ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಭಾರತದ ಎಐ ಪಯಣವನ್ನು ಮುನ್ನಡೆಸಲು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಯುವಜನತೆಗೆ ಕರೆ


ಸದೃಢ ಪೂರೈಕೆ ಸರಪಳಿ ಮತ್ತು ನ್ಯಾಯಯುತ ವ್ಯಾಪಾರ ಪದ್ಧತಿಗಳು ಜಾಗತಿಕ ಹೂಡಿಕೆ ತಾಣವಾಗಿ ಭಾರತದ ಸ್ಥಾನವನ್ನು ಬಲವರ್ಧನೆಗೊಳಿಸುತ್ತವೆ: ಶ್ರೀ ಗೋಯಲ್

ಭವಿಷ್ಯದ ಉದ್ಯೋಗಾವಕಾಶಗಳಿಗೆ ಸಜ್ಜಾಗಲು ಯುವಜನತೆ ಉದಯೋನ್ಮುಖ ತಂತ್ರಜ್ಞಾನ, ಸೈಬರ್ ಭದ್ರತೆ ಮತ್ತು ನಿರಂತರ ಕಲಿಕೆಗೆ ಆದ್ಯತೆ ನೀಡಬೇಕು: ಶ್ರೀ ಗೋಯಲ್

ಪ್ರಕಟಣಾ ದಿನಾಂಕ: 15 OCT 2026 3:06PM by PIB Bengaluru

ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಂತೆ, ಕೌಶಲಗಳನ್ನು ನಿರಂತರವಾಗಿ ವೃದ್ಧಿಸಿಕೊಳ್ಳುವಂತೆ ಹಾಗೂ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಪಯಣದಲ್ಲಿ ಕೊಡುಗೆ ನೀಡುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಪಿಯೂಷ್ ಗೋಯಲ್ ಅವರು ದೇಶದ ಯುವಜನತೆಗೆ ಕರೆ ನೀಡಿದರು. ಎಸ್‌ಆರ್‌ಸಿಸಿ ಶತಮಾನೋತ್ಸವ ಸಮಾವೇಶವನ್ನು ಉದ್ಘಾಟಿಸಿ ‘ವಿಕಸಿತ ಭಾರತದೆಡೆಗಿನ ಪಥಗಳು’ ವಿಷಯದ ಮಾತನಾಡಿದ ಅವರು, ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆ, ತಂತ್ರಜ್ಞಾನಗಳ ಅಳವಡಿಕೆ ಮತ್ತು ಕೌಶಲ ಅಭಿವೃದ್ಧಿಯು ಯುವಜನತೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದರೊಂದಿಗೆ ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ಬಲವರ್ಧನೆಗೊಳಿಸಲಿದೆ ಎಂದು ಹೇಳಿದರು.

ರಾಜಕೀಯ ಸ್ಥಿರತೆ, ಸದೃಢ ಪೂರೈಕೆ ಸರಪಳಿ ಹಾಗೂ ನ್ಯಾಯಯುತ ಮತ್ತು ಪಾರದರ್ಶಕ ವ್ಯಾಪಾರ ಪದ್ಧತಿಗಳ ಆಧಾರದ ಮೇಲೆ ಉತ್ಪಾದನೆ ಮತ್ತು ಹೂಡಿಕೆಗೆ ಸೂಕ್ತವಾದ ದೇಶಗಳನ್ನು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಶ್ರೀ ಗೋಯಲ್ ತಿಳಿಸಿದರು. ಹೂಡಿಕೆಗಳನ್ನು ಆಕರ್ಷಿಸಲು, ಉತ್ಪಾದನೆಯನ್ನು ವಿಸ್ತರಿಸಲು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಭಾರತಕ್ಕೆ ಉತ್ತಮ ಅವಕಾಶವಿದೆ. ಉತ್ತರ ಮತ್ತು ಈಶಾನ್ಯ ಭಾರತದಲ್ಲಿಯೂ ಇಂತಹ ಅವಕಾಶಗಳನ್ನು ಬಳಸಿಕೊಳ್ಳುವುದರಿಂದ ಉದ್ಯೋಗ ಸೃಷ್ಟಿಸಿ, ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಬದಲಾಗುತ್ತಿರುವ ಉದ್ಯೋಗ ವಲಯಕ್ಕೆ ಸಜ್ಜಾಗಲು ಕೃತಕ ಬುದ್ಧಿಮತ್ತೆ (ಎಐ), ಸೈಬರ್ ಭದ್ರತೆ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳ ಪ್ರಾಯೋಗಿಕ ಬಳಕೆಯಲ್ಲಿ ಕೌಶಲಗಳನ್ನು ಬೆಳೆಸಿಕೊಳ್ಳುವಂತೆ ಯುವಜನತೆಗೆ ಅವರು ಕರೆ ನೀಡಿದರು. ಬೃಹತ್ ಭಾಷಾ ಮಾದರಿಗಳು (ಎಲ್‌ಎಲ್‌ಎಂ) ಮತ್ತು ಇತರ ಎಐ ವ್ಯವಸ್ಥೆಗಳನ್ನು ಉದ್ಯಮಗಳು ಹಾಗೂ ಸಾಮಾನ್ಯ ಜನರು ಬಳಸಬಹುದಾದ ಪ್ರಾಯೋಗಿಕ ಸಾಧನಗಳನ್ನಾಗಿ ಅಭಿವೃದ್ಧಿಪಡಿಸಬೇಕಿದೆ ಎಂದು ಗೋಯಲ್ ಹೇಳಿದರು. 1990 ಮತ್ತು 2000ರ ದಶಕಗಳಲ್ಲಿ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಸಾಧಿಸಿದ ಪ್ರಗತಿಯನ್ನು ಉಲ್ಲೇಖಿಸಿದ ಅವರು, ಯುವಜನರು ಹೊಸ ತಂತ್ರಜ್ಞಾನಗಳನ್ನು ಕೇವಲ ಅಳವಡಿಸಿಕೊಳ್ಳುವುದಕ್ಕೆ ಸೀಮಿತವಾಗದೆ, ಅವುಗಳ ಅಭಿವೃದ್ಧಿ ಮತ್ತು ಬಳಕೆಯಲ್ಲಿ ನಾಯಕತ್ವ ವಹಿಸಬೇಕು ಎಂದು ಸಲಹೆ ನೀಡಿದರು.

ನಿರಂತರ ಕಲಿಕೆ ಮತ್ತು ವೈಯಕ್ತಿಕ ಅಭಿವೃದ್ಧಿಯ ಮಹತ್ವವನ್ನೂ ಗೋಯಲ್ ಬಲವಾಗಿ ಪ್ರತಿಪಾದಿಸಿದರು. ಕೌಶಲವೃದ್ಧಿಯನ್ನು ಜೀವನಪರ್ಯಂತದ ಜವಾಬ್ದಾರಿಯಾಗಿ ಪರಿಗಣಿಸಬೇಕು. ಉದ್ಯಮಗಳ ಬೆಳವಣಿಗೆ, ಸುಗಮ ವ್ಯವಹಾರ ಮತ್ತು ಸುಗಮ ಜೀವನಕ್ಕೆ ಕೊಡುಗೆ ನೀಡಬಹುದಾದ ಹೊಸ ಅವಕಾಶಗಳನ್ನು ಗುರುತಿಸಬೇಕು ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ವಿವಿಧ ಕ್ಷೇತ್ರಗಳಲ್ಲಿನ ತಂತ್ರಜ್ಞಾನ ಪ್ರಗತಿಯನ್ನು ಪ್ರಾಯೋಗಿಕ ಪರಿಹಾರಗಳಾಗಿ ಪರಿವರ್ತಿಸುವಲ್ಲಿ ಭಾರತದ ಯುವಜನರು ಮಹತ್ವದ ಪಾತ್ರ ವಹಿಸಬಹುದು ಎಂದು ಗೋಯಲ್ ಹೇಳಿದರು.

ವಿಕಸಿತ ಭಾರತ–2047ರ ದೂರದೃಷ್ಟಿಯ ಪರಿಕಲ್ಪನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ಗೋಯಲ್, ಭಾರತದ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿಯು 140 ಕೋಟಿ ಭಾರತೀಯರ ಸಾಮೂಹಿಕ ಸಂಕಲ್ಪವಾಗಿದೆ ಎಂದು ಹೇಳಿದರು. ಕೀಳರಿಮೆ ಮತ್ತು ಸೋಲಿನ ಮನೋಭಾವದಿಂದ ಹೊರಬರುವಂತೆ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನೀಡಿದ್ದ ಕರೆಯನ್ನು ಉಲ್ಲೇಖಿಸಿದ ಅವರು, ಆತ್ಮವಿಶ್ವಾಸ, ಮಹತ್ವಾಕಾಂಕ್ಷೆ ಮತ್ತು ಸಕಾರಾತ್ಮಕ ರಾಷ್ಟ್ರೀಯ ದೂರದೃಷ್ಟಿಯ ಅಗತ್ಯತೆಯನ್ನು ಪ್ರತಿಪಾದಿಸಿದರು.  

ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಭಾರತದ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯ ಪಾತ್ರವನ್ನೂ ಅವರು ಪ್ರಸ್ತಾಪಿಸಿದರು ಮತ್ತು ನಾಗರಿಕರಲ್ಲಿ ಸಾಮೂಹಿಕ ಪ್ರಯತ್ನ ಮತ್ತು ಕರ್ತವ್ಯಪ್ರಜ್ಞೆ ಇರಬೇಕೆಂದು ಪ್ರತಿಪಾದಿಸಿದರು. ಮಹತ್ವಾಕಾಂಕ್ಷೆಯ ಗುರಿಗಳನ್ನು ನಿಗದಿಪಡಿಸಿಕೊಳ್ಳುವುದರ ಜತೆಗೆ ತಮ್ಮ ವೈಯಕ್ತಿಕ ಆಶಯಗಳನ್ನು ಸ್ಪಷ್ಟವಾಗಿ ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಶ್ರೀ ಗೋಯಲ್ ಕರೆ ನೀಡಿದರು. ನಾಗರಿಕರ ಸಂಘಟಿತ ಪ್ರಯತ್ನದಿಂದ ಭಾರತವು ಜಾಗತಿಕವಾಗಿ ಮುಂಚೂಣಿ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.

ಯುವ ಭಾರತೀಯರ ಉದ್ಯಮಶೀಲ ಮನೋಭಾವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ಗೋಯಲ್, ವಿಶೇಷವಾಗಿ ಸವಾಲುಗಳನ್ನು ಎದುರಿಸುತ್ತಾ, ಅಪಾಯಗಳನ್ನು ಸ್ವೀಕರಿಸಿ, ನವೀಖಿಸಿದರು. ಯುವ ಉದ್ಯಮಿಗಳ ಉತ್ಸಾಹ, ದೃಢಸಂಕಲ್ಪ ಮತ್ತು ಮಹತ್ವಾಕಾಂಕ್ಷೆ ಭಾರತದ ಬದಲಾಗುತ್ತಿರುವ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತವೆ, ಜಾಗತಿಕ ಆರ್ಥಿಕತೆಯಲ್ಲಿ ದೇಶದ ಪಾಲ್ಗೊಳ್ಳುವಿಕೆ ಹೆಚ್ಚುವುದಕ್ಕೂ ಅವು ಕೊಡುಗೆ ನೀಡುತ್ತಿವೆ ಎಂದು ತಿಳಿಸಿದರು.

ಭಾರತದ ಯುವ ಜನಸಂಖ್ಯೆ, ಜನಸಂಖ್ಯಾ ಲಾಭಾಂಶ, ವಿಶಾಲ ದೇಶೀಯ ಮಾರುಕಟ್ಟೆ ಮತ್ತು ಉದ್ಯಮಶೀಲತೆಯ ಬಲದಿಂದಾಗಿ ಮುಂದಿನ 20–25 ವರ್ಷಗಳವರೆಗೆ ದೇಶವು ಅತ್ಯಂತ ವೇಗವಾಗಿ ಬೆಳೆಯುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ ಮುಂದುವರಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ವೃತ್ತಿಪರರು ಜಾಗತಿಕ ಉದ್ಯಮಗಳು, ತಂತ್ರಜ್ಞಾನ ಅಭಿವೃದ್ಧಿ ಮತ್ತು ವೈಜ್ಞಾನಿಕ ಸಂಶೋಧನೆಗೆ ಕೊಡುಗೆ ನೀಡುತ್ತಿದ್ದಾರೆ. ಅದು ಜಾಗತಿಕ ಆರ್ಥಿಕ ಮತ್ತು ತಂತ್ರಜ್ಞಾನ ಕ್ಷೇತ್ರವನ್ನು ರೂಪಿಸುವಲ್ಲಿ ಭಾರತದ ಪಾತ್ರ ವಿಸ್ತರಿಸುತ್ತಿರುವುದಕ್ಕೆ  ಸಾಕ್ಷಿಯಾಗಿದೆ ಎಂದು ಹೇಳಿದರು.

ಮುಕ್ತ ವ್ಯಾಪಾರ ಒಪ್ಪಂದಗಳ ಕುರಿತು ಮಾತನಾಡಿದ ಸಚಿವರು, “ಅಮೆರಿಕದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತವನ್ನು ಅಂತಿಮಗೊಳಿಸಲಾಗಿದೆ. ಅದರ ಅಂತಿಮ ರೂಪುರೇಷೆ ಮತ್ತು ಕಾನೂನು ಕರಡು ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ನಮ್ಮ ಸಮಾನ ಸ್ಪರ್ಧಿ ರಾಷ್ಟ್ರಗಳಿಗಿಂತ ಸ್ಪರ್ಧಾತ್ಮಕ ಪ್ರಯೋಜನ ಲಭ್ಯವಾಗುವುದನ್ನು ಖಾತ್ರಿಪಡಿಸಿಕೊಂಡ ಬಳಿಕ, ಒಪ್ಪಂದವನ್ನು ಶೀಘ್ರವೇ ಅಂತಿಮಗೊಳಿಸಿ ಜಾರಿಗೆ ತರುವ ನಿರೀಕ್ಷೆಯಿದೆ” ಎಂದು ತಿಳಿಸಿದರು.

ತಮ್ಮ ಭಾಷಣದ ಕೊನೆಯಲ್ಲಿ ಶ್ರೀ ಗೋಯಲ್, ವಿದ್ಯಾರ್ಥಿಗಳು ಸ್ವಂತ ಕಲಿಕೆಯ ಹೊಣೆಗಾರಿಕೆ ವಹಿಸಿಕೊಳ್ಳಬೇಕು, ಉದಯೋನ್ಮುಖ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಬೇಕು ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ನಿರಂತರ ಪರಿಶ್ರಮ, ಮಹತ್ವಾಕಾಂಕ್ಷೆಯ ಗುರಿಗಳು ಹಾಗೂ ಹೊಸ ಸವಾಲುಗಳನ್ನು ಸ್ವೀಕರಿಸುವ ಮನೋಭಾವದಿಂದ ಯುವ ಭಾರತೀಯರು ವಿಕಸಿತ ಭಾರತ–2047ರ ಪರಿಕಲ್ಪನೆಗೆ ಕೊಡುಗೆ ನೀಡಬಹುದು. ಜತೆಗೆ, ಭವಿಷ್ಯದ ಪೀಳಿಗೆಗಳಿಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಅವರು ಹೇಳಿದರು.

 

*****


(ಪ್ರಕಟಣೆ ಐ.ಡಿ.: 2323907) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Telugu