ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಅವರಿಂದ ಭಾರತ್ ಮಂಟಪಂನಲ್ಲಿ 9ನೇ 'ಭಾರತ ಅಂತಾರಾಷ್ಟ್ರೀಯ ಜಲ ಸಪ್ತಾಹ 2026' ಉದ್ಘಾಟನೆ


ಜಲಸಂಪನ್ಮೂಲಗಳ ವಿವೇಚನಾಯುಕ್ತ ಬಳಕೆ, ಸಂರಕ್ಷಣೆ ಮತ್ತು ಸಮಗ್ರ ನಿರ್ವಹಣೆಗೆ ಉಪರಾಷ್ಟ್ರಪತಿ ಕರೆ

“ಜಲ ಸುರಕ್ಷತೆಯು ಜನ ಸುರಕ್ಷತೆ ಮತ್ತು ರಾಷ್ಟ್ರ ಸುರಕ್ಷತೆಗೆ ದಾರಿ ಮಾಡಿಕೊಡುತ್ತದೆ”: ಉಪರಾಷ್ಟ್ರಪತಿ

ಇಂದಿನ ಜಲ ಸಂಬಂಧಿತ ಸವಾಲುಗಳನ್ನು ಎದುರಿಸಲು ಭಾರತದ ಸಾಂಪ್ರದಾಯಿಕ ಜ್ಞಾನವು ಮೌಲ್ಯಯುತ ಪಾಠಗಳನ್ನು ಒದಗಿಸುತ್ತದೆ: ಉಪರಾಷ್ಟ್ರಪತಿ

ನೀರು ಉಳಿಸುವ ಸಣ್ಣ ಸಣ್ಣ ಕಾರ್ಯಗಳು ಮಾನವಕುಲದ ಮತ್ತು ಜಗತ್ತಿನ ಹಿತಾಸಕ್ತಿಗೆ ನೆರವಾಗಬಲ್ಲವು: ಉಪರಾಷ್ಟ್ರಪತಿ

ಪ್ರಕಟಣಾ ದಿನಾಂಕ: 22 SEP 2026 2:40PM by PIB Bengaluru

ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಇಂದು ನವದೆಹಲಿಯ ಭಾರತ್ ಮಂಟಪಂನಲ್ಲಿ 9ನೇ 'ಭಾರತ ಅಂತಾರಾಷ್ಟ್ರೀಯ ಜಲ ಸಪ್ತಾಹ‘2026 ಅನ್ನು (ಇಂಡಿಯಾ ಇಂಟರ್ನ್ಯಾಷನಲ್ ವಾಟರ್ ವೀಕ್ – ಐ ಐ ಡಬ್ಲ್ಯೂ ಡಬ್ಲ್ಯೂ 2026) ಉದ್ಘಾಟಿಸಿದರು. ಜಲಶಕ್ತಿ ಸಚಿವಾಲಯವು ಸೆಪ್ಟೆಂಬರ್ 22 ರಿಂದ 26 ರವರೆಗೆ ಆಯೋಜಿಸಿರುವ ಈ ಐದು ದಿನಗಳ ಕಾರ್ಯಕ್ರಮವು “ಹವಾಮಾನ ಚೇತರಿಕೆ ಜಲ ನಿರ್ವಹಣೆ”  ಎಂಬ ವಿಷಯದ ಮೇಲೆ ಕೇಂದ್ರೀಕರಿಸಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ನೀರು ಜೀವ ಮತ್ತು ನಾಗರಿಕತೆಗಳ ಅಡಿಪಾಯವಾಗಿದೆ ಎಂದು ಹೇಳಿ, ಅದರ ವಿವೇಚನಾಯುಕ್ತ ಬಳಕೆ, ಸಂರಕ್ಷಣೆ ಮತ್ತು ಪರಿಣಾಮಕಾರಿ ನಿರ್ವಹಣೆಯ ಅಗತ್ಯವನ್ನು ಒತ್ತಿ ಹೇಳಿದರು.

ತಮಿಳುನಾಡಿನಲ್ಲಿ ತಮ್ಮ ಬಾಲ್ಯದ ಅನುಭವಗಳನ್ನು ಸ್ಮರಿಸಿದ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು, ತಾವು ವೈಯಕ್ತಿಕವಾಗಿ ನೀರಿನ ಅಭಾವವನ್ನು ಕಂಡಿರುವುದಾಗಿ ಮತ್ತು ಜನರಿಗೆ ಕುಡಿಯುವ ನೀರನ್ನು ತಲುಪಿಸುವುದಕ್ಕೆ ನೀಡಲಾಗುತ್ತಿದ್ದ ಪ್ರಾಮುಖ್ಯತೆಯನ್ನು ನೆನಪಿಸಿಕೊಂಡರು. “ಮಾನವಕುಲಕ್ಕೆ ಮತ್ತು ಜಗತ್ತಿಗೆ ನೀರನ್ನು ಉಳಿಸುವುದು ಅತ್ಯಂತ ಪ್ರಮುಖವಾಗಿದೆ” ಎಂದು ಅವರು ಹೇಳಿದರು.

ಎರಡು ದಶಕಗಳಿಗೂ ಹಿಂದೆ, ತಮಿಳುನಾಡಿನಾದ್ಯಂತ 19,000 ಕಿ.ಮೀ ರಥಯಾತ್ರೆ ನಡೆಸಿದ್ದನ್ನು ಉಪರಾಷ್ಟ್ರಪತಿಯವರು ಸ್ಮರಿಸಿದರು. ನದಿಗಳ ಜೋಡಣೆ, ಜಲಸಂರಕ್ಷಣೆ ಮತ್ತು ಜಲಸಂಪನ್ಮೂಲಗಳ ಸೂಕ್ತ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸುವುದು ಈ ಯಾತ್ರೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿತ್ತು. ನದಿ ಜೋಡಣೆಯು ಕೆಲವು ಪ್ರದೇಶಗಳು ಪ್ರವಾಹವನ್ನು ಮತ್ತು ಇನ್ನು ಕೆಲವು ಪ್ರದೇಶಗಳು ಬರದ ಪರಿಸ್ಥಿತಿಯನ್ನು ಎದುರಿಸುವ ಸಮಸ್ಯೆಗೆ ಪರಿಹಾರ ನೀಡಬಲ್ಲದು ಎಂದು ಅವರು ಹೇಳಿದರು.

ನದಿಗಳೊಂದಿಗೆ ಭಾರತಕ್ಕಿರುವ ನಾಗರಿಕತೆಯ ನಂಟನ್ನು ಒತ್ತಿಹೇಳಿದ ಉಪರಾಷ್ಟ್ರಪತಿಯವರು, ಭಾರತೀಯ ಸಮುದಾಯಗಳು ಶತಮಾನಗಳಿಂದ ನೀರನ್ನು ಸಂರಕ್ಷಿಸಲು, ಹಂಚಿಕೊಳ್ಳಲು ಮತ್ತು ನಿರ್ವಹಿಸಲು ಶ್ರೀಮಂತ ಪರಂಪರೆ ಹಾಗೂ ಪದ್ಧತಿಗಳನ್ನು ಬೆಳೆಸಿಕೊಂಡಿವೆ ಎಂದರು. "ನಮ್ಮ ಸಾಂಪ್ರದಾಯಿಕ ಜ್ಞಾನವು ಇಂದಿನ ನೀರಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ಮೌಲ್ಯಯುತವಾದ ಪಾಠಗಳನ್ನು ನೀಡುತ್ತದೆ" ಎಂದು ಅವರು ಹೇಳಿದರು.

ಭಾರತವು ವಿಶ್ವದ ಭೂಪ್ರದೇಶದ 2.4% ರಷ್ಟು ಮತ್ತು ಜನಸಂಖ್ಯೆಯ 18% ರಷ್ಟನ್ನು ಹೊಂದಿದ್ದು, ಜಾಗತಿಕ ಸಿಹಿನೀರಿನ ಸಂಪನ್ಮೂಲಗಳಲ್ಲಿ ಕೇವಲ  4% ರಷ್ಟನ್ನು ಮಾತ್ರ ಹೊಂದಿದೆ ಎಂದು ಉಪರಾಷ್ಟ್ರಪತಿಗಳು ಉಲ್ಲೇಖಿಸಿದರು. ಹೆಚ್ಚಿನ ನೀರಿನ ಲಭ್ಯತೆ ಮತ್ತು ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ದೇಶಗಳೊಂದಿಗೆ ಭಾರತದ ನೀರಿನ ಬಳಕೆಯ ಅಗತ್ಯತೆಗಳನ್ನು ಹೋಲಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.

ನಡವಳಿಕೆಯಲ್ಲಿ ಬದಲಾವಣೆಗೆ ಕರೆ ನೀಡಿದ ಅವರು, ತಮ್ಮ ದೈನಂದಿನ ಜೀವನದಲ್ಲಿ ನೀರನ್ನು ಉಳಿಸುವ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ನಾಗರಿಕರಿಗೆ ಮನವಿ ಮಾಡಿದರು. “ನಾವು ಎರಡು ಬಕೆಟ್ ನೀರು ಬಳಸಿ ಸ್ನಾನ ಮಾಡಬಹುದು ಅಥವಾ ಇಪ್ಪತ್ತು ಬಕೆಟ್ ಬಳಸಿ ಸ್ನಾನ ಮಾಡಬಹುದು. ಆಯ್ಕೆ ನಮ್ಮದು. ಹಲ್ಲುಜ್ಜುವಾಗ ನಲ್ಲಿಯನ್ನು  ಮುಚ್ಚಬಹುದು. ಇವು ಸಣ್ಣ ವಿಷಯಗಳಂತೆ ಕಾಣಿಸಬಹುದು, ಆದರೆ ಈ ಸಣ್ಣ ಸಣ್ಣ ಕಾರ್ಯಗಳಲ್ಲೇ ಮಾನವಕುಲದ ಮತ್ತು ವಿಶ್ವದ ಹಿತಾಸಕ್ತಿ ಅಡಗಿದೆ,” ಎಂದು ಅವರು ಹೇಳಿದರು.

ಹವಾಮಾನ ವೈಪರೀತ್ಯ, ತೀವ್ರ ಗತಿಯ ನಗರೀಕರಣ ಮತ್ತು ಜನಸಂಖ್ಯೆಯ ಬೆಳವಣಿಗೆಯಿಂದಾಗಿ ನೀರಿನ ನಿರ್ವಹಣೆ ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಿದೆ ಎಂದು ಉಪರಾಷ್ಟ್ರಪತಿಯವರು ಹೇಳಿದರು. ನದಿ ಪಾತ್ರದ ನಿರ್ವಹಣೆ, ಅಂತರ್ಜಲ ಮರುಪೂರಣ, ಮಳೆನೀರು ಕೊಯ್ಲು ಮತ್ತು ಸಮರ್ಥ ನೀರಾವರಿಯನ್ನು ಒಳಗೊಂಡ ಸಮಗ್ರ ವಿಧಾನದ ಅಗತ್ಯವನ್ನು ಅವರು ಒತ್ತಿ ಹೇಳಿದರು.

ನೀರು ಹಂಚಿಕೆ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯಗಳ ನಡುವಿನ ಸಹಕಾರದ ಮಹತ್ವವನ್ನು ಉಪರಾಷ್ಟ್ರಪತಿಗಳು ಉಲ್ಲೇಖಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ ಅವರು, ನೀರು ಹಂಚಿಕೆಗಾಗಿ ರಾಜ್ಯಗಳ ನಡುವೆ 10 ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಗಮನಸೆಳೆದರು. ಸಹಕಾರಿ ಪರಿಹಾರಗಳನ್ನು ಉತ್ತೇಜಿಸುವಲ್ಲಿ ಕೇಂದ್ರ ಸರ್ಕಾರ, ಜಲಶಕ್ತಿ ಸಚಿವಾಲಯ ಮತ್ತು ಪಾಲ್ಗೊಂಡ ರಾಜ್ಯಗಳ ಶ್ರಮವನ್ನು ಅವರು ಶ್ಲಾಘಿಸಿದರು. ಆರು ರಾಜ್ಯಗಳ ನಡುವಿನ ‘ಕಿಶೌ ಬಹುಉದ್ದೇಶಿತ ಯೋಜನೆ’ ಒಪ್ಪಂದವನ್ನು ರಾಜ್ಯಗಳ ನಡುವಿನ ಸಹಕಾರಕ್ಕೆ ಪ್ರಮುಖ ಉದಾಹರಣೆ ಎಂದು ಅವರು ವಿಶೇಷವಾಗಿ ಉಲ್ಲೇಖಿಸಿದರು.

2047ರ ವೇಳೆಗೆ ಭಾರತವು ವಿಕಸಿತ ಆರ್ಥಿಕತೆಯತ್ತ ಸಾಗುತ್ತಿರುವಾಗ, ಸಮರ್ಥ ಮತ್ತು ಸುಸ್ಥಿರ ನೀರಿನ ನಿರ್ವಹಣೆಯು ನಿರ್ಣಾಯಕವಾಗಲಿದೆ ಎಂದು ಶ್ರೀ ಸಿ. ಪಿ. ರಾಧಾಕೃಷ್ಣನ್ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ “ಜಲ ಸಂಚಯ ಜನ ಭಾಗಿದಾರಿ” ಕರೆಯನ್ನು ನೆನಪಿಸಿಕೊಂಡ ಅವರು, ನೀರಿನ ಸಂರಕ್ಷಣೆಯನ್ನು ಜನಾಂದೋಲನವನ್ನಾಗಿಸುವಂತೆ ನಾಗರಿಕರಿಗೆ ಕರೆ ನೀಡಿದರು.

ಕೃಷಿ ವಲಯದ ನೀರಿನ ಭಾರಿ ಬೇಡಿಕೆ ಮತ್ತು ಉದ್ಯಮಗಳ ಬೆಳೆಯುತ್ತಿರುವ ಅಗತ್ಯತೆಗಳ ಹಿನ್ನೆಲೆಯಲ್ಲಿ, ನೀರಿನ ಹೆಚ್ಚಿನ ಬಳಕೆಯ ದಕ್ಷತೆ, ಮರುಬಳಕೆ ಮತ್ತು ಪುನರ್ಬಳಕೆಯ ಅಗತ್ಯವನ್ನು ಅವರು ಒತ್ತು ನೀಡಿದರು. ಕೇವಲ ಪ್ರತಿಕ್ರಿಯಾತ್ಮಕ ವಿಧಾನದಿಂದ ಮುನ್ನೆಚ್ಚರಿಕೆಯ ಹಾಗೂ ತಂತ್ರಜ್ಞಾನ ಆಧಾರಿತ ಜಲ ನಿರ್ವಹಣೆಯತ್ತ ಸಾಗುವಂತೆ ಅವರು ಕರೆ ನೀಡಿದರು.

ಬಹು ಪಾಲುದಾರರ ಮತ್ತು ಬಹು ಆಯಾಮದ ವಿಧಾನಕ್ಕೆ ಕರೆ ನೀಡಿದ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು, ನೀರಿನ ಸಮಸ್ಯೆಗಳನ್ನು ಯಾವುದೇ ಒಂದೇ ಸಂಸ್ಥೆ, ವಲಯ ಅಥವಾ ರಾಜ್ಯ ಬಗೆಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಭಾರತ ಅಂತಾರಾಷ್ಟ್ರೀಯ ಜಲ ಸಪ್ತಾಹ -2026ರ ಚರ್ಚೆಗಳು ಹವಾಮಾನ ಚೇತರಿಕೆ ಮತ್ತು ಸಮಗ್ರ ಜಲ  ನಿರ್ವಹಣೆಗೆ ನವೀನ ತಾಂತ್ರಿಕ, ನೀತಿ ನಿರೂಪಣೆಯ, ಸಾಮಾಜಿಕ ಆರ್ಥಿಕ ಮತ್ತು ಪರಿಸರ ಸಂಬಂಧಿತ ವಿಧಾನಗಳನ್ನು ರೂಪಿಸುತ್ತವೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

ಜ್ಞಾನವನ್ನು ಹಂಚಿಕೊಳ್ಳಲು, ಸಹಭಾಗಿತ್ವವನ್ನು ನಿರ್ಮಿಸಲು ಮತ್ತು ನೀರನ್ನು ಉಳಿಸಲು ಹಾಗೂ ಸಂರಕ್ಷಿಸಲು ಬದ್ಧರಾಗಿರಲು ಎಲ್ಲಾ ಭಾಗವಹಿಸಿದವರಲ್ಲಿ ಕೇಳಿದ ಉಪರಾಷ್ಟ್ರಪತಿಯವರು, “ಜಲ ಸುರಕ್ಷತೆಯು ಜನ ಸುರಕ್ಷತೆ ಮತ್ತು ರಾಷ್ಟ್ರ ಸುರಕ್ಷತೆಗೆ ದಾರಿ ಮಾಡಿಕೊಡುತ್ತದೆ”  ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪರಾಷ್ಟ್ರಪತಿಯವರು 'ಸುಸ್ಥಿರ ನಗರ ನದಿ ನಿರ್ವಹಣೆ' (ಎಸ್ ಯು ಆರ್ ಎಂ) ಚೌಕಟ್ಟು ಮತ್ತು 'ಎಐ ಎಂ ಎಲ್ -ಚಾಲಿತ ಸಂಯೋಜಿತ ಜಲಾಶಯ ಹೂಳು ನಿರ್ವಹಣೆ' ವ್ಯವಸ್ಥೆಗೆ ಚಾಲನೆ ನೀಡಿದರು. ಇದು ತಂತ್ರಜ್ಞಾನ ಆಧಾರಿತ ಮತ್ತು ಹವಾಮಾನ ಚೇತರಿಕೆಯ  ಜಲ ನಿರ್ವಹಣೆಯತ್ತ ಇಟ್ಟ ಪ್ರಮುಖ ಹೆಜ್ಜೆಯಾಗಿದೆ.

ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ. ಆರ್. ಪಾಟೀಲ್, ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಮತ್ತು ಶ್ರೀ ರಾಜ್ ಭೂಷಣ್ ಚೌಧರಿ, ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿಗಳಾದ ಶ್ರೀಮತಿ ಅರ್ಚನಾ ವರ್ಮಾ ಮತ್ತು ಶ್ರೀ ಅಶೋಕ್ ಮೀನಾ, ಕೇಂದ್ರ ಜಲ ಆಯೋಗದ ಅಧ್ಯಕ್ಷರಾದ ಶ್ರೀ ಅನುಪಮ್ ಪ್ರಸಾದ್ ಹಾಗೂ ಭಾರತ ಮತ್ತು ವಿದೇಶಗಳ ಪ್ರತಿನಿಧಿಗಳು ಮತ್ತು ತಜ್ಞರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

*****


(ಪ್ರಕಟಣೆ ಐ.ಡಿ.: 2313528) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Tamil , Malayalam