ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಅಕ್ಟೋಬರ್ 2026 ರಿಂದ ಬಹುಪಾಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ʻಡಿಡಿಯು-ಜಿಕೆವೈ 2.0’ ತರಬೇತಿ ಬ್ಯಾಚ್‌ಗಳ ಪ್ರಾರಂಭ


ಅಕ್ಟೋಬರ್ 2026ರಲ್ಲಿ ʻಡಿಡಿಯು-ಜಿಕೆವೈ 2.0’ ಅಡಿಯಲ್ಲಿ ಕೌಶಲ್ಯ ತರಬೇತಿಯನ್ನು ಪ್ರಾರಂಭಿಸಲಿರುವ 34,920 ಗ್ರಾಮೀಣ ಯುವಕರು

ಪ್ರಕಟಣಾ ದಿನಾಂಕ: 19 SEP 2026 9:49AM by PIB Bengaluru

ಗ್ರಾಮೀಣಾಭಿವೃದ್ಧಿ ಸಚಿವಾಲಯವು ಅಕ್ಟೋಬರ್ 2026 ರಿಂದ ಬಹುಪಾಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ದೀನ್ ದಯಾಳ್ ಉಪಾಧ್ಯಾಯ- ಗ್ರಾಮೀಣ ಕೌಶಲ್ಯ ಯೋಜನೆ-2.0 (ಡಿಡಿಯು-ಜಿಕೆವೈ-2.0) ತರಬೇತಿ ಬ್ಯಾಚ್‌ಗಳನ್ನು ಆರಂಭಿಸಲು ಸಜ್ಜಾಗಿದೆ. ತರಬೇತಿ ಬ್ಯಾಚ್‌ಗಳ ಪ್ರಾರಂಭದ ಸಿದ್ಧತೆಯನ್ನು ಮೊದಲ ಹಂತದಲ್ಲಿ 14 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪರಿಶೀಲಿಸಲಾಗಿದೆ, ಅವುಗಳೆಂದರೆ: ಒಡಿಶಾ, ಮಿಜೋರಾಂ, ಸಿಕ್ಕಿಂ, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ತಮಿಳುನಾಡು, ಉತ್ತರಾಖಂಡ, ಉತ್ತರ ಪ್ರದೇಶ, ಪುದುಚೇರಿ, ಕರ್ನಾಟಕ, ತೆಲಂಗಾಣ ಮತ್ತು ಬಿಹಾರ.

ಈ 14 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 2027ರ ಡಿಸೆಂಬರ್ 31 ರೊಳಗೆ 3,57,112 ಗ್ರಾಮೀಣ ಯುವಕರಿಗೆ ತರಬೇತಿ ನೀಡುವ ಅನುಮೋದಿತ ಗುರಿಗೆ ಪ್ರತಿಯಾಗಿ, 34,920 ಗ್ರಾಮೀಣ ಯುವಕರನ್ನು ಹೊಂದಿರುವ 1,164 ಬ್ಯಾಚ್‌ಗಳು 2026ರ ಅಕ್ಟೋಬರ್‌ನಲ್ಲಿ ತಮ್ಮ ತರಬೇತಿಯನ್ನು ಪ್ರಾರಂಭಿಸಲಿವೆ. ʻಡಿಡಿಯು-ಜಿಕೆವೈ 2.0ʼ ಪೋರ್ಟಲ್ ಪ್ರಕಾರ, 24 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು 1,200ಕ್ಕೂ ಹೆಚ್ಚು ಯೋಜನೆಗಳಿಗೆ 5.6 ಲಕ್ಷ ಗುರಿಗಳನ್ನು ಹಂಚಿಕೆ ಮಾಡಿವೆ. ಇತರ ರಾಜ್ಯಗಳು ಗುರಿ ಹಂಚಿಕೆಯ ಮುಂದುವರಿದ ಹಂತದಲ್ಲಿವೆ. ಹಂತ ಹಂತವಾಗಿ ನಡೆಯುವ ಪರಿಶೀಲನಾ ಸಭೆಗಳು ಬ್ಯಾಚ್ ಪ್ರಾರಂಭದ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲಿವೆ.

ʻಡಿಡಿಯು-ಜಿಕೆವೈ-2.0ʼ ಗಾಗಿ ಸನ್ನದ್ಧತೆ

ʻಡಿಡಿಯು-ಜಿಕೆವೈʼ - ಇದು ಬಡ ಗ್ರಾಮೀಣ ಯುವಕರಿಗೆ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿಯನ್ನು ಒದಗಿಸುವ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. ತರಬೇತಿಯ ಅವಧಿಯು 3 ತಿಂಗಳಿಂದ 12 ತಿಂಗಳವರೆಗೆ ಇರುತ್ತದೆ. ಸಭೆಯು ʻಡಿಡಿಯು-ಜಿಕೆವೈ 2.0ʼ ಅನುಷ್ಠಾನಕ್ಕಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸನ್ನದ್ಧತೆಯನ್ನು ಪರಿಶೀಲಿಸಿದೆ. 2026-28ರ 2 ವರ್ಷಗಳ ಅವಧಿಗೆ ಎಲ್ಲಾ 31 ಭಾಗವಹಿಸುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಗುರಿಗಳನ್ನು ಹಂಚಿಕೆ ಮಾಡಲಾಗಿದೆ. ಇದು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಕಾರ್ಯಚರಣೆಗೆ ನಿರ್ಣಾಯಕ ಹಂತವಾಗಿದೆ ಎಂದು ಸಚಿವಾಲಯವು ಒತ್ತಿಹೇಳಿದೆ ಮತ್ತು ಯೋಜನಾ ಅನುಷ್ಠಾನ ಸಂಸ್ಥೆಗಳಿಗೆ (ಪಿಐಎ) ಗುರಿಗಳ ಹಂಚಿಕೆಯನ್ನು ವೇಗಗೊಳಿಸಲು ಹಾಗೂ ನಿರೀಕ್ಷಿತ ಸಮಯಾವಧಿಯ ಪ್ರಕಾರ ಬ್ಯಾಚ್‌ಗಳನ್ನು ಪ್ರಾರಂಭಿಸಲು ಅನುಷ್ಠಾನಗೊಳಿಸುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ತರಬೇತಿಯನ್ನು ಪ್ರಾರಂಭಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅಕ್ಟೋಬರ್ 31, 2026ರ ಒಳಗಾಗಿ ʻಪಿಐಎʼಗಳಿಗೆ ಗುರಿಗಳ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸಿದ್ಧತೆಯ ವಿವಿಧ ಹಂತಗಳಲ್ಲಿವೆ ಮತ್ತು ಅನುಷ್ಠಾನಗೊಳಿಸುತ್ತಿರುವ 31 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಸಚಿವಾಲಯವು ಸ್ವೀಕರಿಸಿದ ಮಾಹಿತಿಯ ಪ್ರಕಾರ, ಅರ್ಹ ಗ್ರಾಮೀಣ ಯುವಕರನ್ನು ಸಜ್ಜುಗೊಳಿಸಲು 5 ಲಕ್ಷಕ್ಕೂ ಹೆಚ್ಚು ಗುರಿಗಳನ್ನು ಈಗಾಗಲೇ ʻಪಿಐಎʼಗಳಿಗೆ ಹಂಚಿಕೆ ಮಾಡಲಾಗಿದೆ. ಹೆಚ್ಚಿನ ರಾಜ್ಯಗಳು 2026ರ ಅಕ್ಟೋಬರ್ ತಿಂಗಳಲ್ಲಿ ಸಜ್ಜುಗೊಳಿಸುವಿಕೆ ಮತ್ತು ತರಬೇತಿಯನ್ನು ಪ್ರಾರಂಭಿಸಲು ಸಾಧ್ಯವಾಗಲಿದೆ.

ಸಂಯೋಜಿತ ಡಿಡಿಯು-ಜಿಕೆವೈ 2.0 ಪೋರ್ಟಲ್

ʻಡಿಡಿಯು-ಜಿಕೆವೈ 2.0ʼ ಸಂಯೋಜಿತ ಪೋರ್ಟಲ್, ಆರಂಭದಿಂದ ಅಂತ್ಯದವರೆಗೆ ಯೋಜನೆಯ ಅನುಷ್ಠಾನವನ್ನು ಸುಗಮಗೊಳಿಸಲು, ಹೆಚ್ಚಿನ ದಕ್ಷತೆ, ಪಾರದರ್ಶಕತೆ ಮತ್ತು ಡಿಜಿಟಲ್ ಮೇಲ್ವಿಚಾರಣೆಯನ್ನು ಉತ್ತೇಜಿಸಲು ಸಜ್ಜುಗೊಂಡಿದೆ ಎಂದು ಸಚಿವಾಲಯ ಒತ್ತಿ ಹೇಳಿದೆ.

ರಾಜ್ಯ ಖಜಾನೆ ಪೋರ್ಟಲ್‌ಗಳೊಂದಿಗೆ ಪೋರ್ಟಲ್‌ನ ಏಕೀಕರಣವು ಎಲ್ಲೆಲ್ಲಿ ಬಾಕಿ ಇದೆಯೋ ಅದನ್ನು ಪರಿಶೀಲಿಸಲಾಗಿದೆ. ಗ್ರಾಮೀಣ ಕೌಶಲ್ಯ ಪೋರ್ಟಲ್ ಮೂಲಕ ಆನ್‌ಲೈನ್ ಪಾವತಿಗಳನ್ನು ಸುಲಭಗೊಳಿಸಲು ಅಗತ್ಯವಾದ ಏಕೀಕರಣವನ್ನು ಸೆಪ್ಟೆಂಬರ್ 30, 2026 ರೊಳಗೆ ಪೂರ್ಣಗೊಳಿಸುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಗಿದೆ.

ಸಂಪೂರ್ಣ ಡಿಜಿಟಲ್ ಪ್ಲಾಟ್‌ಫಾರ್ಮ್‌ನ ಕುರಿತು ʻಪಿಐಎʼಗಳಿಗೆ ಪರಿಚಯಿಸಲು, ಸಚಿವಾಲಯವು ಅಕ್ಟೋಬರ್ 2026 ರ ಅವಧಿಯಲ್ಲಿ ನಾಲ್ಕು ಸ್ಥಳಗಳಲ್ಲಿ ಹೈಬ್ರಿಡ್ ಮೋಡ್‌ನಲ್ಲಿ ಪ್ರಾದೇಶಿಕ ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ. ಈ ಕಾರ್ಯಾಗಾರಗಳಲ್ಲಿ ಕೆಲವು ʻಪಿಐಎʼಗಳ ಭೌತಿಕ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಕೋರಲಾಗಿದೆ. ಕಾರ್ಯಾಗಾರಗಳು ಶಿಲ್ಲಾಂಗ್(5.10.2026), ವಿಜಯವಾಡ(7.10.2026), ಮುಂಬೈ(9.10.2026) ಮತ್ತು ಧರ್ಮಶಾಲಾ(16.10.2026)ನಲ್ಲಿ ನಡೆಯಲಿವೆ. ʻಡಿಡಿಯು-ಜಿಕೆವೈ 2.0ʼ ಪೋರ್ಟಲ್, ಅದರ ಪ್ರಕ್ರಿಯೆಗಳು ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ʻಪಿಐಎʼಗಳಿಗೆ ವಿವರಿಸಲು ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದ ಕಾಳಜಿಗಳನ್ನು ಪರಿಹರಿಸಲು ಈ ಕಾರ್ಯಾಗಾರಗಳು ಅವಕಾಶ ಒದಗಿಸಲಿವೆ.

ಸಭೆಯಲ್ಲಿ ಯೋಜನೆಯ ಆರ್ಥಿಕ ಸ್ಥಿತಿಗತಿಗಳನ್ನೂ ಪರಿಶೀಲಿಸಲಾಯಿತು. ಅಕ್ಟೋಬರ್ 2026 ರಿಂದ ತರಬೇತಿ ಬ್ಯಾಚ್‌ಗಳ ಪ್ರಾರಂಭದೊಂದಿಗೆ ವೆಚ್ಚವು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಪರಿಶೀಲನೆಯಲ್ಲಿ ಭಾಗವಹಿಸಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತಿಳಿಸಿವೆ.

ಕೌಶಲ್ಯ ವಿಭಾಗದ ಜಂಟಿ ಕಾರ್ಯದರ್ಶಿ, ನಿರ್ದೇಶಕರು ಮತ್ತು ಸಿಇಒ ಗಳು, ಸಿಒಒ ಗಳು ಹಾಗೂ ಇತರ ರಾಜ್ಯ ಅಧಿಕಾರಿಗಳು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.

 

*****


(ಪ್ರಕಟಣೆ ಐ.ಡಿ.: 2312345) ವಿಸಿಟರ್ ಕೌಂಟರ್ : 31
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Tamil , Telugu