ಪ್ರಕಟಣಾ ದಿನಾಂಕ:
23 OCT 2026 3:13PM by PIB Bengaluru
ನವದೆಹಲಿಯ ಸಂಸತ್ ಭವನದ ಆವರಣದಲ್ಲಿರುವ ಪ್ರೇರಣಾ ಸ್ಥಳದಲ್ಲಿ ಇಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರು ಮತ್ತು ತುಮಕೂರು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ವಿ. ಸೋಮಣ್ಣ ಅವರ ನೇತೃತ್ವದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿ ಮತ್ತು 202ನೇ ವಿಜಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಲೋಕಸಭೆಯ ಸಭಾಪತಿ ಶ್ರೀ ಓಂ ಬಿರ್ಲಾ, ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್, ಸಂಸದರಾದ ಶ್ರೀ ಪಿ.ಸಿ. ಮೋಹನ್, ಡಾ. ಸುಧಾಕರ್, ಮಾಜಿ ಸಚಿವರಾದ ಶ್ರೀ ಮುರುಗೇಶ್ ನಿರಾಣಿ, ಶ್ರೀ ಬಸನಗೌಡ ಪಾಟೀಲ್ ಯತ್ನಾಳ್, ದೆಹಲಿಯಲ್ಲಿ ಕರ್ನಾಟಕದ ಮಾಜಿ ವಿಶೇಷ ಪ್ರತಿನಿಧಿ ಶ್ರೀ ಶಂಕರಗೌಡ ಪಾಟೀಲ್, ಕೂಡಲಸಂಗಮದ ಪೂಜ್ಯ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ, ಬೀದರ್ನ ಆಲೂರು ಸಿದ್ಧಾರೂಢ ಮಠದ ಶ್ರೀ ಶಂಕರಾನಂದ ಸ್ವಾಮೀಜಿ, ಕಕ್ಕಮಾರಿಯ ಗುರುದೇವ ಆಶ್ರಮದ ಶ್ರೀ ಆತ್ಮಾರಾಮ್ ಸ್ವಾಮೀಜಿ, ಚಳಕಾಪುರದ ಸಿದ್ಧಾರೂಢ ಮಠದ ಶ್ರೀ ವಿನಾಯಕ ಸ್ವಾಮೀಜಿ ಸೇರಿದಂತೆ ದೆಹಲಿ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಕನ್ನಡಿಗರು ಪಾಲ್ಗೊಂಡು ರಾಣಿ ಚೆನ್ನಮ್ಮ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ವಿ. ಸೋಮಣ್ಣ ಅವರು, ದೇಶದ ಅಪ್ರತಿಮ ವೀರ ವನಿತೆ, ಕಿತ್ತೂರಿನ ವೀರ ರಾಣಿ ಚೆನ್ನಮ್ಮ ಅವರ ಜಯಂತಿ ಹಾಗೂ ಬ್ರಿಟಿಷರ ವಿರುದ್ಧದ ಅವರ 202ನೇ ವಿಜಯೋತ್ಸವದ ಶುಭಾಶಯಗಳನ್ನು ದೇಶದ ಜನತೆಗೆ ಕೋರಿದರು.
ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದ ಲೋಕಸಭಾ ಸಭಾಪತಿ ಶ್ರೀ ಓಂ ಬಿರ್ಲಾ ಮತ್ತು ಕೇಂದ್ರ ಸಚಿವ ಶ್ರೀ ಸಿ.ಆರ್. ಪಾಟೀಲ್ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.
"ಕಿತ್ತೂರು ರಾಣಿ ಚೆನ್ನಮ್ಮ ಕೇವಲ ಯುದ್ಧ ಮಾಡಿದ ರಾಣಿಯಷ್ಟೇ ಅಲ್ಲ; ಅವರು ಒಂದು ಸಾಮ್ರಾಜ್ಯಶಾಹಿ ಶಕ್ತಿಗೆ ಸವಾಲೆಸೆದು, ಇತಿಹಾಸದಲ್ಲಿ ಎಂದಿಗೂ ಮರೆಯಾಗದ ಪ್ರತಿರೋಧದ ಸಂಕೇತವಾಗಿ ಉಳಿದಿದ್ದಾರೆ. ಇಂತಹ ವೀರ ವನಿತೆಯ ಸಾಧನೆಗಳನ್ನು ಆಚರಿಸುವ ಅವಕಾಶ ನಮಗೆ ಸಿಕ್ಕಿರುವುದು ಅತ್ಯಂತ ಸಂತೋಷದ ವಿಷಯ" ಎಂದು ಸಚಿವರು ಹೇಳಿದರು.
"ಭಾರತೀಯ ಸಂಸತ್ತಿನ ಈ ಪವಿತ್ರ ಸ್ಥಳದಲ್ಲಿ ವೀರ ವನಿತೆ ರಾಣಿ ಚೆನ್ನಮ್ಮ ಅವರ ಶೌರ್ಯ, ಧೈರ್ಯ ಮತ್ತು ಛಲವು ಇಂದು ದೇಶವನ್ನು ಕಾಯುವ ವೀರರಿಗೆ ಪ್ರೇರಣೆಯಾಗಿದೆ. ನಮ್ಮ ನಾಡು ಮತ್ತು ಭಾಷೆಯ ಮೇಲೆ ಪ್ರೀತಿ ಉಳ್ಳ ನಮಗೆಲ್ಲರಿಗೂ ಇದು ಹೆಮ್ಮೆಯ ವಿಷಯವಾಗಿದೆ. ನಾವೆಲ್ಲರೂ ಪ್ರತಿ ವರ್ಷವೂ ಇಲ್ಲಿ ಒಂದೆಡೆ ಸೇರಿ ಇಂತಹ ಮಹಾನ್ ವ್ಯಕ್ತಿಗಳನ್ನು ಸ್ಮರಿಸೋಣ" ಎಂದು ಅವರು ಕರೆ ನೀಡಿದರು.
ಪ್ರತಿ ವರ್ಷ ಈ ಕಾರ್ಯಕ್ರಮ ನಡೆಸಲು ಅನುಮತಿ ನೀಡಿ, ಎಲ್ಲರಿಗೂ ಸ್ಫೂರ್ತಿಯ ಶಕ್ತಿಯಾಗಿರುವ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ರಾಜ್ಯದ ಜನರ ಪರವಾಗಿ ಅವರು ಧನ್ಯವಾದ ಸಲ್ಲಿಸಿದರು.
ಅಲ್ಲದೆ, ಅನುಮತಿ ಮತ್ತು ಸಹಕಾರ ನೀಡಿದ ಲೋಕಸಭಾ ಸಭಾಪತಿ ಶ್ರೀ ಓಂ ಬಿರ್ಲಾ, ಲೋಕಸಭೆ ಹಾಗೂ ರೈಲ್ವೆ ಸಚಿವಾಲಯದ ಅಧಿಕಾರಿಗಳು ಮತ್ತು ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗು ಸಹ ಅವರು ಕೃತಜ್ಞತೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ಅವರು, ಕೇಂದ್ರ ಸಚಿವರಾದ ವಿ. ಸೋಮಣ್ಣ ಅವರು ಪ್ರತಿ ವರ್ಷ ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸುವ ಉಪಕ್ರಮ ಕೈಗೊಂಡಿರುವುದಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿದರು.
*****