ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರಿಂದ ಮಾದಕ ದ್ರವ್ಯ ವ್ಯಸನಮುಕ್ತಿ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ವೈದ್ಯಕೀಯ ಮತ್ತು ಸಂಬಂಧಿತ ಆರೋಗ್ಯ ವೃತ್ತಿಪರರಿಗಾಗಿ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ


2029ರ ವೇಳೆಗೆ ನಶೆ ಮುಕ್ತ ಭಾರತಕ್ಕಾಗಿ ಮಾದಕ ದ್ರವ್ಯ ಬಳಕೆಯಿಂದಾಗುವ ಅಸ್ವಸ್ಥತೆಗಳನ್ನು ತಡೆಯುವುದು ಸಮಗ್ರ ಸರ್ಕಾರಿ ವಿಧಾನದ ಸಮನ್ವಯ ಅಗತ್ಯ: ಕೇಂದ್ರ ಆರೋಗ್ಯ ಸಚಿವರು

ಮಾದಕ ದ್ರವ್ಯ ದುರುಪಯೋಗದ ವಿರುದ್ಧ ಪರಿಣಾಮಕಾರಿ ಕ್ರಮಕ್ಕೆ ಆರೋಗ್ಯ, ಸಾಮಾಜಿಕ ಕಲ್ಯಾಣ ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವೆ ಸಹಯೋಗ ಅಗತ್ಯ: ಶ್ರೀ ನಡ್ಡಾ

ಮಾದಕ ದ್ರವ್ಯ ನಿಯಂತ್ರಣದ ದೃಷ್ಟಿಕೋನ ದಾಖಲೆ: 2026-2029ರ ಅಡಿಯಲ್ಲಿ 2028-29ರ ವೇಳೆಗೆ 10,000 ಸೇವಾ ಪೂರೈಕೆದಾರರಿಗೆ ತರಬೇತಿ ನೀಡುವ ಗುರಿ ಹೊಂದಿರುವ ಕಾರ್ಯಕ್ರಮ

ಶ್ರೀ ನಡ್ಡಾ ಅವರಿಂದ ವೈದ್ಯಕೀಯ ಮತ್ತು ಸಂಬಂಧಿತ ಆರೋಗ್ಯ ವೃತ್ತಿಪರರಿಗಾಗಿ ಆನ್ ಲೈನ್ ತರಬೇತಿ ಕಾರ್ಯಕ್ರಮಗಳ ಚಾಲನೆ;  ವ್ಯಸನಕಾರಿ ಅಸ್ವಸ್ಥತೆಗಳ ನಿರ್ವಹಣೆ: ʻವೈದ್ಯರ ಕೈಪಿಡಿ'ಯ ಎರಡನೇ ಆವೃತ್ತಿ ಬಿಡುಗಡೆ

ಪ್ರಕಟಣಾ ದಿನಾಂಕ: 26 OCT 2026 6:26PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರು ಇಂದು ನವದೆಹಲಿಯ ಕರ್ತವ್ಯ ಭವನ-1ರಲ್ಲಿ ಮಾದಕ ದ್ರವ್ಯ ವ್ಯಸನಮುಕ್ತಿ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ವೈದ್ಯಕೀಯ ಮತ್ತು ಸಂಬಂಧಿತ ಆರೋಗ್ಯ ವೃತ್ತಿಪರರಿಗಾಗಿ ಸಾಮರ್ಥ್ಯ ವೃದ್ಧಿ  ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಮತ್ತು ಗೃಹ ಸಚಿವಾಲಯಗಳ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹೈಬ್ರಿಡ್ ಮಾದರಿಯಲ್ಲಿ (ಆನ್ ಲೈನ್ ಮತ್ತು ಆಫ್ ಲೈನ್) ಚಾಲನೆ ನೀಡಲಾಯಿತು.

ದೇಶಾದ್ಯಂತ ಮಾದಕ ದ್ರವ್ಯ ಬಳಕೆಯಿಂದಾಗುವ ಅಸ್ವಸ್ಥತೆಗಳ ತಡೆಯುವುದು, ಗುರುತಿಸುವುದು, ಮೌಲ್ಯಮಾಪನ ಮಾಡುವುದು, ಚಿಕಿತ್ಸೆ ನೀಡುವುದು ಮತ್ತು ನಿರ್ವಹಿಸುವ ಕಾರ್ಯಗಳಲ್ಲಿ ತೊಡಗಿರುವ ದೇಶಾದ್ಯಂತದ ಆರೋಗ್ಯ ವೃತ್ತಿಪರರ ಸಾಮರ್ಥ್ಯವನ್ನು ಬಲಪಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರು, ವೈದ್ಯರು, ವೈದ್ಯಕೀಯ ಅಧಿಕಾರಿಗಳು, ದಾದಿಯರು, ಆಪ್ತಸಮಾಲೋಚಕರು ಮತ್ತು ಇತರ ಆರೋಗ್ಯ ವೃತ್ತಿಪರರಿಗೆ ಆನ್ ಲೈನ್ ಮತ್ತು ಆಫ್ ಲೈನ್ ತರಬೇತಿಯನ್ನು ಒಳಗೊಂಡ ರಚನಾತ್ಮಕ ಅನುಷ್ಠಾನ ಯೋಜನೆಯೊಂದಿಗೆ ಸಮಗ್ರ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ತಂಡವನ್ನು ಅಭಿನಂದಿಸಿದರು. ಪ್ರಾದೇಶಿಕ ಮತ್ತು ರಾಷ್ಟ್ರೀಯ ಸಂಸ್ಥೆಗಳ ನಡುವಿನ ಸಹಯೋಗ, ನಂತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಮರ್ಥ್ಯ ವೃದ್ಧಿಯ  ಚಟುವಟಿಕೆಗಳ ವಿಸ್ತರಣೆಯನ್ನು ಒಳಗೊಂಡಿರುವ ಹಂತ ಹಂತದ ತರಬೇತಿ ವಿಧಾನವನ್ನು ಅವರು ಶ್ಲಾಘಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ 2029ರ ವೇಳೆಗೆ 'ನಶೆ ಮುಕ್ತ ಭಾರತ'ದ ಗುರಿಯನ್ನು ತಲುಪಲು ಭಾರತ ಸರ್ಕಾರದ ಬದ್ಧತೆಯನ್ನು ಕೇಂದ್ರ ಆರೋಗ್ಯ ಸಚಿವರು ಪುನರುಚ್ಚರಿಸಿದರು. ಮಾದಕ ದ್ರವ್ಯ ದುರ್ಬಳಕೆಯಿಂದಾಗುವ ಅಸ್ವಸ್ಥತೆಗಳನ್ನು ಎದುರಿಸಲು ಸ್ಪಷ್ಟವಾದ ಉದ್ದೇಶಗಳತ್ತ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಒಟ್ಟಾಗಿ ಕೆಲಸ ಮಾಡುವ ಸಮಗ್ರ ಸರ್ಕಾರಿ ವಿಧಾನದ  ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ವಿವಿಧ ಇಲಾಖೆಗಳು ಪ್ರತ್ಯೇಕವಾಗಿ ಮಾಡುವ ಪ್ರಯತ್ನಗಳು ಮತ್ತು ಕಾರ್ಯನಿರ್ವಹಣೆಯು ಸಮನ್ವಯ ಮತ್ತು ಸೇವಾ ವಿತರಣೆಯಲ್ಲಿ ಅಂತರವನ್ನು ಸೃಷ್ಟಿಸಿದೆ ಎನ್ನುವ ಅಂಶವನ್ನು ಶ್ರೀ ನಡ್ಡಾ ಗಮನಕ್ಕೆ ತಂದರು.  ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಬಿಡುಗಡೆ ಮಾಡಿದ 'ಮಾದಕ ದ್ರವ್ಯ ನಿಯಂತ್ರಣದ ದೃಷ್ಟಿಕೋನ ದಾಖಲೆ: 2026-2029' ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಜವಾಬ್ದಾರಿಗಳು ಮತ್ತು ಗುರಿಗಳನ್ನು ವ್ಯಾಖ್ಯಾನಿಸುವ ಮೂಲಕ ಈ ಅಂತರವನ್ನು ಸರಿಪಡಿಸುವ ಸಮನ್ವಯದ ಪ್ರಯತ್ನವನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು. ಪರಿಣಾಮಕಾರಿ ಅನುಷ್ಠಾನಕ್ಕೆ ನಿರಂತರವಾದ ಅಂತರ ಸಚಿವಾಲಯ ಸಮನ್ವಯ ಮತ್ತು ಸಾಮೂಹಿಕ ಹೊಣೆಗಾರಿಕೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪಾತ್ರವನ್ನು ಎತ್ತಿಹಿಡಿದ ಶ್ರೀ ನಡ್ಡಾ, ಚಿಕಿತ್ಸೆಯ ಸೇವೆಗಳನ್ನು ಬಲಪಡಿಸುವುದು ಮತ್ತು ಆರೋಗ್ಯ ವೃತ್ತಿಪರರು ಹಾಗೂ ವ್ಯಸನಮುಕ್ತಿ ಕೇಂದ್ರಗಳ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ದೇಶವ್ಯಾಪಿ ಕಾರ್ಯಕ್ರಮಕ್ಕೆ ಸಚಿವಾಲಯದ ಪ್ರಮುಖ ಕೊಡುಗೆಯಾಗಿದೆ ಎಂದು ತಿಳಿಸಿದರು. ಸೂಕ್ತ ತರಬೇತಿ, ಸಾಂಸ್ಥಿಕ ಬಲವರ್ಧನೆ ಮತ್ತು ಅಗತ್ಯವಾದ ಹಣಕಾಸು ಸಂಪನ್ಮೂಲಗಳ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿರುವ ವ್ಯಸನಮುಕ್ತಿ ಸೌಲಭ್ಯಗಳನ್ನು ಬೆಂಬಲಿಸುವ ಮಹತ್ವವನ್ನು ಅವರು ಒತ್ತಿಹೇಳಿದರು.

ಮಾದಕ ದ್ರವ್ಯ ದುರ್ಬಳಕೆಯಿಂದಾಗುವ ಅಸ್ವಸ್ಥತೆಗಳ ವಿರುದ್ಧದ ಕ್ರಮವು ಕೇವಲ ಚಿಕಿತ್ಸೆಗೆ ಸೀಮಿತವಾಗದೆ ತಡೆಗಟ್ಟುವಿಕೆ, ಜಾರಿಗೊಳಿಸುವಿಕೆ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆ ವಿರುದ್ಧದ ಸಮನ್ವಯದ ಕ್ರಮಗಳನ್ನು ಒಳಗೊಂಡಿರುವುದು ಅತ್ಯಗತ್ಯ ಎಂದು ಸಚಿವರು ಒತ್ತಿ ಹೇಳಿದರು. ಈ ಸವಾಲನ್ನು ಸಮಗ್ರವಾಗಿ ಎದುರಿಸಲು ಕಾನೂನು ಜಾರಿ ಸಂಸ್ಥೆಗಳು, ಗಡಿ ನಿರ್ವಹಣಾ ಪ್ರಾಧಿಕಾರಗಳು ಮತ್ತು ಇತರ ಸಂಬಂಧಿತ ಪಾಲುದಾರರೊಂದಿಗಿನ ಸಹಯೋಗದ ಪ್ರಾಮುಖ್ಯತೆಯನ್ನು ಅವರು ಎತ್ತಿ ತೋರಿಸಿದರು. ಕಾರ್ಯಕ್ರಮದ ಅನುಷ್ಠಾನವನ್ನು ಬಲಪಡಿಸಲು ಹಾಗೂ ಇಲಾಖೆಗಳ ನಡುವಿನ ಸಮನ್ವಯದ ಅಗತ್ಯವಿರುವ ಸವಾಲುಗಳನ್ನು ಒಳಗೊಂಡಂತೆ, ಉದ್ಭವಿಸುತ್ತಿರುವ ಹೊಸ ಸವಾಲುಗಳನ್ನು ಎದುರಿಸಲು ಪ್ರಾಯೋಗಿಕ ಸಲಹೆಗಳನ್ನು ನೀಡುವಂತೆ ಅವರು ಆರೋಗ್ಯ ವೃತ್ತಿಪರರು ಮತ್ತು ಭಾಗವಹಿಸುವ ಸಂಸ್ಥೆಗಳನ್ನು ಪ್ರೋತ್ಸಾಹಿಸಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಶ್ರೀ ನಡ್ಡಾ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ಈ ಉಪಕ್ರಮದೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆಗಳನ್ನು ಅಭಿನಂದಿಸಿದರು. ಈ ಸಾಮರ್ಥ್ಯ ವರ್ಧನೆ ಕಾರ್ಯಕ್ರಮವು ವೈಜ್ಞಾನಿಕ ಸಾಕ್ಷ್ಯಾಧಾರಿತ ಚಿಕಿತ್ಸಾ ಸೇವೆಗಳ ಲಭ್ಯತೆ ಮತ್ತು ಗುಣಮಟ್ಟವನ್ನು ಬಲಪಡಿಸುತ್ತದೆ ಹಾಗೂ 'ನಶೆ ಮುಕ್ತ ಭಾರತ'ವನ್ನು ನಿರ್ಮಿಸುವ ರಾಷ್ಟ್ರೀಯ ಸಂಕಲ್ಪಕ್ಕೆ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲಿಲಾ ಶ್ರೀವಾಸ್ತವ ಅವರು, ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾತುಗಳನ್ನು ಉಲ್ಲೇಖಿಸಿದರು. ಭಾರತವು 'ವಿಕಸಿತ ಭಾರತ'ದ   ಗುರಿಯತ್ತ ಸಾಗುತ್ತಿರುವಾಗ, ದೇಶದ ಯುವಜನರು ದೈಹಿಕವಾಗಿ ಆರೋಗ್ಯವಂತರಾಗಿ, ಮಾನಸಿಕವಾಗಿ ದೃಢವಾಗಿ, ಆತ್ಮವಿಶ್ವಾಸವುಳ್ಳವರಾಗಿ ಮತ್ತು ಮಾದಕ ದ್ರವ್ಯಗಳ ದುಷ್ಪರಿಣಾಮಗಳಿಂದ ಮುಕ್ತರಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು. ದೇಶದ ಅಭಿವೃದ್ಧಿಗೆ ಅರ್ಥಪೂರ್ಣ ಕೊಡುಗೆ ನೀಡಬಲ್ಲ, ಆರೋಗ್ಯವಂತ, ಸಬಲ ಮತ್ತು ಉತ್ಪಾದಕ ಪೀಳಿಗೆಯನ್ನು ರೂಪಿಸಲು ಯುವಜನರನ್ನು ಮಾದಕ ದ್ರವ್ಯಗಳ ಅಪಾಯಗಳಿಂದ ರಕ್ಷಿಸುವುದು ನಿರ್ಣಾಯಕವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಮಾದಕ ದ್ರವ್ಯ ದುರ್ಬಳಕೆಯ ಸವಾಲನ್ನು ಎದುರಿಸಲು 'ಸಮಗ್ರ ಸರ್ಕಾರಿ ವಿಧಾನ'ವನ್ನು ಅಳವಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಅವರು ಮತ್ತಷ್ಟು ಒತ್ತು ನೀಡಿದರು, ತಡೆಗಟ್ಟುವಿಕೆ, ಜಾಗೃತಿ, ಚಿಕಿತ್ಸೆ ಮತ್ತು ಪುನರ್ವಸತಿ ಸೇವೆಗಳನ್ನು ಬಲಪಡಿಸಲು ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಸಮನ್ವಯದ ಪ್ರಯತ್ನಗಳ ಅಗತ್ಯವನ್ನು ಪ್ರತಿಪಾದಿಸಿದರು.

ದೆಹಲಿಯ ಏಮ್ಸ್ ನ  ರಾಷ್ಟ್ರೀಯ ಮಾದಕ ದ್ರವ್ಯ ಅವಲಂಬನೆ ಚಿಕಿತ್ಸಾ ಕೇಂದ್ರದ (ಎನ್ ಡಿ ಡಿ ಟಿ ಸಿ)  ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾದ ಡಾ. ಅಂಜು ಧವನ್ ಅವರು ಮಾದಕ ದ್ರವ್ಯ ಬಳಕೆಯಿಂದಾಗುವ ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ ತೊಡಗಿರುವ ಆರೋಗ್ಯ ವೃತ್ತಿಪರರಿಗಾಗಿ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದ ಅನುಷ್ಠಾನವನ್ನು ವಿವರಿಸುವ ಪ್ರಸ್ತುತಿಯನ್ನು ನೀಡಿದರು. ಮಾದಕ ದ್ರವ್ಯ ನಿಯಂತ್ರಣದ ದೃಷ್ಟಿಕೋನ ದಾಖಲೆ (2026–2029) ಅಡಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜವಾಬ್ದಾರಿಯನ್ನು, ವಿಶೇಷವಾಗಿ ಚಿಕಿತ್ಸಾ ಸೇವೆಗಳನ್ನು ಬಲಪಡಿಸುವುದು ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ಸಾಮರ್ಥ್ಯವನ್ನು ನಿರ್ಮಿಸುವತ್ತ ಗಮನಹರಿಸುವ ಬಗ್ಗೆ ಅವರು ಎತ್ತಿ ತೋರಿಸಿದರು. ಮಾದಕ ದ್ರವ್ಯ ವ್ಯಸನಮುಕ್ತಿ ಕಾರ್ಯಕ್ರಮದ (ಡಿಡಿಎಪಿ) ಅಡಿಯಲ್ಲಿ ಆರು ಸಂಸ್ಥೆಗಳ ಮೂಲಕ ಈ ಕಾರ್ಯಕ್ರಮವನ್ನು ನಡೆಸಲಾಗುವುದು ಮತ್ತು ಎನ್ ಡಿಡಿಟಿಸಿ, ಏಮ್ಸ್  ಸಮನ್ವಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ವಿವರಿಸಿದರು.

ಡಾ. ಧವನ್ ಅವರು ತರಬೇತಿ ಚೌಕಟ್ಟಿನ ಬಗ್ಗೆ ವಿವರಣೆ ನೀಡಿದರು, ಇದರಲ್ಲಿ ವೈದ್ಯರಿಗಾಗಿ ಆನ್ಲೈನ್ ಅಧಿವೇಶನಗಳು, ವೈದ್ಯರು, ದಾದಿಯರು ಮತ್ತು ಆಪ್ತಸಮಾಲೋಚಕರಿಗಾಗಿ ಆನ್ ಲೈನ್ ಸ್ವಯಂ ಗತಿಯ  ಮಾಡ್ಯೂಲ್ ಗಳು ಮತ್ತು ನಿಯೋಜಿತ ಸಿಬ್ಬಂದಿಗೆ ಆಫ್ ಲೈನ್ ತರಬೇತಿ ಸೇರಿವೆ. ಈ ಪಠ್ಯಕ್ರಮವು ಮದ್ಯಪಾನ, ಗಾಂಜಾ, ಒಪಿಯಾಡ್ ಗಳು, ನಿದ್ರೆ ಮಾತ್ರೆಗಳು ಮತ್ತು ಇನ್ಹೇಲೆಂಟ್ ಗಳು ಸೇರಿದಂತೆ ವಿವಿಧ ವಸ್ತುಗಳನ್ನು ಒಳಗೊಂಡಿದೆ, ಜೊತೆಗೆ ಮಹಿಳೆಯರು ಮತ್ತು ಹದಿಹರೆಯದವರು ಸೇರಿದಂತೆ ನಿರ್ದಿಷ್ಟ ಗುಂಪುಗಳಲ್ಲಿನ ಮಾದಕ ದ್ರವ್ಯ ಬಳಕೆಯಿಂದಾಗುವ ಅಸ್ವಸ್ಥತೆಗಳ ನಿರ್ವಹಣೆಯನ್ನು ಒಳಗೊಂಡಿದೆ.

ಕಾರ್ಯಕ್ರಮದ ಅವಧಿಯಲ್ಲಿ, ಶ್ರೀ ಜೆ.ಪಿ. ನಡ್ಡಾ ಅವರು ಮಾದಕ ದ್ರವ್ಯ ವ್ಯಸನಮುಕ್ತಿ ಕಾರ್ಯಕ್ರಮದ (ಡಿಡಿಎಪಿ) ಅಡಿಯಲ್ಲಿರುವ ಎಲ್ಲಾ ಆರು ಸಂಸ್ಥೆಗಳಿಂದ ವೈದ್ಯರು ಮತ್ತು ವೈದ್ಯಕೀಯ ಅಧಿಕಾರಿಗಳಿಗಾಗಿ ನಡೆಸಲಾಗುವ ಆನ್ಲೈನ್ ಲೈವ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಾದಿಯರು, ಸಮುದಾಯ ಆರೋಗ್ಯ ಅಧಿಕಾರಿಗಳು  ಮತ್ತು ಸಹಾಯಕ ದಾದಿ ಮಿಡ್ ವೈಫ್ ಗಳಿಗಾಗಿ   ಆನ್ಲೈನ್ ಸ್ವಯಂ-ಗತಿಯ ತರಬೇತಿ ಕಾರ್ಯಕ್ರಮವನ್ನೂ ಅವರು ಉದ್ಘಾಟಿಸಿದರು. ಕೇಂದ್ರ ಆರೋಗ್ಯ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಮತ್ತು ಇತರ ಗಣ್ಯರೊಂದಿಗೆ 'ಮಾದಕ ದ್ರವ್ಯ ಬಳಕೆಯಿಂದಾಗುವ ಅಸ್ವಸ್ಥತೆ: ವೈದ್ಯರ ಕೈಪಿಡಿ (ವ್ಯಸನದಿಂದಾಗುವ ಅಸ್ವಸ್ಥತೆಗಳ ನಿರ್ವಹಣೆ)' ಯ ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಿದರು.

ಮಾದಕ ದ್ರವ್ಯ ವ್ಯಸನ ಮುಕ್ತಿಗೊಳಿಸುವ ಕಾರ್ಯಕ್ರಮದ (ಡಿಡಿಎಪಿ) ಬಗ್ಗೆ

ಈ ತರಬೇತಿ ಕಾರ್ಯಕ್ರಮವನ್ನು ಮಾದಕ ದ್ರವ್ಯ ವ್ಯಸನ ಮುಕ್ತಿಗೊಳಿಸುವ ಕಾರ್ಯಕ್ರಮದ (ಡಿಡಿಎಪಿ) ಅಡಿಯಲ್ಲಿರುವ ಆರು ಕೇಂದ್ರ ಸರ್ಕಾರಿ ಸಂಸ್ಥೆಗಳ ಮೂಲಕ ನಡೆಸಲಾಗುತ್ತದೆ: ಘಾಜಿಯಾಬಾದ್ ನಲ್ಲಿರುವ ರಾಷ್ಟ್ರೀಯ ಮಾದಕ ದ್ರವ್ಯ ಅವಲಂಬನೆ ಚಿಕಿತ್ಸಾ ಕೇಂದ್ರ (ಎನ್ ಡಿ ಡಿ ಟಿ ಸಿ, ಏಮ್ಸ್, ನವದೆಹಲಿ); ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, ಬೆಂಗಳೂರು; ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಚಂಡೀಗಢ; ಕೇಂದ್ರ ಮಾನಸಿಕ ರೋಗಗಳ ಸಂಸ್ಥೆ, ರಾಂಚಿ; ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ, ನವದೆಹಲಿ; ಮತ್ತು ಏಮ್ಸ್ ಭುವನೇಶ್ವರ. ಎನ್ ಡಿಡಿಟಿಸಿ, ಏಮ್ಸ್ ಸಾಮರ್ಥ್ಯ ವೃದ್ಧಿ  ಉಪಕ್ರಮದ ಸಮಗ್ರ ಅನುಷ್ಠಾನವನ್ನು ಸಮನ್ವಯಗೊಳಿಸುತ್ತದೆ.

ಈ ಕಾರ್ಯಕ್ರಮವು ಆನ್ ಲೈನ್ ಲೈವ್ ತರಬೇತಿ, ಪ್ರತ್ಯಕ್ಷ  ತರಬೇತಿ ಮತ್ತು ಆನ್ ಲೈನ್ ಸ್ವಯಂ-ಗತಿಯ ಕೋರ್ಸ್ ಗಳನ್ನು ಒಳಗೊಂಡ ಮಿಶ್ರಿತ ಕಲಿಕಾ విಧಾನವನ್ನುಅಳವಡಿಸಿಕೊಳ್ಳುತ್ತದೆ. ವೈದ್ಯರು ಮತ್ತು ವೈದ್ಯಕೀಯ ಅಧಿಕಾರಿಗಳಿಗಾಗಿ ಆನ್ ಲೈನ್ ಲೈವ್ ತರಬೇತಿಯು 12 ವಾರಗಳ ಅವಧಿಯಲ್ಲಿ ವಾರಕ್ಕೊಮ್ಮೆ ಅಧಿವೇಶನಗಳನ್ನು ಒಳಗೊಂಡಿರುತ್ತದೆ, ಇದು ಸೈದ್ಧಾಂತಿಕ ಉಪನ್ಯಾಸಗಳನ್ನು ಕ್ಲಿನಿಕಲ್ ಕೇಸ್ ಚರ್ಚೆಗಳೊಂದಿಗೆ ಸಂಯೋಜಿಸುತ್ತದೆ. ಆರು ನಿಯೋಜಿತ ಸಂಸ್ಥೆಗಳು ವಾರಕ್ಕೆ ಒಟ್ಟು 300 ಭಾಗವಹಿಸುವವರ ಸಾಮರ್ಥ್ಯದೊಂದಿಗೆ ಏಕಕಾಲದಲ್ಲಿ  ಅಧಿವೇಶನಗಳನ್ನು ನಡೆಸಲಿವೆ. ಭಾಗವಹಿಸುವ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಸಾಮಾನ್ಯ ಪಠ್ಯಕ್ರಮವನ್ನು ಬಳಸಿ ಐದು ದಿನಗಳ ಕಾರ್ಯಕ್ರಮಗಳ ಮೂಲಕ ವೈಯಕ್ತಿಕ ತರಬೇತಿಯನ್ನು ನೀಡಲಾಗುತ್ತದೆ.

ವಿವಿಧ ವರ್ಗದ ಆರೋಗ್ಯ ಸಿಬ್ಬಂದಿಗೆ ಸ್ವಯಂ ಗತಿಯ  ಆನ್ ಲೈನ್ ಕಲಿಕಾ ಮಾಡ್ಯೂಲ್ ಗಳು ಸಹ ಲಭ್ಯವಿರುತ್ತವೆ. ವೈದ್ಯರು ಎನ್ ಡಿಡಿಟಿಸಿ ಅಭಿವೃದ್ಧಿಪಡಿಸಿದ ಎನ್ ಎ ಎ ಟಿ ಆನ್ ಲೈನ್ ಕೋರ್ಸ್ ಗೆ ಪ್ರವೇಶ ಪಡೆಯುತ್ತಾರೆ, ಹಾಗೂ ನಿಮ್ಹಾನ್ಸ್ ಅಭಿವೃದ್ಧಿಪಡಿಸಿದ ಅಡಿಕ್ಷನ್ ಆರ್ ಎಕ್ಸ್ ಅಪ್ಲಿಕೇಶನ್ ಚಿಕಿತ್ಸೆಗೆ ಸಂಬಂಧಿಸಿದ ಔಷಧ ಶಿಫಾರಸುಗೆ ಹೆಚ್ಚುವರಿ ಬೆಂಬಲವನ್ನು ನೀಡುತ್ತದೆ. ಆಪ್ತಸಮಾಲೋಚಕರು ಮತ್ತು ಮನೋವಿಜ್ಞಾನಿಗಳಿಗೆ ನಿಮ್ಹಾನ್ಸ್ ಇ-ಲರ್ನಿಂಗ್ ಮಾಡ್ಯೂಲ್ಗಳನ್ನು ಬಳಸಲಾಗುತ್ತದೆ,  ಅದೇ ರೀತಿ  ಎನ್ ಡಿಡಿಟಿಸಿಯ ಆನ್ ಲೈನ್ ಕೋರ್ಸ್ ದಾದಿಯರು, ಸಿಎಚ್ ಒಗಳು ಮತ್ತು ಎಎನ್ ಎಮ್ ಗಳ ತರಬೇತಿಗೆ ಬೆಂಬಲ ನೀಡುತ್ತದೆ. ತರಬೇತಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಸಂಬಂಧಿತ ಡಿಡಿಎಪಿ  ಸಂಸ್ಥೆಗಳಿಂದ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.

ಈ ಉಪಕ್ರಮವು ಮಾದಕ ದ್ರವ್ಯ ಬಳಕೆಯಿಂದಾಗುವ ಅಸ್ವಸ್ಥತೆಯ ಚಿಕಿತ್ಸಾ ಸೇವೆಗಳ ವಿತರಣೆಯಲ್ಲಿ ತೊಡಗಿರುವ ವೈದ್ಯರು, ದಾದಿಯರು, ಆಪ್ತಸಮಾಲೋಚಕರು, ಮನೋವಿಜ್ಞಾನಿಗಳು, ಸಮಾಜ ಸೇವಕರು ಮತ್ತು ಇತರ ವೈದ್ಯಕೀಯ ಮತ್ತು ಸಂಬಂಧೊತ ಆರೋಗ್ಯ ಸಿಬ್ಬಂದಿಯನ್ನು ಒಳಗೊಳ್ಳುತ್ತದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್ ಎಚ್ ಎಂ) ಮೂಲಕ ರಾಜ್ಯ ಸರ್ಕಾರಗಳು ಹಾಗೂ ಸಶಸ್ತ್ರ ಪಡೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ರೈಲ್ವೆ ಸೇರಿದಂತೆ ಕೇಂದ್ರ ಸರ್ಕಾರಿ ಸೇವೆಗಳಿಂದ ಭಾಗವಹಿಸುವವರನ್ನು ನಾಮನಿರ್ದೇಶನ ಮಾಡಲಾಗುತ್ತದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಧನಸಹಾಯ ಪಡೆಯುವ ವ್ಯಸನಮುಕ್ತಿ ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯೂ ಈ ಉಪಕ್ರಮದ ವ್ಯಾಪ್ತಿಗೆ ಒಳಪಡುತ್ತಾರೆ.

ವಿವಿಧ ರಾಜ್ಯಗಳಿಂದ ಆನ್ ಲೈನ್ ಮತ್ತು ಆಫ್ ಲೈನ್ ತರಬೇತಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಡಿಡಿಎಪಿ ಸಂಸ್ಥೆಗಳ ಮೂಲಕ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಈಗಾಗಲೇ 800 ಕ್ಕೂ ಹೆಚ್ಚು ನಾಮನಿರ್ದೇಶನಗಳು ಸ್ವೀಕರಿಸಲ್ಪಟ್ಟಿವೆ. ಇದಲ್ಲದೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಬೆಂಬಲಿತ ವ್ಯಸನಮುಕ್ತಿ ಕೇಂದ್ರಗಳ ಸುಮಾರು 150 ಸಿಬ್ಬಂದಿ ಮುಂದಿನ ಎರಡು ತಿಂಗಳುಗಳಲ್ಲಿ ಆಫ್ ಲೈನ್ ತರಬೇತಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ತರಬೇತಿ ಕಾರ್ಯಕ್ರಮವು ಆರು ನಿಯೋಜಿತ ಸಂಸ್ಥೆಗಳ ಅಸ್ತಿತ್ವದಲ್ಲಿರುವ ಕ್ಲಿನಿಕಲ್ ಪರಿಣತಿ, ಬಹುಶಿಸ್ತೀಯ ಅಧ್ಯಾಪಕರು, ಶೈಕ್ಷಣಿಕ ಮೂಲಸೌಕರ್ಯ ಮತ್ತು ಇ-ಲರ್ನಿಂಗ್ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತದೆ.

ಈ ಸಂದರ್ಭದಲ್ಲಿ ಬಿಡುಗಡೆಯಾದ 'ಮಾದಕ ದ್ರವ್ಯ ಬಳಕೆಯಿಂದಾಗುವ ಅಸ್ವಸ್ಥತೆ: ವೈದ್ಯರ ಕೈಪಿಡಿ (ವ್ಯಸನಕಾರಿ ಅಸ್ವಸ್ಥತೆಗಳ ನಿರ್ವಹಣೆ)'ಯ ಎರಡನೇ ಆವೃತ್ತಿಯು ಮಾದಕ ದ್ರವ್ಯ ಬಳಕೆ ಅಸ್ವಸ್ಥತೆಗಳ ಮೌಲ್ಯಮಾಪನ ಮತ್ತು ನಿರ್ವಹಣೆಯ ಕುರಿತು ವೈದ್ಯರಿಗೆ ಕಾರ್ಯಸಾಧ್ಯವಾದ ಮಾರ್ಗದರ್ಶನವನ್ನು ನೀಡುತ್ತದೆ. ಮೊದಲ ಬಾರಿಗೆ 2005 ರಲ್ಲಿ ಪ್ರಕಟವಾದ ಈ ಕೈಪಿಡಿಯನ್ನು, ಕಳೆದ ಎರಡು ದಶಕಗಳಲ್ಲಿ ವ್ಯಸನದ ವೈಜ್ಞಾನಿಕ ತಿಳುವಳಿಕೆ, ಚಿಕಿತ್ಸಾ ವಿಧಾನಗಳು ಮತ್ತು ಸೇವಾ ವಿತರಣೆಯಲ್ಲಿ ಆಗಿರುವ ಮಹತ್ವದ ಪ್ರಗತಿಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ವ್ಯಾಪಕವಾಗಿ ಪರಿಷ್ಕರಿಸಲಾಗಿದೆ. 

ವಿಶೇಷ ವ್ಯಸನಮುಕ್ತಿ ಚಿಕಿತ್ಸಾ ಕೇಂದ್ರಗಳು ಮತ್ತು ಸಾಮಾನ್ಯ ಆರೋಗ್ಯ ರಕ್ಷಣಾ ಕೇಂದ್ರಗಳೆರಡರಲ್ಲೂ ಕೆಲಸ ಮಾಡುವ ವೈದ್ಯರಿಗಾಗಿ ವಿನ್ಯಾಸಗೊಳಿಸಲಾದ ಈ ಪರಿಷ್ಕೃತ ಕೈಪಿಡಿಯು ಮಾದಕ ದ್ರವ್ಯ ಬಳಕೆಯಿಂದಾಗುವ ಅಸ್ವಸ್ಥತೆಗಳನ್ನು ಹೆಚ್ಚಿನ ಆತ್ಮವಿಶ್ವಾಸ ಮತ್ತು ದಕ್ಷತೆಯಿಂದ ಗುರುತಿಸಲು, ಮೌಲ್ಯಮಾಪನ ಮಾಡಲು ಮತ್ತು ನಿರ್ವಹಿಸಲು ಅವರ ಸಾಮರ್ಥ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಇದು ವೈಜ್ಙಾನಿಕ ಸಾಕ್ಷ್ಯಾಧಾರಿತ ವ್ಯಸನಮುಕ್ತಿ ಚಿಕಿತ್ಸೆಯ ವಿತರಣೆಯನ್ನು ಬಲಪಡಿಸುವಲ್ಲಿ ಮತ್ತು ದೇಶಾದ್ಯಂತ ಗುಣಮಟ್ಟದ ಆರೈಕೆಯ ಎಟುಕುವಿಕೆಯನ್ನು ಸುಧಾರಿಸುವಲ್ಲಿ ಮೌಲ್ಯಯುತ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ಹಿನ್ನೆಲೆ

ಜೂನ್ 2026 ರಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 'ಮಾದಕ ದ್ರವ್ಯ ನಿಯಂತ್ರಣದ ದೃಷ್ಟಿಕೋನ ದಾಖಲೆ: 2026-2029' ಅನ್ನು ಬಿಡುಗಡೆ ಮಾಡಿದರು, ಇದು ಮುಂದಿನ ಮೂರು ವರ್ಷಗಳಲ್ಲಿ ಸಂಪೂರ್ಣ ಮಾದಕ ದ್ರವ್ಯ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ಎದುರಿಸಲು ಭಾರತ ಸರ್ಕಾರದ ಕಾರ್ಯತಂತ್ರವನ್ನು ರೂಪಿಸುತ್ತದೆ. ದೃಷ್ಟಿಕೋನ ದಾಖಲೆಗೆ ಅನುಗುಣವಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಮಾರ್ಚ್ 2029 ರ ವೇಳೆಗೆ ವ್ಯಸನಮುಕ್ತಿ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ವೈದ್ಯಕೀಯ ಮತ್ತು ಸಂಬಂಧಿತ ಆರೋಗ್ಯ ಸಿಬ್ಬಂದಿ ಸೇರಿದಂತೆ 10,000 ಸೇವಾ ಪೂರೈಕೆದಾರರ ಸಾಮರ್ಥ್ಯವನ್ನು ಹೆಚ್ಚಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ 2,000 ಸೇವಾ ಪೂರೈಕೆದಾರರಿಗೆ ತರಬೇತಿ ನೀಡುವ ಗುರಿಯನ್ನು ಸಚಿವಾಲಯ ಹೊಂದಿದೆ, ನಂತರ 2027-28 ರಲ್ಲಿ 3,000 ಮತ್ತು 2028-29 ರಲ್ಲಿ 5,000 ಜನರಿಗೆ ತರಬೇತಿ ನೀಡಲಾಗುವುದು.

ಈ ಉಪಕ್ರಮದ ಮೂಲಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದಕ್ಷ, ಸಾಕ್ಷ್ಯಾಧಾರಿತ ಮತ್ತು ರೋಗಿ ಕೇಂದ್ರಿತ ವ್ಯಸನಮುಕ್ತಿ ಆರೈಕೆಯ ಲಭ್ಯತೆಯನ್ನು   ವಿಸ್ತರಿಸಲು, ಆರೋಗ್ಯ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ಸಂಪರ್ಕಗಳನ್ನು ಬಲಪಡಿಸಲು ಮತ್ತು 'ನಶೆ ಮುಕ್ತ ಭಾರತ'ದತ್ತ ರಾಷ್ಟ್ರೀಯ ಬದ್ಧತೆಗೆ ಕೊಡುಗೆ ನೀಡಲು ಶ್ರಮಿಸುತ್ತದೆ.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲಿಲ ಶ್ರೀವಾಸ್ತವ; ರಾಷ್ಟ್ರೀಯ ಆರೋಗ್ಯ ಅಭಿಯಾನದ ಹೆಚ್ಚುವರಿ ಕಾರ್ಯದರ್ಶಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಆರಾಧನಾ ಪಟ್ನಾಯಕ್; ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ. ಲವನೀಶ್ ಜಿ. ಕೃಷ್ಣ; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ. (ಶ್ರೀಮತಿ) ವಿನೋದ್ ಕೊತ್ವಾಲ್ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುಧಾಂಶು ಪಂತ್ ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಹಾಗೂ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು, ಆರು ನಿಯೋಜಿತ ಡಿಡಿಎಪಿ ಸಂಸ್ಥೆಗಳ ಮುಖ್ಯಸ್ಥರು ಮತ್ತು ಅಧ್ಯಾಪಕರು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಅಧಿಕಾರಿಗಳು, ಶಿಕ್ಷಣ ಸಚಿವಾಲಯ ಮತ್ತು ಕೇಂದ್ರ ಸರ್ಕಾರದ ಆರೋಗ್ಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಾಮನಿರ್ದೇಶಿತ ವೈದ್ಯರು ಮತ್ತು ಸಂಬಂಧಿತ ಆರೋಗ್ಯ ವೃತ್ತಿಪರರೊಂದಿಗೆ ವಾಸ್ತವೋಪಮವಾಗಿ (ವರ್ಚುವಲ್) ಭಾಗವಹಿಸಿದರು.

 

*****


(ಪ್ರಕಟಣೆ ಐ.ಡಿ.: 2328841) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Assamese , Punjabi , Tamil