ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಭಾರತವು ನವದೆಹಲಿಯಲ್ಲಿ ಬಿಮ್‌ಸ್ಟೆಕ್ ಗೃಹ ಸಚಿವರ ಮೊದಲ ಸಭೆ ಆಯೋಜಿಸಿತು
ಬಿಮ್‌ಸ್ಟೆಕ್ ಗೃಹ ಸಚಿವರ ಮೊದಲ ಸಚಿವಮಟ್ಟದ ಸಭೆಯನ್ನು ಆಯೋಜಿಸುತ್ತಿರುವುದು ಭಾರತಕ್ಕೆ ಅತ್ಯಂತ ಹೆಮ್ಮೆಯ ಮತ್ತು ಗೌರವದ ವಿಷಯವಾಗಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ‘ವಿಶ್ವಮಿತ್ರ’ ಮನೋಭಾವದೊಂದಿಗೆ ಮುನ್ನಡೆಯುತ್ತಿದ್ದು, ಶಾಂತಿ, ಸಹಬಾಳ್ವೆ ಮತ್ತು ಮಾನವ ಕಲ್ಯಾಣಕ್ಕೆ ಸದಾ ಬದ್ಧವಾಗಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಅನುಗುಣವಾಗಿ, ಬಿಮ್‌ಸ್ಟೆಕ್ ಅನ್ನು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಮತ್ತು ಭದ್ರತೆಯ ಮಾದರಿಯನ್ನಾಗಿ ರೂಪಿಸುವುದು ಗೃಹ ಸಚಿವರಾಗಿ ನಮ್ಮ ಜವಾಬ್ದಾರಿಯಾಗಿದೆ
ಅಂತರರಾಷ್ಟ್ರೀಯ ಭಯೋತ್ಪಾದನೆ, ಗಡಿಯಾಚೆಗಿನ ಸಂಘಟಿತ ಅಪರಾಧಗಳು ಮತ್ತು ಮಾದಕವಸ್ತುಗಳ ಅಕ್ರಮ ಕಳ್ಳಸಾಗಣೆಯಂತಹ ಸವಾಲುಗಳನ್ನು ಎದುರಿಸುವಲ್ಲಿ ಸಹಕಾರಕ್ಕೆ ಸಂಬಂಧಿಸಿದ ಬಿಮ್‌ಸ್ಟೆಕ್ ಒಪ್ಪಂದವನ್ನು ಸಂಪೂರ್ಣವಾಗಿ ಜಾರಿಗೊಳಿಸಲು ನಾವು ಬದ್ಧರಾಗಿದ್ದೇವೆ
ಭಯೋತ್ಪಾದನೆಯ ವಿರುದ್ಧ ಭಾರತವು ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದೆ
ಭಯೋತ್ಪಾದಕ ಜಾಲಗಳು ಈ ಪ್ರದೇಶದ ಯಾವುದೇ ಭಾಗದಲ್ಲಿ ಆಶ್ರಯ ಪಡೆಯಲು, ಸದಸ್ಯರನ್ನು ನೇಮಕ ಮಾಡಿಕೊಳ್ಳಲು, ತರಬೇತಿ ಪಡೆಯಲು, ಹಣ ಸಂಗ್ರಹಿಸಲು ಅಥವಾ ನೆರೆಯ ದೇಶಗಳ ವಿರುದ್ಧ ಚಟುವಟಿಕೆಗಳನ್ನು ನಡೆಸಲು ಯಾವುದೇ ಅವಕಾಶ ದೊರೆಯದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಸಾಮೂಹಿಕ ಸಂಕಲ್ಪವಾಗಿರಬೇಕು
ಮಾದಕವಸ್ತು ನಿಯಂತ್ರಣ, ಭಯೋತ್ಪಾದನೆ ನಿಗ್ರಹ ಮತ್ತು ಕಾನೂನು ಸಹಕಾರ, ಪರಾರಿಯಾಗಿರುವ ಅಪರಾಧಿಗಳ ಹಸ್ತಾಂತರ, ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧಗಳ ತನಿಖೆ ಹಾಗೂ ಸಾಂಸ್ಥಿಕ ಸಹಕಾರ ಮತ್ತು ಸಾಮರ್ಥ್ಯವೃದ್ಧಿ ಎಂಬ ಐದು ಪ್ರಮುಖ ಸಹಕಾರ ಕ್ಷೇತ್ರಗಳ ಮಹತ್ವವನ್ನು ಕೇಂದ್ರ ಗೃಹ ಸಚಿವರು ಒತ್ತಿಹೇಳಿದರು
ಮಾದಕವಸ್ತುಗಳ ಕಳ್ಳಸಾಗಣೆಯು ‘ಸಾವಿನ ಸಾಗಣೆ’ಯಾಗಿದೆ. ಮಾದಕವಸ್ತುಗಳ ಕಳ್ಳಸಾಗಣೆಯಲ್ಲಿ ‘ಸುವರ್ಣ’ ಎಂಬುದೇನೂ ಇಲ್ಲ
ಇದು ಕೇವಲ ಮಾದಕವಸ್ತುಗಳ ವ್ಯಾಪಾರವಲ್ಲ; ನಮ್ಮ ಯುವಜನರ ಬದುಕು, ನಮ್ಮ ಸಮಾಜ, ನಮ್ಮ ಸಂಸ್ಕೃತಿ ಮತ್ತು ಮುಂದಿನ ಪೀಳಿಗೆಯ ಭವಿಷ್ಯದ ಮೇಲಿನ ದಾಳಿಯಾಗಿದೆ
ಮಾದಕವಸ್ತುಗಳ ಹಾವಳಿಯನ್ನು ಎದುರಿಸಲು ನಾವು ‘ಇಡೀ ಪ್ರದೇಶವನ್ನು ಒಳಗೊಳ್ಳುವ ಸಮಗ್ರ ವಿಧಾನ’ವನ್ನು ಅಳವಡಿಸಿಕೊಳ್ಳಬೇಕು
ಒಂದು ಸದಸ್ಯ ರಾಷ್ಟ್ರದ ಭದ್ರತೆಯು ಇಡೀ ಪ್ರದೇಶದ ಭದ್ರತೆಯನ್ನು ಬಲಪಡಿಸುತ್ತದೆ. ಈ ತತ್ವದ ಮಾರ್ಗದರ್ಶನದಲ್ಲಿ, ಶಾಂತಿಯುತ, ಸುರಕ್ಷಿತ ಮತ್ತು ಸಮೃದ್ಧ ಬಂಗಾಳ ಕೊಲ್ಲಿ ಪ್ರದೇಶವನ್ನು ನಿರ್ಮಿಸಲು ಭಾರತ ಬದ್ಧವಾಗಿದೆ
ಪ್ರಕಟಣಾ ದಿನಾಂಕ:
13 OCT 2026 6:44PM by PIB Bengaluru
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಭಾರತವು ಇಂದು ನವದೆಹಲಿಯಲ್ಲಿ ಬಿಮ್‌ಸ್ಟೆಕ್ ಗೃಹ ಸಚಿವರ ಮೊದಲ ಸಭೆಯನ್ನು ಆಯೋಜಿಸಿತು. ಈ ಸಭೆಯಲ್ಲಿ ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಪ್ರಾದೇಶಿಕ ಭದ್ರತೆ, ಪರಸ್ಪರ ವಿಶ್ವಾಸ ಮತ್ತು ಸಹಕಾರವನ್ನು ಬಲಪಡಿಸುವ ಬಿಮ್‌ಸ್ಟೆಕ್ ಸದಸ್ಯ ರಾಷ್ಟ್ರಗಳ ಸಾಮೂಹಿಕ ಬದ್ಧತೆಯನ್ನು ಪುನರುಚ್ಚರಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಬಿಮ್‌ಸ್ಟೆಕ್ ಗೃಹ ಸಚಿವರ ಮೊದಲ ಸಭೆಯನ್ನು ಆಯೋಜಿಸುತ್ತಿರುವುದು ಭಾರತಕ್ಕೆ ಅಪಾರ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ ಎಂದು ಹೇಳಿದರು. ಪ್ರಾದೇಶಿಕ ಏಕೀಕರಣ, ಆರ್ಥಿಕ ಸಹಕಾರ ಮತ್ತು ಸಾಮೂಹಿಕ ಭದ್ರತೆಗೆ ಬಿಮ್‌ಸ್ಟೆಕ್ ಅತ್ಯಗತ್ಯ ವೇದಿಕೆಯಾಗಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ‘ವಿಶ್ವಮಿತ್ರ’ ಮನೋಭಾವದೊಂದಿಗೆ ಮುನ್ನಡೆಯುತ್ತಿದ್ದು, ಶಾಂತಿ, ಸಹಬಾಳ್ವೆ ಮತ್ತು ಮಾನವ ಕಲ್ಯಾಣಕ್ಕೆ ಸದಾ ಬದ್ಧವಾಗಿದೆ ಎಂದು ಅವರು ಹೇಳಿದರು.
2025ರ ಏಪ್ರಿಲ್ 4ರಂದು ಬ್ಯಾಂಕಾಕ್‌ನಲ್ಲಿ ನಡೆದ ಆರನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, “ನಮಗೆ ಬಿಮ್‌ಸ್ಟೆಕ್ ಕೇವಲ ಪ್ರಾದೇಶಿಕ ಸಂಘಟನೆಯಲ್ಲ. ಅದು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಮತ್ತು ಭದ್ರತೆಯ ಮಾದರಿಯಾಗಿದೆ” ಎಂದು ಹೇಳಿದ್ದನ್ನು ಶ್ರೀ ಅಮಿತ್ ಶಾ ಸ್ಮರಿಸಿದರು. ಈ ದೂರದೃಷ್ಟಿಯನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ, ನಮ್ಮ ನಾಗರಿಕರ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ನಮ್ಮ ಸಂಸ್ಥೆಗಳ ಸಾಮರ್ಥ್ಯವನ್ನು ಬಲಪಡಿಸುವ ಪ್ರಾಯೋಗಿಕ ಕಾರ್ಯವಿಧಾನಗಳಾಗಿ ಸಹಕಾರವನ್ನು ರೂಪಿಸುವುದು ಇಂದು ಗೃಹ ಸಚಿವರಾದ ನಮ್ಮ ಜವಾಬ್ದಾರಿಯಾಗಿದೆ ಎಂದು ಶ್ರೀ ಶಾ ಹೇಳಿದರು.
ಭಯೋತ್ಪಾದನೆಯ ವಿರುದ್ಧ ಭಾರತದ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಕೇಂದ್ರ ಗೃಹ ಸಚಿವರು ಒತ್ತಿಹೇಳಿದರು. ಭಯೋತ್ಪಾದನೆ, ಗಡಿಯಾಚೆಗಿನ ಸಂಘಟಿತ ಅಪರಾಧಗಳು, ಮಾದಕವಸ್ತುಗಳ ಕಳ್ಳಸಾಗಣೆ, ಮಾನವ ಕಳ್ಳಸಾಗಣೆ ಮತ್ತು ಉದಯೋನ್ಮುಖ ಸೈಬರ್ ಬೆದರಿಕೆಗಳನ್ನು ಎದುರಿಸಲು ಹೆಚ್ಚಿನ ಸಹಕಾರಕ್ಕೆ ಅವರು ಕರೆ ನೀಡಿದರು. ಅಪರಾಧಿಗಳು ಮತ್ತು ಭಯೋತ್ಪಾದಕರನ್ನು ನ್ಯಾಯದ ಕಟಕಟೆಗೆ ತರಲು ಸಕಾಲದಲ್ಲಿ ಗುಪ್ತಚರ ಮಾಹಿತಿಯ ವಿನಿಮಯ, ಹಣಕಾಸು ವಹಿವಾಟುಗಳ ತನಿಖೆ, ಪರಸ್ಪರ ಕಾನೂನು ನೆರವು ಮತ್ತು ಅಪರಾಧಿಗಳ ಹಸ್ತಾಂತರದ ಮಹತ್ವವನ್ನು ಅವರು ಒತ್ತಿಹೇಳಿದರು. ಈ ಪ್ರದೇಶದ ಯಾವುದೇ ಭಾಗದಲ್ಲಿ ಭಯೋತ್ಪಾದಕ ಜಾಲಗಳು ಸುರಕ್ಷಿತ ಆಶ್ರಯ ಪಡೆಯಲು, ಸದಸ್ಯರನ್ನು ನೇಮಕ ಮಾಡಿಕೊಳ್ಳಲು, ತರಬೇತಿ ನೀಡಲು, ಹಣ ಸಂಗ್ರಹಿಸಲು ಅಥವಾ ನೆರೆಯ ರಾಷ್ಟ್ರಗಳ ವಿರುದ್ಧ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡದಿರುವುದು ನಮ್ಮೆಲ್ಲರ ಸಾಮೂಹಿಕ ಸಂಕಲ್ಪವಾಗಿರಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ರಾಷ್ಟ್ರೀಯ ಕಾನೂನುಗಳು ಮತ್ತು ಅನ್ವಯವಾಗುವ ಒಪ್ಪಂದಗಳಿಗೆ ಅನುಗುಣವಾಗಿ, ಪರಸ್ಪರ ಕಾನೂನು ನೆರವು ಮತ್ತು ಅಪರಾಧಿಗಳ ಹಸ್ತಾಂತರದ ಕ್ಷೇತ್ರಗಳಲ್ಲಿನ ಸಹಕಾರವು ಅಪರಾಧಿಗಳನ್ನು ನ್ಯಾಯದ ವ್ಯಾಪ್ತಿಗೆ ತರಲು ನಮ್ಮ ಪ್ರಯತ್ನಗಳನ್ನು ಬಲಪಡಿಸುತ್ತದೆ ಎಂದು ಶ್ರೀ ಅಮಿತ್ ಶಾ ತಿಳಿಸಿದರು.
ಮಾದಕವಸ್ತು ನಿಯಂತ್ರಣ, ಭಯೋತ್ಪಾದನೆ ನಿಗ್ರಹ ಮತ್ತು ಕಾನೂನು ಸಹಕಾರ, ಪರಾರಿಯಾಗಿರುವ ಅಪರಾಧಿಗಳ ಹಸ್ತಾಂತರ, ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧಗಳ ತನಿಖೆ ಹಾಗೂ ಸಾಂಸ್ಥಿಕ ಸಹಕಾರ ಮತ್ತು ಸಾಮರ್ಥ್ಯವೃದ್ಧಿ ಎಂಬ ಐದು ಪ್ರಮುಖ ಸಹಕಾರ ಕ್ಷೇತ್ರಗಳ ಮಹತ್ವವನ್ನು ಗೃಹ ಸಚಿವರು ಒತ್ತಿಹೇಳಿದರು. ಅಕ್ರಮ ಹಣಕಾಸು ವಹಿವಾಟುಗಳು ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುವುದನ್ನು ತಡೆಯಲು ಸಂಘಟಿತ ಪ್ರಾದೇಶಿಕ ಕಾರ್ಯವಿಧಾನದ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಕಾನೂನು ಜಾರಿ ಸಂಸ್ಥೆಗಳು, ಗುಪ್ತಚರ ಸಂಸ್ಥೆಗಳು ಮತ್ತು ಗಡಿ ನಿರ್ವಹಣಾ ಸಂಸ್ಥೆಗಳ ನಡುವಿನ ಸಹಕಾರವನ್ನು ಬಲಪಡಿಸುವ ಮಹತ್ವವನ್ನೂ ಅವರು ಒತ್ತಿಹೇಳಿದರು.
ಮಾದಕವಸ್ತುಗಳ ಕಳ್ಳಸಾಗಣೆಯು ಮೂಲತಃ ‘ಸಾವಿನ ಸಾಗಣೆ’ಯಾಗಿದೆ ಎಂದು ಭಾರತ ನಂಬುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ನಿಟ್ಟಿನಲ್ಲಿ, ಮಾದಕವಸ್ತುಗಳ ಕಳ್ಳಸಾಗಣೆಯಲ್ಲಿ ‘ಸುವರ್ಣ’ (ಒಳ್ಳೆಯದು) ಎಂಬುದೇನೂ ಇಲ್ಲ ಎಂದು ಅವರು ಪುನರುಚ್ಚರಿಸಿದರು. ಇದು ಕೇವಲ ಮಾದಕವಸ್ತುಗಳ ವ್ಯಾಪಾರವಲ್ಲ; ನಮ್ಮ ಯುವಜನರ ಬದುಕು, ಸಮಾಜ, ಸಂಸ್ಕೃತಿ ಮತ್ತು ಮುಂದಿನ ಪೀಳಿಗೆಯ ಭವಿಷ್ಯದ ಮೇಲಿನ ದಾಳಿಯಾಗಿದೆ ಎಂದು ಅವರು ಹೇಳಿದರು. ಒಂದು ದೇಶದ ಪ್ರಯತ್ನಗಳಿಂದ ಮಾತ್ರ ಈ ಸಮಸ್ಯೆಯನ್ನು ಎದುರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು. ಇದಕ್ಕಾಗಿ ನಾವು ‘ಇಡೀ ಪ್ರದೇಶವನ್ನು ಒಳಗೊಳ್ಳುವ ಸಮಗ್ರ ವಿಧಾನ’ವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಮಾದಕವಸ್ತುಗಳಿಂದ ಅಕ್ರಮವಾಗಿ ಗಳಿಸುವ ಹಣವು ಸಂಘಟಿತ ಅಪರಾಧಗಳಿಗೆ ಆರ್ಥಿಕ ಬಲ ಒದಗಿಸುವುದರ ಜೊತೆಗೆ ಭಯೋತ್ಪಾದನೆಗೆ ಹಣಕಾಸು ನೆರವು ನೀಡಲು ಬಳಕೆಯಾಗಬಹುದು ಎಂದು ಶ್ರೀ ಶಾ ತಿಳಿಸಿದರು. ಮಾದಕವಸ್ತುಗಳ ತಯಾರಿಕೆಯಲ್ಲಿ ಬಳಸುವ ಪೂರ್ವಗಾಮಿ ರಾಸಾಯನಿಕಗಳನ್ನು ಬೇರೆ ಉದ್ದೇಶಗಳಿಗೆ ತಿರುಗಿಸುವುದು ಮತ್ತು ಡಾರ್ಕ್ ವೆಬ್ ಮೂಲಕ ನಡೆಯುವ ವಹಿವಾಟುಗಳು ಈ ಸವಾಲನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತವೆ ಎಂದರು.
ಬಿಮ್‌ಸ್ಟೆಕ್ ಪ್ರದೇಶದಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಸಹಕಾರವು ತಮ್ಮ ಅತ್ಯಂತ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಆರನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದಲ್ಲಿ ‘ಬಿಮ್‌ಸ್ಟೆಕ್ ವಿಪತ್ತು ನಿರ್ವಹಣಾ ಕೇಂದ್ರ’ ಸ್ಥಾಪಿಸುವ ಪ್ರಸ್ತಾವನೆ ಮುಂದಿಟ್ಟಿದ್ದನ್ನು ಅವರು ಸ್ಮರಿಸಿದರು. ಈ ಕೇಂದ್ರವನ್ನು ಗುಜರಾತ್‌ನ ಜಾಮ್‌ನಗರದಲ್ಲಿ ಸ್ಥಾಪಿಸಲು ಯೋಜಿಸಿರುವುದನ್ನು ತಿಳಿಸಲು ಸಂತೋಷವಾಗುತ್ತಿದೆ ಎಂದು ಶ್ರೀ ಶಾ ಹೇಳಿದರು. ವಿಪತ್ತು ನಿರ್ವಹಣೆಯ ಕ್ಷೇತ್ರದಲ್ಲಿ ಇಡೀ ಪ್ರದೇಶಕ್ಕೆ ಅಗತ್ಯವಿದ್ದಾಗ ಮೊದಲು ನೆರವಿಗೆ ಧಾವಿಸುವ ರಾಷ್ಟ್ರವಾಗಿ ಭಾರತ ವಹಿಸುತ್ತಿರುವ ಮಾದರಿ ಪಾತ್ರವನ್ನು ಈ ಉಪಕ್ರಮವು ಪ್ರತಿಬಿಂಬಿಸುತ್ತದೆ. ಪ್ರಸ್ತಾವಿತ ಕೇಂದ್ರವನ್ನು ಕಾರ್ಯಾರಂಭಗೊಳಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರು ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದರು.
ಒಂದು ಸದಸ್ಯ ರಾಷ್ಟ್ರದ ಭದ್ರತೆಯು ಇಡೀ ಪ್ರದೇಶದ ಭದ್ರತೆಯನ್ನು ಬಲಪಡಿಸುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಶಾಂತಿಯುತ, ಸುರಕ್ಷಿತ ಮತ್ತು ಸಮೃದ್ಧ ಬಂಗಾಳ ಕೊಲ್ಲಿ ಪ್ರದೇಶವನ್ನು ನಿರ್ಮಿಸಲು ಹಾಗೂ ಈ ಸಭೆಯ ಮೂಲಕ ಸ್ಪಷ್ಟ ಫಲಿತಾಂಶಗಳನ್ನು ಸಾಧಿಸಲು ಎಲ್ಲ ಸದಸ್ಯ ರಾಷ್ಟ್ರಗಳೊಂದಿಗೆ ವಿಶ್ವಾಸ, ಗೌರವ ಮತ್ತು ಸಹಕಾರವನ್ನು ಹೆಚ್ಚಿಸಲು ಭಾರತ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಬಿಮ್‌ಸ್ಟೆಕ್ ಗೃಹ ಸಚಿವರ ಸಭೆಯಲ್ಲಿ ಭಾರತದ ನಿಯೋಗದ ನೇತೃತ್ವವನ್ನು ಕೇಂದ್ರ ಗೃಹ ಸಚಿವರು ವಹಿಸಿದ್ದರು. ಹಿರಿಯ ಅಧಿಕಾರಿಗಳ ಸಭೆಯ ನೇತೃತ್ವವನ್ನು ಕೇಂದ್ರ ಗೃಹ ಕಾರ್ಯದರ್ಶಿಗಳು ವಹಿಸಿದ್ದರು. ಬಾಂಗ್ಲಾದೇಶ, ಭೂತಾನ್, ಭಾರತ, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥಾಯ್ಲೆಂಡ್ ಸೇರಿದಂತೆ ಬಿಮ್‌ಸ್ಟೆಕ್‌ನ ಎಲ್ಲ ಸದಸ್ಯ ರಾಷ್ಟ್ರಗಳ ನಿಯೋಗಗಳು ಸಭೆಯಲ್ಲಿ ಭಾಗವಹಿಸಿದ್ದವು.
ಹಿರಿಯ ಅಧಿಕಾರಿಗಳ ಸಭೆಯ ನಂತರ ನಡೆದ ಬಿಮ್‌ಸ್ಟೆಕ್ ಗೃಹ ಸಚಿವರ ಮೊದಲ ಸಭೆಯು ಭದ್ರತಾ ಕ್ಷೇತ್ರದಲ್ಲಿ ಬಿಮ್‌ಸ್ಟೆಕ್ ಕೈಗೊಂಡಿರುವ ವಿವಿಧ ಉಪಕ್ರಮಗಳನ್ನು ಪರಿಶೀಲಿಸಲು ಹಾಗೂ ಉದಯೋನ್ಮುಖ ಭದ್ರತಾ ಬೆದರಿಕೆಗಳನ್ನು ಎದುರಿಸುವಲ್ಲಿ ಪ್ರಾದೇಶಿಕ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಮುಂದಿನ ಕಾರ್ಯಯೋಜನೆಯನ್ನು ರೂಪಿಸಲು ಅಮೂಲ್ಯ ಅವಕಾಶವನ್ನು ಒದಗಿಸಿತು.
ಬಿಮ್‌ಸ್ಟೆಕ್ ಸದಸ್ಯ ರಾಷ್ಟ್ರಗಳ ಗೃಹ ಸಚಿವರು ಕೆಳಕಂಡ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದರು:
1. ಮಾನವ ಕಳ್ಳಸಾಗಣೆ ತಡೆಗಟ್ಟುವ ಕುರಿತ ಬಿಮ್‌ಸ್ಟೆಕ್ ಒಪ್ಪಂದ: ಮಾನವ ಕಳ್ಳಸಾಗಣೆಯನ್ನು ತಡೆಗಟ್ಟುವುದು, ಅದನ್ನು ಅಪರಾಧವೆಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳುವುದು ಹಾಗೂ ಮಾನವ ಕಳ್ಳಸಾಗಣೆಯ ಸಂತ್ರಸ್ತರ ರಕ್ಷಣೆ ಮತ್ತು ಪುನರ್ವಸತಿಗೆ ಸಂಬಂಧಿಸಿದಂತೆ ಸದಸ್ಯ ರಾಷ್ಟ್ರಗಳ ನಡುವಿನ ಸಹಕಾರವನ್ನು ಹೆಚ್ಚಿಸುವುದು ಈ ಒಪ್ಪಂದದ ಉದ್ದೇಶವಾಗಿದೆ.
2. ಮಾದಕವಸ್ತು ನಿಯಂತ್ರಣದ ಕುರಿತ ಬಿಮ್‌ಸ್ಟೆಕ್ ಕಾರ್ಯಯೋಜನೆ: ಮಾದಕ ದ್ರವ್ಯಗಳು, ಮಾನಸಿಕ ಪ್ರಭಾವ ಬೀರುವ ವಸ್ತುಗಳು ಮತ್ತು ಪೂರ್ವಗಾಮಿ ರಾಸಾಯನಿಕಗಳ ಅಕ್ರಮ ಕಳ್ಳಸಾಗಣೆಯನ್ನು ತಡೆಗಟ್ಟುವುದು ಈ ಕಾರ್ಯಯೋಜನೆಯ ಉದ್ದೇಶವಾಗಿದೆ.
3. ಹಣ ಅಕ್ರಮ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುವುದನ್ನು ಎದುರಿಸಲು ಬಿಮ್‌ಸ್ಟೆಕ್ ರಾಷ್ಟ್ರಗಳ ನಡುವಿನ ಸಾಮರ್ಥ್ಯವರ್ಧನೆ ಕುರಿತ ತಿಳುವಳಿಕೆ ಒಪ್ಪಂದ: ತಜ್ಞರಿಗೆ ತರಬೇತಿ ನೀಡುವುದು, ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳುವುದು ಹಾಗೂ ಹಣಕಾಸು ಅಪರಾಧಗಳು, ಹಣಕಾಸು ಗುಪ್ತಚರ ಮಾಹಿತಿ, ತನಿಖೆಗಳು, ಆಸ್ತಿಗಳ ಮರುಪಡೆಯುವಿಕೆ, ಹಣ ಅಕ್ರಮ ವರ್ಗಾವಣೆ ತಡೆಗಟ್ಟುವ ಕ್ರಮಗಳು, ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುವುದನ್ನು ತಡೆಯುವುದು ಮತ್ತು ವಿನಾಶಕಾರಿ ಶಸ್ತ್ರಾಸ್ತ್ರಗಳ ಪ್ರಸರಣಕ್ಕೆ ಹಣಕಾಸು ನೆರವು ಒದಗಿಸುವುದನ್ನು ತಡೆಯುವ ಕ್ಷೇತ್ರಗಳಲ್ಲಿ ವ್ಯಾಪಕ ಸಹಕಾರ ಸಾಧಿಸುವುದಕ್ಕೆ ಈ ಒಪ್ಪಂದ ಅವಕಾಶ ಕಲ್ಪಿಸುತ್ತದೆ.
4. ಅಕ್ರಮ ಹಣಕಾಸು ಹರಿವು ಮತ್ತು ಅವುಗಳ ತಡೆಗಟ್ಟುವಿಕೆ ಕುರಿತ ಬಿಮ್‌ಸ್ಟೆಕ್ ಕಾರ್ಯಯೋಜನೆ: ಬಿಮ್‌ಸ್ಟೆಕ್ ಸದಸ್ಯ ರಾಷ್ಟ್ರಗಳ ನಡುವೆ ನಡೆಯುವ ಅಕ್ರಮ ಹಣಕಾಸು ಹರಿವಿನ ಮೂಲಗಳು, ಅಪಾಯಗಳು ಮತ್ತು ಮಾರ್ಗಗಳನ್ನು ಗುರುತಿಸುವುದು ಈ ಕಾರ್ಯಯೋಜನೆಯ ಉದ್ದೇಶವಾಗಿದೆ.
5. ಬಂಗಾಳ ಕೊಲ್ಲಿ ಪ್ರದೇಶದಲ್ಲಿ ನೈಸರ್ಗಿಕ ವಿಕೋಪಗಳನ್ನು ಎದುರಿಸಲು ಸನ್ನದ್ಧತೆ ಮತ್ತು ಸಮನ್ವಯವನ್ನು ಹೆಚ್ಚಿಸುವ ಕಾರ್ಯಯೋಜನೆ: ಪ್ರಾದೇಶಿಕ ಅಪಾಯಗಳ ಯೋಜನೆ, ಜಂಟಿ ಅಭ್ಯಾಸಗಳು, ಮುನ್ನೆಚ್ಚರಿಕೆ ವ್ಯವಸ್ಥೆಗಳು, ವಿಪತ್ತು ನಕ್ಷೆ ಸಿದ್ಧಪಡಿಸುವಿಕೆ, ತರಬೇತಿ ಕೇಂದ್ರಗಳು, ಮಾಹಿತಿ ವಿನಿಮಯ, ಸಂಶೋಧನೆ, ತಾಂತ್ರಿಕ ನಾವೀನ್ಯತೆ ಮತ್ತು ಸುನಾಮಿ ಅಪಾಯವನ್ನು ಕಡಿಮೆ ಮಾಡುವಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸದಸ್ಯ ರಾಷ್ಟ್ರಗಳು ಸಂಘಟಿತವಾಗಿ ಕಾರ್ಯನಿರ್ವಹಿಸುವುದನ್ನು ಈ ಕಾರ್ಯಯೋಜನೆ ಪ್ರಸ್ತಾಪಿಸುತ್ತದೆ.
ಬಿಮ್‌ಸ್ಟೆಕ್ ಗೃಹ ಸಚಿವರ ಮೊದಲ ಸಭೆಯಲ್ಲಿ ‘ದೆಹಲಿ ಘೋಷಣೆ’ಯನ್ನೂ ಅಂಗೀಕರಿಸಲಾಯಿತು. ಬಿಮ್‌ಸ್ಟೆಕ್ ಅಡಿಯಲ್ಲಿ ಭದ್ರತಾ ಸಹಕಾರಕ್ಕೆ ಮಾರ್ಗದರ್ಶನ ನೀಡುವ ವಿವಿಧ ತತ್ವಗಳನ್ನು ಈ ಘೋಷಣೆ ಒಳಗೊಂಡಿದೆ. ಬಿಮ್‌ಸ್ಟೆಕ್ ಗೃಹ ಸಚಿವರ ಮೊದಲ ಸಭೆಯಲ್ಲಿ ಅಂಗೀಕರಿಸಲಾದ ದೆಹಲಿ ಘೋಷಣೆಯಲ್ಲಿ, ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗಾಗಿ ಸಹಕಾರವನ್ನು ಬಲಪಡಿಸುವ ಬದ್ಧತೆಯನ್ನು ಸದಸ್ಯ ರಾಷ್ಟ್ರಗಳು ಪುನರುಚ್ಚರಿಸಿದವು. ಗಡಿಯಾಚೆಗಿನ ಭಯೋತ್ಪಾದನೆ, ಭಯೋತ್ಪಾದನೆಗೆ ಹಣಕಾಸು ನೆರವು, ಮೂಲಭೂತವಾದ, ಮಾದಕವಸ್ತುಗಳ ಕಳ್ಳಸಾಗಣೆ, ಮಾನವ ಕಳ್ಳಸಾಗಣೆ, ಸೈಬರ್ ಅಪರಾಧಗಳು ಮತ್ತು ಸಂಘಟಿತ ಅಪರಾಧಗಳನ್ನು ಎದುರಿಸುವುದಕ್ಕೆ ಘೋಷಣೆಯಲ್ಲಿ ಒತ್ತು ನೀಡಲಾಗಿದೆ. ಮಾಹಿತಿ ವಿನಿಮಯ, ಪರಸ್ಪರ ಕಾನೂನು ನೆರವು, ಅಪರಾಧಿಗಳ ಹಸ್ತಾಂತರ, ಸಾಮರ್ಥ್ಯವೃದ್ಧಿ ಹಾಗೂ ಈಗಾಗಲೇ ಜಾರಿಯಲ್ಲಿರುವ ಒಪ್ಪಂದಗಳು ಮತ್ತು ಕಾರ್ಯಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ. ಆನ್‌ಲೈನ್ ವಂಚನೆಗಳಲ್ಲಿ ಸಂತ್ರಸ್ತರಾಗಿರುವ ಮಾನವ ಕಳ್ಳಸಾಗಣೆಯ ಬಲಿಪಶುಗಳ ರಕ್ಷಣೆಯ ಮಹತ್ವವನ್ನೂ ಘೋಷಣೆ ಒತ್ತಿಹೇಳಿದೆ. ಪ್ರಾದೇಶಿಕ ಭದ್ರತಾ ಸಹಕಾರವನ್ನು ಬಲಪಡಿಸುವಲ್ಲಿ ಭಾರತ ವಹಿಸಿರುವ ನಾಯಕತ್ವವನ್ನು ಘೋಷಣೆಯಲ್ಲಿ ಪ್ರಶಂಸಿಸಲಾಗಿದೆ.
ಪೊಲೀಸ್ ತರಬೇತಿ, ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳು ಮತ್ತು ವಿಧಿವಿಜ್ಞಾನ ತನಿಖೆಗಳಲ್ಲಿ ತನ್ನ ಪರಿಣತಿಯನ್ನು ಹಂಚಿಕೊಳ್ಳಲು ಬದ್ಧವಾಗಿರುವುದಾಗಿ ಭಾರತ ಪುನರುಚ್ಚರಿಸಿತು. ಗುಜರಾತ್‌ನ ಜಾಮ್‌ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಬಿಮ್‌ಸ್ಟೆಕ್ ವಿಪತ್ತು ನಿರ್ವಹಣಾ ಕೇಂದ್ರ ಸೇರಿದಂತೆ ವಿಪತ್ತು ನಿರ್ವಹಣೆಯ ಕ್ಷೇತ್ರದಲ್ಲಿ ಸಹಕಾರದ ಅಗತ್ಯವನ್ನೂ ಸಭೆ ಒತ್ತಿಹೇಳಿತು.
ಬಿಮ್‌ಸ್ಟೆಕ್ ಪ್ರದೇಶವನ್ನು ಹೆಚ್ಚು ಸುರಕ್ಷಿತ ಮತ್ತು ಸಮೃದ್ಧವಾಗಿಸುವ ನಿಟ್ಟಿನಲ್ಲಿ ಈ ಸಭೆಯು ಮಹತ್ವದ ಹೆಜ್ಜೆಯಾಗಿದೆ.
ಬಹು ವಲಯಗಳ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮ (ಬಿಮ್‌ಸ್ಟೆಕ್), ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಉಪಪ್ರದೇಶಗಳ ನಡುವಿನ ಪ್ರಮುಖ ಸಾಂಸ್ಥಿಕ ಕೊಂಡಿಯಾಗಿದೆ. ಬಾಂಗ್ಲಾದೇಶ, ಭೂತಾನ್, ಭಾರತ, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥಾಯ್ಲೆಂಡ್ ನಡುವೆ ಬಹುಮುಖಿ ಸಹಕಾರ, ಸಾಮೂಹಿಕ ಭದ್ರತೆ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಉತ್ತೇಜಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
2018ರಲ್ಲಿ ನಡೆದ ನಾಲ್ಕನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ, ಸಹಕಾರ ಮತ್ತು ಸಮನ್ವಯವನ್ನು ಬಲಪಡಿಸಲು ಬಿಮ್‌ಸ್ಟೆಕ್ ಗೃಹ ಸಚಿವರ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ಪ್ರಾದೇಶಿಕ ಭದ್ರತಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಆರನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಉಪಕ್ರಮಕ್ಕೆ ಭಾರತದ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಬಿಮ್‌ಸ್ಟೆಕ್ ಗೃಹ ಸಚಿವರ ಮೊದಲ ಸಭೆಯನ್ನು ಆಯೋಜಿಸಲು ಭಾರತದ ಬದ್ಧತೆಯನ್ನೂ ವ್ಯಕ್ತಪಡಿಸಿದ್ದರು.
*****
(ಪ್ರಕಟಣೆ ಐ.ಡಿ.: 2322987)
ವಿಸಿಟರ್ ಕೌಂಟರ್ : 17