ಕೃಷಿ ಸಚಿವಾಲಯ
ಹಿಂಗಾರು (ರಬಿ) ಹಂಗಾಮು 2026ಕ್ಕೆ ದತ್ತಾಂಶ ಆಧಾರಿತ ಯೋಜನೆ, ಸಕಾಲಿಕ ಖರೀದಿ ಮತ್ತು ವೈಜ್ಞಾನಿಕ ಮೇಲ್ವಿಚಾರಣೆಗೆ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಕರೆ
ಶ್ರೀ ಚೌಹಾಣ್ ಅವರಿಂದ ಹಿಂಗಾರು ಅಭಿಯಾನ 2026ಕ್ಕೆ ಚಾಲನೆ; ಹವಾಮಾನ ಬದಲಾವಣೆಯನ್ನು ಎದುರಿಸುವ ಕೃಷಿಗಾಗಿ ಕಾರ್ಯತಂತ್ರ ರೂಪಿಸಲು ಕರೆ
ನೀರಿನ ಲಭ್ಯತೆ ಆಧರಿಸಿ ಬೆಳೆ ಯೋಜನೆ, ಹಿಂಗಾರು 2026ಕ್ಕೆ ಬಲಿಷ್ಠ ಸಿದ್ಧತೆ ಅಗತ್ಯ: ಕೇಂದ್ರ ಕೃಷಿ ಸಚಿವರು
ಆತ್ಮನಿರ್ಭರತೆಯತ್ತ ಹೆಚ್ಚಿನ ಒತ್ತು; ಹಿಂಗಾರು ಕಾರ್ಯತಂತ್ರದಲ್ಲಿ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳುಗಳಿಗೆ ಆದ್ಯತೆ ನೀಡುವಂತೆ ಶ್ರೀ ಚೌಹಾಣ್ ಕರೆ
ಬೀಜದಿಂದ ಮಾರುಕಟ್ಟೆಯವರೆಗೆ, ಕೃಷಿ ಪರಿಕರಗಳು ಸಮಯಕ್ಕೆ ಸರಿಯಾಗಿ ಲಭ್ಯವಾಗುವುದನ್ನು ಮತ್ತು ಖಚಿತ ಖರೀದಿಯನ್ನು ರಾಜ್ಯಗಳು ಖಾತ್ರಿಪಡಿಸಬೇಕು: ಕೇಂದ್ರ ಕೃಷಿ ಸಚಿವರು
ಸಾಪ್ತಾಹಿಕ ಬೆಳೆ ಮೇಲ್ವಿಚಾರಣೆ, ಸಮತೋಲಿತ ರಸಗೊಬ್ಬರ ಬಳಕೆ ಮತ್ತು ಬಲವಾದ ರೈತರ ಬೆಂಬಲಕ್ಕೆ ಶ್ರೀ ಚೌಹಾಣ್ ಕರೆ
ಪ್ರಕಟಣಾ ದಿನಾಂಕ:
28 SEP 2026 5:57PM by PIB Bengaluru
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ಸಮನ್ವಯದ ಯೋಜನೆ, ವೈಜ್ಞಾನಿಕ ಮೌಲ್ಯಮಾಪನ ಮತ್ತು ಕ್ಷೇತ್ರಮಟ್ಟದ ನಿಕಟ ಮೇಲ್ವಿಚಾರಣೆಯ ಮೂಲಕ ಹಿಂಗಾರು ಹಂಗಾಮಿಗೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ರಾಜ್ಯಗಳಿಗೆ ಇಂದು ಕರೆ ನೀಡಿದರು. ನವದೆಹಲಿಯಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಕೃಷಿ ಸಮ್ಮೇಳನ – ಹಿಂಗಾರು (ರಬಿ) ಅಭಿಯಾನ 2026ರಲ್ಲಿ ಮಾತನಾಡಿದ ಅವರು, ಹವಾಮಾನ ಬದಲಾವಣೆ, ಅನಿಯಮಿತ ಮಳೆ ಮತ್ತು ನೀರಿನ ಕೊರತೆಯ ಹಿನ್ನೆಲೆಯಲ್ಲಿ ಆಹಾರ ಭದ್ರತೆ ಹಾಗೂ ರೈತರ ಆದಾಯ ಹೆಚ್ಚಳಕ್ಕೆ ಸಾಂಪ್ರದಾಯಿಕ ವಿಧಾನಗಳ ಬದಲಿಗೆ ದತ್ತಾಂಶ ಆಧಾರಿತ ಯೋಜನೆ ಮತ್ತು ಕೇಂದ್ರ-ರಾಜ್ಯಗಳ ನಡುವೆ ಬಲವಾದ ಸಮನ್ವಯ ಅಗತ್ಯವಿದೆ ಎಂದು ಹೇಳಿದರು. ಪೂಸಾದ ಎನ್‌ಎಎಸ್‌ಸಿ ಸಂಕೀರ್ಣದಲ್ಲಿರುವ ಭಾರತ ರತ್ನ ಸಿ. ಸುಬ್ರಹ್ಮಣ್ಯಂ ಸಭಾಂಗಣದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ಈ ಸಮ್ಮೇಳನದಲ್ಲಿ, ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಮತ್ತು ಶ್ರೀ ಭಗೀರಥ್ ಚೌಧರಿ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶ್ರೀ ಅತಿಶ್ ಚಂದ್ರ, ಐಸಿಎಆರ್ ಮಹಾನಿರ್ದೇಶಕರಾದ ಡಾ. ಎಂ.ಎಲ್. ಜಾಟ್, ಕೇಂದ್ರ ಮತ್ತು ರಾಜ್ಯಗಳ ಹಿರಿಯ ಅಧಿಕಾರಿಗಳು, ಕೃಷಿ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ನಿರ್ದೇಶಕರು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು, ಐಸಿಎಆರ್ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಕೆವಿಕೆಗಳು, ಆತ್ಮಾ (ATMA) ಮತ್ತು ಇತರ ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಉದ್ಘಾಟನಾ ಭಾಷಣದಲ್ಲಿ ಶ್ರೀ ಚೌಹಾಣ್ ಅವರು, ಸ್ವಾವಲಂಬಿ ಮತ್ತು ವಿಕಸಿತ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವಲ್ಲಿ 2026ರ ಹಿಂಗಾರು ಹಂಗಾಮು ಮಹತ್ವದ ಹಂತವಾಗಿದೆ ಎಂದು ಹೇಳಿದರು. ಕೇಂದ್ರ-ರಾಜ್ಯ ಸಮನ್ವಯವನ್ನು ಬಲಪಡಿಸುವುದು, ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು, ಸುಸ್ಥಿರತೆಗೆ ಉತ್ತೇಜನ ನೀಡುವುದು ಹಾಗೂ ರೈತರ ಆದಾಯ ಹೆಚ್ಚಿಸಲು ಸಮನ್ವಯದ, ಫಲಿತಾಂಶ ಆಧಾರಿತ ಕಾರ್ಯತಂತ್ರವನ್ನು ಸಿದ್ಧಪಡಿಸುವುದು ಸಮ್ಮೇಳನದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ನೀರಿನ ಲಭ್ಯತೆಯ ಲೆಕ್ಕಾಚಾರವು ಬೆಳೆ ಯೋಜನೆಗೆ ಮಾರ್ಗದರ್ಶಿಯಾಗಬೇಕು
ಹಿಂಗಾರು ಹಂಗಾಮಿನ ಯೋಜನೆಗೆ ನೀರಿನ ಲಭ್ಯತೆಯ ಲೆಕ್ಕಾಚಾರವು ಅತ್ಯಂತ ಪ್ರಮುಖ ಮಾನದಂಡಗಳಲ್ಲಿ ಒಂದಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಬೆಳೆ ಯೋಜನೆಗಳನ್ನು ಅಂತಿಮಗೊಳಿಸುವ ಮೊದಲು ಪ್ರತಿಯೊಂದು ರಾಜ್ಯ ಮತ್ತು ಜಿಲ್ಲೆಯೂ ನೀರಾವರಿಗೆ ಲಭ್ಯವಿರುವ ನೀರಿನ ಪ್ರಮಾಣವನ್ನು ಮೌಲ್ಯಮಾಪನ ಮಾಡಬೇಕು ಎಂದು ಅವರು ಕರೆ ನೀಡಿದರು. ನೀರಿನ ಲಭ್ಯತೆ ಸೀಮಿತವಾಗಿರುವ ಪ್ರದೇಶಗಳಲ್ಲಿ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳುಗಳಂತಹ ಕಡಿಮೆ ನೀರು ಅಗತ್ಯವಿರುವ ಬೆಳೆಗಳಿಗೆ ಆದ್ಯತೆ ನೀಡಬೇಕು. ಖಚಿತ ನೀರಾವರಿ ಸೌಲಭ್ಯವಿರುವ ಪ್ರದೇಶಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಇತರ ಬೆಳೆಗಳನ್ನು ಯೋಜಿಸಬಹುದು ಎಂದು ಅವರು ಹೇಳಿದರು.
ರಾಷ್ಟ್ರಮಟ್ಟದಲ್ಲಿ ನೀರಿನ ಲಭ್ಯತೆಯ ಮೇಲೆ ತೀವ್ರ ಪರಿಣಾಮ ಬೀರುವಷ್ಟು ಮಳೆಯ ಕೊರತೆ ಇಲ್ಲದಿದ್ದರೂ, ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗಿದೆ ಎಂದು ಅವರು ಹೇಳಿದರು. ಆದರೆ ಕೆಲವು ರಾಜ್ಯಗಳಲ್ಲಿ ನೀರಿನ ಕೊರತೆ ಕಳವಳಕಾರಿಯಾಗಿದೆ ಎಂದರು. ರಾಜ್ಯಗಳು ನೀರಿನ ಲಭ್ಯತೆ ಮತ್ತು ದುರ್ಬಲ ಪ್ರದೇಶಗಳಲ್ಲಿನ ಮಣ್ಣಿನ ತೇವಾಂಶವನ್ನು ಮೌಲ್ಯಮಾಪನ ಮಾಡಿ, ಮುಂಚಿತವಾಗಿಯೇ ನೀರಾವರಿ ವ್ಯವಸ್ಥೆಗಳನ್ನು ಸಿದ್ಧಪಡಿಸಬೇಕು ಎಂದು ಅವರು ಹೇಳಿದರು. “ಹೆಚ್ಚು ನೀರು ಅಗತ್ಯವಿರುವ ಬೆಳೆಯನ್ನು ಬಿತ್ತನೆ ಮಾಡಿದ ನಂತರ ಸಾಕಷ್ಟು ನೀರು ಲಭ್ಯವಾಗದೆ, ಬೆಳೆ ನಷ್ಟವಾಗುವಂತಹ ಪರಿಸ್ಥಿತಿ ಯಾವುದೇ ಕಾರಣಕ್ಕೂ ಉಂಟಾಗಬಾರದು” ಎಂದು ಅವರು ಹೇಳಿದರು. ಹಿಂಗಾರು ಬಿತ್ತನೆ ಅವಧಿ ಸಮೀಪಿಸುತ್ತಿರುವುದರಿಂದ ಸಿದ್ಧತೆಗಳು ತಕ್ಷಣವೇ ಆರಂಭವಾಗಬೇಕು ಎಂದು ಅವರು ಒತ್ತಿ ಹೇಳಿದರು. ಮಳೆಆಶ್ರಿತ ಪ್ರದೇಶಗಳಲ್ಲಿ ವಿಶೇಷವಾಗಿ ಎಚ್ಚರಿಕೆಯಿಂದ ಯೋಜನೆ ರೂಪಿಸುವ ಅಗತ್ಯವಿದೆ. ಏಕೆಂದರೆ ಮಣ್ಣಿನ ತೇವಾಂಶದ ಲಭ್ಯತೆಯೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಆಯ್ಕೆ ಮತ್ತು ಅದರ ಫಲಿತಾಂಶವನ್ನು ನಿರ್ಧರಿಸುತ್ತದೆ ಎಂದು ಅವರು ಹೇಳಿದರು.

ಬರಪೀಡಿತ ಪ್ರದೇಶಗಳಲ್ಲಿ ಕೇಂದ್ರದಿಂದ ಸ್ಥಳ ಪರಿಶೀಲನೆ
ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀ ಚೌಹಾಣ್, ಮಹಾರಾಷ್ಟ್ರದ ಸುಮಾರು ಮೂರನೇ ಎರಡರಷ್ಟು ಪ್ರದೇಶ ಬರದಿಂದ ಬಾಧಿತವಾಗಿದ್ದು, ರಾಜ್ಯವು ಬರ ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಹೇಳಿದರು. ಕರ್ನಾಟಕದಲ್ಲಿಯೂ ಬರದಂತಹ ಪರಿಸ್ಥಿತಿ ಎದುರಾಗಿದೆ ಎಂದರು. ಅಕ್ಟೋಬರ್ 3ರಂದು ಕರ್ನಾಟಕದಲ್ಲಿ ಕೇಂದ್ರ ತಂಡವು ಸ್ಥಳ ಪರಿಶೀಲನೆ ನಡೆಸಲಿದೆ. ಮಹಾರಾಷ್ಟ್ರಕ್ಕೂ ಕೇಂದ್ರ ತಂಡವನ್ನು ಕಳುಹಿಸಲಾಗುವುದು ಎಂದು ಅವರು ತಿಳಿಸಿದರು. ಬಾಧಿತ ರಾಜ್ಯಗಳಿಗೆ ತಮ್ಮ ತಂಡದೊಂದಿಗೆ ವೈಯಕ್ತಿಕವಾಗಿ ಭೇಟಿ ನೀಡುವುದಾಗಿ ತಿಳಿಸಿದ ಶ್ರೀ ಚೌಹಾಣ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ರೈತರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದರು.
ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ನೀರಿನ ಲಭ್ಯತೆ ಮತ್ತು ಮಣ್ಣಿನ ತೇವಾಂಶವನ್ನು ಆಧರಿಸಿ ಬೆಳೆ ಯೋಜನೆಗಳನ್ನು ರೂಪಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಮಳೆಆಶ್ರಿತ ಮತ್ತು ನೀರಾವರಿ ಸೌಲಭ್ಯವಿರುವ ಪ್ರದೇಶಗಳಿಗೆ ಪ್ರತ್ಯೇಕ ಕಾರ್ಯತಂತ್ರಗಳನ್ನು ಸಿದ್ಧಪಡಿಸಬೇಕು ಎಂದರು. ಬಿತ್ತನೆ ವಿಳಂಬವಾದರೆ ಮೊಳಕೆಯೊಡೆಯುವಿಕೆ ಮತ್ತು ಉತ್ಪಾದಕತೆ ಎರಡರ ಮೇಲೂ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ ಅವರು, ಸಮಯಕ್ಕೆ ಸರಿಯಾಗಿ ಬಿತ್ತನೆ ಮತ್ತು ಮುಂಚಿತ ಸಿದ್ಧತೆ ಅತ್ಯಗತ್ಯ ಎಂದು ಹೇಳಿದರು.

ಗುಣಮಟ್ಟದ ಬೀಜಗಳ ಸಕಾಲಿಕ ಲಭ್ಯತೆ ಪ್ರಮುಖ ಆದ್ಯತೆ
ಹಿಂಗಾರು ಹಂಗಾಮಿನ ಸಿದ್ಧತೆಯಲ್ಲಿ ಬೀಜವು ಅತ್ಯಂತ ನಿರ್ಣಾಯಕ ಕೊಂಡಿಯಾಗಿದೆ ಎಂದು ಹೇಳಿದ ಶ್ರೀ ಚೌಹಾಣ್, ನಿರ್ದಿಷ್ಟ ಪ್ರದೇಶಗಳು ಮತ್ತು ಕೃಷಿ-ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ ತಳಿಗಳು ಯಾವುವು ಎಂಬುದನ್ನು ರಾಜ್ಯಗಳು ತಕ್ಷಣವೇ ನಿರ್ಧರಿಸಬೇಕು ಎಂದು ಹೇಳಿದರು. ಕೆಲವು ರಾಜ್ಯಗಳು ಸಮಯಕ್ಕೆ ಸರಿಯಾಗಿ ಬೀಜದ ಬೇಡಿಕೆಯನ್ನು ಸಲ್ಲಿಸದಿರುವುದು ಹಾಗೂ ಅಗತ್ಯ ಪ್ರಮಾಣದ ಬೀಜವನ್ನು ಪಡೆದುಕೊಳ್ಳದಿರುವುದರಿಂದ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಕೆಲವು ಸಂದರ್ಭಗಳಲ್ಲಿ ಉತ್ತಮ ಗುಣಮಟ್ಟದ ಬೀಜದ ತಳಿಗಳು ಬಿತ್ತನೆ ಅವಧಿ ಮುಗಿದ ನಂತರ ರೈತರನ್ನು ತಲುಪುತ್ತವೆ ಮತ್ತು ಬಳಿಕ ಸಾಮಾನ್ಯ ಧಾನ್ಯದ ಬೆಲೆಗೆ ಸಮನಾದ ದರದಲ್ಲಿ ಮಾರಾಟವಾಗುತ್ತವೆ ಎಂದು ಅವರು ಹೇಳಿದರು.
ಬೀಜದ ಬೇಡಿಕೆ, ಸಂಗ್ರಹಣೆ, ಸಾಗಣೆ ಮತ್ತು ವಿತರಣೆಯನ್ನು ಒಳಗೊಂಡ ಸಮಗ್ರ ಕಾರ್ಯಯೋಜನೆಯನ್ನು ರೂಪಿಸುವಂತೆ ಅವರು ಕರೆ ನೀಡಿದರು. ಸಮ್ಮೇಳನದಲ್ಲಿ ಐಸಿಎಆರ್‌ನ ಹಿರಿಯ ವಿಜ್ಞಾನಿಗಳು ಮತ್ತು ತಜ್ಞರು ಉಪಸ್ಥಿತರಿರುವುದರಿಂದ, ವಿವಿಧ ಪ್ರದೇಶಗಳು ಮತ್ತು ಪರಿಸ್ಥಿತಿಗಳಿಗೆ ಅತ್ಯಂತ ಸೂಕ್ತವಾದ ತಳಿಗಳನ್ನು ರಾಜ್ಯಗಳು ಜಂಟಿಯಾಗಿ ಗುರುತಿಸಬೇಕು ಎಂದು ಹೇಳಿದರು. ಕೃಷಿ ಸಂಸ್ಥೆಗಳು ಬಿಡುಗಡೆ ಮಾಡಿರುವ ಯಾವ ತಳಿಗಳನ್ನು ರೈತರು ಅಳವಡಿಸಿಕೊಂಡಿದ್ದಾರೆ ಮತ್ತು ಯಾವ ತಳಿಗಳು ಅಳವಡಿಕೆಯಾಗಿಲ್ಲ ಎಂಬುದನ್ನು ಮೌಲ್ಯಮಾಪನ ಮಾಡಿ, ಅಗತ್ಯವಿರುವ ತಳಿಗಳಿಗೆ ಸಂಬಂಧಿಸಿದಂತೆ ರೈತರಲ್ಲಿ ಜಾಗೃತಿ ಮೂಡಿಸುವ ಮತ್ತು ವಿಸ್ತರಣಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು. ಈ ಕಾರ್ಯವನ್ನು ಎರಡು ದಿನಗಳ ಸಮ್ಮೇಳನದ ಅವಧಿಯಲ್ಲಿ ವೈಜ್ಞಾನಿಕವಾಗಿ ಪೂರ್ಣಗೊಳಿಸಬೇಕು ಎಂದು ಅವರು ತಿಳಿಸಿದರು.

ಖಚಿತ ಮಾರುಕಟ್ಟೆ ಬೆಂಬಲದೊಂದಿಗೆ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳುಗಳಿಗೆ ಉತ್ತೇಜನ
ವಿಶೇಷವಾಗಿ ಭತ್ತದ ಬೆಳೆ ನಂತರ ಕೃಷಿ ಮಾಡದೆ ಪಾಳುಬಿಡುವ ಪ್ರದೇಶಗಳಲ್ಲಿ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳುಗಳ ಬೆಳೆಯನ್ನು ಉತ್ತೇಜಿಸುವಂತೆ ಶ್ರೀ ಚೌಹಾಣ್ ರಾಜ್ಯಗಳಿಗೆ ಕರೆ ನೀಡಿದರು. ಈ ಬೆಳೆಗಳಿಗೆ ತುಲನಾತ್ಮಕವಾಗಿ ಕಡಿಮೆ ನೀರು ಅಗತ್ಯವಿದ್ದು, ದ್ವಿದಳ ಧಾನ್ಯ ಮತ್ತು ಖಾದ್ಯ ತೈಲಗಳಲ್ಲಿ ಆತ್ಮನಿರ್ಭರತೆ ಸಾಧಿಸುವ ರಾಷ್ಟ್ರೀಯ ಉದ್ದೇಶಕ್ಕೆ ಇವು ಪ್ರಮುಖವಾಗಿವೆ ಎಂದು ಅವರು ಹೇಳಿದರು. ಪ್ರತಿಯೊಂದು ರಾಜ್ಯವೂ ಸೆಪ್ಟೆಂಬರ್ 29ರೊಳಗೆ ತನ್ನ ಹಿಂಗಾರು ಯೋಜನೆಯನ್ನು ಅಂತಿಮಗೊಳಿಸಬೇಕು. ದ್ವಿದಳ ಧಾನ್ಯಗಳ ಅಡಿಯಲ್ಲಿ ತರಬೇಕಾದ ಪ್ರದೇಶ ಹಾಗೂ ಬೆಳೆಯಬೇಕಾದ ಬೆಳೆಗಳಾದ ಕಡಲೆ, ಮಸೂರ ಮತ್ತು ಸಾಸಿವೆ ಸೇರಿದಂತೆ ಇತರ ಬೆಳೆಗಳ ವಿವರವನ್ನು ಯೋಜನೆಯಲ್ಲಿ ನಮೂದಿಸಬೇಕು ಎಂದು ಅವರು ಹೇಳಿದರು.
ಅದೇ ಸಮಯದಲ್ಲಿ, ಉತ್ಪಾದನಾ ಯೋಜನೆಯ ಜೊತೆಗೆ ಖಚಿತ ಮಾರುಕಟ್ಟೆ ವ್ಯವಸ್ಥೆಯೂ ಇರಬೇಕು ಎಂದು ಅವರು ಒತ್ತಿ ಹೇಳಿದರು. ತಮ್ಮ ಉತ್ಪನ್ನಗಳನ್ನು ಸಮಯಕ್ಕೆ ಸರಿಯಾಗಿ ಖರೀದಿಸಲಾಗುತ್ತದೆ ಎಂಬ ವಿಶ್ವಾಸ ರೈತರಿಗೆ ಇರಬೇಕು ಎಂದರು. “ಭತ್ತದ ನಂತರ ಯಾವುದೇ ಬೆಳೆ ಬೆಳೆಯದ ಪ್ರದೇಶಗಳಿದ್ದರೆ, ಅಲ್ಲಿ ರೈತರನ್ನು ದ್ವಿದಳ ಧಾನ್ಯ ಬೆಳೆಯಲು ಪ್ರೋತ್ಸಾಹಿಸಲು ಇದು ಒಂದು ಅವಕಾಶವಾಗಿದೆ” ಎಂದು ಅವರು ಹೇಳಿದರು. ರಾಜ್ಯಗಳು ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರೆ ನೀಡಿದರು.

ಖರೀದಿ ಯೋಜನೆಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಬೇಕು
ರೈತರಿಗೆ ಮಾರುಕಟ್ಟೆಯ ಬಗ್ಗೆ ವಿಶ್ವಾಸ ಮೂಡಿಸಲು ಉತ್ಪಾದನೆಯ ಜೊತೆಯಲ್ಲೇ ಖರೀದಿ ವ್ಯವಸ್ಥೆಯನ್ನೂ ಯೋಜಿಸಬೇಕು ಎಂದು ಶ್ರೀ ಚೌಹಾಣ್ ಹೇಳಿದರು. ರಾಜ್ಯ ಸರ್ಕಾರಗಳಿಗೆ ಸಮಯಕ್ಕೆ ಸರಿಯಾಗಿ ಖರೀದಿ ನಡೆಸಲು ಸಾಧ್ಯವಾಗದಿದ್ದರೆ, ಕೇಂದ್ರದ ನೋಡಲ್ ಸಂಸ್ಥೆಗಳಾದ ಎನ್‌ಎಎಫ್‌ಇಡಿ ಮತ್ತು ಎನ್‌ಸಿಸಿಎಫ್ ರೈತರಿಂದ ನೇರವಾಗಿ ಖರೀದಿ ಮಾಡಲಿವೆ ಎಂದು ಅವರು ಹೇಳಿದರು. ಆದರೆ ಖರೀದಿಯಲ್ಲಿ ಯಾವುದೇ ವಿಳಂಬವಾಗದಂತೆ ಮಾರುಕಟ್ಟೆಗೆ ಸಂಬಂಧಿಸಿದ ಅಗತ್ಯತೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸುವುದು ಮತ್ತು ಇತರ ವ್ಯವಸ್ಥೆಗಳನ್ನು ಮಾಡುವುದು ಸೇರಿದಂತೆ ಅಗತ್ಯ ಸಹಕಾರವನ್ನು ರಾಜ್ಯಗಳು ಒದಗಿಸಬೇಕು ಎಂದು ಅವರು ಹೇಳಿದರು.
ಬೆಂಬಲ ಬೆಲೆ ಯೋಜನೆ (ಪಿಎಸ್‌ಎಸ್) ಅಡಿಯಲ್ಲಿ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳುಗಳ ಖರೀದಿಗೆ ಕೇಂದ್ರವು ದೊಡ್ಡ ಪ್ರಮಾಣದಲ್ಲಿ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ರಾಜ್ಯಗಳು ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಕೆಲವು ರಾಜ್ಯಗಳು ಖರೀದಿ ಪ್ರಸ್ತಾವನೆಗಳನ್ನು ಸಲ್ಲಿಸುತ್ತವೆ, ಆದರೆ ನಂತರ ಖರೀದಿ ಮಾಡುವುದಿಲ್ಲ ಎಂಬುದನ್ನೂ ಅವರು ಗಮನಕ್ಕೆ ತಂದರು. ಆದ್ದರಿಂದ ರಾಜ್ಯಗಳು ಬೀಜದ ಲಭ್ಯತೆ, ವಿತರಣೆ, ಉತ್ಪಾದನೆ ಮತ್ತು ಮಾರುಕಟ್ಟೆ ವ್ಯವಸ್ಥೆಗಳನ್ನು ಒಳಗೊಂಡ ಸಮಗ್ರ ಖರೀದಿ ಕಾರ್ಯಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಅವರು ಹೇಳಿದರು. ಬೀಜದ ಯೋಜನೆಗಳನ್ನು ಸಿದ್ಧಪಡಿಸುವಾಗ ರಾಜ್ಯಗಳು ರೈತರೊಂದಿಗೆ ಸಮಾಲೋಚನೆ ನಡೆಸಬೇಕು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಜಾಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಶ್ರೀ ಚೌಹಾಣ್ ಸಲಹೆ ನೀಡಿದರು.
ಸಮತೋಲಿತ ರಸಗೊಬ್ಬರ ಬಳಕೆ ಮತ್ತು ‘ಖೇತ್ ಬಚಾವೋ ಅಭಿಯಾನ’ದ ವಿಸ್ತರಣೆ
ರಸಗೊಬ್ಬರಗಳ ಸಮತೋಲಿತ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಶ್ರೀ ಚೌಹಾಣ್ ಕರೆ ನೀಡಿದರು. ಒಂದು ಚೀಲ ರಸಗೊಬ್ಬರ ಸಾಕಾಗುವ ಬೆಳೆಗೆ ಎರಡು ಚೀಲಗಳನ್ನು ಬಳಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಅತಿಯಾದ ಬಳಕೆಯಿಂದ ಕೃಷಿ ವೆಚ್ಚ ಹೆಚ್ಚುವುದರ ಜೊತೆಗೆ ಮಣ್ಣಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ಮುಂಗಾರು (ಖಾರಿಫ್) ಹಂಗಾಮಿನಲ್ಲಿ ಆರಂಭಿಸಲಾದ ‘ಖೇತ್ ಬಚಾವೋ ಅಭಿಯಾನ’ವನ್ನು ಹಿಂಗಾರು ಹಂಗಾಮಿಗೂ ವಿಸ್ತರಿಸುವಂತೆ ಅವರು ರಾಜ್ಯಗಳಿಗೆ ಕರೆ ನೀಡಿದರು. ದಕ್ಷಿಣದ ರಾಜ್ಯಗಳ ಅನುಭವವನ್ನು ಉಲ್ಲೇಖಿಸಿದ ಅವರು, ಅಲ್ಲಿ ರಸಗೊಬ್ಬರ ಬಳಕೆ ಕಡಿಮೆಯಾದರೂ ಉತ್ಪಾದನೆಯ ಮೇಲೆ ಪರಿಣಾಮ ಬೀರಿಲ್ಲ ಎಂದು ಹೇಳಿದರು. ಈ ಅನುಭವಗಳನ್ನು ಇತರ ರಾಜ್ಯಗಳೊಂದಿಗೆ ಹಂಚಿಕೊಂಡು ಅನುಸರಿಸುವಂತೆ ಅವರು ಕರೆ ನೀಡಿದರು.
ಕೃಷಿ ವಿಜ್ಞಾನಿಗಳ ಸಹಕಾರದೊಂದಿಗೆ ಸಮತೋಲಿತ ರಸಗೊಬ್ಬರ ಬಳಕೆಯನ್ನು ಅಳವಡಿಸಿಕೊಳ್ಳುವಂತೆ ರೈತರನ್ನು ರಾಜ್ಯಗಳು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು. ಅಗತ್ಯವಿರುವ ಎಲ್ಲೆಡೆ ವೈಜ್ಞಾನಿಕ ನೆರವು ಒದಗಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದರು. ರಸಗೊಬ್ಬರಗಳ ಸಕಾಲಿಕ ಲಭ್ಯತೆ ಮತ್ತು ವಿತರಣೆಯ ಅಗತ್ಯವನ್ನೂ ಶ್ರೀ ಚೌಹಾಣ್ ಒತ್ತಿ ಹೇಳಿದರು. ಬಿತ್ತನೆಗೂ ಮುನ್ನ ಬೀಜ ರೈತರನ್ನು ತಲುಪಬೇಕಾದಂತೆಯೇ, ರಸಗೊಬ್ಬರವೂ ಸರಿಯಾದ ಸಮಯದಲ್ಲಿ ಲಭ್ಯವಾಗಬೇಕು ಎಂದು ಅವರು ಹೇಳಿದರು. ನಿಜವಾದ ರೈತರಿಗೆ ರಸಗೊಬ್ಬರ ತಲುಪುವುದನ್ನು ಖಚಿತಪಡಿಸುವ ಹಾಗೂ ಅದರ ಅಕ್ರಮ ವರ್ಗಾವಣೆ ಮತ್ತು ಕಾಳಸಂತೆ ತಡೆಯುವ ಉದ್ದೇಶದಿಂದ ರೈತ ಗುರುತಿನ ಚೀಟಿಯನ್ನು ಆಧರಿಸಿದ ಪ್ರಾಯೋಗಿಕ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರ ಪ್ರಸ್ತುತ ರಸಗೊಬ್ಬರ ಸಬ್ಸಿಡಿಗಾಗಿ ಸುಮಾರು ₹2 ಲಕ್ಷ ಕೋಟಿ ವೆಚ್ಚ ಮಾಡುತ್ತಿದೆ. ರೈತರಿಗೆ ರಸಗೊಬ್ಬರಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದ್ದು, ಯೂರಿಯಾ ಒಂದು ಚೀಲಕ್ಕೆ ₹266 ಮತ್ತು ಡಿಎಪಿ ಒಂದು ಚೀಲಕ್ಕೆ ₹₹1,350 ದರದಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು. ಈ ಸಬ್ಸಿಡಿ ಆಧಾರಿತ ಕೃಷಿ ಪರಿಕರವನ್ನು ಸಮತೋಲಿತವಾಗಿ ಬಳಸುವುದನ್ನು ಖಚಿತಪಡಿಸುವುದು ರಾಜ್ಯಗಳ ಜವಾಬ್ದಾರಿಯೂ ಆಗಿದೆ ಎಂದು ಅವರು ಹೇಳಿದರು. ‘ಖೇತ್ ಬಚಾವೋ ಅಭಿಯಾನ’ವು ಕೇವಲ ಅತಿಯಾದ ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡುವುದಕ್ಕೆ ಸೀಮಿತವಾಗಿಲ್ಲ. ಮಣ್ಣಿನ ಆರೋಗ್ಯ, ಪ್ರಯೋಜನಕಾರಿ ಸೂಕ್ಷ್ಮಜೀವಿಗಳು ಮತ್ತು ಮುಂದಿನ ಪೀಳಿಗೆಗಾಗಿ ಕೃಷಿಭೂಮಿಯ ಉತ್ಪಾದನಾ ಸಾಮರ್ಥ್ಯವನ್ನು ಸಂರಕ್ಷಿಸುವುದೂ ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಸಹಜ ಕೃಷಿ: ಬ್ರ್ಯಾಂಡಿಂಗ್, ಮಾರುಕಟ್ಟೆ ಮತ್ತು ಪ್ರಮಾಣೀಕರಣಕ್ಕೆ ಒತ್ತು
ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಲು ಹೆಚ್ಚು ಸಿದ್ಧರಾಗುತ್ತಿದ್ದಾರೆ ಮತ್ತು ನೋಂದಣಿ ಪ್ರಕ್ರಿಯೆಯಲ್ಲಿಯೂ ಪ್ರಗತಿ ಸಾಧಿಸಲಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಆದರೆ ಈಗ ರಾಜ್ಯಗಳು ಸಹಜ ಕೃಷಿ ಉತ್ಪನ್ನಗಳ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಆಂಧ್ರಪ್ರದೇಶ, ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ಉದಾಹರಣೆ ನೀಡಿದ ಅವರು, ಈ ರಾಜ್ಯಗಳು ನೈಸರ್ಗಿಕ ಕೃಷಿ ಉತ್ಪನ್ನಗಳಿಗೆ ಬ್ರ್ಯಾಂಡ್‌ಗಳನ್ನು ಅಭಿವೃದ್ಧಿಪಡಿಸಿ ಅವುಗಳಿಗೆ ಮಾರುಕಟ್ಟೆಯಲ್ಲಿ ಪ್ರತ್ಯೇಕ ಗುರುತನ್ನು ರೂಪಿಸಿವೆ. ಇದರಿಂದ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯಲು ಸಹಾಯವಾಗಿದೆ ಎಂದು ಹೇಳಿದರು. ಪ್ರಮಾಣೀಕರಣ ಪ್ರಕ್ರಿಯೆಯು ರೈತರಿಗೆ ಅಡ್ಡಿಯಾಗದಂತೆ ರಾಜ್ಯಗಳು ನೋಡಿಕೊಳ್ಳಬೇಕು ಮತ್ತು ಸಹಜ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಮಾನ್ಯತೆ ದೊರೆಯುವಂತೆ ಮಾಡಬೇಕು ಎಂದು ಅವರು ಹೇಳಿದರು.
ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ರೈತ ಗುರುತಿನ ಚೀಟಿಗೆ ಹೆಚ್ಚಿನ ವ್ಯಾಪ್ತಿ ಅಗತ್ಯ
ಸುಮಾರು 9.54 ಕೋಟಿ ರೈತ ಕುಟುಂಬಗಳು ಪಿಎಂ-ಕಿಸಾನ್ ಯೋಜನೆಯ ವ್ಯಾಪ್ತಿಗೆ ಬಂದಿವೆ. ಆದರೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ವ್ಯಾಪ್ತಿ, ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರಲ್ಲಿ, ಹಲವು ಪ್ರದೇಶಗಳಲ್ಲಿ ಇನ್ನೂ ಸಮರ್ಪಕವಾಗಿಲ್ಲ ಎಂದು ಶ್ರೀ ಚೌಹಾಣ್ ಹೇಳಿದರು. ಕೆಸಿಸಿ ವ್ಯಾಪ್ತಿ ಕಡಿಮೆ ಇರುವ ಪ್ರದೇಶಗಳನ್ನು ರಾಜ್ಯಗಳು ಗುರುತಿಸಬೇಕು ಮತ್ತು ಬ್ಯಾಂಕಿಂಗ್ ಮಟ್ಟದಲ್ಲಿ ಸಾಲ ಮಂಜೂರಾತಿಗೆ ಎದುರಾಗಿರುವ ಅಡಚಣೆಗಳನ್ನು ಪರಿಶೀಲಿಸಬೇಕು. ಇದರಿಂದ ಕೃಷಿ ಹೂಡಿಕೆಗಾಗಿ ರೈತರಿಗೆ ಸಮಯಕ್ಕೆ ಸರಿಯಾಗಿ ಸಾಲ ಲಭ್ಯವಾಗುವಂತೆ ಮಾಡಬಹುದು ಎಂದು ಅವರು ಹೇಳಿದರು. ರೈತರನ್ನು ಸಾಲ ಪಡೆಯುವಂತೆ ಒತ್ತಾಯಿಸುವುದು ಇದರ ಉದ್ದೇಶವಲ್ಲ. ಕೃಷಿಗಾಗಿ ಸಮಯಕ್ಕೆ ಸರಿಯಾಗಿ ಬಂಡವಾಳದ ಅಗತ್ಯವಿರುವ ರೈತರಿಗೆ ಸಾಂಸ್ಥಿಕ ಸಾಲದ ಸೌಲಭ್ಯ ದೊರೆಯುವಂತೆ ಮಾಡುವುದು ಇದರ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದರು.
ರೈತ ಗುರುತಿನ ಚೀಟಿ ಮತ್ತು ಅಗ್ರಿಸ್ಟ್ಯಾಕ್ ಕುರಿತಂತೆ ರಾಜ್ಯಗಳು ಸಾಧಿಸಿರುವ ಪ್ರಗತಿಯನ್ನು ಶ್ರೀ ಚೌಹಾಣ್ ಅಭಿನಂದಿಸಿದರು. ಭೂಭಾಗಕ್ಕೆ (land parcel) ಸಂಬಂಧಿಸಿದ ಕಾರ್ಯ ಸೇರಿದಂತೆ ಬಾಕಿ ಉಳಿದಿರುವ ಕೆಲಸಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಕರೆ ನೀಡಿದರು. ದೃಢವಾದ ಡಿಜಿಟಲ್ ಮೂಲಸೌಕರ್ಯವು ರೈತರ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸರ್ಕಾರದ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸಲು ನೆರವಾಗಲಿದೆ ಎಂದು ಅವರು ಹೇಳಿದರು. ಗೇಣಿದಾರ ರೈತರು ಮತ್ತು ವಿವಿಧ ಸ್ಥಳಗಳಲ್ಲಿ ಭೂಮಿಯನ್ನು ಸಾಗುವಳಿ ಮಾಡುವ ರೈತರು ರೈತ ಗುರುತಿನ ಚೀಟಿ ವ್ಯವಸ್ಥೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಅವರನ್ನು ವ್ಯವಸ್ಥೆಯೊಳಗೆ ತರಲು ಸಮನ್ವಯದ ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಬೆಳೆ, ರೋಗ ಮತ್ತು ಮಾರುಕಟ್ಟೆ ಬೆಲೆಗಳ ಸಾಪ್ತಾಹಿಕ ಮೇಲ್ವಿಚಾರಣೆ
ಪ್ರತಿಯೊಂದು ರಾಜ್ಯದಲ್ಲಿಯೂ ಬೆಳೆ ಪರಿಸ್ಥಿತಿ, ಬಿತ್ತನೆ ಪ್ರಗತಿ, ಮೊಳಕೆಯೊಡೆಯುವಿಕೆ, ಕೀಟ ಮತ್ತು ರೋಗಗಳ ಬಾಧೆ ಹಾಗೂ ಮಾರುಕಟ್ಟೆ ಬೆಲೆಗಳನ್ನು ವಾರಕ್ಕೊಮ್ಮೆ ಮೇಲ್ವಿಚಾರಣೆ ಮಾಡುವಂತೆ ಶ್ರೀ ಚೌಹಾಣ್ ಕರೆ ನೀಡಿದರು. ನೈಜ-ಸಮಯದ ಮಾಹಿತಿಯು ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಲು ಮತ್ತು ಯಾವುದೇ ವಿಳಂಬವಿಲ್ಲದೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನೆರವಾಗಲಿದೆ ಎಂದು ಅವರು ಹೇಳಿದರು. ಕೃಷಿ ಇಲಾಖೆ ಮತ್ತು ಸಂಬಂಧಿತ ಸಂಸ್ಥೆಗಳು ನೆಲಮಟ್ಟದ ಪರಿಸ್ಥಿತಿಯ ಮೇಲೆ ನಿಕಟ ನಿಗಾ ವಹಿಸಬೇಕು ಎಂದು ಅವರು ಹೇಳಿದರು. ಕೇಂದ್ರ ಮಟ್ಟದಲ್ಲಿಯೂ ಸಚಿವಾಲಯವು ಬೆಳೆ ಪರಿಸ್ಥಿತಿ, ಮಾರುಕಟ್ಟೆ ದರಗಳು ಮತ್ತು ರೋಗಗಳ ಉಲ್ಬಣವನ್ನು ಒಳಗೊಂಡಂತೆ ವಾರಕ್ಕೊಮ್ಮೆ ಪರಿಶೀಲನೆ ನಡೆಸುತ್ತದೆ. ಅಗತ್ಯವಿರುವ ಕಡೆಗಳಲ್ಲಿ ಸಮಯೋಚಿತವಾಗಿ ಮಧ್ಯಪ್ರವೇಶಿಸಲು ಇದು ನೆರವಾಗುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶ್ರೀ ಅತಿಶ್ ಚಂದ್ರ ಅವರು, ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳು, ಅಸಮರ್ಪಕ ಮಳೆ ಮತ್ತು ಮಳೆಆಶ್ರಿತ ಪ್ರದೇಶಗಳಲ್ಲಿ ತೇವಾಂಶಕ್ಕೆ ಸಂಬಂಧಿಸಿದ ಸವಾಲುಗಳ ಹಿನ್ನೆಲೆಯಲ್ಲಿ ಕೃಷಿ ವೈವಿಧ್ಯೀಕರಣ, ಸುಸ್ಥಿರ ಕೃಷಿ ಮತ್ತು ಸಂಶೋಧನೆ ಆಧಾರಿತ ಕೃಷಿ ಪದ್ಧತಿಗಳಿಗೆ ಉತ್ತೇಜನ ನೀಡುವುದು ಅತ್ಯಗತ್ಯ ಎಂದು ಹೇಳಿದರು.
ರೈತರ ಆದಾಯ ಹೆಚ್ಚಿಸಲು ಮತ್ತು ಆತ್ಮನಿರ್ಭರ ಕೃಷಿಯ ಗುರಿಯನ್ನು ಸಾಧಿಸಲು ‘ಪ್ರತಿ ಹನಿಗೆ ಹೆಚ್ಚು ಬೆಳೆ’, ಮಣ್ಣಿನ ಆರೋಗ್ಯ ನಿರ್ವಹಣೆ, ಆಧುನಿಕ ಕೃಷಿ ಮೂಲಸೌಕರ್ಯ, ಬಲಿಷ್ಠ ಮಾರುಕಟ್ಟೆ ವ್ಯವಸ್ಥೆಗಳು ಮತ್ತು ಡಿಜಿಟಲ್ ಕೃಷಿ ಪರಿಹಾರಗಳಂತಹ ಉಪಕ್ರಮಗಳ ಮೂಲಕ ದೃಢ ಕ್ರಮಗಳನ್ನು ಕೈಗೊಳ್ಳಬೇಕು. ಇವು ಕೊನೆಯ ಹಂತದವರೆಗೂ ತಲುಪುವಂತೆ ಖಚಿತಪಡಿಸಬೇಕು ಎಂದು ಅವರು ಒತ್ತಿ ಹೇಳಿದರು.
ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ (ಡಿಎಆರ್‌ಇ) ಕಾರ್ಯದರ್ಶಿ ಹಾಗೂ ಐಸಿಎಆರ್ ಮಹಾನಿರ್ದೇಶಕ ಡಾ. ಮಾಂಗಿ ಲಾಲ್ ಜಾಟ್ ಅವರು ತಮ್ಮ ಭಾಷಣದಲ್ಲಿ ಆತ್ಮನಿರ್ಭರತೆ, ಬೆಳೆ ವೈವಿಧ್ಯೀಕರಣ, ಹವಾಮಾನ-ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಕೃಷಿ, ಡಿಜಿಟಲ್ ಕೃಷಿ ಹಾಗೂ ಅಪಾಯ ತಗ್ಗಿಸುವಿಕೆಯನ್ನು ಮುಂಬರುವ ಹಿಂಗಾರು ಅಭಿಯಾನದ ಪ್ರಮುಖ ಆದ್ಯತೆಗಳೆಂದು ಗುರುತಿಸಿದರು. ಎಣ್ಣೆಕಾಳು ಮತ್ತು ದ್ವಿದಳ ಧಾನ್ಯಗಳ ಉತ್ಪಾದನೆಗೆ ಉತ್ತೇಜನ ನೀಡುವುದರ ಜೊತೆಗೆ, ಭತ್ತದ ಬೆಳೆ ನಂತರ ಕೃಷಿ ನಡೆಯದ ಪ್ರದೇಶಗಳಲ್ಲಿ ಗುರಿನಿರ್ದಿಷ್ಟ ಕಾರ್ಯತಂತ್ರಗಳ ಮೂಲಕ ಬೆಳೆ ವೈವಿಧ್ಯೀಕರಣಕ್ಕೆ ವಿಶೇಷ ಒತ್ತು ನೀಡಬೇಕು ಎಂದು ಅವರು ಹೇಳಿದರು. ಇದಕ್ಕಾಗಿ ಬೆಳೆ ಮತ್ತು ಸೂಕ್ತ ತಳಿ ಆಯ್ಕೆಯಿಂದ ಹಿಡಿದು ಗುಣಮಟ್ಟದ ಬೀಜಗಳು, ಯಾಂತ್ರೀಕರಣ, ಜೈವಿಕ ಪರಿಹಾರಗಳು ಮತ್ತು ಬೀಜೋಪಚಾರದವರೆಗೆ ಎಲ್ಲ ಅಂಶಗಳನ್ನು ಒಳಗೊಂಡ ಸಮಗ್ರ ತಾಂತ್ರಿಕ ಪ್ಯಾಕೇಜ್ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಮುಂಬರುವ ಹಂಗಾಮಿನಲ್ಲಿ ಆರು ರಾಜ್ಯಗಳ 37 ಜಿಲ್ಲೆಗಳಲ್ಲಿ 10,000 ಎಕರೆ ಪ್ರದೇಶದಲ್ಲಿ ಹಸಿರು ಅಮೋನಿಯಾದ ದೊಡ್ಡ ಪ್ರಮಾಣದ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ ಎಂದು ಡಾ. ಜಾಟ್ ತಿಳಿಸಿದರು.
ಎರಡು ದಿನಗಳ ಸಮ್ಮೇಳನದಲ್ಲಿ ಹಿಂಗಾರು ಕಾರ್ಯಯೋಜನೆಗೆ ರೂಪುರೇಷೆ
ಎರಡು ದಿನಗಳ ರಾಷ್ಟ್ರೀಯ ಕೃಷಿ ಸಮ್ಮೇಳನವು ಕೇಂದ್ರ ಮತ್ತು ರಾಜ್ಯಗಳ ಹಿರಿಯ ಅಧಿಕಾರಿಗಳು, ಐಸಿಎಆರ್ ವಿಜ್ಞಾನಿಗಳು ಹಾಗೂ ಕೃಷಿ ಸಚಿವಾಲಯದ ತಂಡಗಳನ್ನು ಒಂದೇ ವೇದಿಕೆಗೆ ತರುತ್ತಿದೆ. ಮೊದಲ ದಿನದಂದು ಆತ್ಮನಿರ್ಭರತೆ ಮತ್ತು ವೈವಿಧ್ಯೀಕರಣ; ಸುಸ್ಥಿರತೆ ಮತ್ತು ಹವಾಮಾನ-ಸ್ಥಿತಿಸ್ಥಾಪಕ ಕೃಷಿ; ಹಾಗೂ ಡಿಜಿಟಲ್ ಕೃಷಿ, ಮೂಲಸೌಕರ್ಯ, ಹಣಕಾಸು ಮತ್ತು ಅಪಾಯ ನಿರ್ವಹಣೆ ಕುರಿತ ಮೂರು ಸುತ್ತಿನ ವಿಷಯಾಧಾರಿತ ಗುಂಪು ಚರ್ಚೆಗಳು ನಡೆಯಲಿವೆ.
ಸೆಪ್ಟೆಂಬರ್ 29ರಂದು ಶ್ರೀ ಚೌಹಾಣ್ ಅವರು ರಾಜ್ಯಗಳ ಕೃಷಿ ಸಚಿವರೊಂದಿಗೆ ವಿವರವಾದ ಚರ್ಚೆ ನಡೆಸಲಿದ್ದಾರೆ. ಹಿಂಗಾರು ಹಂಗಾಮಿನ ಹವಾಮಾನ ಮುನ್ಸೂಚನೆ, ರಸಗೊಬ್ಬರಗಳ ಲಭ್ಯತೆ, ಡಿಜಿಟಲ್ ಕೃಷಿ ಮಿಷನ್, ರೈತರ ನೋಂದಣಿ, ದ್ವಿದಳ ಧಾನ್ಯ ಮತ್ತು ಖಾದ್ಯ ತೈಲಗಳ ಕುರಿತ ಮಿಷನ್‌ಗಳು, ಪಿಎಂ ಧನ-ಧಾನ್ಯ ಕೃಷಿ ಯೋಜನೆ, ಮಾರುಕಟ್ಟೆ ಸುಧಾರಣೆಗಳು ಹಾಗೂ ಆತ್ಮಾ (ATMA) ಮತ್ತು ಕೆವಿಕೆಗಳ ಮೂಲಕ ಯೋಜನೆ ರೂಪಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಸಮಾರೋಪ ಅಧಿವೇಶನದಲ್ಲಿ ಚರ್ಚೆಗಳ ಫಲಿತಾಂಶಗಳನ್ನು ಕ್ರೋಢೀಕರಿಸಿ, ಹಿಂಗಾರು ಉತ್ಪಾದನೆಯನ್ನು ಹೆಚ್ಚಿಸುವುದು, ರೈತರನ್ನು ಸಬಲೀಕರಣಗೊಳಿಸುವುದು ಮತ್ತು ಆತ್ಮನಿರ್ಭರ ಹಾಗೂ ವಿಕಸಿತ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವುದಕ್ಕಾಗಿ ದೃಢವಾದ ಕಾರ್ಯಯೋಜನೆಯನ್ನು ಸಿದ್ಧಪಡಿಸಲಾಗುವುದು. ರಾಜ್ಯಗಳ ಕೃಷಿ ಸಚಿವರು ಕೃಷಿ ಅಭಿವೃದ್ಧಿ ಮತ್ತು ಹಿಂಗಾರು ಹಂಗಾಮಿನ ಸಿದ್ಧತೆ ಕುರಿತ ತಮ್ಮ ಅನುಭವಗಳು, ಆದ್ಯತೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಈ ಸಂದರ್ಭದಲ್ಲಿ ಅವಕಾಶ ಪಡೆಯಲಿದ್ದಾರೆ. ರಾಜ್ಯಗಳಿಂದ ದೊರೆಯುವ ಸಲಹೆಗಳು ಮತ್ತು ವಿಷಯಾಧಾರಿತ ಚರ್ಚೆಗಳ ಫಲಿತಾಂಶಗಳು ಹಿಂಗಾರು ಅಭಿಯಾನ 2026ಕ್ಕಾಗಿ ಸಮನ್ವಯಗೊಳಿಸಿದ ಮತ್ತು ಫಲಿತಾಂಶ ಆಧಾರಿತ ಕಾರ್ಯತಂತ್ರ ರೂಪಿಸಲು ನೆರವಾಗುವ ನಿರೀಕ್ಷೆಯಿದೆ.
*****
(ಪ್ರಕಟಣೆ ಐ.ಡಿ.: 2316245)
ವಿಸಿಟರ್ ಕೌಂಟರ್ : 17