ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಮತ್ತು ಸುದೀರ್ಘ ಚಲನಚಿತ್ರ ಪಯಣಕ್ಕಾಗಿ ನಟ ಅನಂತ್ ನಾಗ್ ಅವರಿಗೆ 2024ರ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ


2026ರ ಸೆಪ್ಟೆಂಬರ್ 22 ರಂದು ಗುಜರಾತ್ನ ಕೇವಡಿಯಾದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ

ಪ್ರಕಟಣಾ ದಿನಾಂಕ: 16 SEP 2026 6:18PM by PIB Bengaluru

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ, ಭಾರತೀಯ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನೀಡಿದ ಅತ್ಯುತ್ತಮ ಹಾಗೂ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಖ್ಯಾತ ಹಿರಿಯ ನಟ ಶ್ರೀ ಅನಂತ್ ನಾಗ್ ಅವರಿಗೆ 2024ರ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಭಾರತ ಸರ್ಕಾರವು ಪ್ರಕಟಿಸಲು ಹರ್ಷಿಸುತ್ತದೆ. ಈ ಪ್ರಶಸ್ತಿಯು 5 ದಶಕಗಳಿಗೂ ಹೆಚ್ಚು ಕಾಲ ವಿಸ್ತರಿಸಿರುವ ಅವರ ಸುದೀರ್ಘ ಚಲನಚಿತ್ರ ಪಯಣವನ್ನು ಗೌರವಿಸುತ್ತದೆ, ಇದು ತಲೆಮಾರುಗಳ ಕಲಾವಿದರಿಗೆ ಸ್ಫೂರ್ತಿ ನೀಡಿದೆ ಮತ್ತು ರಾಷ್ಟ್ರದ ಸಾಂಸ್ಕೃತಿಕ ಪರಂಪರೆಯನ್ನು ಸಮೃದ್ಧಗೊಳಿಸಿದೆ. 2026ರ ಸೆಪ್ಟೆಂಬರ್ 22 ರಂದು ಗುಜರಾತ್ನ ಕೇವಡಿಯಾದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಶ್ರೀ ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಶ್ರೀ ಅನಂತ್ ನಾಗ್ ಅವರ ಕುರಿತು

ಶ್ರೀ ಅನಂತ್ ನಾಗ್ (ಜನನ 4 ಸೆಪ್ಟೆಂಬರ್ 1948, ಕರ್ನಾಟಕ) ಅವರು ತಮ್ಮ ಬಹುಮುಖ ಪ್ರತಿಭೆ ಮತ್ತು 5 ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗೆ ಹೆಸರಾದ ಹಿರಿಯ ಭಾರತೀಯ ನಟರಾಗಿದ್ದಾರೆ. 'ಸಂಕಲ್ಪ' ಕನ್ನಡ ಕಥಾಚಿತ್ರದ ಮೂಲಕ ಅಭಿನಯಕ್ಕೆ ಪಾದಾರ್ಪಣೆ ಮಾಡಿದ ಅವರು, 'ಅಂಕುರ್' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪ್ರವೇಶಿಸಿದರು. 'ಮಾಲ್ಗುಡಿ ಡೇಸ್' ನಂತಹ ಗಮನಾರ್ಹ ಧಾರಾವಾಹಿ, ಸಿನಿಮಾ ಸೇರಿದಂತೆ ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಮತ್ತು ಮರಾಠಿ ಚಿತ್ರರಂಗದಾದ್ಯಂತ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಶ್ರೀ ಅನಂತ್ ಅವರು ಐದು ಫಿಲ್ಮ್ಫೇರ್ ಪ್ರಶಸ್ತಿಗಳು ಮತ್ತು ಐದು ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಜೀವಮಾನ ಸಾಧನೆ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ (ಉತ್ತರ) ಗೌರವ ಡಾಕ್ಟರೇಟ್ ಸಹ ಪಡೆದಿದ್ದಾರೆ. 2023 ರಲ್ಲಿ, ಅವರು ಚಿತ್ರರಂಗದಲ್ಲಿ ತಮ್ಮ 50 ವರ್ಷಗಳ ವೃತ್ತಿಜೀವನದ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡರು.

ಚಿತ್ರರಂಗದ ಹೊರತಾಗಿ, ಶ್ರೀ ಅನಂತ್ ಅವರು 1988 ರಿಂದ 1994 ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಮತ್ತು 1994 ರಿಂದ 1999 ರವರೆಗೆ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು, ಆ ಸಮಯದಲ್ಲಿ ಅವರು ಬೆಂಗಳೂರು ನಗರ ಅಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರಿಗೆ 2025 ರಲ್ಲಿ ಭಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದು, ಶ್ರೀ ಅನಂತ್ ನಾಗ್ ಅವರು ತಮ್ಮ ಬಹುಮುಖ ಪ್ರತಿಭೆ, ವಿನಮ್ರತೆ ಮತ್ತು ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಗಾಗಿ ದೇಶದ ಅತ್ಯಂತ ಗೌರವಾನ್ವಿತ ಸಾಂಸ್ಕೃತಿಕ ಧ್ರುವತಾರೆಗಳಲ್ಲಿ ಒಬ್ಬರಾಗಿದ್ದಾರೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಕುರಿತು

1913 ರಲ್ಲಿ ಭಾರತದ ಮೊದಲ ಪೂರ್ಣಪ್ರಮಾಣದ ಕಥಾಚಿತ್ರ 'ರಾಜಾ ಹರಿಶ್ಚಂದ್ರ'ವನ್ನು ನಿರ್ದೇಶಿಸಿದ ದಾದಾಸಾಹೇಬ್ ಫಾಲ್ಕೆ ಅವರ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಭಾರತ ಸರ್ಕಾರವು 1969 ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿತು, ಮೊದಲ ಬಾರಿಗೆ ದೇವಿಕಾರಾಣಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಚಲನಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ಇದನ್ನು ಪಡೆಯುವವರನ್ನು 'ಭಾರತೀಯ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನೀಡಿದ ಅತ್ಯುತ್ತಮ ಕೊಡುಗೆ'ಗಾಗಿ ಗುರುತಿಸಲಾಗುತ್ತದೆ. ಈ ಪ್ರಶಸ್ತಿಯು ಸ್ವರ್ಣ ಕಮಲ ಪದಕ, ಶಾಲು ಮತ್ತು ₹10 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ.

******

 


(ಪ್ರಕಟಣೆ ಐ.ಡಿ.: 2311106) ವಿಸಿಟರ್ ಕೌಂಟರ್ : 101
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Telugu , Malayalam