ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಭಾರತದ ಸಾಂಸ್ಕೃತಿಕ ಪರಂಪರೆ, ಸ್ಥಳೀಯ ಕರಕುಶಲಗಾರರಿಗೆ ‘ಆಭಾರ್ ಕಲೆಕ್ಷನ್’ ಮೂಲಕ ಜಿಇಎಂನಲ್ಲಿ ಉತ್ತೇಜನ


10 ರಾಜ್ಯ ಹಾಗೂ ಕೇಂದ್ರ ಮಟ್ಟದ ಕೈಮಗ್ಗ ಮತ್ತು ಕರಕುಶಲ ವಸ್ತು ಭಂಡಾರಗಳಿಂದ 294 ಉತ್ಪನ್ನಗಳ ಪಟ್ಟಿಯನ್ನು ಒಳಗೊಂಡಿರುವ ಆಭಾರ್ (AABHAR) ಸಂಗ್ರಹ

ಪ್ರಕಟಣಾ ದಿನಾಂಕ: 26 OCT 2026 2:42PM by PIB Bengaluru

ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಹಾಗೂ ಸ್ಥಳೀಯ ಕರಕುಶಲಗಾರರು, ನೇಕಾರರು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್‌ (GeM) ‘ದಿ ಆಭಾರ್ ಕಲೆಕ್ಷನ್’ ಎಂಬ ವಿಶೇಷ ಡಿಜಿಟಲ್ ಮಳಿಗೆಯನ್ನು ಉತ್ತೇಜಿಸುತ್ತಿದೆ. ‘ಆಭಾರ್ ಕಲೆಕ್ಷನ್’ನಲ್ಲಿ ದೇಶದ ವಿವಿಧ ಭಾಗಗಳ ವಿಶಿಷ್ಟ ಉಡುಗೊರೆ ವಸ್ತುಗಳು, ಹ್ಯಾಂಪರ್‌ಗಳು, ಕೈಮಗ್ಗ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಲಾಗಿದೆ. “ಒಂದು ಜಿಲ್ಲೆ -ಒಂದು ಉತ್ಪನ್ನ’’ (ಒಡಿಒಪಿ) ಯೋಜನೆ ಹಾಗೂ ಭೌಗೋಳಿಕ ಗುರುತು (ಜಿಐ) ಟ್ಯಾಗ್‌ ಹೊಂದಿರುವ ಉತ್ಪನ್ನಗಳಿಗೆ ಈ ಸಂಗ್ರಹದಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ. ಸರ್ಕಾರಿ ಖರೀದಿದಾರರಿಗೆ ಪ್ರಾದೇಶಿಕ ವೈಶಿಷ್ಟ್ಯ ಹೊಂದಿರುವ ಉತ್ಪನ್ನಗಳನ್ನು ಸುಲಭವಾಗಿ ಖರೀದಿಸಲು ಈ ಡಿಜಿಟಲ್ ವೇದಿಕೆ ಸಹಕಾರಿಯಾಗಲಿದೆ. ಇದರ ಮೂಲಕ ಸ್ಥಳೀಯ ಕಲಾವಿದರು, ನೇಕಾರರು, ಗ್ರಾಮೀಣ ಉದ್ಯಮಿಗಳು ಹಾಗೂ ಮಹಿಳಾ ನೇತೃತ್ವದ ಉದ್ಯಮಗಳಿಗೆ ಮಾರುಕಟ್ಟೆ ಅವಕಾಶಗಳು ವಿಸ್ತರಿಸಲಿವೆ.

ಪ್ರಸ್ತುತ ‘ಆಭಾರ್ ಕಲೆಕ್ಷನ್’ನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ 10 ಕೈಮಗ್ಗ ಹಾಗೂ ಕರಕುಶಲ ವಸ್ತುಗಳ ಎಂಪೋರಿಯಂಗಳಿಂದ 294 ಉತ್ಪನ್ನಗಳ ಕ್ಯಾಟಲಾಗ್‌ಗಳು ಸೇರಿವೆ. ಅವುಗಳಲ್ಲಿ, ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂನ ಕಾಟೇಜ್, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಖಾದಿ ಇಂಡಿಯಾ, ಗಾರ್ವಿ ಗುರ್ಜರಿ (ಗುಜರಾತ್‌), ಹಿಮ್‌ಕ್ರಾಫ್ಟ್ಸ್ (ಹಿಮಾಚಲ ಪ್ರದೇಶ), ಝಾರ್‌ಕ್ರಾಫ್ಟ್ (ಜಾರ್ಖಂಡ್‌), ಕಾವೇರಿ (ಕರ್ನಾಟಕ), ಮೃಗನಯನಿ, (ಮಧ್ಯಪ್ರದೇಶ) ಮರಹತಿ (ಮಹಾರಾಷ್ಟ್ರ), ಪೂರ್ವಶ್ರೀ (ಈಶಾನ್ಯ ರಾಜ್ಯಗಳ), ಪೂಂಪುಹಾರ್ (ತಮಿಳುನಾಡು) ಸೇರಿವೆ.

ಇನ್ನೂ ಏಳು ಸರ್ಕಾರಿ ಸಂಸ್ಥೆಗಳು ಮತ್ತು ಎಂಪೋರಿಯಂಗಳು ಮಾರಾಟಗಾರರಾಗಿ ನೋಂದಣಿ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ಹಂತದಲ್ಲಿವೆ. ಅವುಗಳು ಶೀಘ್ರದಲ್ಲೇ ತಮ್ಮ ಉತ್ಪನ್ನಗಳನ್ನು ‘ಆಭಾರ್ ಕಲೆಕ್ಷನ್’ನಲ್ಲಿ ಸೇರಿಸುವ ನಿರೀಕ್ಷೆಯಿದೆ. ಈ ಸಂಸ್ಥೆಗಳಲ್ಲಿ ಕಾಫಿ ಬೋರ್ಡ್‌, ಪಶ್ಚಿಮ ಬಂಗಾಳದ ಮಂಜುಷಾ ಮತ್ತು ಬಿಸ್ವ ಬಾಂಗ್ಲಾ, ಜಮ್ಮು-ಕಾಶ್ಮೀರ ಹ್ಯಾಂಡ್‌ಲೂಮ್‌ ಅಂಡ್‌ ಹ್ಯಾಂಡಿಕ್ರಾಫ್ಟ್ಸ್‌ ಮಾರ್ಕೆಟಿಂಗ್‌ ಕಾರ್ಪೊರೇಷನ್‌, ನಾಗಾಲ್ಯಾಂಡ್‌ನ ಮೆರಾಕೈ, ಒಡಿಶಾದ ಉತ್ಕಲಿಕಾ ಮತ್ತು ಮಣಿಪುರದ ಪಾಂಥೋಯಿಬಿ ಸೇರಿವೆ. ಇವುಗಳ ಸೇರ್ಪಡೆಯಿಂದ ದೇಶದ ವಿವಿಧ ಪ್ರದೇಶಗಳ ಉತ್ಪನ್ನಗಳಿಗೆ ಹೆಚ್ಚಿನ ಪ್ರತಿನಿಧಿತ್ವ ದೊರೆಯಲಿದ್ದು, ಸಂಗ್ರಹದಲ್ಲಿರುವ ವಸ್ತುಗಳ ವೈವಿಧ್ಯತೆಯೂ ವಿಸ್ತರಿಸಲಿದೆ.

‘ಆಭಾರ್ ಕಲೆಕ್ಷನ್’ನಲ್ಲಿ ಕರಕುಶಲ ವಸ್ತುಗಳು, ಕೈಮಗ್ಗ ಉತ್ಪನ್ನಗಳು, ಸಾಂಪ್ರದಾಯಿಕ ಆಹಾರ ಪದಾರ್ಥಗಳು, ಪ್ಯಾಂಟ್ರಿ ವಸ್ತುಗಳು ಹಾಗೂ ವೈಯಕ್ತಿಕ ಆರೈಕೆ ಉತ್ಪನ್ನಗಳು ಲಭ್ಯವಿವೆ. ಇದರಲ್ಲಿ ಸರ್ಕಾರಿ ಸಂಸ್ಥೆಗಳು ಅಧಿಕೃತ ಸಮಾರಂಭಗಳು, ಸಮ್ಮೇಳನಗಳು, ರಾಜ್ಯ ಕಾರ್ಯಕ್ರಮಗಳು, ವಿದೇಶಿ ಪ್ರತಿನಿಧಿಗಳ ಭೇಟಿ, ಉದ್ಯೋಗಿಗಳ ಗೌರವ ಸಮಾರಂಭಗಳು, ನಿವೃತ್ತಿ ಕಾರ್ಯಕ್ರಮಗಳು ಹಾಗೂ ಹಬ್ಬದ ಸಂದರ್ಭಗಳಿಗೆ ಈ ಉತ್ಪನ್ನಗಳನ್ನು ಉಡುಗೊರೆಯಾಗಿ ಖರೀದಿಸಬಹುದು.

‘ಆಭಾರ್ ಕಲೆಕ್ಷನ್ 2026’ ಉಪಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಇಎಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಿಹಿರ್ ಕುಮಾರ್, “ದೇಶೀಯ ಕಲೆ ಮತ್ತು ಕರಕುಶಲ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಪರಿಚಯ ಕಲ್ಪಿಸುವಲ್ಲಿ ಈ ಸಂಗ್ರಹ ಮಹತ್ವದ ಹೆಜ್ಜೆಯಾಗಿದೆ ಎಂದರು. ಭಾರತದ ವೈವಿಧ್ಯಮಯ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವುದರ ಜೊತೆಗೆ, ಕೇಂದ್ರ ಮತ್ತು ರಾಜ್ಯಗಳ ಕೈಮಗ್ಗ ಹಾಗೂ ಕರಕುಶಲ ಎಂಪೋರಿಯಂಗಳ ಜಾಲದ ಮೂಲಕ ಹಿಂದುಳಿದ ಮಾರಾಟಗಾರರ ಗುಂಪುಗಳಿಗೆ ಆರ್ಥಿಕ ಸಬಲೀಕರಣ ಒದಗಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಜುಲೈ 2024 ರಲ್ಲಿ 'ದಿ ಆಭಾರ್ ಕಲೆಕ್ಷನ್' ಅನ್ನು ಆರಂಭಿಸುವುದರ ಹಿಂದಿನ ತಾರ್ಕಿಕತೆ ಮತ್ತು ಸದ್ಯದ ಅಭಿಯಾನವನ್ನು ವಿವರಿಸುತ್ತಾ, ಜಿಇಎಂನ ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಾಮಾಜಿಕ ಸೇರ್ಪಡೆಯ ಉಸ್ತುವಾರಿ ಶ್ರೀ ಅಜಿತ್ ಬಿ. ಚವಾಣ್, "ಜಿಇಎಂನಲ್ಲಿನ ಈ #VocalForLocal ಸ್ಟೋರ್‌ಫ್ರಂಟ್ ಮೂಲಕ ದೇಶದ ಸಾರ್ವಜನಿಕ ಖರೀದಿಯೊಂದಿಗೆ ಸಂಯೋಜಿಸುವ ಮೂಲಕ ದೇಶದ ಕುಶಲಕರ್ಮಿ ಪೂರಕ ವ್ಯವಸ್ಥೆಗೆ ಪರಿಣಾಮಕಾರಿ ಮಾರುಕಟ್ಟೆ ಸಂಪರ್ಕವನ್ನು ಒದಗಿಸುವುದು ಇದರ ಉದ್ದೇಶವಾಗಿತ್ತು" ಎಂದು ಹೇಳಿದರು.

ಈ ಸಂಗ್ರಹವು ಸಚಿವಾಲಯಗಳು, ಇಲಾಖೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು (ಪಿಎಸ್‌ಯುಗಳು) ಮತ್ತು ಇತರ ಸರ್ಕಾರಿ ಖರೀದಿದಾರರು ಸ್ಥಳೀಯ ಉತ್ಪನ್ನಗಳು ಮತ್ತು ಸ್ಥಳೀಯ ಜೀವನೋಪಾಯವನ್ನು ಬೆಂಬಲಿಸುವಾಗ ತಮ್ಮ ಉಡುಗೊರೆ ಅವಶ್ಯಕತೆಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ಸರ್ಕಾರಿ ಖರೀದಿದಾರರು https://gem.gov.in/Aabhar ನಲ್ಲಿ ಸಂಗ್ರಹವನ್ನು ಹುಡುಕಬಹುದು ಮತ್ತು #ವೋಕಲ್‌ಫಾರ್ಲೋಕಲ್ ಉಡುಗೊರೆ ಹ್ಯಾಂಪರ್‌ಗಳ ಸಂಗ್ರಹಣೆಯ ಮೂಲಕ ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಸ್ಥಳೀಯ ಉದ್ಯಮಗಳನ್ನು ಉತ್ತೇಜಿಸಲು ಕೊಡುಗೆ ನೀಡಬಹುದು.

 

*****


(ಪ್ರಕಟಣೆ ಐ.ಡಿ.: 2328442) ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Telugu