ಪ್ರಕಟಣಾ ದಿನಾಂಕ:
25 OCT 2026 3:22PM by PIB Bengaluru
ಮೋದಿ ಸರ್ಕಾರವು ಮಾದಕ ದ್ರವ್ಯಗಳ ವಿರುದ್ಧ ನೀಡಿರುವ ಮಾರಕ ಹೊಡೆತದ ಭಾಗವಾಗಿ, ಎನ್ ಸಿಬಿಯ 38 ತಂಡಗಳು ಅಸ್ಸಾಂ, ಮಿಜೋರಾಂ ಮತ್ತು ಮಣಿಪುರದಾದ್ಯಂತ 38 ಸ್ಥಳಗಳ ಮೇಲೆ ಏಕಕಾಲದಲ್ಲಿ 'ಆಪರೇಷನ್ ಟ್ರೈಡೆಂಟ್' ಮೂಲಕ ದಾಳಿ ನಡೆಸಿದೆ. ಈ ಕಾರ್ಯಾಚರಣೆಯು ಮಾದಕ ದ್ರವ್ಯಗಳ ವಿರುದ್ಧ ಮೋದಿ ಸರ್ಕಾರದ ಶೂನ್ಯ ಸಹಿಷ್ಣುತೆ ನೀತಿಗೆ ಅನುಗುಣವಾಗಿದೆ. ಅಂತರರಾಷ್ಟ್ರೀಯ ನಾರ್ಕೋ-ಆರ್ಥಿಕ ಸಿಂಡಿಕೇಟ್ ಗಳ ವಿರುದ್ಧ ಅಸ್ಸಾಂ, ಮಿಜೋರಾಂ ಮತ್ತು ಮಣಿಪುರದಾದ್ಯಂತ ಈ ಬೃಹತ್ ಮೂರು ರಾಜ್ಯಗಳ ಬಹು ಸಂಸ್ಥೆಗಳ ಜಂಟಿ ದಾಳಿಯನ್ನು ಪ್ರಾರಂಭಿಸಲಾಯಿತು. ಮಾದಕ ದ್ರವ್ಯ ನಿಯಂತ್ರಣದ ದೃಷ್ಟಿಕೋನ ದಾಖಲೆ (2026-2029) ಗೆ ಅನುಗುಣವಾಗಿ, ಈ ಕಾರ್ಯಾಚರಣೆಯು ಅತಾರಾಷ್ಟ್ರೀಯ ಸಿಂಡಿಕೇಟ್ ಗಳನ್ನು ಬೇರುಸಹಿತ ಕಿತ್ತೊಗೆಯಲು ಕೇವಲ ವಸ್ತುವನ್ನು ವಶಪಡಿಸಿಕೊಳ್ಳುವ ವಿಧಾನದಿಂದ 'ಜಾಲವನ್ನು ಧ್ವಂಸಗೊಳಿಸುವ ಮತ್ತು ಆರ್ಥಿಕ ಸರಪಳಿಯನ್ನು ನಾಶಮಾಡುವ ಕಾರ್ಯತಂತ್ರದ ಬದಲಾವಣೆಗೆ ಉದಾಹರಣೆಯಾಗಿದೆ.
'ಎಕ್ಸ್'ನಲ್ಲಿ ಹಂಚಿಕೊಂಡಿರುವ ಪೋಸ್ಟ್ ನಲ್ಲಿ ಕೇಂದ್ರ ಗೃಹ ಸಚಿವರಾದ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, "ಮಾದಕ ದ್ರವ್ಯಗಳ ವಿರುದ್ಧ ಮೋದಿ ಸರ್ಕಾರದ ಭಾರಿ ಪ್ರಹಾರಗಳು ಮುಂದುವರೆದಿವೆ... ನಮ್ಮ ಸಂಸ್ಥೆಗಳು ಅಕ್ಟೋಬರ್ 23 ರಂದು ಅಸ್ಸಾಂ, ಮಿಜೋರಾಂ ಮತ್ತು ಮಣಿಪುರದ 38 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ, ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲವೊಂದನ್ನು ಧ್ವಂಸಗೊಳಿಸಿವೆ. ಈ ಕಾರ್ಯಾಚರಣೆಯು ₹100 ಕೋಟಿ ಮೌಲ್ಯದ ಹವಾಲಾ ವಹಿವಾಟನ್ನು ಬಹಿರಂಗಪಡಿಸಿದೆ, 1,424 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ, ₹17.82 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ, 500 ಡೆಟೊನೇಟರ್ಗಳು ಮತ್ತು ₹12 ಲಕ್ಷ ನಗದು ವಶಪಡಿಸಿಕೊಂಡಿದೆ ಹಾಗೂ 18 ಜನರನ್ನು ಬಂಧಿಸಲು ಕಾರಣವಾಗಿದೆ.”
ʻʻಈ ಜಾಲವು 'ಡೆತ್ ಟ್ರಯಾಂಗಲ್ ಕಾರಿಡಾರ್' ಮೂಲಕ ಭಾರತ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಗಡಿಗಳಲ್ಲಿ ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುತ್ತಿತ್ತು. ಈ ಕಾರ್ಯಾಚರಣೆಯು ಡಿಸೆಂಬರ್ 31, 2029 ರೊಳಗೆ ಪ್ರತಿಯೊಂದು ಮಾದಕ ದ್ರವ್ಯ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಭಾರತದ ಹಿಮಾಲಯನ್ ಸಂಕಲ್ಪವನ್ನು ದೃಢೀಕರಿಸುತ್ತದೆ. ಮಾದಕ ದ್ರವ್ಯ ಜಾಲಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೆ ಭಾರತ ತನ್ನ ಪ್ರಹಾರವನ್ನು ಮುಂದುವರಿಸಲಿದೆ. ಕೇಂದ್ರ ಸಂಸ್ಥೆಗಳು ಮತ್ತು ಮೂರು ರಾಜ್ಯಗಳ ಪೊಲೀಸ್ ಪಡೆಗಳನ್ನು ಒಳಗೊಂಡ ಮಾದಕದ್ರವ್ಯ ನಿಗ್ರಹ ಪಡೆಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು" ಎಂದು ಹೇಳಿದ್ದಾರೆ.
ಆಪರೇಷನ್ ಟ್ರೈಡೆಂಟ್
ಮಾದಕವಸ್ತು ಕಳ್ಳಸಾಗಣೆ ನಿಯಂತ್ರಣ ದಳ (ಎನ್ ಸಿ ಬಿ ) 23 ಅಕ್ಟೋಬರ್ 2026 ರ ಬೆಳಗಿನ ಜಾವದಲ್ಲಿ ‘ಆಪರೇಷನ್ ಟ್ರೈಡೆಂಟ್’ ಅನ್ನು ಮುನ್ನಡೆಸಿತು. ಬಹು ಸಂಸ್ಥೆಗಳ ಸಹಯೋಗದ ಅತ್ಯುತ್ತಮ ಸಮನ್ವಯದಲ್ಲಿ, ಎನ್ ಸಿಬಿಯು ಮಿಜೋರಾಂ ಪೊಲೀಸ್ ಮತ್ತು ಜಾರಿ ನಿರ್ದೇಶನಾಲಯ ಜೊತೆ ಸಂಪೂರ್ಣ ಸಮನ್ವಯದೊಂದಿಗೆ ಪ್ರಮುಖ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಕಳ್ಳಸಾಗಣೆಯ ಜಾಲದ ಕಾರ್ಯಾಚರಣೆ ಮತ್ತು ಆರ್ಥಿಕ ಬೆನ್ನೆಲುಬನ್ನು ಮುರಿಯಲು ಬೃಹತ್, ಏಕಕಾಲಿಕ ಮಾರಕ ದಾಳಿಯನ್ನು ಪ್ರಾರಂಭಿಸಿತು.
ಮಿಜೋರಾಂನಲ್ಲಿನ ಮಾದಕ ದ್ರವ್ಯ ಕಿಂಗ್ಪಿನ್ ಗಳು ಮತ್ತು ಅವರ ಸಹಚರರನ್ನು ಗುರಿಯಾಗಿಸಲು, ಆಪರೇಷನ್ ಟ್ರೈಡೆಂಟ್ ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಕಾರ್ಯಾಚರಣೆಯ ಯೋಜನೆಯಲ್ಲಿ ಸಂಸ್ಥೆಗಳ ಸಹಕಾರಕ್ಕೆ ಒಂದು ಮಾದರಿಯಾಗಿದೆ. ಕೇಂದ್ರ ಮತ್ತು ರಾಜ್ಯ ಜಾರಿ ಸಂಸ್ಥೆಗಳ ನಡುವಿನ ದಿನಗಳ ಕಾಲದ ರಹಸ್ಯ ಗುಪ್ತಚರ ಮಾಹಿತಿ ಕ್ರೋಢೀಕರಣ, ಜಂಟಿ ಟಾರ್ಗೆಟ್-ಮ್ಯಾಪಿಂಗ್ ಮತ್ತು ಉನ್ನತ ಮಟ್ಟದ ತಾಂತ್ರಿಕ ಸಮಾಲೋಚನೆಗಳ ನಂತರ, ಈ ಕಾರ್ಯಾಚರಣೆಯನ್ನು ಸಿಂಡಿಕೇಟ್ ಗಳ ಸಾಗಣೆ ಕೇಂದ್ರಗಳು ಮತ್ತು ಅಕ್ರಮ ಆರ್ಥಿಕ ಸಂಪರ್ಕಗಳೆರಡರ ಮೇಲೆಯೂ ಏಕಕಾಲದಲ್ಲಿ ದಾಳಿ ಮಾಡಲು ವಿನ್ಯಾಸಗೊಳಿಸಲಾಗಿತ್ತು.
ಏಕೀಕೃತ ಕಮಾಂಡ್ ರಚನೆಯಡಿಯಲ್ಲಿ ಅತ್ಯಂತ ನಿಖರತೆಯಿಂದ ಕಾರ್ಯನಿರ್ವಹಿಸುತ್ತಾ, 38 ಬಹು-ಸಂಸ್ಥೆಗಳ ಜಂಟಿ ತಂಡಗಳನ್ನು ಮೂರು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಿಜೋರಾಂ ಮತ್ತು ಮಣಿಪುರದ ಮೊದಲೇ ಗುರುತಿಸಲಾದ 38 ಸ್ಥಳಗಳಲ್ಲಿ ಏಕಕಾಲಕ್ಕೆ ನಿಯೋಜಿಸಲಾಯಿತು. ಈ ಸಂಘಟಿತ ದಾಳಿಗಳು ಮಿಜೋರಾಂನ ಐಜ್ವಾಲ್, ಚಂಫೈ ಮತ್ತು ಕಾರ್ಯತಂತ್ರದ ಇಂಡೋ-ಮ್ಯಾನ್ಮಾರ್ ಗಡಿ ವ್ಯಾಪಾರ ನಗರವಾದ ಜೊಖಾವ್ತಾರ್ ಸೇರಿದಂತೆ ಪ್ರಮುಖ ನಗರ ಕೇಂದ್ರಗಳು ಮತ್ತು ಸೂಕ್ಷ್ಮ ಗಡಿ ಪ್ರದೇಶಗಳನ್ನು ವಿಸ್ತಾರವಾಗಿ ಒಳಗೊಂಡಿದ್ದವು. ಜೊತೆಗೆ ಮಣಿಪುರದ ಚುರಾಚಂದ್ಪುರ ಮತ್ತು ಅಸ್ಸಾಂನ ಕ್ಯಾಚಾರ್ ರವಾನೆ ಕಾರಿಡಾರ್ ನಲ್ಲಿರುವ ಸಂಬಂಧಿತ ಕಾರ್ಯಾಚರಣೆ ನೆಲೆಗಳ ಮೇಲೆಯೂ ದಾಳಿ ನಡೆಸಲಾಯಿತು. ಕಠಿಣ ಭೂಪ್ರದೇಶ ಮತ್ತು ವಿಶಾಲ ಭೌಗೋಳಿಕ ವ್ಯಾಪ್ತಿಯ ಹೊರತಾಗಿಯೂ, ಅತ್ಯುತ್ತಮ ಇಲಾಖಾ ಸಮನ್ವಯವು ಎಲ್ಲಾ ಶೋಧನೆಗಳು, ವಿಚಾರಣೆಗಳು ಮತ್ತು ಆರ್ಥಿಕ ತನಿಖೆಗಳನ್ನು ಏಕಕಾಲದಲ್ಲಿ ನಡೆಸುವುದನ್ನು ಖಚಿತಪಡಿಸಿತು. ಇದರಿಂದಾಗಿ ಶಂಕಿತರು ಪರಾರಿಯಾಗುವುದನ್ನು ಅಥವಾ ಅಕ್ರಮ ವಸ್ತುಗಳನ್ನು ಬಚ್ಚಿಡುವುದನ್ನು ತಡೆಯಲಾಯಿತು.
ಸಂಕ್ಷಿಪ್ತ ಹಿನ್ನೆಲೆ: ಅಂತಾರಾಷ್ಟ್ರೀಯ ಅಕ್ರಮ ಜಾಲದ ರಹಸ್ಯ ಬಯಲು
ಈ ಬಹು ರಾಜ್ಯ ಕಾರ್ಯಾಚರಣೆಯು, 360 ಡಿಗ್ರಿ ಸಂಪೂರ್ಣ ತನಿಖೆಗೆ ಗುರುತಿಸಲಾದ ಜಾಲದ ಪ್ರಕರಣಗಳಲ್ಲಿ ಎನ್ ಸಿಬಿ, ಮಿಜೋರಾಂ ಪೊಲೀಸ್ ಮತ್ತು ಜಾರಿ ನಿರ್ದೇಶನಾಲಯ ನಡೆಸಿದ ಸುದೀರ್ಘ, ಗುಪ್ತಚರ ಆಧಾರಿತ ತನಿಖೆಯ ಫಲಿತಾಂಶವಾಗಿದೆ. ಸುದೀರ್ಘ ತನಿಖೆಯು ಮ್ಯಾನ್ಮಾರ್ ಮೂಲದ ಕಿಂಗ್ಪಿನ್ ತಂಗ್ಚಿನ್ಟುವಾಂಗ್ ಅಲಿಯಾಸ್ ಚಿನ್ಟುವಾಂಗ್ ಅಲಿಯಾಸ್ ತ್ಲುವಾಂಗಾ (ಎನ್ ಸಿಬಿ, ಚಂಫೈ ಪೊಲೀಸ್ ಮತ್ತು ಮಿಜೋರಾಂ ಅಬಕಾರಿ ಇಲಾಖೆಯಾದ್ಯಂತ 10 ಕ್ಕೂ ಹೆಚ್ಚು ಎನ್ ಡಿ ಪಿ ಎಸ್ ಪ್ರಕರಣಗಳಲ್ಲಿ ಬೇಕಾಗಿದ್ದ ಅಪರಾಧಿ) ನೇತೃತ್ವದ ಪ್ರಸಿದ್ದ ಅಂತರರಾಷ್ಟ್ರೀಯ ಸಿಂಡಿಕೇಟ್ ಅನ್ನು ಬಯಲು ಮಾಡಿದೆ. ಈತ ಮ್ಯಾನ್ಮಾರ್–ಮಿಜೋರಾಂ–ಮಣಿಪುರ–ಅಸ್ಸಾಂ–ತ್ರಿಪುರಾ ಪ್ರದೇಶಗಳ ಮೂಲಕ ಭಾರತದ ಮೂಲ ಭೂಭಾಗ ಮತ್ತು ಬಾಂಗ್ಲಾದೇಶಕ್ಕೆ ಮೆಥಾಂಫೆಟಮೈನ್ ಮತ್ತು ಹೆರಾಯಿನ್ ಗಡಿಪಾರಿನ ಕಳ್ಳಸಾಗಣೆಯನ್ನು ನಿಯಂತ್ರಿಸುತ್ತಿದ್ದನು.
ತನಿಖೆಯ ಹಿಂದಿನ ಹಂತಗಳಲ್ಲಿ ಈ ಅಕ್ರಮ ಜಾಲದ ಪ್ರಮುಖ ಆಧಾರವಾದ ವ್ಯಕ್ತಿಗಳನ್ನು ಯಶಸ್ವಿಯಾಗಿ ಬಂಧಿಸಲಾಗಿತ್ತು:
ತಂಗ್ಚಿನ್ಟುವಾಂಗ್ ಅಲಿಯಾಸ್ ಚಿನ್ಟುವಾಂಗ್ ಅಲಿಯಾಸ್ ತ್ಲುವಾಂಗಾ (ಕಿಂಗ್ಪಿನ್): ತೀವ್ರವಾದ ಅಂತರ ರಾಜ್ಯಗಳ ನಡುವಿನ ಕಣ್ಗಾವಲು, ಗುಪ್ತಚರ ಮಾಹಿತಿ ಅಭಿವೃದ್ಧಿ ಮತ್ತು ನಿರಂತರ ಕಾರ್ಯಾಚರಣೆಗಳ ನಂತರ ದೆಹಲಿಯಿಂದ ಬಂಧಿಸಲಾಯಿತು.
ವುಂಗ್ ಖಾನ್ ಥಾವ್ನಾ (ಪ್ರಮುಖ ಸಹಾಯಕ): ಮ್ಯಾನ್ಮಾರ್ ಮೂಲದ ಸರಕುಗಳ ಸಾಗಣೆ ಮತ್ತು ತಲುಪಿಸುವಿಕೆಯನ್ನು ಸಂಯೋಜಿಸುತ್ತಿದ್ದ ನಿಕಟ ಸಹಚರ; ಈತನನ್ನು ಬಂಧಿಸಲಾಯಿತು ಮತ್ತು ನಂತರ ಕಠಿಣ ಪಿಐಟಿಎನ್ ಡಿ ಪಿ ಎಸ್ ಕಾಯ್ದೆಯಡಿಯಲ್ಲಿ ವಶಕ್ಕೆ ಪಡೆಯಲಾಯಿತು.
ಲಾಲ್ ರಾಂಪರಿ (ಮೂಲ ಹವಾಲಾ ಆಪರೇಟರ್): 8.8.2024 ರಂದು ಎನ್ ಸಿಬಿಯಿಂದ ಬಂಧಿಸಲ್ಪಟ್ಟಳು; ತನಿಖೆಯಲ್ಲಿ ಜಾಲಕ್ಕೆ ಸಂಬಂಧಿಸಿದ ಸುಮಾರು ₹100 ಕೋಟಿ ಅಕ್ರಮ ಹವಾಲಾ ವಹಿವಾಟು ಬೆಳಕಿಗೆ ಬಂದಿದೆ, ಇದು ಜಾರಿ ನಿರ್ದೇಶನಾಲಯದ ಜಂಟಿ ಕ್ರಮಕ್ಕೆ ಮತ್ತು ಅಕ್ರಮವಾಗಿ ಗಳಿಸಿದ ಆಸ್ತಿಗಳನ್ನು ಸ್ಥಗಿತಗೊಳಿಸಲು ಕಾರಣವಾಯಿತು.
ಸೈಫುದ್ದೀನ್ ಅಲಿಯಾಸ್ ಅಬು ಸಲೇಹ್ (ಅಸ್ಸಾಂ ಕಾರಿಡಾರ್ ಸಾಗಾಣಿಕೆ ಮುಖ್ಯಸ್ಥ): 20.11.2025 ರಂದು ಅಸ್ಸಾಂನ ಕ್ಯಾಚಾರ್ ನಿಂದ ಬಂಧಿಸಲಾಯಿತು; ಅಸ್ಸಾಂನಾದ್ಯಂತ ಮಾದಕ ದ್ರವ್ಯ ಸಾಗಣೆಯನ್ನು ಸಂಯೋಜಿಸುತ್ತಿದ್ದ ಮತ್ತು ಅನೇಕ ಎನ್ ಡಿ ಪಿ ಎಸ್ ಪ್ರಕರಣಗಳಿಗೆ ಸಂಪರ್ಕ ಹೊಂದಿದ್ದ ಪ್ರಮುಖ ಭಾರತೀಯ ಆಪರೇಟರ್.
ಈ ಮಹತ್ವದ ಪ್ರಗತಿಗಳಿಂದ ಸಿಕ್ಕ ವಿವರವಾದ ಆರ್ಥಿಕ ವಿವರಣೆಗಳು ಮತ್ತು ಡಿಜಿಟಲ್ ಫೊರೆನ್ಸಿಕ್ ತನಿಖೆಯು, ಸಹಾಯಕರು, ನಕಲಿ ಸಂಸ್ಥೆಗಳು ಮತ್ತು ಹಣದ ಮಧ್ಯವರ್ತಿಗಳ ವಿಶಾಲವಾದ ಜಾಲವನ್ನು ಬಹಿರಂಗಪಡಿಸಿತು, ಇದು 'ಆಪರೇಷನ್ ಟ್ರೈಡೆಂಟ್' ನ ಬೃಹತ್ ಮತ್ತು ಸಂಘಟಿತ ಅಗತ್ಯ ದಾಳಿಗೆ ಕಾರಣವಾಯಿತು.
*****