ಪ್ರಕಟಣಾ ದಿನಾಂಕ:
22 OCT 2026 9:32PM by PIB Bengaluru
ನಿಮ್ಮೆಲ್ಲರಿಗೂ ನಮಸ್ಕಾರ! ಇದು ಹಬ್ಬದ ಕಾಲ; ದೇಶವು ಸಂಭ್ರಮಾಚರಣೆ, ಉತ್ಸಾಹ ಮತ್ತು ಚೈತನ್ಯದಿಂದ ತುಂಬಿದೆ. ಈ ಸಂತೋಷ ಮತ್ತು ಸಂಭ್ರಮದ ವಾತಾವರಣದಲ್ಲಿ, ವಿಶ್ವದ ಎಲ್ಲೆಡೆಯಿಂದ ಇಲ್ಲಿಗೆ ಆಗಮಿಸಿರುವ ಎಲ್ಲಾ ಸ್ನೇಹಿತರನ್ನು ನಾನು ಸ್ವಾಗತಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ.
ಸ್ನೇಹಿತರೆ,
ಈ ಎನ್ಡಿಟಿವಿ ಶೃಂಗಸಭೆಯು ಗಂಭೀರ ವಿಷಯಗಳ ಕುರಿತು ಚರ್ಚಿಸಲು ಮೀಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ 'ಹೊಸ ವಿಶ್ವ ಕ್ರಮ ಅಥವಾ ವ್ಯವಸ್ಥೆ'ಯ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರುವುದರಿಂದ, ಇಂತಹ ಜಾಗತಿಕ ಶೃಂಗಸಭೆಗಳ ಮಹತ್ವ ಇನ್ನಷ್ಟು ಹೆಚ್ಚಾಗುತ್ತದೆ.
ಸ್ನೇಹಿತರೆ,
'ವ್ಯವಸ್ಥೆಗಳ ನಡುವಿನ ಜಗತ್ತು' ಎಂಬ ವಿಷಯದ ಬಗ್ಗೆ ಮಾತನಾಡುವಾಗ, ನಾವು 2 ಸಂಗತಿಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮೊದಲನೆಯದಾಗಿ, ವಿಶ್ವ ವ್ಯವಸ್ಥೆಯು ಏಕೆ ಬದಲಾಗುತ್ತಿದೆ? ಇಂದಿನ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸಲು ಹಳೆಯ ಜಾಗತಿಕ ವ್ಯವಸ್ಥೆಯು ಏಕೆ ಅಸಮರ್ಥವಾಗಿದೆ? ಎರಡನೆಯದಾಗಿ, ಬದಲಾಗುತ್ತಿರುವ ಈ ಜಗತ್ತಿನಲ್ಲಿ ಭಾರತದ ಪಾತ್ರವೇನು?
ಸ್ನೇಹಿತರೆ,
ಮೊದಲ ಅಂಶವನ್ನು ವಿಸ್ತರಿಸಿ ಹೇಳುವುದಾದರೆ, ಈ ಬದಲಾವಣೆಯು ಸಹಜ ಮತ್ತು ಸ್ವಾಭಾವಿಕವಾದುದು. ಎರಡನೆಯ ಮಹಾಯುದ್ಧವು ಜಗತ್ತಿಗೆ ಒಂದು ದೊಡ್ಡ ಪಾಠ ಕಲಿಸಿತು. ಕೇವಲ ಶಕ್ತಿ ಮತ್ತು ಸ್ವಾರ್ಥದ ಆಧಾರದ ಮೇಲೆ ಜಾಗತಿಕ ವ್ಯವಸ್ಥೆಯು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂಬುದನ್ನು ಜಗತ್ತು ಅರಿತುಕೊಂಡಿತು. ಸಂವಾದ ಅತ್ಯಗತ್ಯ, ಸಹಕಾರ ಅನಿವಾರ್ಯ ಮತ್ತು ವಿವಾದಗಳ ಪರಿಹಾರವೂ ಅಷ್ಟೇ ಮುಖ್ಯ. ಇದೇ ಭಾವನೆಯು ವಿಶ್ವಸಂಸ್ಥೆಯ ಸ್ಥಾಪನೆಗೆ ಅಡಿಪಾಯ ಹಾಕಿತು. ದಶಕಗಳ ಕಾಲ, ಜಾಗತಿಕ ಸಹಕಾರ ಮತ್ತು ಶಾಂತಿಯನ್ನು ಉತ್ತೇಜಿಸುವಲ್ಲಿ ವಿಶ್ವಸಂಸ್ಥೆಯು ಮಹತ್ವದ ಪಾತ್ರ ವಹಿಸಿತು. ಆದರೆ ಕಾಲ ಕಳೆದಂತೆ, ಜಗತ್ತು ಬದಲಾಗುತ್ತಾ ಹೋಯಿತು. ಹೊಸ ಆಕಾಂಕ್ಷೆಗಳು ಹುಟ್ಟಿಕೊಂಡವು. ಹೊಸ ಆರ್ಥಿಕತೆಗಳು ಮತ್ತು ಹೊಸ ಶಕ್ತಿಗಳು ಉದಯಿಸಿದವು. ಜಗತ್ತು ಎದುರಿಸುತ್ತಿರುವ ಸವಾಲುಗಳು ಹಿಂದೆಂದಿಗಿಂತಲೂ ಹೆಚ್ಚು ಸಂಕೀರ್ಣಗೊಂಡವು. ತಂತ್ರಜ್ಞಾನವು ಸಮಾಜ, ಆರ್ಥಿಕತೆ ಮತ್ತು ಸ್ವತಃ ಅಧಿಕಾರದ ಸ್ವರೂಪವನ್ನೇ ಬದಲಾಯಿಸಿತು. ಜಾಗತಿಕ ವ್ಯವಸ್ಥೆಯು ಆರಂಭದಲ್ಲಿ ರೂಪುಗೊಂಡಾಗ ಭಾಗವಹಿಸದಿದ್ದ ದೇಶಗಳು, ಈಗ ತಮ್ಮದೇ ಆದ ಪ್ರಮುಖ ಪಾತ್ರಗಳೊಂದಿಗೆ ಮುಂದೆ ಬಂದಿವೆ. ಆಗ ಸಹಜವಾಗಿಯೇ ಒಂದು ಪ್ರಶ್ನೆ ಉದ್ಭವಿಸುತ್ತದೆ: ಜಾಗತಿಕ ವ್ಯವಸ್ಥೆಯು ಅದೇ ವೇಗದಲ್ಲಿ ಬದಲಾಯಿತೇ? ಇಲ್ಲ, ಬದಲಾಗಲಿಲ್ಲ. ಜಾಗತಿಕ ವ್ಯವಸ್ಥೆಯೂ ಬದಲಾಗಲಿಲ್ಲ ಮತ್ತು ಜಾಗತಿಕ ಸಂಸ್ಥೆಗಳು ಕೂಡ ಅಷ್ಟೇ ವೇಗದಲ್ಲಿ ತಮ್ಮನ್ನು ತಾವು ಬದಲಾಯಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಶ್ವಸಂಸ್ಥೆ ಮತ್ತು ಇತರೆ ಜಾಗತಿಕ ಸಂಸ್ಥೆಗಳು ತಮ್ಮದೇ ಆದ ಐತಿಹಾಸಿಕ ಪಾತ್ರ ನಿರ್ವಹಿಸಿವೆ. ಆದರೂ, ಇಂದಿನ ಸವಾಲುಗಳ ಮುಂದೆ ಅವುಗಳ ಮಿತಿಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಇಂದು ಹೊಸ ಶಕ್ತಿಗಳು ಉದಯಿಸುತ್ತಿವೆ. ಹೊಸ ಧ್ವನಿಗಳು ತಮ್ಮ ನ್ಯಾಯಯುತ ಸ್ಥಾನಕ್ಕಾಗಿ ಬೇಡಿಕೆ ಇಡುತ್ತಿವೆ. ಹೊಸ ಸವಾಲುಗಳಿಗೆ ಹೊಸ ಪರಿಹಾರಗಳ ಅಗತ್ಯವಿದೆ. ಜಗತ್ತಿನ ವಾಸ್ತವತೆ ಬದಲಾದಾಗ, ಆದರೆ ನಿರ್ಧಾರ ತೆಗೆದುಕೊಳ್ಳುವ ವಿಧಾನಗಳು ಬದಲಾಗದೆ ಉಳಿದಾಗ, ವ್ಯವಸ್ಥೆ ಮತ್ತು ವಾಸ್ತವತೆಯ ನಡುವೆ ಅಂತರವು ಹೆಚ್ಚಾಗತೊಡಗುತ್ತದೆ. ಇಂದು ನಾವು ಕಾಣುತ್ತಿರುವುದು ಇದನ್ನೇ. ದಶಕಗಳ ಕಾಲ, ವ್ಯಾಪಾರ ವ್ಯವಹಾರವು ರಾಷ್ಟ್ರಗಳನ್ನು ಬೆಸೆಯಿತು, ತಂತ್ರಜ್ಞಾನವು ಅಂತರವನ್ನು ಕಡಿಮೆ ಮಾಡಿತು, ಸಮುದ್ರ ಮಾರ್ಗಗಳು ಆರ್ಥಿಕತೆಗಳನ್ನು ಜೋಡಿಸಿದವು, ಸಂಸ್ಕೃತಿ ಮತ್ತು ಜನರ ಚಲನಶೀಲತೆಯು ವೈವಿಧ್ಯಮಯ ಸಮಾಜಗಳನ್ನು ಹತ್ತಿರಕ್ಕೆ ತಂದವು; ಆದರೆ ಇಂದು, ಇದೇ ಸಂಪರ್ಕಗಳು ಹೊಸ ಒತ್ತಡಗಳನ್ನು ಎದುರಿಸುತ್ತಿವೆ. ವ್ಯಾಪಾರವನ್ನು ಒಂದು ಅಸ್ತ್ರವನ್ನಾಗಿ ಬಳಸಲಾಗುತ್ತಿದೆ. ತಂತ್ರಜ್ಞಾನವು ಸ್ಪರ್ಧೆ ಮತ್ತು ಸಂಘರ್ಷದ ಹೊಸ ರಂಗವಾಗಿ ಬದಲಾಗುತ್ತಿದೆ. ಸಮುದ್ರ ಮಾರ್ಗಗಳು ಭೌಗೋಳಿಕ-ರಾಜಕೀಯ ಉದ್ವಿಗ್ನತೆಯ ಕೇಂದ್ರಬಿಂದುಗಳಾಗಿ ಹೊರಹೊಮ್ಮುತ್ತಿವೆ. ಆದ್ದರಿಂದ, ಇಂದಿನ ಸವಾಲು ಕೇವಲ ಹೊಸ ಜಾಗತಿಕ ವ್ಯವಸ್ಥೆಯ ಉದಯಕ್ಕೆ ಸಂಬಂಧಿಸಿದ್ದಲ್ಲ. ನಿಜವಾದ ಸವಾಲೆಂದರೆ, ಬದಲಾಗುತ್ತಿರುವ ಜಗತ್ತಿನಲ್ಲಿ ಹೊಸ ವಾಸ್ತವಗಳಿಗೆ ಸ್ಥಾನ ಸಿಗುವಂತಹ, ಜಾಗತಿಕ ಸಂಸ್ಥೆಗಳು ಹೆಚ್ಚು ಪರಿಣಾಮಕಾರಿಯಾಗುವಂತಹ ಮತ್ತು ರಾಷ್ಟ್ರಗಳ ನಡುವಿನ ಸಹಕಾರ ಮನೋಭಾವವು ಬಲಗೊಳ್ಳುವಂತಹ ವ್ಯವಸ್ಥೆಯನ್ನು ನಾವು ಹೇಗೆ ರೂಪಿಸುವುದು? ಈ ವಿಷಯದಲ್ಲೇ ಭಾರತದ ಪಾತ್ರವೇನು ಎಂಬ ಪ್ರಶ್ನೆಯು ಮುನ್ನೆಲೆಗೆ ಬರುತ್ತದೆ.
ಸ್ನೇಹಿತರೆ,
ಭಾರತದ ಪಾತ್ರದ ಬಗ್ಗೆ ವಿವರವಾಗಿ ಮಾತನಾಡುವ ಮೊದಲು, ನಾನು ನಿಮ್ಮನ್ನು 7ರಿಂದ 8 ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತೇನೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಏನಾಯಿತು ಎಂಬುದನ್ನು ನಾವೆಲ್ಲರೂ ಕಣ್ಣಾರೆ ಕಂಡಿದ್ದೇವೆ. ಜಗತ್ತಿಗೆ ಸಹಕಾರದ ಅತ್ಯಂತ ಅಗತ್ಯವಿದ್ದಾಗ, ಅದು ಸಂಪೂರ್ಣವಾಗಿ ವಿಭಜಿತಗೊಂಡಂತೆ ಕಂಡುಬಂತು. ಜಾಗತೀಕರಣದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡಿದವರೇ, ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಸ್ವಾರ್ಥಕ್ಕೆ ಮೊದಲ ಆದ್ಯತೆ ನೀಡಿದರು. ಇಂತಹ ವಿಭಜನೆಯ ಕಾಲಘಟ್ಟದಲ್ಲಿ, ಪ್ರತಿಯೊಬ್ಬರೂ ಪರಸ್ಪರ ಸಂಶಯದಿಂದ ನೋಡತೊಡಗಿದರು, ಜಾಗತಿಕ ನಂಬಿಕೆ ತೀರಾ ಕೆಳಮಟ್ಟಕ್ಕೆ ಕುಸಿಯಿತು. ಅಂತಹ ಸಂದರ್ಭದಲ್ಲೇ 2020 ರಲ್ಲಿ ಜಿ-20 ಶೃಂಗಸಭೆಯ ಮೂಲಕ ನಾನು ಜಗತ್ತಿನ ಮುಂದೆ ಒಂದು ಪರಿಕಲ್ಪನೆಯನ್ನು ಮಂಡಿಸಿದೆ. ಅದುವೇ "ಮನುಕುಲದ ಸಾಮೂಹಿಕ ಒಳಿತಿಗಾಗಿ ಒಂದು ಹೊಸ ವಿಶ್ವ ವ್ಯವಸ್ಥೆ" - ಅಂದರೆ, ಮಾನವತೆಯನ್ನೇ ತನ್ನ ಮೂಲಾಧಾರವನ್ನಾಗಿ ಹೊಂದಿರುವ ವ್ಯವಸ್ಥೆ. ಅದೇ ವರ್ಷ, ವಿಶ್ವಸಂಸ್ಥೆಯ ಮಹಾಸಭೆ(ಯುಎನ್ ಜಿಎ) ವೇದಿಕೆಯಿಂದ ನಾನು ಹೀಗೆ ಹೇಳಿದ್ದೆ: "ಶತಮಾನ ಬದಲಾಗುತ್ತಿದ್ದರೂ ನಾವು ಬದಲಾಗದಿದ್ದರೆ, ಬದಲಾವಣೆಯನ್ನು ತರುವ ನಮ್ಮ ಸಾಮರ್ಥ್ಯವೂ ದುರ್ಬಲಗೊಳ್ಳುತ್ತದೆ."
ಸ್ನೇಹಿತರೆ,
ಇಂದು ವಿಶ್ವ ವ್ಯವಸ್ಥೆಯು ಬದಲಾಗುತ್ತಿದೆ ಎಂಬುದು ಸತ್ಯ. ಆದರೆ, ಈಗ ಉದ್ಭವಿಸುವ ನಿಜವಾದ ಪ್ರಶ್ನೆಯೆಂದರೆ, ಹಳೆಯ ಜಾಗತಿಕ ವ್ಯವಸ್ಥೆಯು ಬದಲಾಗುತ್ತಿರುವಾಗ, ನಾವೆಲ್ಲರೂ ಸೇರಿ ಯಾವ ರೀತಿಯ ಹೊಸ ವಿಶ್ವ ವ್ಯವಸ್ಥೆ ಅಥವಾ ಕ್ರಮವನ್ನು ನಿರ್ಮಿಸಲು ಬಯಸುತ್ತೇವೆ? ಬಹುಪಕ್ಷೀಯ ಸಂಸ್ಥೆಗಳಲ್ಲಿ ಸುಧಾರಣೆಗಳು ಅತ್ಯಗತ್ಯ. 'ಜಾಗತಿಕ ದಕ್ಷಿಣ'(ಅಭಿವೃದ್ಧಿಶೀಲ ರಾಷ್ಟ್ರಗಳ ಸಮೂಹ)ಕ್ಕೆ ನ್ಯಾಯಯುತ ಸ್ಥಾನ ಮತ್ತು ಧ್ವನಿ ನೀಡುವುದು ಬಹಳ ಮುಖ್ಯ. ಅಂತಾರಾಷ್ಟ್ರೀಯ ಸಹಕಾರವು ಕೇವಲ ಒಳ್ಳೆಯ ಕಾಲಕ್ಕೆ ಮಾತ್ರ ಸೀಮಿತವಾಗಿರಬಾರದು, ಅದು ಬಿಕ್ಕಟ್ಟಿನ ಸಮಯದಲ್ಲೂ ಪರಿಣಾಮಕಾರಿಯಾಗಿರಬೇಕು. ಇದಕ್ಕಾಗಿ, ಎಲ್ಲಾ ಪಾಲುದಾರರ ನಡುವೆ ಅರ್ಥಪೂರ್ಣ ಒಮ್ಮತ ಮೂಡುವುದು ಅನಿವಾರ್ಯ.
ಸ್ನೇಹಿತರೆ,
ನಮ್ಮ ಪರಂಪರೆಯಲ್ಲಿ, ಚಾಣಕ್ಯನು ತನ್ನ 'ಅರ್ಥಶಾಸ್ತ್ರ'ದಲ್ಲಿ ಹೀಗೆ ಹೇಳಿದ್ದಾನೆ: 'ಅಪ್ರಣೀತಃ ತು ಮತ್ಸ್ಯನ್ಯಾಯಮ್ ಉದ್ಭವಯತಿ' - ಅಂದರೆ, ಆಡಳಿತ ವ್ಯವಸ್ಥೆಯು ದುರ್ಬಲಗೊಂಡಾಗ, ಅಲ್ಲಿ "ಮತ್ಸ್ಯ ನ್ಯಾಯ"(ದೊಡ್ಡ ಮೀನು ಸಣ್ಣ ಮೀನನ್ನು ನುಂಗುವ ಸ್ಥಿತಿ) ಜಾರಿಗೆ ಬರುತ್ತದೆ. ಇಂತಹ ಪರಿಸ್ಥಿತಿಯನ್ನು ತಡೆಯಬಲ್ಲ ವ್ಯವಸ್ಥೆಯೊಂದು ಜಗತ್ತಿಗೆ ಅಗತ್ಯವಿದೆ. ಇದೇ ಭಾರತದ ದೂರದೃಷ್ಟಿಯಾಗಿದ್ದು, ಇದನ್ನೇ ಭಾರತವು ಕಾರ್ಯರೂಪಕ್ಕೆ ತರುತ್ತಿದೆ. ಸಾಂಕ್ರಾಮಿಕ ರೋಗದ ತೀವ್ರ ಬಿಕ್ಕಟ್ಟಿನ ಸಮಯದಲ್ಲಿ ಜಗತ್ತು ಭಾರತದ ಈ ಪಾತ್ರವನ್ನು ಕಂಡಿದೆ. ಸಮರ್ಥ ರಾಷ್ಟ್ರಗಳು ಕೇವಲ ತಮ್ಮ ಸ್ವಾರ್ಥದ ಬಗ್ಗೆ ಯೋಚಿಸುತ್ತಿದ್ದಾಗ, ಭಾರತವು ಮುಂದೆ ಬಂದು, ಅಗತ್ಯವಿದ್ದ ಪ್ರತಿಯೊಂದು ರಾಷ್ಟ್ರಕ್ಕೂ ಲಸಿಕೆಗಳನ್ನು ತಲುಪಿಸಿತು, 100ಕ್ಕೂ ಹೆಚ್ಚು ದೇಶಗಳಿಗೆ ಔಷಧಿಗಳನ್ನು ಕಳುಹಿಸಿಕೊಟ್ಟಿತು.
ಸ್ನೇಹಿತರೆ,
'ಸಬ್ಕಾ ಸಾಥ್, ಸಬ್ಕಾ ವಿಕಾಸ್'(ಎಲ್ಲರೊಂದಿಗೆ, ಎಲ್ಲರ ಅಭಿವೃದ್ಧಿ) ಎಂಬ ತತ್ವದಿಂದ ಪ್ರೇರಿತವಾಗಿ, ಭಾರತವು 'ವಿಶ್ವ-ಬಂಧು'(ಜಾಗತಿಕ ಸ್ನೇಹಿತ)ವಿನ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದೆ. ಇದನ್ನು ನೀವು ಕಣ್ಣಾರೆ ಕಂಡಿದ್ದೀರಿ. ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಶೃಂಗಸಭೆ ನಡೆಯಿತು, ಭಾರತದ ನೇತೃತ್ವದಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಿತು. ಈ ಎರಡೂ ಶೃಂಗಸಭೆಗಳ ಬಗ್ಗೆ ಎಷ್ಟೆಲ್ಲಾ ಸಂಶಯಗಳನ್ನು ವ್ಯಕ್ತಪಡಿಸಲಾಗಿತ್ತು? ಜಂಟಿ ಘೋಷಣೆಗಳ ವಿಷಯದಲ್ಲಿ ಒಮ್ಮತ ಮೂಡಿಸುವುದು ಅಸಾಧ್ಯ ಎಂದು ಹೇಳಲಾಗಿತ್ತು. ಆದರೆ ಭಾರತವು ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಿತು, ಸಂವಾದಕ್ಕೆ ಒತ್ತು ನೀಡಿತು. ಪರಿಣಾಮವಾಗಿ, ಎರಡೂ ಸಂದರ್ಭಗಳಲ್ಲಿ 'ದೆಹಲಿ ಘೋಷಣೆ'ಯು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿತು. ಪರಸ್ಪರ ಕಟು ವೈರಿಗಳೆಂದು ಪರಿಗಣಿಸಲ್ಪಟ್ಟ ರಾಷ್ಟ್ರಗಳು ಭಾರತದ ವೇದಿಕೆಯ ಮೇಲೆ ಒಂದಾದವು. ಇದೇನೂ ಕಾಕತಾಳೀಯವಲ್ಲ. ಬದಲಾಗಿ, 'ವಿಶ್ವ-ಬಂಧು'ವಾಗಿ ಭಾರತದ ಪಾತ್ರದ ಮೇಲೆ ಇಡಲಾದ ನಂಬಿಕೆ ಇದಾಗಿದೆ.
ಸ್ನೇಹಿತರೆ,
ಭಾರತವು ಎಷ್ಟು ಹೆಚ್ಚು ಬಲಶಾಲಿಯಾಗಿ ಮತ್ತು ಸಬಲವಾಗಿ ಬೆಳೆಯುತ್ತದೆಯೋ, ಅಷ್ಟು ಹೆಚ್ಚು ಪ್ರಯೋಜನ ಮಾನವಕುಲಕ್ಕೆ ಸಿಗುತ್ತದೆ. ಏಕೆಂದರೆ, ಭಾರತದ ನೀತಿಗಳು ಮತ್ತು ನಿರ್ಧಾರಗಳು ಕಾಲಾತೀತ ಅನುಭವ ಹಾಗೂ ನಾಗರಿಕ ಮೌಲ್ಯಗಳಿಂದ ಪ್ರೇರಿತವಾಗಿವೆ. ಭಾರತವು ಕ್ಷಣಿಕ ಆವೇಗಗಳಿಗೆ ಒಳಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಹೀಗಾಗಿ, ಭಾರತವು ಸ್ಥಿರತೆಯ ಖಾತರಿಯಾಗಿದೆ ಮತ್ತು ನಿರಂತರತೆಯ ಭರವಸೆಯಾಗಿದೆ. 'ವಿಕಸಿತ ಭಾರತ'ನಿರ್ಮಾಣದ ನಮ್ಮ ಸಂಕಲ್ಪವು ಇದೇ ಮನೋಭಾವವನ್ನು ಪೋಷಿಸುತ್ತದೆ. ಕೆಲವೇ ದಿನಗಳ ಹಿಂದೆ ನಡೆದ ಶೃಂಗಸಭೆಯೊಂದರಲ್ಲಿ, ನಾನು "ಸಬಲೀಕರಣಕ್ಕಾಗಿ ಶಕ್ತಿ" ಎಂಬ ಪರಿಕಲ್ಪನೆಯನ್ನು ಮಂಡಿಸಿದೆ. ಅಭಿವೃದ್ಧಿ ಹೊಂದಿದ ಭಾರತವು ಕೇವಲ ನಮಗಾಗಿ ಮಾತ್ರವಲ್ಲ, ಅದು ಉತ್ತಮ ಜಗತ್ತಿಗೂ ಒಂದು ಭರವಸೆಯಾಗಿದೆ. ಭಾರತವು ಸ್ವಾವಲಂಬನೆಯತ್ತ ಸಾಗಿದಾಗ, ಅದು ಜಾಗತಿಕ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ. ಭಾರತದ ಆರ್ಥಿಕತೆಯು ಬಲಗೊಂಡಾಗ, ಅದು ಜಗತ್ತಿಗೆ ಸಮೃದ್ಧಿಯ ಆಶಾವಾದ ನೀಡುತ್ತದೆ. ಭಾರತದ ಯುವ ಜನರು ಸಮರ್ಥರಾದಾಗ ಮತ್ತು ಕೌಶಲ್ಯಭರಿತರಾದಾಗ, ಅದು ನಾವೀನ್ಯತೆ ಮತ್ತು ಉತ್ಪಾದಕತೆಯ ವಿಷಯದಲ್ಲಿ ಜಾಗತಿಕ ವಿಶ್ವಾಸ ಹೆಚ್ಚಿಸುತ್ತದೆ. ಸರಳವಾಗಿ ಹೇಳುವುದಾದರೆ, ಜಗತ್ತಿನ ಸಾಮರ್ಥ್ಯವೂ ಹೆಚ್ಚಾಗಲಿ ಎಂಬ ಉದ್ದೇಶದಿಂದ ಭಾರತವು ಇಂದು ತನ್ನದೇ ಆದ ಸಾಮರ್ಥ್ಯಗಳನ್ನು ವೃದ್ಧಿಸಿಕೊಳ್ಳುತ್ತಿದೆ.
ಸ್ನೇಹಿತರೆ,
ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗಲು ಭಾರತವು ತನ್ನ ಸಂಪೂರ್ಣ ಶಕ್ತಿಯೊಂದಿಗೆ ಶ್ರಮಿಸುತ್ತಿದೆ. ಪ್ರಸ್ತುತ ಜಗತ್ತು ಎದುರಿಸುತ್ತಿರುವ ಕಠಿಣ ಸನ್ನಿವೇಶಗಳನ್ನು ಗಮನಿಸಿದಾಗ ನಮ್ಮ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗುತ್ತದೆ. ಇಂತಹ ಸನ್ನಿವೇಶದಲ್ಲೂ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ. ಇಂದು, ಹಸಿರು ಇಂಧನ ಕ್ಷೇತ್ರದಲ್ಲಿ ಭಾರತವು ಅಗ್ರಗಣ್ಯ ಆರ್ಥಿಕತೆಗಳಲ್ಲಿ ಒಂದಾಗಿದೆ. ಕೃತಕ ಬುದ್ಧಿಮತ್ತೆ ಪರಿಸರ ವ್ಯವಸ್ಥೆಯಲ್ಲಿ ಭಾರತವು ಅಗ್ರ 3 ರಾಷ್ಟ್ರಗಳಲ್ಲಿ ಒಂದಾಗಿದೆ. ಸ್ಟಾರ್ಟಪ್ ಪರಿಸರ ವ್ಯವಸ್ಥೆಯಲ್ಲೂ ಭಾರತವು ಅಗ್ರ 3 ಸ್ಥಾನಗಳಲ್ಲಿ ಒಂದಾಗಿದೆ. ಭಾರತವು ಅತಿದೊಡ್ಡ ಡಿಜಿಟಲ್ ಆರ್ಥಿಕತೆಗಳಲ್ಲಿ ಒಂದಾಗಿದೆ. ನೈಜ-ಸಮಯದ ಡಿಜಿಟಲ್ ಪಾವತಿಗಳ ವಿಷಯದಲ್ಲಿ ಭಾರತವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ.
ಸ್ನೇಹಿತರೆ,
ಇಂದಿನ ಭಾರತವು ವಿವಿಧ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿದೆ, ದೇಶದಲ್ಲಿ ಅನೇಕ ಮೈಲಿಗಲ್ಲುಗಳನ್ನು ಮೊದಲ ಬಾರಿಗೆ ಸಾಧಿಸಲಾಗಿದೆ. ಭಾರತದ 'ಫಾಸ್ಟ್ ಬ್ರೀಡರ್ ರಿಯಾಕ್ಟರ್ ಮೊದಲ ಬಾರಿಗೆ 'ನಿರ್ಣಾಯಕತೆ'ಯನ್ನು(ಕಾರ್ಯಾಚರಣೆಗೆ ಸಿದ್ಧವಾಗುವ ಹಂತ) ತಲುಪಿದೆ. ಭಾರತವು ಮೊದಲ ಬಾರಿಗೆ ಜನಗಣತಿಯನ್ನು ಡಿಜಿಟಲ್ ತಂತ್ರಜ್ಞಾನದೊಂದಿಗೆ ಜೋಡಿಸಿತು. ಇದೇ ಅವಧಿಯಲ್ಲಿ, ಭಾರತದ ಮೊದಲ ಹೈಡ್ರೋಜನ್ ರೈಲು ಸಂಚಾರ ಆರಂಭಿಸಿತು, ಉರವಲುಯೇತರ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ಭಾರತವು ಮೊದಲ ಬಾರಿಗೆ 300 ಗಿಗಾವ್ಯಾಟ್ ಉತ್ಪಾದನೆ ಮೈಲಿಗಲ್ಲು ದಾಟಿತು.
ಸ್ನೇಹಿತರೆ,
ನಾನು ನಿಮಗೆ ಮತ್ತೊಂದು ಉದಾಹರಣೆ ನೀಡುತ್ತೇನೆ. ಕೆಲವೇ ದಿನಗಳ ಹಿಂದೆ, ಏಷ್ಯಾ ಕ್ರೀಡಾಕೂಟದಿಂದ ಮರಳಿದ ಯುವ ಕ್ರೀಡಾಪಟುಗಳನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತು. ಈ ಬಾರಿ ಭಾರತವು 85 ಪದಕಗಳನ್ನು ಗೆದ್ದುಕೊಂಡಿತು, ಅನೇಕ ಹೊಸ ಮೈಲಿಗಲ್ಲುಗಳನ್ನು ಮೊದಲ ಬಾರಿಗೆ ಸಾಧಿಸಿತು. ಮಹಿಳಾ ರಿಕರ್ವ್ ಬಿಲ್ಲುಗಾರಿಕೆ ತಂಡವು ಇದೇ ಮೊದಲ ಬಾರಿಗೆ ತಂಡದ ವಿಭಾಗದಲ್ಲಿ ಹಾಗೂ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿತು. ಬಾಕ್ಸಿಂಗ್ನಲ್ಲಿ, ಭಾರತವು ಒಂದೇ ಏಷ್ಯಾ ಕ್ರೀಡಾಕೂಟದಲ್ಲಿ 3 ಚಿನ್ನದ ಪದಕಗಳನ್ನು ಗೆದ್ದಿದೆ, ಇದು ಕೂಡ ಇದೇ ಮೊದಲ ಬಾರಿ ಮಾಡಿರುವ ಸಾಧನೆಯಾಗಿದೆ.
ಸ್ನೇಹಿತರೆ,
ಈಗ ನಾನು ಒಂದು ಹೆಸರು ಪ್ರಸ್ತಾಪಿಸುತ್ತೇನೆ, ಸಭಾಂಗಣದಲ್ಲಿರುವ ಅನೇಕರು ಇದನ್ನು ಕೇಳಿರಬಹುದು ಎಂದು ಭಾವಿಸುತ್ತೇನೆ. ಆ ಹೆಸರು - 'ಸೆಪಾಕ್ ಟಕ್ರಾ'. 'ಸೆಪಾಕ್ ಟಕ್ರಾ' - ಈ ಹೆಸರನ್ನು ನೀವು ಕೇಳಿದ್ದೀರಾ? ಇದರ ಬಗ್ಗೆ ತಿಳಿಯದವರಿಗಾಗಿ ಹೇಳುವುದಾದರೆ, ಇದೊಂದು ಕ್ರೀಡೆಯ ಹೆಸರು. ಜಗತ್ತಿನಾದ್ಯಂತ ಜನರು ಈ ಕ್ರೀಡೆಯನ್ನು ಆಡುತ್ತಾರೆ, ಇದರಲ್ಲಿ ಪದಕಗಳನ್ನು ಗೆಲ್ಲುತ್ತಿದ್ದಾರೆ. ಇದು ಮೂಲತಃ ಫುಟ್ಬಾಲ್ ಮತ್ತು ವಾಲಿಬಾಲ್ ಕ್ರೀಡೆಗಳ ಸಮ್ಮಿಶ್ರ ರೂಪವಾಗಿದೆ. ಇದನ್ನು ಪಾದಗಳಿಂದ ಆಡಲಾಗುತ್ತದೆ, ಆದರೆ ಆಟವು ಬಲೆಯ ಆಚೆ-ಈಚೆ ನಡೆಯುತ್ತದೆ. ಇತ್ತೀಚೆಗೆ ನಡೆದ ಏಷ್ಯಾ ಕ್ರೀಡಾಕೂಟದಲ್ಲಿ, ಈ ಕ್ರೀಡೆಯ 'ಪುರುಷರ ಕ್ವಾಡ್ರಾಂಟ್' ವಿಭಾಗದಲ್ಲಿ ಭಾರತವು ಇದೇ ಮೊದಲ ಬಾರಿಗೆ ಪದಕ ಗೆದ್ದುಕೊಂಡಿತು.
ಸ್ನೇಹಿತರೆ,
ಇದು ಬದಲಾಗುತ್ತಿರುವ ಭಾರತದ ಲಕ್ಷಣವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಹೊಸದಾದ ಮತ್ತು ಅಭೂತಪೂರ್ವವಾದ ಸಂಗತಿಗಳು ನಡೆಯುತ್ತಿವೆ. ಇದರರ್ಥ, ಭಾರತದ ಸಾಂಪ್ರದಾಯಿಕ ಸಾಮರ್ಥ್ಯಗಳು ಇನ್ನಷ್ಟು ಬಲಗೊಳ್ಳುತ್ತಿವೆ. ಹಿಂದೆ ನಾವು ಅಷ್ಟೊಂದು ಬಲಶಾಲಿಯಾಗಿರದ ಕ್ಷೇತ್ರಗಳಲ್ಲಿ, ಈಗ ನಾವು ಒಂದು ಹೊಸ ಶಕ್ತಿಯಾಗಿ ಹೊರಹೊಮ್ಮುತ್ತಿದ್ದೇವೆ. ಇವೆಲ್ಲವೂ ಪ್ರತ್ಯೇಕವಾಗಿ ನಡೆಯುತ್ತಿಲ್ಲ. ಬದಲಾಗಿ, ಇದು 'ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ' ಎಂಬ ನೀತಿಯ ನೇರ ಫಲಿತಾಂಶವಾಗಿದೆ.
ಸ್ನೇಹಿತರೆ,
ವಿದ್ಯುತ್ ಬೇಡಿಕೆ ಹೆಚ್ಚಾದಾಗ ಇಡೀ ವಿದ್ಯುತ್ ಜಾಲವೇ(ಪವರ್ ಗ್ರಿಡ್) ಕುಸಿದುಬೀಳುತ್ತಿದ್ದ ದಿನಗಳನ್ನು ಈ ದೇಶ ಕಂಡಿದೆ. ಆದರೆ, ಒಂದು ರಾಷ್ಟ್ರವು ದೃಢ ಸಂಕಲ್ಪದೊಂದಿಗೆ ಎದ್ದು ನಿಂತು ಮುನ್ನಡೆದಾಗ, ವಿದ್ಯುತ್ ಜಾಲವು ಕುಸಿದುಬೀಳುವುದಿಲ್ಲ. ಬದಲಾಗಿ, ಅದೇ ಜಾಲವು ರಾಷ್ಟ್ರದ ಪ್ರಗತಿಗೆ ಮತ್ತು ಹೆಚ್ಚುತ್ತಿರುವ ಆತ್ಮವಿಶ್ವಾಸಕ್ಕೆ ಇಂಧನವಾಗಿ ಕಾರ್ಯ ನಿರ್ವಹಿಸುತ್ತದೆ.
ಸ್ನೇಹಿತರೆ,
ಇಂದು ನಮ್ಮ ಯುವಶಕ್ತಿ, ಮಹಿಳಾ ಶಕ್ತಿ, ರೈತರು, ಮೀನುಗಾರರು, ಬಡವರು ಮತ್ತು ಮಧ್ಯಮ ವರ್ಗ 'ವಿಕಸಿತ ಭಾರತ' ನಿರ್ಮಾಣದಲ್ಲಿ ಅತ್ಯಂತ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ಇಂದಿನ ಪರಿಸ್ಥಿತಿ ಗಮನಿಸಿ: ಭಾರತದ ರಫ್ತು ವಹಿವಾಟು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಕೇವಲ ಸೆಪ್ಟೆಂಬರ್ ತಿಂಗಳನ್ನೇ ನೋಡುವುದಾದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಸರಕು ಮತ್ತು ಉತ್ಪನ್ನಗಳ ರಫ್ತು ಸುಮಾರು ಶೇಕಡ 25ರಷ್ಟು ಹೆಚ್ಚಾಗಿದೆ. ಕಳೆದ 12 ವರ್ಷಗಳಲ್ಲಿ ಸಮುದ್ರಾಹಾರದ ರಫ್ತು ಪ್ರಮಾಣವು ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. ನಮ್ಮ ಹಳ್ಳಿಗಳಲ್ಲಿ 3.5 ಕೋಟಿಗೂ ಹೆಚ್ಚು ಮಹಿಳೆಯರು 'ಲಕ್ಷಪತಿ ದೀದಿ'ಗಳಾಗಿದ್ದಾರೆ, ನಾವು ಒಟ್ಟು 6 ಕೋಟಿ 'ಲಕ್ಷಪತಿ ದೀದಿ'ಗಳನ್ನು ಸೃಷ್ಟಿಸುವ ಗುರಿಯತ್ತ ಕೆಲಸ ಮಾಡುತ್ತಿದ್ದೇವೆ. 'ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ'ಯ ಅಡಿ, ಬಹಳ ಕಡಿಮೆ ಅವಧಿಯಲ್ಲಿ ಸುಮಾರು 70 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಮಧ್ಯಮ ವರ್ಗದವರಿಗೆ 12 ಲಕ್ಷ ರೂಪಾಯಿವರೆಗಿನ ಆದಾಯದ ಮೇಲೆ ಆದಾಯ ತೆರಿಗೆ ಶೂನ್ಯಗೊಳಿಸಲಾಗಿದೆ. ಇದನ್ನು ನಿಮಗೆ ಪದೇಪದೆ ನೆನಪಿಸಬೇಕಿದೆ, ಸಿಕ್ಕ ಸೌಲಭ್ಯವನ್ನು ಪಡೆದುಕೊಂಡು ಸುಮ್ಮನೆ ಮರೆತುಬಿಡಬಾರದು. ದೇಶಾದ್ಯಂತ ಜೀವನ ಸುಗಮವಾಗುತ್ತಿದೆ ಮತ್ತು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.
ಸ್ನೇಹಿತರೆ,
ಒಂದು ಕಾಲದಲ್ಲಿ ಜಗತ್ತು ಭಾರತವನ್ನು 'ವಿಶ್ವದ ಬ್ಯಾಕ್ ಆಫೀಸ್' ಎಂದು ಕರೆಯುತ್ತಿತ್ತು. ಆದರೆ ಇಂದಿನ ಭಾರತ ಕೇವಲ ಸೇವಾ ಪೂರೈಕೆದಾರ ಮಾತ್ರವಲ್ಲ, ನಾವು ಜಗತ್ತಿಗಾಗಿ ಹೊಸ ಪರಿಹಾರಗಳು ಮತ್ತು ತಂತ್ರಜ್ಞಾನಗಳನ್ನು ಆವಿಷ್ಕರಿಸುತ್ತಿದ್ದೇವೆ, ವಿನ್ಯಾಸಗೊಳಿಸುತ್ತಿದ್ದೇವೆ ಮತ್ತು ಸೃಷ್ಟಿಸುತ್ತಿದ್ದೇವೆ. ಸಂಶೋಧನಾ ಕ್ಷೇತ್ರವನ್ನೇ ನೋಡಿ, ಇಂದು ಸಂಶೋಧನಾ ಪ್ರಕಟಣೆಗಳ ವಿಷಯದಲ್ಲಿ ನಾವು ಜಗತ್ತಿನಲ್ಲೇ 3ನೇ ಸ್ಥಾನದಲ್ಲಿದ್ದೇವೆ. 2025ನೇ ವರ್ಷದಲ್ಲಿ ಸುಮಾರು 1.5 ಲಕ್ಷ ಪೇಟೆಂಟ್ಗಳನ್ನು ದಾಖಲಿಸಲಾಗಿದೆ. ಒಂದೇ ವರ್ಷದಲ್ಲಿ 1.5 ಲಕ್ಷ ಪೇಟೆಂಟ್ಗಳು! ಇದು ಭಾರತದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗೆ ಇರುವ ಅಪಾರ ಸಾಮರ್ಥ್ಯವನ್ನು ತೋರಿಸುತ್ತದೆ.
ಸ್ನೇಹಿತರೆ,
ಸೆಮಿಕಂಡಕ್ಟರ್ ವಲಯವನ್ನೇ ನೋಡಿ, ವಿಶ್ವದ ಚಿಪ್-ವಿನ್ಯಾಸ ಕಾರ್ಯಪಡೆಯ ಸುಮಾರು ಶೇಕಡ 20ರಷ್ಟು ಜನರು ಭಾರತದಲ್ಲಿದ್ದಾರೆ. ಭಾರತದಲ್ಲಿರುವ ನಮ್ಮ ಎಂಜಿನಿಯರ್ಗಳು ಅತ್ಯಾಧುನಿಕ 2 ರಿಂದ 3 ನ್ಯಾನೊಮೀಟರ್ ಚಿಪ್ ವಿನ್ಯಾಸಗಳ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ಪ್ರತಿಭಾನ್ವಿತರನ್ನು ಮತ್ತಷ್ಟು ವಿಸ್ತರಿಸಲು, ಇಂದು ದೇಶದಲ್ಲಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಭಾರತೀಯ ಶೈಕ್ಷಣಿಕ ಸಂಸ್ಥೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಇಲ್ಲಿಯವರೆಗೆ 325 ಕ್ಕೂ ಹೆಚ್ಚು ಚಿಪ್ಗಳನ್ನು ವಿನ್ಯಾಸಗೊಳಿಸಿದ್ದಾರೆ.
ಸ್ನೇಹಿತರೆ,
ಮತ್ತೊಂದು ಉದಾಹರಣೆಯೆಂದರೆ, ಜಾಗತಿಕ ಸಾಮರ್ಥ್ಯ ಕೇಂದ್ರಗಳು. ವಿಶ್ವದ ಅರ್ಧಕ್ಕಿಂತ ಹೆಚ್ಚು ಸಾಮರ್ಥ್ಯ ಕೇಂದ್ರಗಳು ಭಾರತದಲ್ಲಿವೆ. ಇದು ಕೇವಲ ಸಂಖ್ಯೆಗಳ ಬಗ್ಗೆ ಅಲ್ಲ, ಅವರ ಕೆಲಸದ ಸ್ವರೂಪ ಬದಲಾಗುತ್ತಿದೆ. ಹಿಂದೆ, ಅನೇಕ ಕೇಂದ್ರಗಳು ಬೆಂಬಲ ಸೇವೆಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದ್ದವು. ಇಂದು ಅವು ಎಐ, ಕ್ಲೌಡ್, ಎಂಜಿನಿಯರಿಂಗ್, ಡೇಟಾ ಅನಾಲಿಟಿಕ್ಸ್ ಮತ್ತು ಉತ್ಪನ್ನ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತದ ಪಾತ್ರ ಬದಲಾಗುತ್ತಿದೆ, ಭಾರತದ ಗುರುತು ವಿಕಸನಗೊಳ್ಳುತ್ತಿದೆ. ನಾವು 'ಟ್ಯಾಲೆಂಟ್ ಅಟ್ ಸ್ಕೇಲ್'ನಿಂದ 'ಥಿಂಕಿಂಗ್ ಅಟ್ ಸ್ಕೇಲ್'ಗೆ ಪರಿವರ್ತನೆಗೊಂಡಿದ್ದೇವೆ. ಒಂದು ಕಾಲದಲ್ಲಿ ಭಾರತದ ಮಾನವಶಕ್ತಿಯನ್ನು ನಂಬಿದ್ದ ಜಗತ್ತು ಈಗ ಭಾರತದ ಮನಸ್ಸಿನ ಶಕ್ತಿಯ ಮೇಲೆ ಸಮಾನ ನಂಬಿಕೆ ಇರಿಸಿದೆ. ಪರಿಣಾಮವಾಗಿ, ನಾವು ಪ್ರಪಂಚದೊಂದಿಗೆ ಕೇವಲ ಬ್ಯಾಕ್ ಆಫೀಸ್ ಆಗಿ ಅಲ್ಲ, ಆದರೆ ಬ್ರೈನ್ ಆಫೀಸ್ ಆಗಿ ಕೆಲಸ ಮಾಡುತ್ತಿದ್ದೇವೆ.
ಸ್ನೇಹಿತರೆ,
ಸರ್ಕಾರವು ಯಾವುದೇ ವಲಯದಲ್ಲಿ ನೀತಿ ರೂಪಿಸುವಾಗ ಅಥವಾ ಹೂಡಿಕೆಯ ನಿರ್ಧಾರ ತೆಗೆದುಕೊಳ್ಳುವಾಗ, ಅದರ ಹಿಂದೆ ಸ್ಪಷ್ಟವಾದ ಚಿಂತನೆಯಿರುತ್ತದೆ. ಭಾರತವು ಯಾವ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು, ಯಾವ ಕ್ಷೇತ್ರಗಳಲ್ಲಿ ನಾವು ಇತರೆ ರಾಷ್ಟ್ರಗಳ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು, ಎದುರಾಗಬಹುದಾದ ಯಾವ ಬಿಕ್ಕಟ್ಟುಗಳಿಗೆ ನಾವು ಇಂದೇ ಸಿದ್ಧರಾಗಬೇಕು ಎಂಬುದು ಆ ಚಿಂತನೆಯ ಭಾಗವಾಗಿರುತ್ತದೆ. ನಾವು ಪ್ರತಿ ನಿರ್ಧಾರ ತೆಗೆದುಕೊಳ್ಳುವಾಗಲೂ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ. ಕೆಲವು ಹೂಡಿಕೆಗಳ ಫಲಿತಾಂಶಗಳು ಗೋಚರಿಸಲು ವರ್ಷಗಳೇ ಬೇಕಾಗಬಹುದು, ಆದರೆ ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಅವು ಅತ್ಯಂತ ಮಹತ್ವದ್ದಾಗಿರುತ್ತವೆ. ನಾನೊಂದು ಆಸಕ್ತಿದಾಯಕ ಉದಾಹರಣೆ ನೀಡುತ್ತೇನೆ. ಭಾರತದ ಔಷಧೀಯ ಸಾಮರ್ಥ್ಯಗಳ ಬಗ್ಗೆ ನೀವೆಲ್ಲರೂ ಬಲ್ಲಿರಿ, ಆದರೆ ಕೆಲವೇ ವರ್ಷಗಳ ಹಿಂದೆ, ಕಚ್ಚಾ ವಸ್ತುಗಳು ಮತ್ತು ಔಷಧಿಗಳಿಗಾಗಿ ಭಾರತವು ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಈಗ ದೇಶವು ಈ ಪರಿಸ್ಥಿತಿಯನ್ನು ಬದಲಾಯಿಸುತ್ತಿದೆ. ಪ್ರತಿಜೀವಕಗಳಿಗೆ (antibiotics) ಅತ್ಯಗತ್ಯವಾದ 'ಪೆನಿಸಿಲಿನ್ ಜಿ' ಬಗ್ಗೆ ನೀವು ಕೇಳಿರಬಹುದು. ಕಳೆದ 2-3 ದಶಕಗಳಲ್ಲಿ, ಭಾರತದಲ್ಲಿ ಇದರ ದೇಶೀಯ ಉತ್ಪಾದನೆಯು ಬಹುತೇಕ ನಿಂತುಹೋಗಿತ್ತು. ನಾವು ಇದನ್ನು 'ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆ'ಯ ವ್ಯಾಪ್ತಿಗೆ ತಂದೆವು. ಇಂದು, ಹಲವು ವರ್ಷಗಳ ನಂತರ, ಆಂಧ್ರಪ್ರದೇಶದ ಕಾಕಿನಾಡದಲ್ಲಿ 'ಪೆನಿಸಿಲಿನ್ ಜಿ'ಯ ದೇಶೀಯ ಉತ್ಪಾದನೆಯು ಪುನಾರಂಭಗೊಂಡಿದೆ.
ಸ್ನೇಹಿತರೆ,
'ಪೆನಿಸಿಲಿನ್ ಜಿ' ಕೇವಲ ಒಂದು ಉದಾಹರಣೆ ಅಷ್ಟೆ. ಭಾರತದಲ್ಲಿ ನಾವು 'ಎಪಿಐ'(API - Active Pharmaceutical Ingredients) ಅಂದರೆ ಔಷಧ ತಯಾರಿಕೆಗೆ ಬೇಕಾದ ಮೂಲಭೂತ ಕಚ್ಚಾ ವಸ್ತುಗಳಿಗಾಗಿ ಸಂಪೂರ್ಣ ದೇಶೀಯ ಪೂರೈಕೆ ಸರಪಳಿಯನ್ನು ನಿರ್ಮಿಸುತ್ತಿದ್ದೇವೆ. ಇದೇ ಕಾರಣಕ್ಕಾಗಿ ಈ ವಲಯವನ್ನು 'ಪಿಎಲ್ಐ' ಯೋಜನೆಯಡಿ ತರಲಾಯಿತು. ಇದರಿಂದ ಇಲ್ಲಿಯವರೆಗೆ 5,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಆಕರ್ಷಿತವಾಗಿದ್ದು, ಸುಮಾರು 40 ಯೋಜನೆಗಳು ಈಗಾಗಲೇ ಜಾರಿಯಲ್ಲಿವೆ. ಇಂತಹ ನೀತಿಗಳು ಮತ್ತು ನಿರ್ಧಾರಗಳು ಭಾರತವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುತ್ತಿವೆ.
ಸ್ನೇಹಿತರೆ,
ರಾಷ್ಟ್ರೀಯ ಸಾಧನೆಗಳ ಬಗ್ಗೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವಾಗ, "ಇಷ್ಟೆಲ್ಲಾ ಮಾತನಾಡಿದರೂ, ನಮ್ಮ ಮಾಧ್ಯಮಗಳ ಕೆಲಸದ ಬಗ್ಗೆ ಏನೂ ಹೇಳಲಿಲ್ಲವಲ್ಲ" ಎಂದು ನಮ್ಮ ಮಾಧ್ಯಮ ಮಿತ್ರರು ದೂಷಿಸಬಹುದು. ಎನ್ಡಿಟಿವಿ ಇಂತಹ ಅದ್ಭುತ ಕಾರ್ಯಕ್ರಮ ಆಯೋಜಿಸಿದೆ. ನಮ್ಮ ಧ್ಯೇಯವಾಕ್ಯ 'ಸಬ್ಕಾ ಸಾಥ್, ಸಬ್ಕಾ ವಿಕಾಸ್'(ಎಲ್ಲರೊಂದಿಗೆ, ಎಲ್ಲರ ಅಭಿವೃದ್ಧಿ) - ಇದರಲ್ಲಿ ಮಾಧ್ಯಮಗಳ ಅಭಿವೃದ್ಧಿಯೂ ಸೇರಿದೆ. ಹಾಗಾಗಿ, ನಾನು ಕೆಲವು ಮುಕ್ತವಾದ, ಸಿಹಿ-ಕಹಿ ಅಭಿಪ್ರಾಯಗಳನ್ನು ಹಂಚಿಕೊಂಡರೆ ನೀವು ಖಂಡಿತಾ ಇಷ್ಟಪಡುತ್ತೀರಿ ಎಂದು ಭಾವಿಸುತ್ತೇನೆ, ಅಲ್ಲವೇ?
ಸ್ನೇಹಿತರೆ,
ಜಗತ್ತು ಒಂದು ಹೊಸ ವ್ಯವಸ್ಥೆಯನ್ನು ಹುಡುಕುತ್ತಿರುವ ಈ ಸಮಯದಲ್ಲಿ, ಕೆಲವರು ಭಾರತದಲ್ಲಿ ಅರಾಜಕತೆಯನ್ನು ಕಾಣಲು ಕನಸು ಕಾಣುತ್ತಿದ್ದಾರೆ. ಇಂದು ಜಗತ್ತಿನಾದ್ಯಂತ ಸಾಕಷ್ಟು ಗೊಂದಲ ಮತ್ತು ಅಸ್ಥಿರತೆ ಇರುವಾಗ, ಜಾಗತಿಕ ಮಟ್ಟದಲ್ಲಿ ಭಾರತವು ಒಂದು ಬಲಿಷ್ಠ ರಾಷ್ಟ್ರವಾಗಿ ಬಿಂಬಿತವಾಗಬೇಕಿದೆ. ಆದರೆ, ಇಂತಹ ಕೆಲವರು ಭಾರತದ ಘನತೆಗೆ ಮಸಿ ಬಳಿಯಲು ಪಣ ತೊಟ್ಟು ನಿಂತಿದ್ದಾರೆ. ಅವರು ಭಾರತವನ್ನು ಅಪಖ್ಯಾತಿಗೊಳಿಸಲು ವಿದೇಶಗಳಿಗೆ ಪ್ರಯಾಣಿಸುತ್ತಾರೆ, ಅಲ್ಲಿ ವಿದೇಶಿ ಹಸ್ತಕ್ಷೇಪಕ್ಕಾಗಿ ಅಂಗಲಾಚುತ್ತಾರೆ. ತಮ್ಮ ವಿಫಲ 'ಉತ್ಪನ್ನ'(ನಾಯಕನನ್ನು)ವನ್ನು ಮಾರುಕಟ್ಟೆಗೆ ತರಲು, ಕಾಂಗ್ರೆಸ್ ಪಕ್ಷವು ದೇಶದ ಹಿತಾಸಕ್ತಿಗಳನ್ನು ಇನ್ನೆಷ್ಟು ಕಾಲ ಪಣಕ್ಕಿಡುತ್ತದೋ ಎಂದು ಆಶ್ಚರ್ಯವಾಗುತ್ತದೆ! ಶ್ರೀಹರಿಕೋಟಾದಲ್ಲಿ ಒಂದು ವರ್ಷದಲ್ಲಿ ನಡೆಯುವ ಉಡಾವಣಾ ಪ್ರಯತ್ನಗಳಿಗಿಂತಲೂ ಹೆಚ್ಚು ಬಾರಿ, ಕಾಂಗ್ರೆಸ್ ತನ್ನ ನಾಯಕನನ್ನು ಮುನ್ನೆಲೆಗೆ ತರಲು ವಿಫಲ ಪ್ರಯತ್ನಗಳನ್ನು ನಡೆಸುತ್ತದೆ.
ಸ್ನೇಹಿತರೆ,
ಕಾಂಗ್ರೆಸ್ ತನ್ನ ಮೇಲೆ ತಾನೇ ಎಂತಹ ಅವನತಿ ತಂದುಕೊಳ್ಳುತ್ತದೆಯೋ ಅದು ಸಂಪೂರ್ಣವಾಗಿ ಅವರದೇ ವಿಷಯ, ಅದರಲ್ಲಿ ನಮಗೆ ಯಾವುದೇ ತೊಂದರೆಯಿಲ್ಲ. ಆದರೆ, ಒಂದು ಕುಟುಂಬವನ್ನು ಪದೇಪದೆ ಎದುರಾಗುವ ವೈಫಲ್ಯದ ಕಳಂಕದಿಂದ ರಕ್ಷಿಸಲು ಕಾಂಗ್ರೆಸ್, ಭಾರತದ ಸಾಧನೆಗಳು, ಸಾಮರ್ಥ್ಯಗಳು ಮತ್ತು ಪ್ರಗತಿಯನ್ನೇ ಪರೀಕ್ಷೆಗೆ ಒಡ್ಡುತ್ತಿದೆ. ದ್ರಾಕ್ಷಿ ಹುಳಿಯಾಗಿದೆ ಎಂದು ತಿಳಿದು, ಆ ದ್ರಾಕ್ಷಿ ಬಳ್ಳಿಯನ್ನೇ ಕಡಿದುಹಾಕಲು ಕಾಂಗ್ರೆಸ್ ಹೊರಟಿದೆ. ವಾಸ್ತವದಲ್ಲಿ, ಈ ಕುಟುಂಬವು ಅವರ ಪಕ್ಷಕ್ಕೇ ಒಂದು ಹೊರೆಯಾಗಿ ಪರಿಣಮಿಸಿದೆ. ಪಕ್ಷದ ಹಿರಿಯ ನಾಯಕರಿಗೆ ಇದು ತಿಳಿದಿದೆ. ಅವರು ಖಾಸಗಿಯಾಗಿ ನಮ್ಮೊಂದಿಗೆ ಇದನ್ನು ಹಂಚಿಕೊಳ್ಳುತ್ತಾರೆ ಕೂಡ. ಆದರೂ, ಅವರು ತಮ್ಮ ಅವಮಾನವನ್ನು ನುಂಗಿಕೊಂಡು ಮೌನವಾಗಿದ್ದಾರೆ.
ಸ್ನೇಹಿತರೆ,
ಕಾಂಗ್ರೆಸ್ನ ಈ ನಡವಳಿಕೆಯು ಸರ್ಕಾರದ ಪ್ರಾಮಾಣಿಕ ಟೀಕಾಕಾರರಿಗೂ ಹಾನಿ ಉಂಟುಮಾಡುತ್ತದೆ, ಪ್ರಜಾಪ್ರಭುತ್ವದಲ್ಲಿ ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಇದರಿಂದ ಪ್ರಾಮಾಣಿಕ ಟೀಕಾಕಾರರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ. ಪ್ರಜಾಪ್ರಭುತ್ವದ ರೀತಿಯಲ್ಲಿ ಸರ್ಕಾರದ ವಿರುದ್ಧ ತಮ್ಮ ಟೀಕೆಗಳನ್ನು ಮಂಡಿಸಲು ಬಯಸುವವರ ಧ್ವನಿಯು, ಕಾಂಗ್ರೆಸ್ ಸೃಷ್ಟಿಸುವ ಗದ್ದಲದಲ್ಲಿ ಮುಳುಗಿಹೋಗುತ್ತದೆ. ನಿಜವಾದ ಟೀಕಾಕಾರರ ಧ್ವನಿಯನ್ನು ಅಡಗಿಸಲಾಗುತ್ತಿದೆ. ಪ್ರಜಾಪ್ರಭುತ್ವ ಮತ್ತು ರಾಷ್ಟ್ರದ ಹಿತಾಸಕ್ತಿಯ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವವರು, ಅವರು ಸರ್ಕಾರದ ಕಟು ವಿರೋಧಿಗಳಾಗಿದ್ದರೂ ಸಹ ಕಾಂಗ್ರೆಸ್ನ ಕೂಗಾಟ ಮತ್ತು ಗದ್ದಲದ ನಡುವೆ ಮಾತನಾಡಲು ಅವಕಾಶವನ್ನೇ ಪಡೆಯುವುದಿಲ್ಲ. ಸಂಸತ್ತಿನಲ್ಲಿ ನಾವು ಇದನ್ನು ಕಂಡಿದ್ದೇವೆ. ವಿರೋಧ ಪಕ್ಷಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಮತ್ತು ಸರ್ಕಾರವನ್ನು ಟೀಕಿಸಲು ಬಯಸುವ ಅನೇಕ ಪ್ರತಿಭಾವಂತ ಯುವ ಸಂಸದರಿದ್ದಾರೆ. ಆದರೆ, ಕಾಂಗ್ರೆಸ್ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುತ್ತದೆ, ಇದರಿಂದ ಇತರರಿಗೆ ಅವಕಾಶ ಸಿಗುವುದಿಲ್ಲ. ಏಕೆಂದರೆ, ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ಮುಂಚೂಣಿಯಲ್ಲಿ(ಪ್ರಚಾರದ ಬೆಳಕಿನಲ್ಲಿ) ಇರಿಸಿಕೊಳ್ಳಲು ಕಾಂಗ್ರೆಸ್ ಬಯಸುತ್ತದೆ. ಹೀಗೆ ಮಾಡುವ ಮೂಲಕ, ಕಾಂಗ್ರೆಸ್ ವಿರೋಧ ಪಕ್ಷದ ಯುವ ಸಂಸದರಿಗೆ ಘೋರ ಅನ್ಯಾಯ ಎಸಗುತ್ತಿದೆ.
ಮತ್ತು ಸ್ನೇಹಿತರೆ,
ಸರ್ಕಾರದ ನ್ಯೂನತೆಗಳನ್ನು ಎತ್ತಿ ತೋರಿಸುವ ಮತ್ತು ವ್ಯವಸ್ಥಿತ ಸುಧಾರಣೆಯನ್ನು(ಇದು ಪ್ರಜಾಪ್ರಭುತ್ವದಲ್ಲಿ ಅತ್ಯಗತ್ಯ) ಬಯಸುವ ಸಹಜವಾದ ಚಳುವಳಿಗಳನ್ನು ಕೂಡ ಕಾಂಗ್ರೆಸ್ ಹಾಳು ಮಾಡುತ್ತಿದೆ. ಕಾಂಗ್ರೆಸ್ ಒಂದು ಪರಾವಲಂಬಿ ಶಕ್ತಿಯಾಗಿ ಮಾರ್ಪಟ್ಟಿದೆ, ಅದು ಬೇರೆ ಯಾರೂ ಪ್ರಗತಿ ಸಾಧಿಸುವುದನ್ನು ಸಹಿಸುವುದಿಲ್ಲ. 'ಬೌದ್ಧಿಕ ನಕ್ಸಲರು' ಕಾಂಗ್ರೆಸ್ನ ಚಿಂತನಾ ಶಕ್ತಿಯನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ, ಇದರಿಂದಾಗಿ ಕಾಂಗ್ರೆಸ್ ಸ್ವತಃ ಯೋಚಿಸುವ ಸಾಮರ್ಥ್ಯವನ್ನೇ ಕಳೆದುಕೊಂಡಿದೆ. ಹಿಂದೆ ಕಾಡುಗಳಲ್ಲಿ ವಿನಾಶ ಉಂಟುಮಾಡಿದವರು ಈಗ ಕಾಂಗ್ರೆಸ್ನೊಳಗೆ ನುಸುಳಿದ್ದಾರೆ, ದೇಶದಲ್ಲಿ ಅನಾಹುತಗಳನ್ನು ಸೃಷ್ಟಿಸಲು ಹೊರಟಿದ್ದಾರೆ.
ಸ್ನೇಹಿತರೆ,
ಈ ಎಲ್ಲಾ ಸವಾಲುಗಳ ನಡುವೆ, 'ವಿಕಸಿತ ಭಾರತ'ದ ಮಹಾನ್ ಗುರಿ ನಮ್ಮ ಮುಂದಿದೆ. ರಾಷ್ಟ್ರದ ಆಕಾಂಕ್ಷೆಗಳು ಅಪಾರವಾಗಿವೆ. ಆದ್ದರಿಂದ, ಇಂದು ಇಡೀ ಭಾರತದಲ್ಲಿ ಒಂದೇ ಒಂದು ಸಂಕಲ್ಪ ಪ್ರತಿಧ್ವನಿಸುತ್ತಿದೆ, ಅದೇನು ಎಂದರೆ, 'ನಾವು ಇದನ್ನು ಸಾಧಿಸುತ್ತೇವೆ, ನಾವು ಇದನ್ನು ಸಾಧಿಸುತ್ತೇವೆ.' ನಾವು ದೊಡ್ಡ ಕನಸು ಕಾಣುತ್ತೇವೆ, ಪ್ರತಿಯೊಂದು ಸವಾಲನ್ನು ಅವಕಾಶವನ್ನಾಗಿ ಪರಿವರ್ತಿಸುತ್ತೇವೆ ಮತ್ತು ಪ್ರತಿಯೊಂದು ಸಂಕಲ್ಪವನ್ನೂ ನನಸಾಗಿಸುತ್ತೇವೆ. ನಮ್ಮ ಆತ್ಮವಿಶ್ವಾಸವೇ ನಮ್ಮ ಶಕ್ತಿಯಾಗಿದೆ. 140 ಕೋಟಿ ನಾಗರಿಕರ ಕನಸುಗಳೇ ನಮಗೆ ಸ್ಫೂರ್ತಿ. ನಾವು ಹೊಸ ಆವಿಷ್ಕಾರಗಳನ್ನು ಮಾಡುತ್ತೇವೆ, ಹೊಸ ಹಾದಿಗಳನ್ನು ರೂಪಿಸುತ್ತೇವೆ, ಹೊಸ ಎತ್ತರಗಳನ್ನು ತಲುಪುತ್ತೇವೆ, ಭಾರತದ ಯಶಸ್ಸನ್ನು ಜಗತ್ತಿನ ಯಶಸ್ಸಿನೊಂದಿಗೆ ಬೆಸೆಯುತ್ತೇವೆ. ಈ ಶೃಂಗಸಭೆಯಿಂದ ಹೊರಹೊಮ್ಮುವ ಫಲಿತಾಂಶವು ಈ ಸ್ಫೂರ್ತಿಯನ್ನು ಇನ್ನಷ್ಟು ಬಲಪಡಿಸುತ್ತದೆ, ನಮ್ಮ ಸಂಕಲ್ಪಗಳಿಗೆ ಹೊಸ ಚೈತನ್ಯ ತುಂಬುತ್ತದೆ. ಭಾರತದ ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬ ದೃಢವಾದ ನಂಬಿಕೆ ನನಗಿದೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು.
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****