ಪ್ರಕಟಣಾ ದಿನಾಂಕ:
27 OCT 2026 4:32PM by PIB Bengaluru
ಬುಡಕಟ್ಟು ವ್ಯವಹಾರಗಳ ಸಚಿವಾಲಯ 2026ರ ನವೆಂಬರ್ 1 ರಿಂದ 15 ರವರೆಗೆ ದೇಶಾದ್ಯಂತ ಜನಜಾತಿಯ ಗೌರವ ಪಕ್ವಾಡ ಆಚರಿಸಲಿದೆ. ಇದು 'ಧರ್ತಿ ಆಬಾ' ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ರಂದು ನಡೆಯಲಿರುವ ಜನ ಜಾತಿಯ ಗೌರವ ದಿನದಲ್ಲಿ ಸಮಾಪನಗೊಳ್ಳಲಿದೆ. ಈ ಆಚರಣೆ, ಸ್ಮರಣೆಗಿಂತ ಹೆಚ್ಚಾಗಿ ಸಚಿವಾಲಯದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸುವುದು. ಕೊನೆಯ ಮೈಲುವರೆಗೆ ಬುಡಕಟ್ಟು ಕುಟುಂಬಗಳಿಗೆ ಅವರಿಗೆ ತಲುಪಬೇಕಾದ ಪ್ರಯೋಜನಗಳನ್ನು ತಲುಪಿಸಲು ಮತ್ತು ಬುಡಕಟ್ಟು ಸಮುದಾಯಗಳು, ವಿದ್ಯಾರ್ಥಿಗಳು ಹಾಗೂ ಪ್ರಜೆಗಳಿಗೆ ದೊರಕಬೇಕಾದ ಸವಲತ್ತುಗಳು ಮತ್ತು ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಒತ್ತು ನೀಡಲಾಗುವುದು.
ಭಾರತ ಸರ್ಕಾರ, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ 'ಧರ್ತಿ ಆಬಾ' ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15ಅನ್ನು 2021ರಿಂದ ಜನ ಜಾತಿಯ ಗೌರವ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ. ಈ ದಿನವು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬುಡಕಟ್ಟು ವೀರರು ನೀಡಿದ ಕೊಡುಗೆಯನ್ನು ಹಾಗೂ ರಾಷ್ಟ್ರದ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಜೀವನದಲ್ಲಿ ಬುಡಕಟ್ಟು ಸಮುದಾಯಗಳು ಹೊಂದಿರುವ ಶಾಶ್ವತ ಸ್ಥಾನಮಾನವನ್ನು ಗೌರವಿಸಲಾಗುವುದು.
ಜನ ಜಾತಿಯ ಗೌರವ ದಿನ ಒಂದು ರಾಷ್ಟ್ರೀಯ ಚಳವಳಿಯಾಗಿ ಬೆಳವಣಿಗೆ ಹೊಂದಿದ್ದು, ಇದು ಭಾರತದ ಆದಿವಾಸಿ ಜನರ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಪುಟಿದೇಳುವ ಪ್ರವೃತ್ತಿಯನ್ನು ಆಚರಿಸುವ ದಿನವಾಗಿದೆ. ಪಿಎಂ-ಜನ್ ಮನ್ ಮತ್ತು ಧರ್ತಿ ಆಬಾ ಜನ ಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ ಮತ್ತಿತರ ಕಾರ್ಯಕ್ರಮಗಳು ಪರಿವರ್ತನೆಗೆ ವೇಗ ನೀಡಿವೆ. ಕಳೆದ 5 ವರ್ಷಗಳಿಂದೀಚೆಗೆ ಜೆಜೆಜಿಡಿಯನ್ನು 2021ರಲ್ಲಿ ರಾಂಚಿ, 2022 ಮತ್ತು 2023ರಲ್ಲಿ ಕುಂತಿ, 2024ರಲ್ಲಿ ಜಮುಯ್ ಮತ್ತು 2025ರಲ್ಲಿ ದೆದಿಯಪಾಡದಲ್ಲಿ ಆಚರಿಸಲಾಯಿತು.
ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿಯನ್ನು 20254-25ರಲ್ಲಿ ಜನಜಾತಿಯ ವರ್ಷವನ್ನಾಗಿ ಆಚರಿಸಲಾಯಿತು. ಅದರಡಿ 28 ರಾಷ್ಟ್ರೀಯ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಸುಮಾರು 2 ಲಕ್ಷಕ್ಕೂ ಅಧಿಕ ಚಟುವಟಿಕೆಗಳಲ್ಲಿ 3.8 ಕೋಟಿಗೂ ಅಧಿಕ ಮಂದಿ ಭಾಗಿಯಾಗಿದ್ದಾರೆ. ಜನ ಜಾತಿಯ ಗೌರವ ದಿನ, ಆದಿವಾಸಿಗಳು, ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಯನ್ನು ಗುರುತಿಸುವುದು ಮತ್ತು ಅವರ ಜ್ಞಾನ, ಕಲೆ ಮತ್ತು ಪ್ರಕೃತಿಯೊಂದಿಗಿನ ಸಹಬಾಳ್ವೆಯನ್ನು ಗುರುತಿಸಿ, ಗೌರವಿಸುವ ಸಂಕೇತವಾಗಿದೆ.
ಈ ವರ್ಷ(2026)ರ ಜನ ಜಾತೀಯ ಗೌರವ ದಿನ ಆಚರಣೆಗೆ ಸಚಿವಾಲಯ ಪಾಕ್ಷಿಕದುದ್ದಕ್ಕೂ ರಾಷ್ಟ್ರೀಯ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಆ ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ:
- ನವೆಂಬರ್ 12 ರಂದು ಏಕಲವ್ಯ ಮಾದರಿ ವಸತಿ ಶಾಲೆಗಳ(ಇಎಂಆಎರ್ ಎಸ್)ನ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ರಾಷ್ಟ್ರಪತಿ ಭವನದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
- ನವೆಂಬರ್ 12 ಮತ್ತು 13ರಂದು ನವದೆಹಲಿಯ ಇಂಡಿಯಾ ಹ್ಯಾಬಿಟೇಟ್ ಸೆಂಟರ್ ನಲ್ಲಿ ರಾಷ್ಟ್ರೀಯ ಬುಡಕಟ್ಟು ಸಾಹಿತ್ಯೋತ್ಸವ ನಡೆಯಲಿದ್ದು, ದೇಶಾದ್ಯಂತ ಇರುವ ಆದಿವಾಸಿ ಬರಹಗಾರರು ಪಾಲ್ಗೊಳ್ಳಲಿದ್ದಾರೆ.
- ದೆಹಲಿಯ ಐಐಟಿಯಲ್ಲಿ “ಆದಿವಾಸಿ ಜೀವಂತ ಪರಂಪರೆಯಾದ ಆದಿವಾಣಿ ಬಲವರ್ಧನೆ ಮತ್ತು ರಾಷ್ಟ್ರೀಯ ಆದಿವಾಸಿ ಭಾಷಾ ಭಂಡಾರ” ಕುರಿತ ರಾಷ್ಟ್ರೀಯ ಕಾರ್ಯಾಗಾರ ಆಯೋಜನೆ
- ನವೆಂಬರ್ 14ರಂದು ರಾಣಿ ದುರ್ಗಾವತಿ ಆದಿವಾಸಿ ಮಹಿಳಾ ಸಮ್ಮೇಳನ ಆಯೋಜಿಸಲಾಗಿದ್ದು, 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 500ಕ್ಕೂ ಅಧಿಕ ಆದಿವಾಸಿ ಮಹಿಳಾ ಉದ್ಯಮಿಗಳನ್ನು ಒಗ್ಗೂಡಿಸಲಾಗುವುದು ಮತ್ತು ಅವರಿಗೆ ಮಾರುಕಟ್ಟೆ ಸಂಪರ್ಕ ಬಲವರ್ಧನೆಗೊಳಿಸಿ, ಮಹಿಳೆಯರ ನೇತೃತ್ವದ ಉದ್ಯಮಗಳನ್ನು ಪ್ರೋತ್ಸಾಹಿಸಲಾಗುವುದು.
- ಅಕ್ಟೋಬರ್ 15 ರಿಂದ ನವೆಂಬರ್ 15ರ ವರೆಗೆ ಪಿವಿಟಿಜಿಗಳಿಗಾಗಿ ಪಿಎಂ-ಜನಮನ ಬಹು ಉದ್ದೇಶದ ಕೇಂದ್ರಗಳಲ್ಲಿ ಸ್ವಾಸ್ಥ್ಯ ಪೋಷಣ ಸೇವಾ ಸಂಗಮದಡಿಯಲ್ಲಿ ಆರೋಗ್ಯ, ಪೌಷ್ಠಿಕಾಂಶ ಮತ್ತು ಹಲವು ಯೋಜನೆಗಳ ಶಿಬಿರಗಳನ್ನು ನಡೆಸಲಾಗುತ್ತಿದೆ.
- ನವೆಂಬರ್ 1 ಮತ್ತು 2 ರಂದು ಸುಮಾರು ಒಂದು ಲಕ್ಷ ಚಿಕಿತ್ಸಕರ ತರಬೇತಿ ಮತ್ತು ಪ್ರಾಮಾಣೀಕರಣದ ಭಾಗವಾಗಿ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 1500 ಸಾಂಪ್ರದಾಯಿಕ ಕಾಯಿಲೆ ಗುಣಪಡಿಸುವವರ ಆದಿವಾಸಿ ಹೀಲರ್ಸ್ ಸಾಮರ್ಥ್ಯವೃದ್ಧಿ ಸಮಾವೇಶ ನಡೆಯಲಿದೆ.
- ಆದಿಸೇವಾ ಸಮಯ ಮತ್ತು ಆದಿಸೇವಾ ದಿನದ ಮೂಲಕ 'ಧರ್ತಿ ಆಬಾ' ಜನ ಭಾಗೀದಾರಿ ಅಭಿಯಾನವನ್ನು ನಡೆಸಲಾಗುವುದು. ಆದಿವಾಸಿಗಳ ಗ್ರಾಮಗಳಲ್ಲಿ ಸಮುದಾಯಗಳನ್ನು ತೊಡಗಿಸಿಕೊಳ್ಳಲಾಗುವುದು. ಅಲ್ಲದೆ ಸುಮಾರು 76,963 ಗ್ರಾಮಗಳಲ್ಲಿರುವ 1.54 ಲಕ್ಷ ಆದಿ ಕರ್ಮಯೋಗಿ ಸ್ವಯಂಸೇವಕರಿಗೆ ರಾಜ್ಯ ಆಡಳಿತ ತರಬೇತಿ ಕೇಂದ್ರಗಳ ಮೂಲಕ ತರಬೇತಿ ನೀಡಲಾಗುವುದು.
- ಆಧಾರ್ ಸಂಯೋಜನೆ ಮತ್ತು ಅರ್ಜಿ ಸಲ್ಲಿಕೆ ಮೂಲಕ 73 ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ದೊರಕಿಸಿಕೊಡುವ ಶಿಬಿರಗಳನ್ನು ಆಯೋಜಿಸಲಾಗುವುದು. ಮತ್ತು
- ಒಡಿಶಾದ ಕೋರಾಪತ್ ನಲ್ಲಿ ಸಿಎಸ್ಐಆರ್-ಎನ್ ಬಿಆರ್ ಐ ಮೂಲಕ ಸುಮಾರು 200-300 ಔಷಧೀಯ ಗಿಡಮೂಲಿಕೆ ಪ್ರಬೇಧಗಳನ್ನು ಸಂರಕ್ಷಿಸುವ ಕಾರ್ಯಕ್ರಮ ನಡೆಯಲಿದೆ.
ಈ ಮೇಲಿನ ಕಾರ್ಯಕ್ರಮಗಳಲ್ಲದೆ, ಜನಜಾತೀಯ ಗೌರವ ದಿನದಂದು ಆದಿವಾಸಿಗಳು ಹೆಚ್ಚಾಗಿರುವ ರಾಜ್ಯಗಳಲ್ಲಿ 300ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು. ಆ ಪೈಕಿ ಈಗಾಗಲೇ 228 ಯೋಜನೆಗಳು ಉದ್ಘಾಟನೆಗೆ ಸಿದ್ಧವಾಗಿದೆ ಮತ್ತು 74 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಇದರಲ್ಲಿ ಅರುಣಾಚಲಪ್ರದೇಶದ ಇಟಾನಗರದಲ್ಲಿ ಹೊಸ ಆದಿವಾಸಿ ಸಂಶೋಧನಾ ಕೇಂದ್ರ ಕಟ್ಟಡ ನಿರ್ಮಾಣ ಮತ್ತು ಮಿಜೋರಾಂನ ಕೆಲ್ಶಿಯಲ್ಲಿ ರೋಪುಲೈನಿ ಆದಿವಾಸಿ ಸ್ವಾತಂತ್ರ್ಯ ಹೋರಾಟಗಾರ ಮ್ಯೂಸಿಯಂ ನಿರ್ಮಾಣವೂ ಸೇರಿವೆ.
ಎರಡು ರಾಷ್ಟ್ರೀಯ ಡಿಜಿಟಲ್ ಉಪಕ್ರಮಗಳಿಗೂ ಸಹ ಚಾಲನೆ ನೀಡಲಾಗುವುದು. ಅದರಲ್ಲಿ ಜನ್-ಹಿತ್(ಜನಜಾತೀಯ ಆರೋಗ್ಯ ಇಂಟಲಿಜೆನ್ಸ್ ಮತ್ತು ತಂತ್ರಜ್ಞಾನ) ಪೋರ್ಟಲ್ ಸೇರಿದ್ದು, ಇದನ್ನು ಐಸಿಎಂಆರ್ ಅಭಿವೃದ್ಧಿಪಡಿಸಿದೆ. ಇದು ಸುಮಾರು 20 ರಾಜ್ಯಗಳ ವ್ಯಾಪ್ತಿಯಲ್ಲಿ ಆದಿವಾಸಿಗಳ ಆರೋಗ್ಯ ದತ್ತಾಂಶವನ್ನು ಒಳಗೊಂಡ ಭಾರತದ ಮೊದಲ ವೇದಿಕೆಯಾಗಿದೆ. ಮತ್ತೊಂದು ರಾಷ್ಟ್ರೀಯ ಎಫ್ಆ ರ್ ಎ ಡಿಜಿಟಲ್ ವೇದಿಕೆಯಾಗಿದ್ದು, ಅರಣ್ಯ ಹಕ್ಕುಗಳ ಕಾಯ್ದೆ-2006ರಡಿ ಅರಣ್ಯ ಹಕ್ಕುಗಳ ಮಂಡನೆಯ ಎಲ್ಲಾ ಪ್ರಕ್ರಿಯೆಯನ್ನು ಕೈಗೊಳ್ಳಬಹುದಾಗಿದ್ದು, ಇದರಲ್ಲಿ ಗ್ರಾಮ ಸಭೆಗಳಲ್ಲಿ ಡಿಜಿಟಲ್ ಸಹಿ ಹಾಕಿದ ಹಕ್ಕು ಪತ್ರಗಳ ವಿತರಣೆಯನ್ನು ಏಕಗವಾಕ್ಷಿ ಯೋಜನೆಯನ್ನಾಗಿ ರೂಪಿಸಲಾಗಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೂ ಸಹ ಈ ಪಕ್ವಾಡವನ್ನು ಆದಿವಾಸಿ ಸಂಶೋಧನಾ ಕೇಂದ್ರಗಳ ಮೂಲಕ ಆಚರಿಸಲಾಗುವುದು. ಅದರಡಿ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 160ಕ್ಕೂ ಅಧಿಕ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ಅವುಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಇಎಂಆರ್ ಎಸ್ ಶಾಲೆಗಳು ಮತ್ತು ಹಾಸ್ಟೆಲ್ ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವಗಳು, ಪ್ರದರ್ಶನಗಳು ಮತ್ತು ಕಲ್ಯಾಣ ಹಾಗೂ ಜೀವನೋಪಾಯ ಶಿಬಿರಗಳನ್ನು ನಡೆಸಲಾಗುವುದು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಆಂಧ್ರಪ್ರದೇಶದಲ್ಲಿ ರಾಜ್ಯವ್ಯಾಪಿ ಆದಿವಾಸಿ ಉತ್ಸವಗಳು, ಗೋವಾದಲ್ಲಿ ಆದಿವಾಸಿ ಕಲಾ ಮತ್ತು ಖೇಲ್ ಸಂಗಮ್, ಒಡಿಶಾದಲ್ಲಿ ಭಗವಾನ್ ಬಿರ್ಸಾ ಮುಂಡಾ ಪೆವಿಲಿಯನ್, ಶಿಲ್ಲಾಂಗ್ ನಲ್ಲಿ ಆದಿವಾಸಿ ಸಂಗೀತ ಉತ್ಸವ ಹಾಗೂ ಗುಜರಾತ್ ನ ಅಮ್ ದ್ವದ್ ಹಾತ್ ಲ್ಲಿ ಬುಡಕಟ್ಟು ಕಲಾ ಮತ್ತು ಕರಕುಶಲ ಮೇಳ ಸೇರಿವೆ. ಅಲ್ಲದೆ ರಾಜ್ಯಗಳು ಆಧಾರ್ ಮತ್ತು ವಿದ್ಯಾರ್ಥಿವೇತನ ಶಿಬಿರಗಳನ್ನು, ಸಿಕಲ್ ಸೆಲ್ ತಪಾಸಣೆ, ಪಿವಿಟಿಜಿಗಳಿಗಾಗಿ ಆಯುಷ್ಮಾನ್ ಕಾರ್ಡ್ ಶಿಬಿರಗಳು ಮತ್ತು ಅರಣ್ಯ ಹಕ್ಕುಗಳ ಕುರಿತಂತೆ ಕಾನೂನು ಸಾಕ್ಷರತಾ ಶಿಬಿರಗಳನ್ನು ಆಯೋಜಿಸಲಿವೆ.
ಸಚಿವಾಲಯ ಸಾರ್ವಜನಿಕರು ತಮ್ಮ ತಮ್ಮ ಪ್ರದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಸಾರ್ವಜನಿಕರಿಗೆ ಆಹ್ವಾನ ನೀಡಿದೆ. ಮೈ ಗೌನಲ್ಲಿ ಪ್ರತಿಜ್ಞೆ ಸ್ವೀಕರಿಸಲು ಮತ್ತು ಜೆಜೆಜಿಡಿ ರಸಪ್ರಶ್ನೆಯಲ್ಲಿ ಭಾಗವಹಿಸಬಹುದಾಗಿದೆ. #JanjatiyaGauravDivas and #JJGD2026 ಇವುಗಳ ಮೂಲಕ ಆದಿವಾಸಿ ಕರಕುಶಲ ಕರ್ಮಿಗಳು ಮತ್ತು ಅವರ ಯಶೋಗಾಥೆಗಳನ್ನು ಹಂಚಿಕೊಳ್ಳಿ.
*****