ಹಣಕಾಸು ಸಚಿವಾಲಯ
ಡಿ ಆರ್ ಐ ನ 'ಆಪರೇಷನ್ ಡೀಪ್ ಮ್ಯಾನಿಫೆಸ್ಟ್' ಅಡಿಯಲ್ಲಿ ಪಾಕಿಸ್ತಾನ ಮೂಲದ 362 ಮೆಟ್ರಿಕ್ ಟನ್ ಗೂ ಅಧಿಕ ಒಣ ಖರ್ಜೂರ ವಶ
ಪ್ರಕಟಣಾ ದಿನಾಂಕ:
14 SEP 2026 12:23PM by PIB Bengaluru
ಪಾಕಿಸ್ತಾನದಿಂದ ಆಮದಿನ ಮೇಲೆ ಭಾರತ ವಿಧಿಸಿರುವ ನಿಷೇಧವನ್ನು ಉಲ್ಲಂಘಿಸಲು ನಡೆಯುತ್ತಿರುವ ಪ್ರಯತ್ನಗಳ ವಿರುದ್ಧ ಮಹತ್ವದ ಕ್ರಮ ಕೈಗೊಂಡಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿ ಆರ್ ಐ), ಪಾಕಿಸ್ತಾನ ಮೂಲದ 362 ಮೆಟ್ರಿಕ್ ಟನ್ ಗಿಂತಲೂ ಹೆಚ್ಚಿನ ಒಣ ಖರ್ಜೂರವನ್ನು ವಶಪಡಿಸಿಕೊಂಡಿದೆ.
ಖಚಿತ ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಡಿ ಆರ್ ಐ ಅಧಿಕಾರಿಗಳು, ಮುಂಬೈ ಮೂಲದ ಸಂಸ್ಥೆಯೊಂದು ಆಮದು ಮಾಡಿಕೊಂಡಿದ್ದ ಒಣ ಖರ್ಜೂರ ತುಂಬಿದ್ದ 13 ಕಂಟೈನರ್ ಗಳನ್ನು ನಾಸಿಕ್ ನ ಸಿ ಎಫ್ ಎಸ್ ಅಂಬಾಡ್ ನಲ್ಲಿ ತಡೆದು ಪರಿಶೀಲಿಸಿದರು. ಈ ಸರಕುಗಳು ಯುಎಇಯ ಜಬ್ ಅಲ್ಹ್ ಲೀ ಯಿಂದ ಬಂದಿದ್ದು, ಆಮದು ದಾಖಲೆಗಳಲ್ಲಿ ಸರಕುಗಳ ಮೂಲ ದೇಶ ಯುಎಇ ಎಂದು ಘೋಷಿಸಲಾಗಿತ್ತು.


ಸರಕುಗಳು ಪಾಕಿಸ್ತಾನ ಮೂಲ ಎಂಬುದನ್ನು ಮರೆಮಾಚಲು ಅತ್ಯಂತ ಯೋಜಿತ ರೀತಿಯಲ್ಲಿ ಪರೋಕ್ಷ ಮಾರ್ಗದ ಸಾಗಣೆ ವ್ಯವಸ್ಥೆಯನ್ನು ರೂಪಿಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಒಣ ಖರ್ಜೂರಗಳನ್ನು ಮೊದಲು ಪಾಕಿಸ್ತಾನದ ಕರಾಚಿ ಬಂದರಿನಿಂದ ಯುಎಇಯ ಜಬ್ ಅಲ್ಹ್ ಲೀ ಬಂದರಿಗೆ ಒಂದು ಹಡಗಿನಲ್ಲಿ ಒಂದು ಸೆಟ್ ಕಂಟೈನರ್ ನಲ್ಲಿ ಸಾಗಿಸಲಾಗಿತ್ತು. ಅಲ್ಲಿ ಪಾಕಿಸ್ತಾನಿ ಪ್ರಜೆಗಳು ನಿರ್ವಹಿಸುತ್ತಿದ್ದ ಸಂಸ್ಥೆಗಳ ಮೂಲಕ, ಸರಕುಗಳನ್ನು ಮತ್ತೊಂದು ಸೆಟ್ ಕಂಟೈನರ್ ಗಳಿಗೆ ವರ್ಗಾಯಿಸಿ ಬೇರೆ ಹಡಗಿನಲ್ಲಿ ತುಂಬಿಸಿ, ಭಾರತಕ್ಕೆ ಕಳುಹಿಸಲು ಮುಂದಿನ ಹಂತದ ವ್ಯವಸ್ಥೆ ಮಾಡಲಾಗಿತ್ತು.
ಭಾರತ ಸರ್ಕಾರವು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ 2025ರ ಮೇ 2ರಿಂದ ಅನ್ವಯವಾಗುವಂತೆ, ಪಾಕಿಸ್ತಾನ ಮೂಲದ ಅಥವಾ ಪಾಕಿಸ್ತಾನದಿಂದ ರಫ್ತು ಮಾಡಲಾದ ಎಲ್ಲಾ ಸರಕುಗಳ ನೇರ ಅಥವಾ ಪರೋಕ್ಷ ಆಮದು ಅಥವಾ ಸಾಗಣೆಯ ಮೇಲೆ ಸಂಪೂರ್ಣ ನಿಷೇಧ ವಿಧಿಸಿದೆ. ಈ ಕುರಿತು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (ಡಿ ಜಿ ಎಫ್ ಟಿ) ಅಧಿಸೂಚನೆ ಸಂಖ್ಯೆ 06/2025-26, ದಿನಾಂಕ: 2 ಮೇ 2025 ಅನ್ನು ಹೊರಡಿಸಿದೆ. ಈ ನಿಟ್ಟಿನಲ್ಲಿ ಡಿ ಆರ್ ಐ ತನ್ನ “ಆಪರೇಷನ್ ಡೀಪ್ ಮ್ಯಾನಿಫೆಸ್ಟ್” ಕಾರ್ಯಾಚರಣೆಯಡಿ, ಮಾರ್ಗ ಬದಲಿಸಿ ಮೂರನೇ ದೇಶದ ಮೂಲಕ ಭಾರತಕ್ಕೆ ಆಮದು ಮಾಡಲು ಪ್ರಯತ್ನಿಸಲಾಗುತ್ತಿರುವ ಪಾಕಿಸ್ತಾನ ಮೂಲದ ಸರಕುಗಳನ್ನು ನಿರಂತರವಾಗಿ ಗುರುತಿಸಿ, ತಡೆದು, ವಶಪಡಿಸಿಕೊಳ್ಳುತ್ತಿದೆ.
ಈ ವಶಪಡಿಸಿಕೊಳ್ಳುವಿಕೆಯು ತಪ್ಪು ಘೋಷಣೆ, ಮೂರನೇ ಮಾರ್ಗದ ಸಾಗಣೆ ಹಾಗೂ ದಾಖಲೆಗಳ ತಿರುಚುವಿಕೆ ಮೂಲಕ ವ್ಯಾಪಾರ ನಿಷೇಧಗಳನ್ನು ಉಲ್ಲಂಘಿಸಲು ಪ್ರಯತ್ನಿಸುವ ಅತ್ಯಾಧುನಿಕ ಜಾಲಗಳನ್ನು ಗುರುತಿಸಿ, ತಡೆದು, ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವಲ್ಲಿ ಡಿ ಆರ್ ಐ ನ ನಿರಂತರ ಬದ್ಧತೆಯ ಸಂಕೇತವಾಗಿದೆ. ಈ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವುದರ ಜೊತೆಗೆ ಪೂರೈಕೆ ಸರಪಳಿಯ ಸಮಗ್ರತೆಯನ್ನು ಡಿ ಆರ್ ಐ ಬಲಪಡಿಸಿದೆ.
*****
(ಪ್ರಕಟಣೆ ಐ.ಡಿ.: 2310262)
ವಿಸಿಟರ್ ಕೌಂಟರ್ : 25
ಪ್ರಕಟಣೆಯನ್ನು ಇದರಲ್ಲಿ ಓದಿ:
Assamese
,
Marathi
,
Telugu
,
English
,
Urdu
,
हिन्दी
,
Bengali
,
Bengali-TR
,
Manipuri
,
Gujarati
,
Tamil