿಸಲಿರುವ ಈ 'ಪಿಂಕ್ ಲೈನ್'

ಪುಣೆ ಮೆಟ್ರೋ ಲೈನ್ 3 ಸಂಪೂರ್ಣ ಮಹಿಳಾ ರೈಲು ನಿರ್ವಾಹಕರಿಂದ ನಿರ್ವಹಣೆ; ಅಲ್ಲದೆ, ಇಲ್ಲಿನ ವಿದ್ಯುತ್ ಅಗತ್ಯದ ಸುಮಾರು ಶೇ,30 ರಷ್ಟು ಭಾಗವನ್ನು ಸೌರಶಕ್ತಿಯ ಮೂಲಕ ಪೂರೈಕೆ

ಸುಮಾರು 13,500 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಪುಣೆ ಮೆಟ್ರೋ ಹಂತ-II (Phase-II) ಯೋಜನೆ — ಅದರಲ್ಲಿ ಮಾರ್ಗ 2A, 2B, 4 ಮತ್ತು 4A ಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಪ್ರಮುಖ ವಸತಿ, ವಾಣಿಜ್ಯ ಮತ್ತು ಐಟಿ ಕೇಂದ್ರಗಳ ನಡುವೆ ಸಂಪರ್ಕ ಜಾಲ ವಿಸ್ತರಿಸಲಿರುವ ಪುಣೆ ಮೆಟ್ರೋ ಹಂತ-II ಯೋಜನೆ

ಹೊಸ ಮೆಟ್ರೋ ಕಾರಿಡಾರ್‌ಗಳು ಹಾಲಿ ಇರುವ ಪುಣೆ ಮೆಟ್ರೋ ಜಾಲ ಮತ್ತು ನಗರಗಳ ನಡುವೆ ಸಂಚರಿಸುವ ಬಸ್ ಸೇವೆಗಳೊಂದಿಗೆ ಸಂಯೋಜನೆಗೊಳ್ಳಲಿದ್ದು, ನಗರ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲವರ್ಧನೆ

ಪ್ರಕಟಣಾ ದಿನಾಂಕ: 02 NOV 2026 3:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ನವೆಂಬರ್ 3 ರಂದು ಮಧ್ಯಾಹ್ನ 12:30 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸುಮಾರು 21,800 ಕೋಟಿ ರೂಪಾಯಿ ಮೌಲ್ಯದ ಪುಣೆ ಮೆಟ್ರೋ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಮಂತ್ರಿ ಅವರು 8,300 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ಪುಣೆ ಮೆಟ್ರೋ ಲೈನ್ 3 ಅನ್ನು ('ಪಿಂಕ್ ಲೈನ್') ಉದ್ಘಾಟಿಸಲಿದ್ದಾರೆ. ಈ ಯೋಜನೆಯು ತಾಂತ್ರಿಕ ನಾವೀನ್ಯತೆ ಮತ್ತು ಆಧುನಿಕ ಸಾರಿಗೆ ಪರಿಹಾರಗಳ ಮೂಲಕ ಪುಣೆಯ ನಗರ ಸಂಚಾರ ಮೂಲಸೌಕರ್ಯ ಬಲವರ್ಧನೆ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

ಸುಮಾರು 23 ಕಿಲೋಮೀಟರ್ ಉದ್ದದ ಈ 'ಪಿಂಕ್ ಲೈನ್', 'ಮಾನ್' ಪ್ರದೇಶವನ್ನು ಜಿಲ್ಲಾ ನ್ಯಾಯಾಲಯ ಮೆಟ್ರೋ ನಿಲ್ದಾಣದೊಂದಿಗೆ ಸಂಪರ್ಕಿಸುತ್ತದೆ. ಈ ಕಾರಿಡಾರ್ ಹಿಂಜೆವಾಡಿ ಐಟಿ ಹಬ್ ಮತ್ತು ಶಿವಾಜಿನಗರದ ನಡುವೆ ಮೆಟ್ರೋ ಸಂಪರ್ಕ ಒದಗಿಸುತ್ತದೆ. ಇದು ಪುಣೆಯ ಪ್ರಮುಖ ಉದ್ಯೋಗ ಕೇಂದ್ರಗಳಲ್ಲಿ ಒಂದಕ್ಕೆ ಸುಲಭ ಪ್ರವೇಶವನ್ನು ಕಲ್ಪಿಸುವುದಲ್ಲದೆ, ಸಾವಿರಾರು ಐಟಿ ವೃತ್ತಿಪರರು ಮತ್ತು ಇತರ ಪ್ರಯಾಣಿಕರ ದೈನಂದಿನ ಸಂಚಾರ ಸುಗಮಗೊಳಿಸುತ್ತದೆ. ಈ ಕಾರಿಡಾರ್ ಅಸ್ತಿತ್ವದಲ್ಲಿರುವ ಮೆಟ್ರೋ ಜಾಲದೊಂದಿಗೆ ಬೆಸೆದುಕೊಳ್ಳಲಿದ್ದು, ಪುಣೆಯ ವಿವಿಧ ಭಾಗಗಳ ನಡುವೆ ತಡೆರಹಿತ ಸಂಪರ್ಕ ಒದಗಿಸುತ್ತದೆ. ಇದು ಖಾಸಗಿ ವಾಹನಗಳ ಮೇಲಿನ ಅವಲಂಬನೆ ತಗ್ಗಿಸಲು, ಸಂಚಾರ ದಟ್ಟಣೆ ಹಾಗೂ ವಾಹನಗಳಿಂದ ಉಂಟಾಗುವ ಮಾಲಿನ್ಯ ತಗ್ಗಿಸಲು ಮತ್ತು ಪ್ರಮುಖ ವಾಣಿಜ್ಯ ಹಾಗೂ ವಸತಿ ಪ್ರದೇಶಗಳಿಗೆ ಸುಲಭ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ.

'ಪಿಂಕ್ ಲೈನ್' ನ ಒಂದು ಪ್ರಮುಖ ವೈಶಿಷ್ಟ್ಯವೆಂದರೆ, ಇದು ಮಹಿಳಾ ಸಬಲೀಕರಣ ಮತ್ತು ಎಲ್ಲ ಲಿಂಗದವರನ್ನು ಒಳಗೊಂಡ ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಒತ್ತು ನೀಡುತ್ತದೆ. ಈ ಮಾರ್ಗವನ್ನು ಸಂಪೂರ್ಣವಾಗಿ ಮಹಿಳಾ ರೈಲು ನಿರ್ವಾಹಕರು ನಿರ್ವಹಿಸಲಿದ್ದು, ಇಂತಹ ಉಪಕ್ರಮವು ಇದೇ ಮೊದಲ ಬಾರಿಗೆ ಜಾರಿಗೆ ಬರುತ್ತಿದೆ. ಈ ಯೋಜನೆಯು ಪರಿಸರ ಸುಸ್ಥಿರತೆಗೂ ಆದ್ಯತೆ ನೀಡುತ್ತದೆ; ಇಲ್ಲಿನ ಒಟ್ಟು ವಿದ್ಯುತ್ ಅಗತ್ಯದ ಸುಮಾರು ಶೇ.30 ರಷ್ಟನ್ನು ಸೌರಶಕ್ತಿಯ ಮೂಲಕ ಪೂರೈಸಲು ಉದ್ದೇಶಿಸಲಾಗಿದೆ.

ಅಲ್ಲದೆ, ಪ್ರಧಾನಮಂತ್ರಿ ಅವರು ಪುಣೆ ಮೆಟ್ರೋದ ಎರಡನೇ ಹಂತಕ್ಕೆ (Phase-II) ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 13,500 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹಂತವನ್ನು ಅಭಿವೃದ್ಧಿಪಡಿಸಲಾಗುವುದು. ಎರಡನೇ ಹಂತವು ಪುಣೆ ಮೆಟ್ರೋದ 2A, 2B, 4 ಮತ್ತು 4A ಮಾರ್ಗಗಳನ್ನು ಒಳಗೊಂಡಿದೆ. ಇವು ನಗರದ ಮೆಟ್ರೋ ಜಾಲವನ್ನು ಗಣನೀಯವಾಗಿ ವಿಸ್ತರಿಸುವುದಲ್ಲದೆ, ಪ್ರಮುಖ ವಸತಿ, ವಾಣಿಜ್ಯ ಮತ್ತು ಐಟಿ (ಐಟಿ) ಕೇಂದ್ರಗಳ ನಡುವಿನ ಸಂಪರ್ಕವನ್ನು ಬಲವರ್ಧನೆಗೊಳಿಸುತ್ತವೆ.

ಎರಡನೇ ಹಂತದ ಅಡಿಯಲ್ಲಿ, 2A ಮತ್ತು 2B ಮಾರ್ಗಗಳು ಒಟ್ಟು ಸುಮಾರು 12.75 ಕಿಲೋಮೀಟರ್ ಉದ್ದ ಹೊಂದಿರಲಿವೆ. 2A ಮಾರ್ಗವು ವನಾಜ್‌ನಿಂದ ಚಾಂದನಿ ಚೌಕ್‌ಗೆ ಸಂಪರ್ಕ ಕಲ್ಪಿಸಿದರೆ, 2B ಮಾರ್ಗವು ರಾಮವಾಡಿಯನ್ನು ವಿಠ್ಠಲವಾಡಿಗೆ ಸಂಪರ್ಕಿಸುತ್ತದೆ; ಇದು ಹಾಲಿ ಇರುವ ಪೂರ್ವ-ಪಶ್ಚಿಮ ಮೆಟ್ರೋ ಜಾಲ ವಿಸ್ತರಿಸುತ್ತದೆ. ಸುಮಾರು 25.52 ಕಿಲೋಮೀಟರ್ ಉದ್ದದ 4ನೇ ಮಾರ್ಗವು ಖರಾಡಿಯಿಂದ ಖಡಕ್ವಾಸ್ಲಾವನ್ನು ಸಂಪರ್ಕಿಸುತ್ತದೆ. 6.12 ಕಿಲೋಮೀಟರ್ ಉದ್ದದ 4A ಮಾರ್ಗವು ನಳ್ ಸ್ಟಾಪ್‌ನಿಂದ ಮಾಣಿಕ್ ಬಾಗ್ ಅನ್ನು ಸಂಪರ್ಕಿಸುತ್ತದೆ.

ಈ ಹೊಸ ಮೆಟ್ರೋ ಕಾರಿಡಾರ್‌ಗಳು ಖರಾಡಿ, ಮಗರ್‌ಪಟ್ಟಾ, ಹಡಪ್ಸರ್, ಸ್ವರಗೇಟ್, ಮಾಣಿಕ್ ಬಾಗ್, ನಾಂದೇಡ್ ಸಿಟಿ, ಪುಣೆ ಕಂಟೋನ್ಮೆಂಟ್ ಮತ್ತು ವಾರ್ಜೆ ಸೇರಿ ಹಲವು ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತವೆ. ರಾಮವಾಡಿಯಿಂದ ವಿಠ್ಠಲವಾಡಿಗೆ ಇರುವ ಪೂರ್ವ ವಿಸ್ತರಣೆಯು, ಖರಾಡಿ ಮತ್ತು ವಘೋಲಿಯಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವಸತಿ, ವಾಣಿಜ್ಯ ಮತ್ತು ಐಟಿ ಕೇಂದ್ರಗಳಿಗೆ ಸಂಪರ್ಕ ಸುಧಾರಿಸುತ್ತದೆ. ಈ ಕಾರಿಡಾರ್‌ಗಳು ಸ್ವರಗೇಟ್, ನಳ್ ಸ್ಟಾಪ್ ಮತ್ತು ಖರಾಡಿ ಬೈಪಾಸ್‌ನಲ್ಲಿರುವ 'ಇಂಟರ್‌ಚೇಂಜ್'  ಸೌಲಭ್ಯಗಳ ಮೂಲಕ ಅಂತರ-ನಗರ ಬಸ್ ಸೇವೆಗಳು ಮತ್ತು ಈಗಾಗಲೇ ಇರುವ ಪುಣೆ ಮೆಟ್ರೋ ಜಾಲದೊಂದಿಗೆ ಸಂಯೋಜನೆಗೊಳ್ಳುತ್ತವೆ. ಇದು ನಗರದ ವಿವಿಧ ಭಾಗಗಳ ನಡುವೆ ತಡೆರಹಿತ ಸಂಪರ್ಕ  ಒದಗಿಸುತ್ತದೆ.

ಈ ಯೋಜನೆಗಳು ಪುಣೆಯ ಸಾರ್ವಜನಿಕ ಸಾರಿಗೆ ಮೂಲಸೌಕರ್ಯ ಬಲವರ್ಧನೆಗೊಳಿಸುತ್ತವೆ, ನಗರದಾದ್ಯಂತ ಸಂಪರ್ಕ ಸುಧಾರಿಸುತ್ತವೆ ಮತ್ತು ಪ್ರಯಾಣಿಕರಿಗೆ ದಕ್ಷ ಹಾಗೂ ಸಮಗ್ರ ನಗರ ಸಾರಿಗೆ ಜಾಲವನ್ನು ಒದಗಿಸುತ್ತವೆ.

 

*****


(ಪ್ರಕಟಣೆ ಐ.ಡಿ.: 2331636) ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ: Bengali , Bengali-TR , English , Urdu , Marathi , हिन्दी , Manipuri , Gujarati , Tamil , Telugu , Malayalam