ಲೋಕಸಭಾ ಸಚಿವಾಲಯ
azadi ka amrit mahotsav

2026ರ ಅಕ್ಟೋಬರ್ 26-27ರಂದು ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ 12ನೇ ಬ್ರಿಕ್ಸ್ ಸಂಸದೀಯ ವೇದಿಕೆ ಸಭೆ: ಲೋಕಸಭಾ ಸ್ಪೀಕರ್


ಭಾರತದ ಪ್ರಧಾನಮಂತ್ರಿಯವರು ವೇದಿಕೆಯಲ್ಲಿ ಭಾಗವಹಿಸಿ, ಭೇಟಿ ನೀಡುವ ನಿಯೋಗಗಳ ನಾಯಕರನ್ನು ಭೇಟಿಯಾಗಲಿದ್ದಾರೆ: ಲೋಕಸಭಾ ಸ್ಪೀಕರ್

ಸಂಸತ್ತುಗಳ ಅಧ್ಯಕ್ಷರು, ಸಂಸದರು ಹಾಗೂ ಬ್ರಿಕ್ಸ್ ಸದಸ್ಯ ಮತ್ತು ಪಾಲುದಾರ ರಾಷ್ಟ್ರಗಳ ಇತರ ಗಣ್ಯರು ಸಂಸತ್ತುಗಳ ಕಾರ್ಯತಂತ್ರದ ಆದ್ಯತೆಗಳ ಕುರಿತು ಚರ್ಚಿಸಲಿದ್ದಾರೆ: ಲೋಕಸಭಾ ಸ್ಪೀಕರ್

ಜನಕೇಂದ್ರಿತ ಅಭಿವೃದ್ಧಿ ವಿಷಯದಡಿ ಭಾರತ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗುತ್ತಿರುವ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಜಾಗತಿಕ ಸಂಸದೀಯ ನಾಯಕರು ನವದೆಹಲಿಯಲ್ಲಿ ಸೇರಲಿದ್ದಾರೆ: ಲೋಕಸಭಾ ಸ್ಪೀಕರ್

ಸಾಂಸ್ಥಿಕ ಸ್ಥಿತಿಸ್ಥಾಪಕತೆ, ನೈತಿಕ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ರೂಪಾಂತರ, ಜಾಗತಿಕ ಆಡಳಿತ ಸುಧಾರಣೆಗಳು ಹಾಗೂ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸತ್ತಿನ ಕಾರ್ಯನಿರ್ವಹಣೆಯ ಕುರಿತು ಚರ್ಚೆಗಳು ನಡೆಯಲಿವೆ: ಲೋಕಸಭಾ ಸ್ಪೀಕರ್

ಸಂಸದೀಯ ರಾಜತಾಂತ್ರಿಕತೆ, ಸಾಮರ್ಥ್ಯವೃದ್ಧಿ ಮತ್ತು ಉತ್ತಮ ಅಭ್ಯಾಸಗಳ ವಿನಿಮಯದ ಕುರಿತು ಬ್ರಿಕ್ಸ್ ಸದಸ್ಯ ಹಾಗೂ ಪಾಲುದಾರ ರಾಷ್ಟ್ರಗಳ ಅಂತಾರಾಷ್ಟ್ರೀಯ ವ್ಯವಹಾರಗಳ ಸಮಿತಿಗಳು ಚರ್ಚಿಸಲಿವೆ ಲೋಕಸಭಾ ಸ್ಪೀಕರ್

ಪ್ರಕಟಣಾ ದಿನಾಂಕ: 22 OCT 2026 4:03PM by PIB Bengaluru

ಭಾರತದ ಸಂಸತ್ತು 2026ರ ಅಕ್ಟೋಬರ್ 26 ಮತ್ತು 27ರಂದು ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ 12ನೇ ಬ್ರಿಕ್ಸ್ ಸಂಸದೀಯ ವೇದಿಕೆ ಸಭೆಯನ್ನು ಆಯೋಜಿಸಲಿದೆ. ಈ ಸಮ್ಮೇಳನವು ಅಕ್ಟೋಬರ್ 26ರಂದು ಉದ್ಘಾಟನೆಯಾಗಲಿದೆ.

ಇಂದು ಸಂಸತ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು, ಈ ಸಮ್ಮೇಳನವು ಭಾರತದ ಸಂಸದೀಯ ರಾಜತಾಂತ್ರಿಕತೆಯ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಎಂದು ಹೇಳಿದರು. ಬ್ರಿಕ್ಸ್ ಸದಸ್ಯ ಮತ್ತು ಪಾಲುದಾರ ರಾಷ್ಟ್ರಗಳ ಸಂಸತ್ತುಗಳ ಅಧ್ಯಕ್ಷರು ಹಾಗೂ ಸಂಸದೀಯ ನಾಯಕರು, ಕೇಂದ್ರ ಸಚಿವರು, ರಾಜ್ಯಸಭೆಯ ಉಪಸಭಾಪತಿ ಶ್ರೀ ಹರಿವಂಶ್, ರಾಜ್ಯ ವಿಧಾನಮಂಡಲಗಳ ಸಭಾಧ್ಯಕ್ಷರು, ಸಂಸದರು ಮತ್ತು ಇತರ ಗಣ್ಯರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭೇಟಿ ನೀಡುವ ನಿಯೋಗಗಳ ನಾಯಕರನ್ನು ಭೇಟಿಯಾಗಲಿದ್ದಾರೆ ಎಂದು ಲೋಕಸಭಾ ಸ್ಪೀಕರ್ ತಿಳಿಸಿದರು.

ಭೇಟಿ ನೀಡುವ ನಿಯೋಗಗಳ ನಾಯಕರು ಹಾಗೂ ಸಂಸದೀಯ ಮೈತ್ರಿ ಗುಂಪುಗಳೊಂದಿಗೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಂವಾದಗಳು ಸಮ್ಮೇಳನದಲ್ಲಿ ನಡೆಯಲಿವೆ ಎಂದು ಅವರು ತಿಳಿಸಿದರು. 12ನೇ ಬ್ರಿಕ್ಸ್ ಸಂಸದೀಯ ವೇದಿಕೆಯ ಜಂಟಿ ಘೋಷಣೆಯನ್ನು ಅಂತಿಮಗೊಳಿಸಲು ನಿಯೋಗಗಳ ಕಾರ್ಯದರ್ಶಿಗಳ ಸಭೆಯು 2026ರ ಅಕ್ಟೋಬರ್ 25ರಂದು ನಡೆಯಲಿದೆ.

ಕಾರ್ಯಕ್ರಮದ ಮುಖ್ಯ ವಿಷಯವನ್ನು ಉಲ್ಲೇಖಿಸಿದ ಅವರು, “ಜನಕೇಂದ್ರಿತ ಅಭಿವೃದ್ಧಿಗಾಗಿ ಸಂಸತ್ತುಗಳನ್ನು ಬಲಪಡಿಸುವುದು” ಎಂಬ ಸಮಗ್ರ ವಿಷಯದಡಿ ವೇದಿಕೆಯಲ್ಲಿ ಚರ್ಚೆಗಳು ನಡೆಯಲಿವೆ ಎಂದು ಹೇಳಿದರು.

ಬ್ರಿಕ್ಸ್ ಸಂಸದೀಯ ವೇದಿಕೆಯ ಪರಂಪರೆಯನ್ನು ಮುಂದುವರಿಸಿಕೊಂಡು, 12ನೇ ಬ್ರಿಕ್ಸ್ ಸಂಸದೀಯ ವೇದಿಕೆಯು ಕೆಳಕಂಡ ನಾಲ್ಕು ಉನ್ನತ ಮಟ್ಟದ ಗೋಷ್ಠಿಗಳ ಮೂಲಕ ಒಮ್ಮತ ಆಧಾರಿತ ಸಂವಾದಕ್ಕೆ ಅವಕಾಶ ಕಲ್ಪಿಸಲಿದೆ ಎಂದು ಅವರು ತಿಳಿಸಿದರು:

(i) ಸ್ಥಿತಿಸ್ಥಾಪಕತೆ: ಉತ್ತಮ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಸಾಂಸ್ಥಿಕ ವ್ಯವಸ್ಥೆಗಳನ್ನು ಬಲಪಡಿಸುವಲ್ಲಿ ಸಂಸತ್ತುಗಳ ನಿರ್ಣಾಯಕ ಪಾತ್ರ.

(ii) ನಾವೀನ್ಯತೆ: ಸಂಸತ್ತುಗಳ ಮೂಲಕ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನಗಳಲ್ಲಿ ಮಾನವಕೇಂದ್ರಿತ ನಾವೀನ್ಯತೆಯನ್ನು ಉತ್ತೇಜಿಸುವುದು.

(iii) ಸಹಕಾರ: ಸಂಸದೀಯ ಸಹಕಾರದ ಮೂಲಕ ಜಾಗತಿಕ ಆಡಳಿತ ವ್ಯವಸ್ಥೆಯನ್ನು ಹೆಚ್ಚು ಪ್ರಾತಿನಿಧಿಕವಾಗಿಸುವುದು.

(iv) ಸುಸ್ಥಿರತೆ: ನಮ್ಮ ದೇಶಗಳ ಸುಸ್ಥಿರ ಹಾಗೂ ಎಲ್ಲರನ್ನೂ ಒಳಗೊಳ್ಳುವ ಭವಿಷ್ಯವನ್ನು ಖಚಿತಪಡಿಸುವಲ್ಲಿ ಸಂಸತ್ತುಗಳ ಪಾತ್ರ.

ಇದರ ಜೊತೆಗೆ, ಬ್ರಿಕ್ಸ್ ಸದಸ್ಯ ಮತ್ತು ಪಾಲುದಾರ ರಾಷ್ಟ್ರಗಳ ಸಂಸತ್ತುಗಳ ಅಂತಾರಾಷ್ಟ್ರೀಯ ವ್ಯವಹಾರಗಳ ಸಮಿತಿಗಳ ಅಧ್ಯಕ್ಷರ ವಿಶೇಷ ಸಭೆಯೂ ನಡೆಯಲಿದೆ. ಈ ಸಭೆಯಲ್ಲಿ ಸಂಸದೀಯ ರಾಜತಾಂತ್ರಿಕತೆ, ಸಾಮರ್ಥ್ಯವೃದ್ಧಿ ಮತ್ತು ಉತ್ತಮ ಅಭ್ಯಾಸಗಳ ವಿನಿಮಯದ ಕುರಿತು ಚರ್ಚೆಗಳು ನಡೆಯುತ್ತವೆ.

ಉನ್ನತ ಮಟ್ಟದ ಗೋಷ್ಠಿಗಳು, ಸಮಾನಾಂತರ ಸಭೆಗಳು ಮತ್ತು ದ್ವಿಪಕ್ಷೀಯ ಮಾತುಕತೆಗಳ ಜೊತೆಗೆ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೂ ಇರಲಿದೆ ಎಂದು ಶ್ರೀ ಬಿರ್ಲಾ ತಿಳಿಸಿದರು. ಗಣ್ಯ ಅತಿಥಿಗಳ ಗೌರವಾರ್ಥ ಭಾರತದ ಉಪರಾಷ್ಟ್ರಪತಿಯವರು ಔತಣಕೂಟವನ್ನು ಆಯೋಜಿಸಲಿದ್ದಾರೆ.

ನಿಯೋಗಗಳ ಸದಸ್ಯರು ಭಾರತದ ಸಂಸತ್ತಿಗೆ ಭೇಟಿ ನೀಡಲಿದ್ದು, ದೆಹಲಿಯ ವಿವಿಧ ಸಾಂಸ್ಕೃತಿಕ ಸ್ಥಳಗಳಿಗೂ ಭೇಟಿ ನೀಡಲಿದ್ದಾರೆ. ಸಮ್ಮೇಳನವು ಅಕ್ಟೋಬರ್ 27ರಂದು ಮುಕ್ತಾಯಗೊಳ್ಳಲಿದೆ.

 

*****

 


(ಪ್ರಕಟಣೆ ಐ.ಡಿ.: 2326712) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Assamese , Urdu , हिन्दी , Malayalam