ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಸಾಧನಾ ಶೃಂಖಲಾ 2026: ಪ್ರದೇಶಗಳಾದ್ಯಂತ ತರಬೇತಿ ಸಂಸ್ಥೆಗಳ ರೂಪಾಂತರದತ್ತ ಒಂದು ಉಪಕ್ರಮ
ತರಬೇತಿ ಸಂಸ್ಥೆಗಳಿಂದ ಸಾಮರ್ಥ್ಯ ವೃದ್ಧಿ ಸಂಸ್ಥೆಗಳೆಡೆಗೆ
ನಾಗರಿಕ-ಕೇಂದ್ರಿತ (ನಾಗರಿಕ್ ದೇವೋ ಭವ)ತತ್ವದ ಆಧಾರದ ಮೇಲೆ ಆಡಳಿತದ ಮೂಲ ತತ್ವಗಳನ್ನು ಮುನ್ನಡೆಸುವುದು
ವಿಜಯವಾಡ (ಆಂಧ್ರಪ್ರದೇಶ), ಗುವಾಹಟಿ (ಅಸ್ಸಾಂ), ಲಕ್ನೋ (ಉತ್ತರ ಪ್ರದೇಶ) ಮತ್ತು ಪುಣೆಯಲ್ಲಿ (ಮಹಾರಾಷ್ಟ್ರ) ನಾಲ್ಕು ಪ್ರಾದೇಶಿಕ ಕಾರ್ಯಾಗಾರಗಳನ್ನು ನಡೆಸಲಾಗುವುದು
ಪ್ರಕಟಣಾ ದಿನಾಂಕ:
28 SEP 2026 10:47AM by PIB Bengaluru

‘ಸಾಮರ್ಥ್ಯ ವೃದ್ಧಿ ಆಯೋಗ’ವು 'ಮಿಷನ್ ಕರ್ಮಯೋಗಿ' ಅಡಿಯಲ್ಲಿ ತರಬೇತಿ ಸಂಸ್ಥೆಗಳನ್ನು ಕಾರ್ಯತಂತ್ರದ, ಸಾಮರ್ಥ್ಯ-ಚಾಲಿತ ಸಾಮರ್ಥ್ಯ ವೃದ್ಧಿ ಸಂಸ್ಥೆಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ 'ಸಾಧನಾ ಶೃಂಖಲಾ 2026’ ಅನ್ನು ಆಯೋಜಿಸುತ್ತಿದೆ. ಇದು ರಾಷ್ಟ್ರವ್ಯಾಪಿ ಪ್ರಾದೇಶಿಕ ಸಮಾಲೋಚನಾ ಸರಣಿಯಾಗಿದೆ. ಏಪ್ರಿಲ್ 2 ರಿಂದ 8, 2026 ರವರೆಗೆ ನಡೆದ ನಾಲ್ಕು ಪ್ರಾದೇಶಿಕ ಕಾರ್ಯಪಡೆಗಳ ಸಮಾಲೋಚನೆಗಳು (ಸಾಧನಾ ಸಪ್ತಾಹ 2026) ಮತ್ತು ಮೇ 15, 2026ರಂದು ನಡೆದ "ಸಾಮರ್ಥ್ಯ ನಿರ್ಮಾಣವನ್ನು ಸಾಂಸ್ಥೀಕರಣಗೊಳಿಸುವುದು: ತರಬೇತಿಯಿಂದ ಕಾರ್ಯಕ್ಷಮತೆ ಆಧಾರಿತ ಆಡಳಿತದವರೆಗೆ" ಎಂಬ ರಾಷ್ಟ್ರೀಯ ಇಲಾಖಾ ಶೃಂಗಸಭೆಯ ಆಧಾರದ ಮೇಲೆ ಈ ಸಾಧನಾ ಶೃಂಖಲಾವನ್ನು ರೂಪಿಸಲಾಗಿದೆ.
‘ಸಾಧನಾ ಶೃಂಖಲಾ’ ಪ್ರಾದೇಶಿಕ ಕಾರ್ಯಾಗಾರಗಳನ್ನು ಒಂದೂವರೆ ದಿನದ ಕಾರ್ಯಕ್ರಮವಾಗಿ ಆಯೋಜಿಸಲಾಗಿದೆ. ಇದು ಆಯಾ ಪ್ರದೇಶದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು, ಜೊತೆಗೆ ತರಬೇತಿ ಸಂಸ್ಥೆಗಳ ಮುಖ್ಯಸ್ಥರು ಮತ್ತು ಬೋಧಕರು, ಸಾರ್ವಜನಿಕ ವಲಯದ ಉದ್ದಿಮೆಗಳು, ಕೈಗಾರಿಕಾ ಪಾಲುದಾರರು, ವಿಷಯ ತಜ್ಞರು ಮತ್ತು ನವೋದ್ಯಮಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸುತ್ತದೆ.
ಈ ಪ್ರಾದೇಶಿಕ ಸರಣಿಯು ದಕ್ಷಿಣ ವಲಯದ ಆಂಧ್ರಪ್ರದೇಶದ ವಿಜಯವಾಡದಲ್ಲಿ ಸೆಪ್ಟೆಂಬರ್ 29-30, 2026ರಂದು ಪ್ರಾರಂಭವಾಗಲಿದೆ. ತರುವಾಯ ಈಶಾನ್ಯ ವಲಯದಲ್ಲಿ ಅಕ್ಟೋಬರ್ 9-10, 2026ರಂದು ಅಸ್ಸಾಂನ ಗುವಾಹಟಿಯಲ್ಲಿ; ಉತ್ತರ ವಲಯದಲ್ಲಿ ಅಕ್ಟೋಬರ್ 23-24, 2026 ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಹಾಗೂ ಪಶ್ಚಿಮ ವಲಯದಲ್ಲಿ ನವೆಂಬರ್ 16-17, 2026 ರಂದು ಮಹಾರಾಷ್ಟ್ರದ ಪುಣೆಯಲ್ಲಿ(ಖಚಿತಪಡಿಸಬೇಕಿದೆ) ನಡೆಯಲಿದೆ. ಕಾರ್ಯಾಗಾರಗಳನ್ನು ಆತಿಥೇಯ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಖಾತೆ ಸಹಾಯಕ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರ ಘನ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಗುವುದು.
ವಿಜಯವಾಡದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಆಂಧ್ರಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು ಅವರ ಜತೆಗೆ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ಸಹಾಯಕ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಉಪಸ್ಥಿತರಿರುವರು. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಒಡಿಶಾ, ತಮಿಳುನಾಡು, ಕೇರಳಂ ಮತ್ತು ಪುದುಚೇರಿಯ ಅಧಿಕಾರಿಗಳು ಮತ್ತು ತರಬೇತಿ ಸಂಸ್ಥೆಗಳು ಇದರಲ್ಲಿ ಭಾಗವಹಿಸಲಿದ್ದಾರೆ.
‘ಸಾಧನಾ ಶೃಂಖಲಾ’ ಸಾಂಸ್ಥಿಕ ರೂಪಾಂತರದ ರಾಷ್ಟ್ರೀಯ ಸಂವಾದವನ್ನು ಪ್ರಾದೇಶಿಕ ಮಟ್ಟಕ್ಕೆ ಕೊಂಡೊಯ್ಯಲಿದ್ದು, ಹೆಚ್ಚಿನ ಸಂದರ್ಭೋಚಿತತೆ ಮತ್ತು ಕ್ರಿಯೆಗೆ ಅನುವು ಮಾಡಿಕೊಡಲಿದೆ. ತರಬೇತಿ ಸಂಸ್ಥೆಗಳನ್ನು ಕೇವಲ ತರಬೇತಿ ನೀಡುವ ಮಟ್ಟದಿಂದ ಕಾರ್ಯತಂತ್ರದ ಮತ್ತು ಸಾಮರ್ಥ್ಯ-ಚಾಲಿತ ಸಾಮರ್ಥ್ಯ ವೃದ್ಧಿ ಸಂಸ್ಥೆಗಳಾಗಿ ಪರಿವರ್ತಿಸಲು ಒಂದು ಏಕೀಕೃತ ಚೌಕಟ್ಟಿನ ಅಗತ್ಯವನ್ನು ಈ ಹಿಂದಿನ ಸಮಾಲೋಚನೆಗಳು ಎತ್ತಿ ತೋರಿಸಿವೆ.
ಉದ್ದೇಶ
ರಾಜ್ಯಗಳು, ತರಬೇತಿ ಸಂಸ್ಥೆಗಳು ಮತ್ತು ಇತರ ಪಾಲುದಾರರನ್ನು ಒಟ್ಟುಗೂಡಿಸಿ, ತರಬೇತಿ ಸಂಸ್ಥೆಗಳನ್ನು ವೈವಿಧ್ಯಮಯ ಸಾಂಸ್ಥಿಕ ಸನ್ನಿವೇಶಗಳಿಗೆ ಸ್ಪಂದಿಸುವ ಸಾಮರ್ಥ್ಯ ನಿರ್ಮಾಣ ಸಂಸ್ಥೆಗಳಾಗಿ ಪರಿವರ್ತಿಸುವುದು ಈ ಪ್ರಾದೇಶಿಕ ಕಾರ್ಯಾಗಾರಗಳ ಪ್ರಮುಖ ಉದ್ದೇಶವಾಗಿದೆ. ಇದು ಸಾಮರ್ಥ್ಯ ನಿರ್ಮಾಣ ಯೋಜನೆಗಳ (ಸಿಬಿಪಿ) ಆಧಾರದ ಮೇಲೆ, ಸರ್ಕಾರದ ಪಾತ್ರ-ಆಧಾರಿತ ಸಾಮರ್ಥ್ಯದ ಅವಶ್ಯಕತೆಗಳನ್ನು ಉದ್ದೇಶಿತ ಸಾಂಸ್ಥಿಕ ಕ್ರಿಯೆಯಾಗಿ ಪರಿವರ್ತಿಸುತ್ತದೆ - ಸೂಕ್ತ ಪಾತ್ರಕ್ಕಾಗಿ, ಸೂಕ್ತ ಸಮಯದಲ್ಲಿ, ಸೂಕ್ತ ಸಾಮರ್ಥ್ಯ ನಿರ್ಮಾಣವನ್ನು ತಲುಪಿಸುವುದು. ಸಾಂಸ್ಥಿಕ ಆಡಳಿತ ಮತ್ತು ನಾಯಕತ್ವ, ಕಾರ್ಯಾಚರಣೆಯ ಪರಿಣಾಮಕಾರಿತ್ವ ಮತ್ತು ಸಹಯೋಗ, ಕರ್ಮಯೋಗಿ ಗುಣಮಟ್ಟದ ಚೌಕಟ್ಟಿಗೆ (ಕೆಕ್ಯೂಎಫ್) ಅನುಗುಣವಾಗಿ ತರಬೇತಿ ಗುಣಮಟ್ಟ ವರ್ಧನೆ, ಬೋಧಕರು ಮತ್ತು ಸಾಮರ್ಥ್ಯದ ಅಭಿವೃದ್ಧಿ, ಮತ್ತು ಡಿಜಿಟಲ್ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳ ಅಳವಡಿಕೆಗಾಗಿ ಚೌಕಟ್ಟುಗಳ ರಚನೆಯ ಕುರಿತು ಚರ್ಚೆಗಳು ನಡೆಯಲಿವೆ.
ಈ ರೂಪಾಂತರದ ಅನುಷ್ಠಾನವು ‘ಯುನಿಫೈಡ್ ನ್ಯೂ-ಏಜ್ ನ್ಯಾಷನಲ್ ಟ್ರೈನಿಂಗ್ ಇನಿಶಿಯೇಟಿವ್’ (ಉನ್ನತಿ - ಉನ್ನತಿ) ಪೋರ್ಟಲ್ ಅನ್ನು ಅವಲಂಬಿಸಿರುತ್ತದೆ. ಒಂದೇ ವೇದಿಕೆಯಲ್ಲಿ 900ಕ್ಕೂ ಹೆಚ್ಚು ತರಬೇತಿ ಸಂಸ್ಥೆಗಳನ್ನು ಸಂಪರ್ಕಿಸುವ ಮೂಲಕ, ಗುರುತಿಸಲಾದ ಚೌಕಟ್ಟಿನ ಉದ್ದೇಶಗಳನ್ನು ‘ಉನ್ನತಿ’ ಪೋರ್ಟಲ್ ಆಚರಣೆಗೆ ತರುತ್ತದೆ. ಹೆಚ್ಚಿನ ಸಾಂಸ್ಥಿಕ ಗೋಚರತೆ ಮತ್ತು ತಡೆರಹಿತ ಸಹಕಾರವನ್ನು ಬೆಳೆಸುತ್ತದೆ ಜೊತೆಗೆ ನಿರಂತರ, ದತ್ತಾಂಶ-ಮಾಹಿತಿ ಆಧಾರಿತ ಸಾಂಸ್ಥಿಕ ಸುಧಾರಣೆಯನ್ನು ಬೆಂಬಲಿಸುತ್ತದೆ. ಉನ್ನತಿ ಎಕ್ಸ್‌ಚೇಂಜ್ ತರಬೇತಿ ಕೋರ್ಸ್‌ಗಳ ಹಂಚಿಕೆ ಮತ್ತು ಪ್ರವೇಶವನ್ನು ಸುಲಭಗೊಳಿಸುತ್ತದೆ. ಅಲ್ಲದೆ, ತರಬೇತಿ ಸಂಸ್ಥೆಗಳ ಜಾಲದಾದ್ಯಂತ ಬೋಧಕರು ಮತ್ತು ಮೂಲಸೌಕರ್ಯಗಳನ್ನು ಹಂಚಿಕೊಂಡು ಸಹಯೋಗವನ್ನು ಬಲಪಡಿಸುತ್ತದೆ.
ಈ ಸಮಾಲೋಚನೆಗಳಿಂದ ಹೊರಹೊಮ್ಮುವ ಒಳನೋಟಗಳು ತರಬೇತಿ ಸಂಸ್ಥೆ ರೂಪಾಂತರ ಚೌಕಟ್ಟನ್ನು ಅಂತಿಮಗೊಳಿಸಲು ಕೊಡುಗೆ ನೀಡುತ್ತವೆ. ‘ವಿಕಸಿತ ಭಾರತ@2047’ರ ಹಾದಿಯಲ್ಲಿ ನಾಗರಿಕರಿಗೆ ಹೆಚ್ಚು ಪರಿಣಾಮಕಾರಿ ಫಲಿತಾಂಶಗಳನ್ನು ನೀಡಲು ಅಗತ್ಯವಿರುವ ಸಾಮರ್ಥ್ಯಗಳೊಂದಿಗೆ ಎಲ್ಲಾ ಹಂತದ ಸರ್ಕಾರಿ ಅಧಿಕಾರಿಗಳನ್ನು (ಆಶಾ ಕಾರ್ಯಕರ್ತೆಯರಿಂದ ಹಿಡಿದು ಕಾರ್ಯದರ್ಶಿಗಳವರೆಗೆ) ಸಜ್ಜುಗೊಳಿಸುವ ‘ಮಿಷನ್ ಕರ್ಮಯೋಗಿ’ಯ ಬದ್ಧತೆಯನ್ನು ಇದು ಮರುದೃಢೀಕರಿಸುತ್ತದೆ.
‘ಸಾಧನಾ ಶೃಂಖಲಾ’ ನಾಗರಿಕ ಕೇಂದ್ರಿತ (ನಾಗರಿಕ್ ದೇವೋ ಭವ) ತತ್ವದ ಆಧಾರದ ಮೇಲೆ ಆಡಳಿತದ ಮೂಲ ತತ್ವಗಳನ್ನು ಮುನ್ನಡೆಸುತ್ತದೆ ಮತ್ತು ಸಮಾಲೋಚನೆಯ (ಜನ ಭಾಗೀದಾರಿ) ಆಶಯವನ್ನು ರಾಷ್ಟ್ರೀಯ ಮಟ್ಟದಿಂದ ಪ್ರಾದೇಶಿಕ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಇದು ‘ಮಿಷನ್ ಕರ್ಮಯೋಗಿ’ ಅಡಿಯಲ್ಲಿ ಸಂಪರ್ಕಿತ, ಸಕ್ರಿಯ ಮತ್ತು ಭವಿಷ್ಯ ಸನ್ನದ್ಧವಾದ ಸಾಮರ್ಥ್ಯ ನಿರ್ಮಾಣ ಪರಿಸರ ವ್ಯವಸ್ಥೆಯ ಕಡೆಗೆ ಸಂದರ್ಭೋಚಿತತೆ ಮತ್ತು ಕಾರ್ಯೋನ್ಮುಖತೆಯನ್ನು ಸಕ್ರಿಯಗೊಳಿಸುತ್ತದೆ.
*****
(ಪ್ರಕಟಣೆ ಐ.ಡಿ.: 2315855)
ವಿಸಿಟರ್ ಕೌಂಟರ್ : 15