ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐಐಎಂಸಿಯಲ್ಲಿ ‘ಸ್ವಚ್ಛತಾ ಹಿ ಸೇವಾ’ ಚಟುವಟಿಕೆಗಳಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಭಾಗಿ
ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದ ಸಚಿವರು; ಸಸಿ ನೆಡುವ ಅಭಿಯಾನ ಮತ್ತು ಶ್ರಮದಾನದಲ್ಲಿ ಪಾಲ್ಗೊಂಡ ಸಚಿವ ಎಲ್.ಮುರುಗನ್
ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಗೆ ಕೊಡುಗೆ ನೀಡುವಂತೆ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳಿಗೆ ಸಚಿವರ ಕರೆ
ಸಾಮೂಹಿಕ ಹೊಣೆಗಾರಿಕೆಯ ಸ್ಫೂರ್ತಿ ಸಾರಿದ ಐಐಎಂಸಿಯ ‘ಸ್ವಚ್ಛತಾ ಹಿ ಸೇವಾ’ ಚಟುವಟಿಕೆಗಳು
ಪ್ರಕಟಣಾ ದಿನಾಂಕ:
01 OCT 2026 4:09PM by PIB Bengaluru
ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವರಾದ ಡಾ. ಎಲ್. ಮುರುಗನ್ ಅವರು ನವದೆಹಲಿಯ ಭಾರತೀಯ ಸಮೂಹ ಸಂವಹನ ಸಂಸ್ಥೆಯಲ್ಲಿ (ಐಐಎಂಸಿ) ಗುರುವಾರ ಆಯೋಜಿಸಿದ್ದ ‘ಸ್ವಚ್ಛತಾ ಹಿ ಸೇವಾ’ ಅಭಿಯಾನದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಚ್ಛತೆಯನ್ನು ಜನಾಂದೋಲನವನ್ನಾಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2014ರಲ್ಲಿ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ್ದನ್ನು ಸ್ಮರಿಸಿದರು.

“2014ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛತಾ ಅಭಿಯಾನ ಆರಂಭಿಸಿದ ನಂತರ ದೇಶದಾದ್ಯಂತ ಜನರು ಈ ಆಂದೋಲನದ ಭಾಗವಾದರು. ಕಚೇರಿಗಳು ಮತ್ತು ಸಂಸ್ಥೆಗಳಲ್ಲಿಯೂ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಐಐಎಂಸಿಯ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳೊಂದಿಗೆ ಇಂದು ಸ್ವಚ್ಛತಾ ಪ್ರತಿಜ್ಞೆ ಸ್ವೀಕರಿಸಿದ್ದೇವೆ. ಅಂಗನವಾಡಿ ಕೇಂದ್ರಗಳು, ದೇವಾಲಯಗಳು, ಸಂಸ್ಥೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಸಾಧ್ಯವಿರುವ ಎಲ್ಲೆಡೆ ಸ್ವಚ್ಛತಾ ಸೇವೆಗೆ ಕೊಡುಗೆ ನೀಡಬೇಕು. ಸೆಪ್ಟೆಂಬರ್ 17ರಿಂದ ನಾವು ಈ ಅಭಿಯಾನ ಮುಂದುವರಿಸುತ್ತಿದ್ದೇವೆ. ದೇಶ, ಸಂಸ್ಥೆಗಳು ಮತ್ತು ಕಚೇರಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಸಾಮೂಹಿಕ ಹೊಣೆಗಾರಿಕೆ” ಎಂದು ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ಅವರು ಸ್ವಚ್ಛತಾ ಪ್ರತಿಜ್ಞೆ ಬೋಧಿಸಿ, ಸಸಿ ನೆಡುವ ಅಭಿಯಾನ ಮತ್ತು ಶ್ರಮದಾನದಲ್ಲಿ ಭಾಗವಹಿಸಿದರು. ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳಿಗೆ ಕರೆ ನೀಡಿದರು.
ಸಚಿವರು ಐಐಎಂಸಿ ಆವರಣದಲ್ಲಿ ಸಸಿ ನೆಡುವ ಮೂಲಕ ‘ಏಕ್ ಪೇಡ್ ಮಾ ಕೆ ನಾಮ್’ (ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡಿ) ಅಭಿಯಾನದಲ್ಲೂ ಪಾಲ್ಗೊಂಡರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಸಸಿ ನೆಡುವುದಷ್ಟೇ ಅಲ್ಲದೆ ಅವುಗಳ ನಿರಂತರ ಆರೈಕೆ ಮತ್ತು ನಿರ್ವಹಣೆಯನ್ನೂ ಖಾತ್ರಿಪಡಿಸಿಕೊಳ್ಳಬೇಕು ಎಂದು ಒತ್ತಿ ಹೇಳಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು, ಬೋಧಕವೃಂದ, ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಚಿವರು ಐಐಎಂಸಿಯಲ್ಲಿ ಒಂದು ಗಂಟೆ ಶ್ರಮದಾನ ಮಾಡಿದರು. ಸ್ವಚ್ಛತಾ ಅಭಿಯಾನದ ಭಾಗವಾಗಿ ತ್ಯಾಜ್ಯ ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ತೆರವುಗೊಳಿಸಲಾಯಿತು.
ಐಐಎಂಸಿ ಭೇಟಿಯ ವೇಳೆ ಸಚಿವರು ನೂತನವಾಗಿ ನಿರ್ಮಿಸಲಾದ ತರಗತಿ ಕೊಠಡಿಗಳು, ಬೋಧನಾ ವಿಭಾಗ, ನಿರ್ಮಾಣ ಹಂತದಲ್ಲಿರುವ ವಿದ್ಯಾರ್ಥಿನಿಲಯ ಮತ್ತು ನವೀಕರಿಸಲಾದ ಗ್ರಂಥಾಲಯ ಸೇರಿದಂತೆ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಸೌಲಭ್ಯಗಳನ್ನು ಪರಿಶೀಲಿಸಿದರು. ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿವಿಧ ರಾಜ್ಯಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಇದೇ ವೇಳೆ ಸ್ವಚ್ಛತೆ, ಪರಿಸರ ಜಾಗೃತಿ, ಕ್ಯಾಂಪಸ್ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ಐಐಎಂಸಿಯ ಆಡಳಿತವು ಕೈಗೊಂಡಿರುವ ಉಪಕ್ರಮಗಳನ್ನು ಸಚಿವರು ಶ್ಲಾಘಿಸಿದರು.

ಐಐಎಂಸಿ ಕುಲಪತಿ ಡಾ. ಪ್ರಜ್ಞಾ ಪಾಲಿವಾಲ್ ಗೌರ್, ರಿಜಿಸ್ಟ್ರಾರ್ ಹಾಗೂ ತರಬೇತಿ ಮಹಾನಿರ್ದೇಶಕರಾದ ಶ್ರೀ ಎಲ್. ಮಧು ನಾಗ್ ಮತ್ತು ಹಿರಿಯ ಆರ್ಥಿಕ ಸಲಹೆಗಾರ ಶ್ರೀ ಆರ್.ಕೆ. ಜೇನಾ ಉಪಸ್ಥಿತರಿದ್ದರು. ಸಂಸ್ಥೆಯ ಬೋಧಕವರ್ಗ, ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ತರಬೇತಿ ನಿರತ ಅಧಿಕಾರಿಗಳೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸ್ವಚ್ಛತೆ, ಪರಿಸರ ಸಂರಕ್ಷಣೆ ಮತ್ತು ಜವಾಬ್ದಾರಿಯುತ ನಾಗರಿಕತ್ವದಲ್ಲಿ ಸಾಮೂಹಿಕ ಪಾಲ್ಗೊಳ್ಳುವಿಕೆ ಉತ್ತೇಜಿಸುವ ಉದ್ದೇಶದಿಂದ ‘ಸ್ವಚ್ಛತಾ ಹಿ ಸೇವಾ’ ಅಭಿಯಾನದಡಿ ಐಐಎಂಸಿ ಹಮ್ಮಿಕೊಂಡಿದ್ದ ಚಟುವಟಿಕೆಗಳ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
*****
(ಪ್ರಕಟಣೆ ಐ.ಡಿ.: 2317701)
ವಿಸಿಟರ್ ಕೌಂಟರ್ : 11