ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
ಮಂಡಪಂ ಕಡಲಪಾಚಿ ಕೃಷಿ ತಾಣಕ್ಕೆ ಭೇಟಿ ನೀಡಿದ ಕೇಂದ್ರ ಮೀನುಗಾರಿಕೆ ಕಾರ್ಯದರ್ಶಿ ಡಾ. ಅಭಿಲಕ್ಷ್ ಲಿಖಿ; ಕಡಲಪಾಚಿ ಕೃಷಿಕರು, ಸ್ವಸಹಾಯ ಸಂಘಗಳು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ
ಕಡಲಪಾಚಿ ಕೃಷಿಯ ಮೂಲಕ ತಂತ್ರಜ್ಞಾನ ಅಳವಡಿಕೆ, ಮೌಲ್ಯವರ್ಧನೆ ಮತ್ತು ಸುಸ್ಥಿರ ಜೀವನೋಪಾಯಕ್ಕೆ ಡಾ. ಅಭಿಲಕ್ಷ್ ಲಿಖಿ ಒತ್ತು
ಪ್ರಕಟಣಾ ದಿನಾಂಕ:
13 OCT 2026 4:06PM by PIB Bengaluru
ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಕ್ಷೀರಪಾಲನೆ ಸಚಿವಾಲಯದ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಡಾ. ಅಭಿಲಕ್ಷ್ ಲಿಖಿ ಅವರು ತಮಿಳುನಾಡಿನ ಮಂಡಪಂ ಕ್ಯಾಂಪ್‌ನ ಮುನ್ನೈಕಾಡುನಲ್ಲಿರುವ ಕಡಲಪಾಚಿ ಕೃಷಿ ತಾಣಕ್ಕೆ ಭೇಟಿ ನೀಡಿ, ಸ್ವಸಹಾಯ ಸಂಘಗಳ ಜೊತೆ ಸಂಯೋಜಿತವಾಗಿರುವ ಕಡಲಪಾಚಿ ಕೃಷಿಯಲ್ಲಿ ತೊಡಗಿರುವ ರೈತರೊಂದಿಗೆ ಸಂವಾದ ನಡೆಸಿದರು. ದೇಶದಲ್ಲಿ ಕಡಲಪಾಚಿ ಕೃಷಿಯನ್ನು ಉತ್ತೇಜಿಸುವ, ಕರಾವಳಿ ಜನರ ಜೀವನೋಪಾಯವನ್ನು ಬಲಪಡಿಸುವ ಮತ್ತು ಕಡಲಪಾಚಿ ಮೌಲ್ಯ ಸರಪಳಿಯ ಅಭಿವೃದ್ಧಿಯನ್ನು ವೇಗಗೊಳಿಸುವ ಇಲಾಖೆಯ ಪ್ರಯತ್ನಗಳ ಭಾಗವಾಗಿ ಈ ಭೇಟಿಯನ್ನು ಕೈಗೊಳ್ಳಲಾಗಿತ್ತು.
ಇದಕ್ಕೂ ಒಂದು ದಿನ ಮೊದಲು, ಡಾ. ಲಿಖಿ ಅವರು ತಮಿಳುನಾಡಿನ ಮಂಡಪಂನಲ್ಲಿರುವ 'ಐಸಿಎಆರ್-ಸಿಎಂಎಫ್‌ಆರ್‌ಐ' ಪ್ರಾದೇಶಿಕ ಕೇಂದ್ರದಲ್ಲಿ ಕಡಲಪಾಚಿ ಕೃಷಿಯ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ, ಕಡಲಪಾಚಿ ಬೇಸಾಯ ಉಪಕ್ರಮಗಳ ಪ್ರಗತಿಯನ್ನು ಪರಿಶೀಲಿಸಿದರು ಹಾಗೂ ಈ ವಲಯದಲ್ಲಿ ಉತ್ಪಾದನೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಹೆಚ್ಚಿಸುವ ಕ್ರಮಗಳ ಕುರಿತು ಚರ್ಚಿಸಿದರು.
ಸಂವಾದದ ಸಮಯದಲ್ಲಿ, ತಮಿಳುನಾಡಿನಲ್ಲಿ ಅಳವಡಿಸಿಕೊಂಡಿರುವ ಏಕಸಾಲಿನ ಮತ್ತು ತೆಪ್ಪ ಆಧಾರಿತ ವಿಧಾನಗಳು ಸೇರಿದಂತೆ ವಿವಿಧ ಬೇಸಾಯ ತಂತ್ರಜ್ಞಾನಗಳನ್ನು ರೈತರು ವಿವರಿಸಿದರು ಹಾಗೂ ವಿವಿಧ ಕೃಷಿ, ನಿರ್ವಹಣೆ ಮತ್ತು ಕೊಯ್ಲು ಕಾರ್ಯಾಚರಣೆಗಳನ್ನು ಪ್ರದರ್ಶಿಸಿದರು. ಕಡಲಪಾಚಿ ಕೃಷಿಯ ಮೂಲಕ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಕೊಡುಗೆಯನ್ನು ಕಾರ್ಯದರ್ಶಿಯವರು ಶ್ಲಾಘಿಸಿದರು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು, ಹೆಚ್ಚಿನ ರೈತರನ್ನು ಸಂಘಟಿತ ಕೃಷಿಗೆ ತರಲು ಹಾಗೂ ಪ್ರಧಾನ್ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮತ್ತು ಪ್ರಧಾನ್ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ-ಯೋಜನೆ ಸೇರಿದಂತೆ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಸೌಲಭ್ಯಗಳನ್ನು ಪಡೆಯಲು ಸದಸ್ಯರನ್ನು ಪ್ರೋತ್ಸಾಹಿಸಿದರು.

ಇದಕ್ಕೂ ಮೊದಲು, ಕೇಂದ್ರ ಕಾರ್ಯದರ್ಶಿಯವರು ಮಂಡಪಂನ 'ಐಸಿಎಆರ್-ಸಿಎಂಎಫ್‌ಆರ್‌ಐ' ಪ್ರಾದೇಶಿಕ ಕೇಂದ್ರದಲ್ಲಿ ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು, ಸಂಶೋಧನಾ ಸಂಸ್ಥೆಗಳು, ತಾಂತ್ರಿಕ ಸಂಸ್ಥೆಗಳು ಮತ್ತು ದೇಶಾದ್ಯಂತದ ಕಡಲಪಾಚಿ ಪಾಲುದಾರರೊಂದಿಗೆ ಕಡಲಪಾಚಿ ಕೃಷಿಯ ಕುರಿತು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಾರತದಲ್ಲಿ ಕಡಲಪಾಚಿ ಕೃಷಿಯ ಅಪಾರ ಸಾಮರ್ಥ್ಯವನ್ನು ಅವರು ಎತ್ತಿಹಿಡಿದರು ಮತ್ತು ದೇಶದ 11,099 ಕಿ.ಮೀ. ಕರಾವಳಿಯು ಈ ವಲಯದ ಬೃಹತ್ ವಿಸ್ತರಣೆಗೆ ಅನುಕೂಲಕರ ಪರಿಸ್ಥಿತಿಗಳನ್ನು ಒದಗಿಸುತ್ತದೆ ಎಂದು ಒತ್ತಿ ಹೇಳಿದರು. ಸಂಶೋಧನಾ ಸಂಸ್ಥೆಗಳು ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 24,707 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿರುವ 384 ಸೂಕ್ತ ತಾಣಗಳನ್ನು ಕಡಲಪಾಚಿ ಕೃಷಿಗಾಗಿ ಗುರುತಿಸಿವೆ.
ಪ್ರಧಾನ್ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಕಡಲಪಾಚಿ ಕೃಷಿಯನ್ನು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ಮತ್ತು ಮೀನುಗಾರರು ಹಾಗೂ ಕರಾವಳಿ ಸಮುದಾಯಗಳ ಆದಾಯವನ್ನು ಹೆಚ್ಚಿಸುವ ಆದ್ಯತೆಯ ಚಟುವಟಿಕೆಯಾಗಿ ಗುರುತಿಸಲಾಗಿದೆ ಎಂದು ಕಾರ್ಯದರ್ಶಿ ತಿಳಿಸಿದರು. 2020-27ರ ಅವಧಿಯಲ್ಲಿ, ತಮಿಳುನಾಡಿನಲ್ಲಿ ಕಡಲಪಾಚಿ ಪಾರ್ಕ್ ಸ್ಥಾಪನೆ ಸೇರಿದಂತೆ ಕಡಲಪಾಚಿ ಅಭಿವೃದ್ಧಿಗಾಗಿ ₹181.11 ಕೋಟಿ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 37,255 ಕಡಲಪಾಚಿ ಕೃಷಿ ತೆಪ್ಪಗಳು ಮತ್ತು 44,080 ಕಡಲಪಾಚಿ ಕೃಷಿ ಮೊನೊಲೈನ್ ಘಟಕಗಳ ಸ್ಥಾಪನೆಗೆ ಆರ್ಥಿಕ ನೆರವು ನೀಡಲಾಗಿದ್ದು, ಬೀಜ ಬ್ಯಾಂಕ್‌ಗಳು, ಜಾಗೃತಿ, ತರಬೇತಿ ಮತ್ತು ಸಾಮರ್ಥ್ಯ ವರ್ಧನೆ ಉಪಕ್ರಮಗಳಿಗೆ ಬೆಂಬಲ ನೀಡಲಾಗಿದೆ.
ಈ ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಜಂಟಿ ಕಾರ್ಯದರ್ಶಿ (ಸಮುದ್ರ ಮೀನುಗಾರಿಕೆ) ಡಾ. ಸುರಭಿ ರೈ; ಜಂಟಿ ಕಾರ್ಯದರ್ಶಿ (ಒಳನಾಡು ಮೀನುಗಾರಿಕೆ) ಶ್ರೀಮತಿ ಗುಂಜನ್ ಕೃಷ್ಣ; 'ಐಸಿಎಆರ್'ನ ಉಪ ಮಹಾನಿರ್ದೇಶಕರು (ಮೀನುಗಾರಿಕೆ ವಿಜ್ಞಾನ) ಡಾ. ಜೆ. ಕೆ. ಜೇನಾ; ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಡಾ. ಬಿಜಯ್ ಕುಮಾರ್ ಬೆಹೆರಾ ಹಾಗೂ ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆ ಮತ್ತು ರಾಜ್ಯ ಮೀನುಗಾರಿಕೆ ಇಲಾಖೆಗಳ ಅಧಿಕಾರಿಗಳು ಹೈಬ್ರಿಡ್ ಮಾದರಿಯ ಮೂಲಕ ಭಾಗವಹಿಸಿದ್ದರು.
ಕಡಲಪಾಚಿ ವಲಯದ ಬೆಳವಣಿಗೆಯನ್ನು ವೇಗಗೊಳಿಸುವ ಪ್ರಮುಖ ಆದ್ಯತೆಗಳ ಕುರಿತು ಸುದೀರ್ಘ ಚರ್ಚೆಗಳು ನಡೆದವು, ಇದರಲ್ಲಿ ಗುರುತಿಸಲಾದ ಕಡಲಪಾಚಿ ಅಭಿವೃದ್ಧಿ ಕ್ರಿಯಾ ಬಿಂದುಗಳ ಅನುಷ್ಠಾನ, ಸಂಸ್ಥೆಗಳ ನಡುವಿನ ಸಮನ್ವಯವನ್ನು ಬಲಪಡಿಸುವುದು, ವಿಕೇಂದ್ರೀಕೃತ ಬೀಜ ಬ್ಯಾಂಕ್‌ಗಳನ್ನು ಸ್ಥಾಪಿಸುವುದು, ಪ್ರಧಾನ್ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಬೆಂಬಲಿತ ಯೋಜನೆಗಳಲ್ಲಿ ಅನುಷ್ಠಾನದ ಸವಾಲುಗಳನ್ನು ಪರಿಹರಿಸುವುದು, ಉದ್ಯಮಶೀಲತೆ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಉತ್ತೇಜಿಸುವುದು, ದಂಡೆಯಾಚೆಯ ಕಡಲಪಾಚಿ ಕೃಷಿಯನ್ನು ಸುಲಭಗೊಳಿಸುವುದು, ರೈತರ ತಲುಪುವಿಕೆ ಮತ್ತು ಸಾಮರ್ಥ್ಯ ವರ್ಧನೆಯನ್ನು ಹೆಚ್ಚಿಸುವುದು ಹಾಗೂ ತಮಿಳುನಾಡು ಕಡಲಪಾಚಿ ಪಾರ್ಕ್‌ನ ಕಾರ್ಯಾಚರಣೆಯನ್ನು ವೇಗಗೊಳಿಸುವುದು ಸೇರಿವೆ. ಆಹಾರ, ಪಶು ಆಹಾರ, ರಸಗೊಬ್ಬರಗಳು ಮತ್ತು ಇತರ ಮೌಲ್ಯವರ್ಧಿತ ಉತ್ಪನ್ನಗಳಲ್ಲಿ ಕಡಲಪಾಚಿಯ ಅನ್ವಯಗಳನ್ನು ವಿಸ್ತರಿಸುವ ಅವಕಾಶಗಳ ಕುರಿತು ಹಾಗೂ ಈ ವಲಯದ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಗಾಗಿ ದೀರ್ಘಕಾಲೀನ ನೀಲನಕ್ಷೆಯನ್ನು ರೂಪಿಸುವ ಕುರಿತೂ ಚರ್ಚೆಗಳು ನಡೆದವು.
ಹಿನ್ನೆಲೆ
ಜೀವನೋಪಾಯ ಸೃಷ್ಟಿ, ಕರಾವಳಿ ಸಮುದಾಯ ಅಭಿವೃದ್ಧಿ ಮತ್ತು ಸಾಗರ ಆಧಾರಿತ ಜೈವಿಕ-ಆರ್ಥಿಕ ಚಟುವಟಿಕೆಗಳ ಪ್ರಚಾರದ ಸಾಮರ್ಥ್ಯದಿಂದಾಗಿ ಕಡಲಪಾಚಿ ಕೃಷಿಯು ಭಾರತದ 'ನೀಲಿ ಆರ್ಥಿಕತೆ' ಉಪಕ್ರಮಗಳ ಅಡಿಯಲ್ಲಿ ಆದ್ಯತೆಯ ಕ್ಷೇತ್ರವಾಗಿ ಹೊರಹೊಮ್ಮಿದೆ. ಭಾರತದಲ್ಲಿ ಕಡಲಪಾಚಿ ಉತ್ಪಾದನೆಯು 2015ರಲ್ಲಿ 18,890 ಟನ್‌ಗಳಿಂದ 2024ರಲ್ಲಿ 74,083 ಟನ್‌ಗಳಿಗೆ ಮತ್ತು 2025ರಲ್ಲಿ 82,728 ಟನ್‌ಗಳಿಗೆ ಹೆಚ್ಚಾಗಿದೆ.
ಮೀನುಗಾರಿಕೆ ಇಲಾಖೆಯು ಕ್ಲಸ್ಟರ್ ಆಧಾರಿತ ವಿಧಾನವನ್ನು ಅಳವಡಿಸಿಕೊಂಡಿದ್ದು, ಮೌಲ್ಯ ಸರಪಳಿಗಳನ್ನು ಬಲಪಡಿಸಲು, ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಮತ್ತು ರಫ್ತು ಸಾಮರ್ಥ್ಯವನ್ನು ಹೆಚ್ಚಿಸಲು ದೇಶಾದ್ಯಂತ 34 ಮೀನುಗಾರಿಕೆ ಉತ್ಪಾದನೆ ಮತ್ತು ಸಂಸ್ಕರಣಾ ಕ್ಲಸ್ಟರ್‌ಗಳನ್ನು ಸೂಚಿಸಿದೆ. ಈ ಉಪಕ್ರಮಗಳ ಅಡಿಯಲ್ಲಿ, ಲಕ್ಷದ್ವೀಪವನ್ನು 'ಸೀವೀಡ್ ಕ್ಲಸ್ಟರ್' ಎಂದು ಘೋಷಿಸಲಾಗಿದೆ ಮತ್ತು ಮಂಡಪಂನಲ್ಲಿರುವ 'ಐಸಿಎಆರ್-ಸಿಎಂಎಫ್‌ಆರ್‌ಐ' ಪ್ರಾದೇಶಿಕ ಕೇಂದ್ರವನ್ನು ಕಡಲಪಾಚಿ ಅಭಿವೃದ್ಧಿ ಮತ್ತು ಸಂಶೋಧನೆಯ 'ಉತ್ಕೃಷ್ಟತಾ ಕೇಂದ್ರ' ಎಂದು ನೇಮಿಸಲಾಗಿದೆ. ಸಂಘಟಿತ ವಲಯದ ಅಭಿವೃದ್ಧಿಯನ್ನು ಸುಲಭಗೊಳಿಸಲು ಕಡಲಪಾಚಿ ಅಭಿವೃದ್ಧಿಯ ಕುರಿತು ಅಂತರ-ಸಚಿವಾಲಯ ಸಮಿತಿ ಮತ್ತು ತಾಂತ್ರಿಕ ಸಲಹಾ ಸಮಿತಿ ರೂಪದಲ್ಲಿ ಸಾಂಸ್ಥಿಕ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ.
*****
(ಪ್ರಕಟಣೆ ಐ.ಡಿ.: 2322835)
ವಿಸಿಟರ್ ಕೌಂಟರ್ : 16