ಶಿಕ್ಷಣ ಸಚಿವಾಲಯ
azadi ka amrit mahotsav

ಪ್ರಾಥಮಿಕ ಶಿಕ್ಷಕರ ಶಿಕ್ಷಣದಲ್ಲಿ ಆರು ತಿಂಗಳ ಸರ್ಟಿಫಿಕೇಟ್ (ಬ್ರಿಡ್ಜ್) ಕೋರ್ಸ್‌ಗೆ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರಿಂದ ಚಾಲನೆ


ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸಲು ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಕೋರ್ಸ್ ಸಮಗ್ರ ತರಬೇತಿಯನ್ನು ನೀಡಲಿದೆ

ಪ್ರಕಟಣಾ ದಿನಾಂಕ: 17 SEP 2026 1:47PM by PIB Bengaluru

ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಸೆಪ್ಟೆಂಬರ್ 16, 2026ರಂದು ನವದೆಹಲಿಯಲ್ಲಿ ಪ್ರಾಥಮಿಕ ಶಿಕ್ಷಕರ ಶಿಕ್ಷಣದಲ್ಲಿ (ಪಿಟಿಇ) ಆರು ತಿಂಗಳ ಸರ್ಟಿಫಿಕೇಟ್‌ (ಬ್ರಿಡ್ಜ್‌) ಕೋರ್ಸ್‌ಗೆ ಚಾಲನೆ ನೀಡಿದರು. ಬಿ.ಎಡ್ ಪದವಿ ಹೊಂದಿರುವ, ಸೇವೆಯಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಈ ಕೋರ್ಸ್ ಅನ್ನು ರೂಪಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಬೋಧನೆಗೆ ಪ್ರಮಾಣೀಕರಣವನ್ನು ಪಡೆಯಲು ಶಿಕ್ಷಕರಿಗೆ ಇದು ನಿರ್ಣಾಯಕ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. ಪ್ರಾಥಮಿಕ ಹಂತದಲ್ಲಿ (I-V ತರಗತಿಗಳು) ಕಲಿಯುವವರಿಗೆ ಪರಿಣಾಮಕಾರಿಯಾಗಿ ಶಿಕ್ಷಣ ನೀಡಲು ಅಗತ್ಯವಾದ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಶಿಕ್ಷಕರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ವಿಶೇಷ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮವು ಸಮಗ್ರ ತರಬೇತಿಯನ್ನು ಒದಗಿಸುತ್ತದೆ.

ರಾಷ್ಟ್ರೀಯ ಮುಕ್ತ ಶಾಲೆಯ ಸಂಸ್ಥೆ (ಎನ್ಐಒಎಸ್) ಮೂಲಕ ಈ ಬ್ರಿಡ್ಜ್ ಕೋರ್ಸ್ ಅನ್ನು ಜಾರಿಗೊಳಿಸಲಾಗುವುದು ಮತ್ತು ಇದು ಶಿಕ್ಷಕರಿಗೆ ಮಕ್ಕಳ-ಕೇಂದ್ರಿತ, ಸಮಗ್ರ ಹಾಗೂ ಅಭಿವೃದ್ಧಿಗೆ ಪೂರಕವಾದ ಬೋಧನಾ ವಿಧಾನಗಳನ್ನು ಸಜ್ಜುಗೊಳಿಸುತ್ತದೆ. ಆ ಮೂಲಕ ಅಡಿಪಾಯ ಮತ್ತು ಪ್ರಾಥಮಿಕ ಹಂತಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಬಲಪಡಿಸುತ್ತದೆ.

ʻರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯʼ (ಎನ್‌ಸಿಟಿಇ) ಚೌಕಟ್ಟಿನ ಪ್ರಕಾರ ವಿನ್ಯಾಸಗೊಳಿಸಲಾದ ಈ ಕೋರ್ಸ್, ಶೈಕ್ಷಣಿಕ ಕಲಿಕೆ, ಕನಿಷ್ಠ 10 ದಿನಗಳ ಆನ್‌ಲೈನ್ ಸಂಪರ್ಕ ತರಗತಿಗಳು ಮತ್ತು ಕನಿಷ್ಠ 20 ದಿನಗಳ ಶಾಲಾ-ಆಧಾರಿತ ಅನುಭವದ ಮೂಲಕ ಪ್ರಾಥಮಿಕ-ಹಂತದ ಬೋಧನಾ ಸಾಮರ್ಥ್ಯಗಳನ್ನು ವೃದ್ಧಿಸುತ್ತದೆ.

ಚಿಕ್ಕ ಮಕ್ಕಳ ವೈವಿಧ್ಯಮಯ ಕಲಿಕೆಯ ಅಗತ್ಯಗಳನ್ನು ಪೂರೈಸಲು ಶಿಕ್ಷಕರಿಗೆ ಈ ಕೋರ್ಸ್ ಅನುವು ಮಾಡಿಕೊಡುತ್ತದೆ. ಆರು ಸಿದ್ಧಾಂತ (ಥಿಯರಿ) ಕೋರ್ಸ್‌ಗಳು ಮತ್ತು ಶಾಲಾ ಆಧಾರಿತ ಅಭ್ಯಾಸವನ್ನು ಒಳಗೊಂಡಿರುವ ಈ ಕಾರ್ಯಕ್ರಮವು ಶೈಕ್ಷಣಿಕ ʻಥಿಯರಿʼಯನ್ನು ತರಗತಿಯ ಅಭ್ಯಾಸದೊಂದಿಗೆ ಸಂಪರ್ಕಿಸಲು ದೃಢವಾದ ಚೌಕಟ್ಟನ್ನು ಒದಗಿಸುತ್ತದೆ. ಪ್ರಾಥಮಿಕ ತರಗತಿಗಳಲ್ಲಿನ ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಆಜೀವ ಕಲಿಕೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಕೌಶಲ್ಯಗಳು, ದೃಷ್ಟಿಕೋನಗಳು ಮತ್ತು ಪ್ರತಿಫಲನಾತ್ಮಕ ಸಾಮರ್ಥ್ಯಗಳೊಂದಿಗೆ ಪ್ರಾಥಮಿಕ ಶಿಕ್ಷಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಈ ಬ್ರಿಡ್ಜ್ ಕೋರ್ಸ್ ಹೊಂದಿದೆ. ಇದು ಬೋಧನೆಯನ್ನು ಕ್ರಿಯಾತ್ಮಕ, ಸಂದರ್ಭ-ಸೂಕ್ಷ್ಮ ಮತ್ತು ವಿಚಾರಣೆ-ಆಧಾರಿತ ವೃತ್ತಿಯನ್ನಾಗಿ ನೋಡುವ ದೃಷ್ಟಿಕೋನವನ್ನು ಉತ್ತೇಜಿಸುತ್ತದೆ.

ಭಾರತದ ಸರ್ವೋಚ್ಚ ನ್ಯಾಯಾಲಯವು 08.04.2024ರ ಸಿವಿಲ್ ಮೇಲ್ಮನವಿ ಸಂಖ್ಯೆ 5068 (ದೇವೇಶ್ ಶರ್ಮಾ ವಿರುದ್ಧ ಭಾರತ ಒಕ್ಕೂಟ ಮತ್ತು ಇತರರು) ಪ್ರಕರಣದಲ್ಲಿ 08.04.2024 ರಂದು ನೀಡಿದ ತೀರ್ಪಿನನ್ವಯ, ಪ್ರಾಥಮಿಕ ಶಿಕ್ಷಕರಾಗಿ ನೇಮಕಗೊಂಡು ಡಿ.ಎಲ್.ಎಡ್ ಅರ್ಹತೆ ಹೊಂದಿರದವರಿಗಾಗಿ ಬ್ರಿಡ್ಜ್ ಕೋರ್ಸ್ ರೂಪಿಸಲು ʻಎನ್‌ಸಿಟಿಇʼ ಗೆ ಅಧಿಕಾರ ನೀಡಿತ್ತು.

ಅದರಂತೆ, ಜೂನ್ 28, 2018 ರಿಂದ ಆಗಸ್ಟ್ 11, 2023ರ ನಡುವೆ ಪ್ರಾಥಮಿಕ ಹಂತದಲ್ಲಿ (I-V ತರಗತಿಗಳು) ಬೋಧಿಸಲು ಬಿ.ಎಡ್. ಪದವಿಯೊಂದಿಗೆ ನೇಮಕಗೊಂಡಿರುವ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಈ ಬ್ರಿಡ್ಜ್ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಜೂನ್ 28, 2018 ರ ಎನ್‌ಸಿಟಿಇ ಗೆಜೆಟ್ ಅಧಿಸೂಚನೆ (F. No. NCTE-Reg. 012/2018) ಅಡಿಯಲ್ಲಿ ನೇಮಕಾತಿಯ ರಕ್ಷಣೆ ಪಡೆದಿರುವ ಶಿಕ್ಷಕರಿಗಾಗಿಯೇ ಈ ಕೋರ್ಸ್ ಅನ್ನು ವಿಶೇಷವಾಗಿ ರೂಪಿಸಲಾಗಿದೆ.

ಈ ಕಾರ್ಯಕ್ರಮವು ಮೂಲಭೂತ ಕಲಿಕೆಯ ತತ್ವಗಳನ್ನು ಗುರಿಯಾಗಿಸಿಕೊಂಡು ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಂಶಗಳನ್ನು ಒಳಗೊಂಡಿದೆ. ಬೋಧನೆಯ ಮಾಧ್ಯಮವು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಾಗಿರಬೇಕು. ಆದಾಗ್ಯೂ, ಎಂಟನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಲಾದ 22 ಅನುಸೂಚಿತ ಭಾಷೆಗಳಲ್ಲಿ ಯಾವುದಾದರೂ ಒಂದರಲ್ಲಿ ಸಾರ್ವಜನಿಕ ಪರೀಕ್ಷೆ (ಥಿಯರಿ) ಬರೆಯಲು ಶಿಕ್ಷಕರಿಗೆ ಅನುಮತಿಸಲಾಗುತ್ತದೆ. ಮುಕ್ತ ಮತ್ತು ದೂರಶಿಕ್ಷಣ (ಒಡಿಎಲ್‌) ಮಾದರಿಯ ಮೂಲಕ ಕೋರ್ಸ್ ಅನ್ನು ಬೋಧಿಸಲಾಗುತ್ತದೆ. ಸಂಪರ್ಕ ಕಾರ್ಯಕ್ರಮಗಳು, ಶಾಲಾ-ಆಧಾರಿತ ಪ್ರಾಯೋಗಿಕ ತರಬೇತಿ (ಅಭ್ಯಾಸ ಬೋಧನೆ, ಪ್ರತಿಫಲನಾತ್ಮಕ ನಿಯತಕಾಲಿಕೆಗಳು, ಪೋರ್ಟ್‌ಫೋಲಿಯೊಗಳು), ವೀಡಿಯೊ ಟ್ಯುಟೋರಿಯಲ್, ಇ-ಲರ್ನಿಂಗ್ ಸಾಮಗ್ರಿಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಈ ಕೋರ್ಸ್ ಒಳಗೊಂಡಿರುತ್ತದೆ. ಈ ವಿಧಾನವು ಸೇವಾನಿರತ ಶಿಕ್ಷಕರು ತಮ್ಮ ವೃತ್ತಿಪರ ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ ಕೋರ್ಸ್ ಪಠ್ಯದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ.

ಕೋರ್ಸ್‌ಗೆ ಪ್ರವೇಶವನ್ನು ʻಎನ್‌ಐಒಎಸ್ʼ (ಎನ್‌ಐಒಎಸ್) ಅಧಿಕೃತ ಬ್ರಿಡ್ಜ್ ಕೋರ್ಸ್ ಪೋರ್ಟಲ್ (https://bridge.nios.ac.in) ಮೂಲಕ ಆನ್‌ಲೈನ್‌ನಲ್ಲಿ ಪಡೆಯಬಹುದು. ಅರ್ಹ ಶಿಕ್ಷಕರು ನೋಂದಾಯಿಸಿಕೊಳ್ಳಬಹುದು, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು ಗೊತ್ತುಪಡಿಸಿದ ಡ್ಯಾಶ್‌ಬೋರ್ಡ್ ಮೂಲಕ ಪ್ರವೇಶದ ಸ್ಥಿತಿಯನ್ನು ಪರಿಶೀಲಿಸಬಹುದು. ಸ್ವಯಂ-ಕಲಿಕಾ ಸಾಮಗ್ರಿಗಳು ಸೇರಿದಂತೆ ಎಲ್ಲಾ ಕೋರ್ಸ್ ಸಾಮಗ್ರಿಗಳನ್ನು ಡಿಜಿಟಲ್ ರೂಪದಲ್ಲಿ ಒದಗಿಸಲಾಗುತ್ತದೆ. ಶಿಕ್ಷಕರು ತಮ್ಮ ಕಲಿಕಾ ಅನುಭವವನ್ನು ಹೆಚ್ಚಿಸಲು ಆಡಿಯೊಗಳು/ವೀಡಿಯೊಗಳು ಮತ್ತು ಸಂವಾದಾತ್ಮಕ ವಿಷಯಗಳಂತಹ ಪೂರಕ ಸಂಪನ್ಮೂಲಗಳನ್ನು ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ.

 

*****


(ಪ್ರಕಟಣೆ ಐ.ಡಿ.: 2311685) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Telugu